ಟ್ರಂಪ್ ಮೊದಲ ಘೋಷಣೆಯಿಂದಲೇ ಷೇರುಪೇಟೆ ಬುಡಮೇಲು!

Update: 2024-11-07 03:24 GMT

PC: x.com/puustikorva

ವಾಷಿಂಗ್ಟನ್: ಅಮೆರಿಕದ ನೂತನ ಆಧ್ಯಕ್ಷರಾಗಿ ಚುನಾಯಿತರಾದ ಮೊದಲ ದಿನ ನೀಡಿದ ಹೇಳಿಕೆಯಿಂದ ಉದ್ಯಮ ಜಗತ್ತಿನಲ್ಲಿ ಅಘಾತದ ಅಲೆ ಗೋಚರಿಸಿದೆ. ನವೀಕರಿಸಬಹುದಾದ ಇಂಧನ ಯೋಜನೆಗಳನ್ನು ಸ್ಥಗಿತಗೊಳಿಸುವ ಕುರಿತ ಟ್ರಂಪ್ ಹೇಳಿಕೆಯಿಂದ ನವೀಕರಿಸಬಹುದಾದ ಇಂಧನ ಕಂಪನಿಗಳ ಷೇರುಗಳು ಪಾತಾಳಕ್ಕೆ ಕುಸಿದಿವೆ. ಆಫ್ ಶೋರ್ ಪವನ ವಿದ್ಯುತ್ ಘಟಕಗಳ ಬಗ್ಗೆ ಹೇಳಿಕೆ ನೀಡಿದ್ದ ಟ್ರಂಪ್, ಇವೆಲ್ಲ ಮೊದಲ ದಿನವೇ ಕೊನೆಯಾಗುವ ಖಾತರಿಯನ್ನು ನೀಡುತ್ತೇನೆ ಎಂದಿದ್ದರು.

ರಾಯ್ಟರ್ಸ್ ವರದಿಯ ಪ್ರಕಾರ, ವಿಶ್ವದ ಅತಿದೊಡ್ಡ ಆಫ್ ಶೋರ್ ಪವನ ವಿದ್ಯುತ್ ಡೆವಲಪರ್ ಎನಿಸಿದ ಆಸ್ರ್ಟೆಡ್ ಷೇರುಗಳು ಶೇಕಡ 14ರಷ್ಟು ಕುಸಿದಿದ್ದರೆ, ಪವನ ಟರ್ಬೈನ್ ಉತ್ಪಾದಕ ಕಂಪನಿಗಳಾದ ವೆಸ್ಟಾಸ್ ಮತ್ತು ನಾರ್ಡೆಕ್ಸ್ ವಹಿವಾಟು ಕ್ರಮವಾಗಿ ಶೇಕಡ 11 ಮತ್ತು 7.5ರಷ್ಟು ಕುಸಿತ ಕಂಡಿವೆ.

ನವಿಕರಣ ಇಂಧನ ಯೋಜನೆಗಳು ಟ್ರಂಪ್ ಗೆ ಪಥ್ಯವಾಗಿಲ್ಲ. ತಮ್ಮ ಹಿಂದಿನ ಪ್ರಚಾರದಲ್ಲೇ ಅವರು, ಸೋಲಾರ್ ಪ್ಯಾನಲ್ ಗಳಿಗೆ ವಿದ್ಯುತ್ ಉತ್ಪಾದಿಸಲು ಇಡೀ ಮರುಭೂಮಿಯಂಥ ದೊಡ್ಡ ಜಾಗ ಬೇಕಾಗುತ್ತದೆ ಎಂದು ಟೀಕಿಸಿದ್ದರು. ಆದರೂ ಸೌರ ವಿದ್ಯುತ್ ಕೈಗಾರಿಕೆಗಳ ಸಂಘದ ಪ್ರಕಾರ ಸೌರಪ್ಯಾನಲ್ ಗಳಿಗೆ ತುಲನಾತ್ಮಕವಾಗಿ ಕಡಿಮೆ ಜಾಗ ಸಾಕು. ಸದ್ಯಕ್ಕೆ ಸೋಲಾರ್ ಘಟಕಗಳು 6 ಲಕ್ಷ ಎಕರೆಗಿಂತ ಕಡಿಮೆ ಜಾಗ ಬಳಸಿಕೊಂಡಿವೆ ಎನ್ನುವುದು ಸಂಘದ ಸಮರ್ಥನೆ.

ಟ್ರಂಪ್ ತಮ್ಮ ಭರವಸೆಗಳನ್ನು ಜಾರಿಗೊಳಿಸಲು ಮುಂದಾದಲ್ಲಿ ಅದು ನವೀಕರಣ ಇಂಧನ ಕ್ಷೇತ್ರದ ಮೇಲೆ ಮಹತ್ವದ ಪರಿಣಾಮಗಳನ್ನು ಬೀರಲಿದೆ. ಈ ಘಟಕಗಳಿಗೆ ನೀಡುತ್ತಿರುವ ತೆರಿಗೆ ಕಡಿತವನ್ನು ನಿರ್ಮೂಲನೆ ಮಾಡುವ ಅಥವಾ ಕಡಿತಗೊಳಿಸುವ ಸೂಚನೆ ಇದೆ. ಇದು ಇಡೀ ಉದ್ಯಮ ಪ್ರಗತಿ ಕುಂಠಿತಕ್ಕೆ ಕಾರಣವಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಬೈಡನ್ ಸರ್ಕಾರ ರೂಪಿಸಿದ ಪರಿಸರ ನಿಬಂಧನೆಗಳನ್ನು ಕಿತ್ತುಹಾಕಿ, ದಹಿಸುವ ಇಂಧನ ಕಂಪನಿಗಳು ಕಾರ್ಯಾಚರಣೆ ಮಾಡಲು ಅನುಕೂಲಕರ ವಾತಾವರಣ ಸೃಷ್ಟಿಸುವ ಸಾಧ್ಯತೆ ಇದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News