ವಿಶ್ವಸಂಸ್ಥೆಯ ನಿರ್ಣಯ ಇಸ್ರೇಲ್ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ : ಅಮೆರಿಕ
ವಾಶಿಂಗ್ಟನ್: ರಮಝಾನ್ ಸಂದರ್ಭ ಗಾಝಾದಲ್ಲಿ ತಕ್ಷಣ ಕದನವಿರಾಮ ಜಾರಿಯಾಗಲು ಒತ್ತಾಯಿಸುವ ವಿಶ್ವಸಂಸ್ಥೆ ಭದ್ರತಾ ಮಂಡಳಿಯ ನಿರ್ಣಯವು ಇಸ್ರೇಲ್ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಅಮೆರಿಕ ಪ್ರತಿಪಾದಿಸಿದೆ.
ಗಾಝಾದಲ್ಲಿ ತಕ್ಷಣ ಕದನ ಜಾರಿಗೆ ಕರೆ ನೀಡುವ ನಿರ್ಣಯವನ್ನು ಸೋಮವಾರ ವಿಶ್ವಸಂಸ್ಥೆಯ ಭದ್ರತಾ ಮಂಡಳಿ 14-0 ಮತಗಳಿಂದ ಅಂಗೀಕರಿಸಿತ್ತು. ಅಮೆರಿಕ ಮತದಾನದಿಂದ ದೂರ ಉಳಿದಿತ್ತು. ಅಮೆರಿಕ ವೀಟೊ ಪ್ರಯೋಗಿಸಿ ನಿರ್ಣಯವನ್ನು ತಡೆಹಿಡಿಯದ ಬಗ್ಗೆ ನಿರಾಸೆ ವ್ಯಕ್ತಪಡಿಸಿದ್ದ ಇಸ್ರೇಲ್ನ ಪ್ರಧಾನಿ ಬೆಂಜಮಿನ್ ನೆತನ್ಯಾಹು, ಅಮೆರಿಕಕ್ಕೆ ಇಸ್ರೇಲ್ ನಿಯೋಗದ ಭೇಟಿ ಕಾರ್ಯಕ್ರಮವನ್ನು ರದ್ದುಗೊಳಿಸಿದ್ದರು.
ಸೋಮವಾರ ವಾಶಿಂಗ್ಟನ್ನಲ್ಲಿ ಸುದ್ಧಿಗೋಷ್ಠಿ ಯಲ್ಲಿ ಮಾತನಾಡಿದ ಶ್ವೇತಭವನದ ರಾಷ್ಟ್ರೀಯ ಭದ್ರತಾ ಸಲಹೆಗಾರ ಜಾನ್ ಕಿರ್ಬಿ `ವಿಶ್ವಸಂಸ್ಥೆ ಭದ್ರತಾ ಮಂಡಳಿ ನಿರ್ಣಯ ಇಸ್ರೇಲ್ ಮೇಲೆ ಪರಿಣಾಮ ಬೀರುವುದಿಲ್ಲ ಮತ್ತು ಇಸ್ರೇಲ್ ಕುರಿತ ಅಮೆರಿಕದ ಕಾರ್ಯನೀತಿಯಲ್ಲಿ ಯಾವುದೇ ಬದಲಾವಣೆಯಿಲ್ಲ' ಎಂದು ನೆತನ್ಯಾಹುಗೆ ಭರವಸೆ ನೀಡಿದರು.
ಇಸ್ರೇಲ್ ನಿಯೋಗದ ಭೇಟಿ ರದ್ದುಗೊಳಿಸಿರುವ ಘೋಷಣೆಯಿಂದ ನಾವು ಗೊಂದಲಕ್ಕೆ ಒಳಗಾದೆವು. ಇಲ್ಲಿ ಕೆಲವೊಂದು ಅಂಶಗಳನ್ನು ಮತ್ತೆ ಸ್ಪಷ್ಟಪಡಿಸಬೇಕಿದೆ. ಒಂದನೆಯದು ಇದು ನಿರ್ಬಂಧಪಡಿಸಲಾಗದ ನಿರ್ಣಯವಾಗಿದೆ(ಯಾವುದೇ ಕಾನೂನು ಬಾಧ್ಯತೆಯನ್ನು ಹೊಂದಿರದ, ಆದರೆ ನೈತಿಕ ಬೆಂಬಲ ನೀಡುವ). ಆದ್ದರಿಂದ ಇಸ್ರೇಲ್ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಮತ್ತು ಹಮಾಸ್ ವಿರುದ್ಧದ ಇಸ್ರೇಲ್ ಕಾರ್ಯಾಚರಣೆ ಮುಂದುವರಿಸುವುದಕ್ಕೂ ಪರಿಣಾಮ ಬೀರುವುದಿಲ್ಲ. ಎರಡನೆಯದು, ನಮ್ಮ ಕಾರ್ಯನೀತಿಯಲ್ಲಿ ಯಾವುದೇ ಬದಲಾವಣೆ ಆಗಿರುವುದನ್ನು ಇದು ಸೂಚಿಸುವುದಿಲ್ಲ' ಎಂದು ಜಾನ್ ಕಿರ್ಬಿ ಹೇಳಿದ್ದಾರೆ.
`ನಮ್ಮ ಕಾರ್ಯನೀತಿ ಹೇಗಿರಬೇಕು ಎಂಬುದನ್ನು ನಾವು ನಿರ್ಧರಿಸಿದ್ದೇವೆ. ಇದು ಬದಲಾಗಿಲ್ಲ. ಸಾರ್ವಜನಿಕ ಹೇಳಿಕೆ, ವರದಿಯನ್ನು ಆಧರಿಸಿ ಇಸ್ರೇಲ್ ಪ್ರಧಾನಿಯ ಕಚೇರಿ ಈ ರೀತಿ ಭಾವಿಸಿರಬಹುದು' ಎಂದು ಅಮೆರಿಕ ಹೇಳಿದೆ.
ಸೋಮವಾರ ಭದ್ರತಾ ಮಂಡಳಿಯಲ್ಲಿ ನಿರ್ಣಯದ ಮೇಲೆ ನಡೆದ ಮತದಾನದಿಂದ ಅಮೆರಿಕ ದೂರ ಉಳಿದಿರುವುದನ್ನು ಇಸ್ರೇಲ್ ಟೀಕಿಸಿತ್ತು. `ನಿರ್ಣಯದ ಮೇಲಿನ ಮತದಾನದಿಂದ ಅಮೆರಿಕ ದೂರ ಉಳಿದಿರುವುದು, ಯುದ್ಧದ ಆರಂಭದಿಂದಲೂ ಭದ್ರತಾ ಮಂಡಳಿಯಲ್ಲಿ ಅಮೆರಿಕ ತಳೆದಿದ್ದ ಸ್ಥಿರ ನಿಲುವಿನಿಂದ ದೂರ ಸರಿಯುತ್ತಿರುವ ಸ್ಪಷ್ಟ ಸೂಚನೆಯಾಗಿದೆ' ಎಂದು ಇಸ್ರೇಲ್ ಟೀಕಿಸಿದೆ. ವಿಶ್ವಸಂಸ್ಥೆಯಲ್ಲಿ ಅಮೆರಿಕ ತನ್ನ ನೀತಿಯನ್ನು ತ್ಯಜಿಸಿದೆ. ಅಮೆರಿಕದ ನಿಲುವಿನಲ್ಲಿ ಬದಲಾವಣೆಯ ಹಿನ್ನೆಲೆಯಲ್ಲಿ ಇಸ್ರೇಲ್ನ ನಿಯೋಗ ಇಸ್ರೇಲ್ನಲ್ಲೇ ಉಳಿಯಬೇಕೆಂದು ಪ್ರಧಾನಿ ನೆತನ್ಯಾಹು ನಿರ್ಧರಿಸಿದ್ದಾರೆ ಎಂದು ಇಸ್ರೇಲ್ ಪ್ರಧಾನಿಯವರ ಕಚೇರಿ ಹೇಳಿದೆ.
ಗಾಝಾ ಯುದ್ಧದ ಬಗ್ಗೆ ಚರ್ಚಿಸಲು ಇಸ್ರೇಲ್ನ ನಿಯೋಗ ಅಮೆರಿಕಕ್ಕೆ ಭೇಟಿ ನೀಡುವ ಕಾರ್ಯಕ್ರಮವಿತ್ತು. ಗಾಝಾದ ರಫಾ ನಗರದಲ್ಲಿ ಪ್ರಮುಖ ಕಾರ್ಯಾಚರಣೆ ನಡೆಸುವ ನಿರ್ಧಾರದ ಬದಲು ಪರ್ಯಾಯ ಯೋಜನೆ ರೂಪಿಸುವಂತೆ ಅಮೆರಿಕ ಆಗ್ರಹಿಸುತ್ತಿದೆ.
ವಿಶ್ವಸಂಸ್ಥೆ ಭದ್ರತಾ ಮಂಡಳಿಯ ನಿರ್ಣಯವನ್ನು ಸ್ವಾಗತಿಸುವುದಾಗಿ ಹಮಾಸ್ ಹೇಳಿದೆ. ಆದರೆ ಶಾಶ್ವತ ಕದನ ವಿರಾಮದ ಅಗತ್ಯವಿದೆ ಎಂದಿದೆ. `ಎರಡೂ ಕಡೆಯ ಕೈದಿಗಳ ಬಿಡುಗಡೆಗೆ ಕಾರಣವಾಗುವ ತಕ್ಷಣದ ಕೈದಿಗಳ ವಿನಿಮಯ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳಲು ನಮ್ಮ ಸಿದ್ಧತೆಯನ್ನು ನಾವು ದೃಢೀಕರಿಸುತ್ತೇವೆ' ಎಂದು ಹಮಾಸ್ ಹೇಳಿದೆ.
ಹಮಾಸ್ನ ವಶದಲ್ಲಿರುವ ಒತ್ತೆಯಾಳುಗಳ ಬಿಡುಗಡೆಗೆ ಪ್ರತಿಯಾಗಿ ಕದನ ವಿರಾಮ ಎಂಬ ಷರತ್ತು ಇಲ್ಲದೆಯೇ ವಿಶ್ವಸಂಸ್ಥೆ ಭದ್ರತಾ ಮಂಡಳಿಯ ನಿರ್ಣಯ ಅಂಗೀಕಾರಗೊಳ್ಳಲು ಅವಕಾಶ ನೀಡುವ ಮೂಲಕ ಅಮೆರಿಕ ತನ್ನ ತಾತ್ವಿಕ ನಿಲುವಿನಿಂದ ಹಿಂದೆ ಸರಿಯುತ್ತಿದೆ. ಅಮೆರಿಕದ ನಿರ್ಧಾರವು ಹಮಾಸ್ ಅನ್ನು ನಿಯಂತ್ರಿಸುವ ತನ್ನ ಪ್ರಯತ್ನಕ್ಕೆ ಹಾನಿಯುಂಟು ಮಾಡುತ್ತಿದೆ ಮತ್ತು ಒತ್ತೆಯಾಳುಗಳ ಬಿಡುಗಡೆಯ ಪ್ರಯತ್ನವನ್ನು ಹಾಳುಗೆಡವುತ್ತಿದೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಆರೋಪಿಸಿದ್ದಾರೆ.