ಸೌದಿ ಅರೇಬಿಯ ಮತ್ತು ಇಸ್ರೇಲ್ ನಡುವಿನ ಸಂಬಂಧವನ್ನು ಸಹಜಗೊಳಿಸುವಲ್ಲಿ ಏನಾಗುತ್ತಿದೆ?

Update: 2023-09-21 18:26 GMT

Mohammed bin Salman , Benjamin Netanyahu | Photo: PTI

ಹೊಸದಿಲ್ಲಿ : ಸೌದಿ ಅರೇಬಿಯ ಮತ್ತು ಇಸ್ರೇಲ್ ಕಳೆದ ಹಲವಾರು ತಿಂಗಳುಗಳಿಂದಲೂ ತಮ್ಮ ನಡುವಿನ ಸಂಬಂಧಗಳನ್ನು ಸಹಜ ಸ್ಥಿತಿಗೆ ಮರಳಿಸಲು ಒಪ್ಪಂದವೊಂದರ ಕುರಿತು ಅಮೆರಿಕದೊಂದಿಗೆ ಚರ್ಚಿಸುತ್ತಿವೆ ಎಂದು aljazeera.com ವರದಿ ಮಾಡಿದೆ.

ಮಧ್ಯಪ್ರಾಚ್ಯದಲ್ಲಿಯ ತನ್ನ ಎರಡು ಮಿತ್ರದೇಶಗಳ ನಡುವೆ ಅಧಿಕೃತ ಸಂಬಂಧವು ತನ್ನ ಉನ್ನತ ಆದ್ಯತೆಯಾಗಿದೆ ಎಂದು ಅಮೆರಿಕವು ಸ್ಪಷ್ಟಪಡಿಸಿದ್ದು, ಹಿರಿಯ ರಾಜತಾಂತ್ರಿಕ ಆ್ಯಂಟನಿ ಬ್ಲಿಂಕೆನ್ ಅವರು ಅದನ್ನು ‘ರಾಷ್ಟ್ರೀಯ ಭದ್ರತಾ ಹಿತಾಸಕ್ತಿ ’ಎಂದು ಘೋಷಿಸಿದ್ದಾರೆ.

ವರ್ಷಗಳ ಹಗೆತನದ ಬಳಿಕ ಸೌದಿ ಅರೇಬಿಯ ಮತ್ತು ಇರಾನ್ ರಾಜತಾಂತ್ರಿಕ ಸಂಬಂಧಗಳನ್ನು ಮರುಸ್ಥಾಪಿಸಿದ ಬಳಿಕ ಪ್ರಾದೇಶಿಕ ಮರು ಹೊಂದಾಣಿಕೆಯ ನಡುವೆಯೇ ಈ ಬೆಳವಣಿಗೆ ನಡೆದಿದೆ.

ಬುಧವಾರ ಅಮೆರಿಕದ ಸುದ್ದಿವಾಹಿನಿ ಫಾಕ್ಸ್ ನ್ಯೂಸ್ ಜೊತೆಗೆ ಮಾತನಾಡಿದ ಸೌದಿ ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್ ಅವರು ‘ಇಸ್ರೇಲ್ನೊಂದಿಗೆ ಸಂಬಂಧವನ್ನು ಸಹಜಗೊಳಿಸಲು ಒಪ್ಪಂದಕ್ಕೆ ನಾವು ಪ್ರತಿದಿನವೂ ಇನ್ನಷ್ಟು ಹತ್ತಿರವಾಗುತ್ತಿದ್ದೇವೆ ’ ಎಂದು ತಿಳಿಸಿದರು.

ಸಂಬಂಧವನ್ನು ಸಾಮಾನ್ಯ ಸ್ಥಿತಿಗೆ ಮರಳಿಸಲು ಸೌದಿ ಷರತ್ತುಗಳೇನು?

ತನಗೆ ಅಮೆರಿಕದ ಶಸ್ತ್ರಾಸ್ತ್ರಗಳ ಮಾರಾಟದ ಮೇಲೆ ಕೆಲವೇ ನಿರ್ಬಂಧಗಳು ಮತ್ತು ತನ್ನದೇ ಆದ ನಾಗರಿಕ ಪರಮಾಣು ಕಾರ್ಯಕ್ರಮವನ್ನು ಅಭಿವೃದ್ಧಿಗೊಳಿಸಲು ನೆರವು ಸೇರಿದಂತೆ ಅಮೆರಿಕದಿಂದ ರಕ್ಷಣಾ ಒಪ್ಪಂದವೊಂದನ್ನು ಸೌದಿ ಅರೇಬಿಯ ಬಯಸಿದೆ.

ಯಾವುದೇ ಒಪ್ಪಂದಕ್ಕೆ ಫೆಲೆಸ್ತೀನ್ ದೇಶವನ್ನು ಸೃಷ್ಟಿಸುವ ನಿಟ್ಟಿನಲ್ಲಿ ಪ್ರಮುಖ ಪ್ರಗತಿಯು ಅಗತ್ಯವಾಗಿದೆ ಎಂದೂ ಹೇಳಲಾಗಿದ್ದು, ಇದನ್ನು ಇಸ್ರೇಲ್ ಇತಿಹಾಸಲ್ಲಿಯೇ ಅತ್ಯಂತ ಧಾರ್ಮಿಕ ಮತ್ತು ತೀವ್ರ ಬಲಪಂಥೀಯ ರಾಷ್ಟ್ರವಾದಿಯಾಗಿರುವ ಹಾಲಿ ಸರಕಾರವು ಒಪ್ಪಿಕೊಳ್ಳುವುದು ಕಷ್ಟ.

ಉಪಕ್ರಮವು ಫೆಲೆಸ್ತೀನ್ ದೇಶದ ಸ್ಥಾಪನೆ ಮತ್ತು ಮಿಲಿಯಗಟ್ಟಲೆ ಫೆಲೆಸ್ತೀನಿ ನಿರಾಶ್ರಿತರು ಮತ್ತು ಅವರ ಕುಟುಂಬಗಳ ಸಂಕಷ್ಟಗಳಿಗೆ ‘ನ್ಯಾಯಯುತ ಪರಿಹಾರ’ವನ್ನು ಕಂಡುಕೊಳ್ಳುವುದನ್ನು ಒಳಗೊಂಡಿದೆ. ಈ ಪೈಕಿ ಹೆಚ್ಚಿನವರು ನೆರೆಯ ದೇಶಗಳಲ್ಲಿಯ ಪರಿಹಾರ ಶಿಬಿರಗಳಲ್ಲಿ ವಾಸಿಸುತ್ತಿದ್ದಾರೆ.

ಇಸ್ರೇಲ್ ಹೇಳಿದ್ದೇನು?

ಒಪ್ಪಂದವು ಶೀಘ್ರವೇ ಅಂತಿಮಗೊಳ್ಳುತ್ತದೆ ಎಂದು ತಾನು ನಿರೀಕ್ಷಿಸಿರುವುದಾಗಿ ಇಸ್ರೇಲ್ ವಿದೇಶಾಂಗ ಸಚಿವ ಎಲಿ ಕೊಹೆನ್ ಅವರು ಗುರುವಾರ ಹೇಳುವ ಮೂಲಕ ಆಶಾವಾದವನ್ನು ಮೂಡಿಸಿದ್ದಾರೆ.

ಇಸ್ರೇಲ್ ನ ಆರ್ಮಿ ರೇಡಿಯೊ ಜೊತೆ ಮಾತನಾಡಿದ ಅವರು, ‘ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಳ್ಳಬಹುದು. 2024ರ ಮೊದಲ ತ್ರೈಮಾಸಿಕದಲ್ಲಿ, ಈಗಿನಿಂದ ನಾಲ್ಕೈದು ತಿಂಗಳುಗಳಲ್ಲಿ ಒಪ್ಪಂದದ ವಿವರಗಳ ಅಂತಿಮಗೊಳಿಸುವ ಹಂತದಲ್ಲಿ ನಾವು ಇರುವ ಸಾಧ್ಯತೆಯಿದೆ ಎಂದು ನಾನು ಭಾವಿಸಿದ್ದೇನೆ ’ ಎಂದು ಹೇಳಿದರು.

ಪರಮಾಣು ಕಾರ್ಯಕ್ರಮವನ್ನು ಅಭಿವೃದ್ಧಿಗೊಳಿಸುವ ಸೌದಿ ಅರೇಬಿಯದ ಬಯಕೆಯು ಒಂದು ತೊಡಕಾಗುವಂತೆ ಕಂಡು ಬರುತ್ತಿಲ್ಲ. ಡಝನ್ ಗಟ್ಟಲೆ ದೇಶಗಳು ವಿದ್ಯುತ್ ಉತ್ಪಾದನೆಯಂತಹ ನಾಗರಿಕ ಉದ್ದೇಶಗಳೊಂದಿಗೆ ಪರಮಾಣು ಕಾರ್ಯಕ್ರಮಗಳನ್ನು ಹೊಂದಿವೆ. ಇದು ಅವುಗಳಿಗೆ ಅಥವಾ ಅವುಗಳ ನೆರೆದೇಶಗಳಿಗೆ ಅಪಾಯವನ್ನುಂಟು ಮಾಡುವ ವಿಷಯವೇನಲ್ಲ ಎಂದು ಇಸ್ರೇಲ್ ನ ರಾಷ್ಟ್ರೀಯ ಭದ್ರತಾ ಸಲಹೆಗಾರ ತ್ಸಾಚಿ ಹನೆಗ್ಬಿ ಅವರು ಜುಲೈನಲ್ಲಿ ಹೇಳಿದ್ದರು.

ಆದಾಗ್ಯೂ ರಾಷ್ಟ್ರೀಯ ಭದ್ರತಾ ಸಚಿವ ಇಟಮಾರ್ ಬೆನ್-ಗಿವಿರ್ ಸೇರಿದಂತೆ ನೆತಾನ್ಯಹು ಸರಕಾರವು ಸಂಬಂಧವನ್ನು ಸಹಜಗೊಳಿಸುವ ಪ್ರಕ್ರಿಯೆಯ ಭಾಗವಾಗಿ ಆಕ್ರಮಿತ ಪಶ್ಚಿಮ ದಂಡೆಯಲ್ಲಿ ವಸಾಹತು ಸ್ತಂಭನ ಒಳಗೊಂಡಂತೆ ಫೆಲೆಸ್ತೀನ್ ಪ್ರಾಧಿಕಾರ ಸರಕಾರಕ್ಕೆ ರಿಯಾಯಿತಿಗಳನ್ನು ತಿರಸ್ಕರಿಸಿದೆ.

ಫೆಲೆಸ್ತೀನ್ ಪ್ರಾಧಿಕಾರದ ಪ್ರತಿಕ್ರಿಯೆ ಏನು? ಫೆಲೆಸ್ತೀನ್ ಪ್ರಾಧಿಕಾರದ ಮನವೊಲಿಸುವ ಪ್ರಯತ್ನವಾಗಿ ಸೌದಿ ಅರೇಬಿಯ ಅದಕ್ಕೆ 2021ರಲ್ಲಿ ಶೂನ್ಯಕ್ಕಿಳಿಸಿದ್ದ ಹಣಕಾಸು ಬೆಂಬಲವನ್ನು ಪುನರಾರಂಭಿಸುವ ಕೊಡುಗೆಯನ್ನು ಮುಂದಿರಿಸಿದೆ.

ವಾಲ್ ಸ್ಟ್ರೀಟ್ ಜರ್ನಲ್ ವರದಿಯಂತೆ ಸೌದಿ ಅರೇಬಿಯ ಇಸ್ರೇಲ್ ನೊಂದಿಗೆ ತನ್ನ ಸಂಬಂಧವನ್ನು ಸಹಜ ಸ್ಥಿತಿಗೆ ಮರಳಿಸುವುದಕ್ಕೆ ಒಪ್ಪಿಗೆಗೆ ವಿನಿಮಯವಾಗಿ ತನ್ನದೇ ಆದ ಷರತ್ತುಗಳಿಗಾಗಿ ಒತ್ತಾಯಿಸಲು ಫೆಲೆಸ್ತೀನ್ ಪ್ರಾಧಿಕಾರದ ಅಧಿಕಾರಿಗಳ ನಿಯೋಗವೊಂದು ಕಳೆದ ತಿಂಗಳು ರಿಯಾದ್ ಗೆ ತೆರಳಿತ್ತು.

ಆಕ್ರಮಿತ ಪೂರ್ವ ಜೆರುಸಲೇಂ ನಲ್ಲಿ ಅಮೆರಿಕ ದೂತಾವಾಸವನ್ನು ಪುನರಾರಂಭಿಸುವುದು ಈ ಷರತ್ತುಗಳಲ್ಲಿ ಸೇರಿವೆ. ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು 2019ರಲ್ಲಿ ಈ ದೂತಾವಾಸವನ್ನು ಮುಚ್ಚಿದ್ದರು. ವಿಶ್ವಸಂಸ್ಥೆಯಲ್ಲಿ ಪೂರ್ಣ ಫೆಲೆಸ್ತೀನ್ ಪ್ರಾತಿನಿಧ್ಯವನ್ನು ಬೆಂಬಲಿಸುವಂತೆಯೂ ಅಮೆರಿಕವನ್ನು ಫೆಲೆಸ್ತೀನ್ ಪ್ರಾಧಿಕಾರವು ಕೋರಿದೆ.

ಇಸ್ರೇಲ್ ಆಕ್ರಮಿತ ಪಶ್ಚಿಮ ದಂಡೆಯ ಕೆಲವು ಭಾಗಗಳಲ್ಲಿ ಫೆಲೆಸ್ತೀನ್ ಪ್ರಾಧಿಕಾರಕ್ಕೆ ಹೆಚ್ಚಿನ ನಿಯಂತ್ರಣವನ್ನು ನೀಡಬೇಕು ಮತ್ತು ಅಕ್ರಮ ಇಸ್ರೇಲಿ ಹೊರಠಾಣೆಗಳನ್ನು ತೊಲಗಿಸಬೇಕು, ಇವು ಇತರ ಷರತ್ತುಗಳಲ್ಲಿ ಸೇರಿವೆ.

2020ರಲ್ಲಿ ಇಸ್ರೇಲ್ ನೊಂದಿಗೆ ತಮ್ಮ ಸಂಬಂಧಗಳು ಸಹಜಸ್ಥಿತಿಗೆ ಮರಳಿರುವುದಾಗಿ ಬಹರೈನ್ ಮತ್ತು ಯುಎಇ ಪ್ರಕಟಿಸಿದ ಸಂದರ್ಭದಲ್ಲಿಯ ಫೆಲೆಸ್ತೀನ್ ಪ್ರಾಧಿಕಾರದ ಪ್ರತಿಕ್ರಿಯೆಗಿಂತ ಈಗಿನ ಪ್ರತಿಕಿಯೆಯು ಭಿನ್ನವಾಗಿದೆ. ಕೊಲ್ಲಿ ದೇಶಗಳು ತನ್ನ ಬೆನ್ನಿಗೆ ಇರಿಯುತ್ತಿವೆ ಎಂದು ಅದು ಆಗ ಆರೋಪಿಸಿತ್ತು.

ಇರಾನ್ ಹೇಳಿರುವುದೇನು?

ಇಸ್ರೇಲ್ ನೊಂದಿಗೆ ಯಾವುದೇ ಒಪ್ಪಂದವನ್ನು ಮಾಡಿಕೊಳ್ಳುವುದರ ವಿರುದ್ಧ ಇರಾನ್ ಅಧ್ಯಕ್ಷ ಇಬ್ರಾಹೀಂ ರಯೀಸಿ ಸೌದಿ ಅರೇಬಿಯಕ್ಕೆ ಎಚ್ಚರಿಕೆ ನೀಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮತ್ತು ನ್ಯೂಯಾರ್ಕ್ ನಲ್ಲಿ ವಿಶ್ವಸಂಸ್ಥೆ ಮಹಾಧಿವೇಶನದ ನೇಪಥ್ಯದಲ್ಲಿಯೂ ರಯೀಸಿ, ಇಂತಹ ಒಪ್ಪಂದವು ಫೆಲೆಸ್ತೀನಿ ಜನರಿಗೆ ಮತ್ತು ಅವರ ಪ್ರತಿರೋಧಕ್ಕೆ ಬೆನ್ನಿಗೆ ವಂಚನೆಯಾಗಲಿದೆ ಎಂದು ಸುದ್ದಿಗಾರರಿಗೆ ತಿಳಿಸಿದರು.

ಪವಿತ್ರ ನಗರ ಜೆರುಸಲೇಂನ ವಿಮೋಚನೆಯು ಎಲ್ಲ ಮುಸ್ಲಿಮರ ನಂಬಿಕೆಯ ಮೂಲವಾಗಿದೆ. ಹೀಗಾಗಿ ಫೆಲೆಸ್ತೀನಿಯರ ಸಂಕಷ್ಟಗಳ ಹಿಂದಿನ ಪವಿತ್ರ ತತ್ತ್ವವನ್ನು ಇಸ್ಲಾಮಿಕ್ ದೇಶಗಳು ತೊರೆಯುವುದನ್ನು ಪ್ರಾದೇಶಿಕ ರಾಷ್ಟ್ರಗಳು ಯಾವುದೇ ಸಂದರ್ಭದಲ್ಲಿಯೂ ಒಪ್ಪುವುದಿಲ್ಲ ಎಂದು ಅವರು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News