ಮೂರು ಹಂತದ ಕದನ ವಿರಾಮಕ್ಕೆ ಹಮಾಸ್ ಪ್ರಸ್ತಾವನೆ
ಕೈರೋ: ಕದನ ವಿರಾಮ ಮತ್ತು ಒತ್ತೆಯಾಳು- ಕೈದಿಗಳ ವಿನಿಮಯಕ್ಕೆ ಸಂಬಂಧಿಸಿ ಮೂರು ಹಂತದ ಕದನ ವಿರಾಮಕ್ಕೆ ಸಮ್ಮತಿಸುವುದಾಗಿ ಹಮಾಸ್ ಹೇಳಿದೆ.
ಪ್ರಥಮ ಹಂತ: 42 ದಿನಗಳ ಯುದ್ಧವಿರಾಮ. ಹಮಾಸ್ 33 ಒತ್ತೆಯಾಳುಗಳನ್ನು ಬಿಡುಗಡೆ ಮಾಡುತ್ತದೆ, ಪ್ರತಿಯಾಗಿ ಇಸ್ರೇಲ್‍ನ ಜೈಲಿನಲ್ಲಿರುವ ಫೆಲಸ್ತೀನ್ ಕೈದಿಗಳನ್ನು ಬಿಡುಗಡೆ ಮಾಡಬೇಕು. ಇಸ್ರೇಲ್ ಗಾಝಾದಿಂದ ಸೈನ್ಯವನ್ನು ಭಾಗಶಃ ಹಿಂದಕ್ಕೆ ಪಡೆದುಕೊಳ್ಳಬೇಕು ಮತ್ತು ದಕ್ಷಿಣ ಗಾಝಾದಿಂದ ಉತ್ತರಕ್ಕೆ ಫೆಲೆಸ್ತೀನೀಯರ ಮುಕ್ತ ಚಲನವಲನಕ್ಕೆ ಅವಕಾಶ ಮಾಡಿಕೊಡಬೇಕು.
ಎರಡನೇ ಹಂತ: ಮತ್ತೆ 42 ದಿನದ ಕದನ ವಿರಾಮ. ಗಾಝಾದಲ್ಲಿ ಸುಸ್ಥಿರ ಶಾಂತತೆ'ಯನ್ನು ಮರುಸ್ಥಾಪಿಸುವ ಉದ್ದೇಶ.
ಗಾಝಾದಲ್ಲಿರುವ ಹೆಚ್ಚಿನ ಇಸ್ರೇಲ್ ಪಡೆಗಳನ್ನು ವಾಪಾಸು ಕರೆಸಿಕೊಳ್ಳುವುದು. ಹಮಾಸ್‍ನ ಒತ್ತೆಸೆರೆಯಲ್ಲಿರುವ ಇಸ್ರೇಲ್‍ನ ಕೆಲವು ಯೋಧರು ಹಾಗೂ ಮೀಸಲು ಯೋಧರ ಬಿಡುಗಡೆಗೆ ಪ್ರತಿಯಾಗಿ ಇಸ್ರೇಲ್ ಜೈಲಿನಲ್ಲಿರುವ ಫೆಲೆಸ್ತೀನೀಯರ ಬಿಡುಗಡೆ.
ಮೂರನೇ ಹಂತ: ಖತರ್, ಈಜಿಪ್ಟ್ ಮತ್ತು ವಿಶ್ವಸಂಸ್ಥೆಯ ಮೇಲ್ವಿಚಾರಣೆಯ ಯೋಜನೆಯ ಪ್ರಕಾರ ಮೃತದೇಹಗಳನ್ನು ವಿನಿಮಯ ಮಾಡಿಕೊಳ್ಳುವುದು ಹಾಗೂ ಪುನರ್ನಿರ್ಮಾಣದ ಅನುಷ್ಟಾನವನ್ನು ಆರಂಭಿಸುವುದು. ಗಾಝಾ ಪಟ್ಟಿಯ ಮೇಲಿನ ದಿಗ್ಬಂಧನವನ್ನು ಸಂಪೂರ್ಣವಾಗಿ ಅಂತ್ಯಗೊಳಿಸುವುದು.
ಕೈರೋದಲ್ಲಿ ನಡೆದ ಸಂಧಾನ ಮಾತುಕತೆಯಲ್ಲಿ ಖತರ್ ಮತ್ತು ಈಜಿಪ್ಟ್ ಜತೆಗೆ ಸಂಧಾನಕಾರನಾಗಿ ಪಾಲ್ಗೊಂಡಿದ್ದ ಅಮೆರಿಕ, ಹಮಾಸ್‍ನ ಪ್ರಸ್ತಾವನೆಯನ್ನು ಅಧ್ಯಯನ ಮಾಡಿದ ಬಳಿಕ ಈ ಬಗ್ಗೆ ಮಧ್ಯಪ್ರಾಚ್ಯದ ಮಿತ್ರದೇಶಗಳ ಜತೆ ಚರ್ಚಿಸುವುದಾಗಿ ಹೇಳಿದೆ. ಆದರೆ ಹಮಾಸ್‍ನ ಪ್ರಸ್ತಾವನೆಯನ್ನು ತಿರಸ್ಕರಿಸುವುದಾಗಿ ಇಸ್ರೇಲ್ ಘೋಷಿಸಿದೆ. ಈಜಿಪ್ಟ್ ಈ ಹಿಂದೆ ಪ್ರಸ್ತಾವಿಸಿದ ಅಂಶವನ್ನೇ ಹಮಾಸ್ ಮತ್ತೊಂದು ರೀತಿಯಲ್ಲಿ ಪ್ರಸ್ತಾವಿಸಿದೆ. ಇಸ್ರೇಲ್ ಕದನವಿರಾಮಕ್ಕೆ ಒಪ್ಪುತ್ತಿಲ್ಲ ಎಂಬ ಭಾವನೆ ಮೂಡಿಸುವ ಕುತಂತ್ರ ಇದರ ಹಿಂದೆ ಅಡಗಿದೆ ಎಂದು ಇಸ್ರೇಲ್ ಖಂಡಿಸಿದೆ.