ಮಾರಣಾಂತಿಕ ಹೊಡೆತ ಬೀಳಲಿದೆ, ಕಾಯುತ್ತಿರಿ : ಇಸ್ರೇಲ್ ಗೆ ಇರಾನ್ ನ ಪ್ರತೀಕಾರದ ಎಚ್ಚರಿಕೆ
ಟೆಹ್ರಾನ್: ನಾವು ಕೊನೆಯವರೆಗೂ ಇಸ್ರೇಲ್ ವಿರುದ್ಧ ಹೋರಾಡಲಿದ್ದೇವೆ ಮತ್ತು ನಮ್ಮ ಸೇಡು ತೀರಿಸಿಕೊಳ್ಳಲಿದ್ದೇವೆ ಎಂದು ಇರಾನ್ ನ ಇಸ್ಲಾಮಿಕ್ ರೆವೊಲ್ಯುಷನರಿ ಗಾರ್ಡ್ ಕಾಪ್ರ್ಸ್(ಐಆರ್‍ಜಿಸಿ) ಮುಖ್ಯಸ್ಥ ಹುಸೇನ್ ಸಲಾಮಿ ಹೇಳಿದ್ದಾರೆ.
ʼನಾವು ಸೇಡು ತೀರಿಸಿಕೊಳ್ಳುತ್ತೇವೆ. ನೀವು ಮಾರಣಾಂತಿಕ ಹೊಡೆತಗಳನ್ನು ಪಡೆಯುತ್ತೀರಿ.. ಕಾಯುತ್ತಾ ಇರಿ' ಎಂದವರು ಇಸ್ರೇಲ್ ಗೆ ಎಚ್ಚರಿಕೆ ನೀಡಿರುವುದಾಗಿ ಸರಕಾರಿ ಸ್ವಾಮ್ಯದ ಮಾಧ್ಯಮ ವರದಿ ಮಾಡಿದೆ. ` ಜಗತ್ತಿನ ಅತ್ಯಾಧುನಿಕ ಸೇನೆಗಳು ಯೆಹೂದಿ ಆಡಳಿತದ ನೆರವಿಗೆ ಆಗಮಿಸಿದೆ. ಇಲ್ಲಿ ರಚನೆಯಾಗಿರುವ ಜಾಗತಿಕ ಶಕ್ತಿಗಳ ವೇದಿಕೆಯು ಅವರ ಇಚ್ಚೆಗೆ ಅಧೀನವಾಗಿರುವಂತೆ ನಮ್ಮನ್ನು ಒತ್ತಾಯಿಸುತ್ತಿದೆ. ಮುಸ್ಲಿಮರ ಮೇಲೆ ನಿಯಂತ್ರಣ ಸಾಧಿಸಿ, ಅವರ ಭೂಮಿಗಳನ್ನು ಆಕ್ರಮಿಸಿ ಮತ್ತು ಅವರ ಧಾರ್ಮಿಕ ಗುರುತನ್ನು ಕಸಿದುಕೊಳ್ಳುವುದು ಈ ವೇದಿಕೆಯ ಉದ್ದೇಶವಾಗಿದೆ. ಅಮೆರಿಕ ಬೆಂಬಲಿತ ಶಾ ಆಡಳಿತವನ್ನು 1979ರಲ್ಲಿ ಕ್ರಾಂತಿಯು ಪದಚ್ಯುತಗೊಳಿಸಿದಂದಿನಿಂದ ಇಸ್ಲಾಮಿಕ್ ರಿಪಬ್ಲಿಕ್(ಇರಾನ್) ಯಾವತ್ತೂ ಇಸ್ರೇಲ್ ಗೆ ಮಾನ್ಯತೆ ನೀಡಿಲ್ಲ ಮತ್ತು ಫೆಲೆಸ್ತೀನ್ ಗೆ ಬೆಂಬಲವನ್ನು ತನ್ನ ವಿದೇಶಾಂಗ ನೀತಿಯ ಆಧಾರವಾಗಿಸಿಕೊಂಡಿದೆ' ಎಂದು ಹುಸೇನ್ ಸಲಾಮಿ ಹೇಳಿದ್ದಾರೆ.
`ನೀವು ಮನೆಗಳನ್ನು ನಾಶಗೊಳಿಸಬಹುದು, ನಗರಗಳು, ಗ್ರಾಮಗಳನ್ನು ಧ್ವಂಸ ಮಾಡಬಹುದು ಮತ್ತು ತುಳಿತಕ್ಕೊಳಗಾದ ಮುಸಲ್ಮಾನರನ್ನು ಅವಶೇಷಗಳಡಿ ಹೂತು ಹಾಕಬಹುದು. ಆದರೆ , ನೀವು ಮುತ್ತಿಗೆ ಹಾಕಿದ ಮತ್ತು ರಕ್ಷಣೆಯಿಲ್ಲದ ಗಾಝಾ ಪಟ್ಟಿಯಲ್ಲಿ 40,000 ಫೆಲೆಸ್ತೀನೀಯರನ್ನು ಹತ್ಯೆ ಮಾಡಿದರೆ ಇನ್ನೂ 1 ಲಕ್ಷ ಫೆಲೆಸ್ತೀನಿಯನ್ ಮಕ್ಕಳು ಜನಿಸುತ್ತಾರೆ ಎಂಬುದು ನೆನಪಿರಲಿ' ಎಂದು ಸಲಾಮಿ ಹೇಳಿರುವುದಾಗಿ ವರದಿಯಾಗಿದೆ.