ಮಾರ್ಚ್‍ನಿಂದ ಇಸ್ರೇಲ್‍ಗೆ ಯುನೈಟೆಡ್ ಏರ್‌ಲೈನ್ಸ್ ವಿಮಾನಯಾನ ಆರಂಭ
ನ್ಯೂಯಾರ್ಕ್: ಮುಂದಿನ ತಿಂಗಳಿಂದ ಇಸ್ರೇಲ್‍ಗೆ ವಿಮಾನಯಾನವನ್ನು ಪುನರಾರಂಭಿಸುವುದಾಗಿ ಅಮೆರಿಕದ ಪ್ರಮುಖ ವಿಮಾನಯಾನ ಸಂಸ್ಥೆ ಯುನೈಟೆಡ್ ಏರ್‍ಲೈನ್ಸ್ ಘೋಷಿಸಿದೆ.
ಕಳೆದ ಅಕ್ಟೋಬರ್ ನಲ್ಲಿ ಇಸ್ರೇಲ್-ಹಮಾಸ್ ಸಂಘರ್ಷ ಉಲ್ಬಣಿಸಿದ ಹಿನ್ನೆಲೆಯಲ್ಲಿ ಇಸ್ರೇಲ್‍ಗೆ ವಿಮಾನ ಸೇವೆಯನ್ನು ಅಮಾನತುಗೊಳಿಸಲಾಗಿತ್ತು. ಮಾರ್ಚ್ 2 ಮತ್ತು 4ರಂದು ನ್ಯೂಜೆರ್ಸಿಯ ನೆವಾರ್ಕ್‍ನಿಂದ ಇಸ್ರೇಲ್ ರಾಜಧಾನಿ ಟೆಲ್‍ಅವೀವ್‍ಗೆ ನೇರ ವಿಮಾನ ಪ್ರಯಾಣ ಸೇವೆಗೆ ಚಾಲನೆ ದೊರಕಲಿದೆ. ಮಾರ್ಚ್ 6ರಿಂದ ದೈನಂದಿನ ವಿಮಾನಸೇವೆ ಆರಂಭಿಸುವ ವಿಶ್ವಾಸವಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಅಮೆರಿಕದ ಮತ್ತೆರಡು ವಿಮಾನಯಾನ ಸಂಸ್ಥೆಗಳಾದ ಅಮೆರಿಕನ್ ಏರ್‍ಲೈನ್ಸ್ ಮತ್ತು ಡೆಲ್ಟಾ ಏರ್‍ಲೈನ್ಸ್ ಕೂಡಾ ಅಕ್ಟೋಬರ್ ನಿಂದ ಟೆಲ್‍ಅವೀವ್‍ಗೆ ವಿಮಾನಯಾನವನ್ನು ಅಮಾನತುಗೊಳಿಸಿದ್ದು ಮತ್ತೆ ಆರಂಭಿಸುವ ಬಗ್ಗೆ ಯಾವುದೇ ಹೇಳಿಕೆ ನೀಡಿಲ್ಲ.
ಜರ್ಮನಿಯ ಲುಪ್ತಾನ್ಸಾ, ಆಸ್ಟ್ರಿಯನ್ ಏರ್‍ಲೈನ್ಸ್, ಏರ್‍ಫ್ರಾನ್ಸ್ ಮತ್ತು ಸ್ವಿಸ್ ಏರ್‍ಲೈನ್ಸ್‍ಗಳು ಜನವರಿಯಿಂದ ಟೆಲ್‍ಅವೀವ್‍ಗೆ ವಿಮಾನ ಯಾನವನ್ನು ಪುನರಾರಂಭಿಸಿವೆ. ಯುರೋಪ್‍ನ ಇತರ ವಿಮಾನಯಾನ ಸಂಸ್ಥೆಗಳೂ ಶೀಘ್ರವೇ ಟೆಲ್‍ಅವೀವ್ ವಿಮಾನಯಾನ ಪುನರಾರಂಭದ ಸುಳಿವು ನೀಡಿವೆ.