ವಿಶ್ವಸಂಸ್ಥೆಯಲ್ಲಿ ಗಾಂಧೀಜಿಯ ಅಹಿಂಸಾ ಸಂದೇಶ ಸ್ಮರಿಸಿದ ಗುಟೆರಸ್

Update: 2024-10-03 16:23 GMT

 ಆ್ಯಂಟೊನಿಯೊ ಗುಟೆರಸ್ | PC : PTI 

ವಿಶ್ವಸಂಸ್ಥೆ : ರಾಷ್ಟ್ರಪಿತ ಮಹಾತ್ಮಾಗಾಂಧೀಜಿಯವರ ಜನ್ಮದಿನವಾದ ಬುಧವಾರ ವಿಶ್ವಸಂಸ್ಥೆಯು ಅಹಿಂಸಾ ದಿನವಾಗಿ ಆಚರಿಸಿತು.

ನ್ಯೂಯಾರ್ಕ್‌ನಲ್ಲಿರುವ ವಿಶ್ವಸಂಸ್ಥೆ ಕಾರ್ಯಾಲಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆ್ಯಂಟೊನಿಯೊ ಗುಟೆರಸ್ ಮಾತನಾಡಿ, ಶಾಂತಿ, ಅಹಿಂಸೆ ಹಾಗೂ ಸಮಾನತೆ ಕುರಿತ ಗಾಂಧೀಜಿಯವರ ಸಂದೇಶಗಳನ್ನು ಉಲ್ಲೇಖಿಸಿದರು. ಉಕ್ರೇನ್ ಹಾಗೂ ಮಧ್ಯಪ್ರಾಚ್ಯ ಸಂಘರ್ಷಗಳಿಂದಾಗಿ ಜಗತ್ತು ತತ್ತರಿಸುತ್ತಿದೆ ಎಂದು ತೀವ್ರ ಕಳವಳ ವ್ಯಕ್ತಪಡಿಸಿದರು.

‘‘ಮಹಾತ್ಮಾಗಾಂಧೀಜಿಯವರ ಜನ್ಮದಿವನ್ನು ನಾವು ಅಂತಾರಾಷ್ಟ್ರೀಯ ಅಹಿಂಸಾ ದಿನವಾಗಿ ಆಚರಿಸುತ್ತಿದ್ದೇವೆ. ಸಮಾನತೆ, ಗೌರವ, ಶಾಂತಿ ಹಾಗೂ ನ್ಯಾಯದ ಮೌಲ್ಯಗಳಿಗಾಗಿ ಅವರು ಜೀವನವನ್ನೇ ಮುಡಿಪಾಗಿಟ್ಟಿದ್ದರು.ಉಕ್ರೇನ್‌ನಿಂದ ಹಿಡಿದು ಸುಡಾನ್‌ವರೆಗೆ, ಮಧ್ಯಪ್ರಾಚ್ಯ ಹಾಗೂ ಅದರಾಚೆಗೆ ಯುದ್ಧಗಳು ವಿನಾಶ, ದಾರಿದ್ರ್ಯ ಹಾಗೂ ಭೀತಿಯ ನರಕದೃಶ್ಯವನ್ನು ಸೃಷ್ಟಿಸಿದೆ. ಅಸಮಾನತೆ ಹಾಗೂ ಅರಾಜಕತೆಯ ವಾತಾವರಣವು ಶಾಂತಿಯ ತಳಹದಿಯನ್ನು ಅಲುಗಾಡಿಸುತ್ತಿದೆ. ಅಹಿಂಸೆಯು ಮಾನವಕುಲಕ್ಕೆ ಲಭ್ಯವಿರುವ ಅತಿ ಶ್ರೇಷ್ಠವಾದ ಶಕ್ತಿಯೆಂಬುದಾಗಿ ಮಹಾತ್ಮಾಗಾಂಧಿ ದೃಢ ವಿಶ್ವಾಸವಿರಿಸಿದ್ದರು. ಉದಾತ್ತ ದೃಷ್ಟಿಕೋನವನ್ನು ಬೆಂಬಲಿಸುವಂತಹ ಸಂಸ್ಥೆಗಳನ್ನು ಸ್ಥಾಪಿಸುವಂತೆ ಅವರು ವಿಶ್ವಸಮುದಾಯಕ್ಕೆ ಕರೆ ನೀಡಿದ್ದರು ಎಂದು ಗುಟೆರಸ್ ಹೇಳಿದರು.

‘ಗಾಂಧಿ ಮೌಲ್ಯಗಳು ಹಾಗೂ ವಿಶ್ವಸಂಸ್ಥೆ ಸನದು’ ಶೀರ್ಷಿಕೆಯ ಈ ಕಾರ್ಯಕ್ರಮವನ್ನು ವಿಶ್ವಸಂಸ್ಥೆಯಲ್ಲಿನ ಭಾರತದ ಖಾಯಂ ನಿಯೋಗವು ಆಯೋಜಿಸಿತ್ತು.

ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ 79ನೇ ಅಧಿವೇಶನದ ಅಧ್ಯಕ್ಷ ಫಿಲೆಮೊನ್ ಯಾಂಗ್ ಅವರು ಮಾತನಾಡಿ, ಶಾಂತಿಯುತ ಪ್ರತಿಭಟನೆಗಳ ಪರಿಣಾಮಕಾರಿತ್ವಕ್ಕೆ, ಗಾಂಧೀಜಿಯ ಬದುಕು ಪ್ರಬಲ ನಿದರ್ಶನವಾಗಿದೆ. ಜಗತ್ತಿನಾದ್ಯಂತ ಅದರಲ್ಲೂ ವಿಶೇಷವಾಗಿ ಏಶ್ಯ ಹಾಗೂ ಆಫ್ರಿಕಾದ ಜನತೆಗೆ ಸ್ಪೂರ್ತಿದಾಯಕವಾಗಿದೆ ಎಂದರು.

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News