ಪಳೆಯುಳಿಕೆ ಇಂಧನಗಳ ಜಾಹೀರಾತು ನಿಷೇಧಕ್ಕೆ ವಿಶ್ವಸಂಸ್ಥೆ ಕರೆ

Update: 2024-06-06 17:13 GMT

ಆ್ಯಂಟೊನಿಯೊ ಗ್ಯುಟೆರಸ್ | PC : PTI 

ಹೊಸದಿಲ್ಲಿ : ಲಕ್ಷಾಂತರ ವರ್ಷಗಳ ಹಿಂದೆ ಡೈನೊಸಾರ್‌ಗಳ ನಾಶಕ್ಕೆ ಉಲ್ಕಾಶಿಲೆ ಹೇಗೆ ಕಾರಣವಾಗಿತ್ತೋ, ಹಾಗೆಯೇ ಭೂಮಿಗೆ ಮಾನವರು ಈಗ ಅಪಾಯಕಾರಿಯಾಗಿ ಪರಿಣಮಿಸಿದ್ದಾರೆಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆ್ಯಂಟೊನಿಯೊ ಗ್ಯುಟೆರಸ್ ಬುಧವಾರ ಕಳವಳ ವ್ಯಕ್ತಪಡಿಸಿದ್ದಾರೆ.

ಕಳೆದ 12 ತಿಂಗಳುಗಳು ವಿಶ್ವದ ದಾಖಲಿತ ಇತಿಹಾಸದಲ್ಲೇ ಅತ್ಯಧಿಕ ತಾಪಮಾನವನ್ನು ಹೊಂದಿದ್ದು, ಪಳೆಯುಳಿಕೆ ಇಂಧನ (ಪೆಟ್ರೋಲ್, ಡೀಸೆಲ್ ಇತ್ಯಾದಿ)ಗಳ ಜಾಹೀರಾತುಗಳನ್ನು ಪ್ರಸಾರವನ್ನು ಕೊನೆಗೊಳಿಸಬೇಕೆಂದು ಆಗ್ರಹಿಸಿದ್ದರು.

ಜಗತ್ತಿನಾದ್ಯಂತ ಹವಾಮಾನ ಬದಲಾವಣೆಯಿಂದಾಗಿ, ಪ್ರವಾಹ ಅಥವಾ ಬರಗಾಲದಂತಹ ಅತಿರೇಕದ ಹವಾಮಾನ ಬದಲಾವಣೆಗಳು ಉಂಟಾಗುತ್ತಿವೆ. ನೀರ್ಗಲ್ಲುಗಳು ಕರಗುತ್ತಿದ್ದು, ಸಮುದ್ರಮಟ್ಟವು ದಿನದಿಂದ ದಿನಕ್ಕೆ ಏರುತ್ತಿದೆ ಎಂದವರು ಹೇಳಿದ್ದಾರೆ.

ಜಾಗತಿಕ ತಾಪಮಾನ ಬದಲಾವಣೆಗೆ ಪ್ರಮುಖ ಚಾಲಕಶಕ್ತಿಗಳಾದ ತೈಲ, ಅನಿಲ ಹಾಗೂ ಕಲ್ಲಿದ್ದಲುಗಳ ಜಾಹೀರಾತುಗಳಿಗೆ ನಿಷೇಧ ವಿಧಿಸುವಂತೆ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆ್ಯಂಟೊನಿಯೊ ಗುಟೆರಸ್ ಕರೆ ನಡಿದ್ದಾರೆ.

ಹವಾಮಾನ ಬದಲಾವಣೆಯ ವಿಷಯಕ್ಕೆ ಬರುವುದಾದರೆ, ನಾವು ಡೈನೋಸರ್‌ಗಳಲ್ಲ. ನಾವು ಉಲ್ಕಾಶಿಲೆಗಳು. ನಾವು ಅಪಾಯದಲ್ಲಿದ್ದೇವೆ ಮಾತ್ರವಲ್ಲ, ನಾವು ಕೂಡಾ ಅಪಾಯಕಾರಿಗಳು ಎಂದು ಗುಟೆರಸ್ ಹೇಳಿದ್ದಾರೆ.

ಹವಾಮಾನ ಅರಾಜಕತೆಯ ‘ಗಾಡ್‌ಫಾದರ್’ಗಳಾದ ಪಳೆಯುಳಿಕೆ ಇಂಧನ ಕೈಗಾರಿಕೆಯು ದಾಖಲೆಯ ಲಾಭಗಳನ್ನು ಮಾಡಿಕೊಳ್ಳುತ್ತವೆ ಹಾಗೂ ತೆರಿಗೆಪಾವತಿದಾರರ ಹಣದಿಂದ ಕೋಟ್ಯಂತರ ರೂ. ಸಬ್ಸಿಡಿಯನ್ನು ಪಡೆದುಕೊಂಡು ಸಂಭ್ರಮಿಸುತ್ತಿವೆ ಎಂದು ಗ್ಯುಟೆರಸ್ ಹೇಳಿದರು.

ಮಾನವನ ಆರೋಗ್ಯಕ್ಕೆ ಹಾನಿಕರವಾದ ತಂಬಾಕಿನಂತಹ ಇತರ ಉತ್ಪನ್ನಗಳಿಗೆ ಪಳೆಯುಳಿಕೆ ಇಂಧನವನ್ನು ಹೋಲಿಸಿದ ಅವರು ಅವುಗಳ ಜಾಹೀರಾತನ್ನು ನಿಷೇಧಿಸುವಂತೆ ಆಗ್ರಹಿಸಿದರು.

ಹವಾಮಾನ ಬದಲಾವಣೆಯ ನರಕದಿಂದ ನಾವು ನಿರ್ಗಮಿಸಬೇಕಾಗಿದೆ ಎಂದು ಹೇಳಿದ ಗುಟೆರಸ್ ಅವರು 2025ರ ಆರಂಭದೊಳಗೆ ಪ್ಯಾರಿಸ್ ಒಪ್ಪಂದಕ್ಕೆ ಸಹಿಹಾಕಿದವರು, ಇಂಗಾಲಾಮ್ಲ ಹೊರಸೂಸುವಿಕೆ ಮಿತಿಯ ಗುರಿಗಳನ್ನು 2025ರ ಆರಂಭದೊಳಗೆ ಪ್ರಕಟಿಸುವ ನಿರೀಕ್ಷೆಯಿದೆ ಎಂದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News