ಇರಾನ್ ಜತೆಗೆ ವ್ಯಾಪಾರ ಒಪ್ಪಂದ ಮಾಡಿಕೊಂಡರೆ ನಿರ್ಬಂಧ: ಪಾಕಿಸ್ತಾನಕ್ಕೆ ಅಮೆರಿಕ ಎಚ್ಚರಿಕೆ
ವಾಷಿಂಗ್ಟನ್: ಇರಾನ್ ಜತೆಗೆ ವ್ಯಾಪಾರ ಒಪ್ಪಂದ ಮಾಡಿಕೊಳ್ಳಲು ಮುಂದಾಗುವವರು ಅಮೆರಿಕದಿಂದ ನಿರ್ಬಂಧಗಳ ಸಂಭಾವ್ಯ ಅಪಾಯದ ಬಗ್ಗೆ ತಿಳಿದಿರಬೇಕು ಎಂದು ಅಮೆರಿಕ ಹೇಳಿದೆ.
ಸರಳವಾಗಿ ಹೇಳುವುದಾದರೆ, ಇರಾನ್ ಜತೆಗೆ ವ್ಯಾಪಾರ ಸಂಬಂಧದ ಬಗ್ಗೆ ಯೋಚಿಸುವವರು ಅಮೆರಿಕದ ಸಂಭಾವ್ಯ ನಿರ್ಬಂಧಗಳ ಅಪಾಯದ ಬಗ್ಗೆಯೂ ತಿಳಿದಿರಬೇಕು. ಪಾಕಿಸ್ತಾನದ ವಿಷಯದಲ್ಲಿ ಹೇಳುವುದಾದರೆ, ಅಂತಿಮವಾಗಿ ಪಾಕಿಸ್ತಾನ ಸರಕಾರವು ತನ್ನದೇ ಆದ ವಿದೇಶಾಂಗ ನೀತಿಯನ್ನು ಹೊಂದಿರಬಹುದು' ಎಂದು ಅಮೆರಿಕದ ವಿದೇಶಾಂಗ ಇಲಾಖೆಯ ಸಹಾಯಕ ವಕ್ತಾರ ವೇದಾಂತ್ ಪಟೇಲ್ ಹೇಳಿದ್ದಾರೆ. ಇರಾನ್ ಅಧ್ಯಕ್ಷರು ಇತ್ತೀಚೆಗೆ ಪಾಕಿಸ್ತಾನಕ್ಕೆ ನೀಡಿದ್ದ ಭೇಟಿಯ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಅವರು ಉತ್ತರಿಸುತ್ತಿದ್ದರು.
ಇರಾನ್ ಅಧ್ಯಕ್ಷರ ಭೇಟಿ ಸಂದರ್ಭ 8 ಎಂಒಯು(ಮೆಮೊರಾಂಡಾ ಆಫ್ ಅಂಡರ್‍ಸ್ಟ್ಯಾಂಡಿಂಗ್)ಗೆ ಸಹಿ ಹಾಕಲಾಗಿದೆ ಮತ್ತು ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ವ್ಯಾಪಾರವನ್ನು 10 ಶತಕೋಟಿ ಡಾಲರ್ ಗೆ ಹೆಚ್ಚಿಸಲು ಸಮ್ಮತಿಸಲಾಗಿದೆ.
ಈ ವಾರದ ಆರಂಭದಲ್ಲಿ ಚೀನಾದ ಮೂರು ಸಂಸ್ಥೆಗಳು ಸೇರಿದಂತೆ, ಪಾಕಿಸ್ತಾನದ ಬ್ಯಾಲಿಸ್ಟಿಕ್ ಕ್ಷಿಪಣಿ ಕಾರ್ಯಕ್ರಮಕ್ಕೆ ಸರಬರಾಜುದಾರರ ಮೇಲೆ ಅಮೆರಿಕ ನಿರ್ಬಂಧ ಜಾರಿಗೊಳಿಸಿದೆ.
ಈ ಸಂಸ್ಥೆಗಳು ಸಾಮೂಹಿಕ ವಿನಾಶದ ಶಸ್ತ್ರಾಸ್ತ್ರಗಳ ಪ್ರಸರಣ ಮತ್ತು ಅವುಗಳ ವಿತರಣಾ ಸಾಧನಗಳಾಗಿರುವುದರಿಂದ ನಿರ್ಬಂಧ ಜಾರಿಗೊಳಿಸಲಾಗಿದೆ. ಚೀನಾ, ಬೆಲಾರುಸ್ ಮೂಲದ ಈ ಸಂಸ್ಥೆಗಳು ಪಾಕಿಸ್ತಾನದ ಬ್ಯಾಲಿಸ್ಟಿಕ್ ಕ್ಷಿಪಣಿ ಕಾರ್ಯಕ್ರಮಕ್ಕೆ ಸಾಧನಗಳು ಹಾಗೂ ಇತರ ವಸ್ತುಗಳನ್ನು ಸರಬರಾಜು ಮಾಡುತ್ತಿದ್ದವು ಎಂದು ಅಮೆರಿಕ ಹೇಳಿದೆ.
ಮತ್ತೊಂದು ಪ್ರತ್ಯೇಕ ಸುದ್ಧಿಗೋಷ್ಟಿಯಲ್ಲಿ ಮಾತನಾಡಿದ ಪೆಂಟಗಾನ್‍ನ ಪತ್ರಿಕಾ ಕಾರ್ಯದರ್ಶಿ ಪ್ಯಾಟ್ ರೈಡರ್ `ಪಾಕಿಸ್ತಾನವು ವಲಯದ ಪ್ರಮುಖ ಭದ್ರತಾ ಪಾಲುದಾರರಾಗಿದ್ದು ಅದರೊಂದಿಗೆ ಅಮೆರಿಕ ಉತ್ತಮ ಸಂಬಂಧವನ್ನು ಹೊಂದಿದೆ' ಎಂದಿದ್ದಾರೆ.