ದಡ್ಡ ಮಗನಿಗೆ ದೊಡ್ಡ ಜವಾಬ್ದಾರಿ

ಸೋಮಣ್ಣ, ಯತ್ನಾಳ್ ವಿಜಯೇಂದ್ರರ ಪಟ್ಟಾಭಿಷೇಕಕ್ಕೆ ವಿರೋಧ ದಾಖಲಿಸಿದ್ದಾರೆ. ಎಲ್ಲಕ್ಕೂ ಮಿಗಿಲಾಗಿ ಬಿಜೆಪಿಯಲ್ಲಿನ ಯಡಿಯೂರಪ್ಪನವರ ವಿರೋಧಿ ಬಣ ಷಡ್ಯಂತ್ರ ರೂಪಿಸದೆ ಇರಲಾರದು. ವಿಜಯೇಂದ್ರರ ಭವಿಷ್ಯ ಕಾಂಗ್ರೆಸ್ ಪಕ್ಷ ಮತ್ತು ಸರಕಾರದ ನಡೆಯನ್ನು ಅವಲಂಬಿಸಿದೆ. ಐದು ವರ್ಷಗಳ ಅವಧಿಯಲ್ಲಿ ಮೂರು ಜನ ಮುಖ್ಯಮಂತ್ರಿಗಳನ್ನು ತಂದರೆ; ಲಿಂಗಾಯತ ವಿರೋಧಿ ನೀತಿ ಅನುಸರಿಸಿದರೆ, ಒಳಜಗಳ-ಕಿತ್ತಾಟ ಮುಂದುವರಿಸಿದರೆ, ಭ್ರಷ್ಟಾಚಾರ, ಸ್ವಜನಪಕ್ಷಪಾತ ತಡೆಯದಿದ್ದರೆ, ಆಡಳಿತ ವಿರೋಧಿ ಅಲೆ ಹೆಚ್ಚಾದರೆ ಅದನ್ನು ಬಳಸಿಕೊಳ್ಳುವಷ್ಟು ಕುತಂತ್ರ ವಿಜಯೇಂದ್ರರಿಗೆ ಇದೆ. ಇಷ್ಟು ಸಾಕಲ್ಲ.

Update: 2023-11-18 04:14 GMT

ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನವರು ಪುತ್ರ ವ್ಯಾಮೋಹದ ಪರಾಕಾಷ್ಠೆ ತಲುಪಿದ್ದಾರೆ. ಕಳೆದ ಐದು ದಶಕಗಳ ರಾಜಕೀಯ ಬದುಕಿನಲ್ಲಿ ಅವರು ಸಂಪಾದಿಸಿದ ಗೌರವ ವಿಶ್ವಾಸಾರ್ಹತೆ ಮತ್ತು ‘ಹೋರಾಟಗಾರ’ ಎಂಬ ಹೆಸರಿಗೆ ಕಳಂಕ ಅಂಟಿಸಿಕೊಂಡರು. ಎಲ್ಲಾ ಹೋರಾಟ, ಹಾರಾಟ ಕುಟುಂಬ ರಾಜಕಾರಣಕ್ಕಾಗಿ ಎಂಬುದು ಬಟಾ ಬಯಲಾಗಿದೆ. ಒಂದು ಕಾಲದಲ್ಲಿ ಲಿಂಬೆಹಣ್ಣು ಮಾರುತ್ತಿದ್ದ ಯಡಿಯೂರಪ್ಪ ಕರ್ನಾಟಕದ ಮುಖ್ಯಮಂತ್ರಿ ಆದಾಗ ಪ್ರಜಾಪ್ರಭುತ್ವದ ಸಾಧ್ಯತೆ ವಿಸ್ತಾರವಾಯಿತು ಎಂದೇ ಭಾವಿಸಲಾಗಿತ್ತು. ಸಂಘ ಪರಿವಾರ ಮತ್ತು ಬಿಜೆಪಿ ಗರಡಿಯಲ್ಲಿ ಬೆಳೆದು ಬಂದರೂ ಯಡಿಯೂರಪ್ಪ ಅತಿರೇಕದ ಕೋಮುವಾದಿ ರಾಜಕಾರಣ ಮಾಡಿರಲಿಲ್ಲ. ರಾಜಕೀಯ ಜೀವನದುದ್ದಕ್ಕೂ ರೈತ ಹೋರಾಟಗಾರನ ಪೋಷಾಕು ಧರಿಸಿ ಅಭಿವೃದ್ಧಿ ರಾಜಕಾರಣಕ್ಕೆ ಹೆಚ್ಚು ಒತ್ತು ನೀಡಿದ್ದ ಯಡಿಯೂರಪ್ಪ ಹಿಂದೂ-ಮುಸ್ಲಿಮ್ ಸಂಘರ್ಷಕ್ಕೆ ಅವಕಾಶ ನೀಡಿರಲಿಲ್ಲ. ಹಿಂದೂ-ಮುಸ್ಲಿಮ್-ಕ್ರಿಶ್ಚಿಯನ್ನರು ಅಣ್ಣ-ತಮ್ಮಂದಿರಂತೆ ಬದುಕಬೇಕೆಂದು ಹೇಳುತ್ತಿದ್ದುದರಿಂದ ‘ಉದಾರವಾದಿ’ ಹಿಂದುತ್ವದ ರಾಜಕಾರಣಿ ಎಸಿಕೊಂಡಿದ್ದರು. ಎಲ್ಲ ಸಮುದಾಯಗಳೊಂದಿಗೆ ಉತ್ತಮ ಬಾಂಧವ್ಯ ಇಟ್ಟುಕೊಂಡಿದ್ದ ಅವರು 2008ರಲ್ಲಿ ಎಚ್.ಡಿ. ಕುಮಾರಸ್ವಾಮಿ ಅವರು ಒಪ್ಪಂದದಂತೆ ಮುಖ್ಯಮಂತ್ರಿ ಹುದ್ದೆ ಬಿಟ್ಟು ಕೊಡದಿದ್ದಾಗ ‘ವಚನಭ್ರಷ್ಟ’ ಅಸ್ತ್ರ ಬಳಸಿ ದುರಂತ ನಾಯಕನೆಂದು ವ್ಯಾಪಕವಾಗಿ ಬಿಂಬಿಸಿಕೊಂಡರು. ಆ ಎಲ್ಲಾ ವಿದ್ಯಮಾನಗಳಿಂದ ಯಡಿಯೂರಪ್ಪ ರಾತ್ರೋರಾತ್ರಿ ಲಿಂಗಾಯತರ ನಾಯಕನಾಗಿ ಹೊರಹೊಮ್ಮಿದರು. ಲಿಂಗಾಯತ ಸಮುದಾಯಕ್ಕೆ ಒಳ್ಳೆಯದನ್ನು ಮಾಡಿ ಲಿಂಗಾಯತ ನಾಯಕರಾದವರಲ್ಲ.

ಹಾಗೆ ನೋಡಿದರೆ ಯಡಿಯೂರಪ್ಪ ತಮ್ಮ ರಾಜಕೀಯ ಜೀವನದುದ್ದಕ್ಕೂ ‘ಇವ ನಮ್ಮವ’ ಎಂದು ಬೆಂಬಲಿಸಿದ ಬಿಜೆಪಿಯ ಹಿರಿಯ ಲಿಂಗಾಯತ ನಾಯಕರನ್ನು ಕಾಲದ ಅಗತ್ಯಕ್ಕೆ ತಕ್ಕಂತೆ ‘ಬಲಿ’ ತೆಗೆದುಕೊಂಡಿದ್ದಾರೆ. ಡಮ್ಮಿಗಳನ್ನು ಬೆಳೆಸುತ್ತಾ ಬಂದಿದ್ದಾರೆ. ಡಮ್ಮಿಗಳೂ ನಿಜನಾಯಕರಾಗಿ ಬೆಳೆಯುವ ಲಕ್ಷಣ ಕಂಡಾಗ ಉಪಾಯದಿಂದ ನೇಪಥ್ಯಕ್ಕೆ ಸರಿಸಿದ್ದಾರೆ. ರಾಜ್ಯದಲ್ಲಿ ಭಾರತೀಯ ಜನತಾ ಪಕ್ಷವನ್ನು ತಳಮಟ್ಟದಲ್ಲಿ ಸಂಘಟಿಸಿದ ಮತ್ತು ಒಂದು ಕಾಲದಲ್ಲಿ ಯಡಿಯೂರಪ್ಪನವರಿಗೆ ಅನ್ನ-ಆಶ್ರಯ ನೀಡಿದ ಬಿ.ಬಿ. ಶಿವಪ್ಪ, ಮಲ್ಲಿಕಾರ್ಜುನಯ್ಯ ಅವರನ್ನು ಅನಂತ ಕುಮಾರ್ ಅವರೊಂದಿಗೆ ಸೇರಿ ವ್ಯವಸ್ಥಿತವಾಗಿ ಮೂಲೆಗೊತ್ತಿದರು. 1999ರಲ್ಲಿ ಯಡಿಯೂರಪ್ಪ ಶಿಕಾರಿಪುರ ವಿಧಾನಸಭಾ ಚುನಾವಣೆಯಲ್ಲಿ ಸೋತಿದ್ದರು. ಆಗ ನ್ಯಾಯಯುತವಾಗಿ ಬಿ.ಬಿ. ಶಿವಪ್ಪನವರು ಪ್ರತಿಪಕ್ಷದ ನಾಯಕರಾಗಬೇಕಿತ್ತು. ಅನಂತ ಕುಮಾರ್ ಸಲಹೆ ಮೇರೆಗೆ ಕೇವಲ ಎರಡು ಬಾರಿ ವಿಧಾನಸಭಾ ಚುನಾವಣೆ ಗೆದ್ದಿದ್ದ ಜಗದೀಶ್ ಶೆಟ್ಟರ್ ಅವರನ್ನು ಬಿಜೆಪಿ ಶಾಸಕಾಂಗ ಸಭೆಯ ನಾಯಕನನ್ನಾಗಿ ಆಯ್ಕೆ ಮಾಡಿದರು. ಮುಂದೆ ಅದೇ ಜಗದೀಶ್ ಶೆಟ್ಟರ್ ಅನಂತ ಕುಮಾರ್ ಕ್ಯಾಂಪಿನಲ್ಲಿ ಗಟ್ಟಿಯಾಗಿ ನೆಲೆಯೂರಿ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾದರು. 2011ರಲ್ಲಿ ಅನಿವಾರ್ಯವಾಗಿ ಮುಖ್ಯಮಂತ್ರಿ ಹುದ್ದೆ ಬಿಟ್ಟುಕೊಡುವ ಸಂದರ್ಭದಲ್ಲಿ ಯಡಿಯೂರಪ್ಪ; ಜಗದೀಶ್ ಶೆಟ್ಟರ್ ‘ನಮ್ಮವ’ ಎಂದು ಬೆಂಬಲಿಸಲಿಲ್ಲ. ಯಡಿಯೂರಪ್ಪ ಆಯ್ಕೆ ಸದಾನಂದ ಗೌಡರಾಗಿದ್ದರು. ಅನಂತ ಕುಮಾರ್ ಅಷ್ಟರಲ್ಲಾಗಲೇ ಯಡಿಯೂರಪ್ಪನವರ ಶತ್ರು ಪಾಳಯದ ನೇತಾರನಾಗಿದ್ದರಿಂದ ಸಹಜವಾಗಿಯೇ ಅವರು ಮುಂದಿನ ಮುಖ್ಯಮಂತ್ರಿ ಆಯ್ಕೆಯಲ್ಲಿ ಜಗದೀಶ್ ಶೆಟ್ಟರ್ ಅವರನ್ನು ಮುಂದು ಮಾಡಲಿಲ್ಲ.

ಯಡಿಯೂರಪ್ಪನವರಿಗೆ ನಿಜವಾಗಿಯೂ ಲಿಂಗಾಯತ ಸಮುದಾಯದ ಮೇಲೆ ಪ್ರೀತಿ ಇದ್ದಿದ್ದರೆ ಜಗದೀಶ್ ಶೆಟ್ಟರ್ ಅವರನ್ನು ಬೆಂಬಲಿಸುತ್ತಿದ್ದರು. ಆಗ ಅವರು ಪಟ್ಟು ಹಿಡಿದು ಶಾಸಕರ ಬಲಾಬಲ ಪ್ರದರ್ಶಿಸಿ ಡಿ.ವಿ. ಸದಾನಂದ ಗೌಡರನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ಕೂರಿಸಿದರು. ಮುಖ್ಯಮಂತ್ರಿಯಾದ 11 ತಿಂಗಳಲ್ಲಿಯೇ ಸದಾನಂದ ಗೌಡರು ಮಾಜಿ ಪ್ರಧಾನಿ ದೇವೇಗೌಡರೊಂದಿಗೆ ಸೇರಿ ಯಡಿಯೂರಪ್ಪನವರ ವಿರುದ್ಧ ಮಸಲತ್ತು ಶುರು ಮಾಡಿದಾಗ ವಿರೋಧಿ ಪಾಳಯದಲ್ಲಿದ್ದ ಜಗದೀಶ್ ಶೆಟ್ಟರ್ ಅವರನ್ನು ಕರೆದು ಸಿ.ಎಂ. ಮಾಡಿದರು. ಸದಾನಂದ ಗೌಡರು ದೋಖಾ ಮಾಡಿರದಿದ್ದರೆ ಲಿಂಗಾಯತ ಸಮುದಾಯದ ಶೆಟ್ಟರ್, ಬಸವರಾಜ ಬೊಮ್ಮಾಯಿ ಅವರಿಗೆ ಮುಖ್ಯಮಂತ್ರಿಯಾಗುವ ಯೋಗವೇ ಒದಗಿ ಬರುತ್ತಿರಲಿಲ್ಲ. ಶೆಟ್ಟರ್, ಬೊಮ್ಮಾಯಿಯವರು ಯಡಿಯೂರಪ್ಪನವರಿಗೆ ದೋಖಾ ಮಾಡಿರಲಿಲ್ಲ. ಬಿ.ಬಿ. ಶಿವಪ್ಪ, ಮಲ್ಲಿಕಾರ್ಜುನಯ್ಯನವರಂತಹ ಬಿಜೆಪಿಯ ಹಿರಿಯ ಲಿಂಗಾಯತ ಮುಖಂಡರನ್ನು ನಿರ್ದಯವಾಗಿ ಬಲಿ ತೆಗೆದುಕೊಂಡ ಯಡಿಯೂರಪ್ಪ ಪಕ್ಷದಲ್ಲಿ ಲಿಂಗಾಯತ ನಾಯಕತ್ವ ಬೆಳೆಯದಂತೆ ನೋಡಿಕೊಂಡರು. 2008ರಲ್ಲಿ ಮೊದಲ ಬಾರಿಗೆ ಮುಖ್ಯಮಂತ್ರಿಯಾದ ಯಡಿಯೂರಪ್ಪ ತನ್ನ ಸಂಪುಟದಲ್ಲಿ ನಿರುಪದ್ರವಿ ಲಿಂಗಾಯತರನ್ನು ಮಾತ್ರ ಸಂಪುಟಕ್ಕೆ ಸೇರಿಸಿಕೊಂಡಿದ್ದರು. ಜಗದೀಶ್ ಶೆಟ್ಟರ್ ಮುಂದೊಂದು ದಿನ ತನಗೆ ಮುಳುವಾಗ ಬಹುದೆಂದು ಸಂಪುಟಕ್ಕೆ ಸೇರಿಸಿಕೊಳ್ಳದೆ ವಿಧಾನಸಭೆಯ ಸ್ಪೀಕರ್ ಸ್ಥಾನದಲ್ಲಿ ಕೂರಿಸಿದ್ದರು. ಅತ್ಯಂತ ಪ್ರತಿಭಾವಂತ, ಕ್ರಿಯಾಶೀಲ ಮತ್ತು ಮಹತ್ವಾಕಾಂಕ್ಷಿ ರಾಜಕಾರಣಿಯಾಗಿರುವ ಬಸವರಾಜ ಬೊಮ್ಮಾಯಿ ಅವರನ್ನು ಕೇವಲ ಉಪಜಾತಿಯ ಕಾರಣಕ್ಕೆ ಜೊತೆಯಾಗಿಟ್ಟುಕೊಂಡು ಯಡಿಯೂರಪ್ಪ ರಾಜಕೀಯ ಲಾಭ ಮಾಡಿಕೊಂಡರು.

ಹಾಗೆ ನೋಡಿದರೆ ಯಡಿಯೂರಪ್ಪ ಅತ್ಯಂತ ಚಾಣಾಕ್ಷ ರಾಜಕಾರಣಿ. ಲಿಂಗಾಯತರು ಅನ್ನುವ ಕಾರಣಕ್ಕೆ ಕೇವಲ ಭಾವನಾತ್ಮಕ ನೆಲೆಯಲ್ಲಿ ಯಾರನ್ನೂ ರಾಜಕೀಯವಾಗಿ ಬೆಳೆಸಿದ, ಸಹಾಯ ಮಾಡಿದ ಒಂದೇ ಒಂದು ನಿದರ್ಶನ ದೊರೆಯುವುದಿಲ್ಲ. ದುರಂತ ನಾಯಕನಾದ ಏಕೈಕ ಕಾರಣಕ್ಕೆ ನಾಡಿನ ಲಿಂಗಾಯತ ಸಮುದಾಯ ಯಡಿಯೂರಪ್ಪನವರನ್ನು ಭವನಾತ್ಮಕ ನೆಲೆಯಲ್ಲಿ ಅಪ್ಪಿಕೊಂಡಿತು. 2008ರಿಂದ 2018ರವರೆಗೆ ನಡೆದ ಎಲ್ಲಾ ಚುನಾವಣೆಗಳಲ್ಲಿ ಕೇವಲ ಯಡಿಯೂರಪ್ಪನವರ ಕಾರಣಕ್ಕೆ ಬಿಜೆಪಿಯನ್ನು ಬೆಂಬಲಿಸಿತು. ಅಷ್ಟು ಮಾತ್ರವಲ್ಲ ಯಡಿಯೂರಪ್ಪ ‘ಆಪರೇಷನ್ ಕಮಲ’ ಮಾಡಿ ವಾಮಮಾರ್ಗದಿಂದ ಅಧಿಕಾರ ಹಿಡಿದಾಗಲೆಲ್ಲ ವೀರಶೈವ-ಲಿಂಗಾಯತರು ಬೆಂಬಲಿಸಿದ್ದಾರೆ. ಆ ಕಾರಣಕ್ಕೆ ಆಪರೇಷನ್ ಕಮಲದ ನಂತರ ನಡೆದ ಎಲ್ಲಾ ಉಪಚುನಾವಣೆಗಳಲ್ಲಿ ಪಕ್ಷಾಂತರಿಗಳು ಗೆಲುವು ಸಾಧಿಸಿದ್ದಾರೆ. ಯಡಿಯೂರಪ್ಪನವರ ಉಪಜಾತಿ ಲೆಕ್ಕಿಸದೆ ಲಿಂಗಾಯತ ಸಮುದಾಯ ಕಣ್ಣಮುಚ್ಚಿ ಬೆಂಬಲಿಸಿದ್ದರಿಂದಲೇ ಬಿಜೆಪಿಗೆ ಅನಿವಾರ್ಯ ‘ನಾಯಕ’ ಎನಿಸಿಕೊಂಡಿದ್ದಾರೆ. ಆದರೆ ಪ್ರತಿಯಾಗಿ ಯಡಿಯೂರಪ್ಪ ವೀರಶೈವ-ಲಿಂಗಾಯತ ಸಮುದಾಯದ ಬಡವರ ಪರ ನಿಲ್ಲುವ ಮನಸ್ಸೇ ಮಾಡಲಿಲ್ಲ. ಯಡಿಯೂರಪ್ಪನವರಿಂದ ಲಿಂಗಾಯತ ಸಮುದಾಯದ ಯಾರಿಗಾದರೂ ರಾಜಕೀಯ ಲಾಭವಾಗಿದ್ದರೆ ಅದಕ್ಕೆ ಕೇವಲ ಸ್ವಾರ್ಥ ರಾಜಕಾರಣ ಕಾರಣ. ಯಡಿಯೂರಪ್ಪ ಸ್ವಾರ್ಥವಿಲ್ಲದೆ ಏನನ್ನೂ ಮಾಡಲಾರರು, ಪ್ರೀತಿ ಮತ್ತು ದ್ವೇಷವನ್ನೂ ಕೂಡಾ.

ಶಿಕಾರಿಪುರ ಮತ್ತು ಶಿವಮೊಗ್ಗದಲ್ಲಿ ಯಡಿಯೂರಪ್ಪ ಮತ್ತವರ ಮಕ್ಕಳ ರಾಜಕೀಯ ಹಣೆಬರಹ ನಿರ್ಧರಿಸುವವರು ಲಿಂಗಾಯತರಲ್ಲಿ ಸಾದರು ಮತ್ತು ನೊಣಬರು. ಉಳಿದಂತೆ ಈಡಿಗರು, ಲಂಬಾಣಿ, ಭೋವಿ ಸಮುದಾಯದವರು. ಯಡಿಯೂರಪ್ಪ ಶಿಕಾರಿಪುರ ವಿಧಾನಸಭಾ ಕ್ಷೇತ್ರದಲ್ಲಿ ನಿರಂತರವಾಗಿ ಗೆದ್ದಿದ್ದು ಮತ್ತು ದಡ್ಡ ಮಗ ವಿಜಯೇಂದ್ರರನ್ನು ಪ್ರತಿಷ್ಠಾಪಿಸಿದ್ದೇ ‘ಸಾದರ ಲಿಂಗಾಯತ’ ಅಭ್ಯರ್ಥಿಗಳನ್ನು ಬಲಿ ತೆಗೆದುಕೊಂಡು. ಆ ಕಾರಣಕ್ಕೆ ಸಾದರ ಲಿಂಗಾಯತ ಸಮುದಾಯದ ಬಸವರಾಜ ಬೊಮ್ಮಾಯಿ ಅವರನ್ನು ಜೊತೆಗೆ ಇಟ್ಟುಕೊಂಡಿದ್ದು. ಅನಿವಾರ್ಯ ಸಂದರ್ಭದಲ್ಲಿ ಮುಖ್ಯಮಂತ್ರಿ ಮಾಡಿದ್ದು. ಯಡಿಯೂರಪ್ಪ ಕೆಜೆಪಿ ಮಾಡಿದಾಗ ಬೊಮ್ಮಾಯಿ ಕೈ ಕೊಟ್ಟಿದ್ದರು. ಬೊಮ್ಮಾಯಿ ಕೈ ಕೊಡಬಹುದಾದ ಆಸಾಮಿ ಎಂದು ಮನಗಂಡೇ ಸಾದರ ಲಿಂಗಾಯತ ಸಮುದಾಯಕ್ಕೆ ಸೇರಿದ ಶಿವಮೊಗ್ಗದ ಎಸ್. ರುದ್ರೇಗೌಡರನ್ನು ಜೊತೆಗಿಟ್ಟುಕೊಂಡಿದ್ದರು. ಮೊದಲ ಬಾರಿ ಮುಖ್ಯಮಂತ್ರಿ ಆದಾಗ ರುದ್ರೇಗೌಡರನ್ನು ಕರ್ನಾಟಕ ಲೋಕಸೇವಾ ಆಯೋಗದ ಸದಸ್ಯರನ್ನಾಗಿಸಿದ್ದರು. ಮುಂದೆ ಕೆಜೆಪಿ ಕಟ್ಟಿದಾಗ ರುದ್ರೇಗೌಡರನ್ನು ಕೆ.ಎಸ್. ಈಶ್ವರಪ್ಪ ಅವರನ್ನು ಸೋಲಿಸಲು ಬಳಸಿಕೊಂಡರು. ಅಲ್ಪ ಮತಗಳ ಅಂತರದಿಂದ ಸೋತ ರುದ್ರೇಗೌಡರಿಗೆ ಮತ್ತೆ ಬಿಜೆಪಿ ಸೇರಿದ ಮೇಲೆ ಪಟ್ಟು ಹಿಡಿದು ಎಂಎಲ್‌ಸಿ ಮಾಡಿದರು. ಯಡಿಯೂರಪ್ಪ ತನ್ನ ರಾಜಕೀಯ ಜೀವನದುದ್ದಕ್ಕೂ ಲಿಂಗಾಯತರನ್ನು ಸೇರಿದಂತೆ ಅಸಂಖ್ಯಾತ ನಾಯಕರನ್ನು ಬಳಸಿ ಬಿಸಾಕಿದ್ದಾರೆ. ಶಿವಮೊಗ್ಗ ಮತ್ತು ಶಿಕಾರಿಪುರದಲ್ಲಿ ಮತ ಬ್ಯಾಂಕ್ ಆಗಿ ನೆರವಿಗೆ ಬರುವ ಜಾತಿ-ಉಪಜಾತಿಯವರನ್ನು ಮಾತ್ರ ರಾಜಕೀಯ ಅಧಿಕಾರ ನೀಡುವಾಗ ಪರಿಗಣಿಸಿದ್ದಾರೆ. ಲಂಬಾಣಿ ಸಮುದಾಯದ ರೇವೂ ನಾಯಕ ಬೆಳಮಗಿಯನ್ನು ಮಂತ್ರಿ ಮಾಡಿದ್ದೇ ಶಿಕಾರಿಪುರದ ಲಂಬಾಣಿ ಮತ ಬ್ಯಾಂಕನ್ನು ಭದ್ರವಾಗಿ ಇಟ್ಟುಕೊಳ್ಳಲು. ಪ್ರಭು ಚೌಹಾಣ್ ಎಂಬ ಹೊಸಬ ಸಿಕ್ಕ ಕೂಡಲೇ ರೇವೂ ನಾಯಕರನ್ನು ಡಸ್ಟ್‌ಬಿನ್‌ಗೆ ಬಿಸಾಕಿದರು. ಲಂಬಾಣಿ ಸಮುದಾಯದ ಕನ್ನಿರಾಮ ರಾಥೋಡ್ ಕರ್ನಾಟಕ ಲೋಕಸೇವಾ ಆಯೋಗದ ಸದಸ್ಯರಾಗಿದ್ದು, ಡಾ. ಈ.ಟಿ. ಪುಟ್ಟಯ್ಯನವರು ಗುಲಬರ್ಗಾ ವಿವಿ ಕುಲಪತಿಯಾಗಿದ್ದು ಇದೇ ಲೆಕ್ಕದಲ್ಲಿ. ಭೋವಿ ಸಮುದಾಯದ ಸುನಿಲ್ ವಲ್ಯಾಪುರೆ ಚುನಾವಣೆ ಸೋತರೂ ಎಂಎಲ್‌ಸಿ ಆಗಲು ಸಾಧ್ಯವಾದದ್ದು ಶಿಕಾರಿಪುರದ ಕಾರಣಕ್ಕೆ. ಜನತಾ ಪರಿವಾರದ ಜೆ.ಸಿ. ಮಾಧುಸ್ವಾಮಿ, ತುಮಕೂರಿನ ಎಂ.ಪಿ. ಬಸವರಾಜು ಲಿಂಗಾಯತ ನೊಣಬ ಸಮುದಾಯಕ್ಕೆ ಸೇರಿದವರು. ಶಿಕಾರಿಪುರದಲ್ಲಿ ನೊಣಬ ಸಮುದಾಯದ ಮತದಾರರನ್ನು ಹಿಡಿದಿಟ್ಟುಕೊಳ್ಳಲು ಮಾಧುಸ್ವಾಮಿಯವರನ್ನು ಮಂತ್ರಿಯಾಗಿಸುತ್ತಾರೆ. ತುಮಕೂರಿನಲ್ಲಿ ಬಸವರಾಜು ಅವರನ್ನು ಎಂ.ಪಿ. ಮಾಡುತ್ತಾರೆ. ಅವರ ಮಗನಿಗೆ ಶಾಸಕ ಭಾಗ್ಯ ಕಲ್ಪಿಸುತ್ತಾರೆ. ಪಕ್ಷಕ್ಕಾಗಿ ದುಡಿದ ಸೊಗಡು ಶಿವಣ್ಣ ಅವರನ್ನು ಬಲಿ ತೆಗೆದುಕೊಳ್ಳುತ್ತಾರೆ.

ಲಿಂಗಾಯತರಲ್ಲಿ ನೊಣಬರು, ಸಾದರು ಯಡಿಯೂರಪ್ಪನವರಿಗೆ ಅನಿವಾರ್ಯ. ದಲಿತರಲ್ಲಿ ಲಂಬಾಣಿ, ಭೋವಿ, ಹಿಂದುಳಿದವರಲ್ಲಿ ಈಡಿಗರು ರಾಜಕೀಯ ದಾಳವಾಗಿ ಬಳಕೆಯಾಗುತ್ತಾರೆ. ಆರೆಸ್ಸೆಸ್ ಕಾರಣಕ್ಕೆ ಬ್ರಾಹ್ಮಣರು, ವೈಶ್ಯರು ಅವರ ಜೊತೆಗಿರುತ್ತಾರೆ. ಕೆ.ಬಿ. ಶಾಣಪ್ಪ, ಜಿಗಜಿಣಗಿ, ಗೋವಿಂದ ಕಾರಜೋಳ, ಡಿ.ಎಸ್. ವೀರಯ್ಯ, ಕೆ. ಶಿವರಾಮ, ಶ್ರೀನಿವಾಸ್ ಪ್ರಸಾದ್, ಎನ್. ಮಹೇಶ್ ಸಾಂದರ್ಭಿಕವಾಗಿ ಬಳಕೆಗೆ ಬಂದ ದಾಳಗಳು. ಬಿಜೆಪಿಯನ್ನೇ ಅಪಾರವಾಗಿ, ಅನಿವಾರ್ಯವಾಗಿ ನಂಬಿಕೊಂಡ ದಲಿತರಲ್ಲಿನ ಎಡಗೈ ಸಮುದಾಯ ಈ ಹೊತ್ತು ರಾಜಕೀಯವಾಗಿ ಅನಾಥವಾಗಿದೆ. ಯಡಿಯೂರಪ್ಪನವರಲ್ಲಿ ‘ಬಸವ ಪ್ರಜ್ಞೆ’ ಜಾಗೃತವಾಗಿದ್ದರೆ ಗೋವಿಂದ ಕಾರಜೋಳ ಅವರನ್ನು ಮುಖ್ಯಮಂತ್ರಿಯನ್ನಾಗಿಸುತ್ತಿದ್ದರು. ಅವರಲ್ಲಿ ಸದಾ ಸ್ವಹಿತದ ಪ್ರಜ್ಞೆಯೊಂದೇ ಜಾಗೃತವಾಗಿರುತ್ತದೆ ಎನ್ನುವುದಕ್ಕೆ ಸಾವಿರಾರು ನಿರ್ದರ್ಶನಗಳನ್ನು ಒದಗಿಸಬಹುದು. ಲಿಂಗಾಯತರಲ್ಲಿನ ಸಾದರ, ನೊಣಬ ಉಪಜಾತಿಗಳನ್ನು ಹೊರತುಪಡಿಸಿದರೆ ಉಳಿದೆಲ್ಲರನ್ನು ಸಾಂದರ್ಭಿಕವಾಗಿ ಬಳಸಿ ಬಿಸಾಕಿದ್ದಾರೆ. ವಿಶೇಷವಾಗಿ ಪಂಚಮಸಾಲಿ, ರೆಡ್ಡಿ ಲಿಂಗಾಯತರು, ಆದಿ ಬಣಜಿಗರು, ಬಣಜಿಗರು, ದೀಕ್ಷಾ ಲಿಂಗಾಯತರು ಅಷ್ಟೇ ಯಾಕೆ ಸ್ವತಃ ಗಾಣಿಗ ಲಿಂಗಾಯತರನ್ನ್ನೂ ಸಂದರ್ಭಕ್ಕೆ ತಕ್ಕಂತೆ ಬಳಸಿಕೊಂಡಿದ್ದಾರೆ. ಮಾಜಿ ಶಾಸಕರು, ಯಡಿಯೂರಪ್ಪನವರ ಸಂಬಂಧಿಕರೂ ಆದ ಎಸ್.ಐ. ಚಿಕ್ಕನಗೌಡರನ್ನೇ ಮಂತ್ರಿ ಮಾಡಲಿಲ್ಲ. ಕಷ್ಟದಲ್ಲಿ ನೆರವಿಗೆ ಧಾವಿಸಲಿಲ್ಲ.

ಕೆಸಿಪಿಯೊಂದಿಗೆ ಗುರುತಿಸಿಕೊಂಡಿದ್ದ ಮಾಜಿ ಮಂತ್ರಿ ಎಸ್.ಕೆ. ಬೆಳ್ಳುಬ್ಬಿ, ಜನತಾ ಪರಿವಾರದ ಭಾಗವಾಗಿದ್ದ ಮಾಜಿ ಉಪಮುಖ್ಯ ಮಂತ್ರಿಯಾಗಿದ್ದ ಲಕ್ಷ್ಮಣ ಸವದಿಯವರು ಲಿಂಗಾಯತ ಗಾಣಿಗ ಸಮುದಾಯಕ್ಕೆ ಸೇರಿದವರು. ಉತ್ತರ ಕರ್ನಾಟಕದಲ್ಲಿ ಬಿಜೆಪಿಗೆ ನೆಲೆ ಕಂಡುಕೊಳ್ಳಲು ಇವರಿಬ್ಬರ ನೆರವನ್ನು ಯಥೇಚ್ಛವಾಗಿ ಬಳಸಿಕೊಂಡರು. 2008ರಲ್ಲಿ ಮುಖ್ಯಮಂತ್ರಿಯಾದಾಗ ಎಸ್.ಕೆ. ಬೆಳ್ಳುಬ್ಬಿಯವರನ್ನು ತೋಟಗಾರಿಕಾ ಮಂತ್ರಿಯನ್ನಾಗಿಸಿದರು. ಆನಂತರ ಆಪರೇಷನ್ ಕಮಲದ ಮೂಲಕ ಬಂದ ಉಮೇಶ್ ಕತ್ತಿಗೆ ಸ್ಥಾನ ಕಲ್ಪಿಸಲು ಬೆಳ್ಳುಬ್ಬಿಯವರನ್ನು ಬಲಿ ಕೊಟ್ಟರು. ಕೆಲವು ವರ್ಷಗಳ ಕಾಲ ಅತ್ಯಂತ ಕ್ರಿಯಾಶೀಲ ವ್ಯಕ್ತಿಯಾದ ಲಕ್ಷ್ಮಣ ಸವದಿಯವರನ್ನು ಶಕ್ತಿಮೀರಿ ಬಳಸಿಕೊಂಡರು. ಯಡಿಯೂರಪ್ಪನವರ ವ್ಯಾಪ್ತಿಮೀರಿ ಬಿ.ಎಲ್. ಸಂತೋಷ್ ನೆರವಿನಿಂದ ಉಪಮುಖ್ಯಮಂತ್ರಿ ಆಗಿದ್ದ ಲಕ್ಷ್ಮಣ ಸವದಿ ಅವರನ್ನು ಟಾರ್ಗೆಟ್ ಮಾಡಿದರು. 2023ರ ಚುನಾವಣೆಯಲ್ಲಿ ಅಥಣಿ ಟಿಕೆಟ್ ತಪ್ಪಿಸಿದರು. ಲಕ್ಷ್ಮಣ ಸವದಿಯವರು ಅನಿವಾರ್ಯವಾಗಿ ಕಾಂಗ್ರೆಸ್ ಸೇರಿ ಗೆದ್ದರು. ಜಗದೀಶ್ ಶೆಟ್ಟರ್ ಸೇರಿ ಹಲವು ಲಿಂಗಾಯತ ನಾಯಕರಿಗೆ ಬಿಜೆಪಿ ಟಿಕೆಟ್ ಕೈತಪ್ಪಿದಾಗ ಯಡಿಯೂರಪ್ಪ ಯಾರೊಬ್ಬರ ನೆರವಿಗೂ ನಿಲ್ಲಲಿಲ್ಲ. ಅವರು ಪಟ್ಟು ಹಿಡಿದು ಟಿಕೆಟ್ ಕೊಡಿಸಿದ್ದು ಸುರೇಶ್ ಕುಮಾರ್ ಅವರಿಗೆ ಮಾತ್ರ. ಇಲ್ಲಿ ಲಿಂಗಾಯತರ ಪಾಲಿಗೆ ವಿಲನ್ ಆಗಿದ್ದು ಬಿ.ಎಲ್. ಸಂತೋಷ್; ರಾಜಕೀಯ ಲಾಭ ಸಿಕ್ಕಿದ್ದು ಯಡಿಯೂರಪ್ಪನವರಿಗೆ. ಶೆಟ್ಟರ್, ಸವದಿ ಪಕ್ಷ ತೊರೆದರು. ನಿರಾಣಿ ಸೋತರು. ಕೆ.ಎಸ್. ಈಶ್ವರಪ್ಪ ನಿವೃತ್ತಿಯಾದರು. ಬಸವರಾಜ ಬೊಮ್ಮಾಯಿ ಸೋಲಿನ ಹೊಣೆ ಹೊತ್ತು ಹೈಕಮಾಂಡ್ ಕಣ್ಣಿಗೆ ಗುರಿಯಾದರು. ನೇರ ಅಖಾಡಕ್ಕಿಳಿಯದೆ ರಿಮೋಟ್ ಕಂಟ್ರೋಲ್ ರಾಜಕಾರಣ ಮಾಡಿದ ಬಿ.ಎಲ್. ಸಂತೋಷ್ ಮತ್ತವರ ತಂಡ ಹೈಕಮಾಂಡ್ ವಿಶ್ವಾಸವನ್ನು ತಾತ್ಕಾಲಿಕವಾಗಿಯಾದರೂ ಕಳೆದುಕೊಂಡಿತು.

ಬಿಜೆಪಿ ನಾಯಕರಿಲ್ಲದ ಪಕ್ಷವಾಗಿತ್ತು. ಸಮಯ ನೋಡಿ ಯಡಿಯೂರಪ್ಪ ದಡ್ಡ ಮಗನನ್ನು ಪ್ರತಿಷ್ಠಾಪಿಸಿದರು. ಕರ್ನಾಟಕದ ವೀರಶೈವ-ಲಿಂಗಾಯತ ಮತಗಳು ಲಿಂಗಾಯತರ ಸಂಹಾರಕ ಯಡಿಯೂರಪ್ಪನವರ ಜೇಬಿನಲ್ಲಿವೆ ಎಂದು ಭಾವಿಸಿ ಬಿಜೆಪಿ ಹೈಕಮಾಂಡ್ ವಿಜಯೇಂದ್ರಗೆ ರಾಜ್ಯಾಧ್ಯಕ್ಷ ಸ್ಥಾನದ ಜವಾಬ್ದಾರಿ ನೀಡಿದೆ. ಮಾಧ್ಯಮದವರೂ ಲಿಂಗಾಯತರನ್ನು ದಡ್ಡರಂದೇ ಗ್ರಹಿಸಿ ವಿಜಯೇಂದ್ರರನ್ನು ಮೆರೆಸುತಿದ್ದಾರೆ. ವಿಜಯೇಂದ್ರ ದಡ್ಡನಿದ್ದರೂ ‘ಡೀಲ್’ ಮಾಡುವುದರಲ್ಲಿ ನಿಸ್ಸೀಮ. ಅಪ್ಪನಿಗಿಂತಲೂ ಹೆಚ್ಚು ಸ್ವಾರ್ಥಿ ಮತ್ತು ಮಹಾನ್ ಅವಕಾಶವಾದಿ. ಯಾರನ್ನೂ ನಂಬುವುದಿಲ್ಲ, ಎಲ್ಲರನ್ನೂ ಸಂದರ್ಭಕ್ಕೆ ತಕ್ಕ ಹಾಗೆ ಬಳಸಿಕೊಳ್ಳುವ ಕಲೆ ಕರಗತವಾಗಿದೆ. ಭಾರತದ ಸಂವಿಧಾನ ಓದಿಲ್ಲ. ಸಾಹಿತ್ಯ-ಸಂಸ್ಕೃತಿ- ಸಂಗೀತ ಇತ್ಯಾದಿ ಲಲಿತಕಲೆಗಳ ಗಂಧ-ಗಾಳಿ ಇಲ್ಲ. ಕರ್ನಾಟಕ ನೀರಾವರಿ ಸಮಸ್ಯೆಗಳ ಬಗ್ಗೆ ಕನಿಷ್ಠ ಜ್ಞಾನವಿಲ್ಲ. ನಾಡಿನ ಅಭಿವೃದ್ಧಿ ಕುರಿತಾದ ಯಾವುದೇ ಕನಸುಗಳಿಲ್ಲ. ಹಣ ಚೆಲ್ಲಿ, ಜಾತಿ ಬಳಸಿಕೊಂಡು ಅಧಿಕಾರ ಹಿಡಿಯಬಲ್ಲೆ ಎಂಬ ಹುಂಬ ದೈರ್ಯ ಇದೆ. ಮಾತನಾಡಲು ಒಳ್ಳೆಯ ಭಾಷಾ ತಿಳುವಳಿಕೆ ಇಲ್ಲ. ಕೀಳು ಮಟ್ಟದ ಗಿಮಿಕ್ ಮಾಡುವುದು ಗೊತ್ತಿದೆ. ಅಪ್ಪನ ನಾಮಬಲ ಒಂದು ಇದ್ದರೆ ಸಾಕು ಸಿಎಂ ಗಾದಿ ಏರಬಲ್ಲೆ ಎಂಬ ಭ್ರಮೆ ಇದೆ. ಮಹಾನ್ ಅವಕಾಶವಾದಿಯಾಗಿರುವುದರಿಂದ ‘ಹಿಂದುತ್ವ’ವನ್ನು ಈತ ಹೇಗೂ ಬಳಸಿಕೊಳ್ಳಬಹುದು. ಈತ ಏಕಕಾಲದಲ್ಲಿ ಸಂಘ ಪರಿವಾರದವರಿಗೂ, ಜಾತ್ಯತೀತ ತತ್ವಗಳಲ್ಲಿ ನಂಬಿಕೆ ಇಟ್ಟವರಿಗೂ ದೊಡ್ಡ ಥ್ರೆಟ್. ಹುಚ್ಚರ ಕೈಯೊಳಗಿನ ಕಲ್ಲು. ಅಧಿಕಾರಕ್ಕಾಗಿ ಏನು ಬೇಕಾದರೂ ಮಾಡಲು ಹೇಸದ ರಾಜಕಾರಣಿ.

ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ವಿಜಯೇಂದ್ರನೇ ‘ಡೀಲ್’ ಮಾಡುತ್ತಿದ್ದರು. ಲಿಂಗಾಯತರು ಸೇರಿ ಎಲ್ಲರಲ್ಲೂ ಹಣ ಪೀಕಿಯೇ ‘ಪೋಸ್ಟಿಂಗ್’ ದಯ ಪಾಲಿಸುತ್ತಿದ್ದರು. ಅಪ್ಪ-ಮಗನ ಲಿಂಗಾಯತ ವಿರೋಧಿ ನಡೆಯಿಂದ ಶಿಕಾರಿಪುರದ ಮತದಾರರು ಅದರಲ್ಲೂ ಸಾದರ ಲಿಂಗಾಯತರು ವಿಜಯೇಂದ್ರರನ್ನು ಸೋಲಿಸಲು ಸಿದ್ಧವಾಗಿದ್ದರು. ಸಾದರ ಲಿಂಗಾಯತ ಸಮುದಾಯದ ನಾಗರಾಜ್ ಕಾಂಗ್ರೆಸ್ ಟಿಕೆಟ್ ದಕ್ಕಿಸಿಕೊಂಡಿದ್ದರೆ ಆತ ಸೋಲೇಂದ್ರ ಆಗುತ್ತಿದ್ದರು. ಅಪ್ಪ ಮಗನ ವಿರುದ್ಧ ನಾಡಿನ ಸಮಸ್ತ ವೀರಶೈವ-ಲಿಂಗಾಯತ ಸಮುದಾಯ ಕೊತಕೊತ ಕುದಿಯುತ್ತಿದೆ. ಯಡಿಯೂರು ಸಿದ್ದಲಿಂಗೇಶ್ವರರೂ ಇವರು ಮಾಡಿದ ವಿದ್ರೋಹವನ್ನು ಕ್ಷಮಿಸಲಾರರು.

ಸೋಮಣ್ಣ, ಯತ್ನಾಳ್ ವಿಜಯೇಂದ್ರರ ಪಟ್ಟಾಭಿಷೇಕಕ್ಕೆ ವಿರೋಧ ದಾಖಲಿಸಿದ್ದಾರೆ. ಎಲ್ಲಕ್ಕೂ ಮಿಗಿಲಾಗಿ ಬಿಜೆಪಿಯಲ್ಲಿನ ಯಡಿಯೂರಪ್ಪನವರ ವಿರೋಧಿ ಬಣ ಷಡ್ಯಂತ್ರ ರೂಪಿಸದೆ ಇರಲಾರದು. ವಿಜಯೇಂದ್ರರ ಭವಿಷ್ಯ ಕಾಂಗ್ರೆಸ್ ಪಕ್ಷ ಮತ್ತು ಸರಕಾರದ ನಡೆಯನ್ನು ಅವಲಂಬಿಸಿದೆ. ಐದು ವರ್ಷಗಳ ಅವಧಿಯಲ್ಲಿ ಮೂರು ಜನ ಮುಖ್ಯಮಂತ್ರಿಗಳನ್ನು ತಂದರೆ; ಲಿಂಗಾಯತ ವಿರೋಧಿ ನೀತಿ ಅನುಸರಿಸಿದರೆ, ಒಳಜಗಳ-ಕಿತ್ತಾಟ ಮುಂದುವರಿಸಿದರೆ, ಭ್ರಷ್ಟಾಚಾರ, ಸ್ವಜನಪಕ್ಷಪಾತ ತಡೆಯದಿದ್ದರೆ, ಆಡಳಿತ ವಿರೋಧಿ ಅಲೆ ಹೆಚ್ಚಾದರೆ ಅದನ್ನು ಬಳಸಿಕೊಳ್ಳುವಷ್ಟು ಕುತಂತ್ರ ವಿಜಯೇಂದ್ರರಿಗೆ ಇದೆ. ಇಷ್ಟು ಸಾಕಲ್ಲ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ಡಾ. ರಾಜಶೇಖರ ಹತಗುಂದಿ

ಹಿರಿಯ ಬರಹಗಾರ, ಪತ್ರಕರ್ತ

Similar News