'ಎಲ್ಲಿದ್ದೇನೆ ಎಂಬ ಪರಿಜ್ಞಾನ ಅವರಿಗಿಲ್ಲ' : ಬೈಡನ್ ವಿರುದ್ಧ ಟ್ರಂಪ್ ವಾಗ್ದಾಳಿ
ವಾಷಿಂಗ್ಟನ್: ಇಟಲಿಯಲ್ಲಿ ನಡೆದ ಜಿ7 ಮುಖಂಡರ ಸಭೆಯಲ್ಲಿ ಇತರ ಮುಖಂಡರ ಜತೆ ಸೇರದೆ ಪ್ರತ್ಯೇಕವಾಗಿ ನಿಲ್ಲುತ್ತಿದ್ದ ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರ ನಡೆಯ ಬಗ್ಗೆ ವ್ಯಾಪಕ ಟೀಕೆ ವ್ಯಕ್ತವಾಗುತ್ತಿರುವಂತೆಯೇ ಇದನ್ನು ತನ್ನ ಚುನಾವಣಾ ಪ್ರಚಾರಕ್ಕೆ ಬಳಸಿಕೊಂಡ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ `ಅವರಿಗೆ ತಾನೆಲ್ಲಿದ್ದೇನೆ ಎಂಬ ಪರಿಜ್ಞಾನವೇ ಇಲ್ಲ' ಎಂದು ಲೇವಡಿ ಮಾಡಿದ್ದಾರೆ.
ಇಟಲಿಯಲ್ಲಿ ಬೈಡನ್ ಜಿ7 ಮುಖಂಡರಿಂದ ದೂರ ಸರಿದು ನಿಲ್ಲುತ್ತಿದ್ದ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಜಿ7 ಮುಖಂಡರ ಜತೆ ನಿಂತಿದ್ದ ಬೈಡನ್, ಛಾಯಾಗ್ರಾಹಕರು ಫೋಟೋ ತೆಗೆಯುತ್ತಿದ್ದಾಗ ಪಕ್ಕದಲ್ಲಿದ್ದ ಭದ್ರತಾ ಸಿಬ್ಬಂದಿಯತ್ತ ತೆರಳಲು ಮುಂದಾಗಿದ್ದರು. ಆಗ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ, ಬೈಡನ್‍ರ ಕೈ ಹಿಡಿದು ಮತ್ತೆ ಸಭೆಯತ್ತ ಕರೆತಂದಿದ್ದ ವೀಡಿಯೊದ ಬಗ್ಗೆ ನೆಟ್ಟಿಗರು `ಬೈಡನ್ ಮಾನಸಿಕ ದೃಢತೆ ಕಳೆದುಕೊಳ್ಳುತ್ತಿದ್ದಾರೆ' ಎಂದು ಟ್ರೋಲ್ ಮಾಡಿದ್ದರು.
ಶನಿವಾರ ನಡೆದ ಚುನಾವಣಾ ಪ್ರಚಾರ ಕಾರ್ಯದಲ್ಲಿ ಈ ಬಗ್ಗೆ ಲೇವಡಿ ಮಾಡಿದ ಟ್ರಂಪ್ `81 ವರ್ಷದ ಬೈಡನ್ ಅಧ್ಯಕ್ಷರಾಗಿ ಮರು ಆಯ್ಕೆಗೊಳ್ಳಲು ಯೋಗ್ಯರೇ ಎಂಬುದನ್ನು ನಿರ್ಧರಿಸುವ ಕಾಲ ಬಂದಿದೆ' ಎಂದಿದ್ದಾರೆ. ಆದರೆ ಟ್ರಂಪ್ ಶುಕ್ರವಾರ 78 ವರ್ಷಕ್ಕೆ ಕಾಲಿಟ್ಟಿದ್ದಾರೆ ಎಂಬುದನ್ನು ಮರೆಯಬಾರದು ಎಂದು ಬೈಡನ್ ಬೆಂಬಲಿಗರು ಪ್ರತಿಕ್ರಿಯಿಸಿದ್ದಾರೆ.