ಮಾಜಿ ಪ್ರಧಾನಿ ಇಮ್ರಾನ್ ಖಾನ್ ನಾಮಪತ್ರ ತಿರಸ್ಕರಿಸಿದ ಪಾಕ್ ಚುನಾವಣಾ ಆಯೋಗ
ಇಸ್ಲಮಾಬಾದ್: ಮುಂದಿನ ವರ್ಷ ನಡೆಯಲಿರುವ ಸಾರ್ವತ್ರಿಕ ಚುನಾವಣೆಯಲ್ಲಿ ಪಂಜಾಬ್ ಪ್ರಾಂತದಿಂದ ಸ್ಪರ್ಧಿಸಲು ಮಾಜಿ ಪ್ರಧಾನಿ ಇಮ್ರಾನ್ ಖಾನ್ ಸಲ್ಲಿಸಿದ್ದ ನಾಮಪತ್ರವನ್ನು ತಿರಸ್ಕರಿಸಿರುವುದಾಗಿ ಪಾಕಿಸ್ತಾನದ ಚುನಾವಣಾ ಆಯೋಗ ಶನಿವಾರ ಹೇಳಿದೆ.
ಪಂಜಾಬ್ ಪ್ರಾಂತದ ಕ್ಷೇತ್ರದಲ್ಲಿ ಇಮ್ರಾನ್ ಮತದಾರರಾಗಿ ನೋಂದಾಯಿಸಿಕೊಂಡಿಲ್ಲ ಮತ್ತು ಅವರನ್ನು ಅಪರಾಧಿ ಎಂದು ಘೋಷಿಸಿರುವ ನ್ಯಾಯಾಲಯ ಚುನಾವಣೆ ಸ್ಪರ್ಧೆಗೆ ಅನರ್ಹಗೊಳಿಸಿದೆ. ಆದ್ದರಿಂದ ನಾಮಪತ್ರವನ್ನು ತಿರಸ್ಕರಿಸಲಾಗಿದೆ ಎಂದು ಆಯೋಗ ಹೇಳಿದೆ.
ತನ್ನ ಹುಟ್ಟೂರಾದ ಮಿಯಾನ್ವಾಲಿಯಿಂದಲೂ ಇಮ್ರಾನ್ ಸಲ್ಲಿಸಿದ್ದ ನಾಮಪತ್ರವನ್ನು ಚುನಾವಣಾ ಆಯೋಗ ತಿರಸ್ಕರಿಸಿದೆ. ಈ ಮಧ್ಯೆ, ಇಮ್ರಾನ್ ಅವರ ಪಾಕಿಸ್ತಾನ್ ತೆಹ್ರೀಕೆ ಇನ್ಸಾಫ್(ಪಿಟಿಐ) ಪಕ್ಷಕ್ಕೆ `ಬ್ಯಾಟ್' ಚಿಹ್ನೆಯನ್ನು ಮರಳಿ ನೀಡುವಂತೆ ಪೇಷಾವರ ಹೈಕೋರ್ಟ್ನ ಏಕಸದಸ್ಯ ಪೀಠ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಚುನಾವಣಾ ಆಯೋಗ ಹೈಕೋರ್ಟ್ಗೆ ಶನಿವಾರ ಮೇಲ್ಮನವಿ ಸಲ್ಲಿಸಿದೆ ಎಂದು ಮೂಲಗಳನ್ನು ಉಲ್ಲೇಖಿಸಿ `ರಾಯ್ಟರ್ಸ್' ವರದಿ ಮಾಡಿದೆ.