ಫೆಲೆಸ್ತೀನೀಯರ ಸ್ವತಂತ್ರ ರಾಷ್ಟ್ರದ ಹಕ್ಕು ನಿರಾಕರಿಸುವಂತಿಲ್ಲ: ವಿಶ್ವಸಂಸ್ಥೆ
ಕಂಪಾಲ: ತಮ್ಮ ಸ್ವಂತ ರಾಷ್ಟ್ರ ನಿರ್ಮಿಸುವ ಫೆಲೆಸ್ತೀನಿಯನ್ ಜನತೆಯ ಹಕ್ಕನ್ನು ಎಲ್ಲರೂ ಮಾನ್ಯ ಮಾಡಬೇಕು ಎಂದು ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಅಂಟೋನಿಯೊ ಗುಟೆರಸ್ ಆಗ್ರಹಿಸಿದ್ದಾರೆ.
ಉಗಾಂಡಾದ ಕಂಪಾಲದಲ್ಲಿ ನಡೆಯುತ್ತಿರುವ ಅಲಿಪ್ತ ಅಭಿಯಾನದ ಶೃಂಗಸಭೆಯಲ್ಲಿ ಮಾತನಾಡಿದ ಅವರು `ಇಸ್ರೇಲಿ ಮತ್ತು ಫೆಲೆಸ್ತೀನಿಯನ್ನರಿಗೆ ಎರಡು ದೇಶಗಳ ಪರಿಹಾರವನ್ನು ಒಪ್ಪಿಕೊಳ್ಳಲು ನಿರಾಕರಿಸುವುದು ಮತ್ತು ಫೆಲೆಸ್ತೀನಿಯನ್ ಜನರ ರಾಷ್ಟ್ರತ್ವದ ಹಕ್ಕನ್ನು ನಿರಾಕರಿಸುವುದು ಸ್ವೀಕಾರಾರ್ಹವಲ್ಲ' ಎಂದರು.
ಇಂತಹ ನಿಲುವು ಈಗಾಗಲೇ ಜಾಗತಿಕ ಶಾಂತಿ ಮತ್ತು ಭದ್ರತೆಗೆ ಪ್ರಮುಖ ಬೆದರಿಕೆಯಾಗಿರುವ ಸಂಷರ್ಘವನ್ನು ಅನಿರ್ಧಿಷ್ಟಾವಧಿಗೆ ವಿಸ್ತರಿಸಲಿದೆ. ಧ್ರುವೀಕರಣವನ್ನು ಉಲ್ಬಣಗೊಳಿಸಲಿದೆ ಮತ್ತು ಭಯೋತ್ಪಾದಕ ಕೃತ್ಯಗಳನ್ನು ಹುರಿದುಂಬಿಸಲಿದೆ. ಗಾಝಾದಲ್ಲಿ ತಕ್ಷಣ ಕದನ ವಿರಾಮ ಸ್ಥಾಪಿಸುವ ಪ್ರಯತ್ನಕ್ಕೆ ಅಂತರಾಷ್ಟ್ರೀಯ ಸಮುದಾಯ ಆದ್ಯತೆ ನೀಡಬೇಕು' ಎಂದು ಗುಟೆರಸ್ ಆಗ್ರಹಿಸಿದ್ದಾರೆ. 2.4 ದಶಲಕ್ಷ ಜನಸಂಖ್ಯೆ ಹೊಂದಿರುವ ಗಾಝಾ ಪ್ರದೇಶದಲ್ಲಿ ಈಗ ನೆಲೆಸಿರುವ ಅಮಾನವೀಯ ಜೀವನ ಪರಿಸ್ಥಿತಿಯನ್ನು ವಿಶ್ವ ಆರೋಗ್ಯ ಸಂಸ್ಥೆಯೂ ಖಂಡಿಸಿದೆ.
ಅಲಿಪ್ತ ಒಕ್ಕೂಟದ ಶೃಂಗಸಭೆಯ ಅಂತಿಮ ಘೋಷಣೆಯಲ್ಲಿ ` ಗಾಝಾ ಪಟ್ಟಿಯಲ್ಲಿ ಇಸ್ರೇಲ್ ಮಿಲಿಟರಿಯ ಕಾನೂನುಬಾಹಿರ ಆಕ್ರಮಣವನ್ನು ತೀವ್ರವಾಗಿ ಖಂಡಿಸಿದೆ ಮತ್ತು ಅಲ್ಲಿ ಶಾಶ್ವತ ಮಾನವೀಯ ಕದನ ವಿರಾಮಕ್ಕೆ ಕರೆ ನೀಡಲಾಗಿದೆ. ಎರಡು ದೇಶಗಳ ಪರಿಹಾರವನ್ನು ಸಾಧಿಸಲು ಪೂರ್ವ ಜೆರುಸಲೇಂ ಅನ್ನು ರಾಜಧಾನಿಯಾಗಿ ಹೊಂದಿರುವ ಸ್ವತಂತ್ರ ಮತ್ತು ಸಾರ್ವಭೌಮ ಫೆಲೆಸ್ತೀನ್ ದೇಶ ಸ್ಥಾಪನೆಗೆ ಶೃಂಗಸಭೆಯಲ್ಲಿ ಕರೆ ನೀಡಲಾಗಿದೆ. ಭಾರತ, ಇರಾನ್, ಇರಾಕ್, ದಕ್ಷಿಣ ಆಫ್ರಿಕಾ ಮುಂತಾದ 120 ದೇಶಗಳ ಸಂಘಟನೆಯಾಗಿರುವ ಅಲಿಪ್ತ ದೇಶಗಳ ಒಕ್ಕೂಟವು ಜಾಗತಿಕ ಶಕ್ತಿಗಳ ಬಣಕ್ಕೆ ಅಧಿಕೃತವಾಗಿ ಸೇರ್ಪಡೆಗೊಂಡಿಲ್ಲ.
ಫೆಲೆಸ್ತೀನ್ ದೇಶ ಸ್ಥಾಪನೆಗೆ ಅಮೆರಿಕವೂ ಇತ್ತೀಚೆಗೆ ತನ್ನ ಬೆಂಬಲವನ್ನು ಪುನರುಚ್ಚರಿಸಿದೆ. ಆದರೆ ಫೆಲೆಸ್ತೀನ್ ರಾಷ್ಟ್ರ ಸ್ಥಾಪನೆಗೆ ತನ್ನ ವಿರೋಧವಿದೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹಲವು ಬಾರಿ ಸ್ಪಷ್ಟಪಡಿಸಿದ್ದಾರೆ.
ಇಸ್ರೇಲ್ ಹೇಳಿಕೆಗೆ ಬ್ರಿಟನ್ ವಿರೋಧ:
ಈ ಮಧ್ಯೆ, ಫೆಲೆಸ್ತೀನ್ ಸಾರ್ವಭೌಮತ್ವಕ್ಕೆ ವಿರೋಧ ಸೂಚಿಸಿರುವ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿಕೆಯ ಬಗ್ಗೆ ಬ್ರಿಟನ್ ಸರಕಾರ ಅಸಮಾಧಾನ ವ್ಯಕ್ತಪಡಿಸಿದೆ.
ಇಸ್ರೇಲ್ ಪ್ರಧಾನಿಯಿಂದ ಇಂತಹ ಹೇಳಿಕೆ ನಿಜಕ್ಕೂ ನಿರಾಶಾದಾಯಕವಾಗಿದೆ. ಫೆಲೆಸ್ತೀನೀಯರು ಸಾರ್ವಭೌಮ ದೇಶಕ್ಕೆ ಅರ್ಹರಾಗಿದ್ದಾರೆ ಎಂದು ಬ್ರಿಟನ್‍ನ ರಕ್ಷಣಾ ಕಾರ್ಯದರ್ಶಿ ಗ್ರಾಂಟ್ ಶಾಪ್ಸ್ ಹೇಳಿದ್ದಾರೆ. ಆದರೆ ನೆತನ್ಯಾಹು ಅವರ ನಿಲುವಿನ ಬಗ್ಗೆ ತನಗೆ ಆಶ್ಚರ್ಯವಾಗಿಲ್ಲ. ತನ್ನ ಸಂಪೂರ್ಣ ರಾಜಕೀಯ ಬದುಕಿನುದ್ದಕ್ಕೂ ಅವರು ದ್ವಿರಾಷ್ಟ್ರ ಪರಿಹಾರಕ್ಕೆ ವಿರುದ್ಧವಾಗಿದ್ದಾರೆ. ಆದರೆ ಈ ಸಮಸ್ಯೆಯ ಪರಿಹಾರಕ್ಕೆ ಬೇರೆ ಸೂಕ್ತ ಪರಿಹಾರವಿಲ್ಲ ಎಂದವರು ಪ್ರತಿಪಾದಿಸಿದ್ದಾರೆ.
ಇಸ್ರೇಲ್ ಸರಕಾರದ ಒಳಗೇ ವಿಭಿನ್ನ ಅಭಿಪ್ರಾಯಗಳಿವೆ. ಆದ್ದರಿಂದ ವೈಯಕ್ತಿಕ ಅಭಿಪ್ರಾಯವನ್ನು ಇಸ್ರೇಲ್ ದೇಶದ ಅಭಿಪ್ರಾಯವೆಂದು ಪರಿಗಣಿಸಲಾಗದು. ಫೆಲೆಸ್ತೀನೀಯರು ಸಾರ್ವಭೌಮ ರಾಷ್ಟ್ರಕ್ಕೆ ಅರ್ಹರು. ಇಸ್ರೇಲ್ ಸ್ವಯಂರಕ್ಷಣೆಯ ಸಂಪೂರ್ಣ ಸಾಮಥ್ರ್ಯವನ್ನು ಹೊಂದಲು ಅರ್ಹವಾಗಿದೆ' ಎಂದು ಶಾಪ್ಸ್ ಹೇಳಿದ್ದಾರೆ.