ಆಚಾರವಿಲ್ಲದ ನಾಲಿಗೆ
ಸಾಹಿತಿ, ಬುದ್ಧಿಜೀವಿಗಳಿಗೆ ಕಾಂಗ್ರೆಸ್ ಪಕ್ಷ ಪ್ರತೀ ತಿಂಗಳು ಸಂಬಳ ನೀಡಿದ್ದರ ಅಧಿಕೃತ ಮಾಹಿತಿ ಒದಗಿಸುವಲ್ಲಿ ಯತ್ನಾಳ್ ವಿಫಲರಾದರೆ ಆತ ಪ್ರತಿಪಕ್ಷ ನಾಯಕನಾಗಲು ಮಾತ್ರವಲ್ಲ, ಜನಪ್ರತಿನಿಧಿಯಾಗಿ ಮುಂದುವರಿಯುವ ಯೋಗ್ಯತೆ ಹೊಂದಿಲ್ಲವೆಂದೇ ಭಾವಿಸಬೇಕಾಗುತ್ತದೆ. ಯತ್ನಾಳ್ ಮಾತುಗಳನ್ನು ಕಾಂಗ್ರೆಸ್ ಪಕ್ಷ ಮತ್ತು ಸಿದ್ದರಾಮಯ್ಯ ನೇತೃತ್ವದ ಸರಕಾರ ಗಂಭೀರವಾಗಿ ಪರಿಗಣಿಸಿ ತನಿಖೆ ಮಾಡಿಸಬೇಕಾಗಿದೆ. ಕಾಂಗ್ರೆಸ್ ಪಕ್ಷದಿಂದ ಸಾಹಿತಿ, ಬುದ್ಧಿಜೀವಿಗಳು ಪ್ರತೀ ತಿಂಗಳು ಸಂಬಳ ಪಡೆದಿಲ್ಲ ಎನ್ನುವುದು ಸಾಬೀತಾದರೆ ಬಸನಗೌಡ ಪಾಟೀಲರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಲು ಕಾನೂನು ಕ್ರಮಕ್ಕೆ ಮುಂದಾಗಬೇಕು.
‘‘ಸಾಹಿತಿಗಳು, ಬುದ್ಧಿಜೀವಿಗಳು ಅಂತ ಹೇಳಿಕೊಳ್ಳುವವರೆಲ್ಲ ಲೋಫರ್ ಅದಾರ. ಅವರು ಸಾಹಿತಿಗಳಲ್ಲ. ಪೇಮೆಂಟ್ ಗಿರಾಕಿಗಳು. ಕಾಂಗ್ರೆಸ್ ಮತ್ತು ಕಮ್ಯುನಿಸ್ಟ್ ಪಕ್ಷಗಳ ಏಜೆಂಟರು. ತಿಂಗಳಾ ಅವರಿಗೆ ಪೇಮೆಂಟ್ ಆಗ್ತದ... ಆರೆಸ್ಸೆಸ್‌ಗೆ ಬೈಲಿಕ್ಕೆ, ವಿಶ್ವ ಹಿಂದೂ ಪರಿಷತ್ತಿಗೆ ಬೈಲಿಕ್ಕೆ, ಹಿಂದುತ್ವಕ್ಕೆ ಬೈಲಿಕ್ಕೆ, ಬಿಜೆಪಿಗೆ ಬೈಲಿಕ್ಕೆ. ಪೇಮೆಂಟ್ ಗಿರಾಕಿಗಳು ಅದಾವು ಕರ್ನಾಟಕದಲ್ಲಿ. ದೇಶನ್ಯಾಗೂ ಅದಾವು. ಅಂಥವರ ಬಗ್ಗೆ ಹೆಚ್ಚು ಇಂಪಾರ್ಟೆನ್ಸ್ ಕೊಡಬಾರದು. ತಿಂಗಳಾ ಅವರಿಗೆ ಇಷ್ಟು ಅಂತೇಳಿ ಸಂಬಳ ಹೋಗ್ತದ... ಒಟ್ಟು ಹಿಂದೂ ಧರ್ಮ, ಹಿಂದೂ ರಾಷ್ಟ್ರ, ಹಿಂದುತ್ವ, ಬಿಜೆಪಿ, ಆರೆಸ್ಸೆಸ್, ಬಜರಂಗದಳ, ಶ್ರೀರಾಮ ಸೇನೆ ಇವುಗಳ ವಿರುದ್ಧ ಬೈಲಿಕ್ಕೆ ಅವರಿಗೆ ಹಣ ಕೊಡ್ತಾರೆ. ಹಣ ತೆಗೊಂಡು ವದರ್ತಾವ್...’’ ಎಂದು ಮಾತನಾಡಿದವರು ಯಾರೋ ಹುಚ್ಚಾಸ್ಪತ್ರೆಯ ಮನೋರೋಗಿ ಎಂದು ಭಾವಿಸಬೇಡಿ. ಇಂತಹ ಬೈಗುಳವನ್ನು ಕೇಳಿಸಿಕೊಂಡ ಕೆಲವರು ‘‘ಅದು ಬೊಗಳುವ ನಾಯಿ. ನಿರ್ಲಕ್ಷಿಸಬೇಕು’’ ಎಂದು ಔದಾರ್ಯ ತೋರಿದರು. ನಾಯಿಗಳಿಗೆ ಅಸೀಮ ನಿಯತ್ತು ಮತ್ತು ನಿಷ್ಠೆ ಇರುತ್ತದೆ. ಅವುಗಳಿಗೆ ಅಪಾರ ಪ್ರಮಾಣದ ಕೃತಜ್ಞತಾ ಭಾವ ಇರುತ್ತದೆ. ಹಾಗೆ ಮಾತನಾಡಿದ ವ್ಯಕ್ತಿಯ ಹುಚ್ಚಾಟವನ್ನು ನಾಯಿಗೆ ಹೋಲಿಸಿ ನಿಯತ್ತಿನ ಪ್ರಾಣಿ ಸಂಕುಲಕ್ಕೆ ಅಪಮಾನ ಮಾಡುವುದು ಸರಿಯಲ್ಲ.
ಸಾಹಿತಿ ಮತ್ತು ಬುದ್ಧಿಜೀವಿಗಳನ್ನು ವಾಚಾಮಗೋಚರ ಬೈದು ತನ್ನದು ‘ಆಚಾರವಿಲ್ಲದ ನಾಲಿಗೆ’ ಎಂಬುದನ್ನು ಸ್ವಯಂ ಸಾಬೀತು ಪಡಿಸಿದ ವ್ಯಕ್ತಿ ಸಂಸದೀಯ ಪ್ರಜಾಪ್ರಭುತ್ವದ ಭಾಗವಾಗಿರುವ ‘ಜನಪ್ರತಿನಿಧಿ’. ಅಷ್ಟು ಮಾತ್ರವಲ್ಲ ಬಿಜೆಪಿಯ ಹಿರಿಯ ನಾಯಕ ಅಟಲ್ ಬಿಹಾರಿ ವಾಜಪೇಯಿ ಅವರ ಸಚಿವ ಸಂಪುಟದಲ್ಲಿ ಮಂತ್ರಿಯಾಗಿದ್ದವರು. ವಿಜಯಪುರ ನಗರ ಮತಕ್ಷೇತ್ರದ ಹಾಲಿ ಶಾಸಕ, ಕೇಂದ್ರದ ಮಾಜಿ ಸಚಿವ ಬಸನಗೌಡ ಪಾಟೀಲ್ ಯತ್ನಾಳ್ ತನ್ನಷ್ಟಕ್ಕೆ ‘ಫೈರ್ ಬ್ರ್ಯಾಂಡ್’ ಎಂದು ಭ್ರಮಿಸಿ ಅಕ್ಷರಶಃ ಅವಿವೇಕಿಯಂತೆ ಒದರಾಡುತ್ತಿದ್ದಾರೆ. ಯತ್ನಾಳ್ ಅವರು ಕಾಂಗ್ರೆಸ್ ಏಜೆಂಟರೆಂದು, ಪೇಮೆಂಟ್ ಗಿರಾಕಿಗಳೆಂದು ಕಟು ಮಾತುಗಳಲ್ಲಿ ಟೀಕಿಸಿದ್ದಾದರೂ ಯಾರನ್ನು? ಕನ್ನಡ ಸಾರಸ್ವತ ಲೋಕವನ್ನು ಸಮೃದ್ಧಗೊಳಿಸಿದ, ಈಗಲೂ ಸಂವೇದನಾಶೀಲರಾಗಿ ಕ್ರಿಯಾಶೀಲರಾಗಿರುವ ಪ್ರೊ. ಕೆ.ಎಸ್. ಭಗವಾನ್, ಡಾ. ಬರಗೂರು ರಾಮಚಂದ್ರಪ್ಪ, ಡಾ. ಕೆ. ಮರುಳಸಿದ್ದಪ್ಪ, ಡಾ. ಕುಂ. ವೀರಭದ್ರಪ್ಪ, ಡಾ. ಬಿ.ಟಿ. ಲಲಿತಾ ನಾಯಕ್, ಪ್ರೊ. ಎಸ್.ಜಿ. ಸಿದ್ದರಾಮಯ್ಯ, ಡಾ. ಪುರುಷೋತ್ತಮ ಬಿಳಿಮಲೆ, ಬಂಜಗೆರೆ ಜಯಪ್ರಕಾಶ್ ಮುಂತಾದವರು ‘ಸರ್ವ ಜನಾಂಗದ ಶಾಂತಿಯ ತೋಟ’ದ ಕನಸು ಕಂಡವರು. ಅವರು ಬರೆದ ಸಾಹಿತ್ಯ ಕೃತಿಗಳನ್ನು ಓದಿ ಅರ್ಥ ಮಾಡಿಕೊಳ್ಳುವ ಯೋಗ್ಯತೆಯೂ ಈ ಕೂಗುಮಾರಿ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗಿಲ್ಲ.
ವಿಜಯಪುರದ ಮಹಾಜ್ಞಾನಿ ಸಿದ್ದೇಶ್ವರ ಸ್ವಾಮಿಗಳ ನಾಲ್ಕೆಂಟು ಪುಸ್ತಕಗಳನ್ನು ಓದಿಕೊಂಡಿದ್ದರೆ ಯಾತ್ನಾಳ್ ಅವರ ನಾಲಿಗೆಗೆ ಉತ್ತಮ ಸಂಸ್ಕಾರ ಪ್ರಾಪ್ತವಾಗುತ್ತಿತ್ತು. ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ‘ಜಾತಿ ವಿನಾಶ’ ಕೃತಿಯನ್ನು ಓದಿಕೊಂಡಿದ್ದರೂ ಸಂಸದೀಯ ಪ್ರಜಾಪ್ರಭುತ್ವದಲ್ಲಿ ಹೇಗೆ ಟೀಕೆ ಮಾಡಬೇಕು ಎನ್ನುವುದು ಗೊತ್ತಾಗುತ್ತಿತ್ತು. ಮನುಪ್ರಣೀತ ಆರೆಸ್ಸೆಸ್ ಪ್ರತಿಪಾದಿತ ಹಿಂದುತ್ವವನ್ನು ಪ್ರಜ್ಞಾವಂತ ಸಾಹಿತಿ, ಬುದ್ಧಿಜೀವಿಗಳು ಯಾಕೆ ಟೀಕಿಸುತ್ತಾರೆ ಎಂಬ ಮಾತಿಗೆ ಡಾ. ಬಿ.ಆರ್. ಅಂಬೇಡ್ಕರ್ ಅವರ ‘ಜಾತಿ ವಿನಾಶ’ ಪುಸ್ತಕದಲ್ಲಿ ಸಾಕಷ್ಟು ಪುರಾವೆ ಸಿಗುತ್ತದೆ. ಅಟಲ್ ಬಿಹಾರಿ ವಾಜಪೇಯಿ, ಬಿ.ಎಸ್. ಯಡಿಯೂರಪ್ಪ, ಆರೆಸ್ಸೆಸ್ ಮತ್ತು ಸಂಘ ಪಾರಿವಾರದ ಅನೇಕ ಹಿರಿಯ ಮುಖಂಡರು ಹಲವು ದಶಕಗಳಿಂದ ಸಾರ್ವಜನಿಕ ಬದುಕಿನಲ್ಲಿದ್ದಾರೆ. ಸೈದ್ಧಾಂತಿಕ ರಾಜಕಾರಣ ಮಾಡುತ್ತಾ ಬಂದಿದ್ದಾರೆ. ಆದರೆ ಅವರು ಯಾರೂ ಯತ್ನಾಳ್ ಅವರ ಹಾಗೆ ‘ನೀಚ ಬುದ್ಧಿಯ ನಾಲಿಗೆ’ಯನ್ನು ಬೇಕಾಬಿಟ್ಟಿಯಾಗಿ ಹರಿಬಿಟ್ಟಿರಲಿಲ್ಲ. ಸಾಹಿತಿ ಮತ್ತು ಬುದ್ಧಿಜೀವಿಗಳು ಮೂಲತಃ ಬಂಡುಕೋರರು. ಅನ್ಯಾಯ, ಅಸಮಾನತೆಯ ವಿರುದ್ಧ ಸದಾ ಪ್ರತಿಭಟನೆಯನ್ನು ಮಾಡುತ್ತಾ ಬಂದವರು. ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಸಂವಿಧಾನವೇ ಅವರಿಗೆ ಮೂಲಭೂತ ಹಕ್ಕಾಗಿ ನೀಡಿದೆ. ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಲ್ಲಿ ಸಾಹಿತಿ-ಬುದ್ಧಿಜೀವಿಗಳು ವ್ಯಕ್ತಪಡಿಸುವ ಅಭಿಪ್ರಾಯ, ವಿಚಾರಗಳನ್ನು ಎಲ್ಲರೂ ಒಪ್ಪಿಕೊಳ್ಳಲೇ ಬೇಕೆಂಬ ನಿಯಮಗಳಿಲ್ಲ. ಮರು ಉತ್ತರ ನೀಡುವ, ಅಭಿಪ್ರಾಯ ಭೇದ ವ್ಯಕ್ತಪಡಿಸುವ ಸ್ವಾತಂತ್ರ್ಯ ಉಳಿದವರು ಹೊಂದಿದ್ದಾರೆ. ಪ್ರಜಾಪ್ರಭುತ್ವದ ಸೌಂದರ್ಯ ಇರುವುದೇ ಅರ್ಥಪೂರ್ಣ ಸಂವಾದ-ವಾಗ್ವಾದ ನಡೆಸುವಲ್ಲಿ. ಈ ದೇಶದಲ್ಲಿ ಬಿಜೆಪಿ, ಆರೆಸ್ಸೆಸ್ ಮಾತ್ರವಲ್ಲ ಕಾಂಗ್ರೆಸ್, ಕಮ್ಯುನಿಸ್ಟ್ ಪಕ್ಷಗಳೂ ಸಾಕಷ್ಟು ಪ್ರತಿರೋಧ ಎದುರಿಸಿವೆ.
ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ಮತ್ತು ಅದರ ಪ್ರಶ್ನಾತೀತ ನಾಯಕಿ ಶ್ರೀಮತಿ ಇಂದಿರಾಗಾಂಧಿಯವರು ಅಕ್ಷರಶಃ ‘ಖಳನಾಯಕ’ ಸ್ಥಾನದಲ್ಲಿದ್ದರು. ಆಗ ಜಯಪ್ರಕಾಶ್ ನಾರಾಯಣ್ ಸೇರಿದಂತೆ ಜನತಾ ಪರಿವಾರದ ಹಿರಿಯ ಮುಖಂಡರು, ಹಿರಿಯ ಸಮಾಜವಾದಿಗಳು ಅಷ್ಟೇ ಏಕೆ, ಈ ದೇಶದ ಸಾಹಿತಿ, ಬುದ್ಧಿಜೀವಿಗಳು ತುರ್ತು ಪರಿಸ್ಥಿತಿ ಹೇರಿದ ಇಂದಿರಾಗಾಂಧಿಯವರ ವಿರುದ್ಧ ಕಟುವಾಗಿ ಟೀಕಿಸಿದ್ದರು. ಅಷ್ಟು ಮಾತ್ರವಲ್ಲ ಅವರ ವಿರುದ್ಧ ಬಹುದೊಡ್ಡ ಜನಾಂದೋಲನವನ್ನೇ ರೂಪಿಸಿದ್ದರು. ತುರ್ತು ಪರಿಸ್ಥಿತಿಯ ಸಮಯದಲ್ಲಿ ಕರ್ನಾಟಕದ ಅಸಂಖ್ಯಾತ ಬುದ್ಧಿಜೀವಿಗಳು ಬೀದಿಗಿಳಿದು ಹೋರಾಟ ಮಾಡಿದ್ದರು. ಹಲವರು ತುರ್ತು ಪರಿಸ್ಥಿತಿ ವಿರೋಧಿಸಿ ಜೈಲುವಾಸ ಅನುಭವಿಸಿದ್ದಾರೆ. ಆಗ ಸಾಹಿತಿ, ಬುದ್ಧಿಜೀವಿಗಳಿಗೆ ಯಾರೂ ‘ಪೇಮೆಂಟ್’ ಮಾಡಿರಲಿಲ್ಲ. ಕರ್ನಾಟಕದ ಬಹುಪಾಲು ಸಾಹಿತಿ, ಬುದ್ಧಿಜೀವಿಗಳು ಬುದ್ಧ, ಬಸವ, ಗಾಂಧಿ, ಅಂಬೇಡ್ಕರ್ ಅವರ ತತ್ವಾದರ್ಶಗಳಲ್ಲಿ ನಂಬಿಕೆ ಇಟ್ಟು ಬರಹ ಮಾಡುತ್ತಿದ್ದಾರೆ. ಈ ನಾಡಿನ ಸಾಹಿತಿ, ಬುದ್ಧಿಜೀವಿಗಳನ್ನು ಯಾರಾದರೂ ಸೈದ್ಧಾಂತಿಕವಾಗಿ ವಿರೋಧಿಸುತ್ತಾರೆಂದರೆ ಅವರಿಗೆ ಬುದ್ಧ, ಬಸವ, ಗಾಂಧಿ, ಅಂಬೇಡ್ಕರ್ ಅವರ ತತ್ವಾದರ್ಶಗಳಲ್ಲಿ ನಂಬಿಕೆ ಇಲ್ಲವೆಂದೇ ಅರ್ಥ. ಹಾಗಂತ ಸಾಹಿತಿ, ಬುದ್ಧಿಜೀವಿಗಳು ಪ್ರಶ್ನಾತೀತರೇನಲ್ಲ. ಅವರ ನಡೆಯೊಂದು ಪರಿ, ನುಡಿಯೊಂದು ಪರಿ ಎಂದೆನಿಸಿದಾಗ ಯಾರು ಬೇಕಾದರೂ ಸೈದ್ಧಾಂತಿಕ ನೆಲೆಯಲ್ಲಿ ಟೀಕಿಸಬಹುದು.
ಬಸನಗೌಡ ಪಾಟೀಲ್ ಯತ್ನಾಳ್ ಅವರು ಸಾಹಿತಿ, ಬುದ್ಧಿಜೀವಿಗಳು ಕಾಂಗ್ರೆಸ್ ಪಕ್ಷದಿಂದ ಪ್ರತೀ ತಿಂಗಳು ಸಂಬಳ ಪಡೆದು ಬಿಜೆಪಿ, ಆರೆಸ್ಸೆಸ್ ಮತ್ತು ಸಂಘ ಪರಿವಾರದ ಸಂಘಟನೆಗಳ ವಿರುದ್ಧ ಮಾತನಾಡುತ್ತಾರೆ ಎಂದು ಗಂಭೀರ ಸ್ವರೂಪದ ಆರೋಪ ಮಾಡಿದ್ದಾರೆ. ಹೇಗೋ ಬಸನ ಗೌಡ ಪಾಟೀಲರು ಕಾಂಗ್ರೆಸ್‌ನ ಎಂ.ಬಿ. ಪಾಟೀಲ್‌ರವರಿಗೆ ಆತ್ಮೀಯರು. ಕಾಂಗ್ರೆಸ್ ಪಕ್ಷ ಯಾವ್ಯಾವ ಸಾಹಿತಿ, ಬುದ್ಧಿಜೀವಿಗಳಿಗೆ ಪ್ರತೀ ತಿಂಗಳು ಎಷ್ಟು ಸಂಬಳ ನೀಡಿದೆ ಎಂಬ ಮಾಹಿತಿ ಪಡೆದು ಮಾಧ್ಯಮಗಳಲ್ಲಿ ಜಾಹೀರು ಮಾಡಬಹುದಲ್ಲ. ಅಧಿಕೃತ ದಾಖಲೆಗಳೊಂದಿಗೆ ಮಾತನಾಡಲು ಕಲಿತರೆ ಬಸನಗೌಡರು ಮುಂದೊಂದು ದಿನ ವಿರೋಧ ಪಕ್ಷದ ನಾಯಕನಾದರೆ ಅನುಭವ ಅನುಕೂಲಕ್ಕೆ ಬರುತ್ತದೆ. ಸಾಹಿತಿ, ಬುದ್ಧಿಜೀವಿಗಳಿಗೆ ಕಾಂಗ್ರೆಸ್ ಪಕ್ಷ ಪ್ರತೀ ತಿಂಗಳು ಸಂಬಳ ನೀಡಿದ್ದರ ಅಧಿಕೃತ ಮಾಹಿತಿ ಒದಗಿಸುವಲ್ಲಿ ಯತ್ನಾಳ್ ವಿಫಲರಾದರೆ ಆತ ಪ್ರತಿಪಕ್ಷ ನಾಯಕನಾಗಲು ಮಾತ್ರವಲ್ಲ, ಜನಪ್ರತಿನಿಧಿಯಾಗಿ ಮುಂದುವರಿಯುವ ಯೋಗ್ಯತೆ ಹೊಂದಿಲ್ಲವೆಂದೇ ಭಾವಿಸಬೇಕಾಗುತ್ತದೆ. ಯತ್ನಾಳ್ ಮಾತುಗಳನ್ನು ಕಾಂಗ್ರೆಸ್ ಪಕ್ಷ ಮತ್ತು ಸಿದ್ದರಾಮಯ್ಯ ನೇತೃತ್ವದ ಸರಕಾರ ಗಂಭೀರವಾಗಿ ಪರಿಗಣಿಸಿ ತನಿಖೆ ಮಾಡಿಸಬೇಕಾಗಿದೆ. ಕಾಂಗ್ರೆಸ್ ಪಕ್ಷದಿಂದ ಸಾಹಿತಿ, ಬುದ್ಧಿಜೀವಿಗಳು ಪ್ರತೀ ತಿಂಗಳು ಸಂಬಳ ಪಡೆದಿಲ್ಲ ಎನ್ನುವುದು ಸಾಬೀತಾದರೆ ಬಸನಗೌಡ ಪಾಟೀಲರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಲು ಕಾನೂನು ಕ್ರಮಕ್ಕೆ ಮುಂದಾಗಬೇಕು.
‘‘ಸಾಹಿತಿ, ಬುದ್ಧಿಜೀವಿಗಳು ಜೀವ ಬೆದರಿಕೆಯ ಕಾರಣ ತೋರಿಸಿ ಸರಕಾರದಿಂದ ಗನ್‌ಮ್ಯಾನ್ ಪಡೆದುಕೊಂಡಿದ್ದಾರೆ. ಗನ್‌ಮ್ಯಾನ್‌ಗಳಿಗೆ ಚಹಾ ಕೊಡಿಸುವ ಯೋಗ್ಯತೆ ಇಲ್ಲ’’ ಎಂದು ಮೂದಲಿಸಿದ್ದಾರೆ. ಕಾಂಗ್ರೆಸ್ ಪಕ್ಷದಿಂದ ಪ್ರತೀ ತಿಂಗಳು ಪೇಮೆಂಟ್ ಪಡೆಯುವ ಸಾಹಿತಿ, ಬುದ್ಧಿಜೀವಿಗಳು ಚಹಾ-ತಿಂಡಿ ಕೊಡಿಸಲಾರದಷ್ಟು ಗತಿಗೇಡಿಗಳು ಹೇಗಾಗುತ್ತಾರೆ? ಯತ್ನಾಳ್ ಅವರ ಮಾತಿನಲ್ಲೇ ತಾಳಮೇಳ ಇಲ್ಲ. ಸಾಹಿತಿ, ಬುದ್ಧಿಜೀವಿಗಳನ್ನು ತಾತ್ವಿಕವಾಗಿ, ಸೈದ್ಧಾಂತಿಕ ನೆಲೆಯಲ್ಲಿ ಪ್ರಬುದ್ಧವಾಗಿ ವಿಮರ್ಶೆ ಮಾಡುವ ಬೌದ್ಧಿಕ ಸಾಮರ್ಥ್ಯ ಯತ್ನಾಳ್ ಅವರಿಗೆ ಇಲ್ಲದಿರುವುದರಿಂದ ಫ್ಯೂಡಲ್ ಪರಿಭಾಷೆಯಲ್ಲಿ ಅವಿವೇಕಿಯಂತೆ ಪ್ರತಿಕ್ರಿಯೆ ವ್ಯಕ್ತಪಡಿಸುತ್ತಾರೆ. ಅಷ್ಟಕ್ಕೂ ಬಸನಗೌಡ ಪಾಟೀಲ್ ಯತ್ನಾಳ್ ಅವರು ಸೈದ್ಧಾಂತಿಕ ಬದ್ಧತೆಯ ಕಾರಣಕ್ಕೆ ಸಾಹಿತಿ, ಬುದ್ಧಿಜೀವಿಗಳನ್ನು ಟೀಕಿಸುತ್ತಿಲ್ಲ. ಯಾರನ್ನೂ ಮೆಚ್ಚಿಸಲು, ಯಾರಿಗೂ ಚಮಚಾಗಿರಿ ಮಾಡಲು ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಇಂತಹ ಕೂಗುಮಾರಿಗಳನ್ನು ಬಿಜೆಪಿಯಲ್ಲಿನ ಕೆಲವರು ಬೆಂಬಲ ನೀಡಿ ಸಾಕಿರುತ್ತಾರೆ. ಹಾಗೆ ನೋಡಿದರೆ, ಯತ್ನಾಳ್ ಅವರನ್ನು ಪ್ರಹ್ಲಾದ್ ಜೋಶಿ ಬಿಜೆಪಿಯ ರಾಜ್ಯಾಧ್ಯಕ್ಷರಾಗಿದ್ದಾಗ ಪಕ್ಷದಿಂದ ಹೊರಹಾಕಲಾಗಿತ್ತು. ದಿಕ್ಕುಗಾಣದೆ ಎಚ್.ಡಿ. ದೇವೇಗೌಡರ ಜಾತ್ಯತೀತ ಜನತಾದಳ ಸೇರಿಕೊಂಡಿದ್ದರು. ಇಡೀ ಪಂಚಮಸಾಲಿ ಯತ್ನಾಳ್ ಹಿಂದೆ ಇದೆ ಎಂದು ಭಾವಿಸಿ ದೇವೇಗೌಡರು ಈತನನ್ನು ಜೆಡಿಎಸ್‌ನ ಕಾರ್ಯಾಧ್ಯಕ್ಷನನ್ನಾಗಿಸಿದ್ದರು.
ಬೇರೆ ಪಕ್ಷಕ್ಕೆ ಹೋಗಿದ್ದ ಬಸನಗೌಡ ಪಾಟೀಲ್ ಯತ್ನಾಳ್‌ರನ್ನು ಬಿಜೆಪಿಯವರು ಸಂಪೂರ್ಣ ನಿರ್ಲಕ್ಷಿಸಿದ್ದರು. ಬಹುಪಾಲು ಬಿಜೆಪಿಯ ಸ್ಥಳೀಯ ನಾಯಕರು ಯತ್ನಾಳ್ ಪಕ್ಷಕ್ಕೆ ಬರುವುದನ್ನು ತೀವ್ರವಾಗಿ ವಿರೋಧಿಸಿದ್ದರು. ಪ್ರಹ್ಲಾದ್ ಜೋಶಿ ಮತ್ತವರ ಟೀಮ್ ಯತ್ನಾಳ್ ಅವರನ್ನು ನಖಶಿಖಾಂತ ದ್ವೇಷಿಸುತ್ತಿದ್ದರು. ಅಂತಹ ಸಂದರ್ಭದಲ್ಲಿ ಯತ್ನಾಳ್ ಪರ ವಕಾಲತ್ತು ವಹಿಸಿ ಮತ್ತೆ ಪಕ್ಷಕ್ಕೆ ಸೇರಿಸಿಕೊಂಡವರು ಬಿ.ಎಸ್. ಯಡಿಯೂರಪ್ಪ ಅವರು. ೨೦೧೮ರ ವಿಧಾನಸಭೆಯ ಚುನಾವಣೆಯಿಂದ ಯಡಿಯೂರಪ್ಪ ಆಪರೇಷನ್ ಕಮಲದ ಮೂಲಕ ಮುಖ್ಯಮಂತ್ರಿ ಹುದ್ದೆ ಅಲಂಕರಿಸುವವರೆಗೆ ಯತ್ನಾಳ್ ಅವರ ಪರವಾಗಿದ್ದರು. ಯಾವಾಗ ಈತನಿಗೆ ಯಡಿಯೂರಪ್ಪ ಸಚಿವ ಸಂಪುಟದಲ್ಲಿ ಸ್ಥಾನ ಸಿಗಲಿಲ್ಲವೋ ಆಗ ಮತ್ತೆ ಕೂಗುಮಾರಿಯ ಕಾಯಕ ಶುರುಮಾಡಿದ್ದರು. ಯಡಿಯೂರಪ್ಪ ಮತ್ತವರ ಮಗ ವಿಜಯೇಂದ್ರ ವಿರುದ್ಧ ನಾಲಿಗೆ ಹರಿ ಬಿಡ ತೊಡಗಿದರು. ಇವರು ಸಿಎಂ ಆ್ಯಂಡ್ ಸನ್ಸ್ ವಿರುದ್ಧ ವಾಚಾಮಗೋಚರವಾಗಿ ಬೈಯ ತೊಡಗಿದ್ದರಿಂದ ಬಿಜೆಪಿಯ ಕೆಲವರಿಗೆ ಅತ್ಯಂತ ‘ಸಂತೋಷ’ವಾಗ ತೊಡಗಿತು. ಇದರಿಂದ ಉತ್ತೇಜಿತಗೊಂಡು ಮತ್ತಷ್ಟು ನಾಲಿಗೆಗೆ ಸಾಣೆ ಹಿಡಿದು ಝಳಪಿಸತೊಡಗಿದರು. ಹಾಗೆ ನೋಡಿದರೆ; ಯಡಿಯೂರಪ್ಪ ಅವರಂತಹ ಹಿರಿಯ ನಾಯಕನ ವಿರುದ್ಧ ಟೀಕಿಸಿದಾಗ ಪಕ್ಷ ಮುಲಾಜಿಲ್ಲದೆ ಕ್ರಮ ಜರುಗಿಸಬೇಕಿತ್ತು. ಯತ್ನಾಳ್ ನಾಲಿಗೆ ನೀಚ ಬುದ್ಧಿಯ ಬಿಡದೆ ಹೋದಾಗ ಮೋದಿ, ಅಮಿತ್ ಶಾ ಅವರು ಕರೆದು ಎಚ್ಚರಿಕೆ ನೀಡಬೇಕಾಗಿತ್ತು.
ಯತ್ನಾಳ್ ಅವರ ಸಂಸ್ಕಾರ ಹೀನ ನಾಲಿಗೆ ಯಡಿಯೂರಪ್ಪ ಮತ್ತವರ ಮಗನ ವಿರುದ್ಧ ಕೀಳು ಮಟ್ಟದ ಭಾಷೆಯಲ್ಲಿ ಟೀಕಿಸುತ್ತಿರುವುದನ್ನು ಸಂತೋಷ್‌ಬಣ ಎಂಜಾಯ್ ಮಾಡಿದ್ದರ ಪರಿಣಾಮವಾಗಿ ಆತನ ಹುಂಬತನ ಕುಮ್ಮಕ್ಕು ಪಡೆಯಿತು. ಯಡಿಯೂರಪ್ಪ ಸಂಪುಟಕ್ಕೆ ಮುರುಗೇಶ್ ನಿರಾಣಿ ಅವರು ಸೇರಿದ ಮೇಲಂತೂ ನಾಲಿಗೆ ನಂಜುಮಯವಾಯಿತು. ‘ಸಂತೋಷ’ಪಡುವವರ ಸಂಖ್ಯೆ ಹೆಚ್ಚಾದಂತೆ ಯತ್ನಾಳ್ ಚಮಚಾಗಿರಿ ಜೋರಾಯಿತು. ಕೂಡಲಸಂಗಮದ ಜಯಮೃತ್ಯುಂಜಯ ಸ್ವಾಮೀಜಿಯವರು ಪಂಚಮಸಾಲಿ ಮೀಸಲಾತಿ ಹೋರಾಟದ ನೇತೃತ್ವ ಯತ್ನಾಳ್ ಹೆಗಲಿಗೆ ಹೊರಿಸಿದ ಮೇಲಂತೂ ಈತನ ಆಟಾಟೋಪ ಮುಗಿಲು ಮುಟ್ಟಿತು. ಈಗ ನಾಲಿಗೆ ನೀಚಾತಿನೀಚ ಬುದ್ಧಿಯ ಮಟ್ಟ ದಾಟಿದೆ. ಸಾಹಿತಿ, ಬುದ್ಧಿಜೀವಿಗಳ ಒಡನಾಟದಲ್ಲಿ ಬೆಳೆದ, ಅವರ ಪ್ರಾಮುಖ್ಯತೆಯನ್ನು ಬಲ್ಲ ಜಯಮೃತ್ಯುಂಜಯ ಸ್ವಾಮೀಜಿಯವರೇ ಯತ್ನಾಳ್ ನಾಲಿಗೆಗೆ ಉತ್ತಮ ಸಂಸ್ಕಾರ ಮತ್ತು ದೀಕ್ಷೆ ನೀಡಬೇಕು.
ನಾಡಿನ ಹಿರಿಯ ಸಾಹಿತಿ ದಿ. ಪ್ರೊ. ಚಂದ್ರಶೇಖರ ಪಾಟೀಲರು ತುರ್ತು ಪರಿಸ್ಥಿತಿಯಲ್ಲಿ ಸೆರೆಮನೆ ವಾಸ ಅನುಭವಿಸಿ ಬಂದಿದ್ದರು. ಇಂದಿರಾಗಾಂಧಿಯವರ ಸರ್ವಾಧಿಕಾರಿ ಧೋರಣೆ ವಿರೋಧಿಸಿ ನಾಟಕ ಮತ್ತು ಕವಿತೆ ಬರೆದಿದ್ದರು. ಹಾಗೆಯೇ ಹಿಂದುತ್ವದ ಹೆಸರಿನ ಮತೀಯ ರಾಜಕಾರಣವನ್ನು ಟೀಕಿಸುತ್ತಿದ್ದರು. ಬೆದರಿಕೆ ಕರೆ ಬಂದದ್ದರಿಂದ ಅವರಿಗೂ ಗನ್‌ಮ್ಯಾನ್ ಸೆಕ್ಯೂರಿಟಿ ಒದಗಿಸಿದ್ದರು. ಕರ್ನಾಟಕ ವಿಶ್ವವಿದ್ಯಾನಿಲಯದಲ್ಲಿ ಆಂಗ್ಲ ಪ್ರಾಧ್ಯಾಪಕರಾಗಿದ್ದ ಅವರು ನಿವೃತ್ತಿ ವೇತನದಲ್ಲಿ ಬದುಕು ಸಾಗಿಸುತ್ತಿದ್ದರು. ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದಾಗ ಸಣ್ಣ ಸ್ಥಾನಮಾನಕ್ಕೂ ಆಸೆ ಪಟ್ಟವರಲ್ಲ. ದಯೆಯೇ ಮೂಲವಾದ ಧರ್ಮವನ್ನು, ಸಕಲರಿಗೆ ಲೇಸು ಬಯಸುವ ಧರ್ಮವನ್ನು ಬಸವಣ್ಣನವರೇ ಪ್ರತಿಪಾದಿಸಿದ್ದಾರೆ. ಯತ್ನಾಳ್ ಅವರ ನಾಲಿಗೆ ಮತ್ತು ಬುದ್ಧಿ ರಿಪೇರಿಯಾಗಬೇಕಾದರೆ ಅವರಿಗೆ ವಚನ ಸಾಹಿತ್ಯದ ಓದಿನ ಸಂಸ್ಕಾರ ನೀಡಬೇಕು.