ಸಂಭವನೀಯ ಯುದ್ಧಾಪರಾಧಗಳಿಗೆ ಇಸ್ರೇಲ್ ಅನ್ನು ಹೊಣೆಯಾಗಿಸಬೇಕು : ವಿಶ್ವಸಂಸ್ಥೆ ಮಾನವ ಹಕ್ಕುಗಳ ಮಂಡಳಿ ಆಗ್ರಹ
ಜಿನೆವಾ: ಗಾಝಾ ಪಟ್ಟಿಯಲ್ಲಿ ಸಂಭವನೀಯ ಯುದ್ಧಾಪರಾಧಗಳು ಮತ್ತು ಮಾನವೀಯತೆಯ ವಿರುದ್ಧದ ಅಪರಾಧಗಳಿಗೆ ಇಸ್ರೇಲ್ ಅನ್ನು ಹೊಣೆಯಾಗಿಸಬೇಕೆಂದು ಕರೆ ನೀಡುವ ನಿರ್ಣಯವನ್ನು ವಿಶ್ವಸಂಸ್ಥೆ ಮಾನವ ಹಕ್ಕುಗಳ ಮಂಡಳಿ ಶುಕ್ರವಾರ ಅಂಗೀಕರಿಸಿದೆ.
ನಿರ್ಣಯದ ಪರ 22 ರಾಷ್ಟ್ರಗಳು ಮತ ಹಾಕಿದರೆ ಅಮೆರಿಕ, ಜರ್ಮನಿ ಸೇರಿದಂತೆ 6 ದೇಶಗಳು ವಿರೋಧಿಸಿವೆ. 13 ರಾಷ್ಟ್ರಗಳು ಮತದಾನದಿಂದ ದೂರ ಉಳಿದವು. ನಿರ್ಣಯ ಅಂಗೀಕಾರಗೊಂಡ ಬಳಿಕ ಹಲವು ಪ್ರತಿನಿಧಿಗಳು ಚಪ್ಪಾಳೆ ತಟ್ಟಿ ಹರ್ಷೋದ್ಘಾರ ಮಾಡಿದರು.
ನಿರ್ಣಯವು `ಅಂತರಾಷ್ಟ್ರೀಯ ಮಾನವೀಯ ಕಾನೂನು ಮತ್ತು ಅಂತರಾಷ್ಟ್ರೀಯ ಮಾನವ ಹಕ್ಕುಗಳ ಕಾನೂನಿನ ಎಲ್ಲಾ ಉಲ್ಲಂಘನೆಗೆ ಹೊಣೆಗಾರಿಕೆಯನ್ನು ಖಾತ್ರಿಪಡಿಸುವ ಅಗತ್ಯವನ್ನು ಒತ್ತಿಹೇಳಿದೆ. `ಅಲ್ಲದೆ ಆಕ್ರಮಿಯ ಫೆಲೆಸ್ತೀನಿಯನ್ ಪ್ರದೇಶದಲ್ಲಿ ಸಂಭವನೀಯ ಯುದ್ದಾಪರಾಧ ಮತ್ತು ಮಾನವೀಯತೆಯ ವಿರುದ್ಧದ ಅಪರಾಧ ಸೇರಿದಂತೆ ಮಾನವ ಹಕ್ಕುಗಳ ಗಂಭೀರ ಉಲ್ಲಂಘನೆ ಹಾಗೂ ಅಂತರಾಷ್ಟ್ರೀಯ ಮಾನವ ಹಕ್ಕುಗಳ ಕಾನೂನಿನ ಗಂಭೀರ ಉಲ್ಲಂಘನೆಯ ಬಗ್ಗೆ ತೀವ್ರ ಕಳವಳವನ್ನು ವ್ಯಕ್ತಪಡಿಸಿದೆ. 33,000ಕ್ಕೂ ಅಧಿಕ ಜನರ ಹತ್ಯೆಗೆ ಕಾರಣವಾದ ಗಾಝಾ ಯುದ್ಧದಲ್ಲಿ ಜನಾಂಗೀಯ ಹತ್ಯೆ ನಡೆದಿರುವ ಸಾಧ್ಯತೆಯ ಬಗ್ಗೆ ಎಚ್ಚರಿಕೆ ನೀಡಿರುವ ಮಂಡಳಿಯು ಇಸ್ರೇಲ್‍ಗೆ ಎಲ್ಲಾ ಶಸ್ತ್ರಾಸ್ತ್ರಗಳ ಮಾರಾಟವನ್ನು ಸ್ಥಗಿತಗೊಳಿಸುವಂತೆ ಆಗ್ರಹಿಸಿದೆ.
ನಿರ್ಣಯವನ್ನು ಮತಕ್ಕೆ ಹಾಕುವುದಕ್ಕೂ ಮುನ್ನ ಸಭೆಯನ್ನುದ್ದೇಶಿಸಿ ಮಾತನಾಡಿದ ವಿಶ್ವಸಂಸ್ಥೆಗೆ ಇಸ್ರೇಲ್‍ನ ಕಾಯಂ ಪ್ರತಿನಿಧಿ ಮಿಯರವ್ ಎಲಾನ್ ಶಹರ್ `ಮಂಡಳಿಯ ಎದುರು ಇರುವು ನಿರ್ಣಯದ ಪ್ರಕಾರ ಇಸ್ರೇಲ್‍ಗೆ ತನ್ನ ಜನರನ್ನು ರಕ್ಷಿಸುವ ಯಾವುದೇ ಹಕ್ಕು ಇರುವುದಿಲ್ಲ. ಆದರೆ ಹಮಾಸ್‍ಗೆ ಅಮಾಯಕ ಇಸ್ರೇಲಿಗಳಿಗೆ ಚಿತ್ರಹಿಂಸೆ ನೀಡುವ, ಹತ್ಯೆ ನಡೆಸುವ ಎಲ್ಲಾ ಹಕ್ಕೂ ಇದೆ. ಹೌದು ಎಂದು ಓಟು ಹಾಕುವುದು ಹಮಾಸ್ ಕೃತ್ಯಕ್ಕೆ ಹೌದು ಎಂದು ಹೇಳಿದಂತಾಗುತ್ತದೆ' ಎಂದರು. ವಿಶ್ವಸಂಸ್ಥೆ ಮಾನವ ಹಕ್ಕುಗಳ ಮಂಡಳಿ ಈ ಹಿಂದೆಯೇ ಇಸ್ರೇಲ್‍ನ ಕೈಬಿಟ್ಟಿದೆ ಮತ್ತು ಹಮಾಸ್ ಅನ್ನೂ ಈ ಹಿಂದಿನಿಂದಲೂ ಸಮರ್ಥಿಸಿಕೊಂಡು ಬಂದಿದೆ' ಎಂದು ಇಸ್ರೇಲ್ ಪ್ರತಿನಿಧಿ ಪ್ರತಿಪಾದಿಸಿದರು.
ನಿರ್ಣಯದಲ್ಲಿ ಅಕ್ಟೋಬರ್ 7ರ ದಾಳಿಗಾಗಿ ಹಮಾಸ್ ಅನ್ನು ಖಂಡಿಸುವ ಪದಗಳಿಲ್ಲ ಅಥವಾ ಈ ಕೃತ್ಯಗಳ ಭಯೋತ್ಪಾದಕ ಸ್ವರೂಪದ ಬಗ್ಗೆ ಯಾವುದೇ ಉಲ್ಲೇಖವಿಲ್ಲ. ಆದ್ದರಿಂದ ನಿರ್ಣಯದ ವಿರುದ್ಧ ಮತ ಚಲಾಯಿಸಿರುವುದಾಗಿ ಅಮೆರಿಕ ಹೇಳಿದೆ. `ಆದರೆ ಹಮಾಸ್ ವಿರುದ್ಧದ ಮಿಲಿಟರಿ ಕಾರ್ಯಾಚರಣೆ ಸಂದರ್ಭ ನಾಗರಿಕ ಸಾವುನೋವುಗಳನ್ನು ತಪ್ಪಿಸಲು ಮತ್ತು ಮಾನವೀಯ ನೆರವು ಕಾರ್ಯಕರ್ತರು ತಮ್ಮ ಕಾರ್ಯವನ್ನು ಸುರಕ್ಷಿತ ರೀತಿಯಲ್ಲಿ ಮುಂದುವರಿಸುವುದನ್ನು ಖಾತರಿ ಪಡಿಸಲು ಇಸ್ರೇಲ್ ಅನ್ನು ಪದೇ ಪದೇ ಆಗ್ರಹಿಸಲಾಗಿದೆ. ಆದರೆ ಇದು ಸಾಧ್ಯವಾಗಿಲ್ಲ. ಕೇವಲ 6 ತಿಂಗಳಲ್ಲೇ ಆಧುನಿಕ ಯುಗದ ಯಾವುದೇ ಯುದ್ಧಕ್ಕಿಂತ ಹೆಚ್ಚು ಪ್ರಜೆಗಳು ಈ ಯುದ್ಧದಲ್ಲಿ ಸಾವನ್ನಪ್ಪಿದ್ದಾರೆ' ಎಂದು ಅಮೆರಿಕದ ಕಾಯಂ ಪ್ರತಿನಿಧಿ ಮಿಷೆಲ್ ಟೇಲರ್ ಹೇಳಿದ್ದಾರೆ.