ಅಮೆರಿಕ ಅಧ್ಯಕ್ಷೀಯ ಚುನಾವಣೆ: ಟ್ರಂಪ್- ಹ್ಯಾರಿಸ್ ಕದನಕ್ಕೆ ವೇದಿಕೆ ಸಜ್ಜು
ವಾಷಿಂಗ್ಟನ್: ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಕೇವಲ ನಾಲ್ಕು ತಿಂಗಳು ಇರುವಂತೆಯೇ ಅಧ್ಯಕ್ಷ ಜೋ ಬೈಡನ್ ಅವರು ಸ್ಪರ್ಧೆಯಿಂದ ಹಿಂದೆ ಸರಿಯುವುದಾಗಿ ಘೋಷಿಸಿದ್ದಾರೆ. ಇದರೊಂದಿಗೆ 81 ವರ್ಷ ವಯಸ್ಸಿನ ಬೈಡನ್ ಅವರ ಅರ್ಧ ಶತಮಾನದ ರಾಜಕೀಯ ವೃತ್ತಿ ಕೊನೆಗೊಳ್ಳುವುದು ನಿಶ್ಚಿತ ಎಂಬ ತೀರ್ಮಾನಕ್ಕೆ ರಾಜಕೀಯ ವಿಶ್ಲೇಕರು ಬಂದಿದ್ದಾರೆ.
ಇದರೊಂದಿಗೆ ಕಮಲಾ ಹ್ಯಾರಿಸ್ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯುವುದು ಖಚಿತವಾಗಿದೆ. ಕಮಲಾ ಹ್ಯಾರಿಸ್ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸುತ್ತಿರುವ ಮೊಟ್ಟಮೊದಲ ಭಾರತೀಯ ಮೂಲದ ಮಹಿಳೆಯಾಗಿದ್ದಾರೆ. ಮುಂದಿನ ದಿನಗಳಲ್ಲಿ ಪಕ್ಷದ 300 ಪ್ರತಿನಿಧಿಗಳು ಕಮಲಾ ಹ್ಯಾರಿಸ್ ಆಯ್ಕೆಯನ್ನು ಅಧಿಕೃತವಾಗಿ ಘೋಷಿಸುವ ಸಾಧ್ಯತೆ ಇದೆ.
ಹ್ಯಾರಿಸ್ ಅವರ ಉಮೇದುವಾರಿಕೆಯನ್ನು ಮಾಜಿ ಸ್ಪೀಕರ್ ನ್ಯಾನ್ಸಿ ಪೆಲೋಸಿ ಹಾಗೂ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಸೇರಿದಂತೆ ಬೈಡನ್ ಅವರನ್ನು ಹೊರ ಕಳುಹಿಸಲು ತೆರೆಮರೆಯಲ್ಲಿ ಕೆಲಸ ಮಾಡಿದ ಹಿರಿಯ ಮುಖಂಡರು ಬೆಂಬಲಿಸಲಿದ್ದಾರೆ ಎಂದು ತಿಳಿದು ಬಂದಿದೆ.
ಇದು ಟ್ರಂಪ್ ಮತ್ತು ಹ್ಯಾರಿಸ್ ನಡುವಿನ ಕದನಕ್ಕೆ ವೇದಿಕೆ ಸಜ್ಜುಗೊಳಿಸಲಿದೆ. ಮಾಜಿ ಅಧ್ಯಕ್ಷ ಟ್ರಂಪ್ ಮಹಿಳೆಯರ ಬಗ್ಗೆ ಅದರಲ್ಲೂ ಪ್ರಮುಖವಾಗಿ ಅಲ್ಪಸಂಖ್ಯಾತ ಮಹಿಳೆಯರ ಬಗ್ಗೆ ಸಿಡುಕಿನ ಮನೋಭಾವ ಹೊಂದಿರುವ ಹಿನ್ನೆಲೆಯಲ್ಲಿ ಈ ಸ್ಪರ್ಧೆ ಹೆಚ್ಚಿನ ಕುತೂಹಲ ಮೂಡಿಸಿದೆ.
ಹ್ಯಾರಿಸ್ ಕಣಕ್ಕಿಳಿಯುವ ಮುನ್ಸೂಚನೆಯನ್ನು ಅರಿತಿರುವ ಟ್ರಂಪ್ ಈಗಾಗಲೇ ಅವರ ವಿರುದ್ಧ ವಾಗ್ದಾಳಿ ಆರಂಭಿಸಿದ್ದಾರೆ. ಶನಿವಾರ ಮಿಚಿಗನ್ ನಲ್ಲಿ ನಡೆದ ರ್‍ಯಾಲಿಯಲ್ಲಿ ಟ್ರಂಪ್, ಹ್ಯಾರಿಸ್ ಅವರ ಹಸನ್ಮುಖದ ಬಗ್ಗೆ 'ಲಾಫಿನ್ ಕಮಲಾ' ಎಂದು ಉಲ್ಲೇಖಿಸಿ, ಕ್ರೇಝಿ ಮಹಿಳೆ ಎಂದು ಹೇಳಿದ್ದರು.