ಕರಗುತ್ತಿರುವ ಹಿಮನದಿಯಿಂದ ಹೊರಬಂತು 37 ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ಪರ್ವತಾರೋಹಿಯ ಮೃತದೇಹ!

Update: 2023-08-02 12:39 GMT

ಬೆರ್ನೆ: ಸ್ವಿಝರ್‌ಲ್ಯಾಂಡಿನ ಸ್ವಿಸ್ ಆಲ್ಪ್ಸ್‌ನಲ್ಲಿ 37 ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ಪರ್ವತಾರೋಹಿಯ ಮೃತದೇಹ ಪತ್ತೆಯಾಗಿದೆ. ಕರಗುತ್ತಿರುವ ಹಿಮನದಿಯಿಂದ ಮೃತದೇಹವು ಹೊರಕ್ಕೆ ಬಂದಿದ್ದು, ಕಳೆದ ತಿಂಗಳು (ಜುಲೈ 12) ರಂದು ಪರ್ವತ ಏರುತ್ತಿದ್ದ ಪರ್ವತಾರೋಹಿಗಳ ಗುಂಪಿನ ಕಣ್ಣಿಗೆ ಬಿದ್ದಿದೆ.

ಬಳಿಕ ಮೃತದೇಹವನ್ನು ಹತ್ತಿರದ ಸಿಯಾನ್ ಪಟ್ಟಣದ ವಲೈಸ್ ಆಸ್ಪತ್ರೆಯಲ್ಲಿ ವಿಧಿವಿಜ್ಞಾನ ಘಟಕಕ್ಕೆ ಕಳುಹಿಸಲಾಗಿದ್ದು, ಪರೀಕ್ಷೆಯಲ್ಲಿ 1986 ರಲ್ಲಿ ಪರ್ವತದ ಮೇಲೆ ಕಾಣೆಯಾದ 38 ವರ್ಷದ ಪರ್ವತಾರೋಹಿಯ ಮೃತದೇಹ ಎಂದು ತಿಳಿದುಬಂದಿದೆ.

"ಡಿಎನ್‌ಎ ಪರೀಕ್ಷೆಯಲ್ಲಿ 1986 ರಲ್ಲಿ ನಾಪತ್ತೆಯಾಗಿದ್ದ ಪರ್ವತಾರೋಹಿಯೆಂದು ತಿಳಿದು ಬಂದಿದೆ. 1986 ರ ಸೆಪ್ಟೆಂಬರ್ ನಲ್ಲಿ ಪರ್ವತ ಏರಿದ್ದ 38 ವರ್ಷ ವಯಸ್ಸಿನ ಜರ್ಮನ್ ಪರ್ವತಾರೋಹಿ ನಂತರ ಹಿಂತಿರುಗಿರಲಿಲ್ಲ, ಬಳಿಕ ನಾಪತ್ತೆ ಪ್ರಕರಣ ದಾಖಲಿಸಲಾಗಿತ್ತು” ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.

ಆರೋಹಿಯ ಗುರುತು ಅಥವಾ ಸಾವಿಗೆ ನಿಖರ ಕಾರಣಗಳ ಬಗ್ಗೆ ಪೊಲೀಸರು ಹೆಚ್ಚಿನ ಮಾಹಿತಿಯನ್ನು ನೀಡಿಲ್ಲ.

ಇಲ್ಲಿನ ಹಿಮನದಿಗಳು ತೀವ್ರಗತಿಯಲ್ಲಿ ಕರಗುತ್ತಿದ್ದು, ಇತ್ತೀಚಿನ ವರ್ಷಗಳ ಬೇಸಿಗೆಯಲ್ಲಿ ದಶಕಗಳ ಹಿಂದೆ ಕಳೆದು ಹೋದವರು ಅಥವಾ ಕಳೆದು ಹೋದ ಯಾವುದಾದರೂ ವಸ್ತುಗಳು ಬಹಿರಂಗಗೊಳ್ಳುತ್ತಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಕಳೆದ ವರ್ಷ, 1968 ರಲ್ಲಿ ಪತನಗೊಂಡ ವಿಮಾನದ ಅವಶೇಷಗಳು ಅಲೆಟ್ಸ್ಚ್ ಹಿಮನದಿಯಲ್ಲಿ ಪತ್ತೆಯಾಗಿದ್ದವು. 2015 ರಲ್ಲಿ, 1970 ರ ಹಿಮಬಿರುಗಾಳಿಯಲ್ಲಿ ಮ್ಯಾಟರ್‌ಹಾರ್ನ್‌ನಲ್ಲಿ ಕಾಣೆಯಾದ ಇಬ್ಬರು ಯುವ ಜಪಾನಿನ ಆರೋಹಿಗಳ ಮೃತದೇಹಗಳು ಕಂಡುಬಂದಿತ್ತು. 2014 ರಲ್ಲಿ 1979 ರಲ್ಲಿ ಕಾಣೆಯಾದ ಬ್ರಿಟಿಷ್ ಆರೋಹಿ ಜೊನಾಥನ್ ಕಾನ್ವಿಲ್ಲೆ ಅವರ ದೇಹವನ್ನು ಹೆಲಿಕಾಪ್ಟರ್ ಪೈಲಟ್ ಪತ್ತೆ ಮಾಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News