ಟಿಕ್‍ಟಾಕ್ ನಿಂದ ರಾಷ್ಟ್ರೀಯ ಭದ್ರತೆಗೆ ಅಪಾಯ: ತೈವಾನ್ ಘೋಷಣೆ

Update: 2024-03-23 17:38 GMT

ತೈಪೆ : ಚೀನಾ ಮೂಲದ ಸಂಸ್ಥೆಯ ಒಡೆತನದ ಸಾಮಾಜಿಕ ಮಾಧ್ಯಮ ವೇದಿಕೆ ಟಿಕ್‍ಟಾಕ್ ಅನ್ನು `ಮಹತ್ವದ ರಾಷ್ಟ್ರೀಯ ಭದ್ರತಾ ಅಪಾಯ'ಯೆಂದು ತೈವಾನ್‍ನ ಡಿಜಿಟಲ್ ವ್ಯವಹಾರಗಳ ಸಚಿವೆ ಆದ್ರೆಯ್ ಟ್ಯಾಂಗ್ ಘೋಷಿಸಿರುವುದಾಗಿ ತೈವಾನ್ ಸೆಂಟ್ರಲ್ ನ್ಯೂಸ್ ಏಜೆನ್ಸಿ ವರದಿ ಮಾಡಿದೆ.

ವಿದೇಶಿ ವಿರೋಧಿಗಳೊಂದಿಗೆ ಟಿಕ್‍ಟಾಕ್‍ನ ಸಂಪರ್ಕವು ರಾಷ್ಟ್ರೀಯ ಭದ್ರತೆಗೆ ಸಂಭಾವ್ಯ ಅಪಾಯವೆಂದು ಪರಿಗಣಿಸಲಾಗಿದೆ. ವಿದೇಶಿ ವಿರೋಧಿಗಳ ನಿಯಂತ್ರಣಕ್ಕೆ ಒಳಗಾಗುವ ಯಾವುದೇ ಉತ್ಪನ್ನವು ನೇರವಾಗಿ ಅಥವಾ ಪರೋಕ್ಷವಾಗಿ ತೈವಾನ್‍ನ ಮಾನದಂಡಗಳ ಪ್ರಕಾರ ರಾಷ್ಟ್ರೀಯ ಮಾಹಿತಿ ಮತ್ತು ಸಂವಹನ ಸುರಕ್ಷತೆಗೆ ಅಪಾಯವನ್ನುಂಟು ಮಾಡುತ್ತದೆ. ಟಿಕ್‍ಟಾಕ್ ಒಂದು ಅಪಾಯಕಾರಿ ಉತ್ಪನ್ನವೆಂದು ತೈವಾನ್ ವರ್ಗೀಕರಿಸಿದೆ ಎಂದವರು ಹೇಳಿದ್ದಾರೆ.

ಇದೇ ರೀತಿಯ ಕ್ರಮವನ್ನು ಇತ್ತೀಚೆಗೆ ಅಮೆರಿಕ ಕೈಗೊಂಡಿದೆ. ಟಿಕ್‍ಟಾಕ್‍ನ ಮಾತೃಸಂಸ್ಥೆ ಬೈಟ್‍ಡ್ಯಾನ್ಸ್ ಅನ್ನು ಗುರಿಯಾಗಿಸಿ ಅಮೆರಿಕದ ಹೌಸ್ ಆಫ್ ರೆಪ್ರಸೆಂಟೇಟಿವ್ಸ್ ಇತ್ತೀಚೆಗೆ ಮಸೂದೆಯೊಂದನ್ನು ಅಂಗೀಕರಿಸಿದ್ದು ಅಮೆರಿಕದಲ್ಲಿನ ಬಂಡವಾಳ ಹಿಂಪಡೆಯುವಂತೆ ಅಥವಾ ರಾಷ್ಟ್ರವ್ಯಾಪಿ ನಿಷೇಧವನ್ನು ಎದುರಿಸುವಂತೆ ಗಡು ವಿಧಿಸಲಾಗಿದೆ.

ಟಿಕ್‍ಟಾಕ್‍ನ ಬಳಕೆಯನ್ನು ಈಗಾಗಲೇ ತೈವಾನ್ ಸರಕಾರಿ ಏಜೆನ್ಸಿಗಳು ಮತ್ತು ಅವುಗಳ ಆವರಣದಲ್ಲಿ ನಿರ್ಬಂಧಿಸಲಾಗಿದೆ. ಈ ನಿಷೇಧವನ್ನು ಶಾಲೆಗಳು, ಸರಕಾರೇತರ ಏಜೆನ್ಸಿಗಳು, ಸಾರ್ವಜನಿಕ ಸ್ಥಳಗಳಿಗೂ ವಿಸ್ತರಿಸುವ ಬಗ್ಗೆ ತೈವಾನ್ ಸರಕಾರ ಚಿಂತಿಸುತ್ತಿದೆ. ವಿವಿಧ ವಲಯಗಳ ಸಲಹೆಯನ್ನು ಪಡೆದು ಸಂಪುಟ ಸಭೆಯಲ್ಲಿ ಚರ್ಚಿಸಿ ಈ ಬಗ್ಗೆ ಶೀಘ್ರವೇ ನಿರ್ಧಾರಕ್ಕೆ ಬರಲಾಗುವುದು ಎಂದು ಉನ್ನತ ಮೂಲಗಳನ್ನು ಉಲ್ಲೇಖಿಸಿದ ಮಾಧ್ಯಮ ವರದಿ ಹೇಳಿದೆ.

2019ರಲ್ಲಿ ಜಾರಿಗೊಳಿಸಿದ್ದ ಮತ್ತು 2022ರಲ್ಲಿ ಪರಿಷ್ಕರಿಸಿದ್ದ ನಿಯಮಗಳ ಪ್ರಕಾರ, ಸರಕಾರಿ ಕಾರ್ಯಾಚರಣೆಗಳು ಅಥವಾ ಸಾಮಾಜಿಕ ಸ್ಥಿರತೆಗೆ ಅಡ್ಡಿಪಡಿಸುವ ಸಾಮಥ್ರ್ಯವಿರುವ ಯಾವುದೇ ಮಾಹಿತಿ ಮತ್ತು ಸಂವಹನ ವ್ಯವಸ್ಥೆ ಅಥವಾ ಸೇವೆಯನ್ನು ರಾಷ್ಟ್ರೀಯ ಮಾಹಿತಿ ಮತ್ತು ಸಂವಹನ ಸುರಕ್ಷತೆಗೆ ಅಪಾಯವನ್ನುಂಟು ಮಾಡುವ ಉತ್ಪನ್ನವೆಂದು ವರ್ಗೀಕರಿಸಲಾಗಿದೆ ಎಂದು ಸಿಎನ್‍ಎ ತೈವಾನ್ ವರದಿ ಮಾಡಿದೆ.

Tags:    

Writer - ವಾರ್ತಾಭಾರತಿ

contributor

Editor - musaveer

contributor

Byline - ವಾರ್ತಾಭಾರತಿ

contributor

Similar News