ಜಪಾನ್ | ವಿಶ್ವದ ದೀರ್ಘಾವಧಿಯ ಮರಣದಂಡನೆ ಶಿಕ್ಷೆ ಖುಲಾಸೆ

Update: 2024-09-26 15:03 GMT

ಸಾಂದರ್ಭಿಕ ಚಿತ್ರ | ANI

ಟೋಕಿಯೊ : ವಿಶ್ವದ ಅತ್ಯಂತ ದೀರ್ಘಾವಧಿಯ ಮರಣದಂಡನೆ ಕೈದಿಯನ್ನು ಜಪಾನ್‍ನ ನ್ಯಾಯಾಲಯ ಗುರುವಾರ ಖುಲಾಸೆಗೊಳಿಸಿದೆ.

ಕೊಲೆ ಪ್ರಕರಣದಲ್ಲಿ 1968ರಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾಗಿ ಜೈಲಿನಲ್ಲಿದ್ದ 88 ವರ್ಷದ ಇವಾವೊ ಹಕಮಡರನ್ನು ಶಿಝುವೋಕ ಜಿಲ್ಲಾ ನ್ಯಾಯಾಲಯ `ನಿರಪರಾಧಿ'ಯೆಂದು ಘೋಷಿಸಿ ಗುರುವಾರ ಖುಲಾಸೆಗೊಳಿಸಿದೆ. ಆರೋಗ್ಯ ತೀವ್ರ ಹದಗೆಟ್ಟಿರುವುದರಿಂದ ಮಾಜಿ ಬಾಕ್ಸರ್ ಹಕಮಡ ನ್ಯಾಯಾಲಯದಲ್ಲಿ ಹಾಜರಿರಲಿಲ್ಲ. ಆದರೆ 91 ವರ್ಷದ ಸಹೋದರಿ ಹಿಡೆಕೊ ನ್ಯಾಯಾಲಯದಲ್ಲಿ ಹಾಜರಿದ್ದು ನ್ಯಾಯಾಧೀಶರಿಗೆ ಕೃತಜ್ಞತೆ ಸಲ್ಲಿಸಿದರು ಎಂದು ವರದಿಯಾಗಿದೆ.

ತನ್ನ ಮೇಲಧಿಕಾರಿ, ಅವರ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಕೊಲೆ ಮಾಡಿದ ಪ್ರಕರಣದಲ್ಲಿ 1968ರಲ್ಲಿ ಹಕಮಡ ಮರಣದಂಡನೆ ಶಿಕ್ಷೆಗೆ ಗುರಿಯಾಗಿದ್ದರು. ಇದನ್ನು ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿಯನ್ನು 1980ರಲ್ಲಿ ಸುಪ್ರೀಂಕೋರ್ಟ್ ತಿರಸ್ಕರಿಸಿ ಶಿಕ್ಷೆಯನ್ನು ಎತ್ತಿಹಿಡಿದಿತ್ತು. ಆದರೆ ಪಟ್ಟು ಬಿಡದ ಹಕಮಡ ಬೆಂಬಲಿಗರು ಕಾನೂನು ಹೋರಾಟ ಮುಂದುವರಿಸಿದ್ದರು. ಪ್ರಾಸಿಕ್ಯೂಟರ್‍ಗಳು ಪುರಾವೆಗಳನ್ನು ಸೃಷ್ಟಿಸಿರಬಹುದು ಎಂಬ ಆಧಾರದಲ್ಲಿ 2014ರಲ್ಲಿ ವಿಚಾರಣಾ ನ್ಯಾಯಾಲಯವೊಂದು ಹಕಮಡರನ್ನು ಜೈಲಿನಿಂದ ಬಿಡುಗಡೆಗೊಳಿಸಿ ಪ್ರಕರಣದ ಮರುತನಿಖೆಗೆ ಆದೇಶಿಸಿದಾಗ ಪ್ರಕರಣ ಹೊಸ ತಿರುವು ಪಡೆದುಕೊಂಡಿತ್ತು. ಆದರೆ ಮತ್ತೆ ಕಾನೂನು ಜಂಜಾಟ ಮುಂದುವರಿದು ಕಳೆದ ವರ್ಷ ಮರುವಿಚಾರಣೆ ಆರಂಭಗೊಂಡಿತ್ತು.

ಹೀಗೆ 2014ರಲ್ಲಿ ಬಿಡುಗಡೆಗೊಳ್ಳುವ ತನಕ 46 ವರ್ಷ ಜೈಲುಶಿಕ್ಷೆ ಅನುಭವಿಸಿದ್ದ ಹಕಮಡರನ್ನು ಕೊನೆಗೂ ಖುಲಾಸೆಗೊಳಿಸಿ ನ್ಯಾಯಾಲಯ ತೀರ್ಪು ನೀಡಿದೆ. `ಕೊಲೆಗಾರ ಎಂಬ ಹಣೆಪಟ್ಟಿಯಿಂದ ಕಡೆಗೂ ಪಾರಾಗಿರುವುದು ಸಮಾಧಾನ ತಂದಿದೆ' ಎಂದು ಹಕಮಡ ಪ್ರತಿಕ್ರಿಯಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Mushaveer

contributor

Byline - ವಾರ್ತಾಭಾರತಿ

contributor

Similar News