ಸೌಹಾರ್ದ ಬದುಕು ಮತ್ತು ಮತೀಯ ರಾಜಕಾರಣ

Update: 2023-08-19 03:55 GMT

ಭಾರತ ಬಹು ಸಂಸ್ಕೃತಿ, ಬಹುಭಾಷಿಕ ಹಾಗೂ ಬಹು ಮತಪಂಥಗಳ ದೇಶ. ಬಹುತ್ವವೇ ಭಾರತದ ವಿಶೇಷ. ‘ವೈವಿಧ್ಯತೆಯಲ್ಲಿ ಏಕತೆ’ ಎಂಬುದು ಭಾರತದಂತಹ ದೇಶಕ್ಕೆ ಹೇಳಿ ಮಾಡಿಸಿದ ಪದಪುಂಜ. ಭಾರತದ ಸ್ವಾತಂತ್ರ್ಯ ಚಳವಳಿಯಲ್ಲಿ ಹಿಂದೂ, ಮುಸ್ಲಿಮ್, ಕ್ರಿಶ್ಚಿಯನ್, ಜೈನ್ ಸೇರಿದಂತೆ ಎಲ್ಲಾ ಧರ್ಮ, ಮತಪಂಥಗಳ ಜನ ಸಮುದಾಯಗಳು ಕ್ರಿಯಾಶೀಲವಾಗಿ ತೊಡಗಿಸಿಕೊಂಡಿದ್ದವು. ಎಲ್ಲಾ ಧರ್ಮೀಯ ಮತ್ತು ಭಾಷಿಕರ ತ್ಯಾಗ, ಬಲಿದಾನದಿಂದ ಭಾರತಕ್ಕೆ ಸ್ವಾತಂತ್ರ್ಯ ಲಭಿಸಿದೆ. ಸ್ವಾತಂತ್ರ್ಯ ಪೂರ್ವ ಭಾರತದಲ್ಲಿ ಬಡತನ, ಅಸ್ಪಶ್ಯತೆ, ನಿರುದ್ಯೋಗ ತಾಂಡವವಾಡುತ್ತಿದ್ದವು. ಆದರೆ ಸೌಹಾರ್ದ ಬದುಕು, ಪರಸ್ಪರ ಪ್ರೀತಿ ವಿಶ್ವಾಸ ತೋರುವುದು ಭಾರತದ ಜ್ಞಾನ ಪರಂಪರೆಯಲ್ಲೇ ಅಂತರ್ಗತವಾಗಿತ್ತು. ಭಾರತದ ದಿನನಿತ್ಯದ ಬದುಕಿನ ನೇಯ್ಗೆಯಲ್ಲೇ ಸೌಹಾರ್ದದ ಎಳೆಗಳು ಸಹಜವಾಗಿಯೇ ಸೇರಿಕೊಂಡಿವೆ. ಭಾರತದ ಸಾಂಸ್ಕೃತಿಕ, ಆಧ್ಯಾತ್ಮಿಕ ಬದುಕಿನಲ್ಲಿ ಒಡಕಿಗೆ ಅವಕಾಶ ಇಲ್ಲ. ಎಲ್ಲಾ ಧರ್ಮಗಳು ಕೂಡಿ ಬಾಳುವುದರ ಮಹತ್ವವನ್ನೇ ಒತ್ತಿ ಹೇಳಿವೆ.

ಭಾರತದ ಸ್ವಾತಂತ್ರ್ಯ ಚವಳಿಯಲ್ಲಿ ಮುಂಚೂಣಿಯಲ್ಲಿದ್ದ ಮಹಾತ್ಮಾ ಗಾಂಧೀಜಿಯವರು- ‘‘ಧರ್ಮದ ಮೂಲ ‘ಒಟ್ಟುಗೂಡಿಸುವುದು’, ಸಂಸ್ಕೃತದ ‘ಧರ್ಮ’ ಶಬ್ದದ ಅರ್ಥ ಧಾರಣೆ ಮಾಡುವುದು, ಎತ್ತಿ ಹಿಡಿಯುವುದು. ವ್ಯಕ್ತಿಯನ್ನು ಅದು ಧಾರಣೆ ಮಾಡುವಂತೆ ಬೇರಾವುದೂ ಮಾಡುವುದಿಲ್ಲ. ಅದು ಆಳದಲ್ಲಿರುವ ಮೂಲಭೂತ ನೈತಿಕತೆ. ನೈತಿಕತೆ ಮನುಷ್ಯನಲ್ಲಿ ಆವಿರ್ಭವಿಸಿದಾಗ ಅದು ಧರ್ಮವಾಗುತ್ತದೆ. ಏಕೆಂದರೆ ಅದು ಪರೀಕ್ಷಾ ಸಮಯದಲ್ಲಿ ಅವನನ್ನು ಒಟ್ಟುಗೂಡಿಸುತ್ತದೆ. ಧಾರಣೆ ಮಾಡುತ್ತದೆ. ಎತ್ತಿ ಹಿಡಿಯುತ್ತದೆ. ನಾನಾ ಧರ್ಮಗಳು ಮರದ ಎಲೆಗಳ ಹಾಗೆ. ಯಾವ ಎರಡು ಎಲೆಗಳೂ ಒಂದೇ ಸಮ ಇಲ್ಲ. ಆದರೂ ಅವುಗಳ ನಡುವೆ ಅಥವಾ ಅವು ಬೆಳೆಯುವ ಕೊಂಬೆಗಳ ನಡುವೆ ಯಾವ ಹಗೆತನವೂ ಇಲ್ಲ. ಹಾಗಿದ್ದರೂ ವಿವಿಧತೆಯಲ್ಲಿ ಏಕತೆ ಇದೆ. ಅದನ್ನು ದೈವ ಸೃಷ್ಟಿಯಲ್ಲಿ ಕಾಣುತ್ತೇವೆ’’ ಎಂದು ಧರ್ಮಗಳ ವಿಶಾಲ ದೃಷ್ಟಿಕೋನವನ್ನು ಸ್ಪಷ್ಟ ಮಾತುಗಳಲ್ಲಿ ಖಚಿತಪಡಿಸಿದ್ದಾರೆ. ಗಾಂಧೀಜಿಯವರೂ ಗುಜರಾತ್ ಮೂಲದವರೇ. ಸೌಹಾರ್ದ ಮತ್ತು ಒಟ್ಟುಗೂಡಿದ ಬದುಕಿಗಾಗಿ ಹಂಬಲಿಸಿ ಮತೀಯವಾದಿಯ ಗುಂಡಿಗೆ ಬಲಿಯಾದ ದಿವ್ಯ ಚೇತನ.

ಭಾರತೀಯ ಸಾಂಸ್ಕೃತಿಕ, ಧಾರ್ಮಿಕ, ಆಧ್ಯಾತ್ಮಿಕ ಹಾಗೂ ನೈತಿಕ ಬದುಕಿಗೆ ಪ್ರೇರಣಾದಾಯಕ ಶಕ್ತಿ ನೀಡಿದ ವೇದ, ಉಪನಿಷತ್, ಆಗಮಗಳು ಕೂಡಿ ಬದುಕುವುದರ ಮಹತ್ವವನ್ನೇ ಪ್ರತಿಪಾದಿಸಿವೆ. ಒಡಕಿನ, ತಾರತಮ್ಯದ ಹಾಗೂ ಅಮಾನವೀಯ ತತ್ವಗಳನ್ನು ಪ್ರತಿಪಾದಿಸಿದ ಮನುಸ್ಮತಿಯನ್ನು ಸಹನಶೀಲ ಮನಸ್ಸುಗಳು ಎಂದೋ ತಿರಸ್ಕರಿಸಿವೆ. ಬಾಬಾ ಸಾಹೇಬ್ ಅಂಬೇಡ್ಕರ್ ಅವರಂತೂ ಮನುಸ್ಮತಿಯನ್ನು, ಮನುಪ್ರಣೀತ ಹಿಂದೂ ಧರ್ಮವನ್ನು ಸರಾಸಗಟಾಗಿ ತಿರಸ್ಕರಿಸಿದ್ದಾರೆ. ಅಂಬೇಡ್ಕರ್ ಅವರ ‘ಜಾತಿ ವಿನಾಶ’ ಕೃತಿಯನ್ನು ಮನವಿಟ್ಟು ಓದುವ ಯಾವೊಬ್ಬನೂ ಮತೀಯ ರಾಜಕಾರಣವನ್ನು ಬೆಂಬಲಿಸಲಾರ. ಭಾರತದ ಧಾರ್ಮಿಕ, ನೈತಿಕ ಆರೋಗ್ಯವನ್ನು ಸರಿಪಡಿಸುವ ಚಿಕಿತ್ಸಾ ವಿಧಾನವನ್ನು ಅಂಬೇಡ್ಕರ್ ಅವರ ‘ಜಾತಿ ವಿನಾಶ’ ಕೃತಿಯಲ್ಲಿ ಕಾಣಬಹುದಾಗಿದೆ. ಬಾಯಿ ತೆಗೆದರೆ ‘ಧರ್ಮ ರಕ್ಷಣೆ’ಯ ಮಾತುಗಳನ್ನಾಡುವ, ವೀರಾವೇಶದಿಂದ ಅಬ್ಬರಿಸುವ ಪ್ರತಿಯೊಬ್ಬ ಮತೀಯವಾದಿ ಅಪ್ಪಟ ಮನುಷ್ಯನಾಗಬೇಕಾದರೆ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ‘ಜಾತಿ ವಿನಾಶ’ ಕೃತಿಯನ್ನು ಅಗತ್ಯವಾಗಿ ಓದಬೇಕು. ಸಂಘ ಪರಿವಾರದ ಹಿರಿಯರಿಗೆ ಅಂಬೇಡ್ಕರ್ ಅವರ ಬಗ್ಗೆ ಮನದಾಳದ ಗೌರವ-ಪ್ರೀತಿ ಇದ್ದಿದ್ದರೆ; ‘ಜಾತಿ ವಿನಾಶ’ ಕೃತಿಯನ್ನು ತನ್ನ ಎಲ್ಲಾ ಹಂತದ ಕಾರ್ಯಕರ್ತರಿಗೆ ಓದಿಸಿ ಮನನ ಮಾಡಿಸಬೇಕು.

ಭಾರತೀಯ ಧಾರ್ಮಿಕ ಪರಂಪರೆಯಲ್ಲಿ ಸಂಕುಚಿತ ಕಣ್ಣೋಟಗಳಿಗೆ, ಮತೀಯವಾದಿ ವಿಕೃತಿಗಳಿಗೆ ನೆಲೆಯೇ ಇಲ್ಲ. ಉಪನಿಷತ್ತಿನ ಕೆಲವು ಸಾಲುಗಳನ್ನು ಗಮನಿಸಿ. ‘ತಮಸೋಮ ಜ್ಯೋತಿರ್ಗಮಯ’ (ಕತ್ತಲೆಯಿಂದ ಬೆಳಕಿನೆಡೆಗೆ), ‘ವಸುದೈವ ಕುಟುಂಬಕಂ’ (ಜಗತ್ತೇ ಒಂದು ಕುಟುಂಬ), ‘ಸರ್ವೇ ಜನ ಸುಖಿನೋ ಭವಂತು’ (ಎಲ್ಲಾ ಜನರು ಸುಖವಾಗಿರಲಿ) ಎನ್ನುತ್ತವೆ. ಭಗವದ್ಗೀತೆಯ ಈ ಎರಡು ಶ್ಲೋಕಗಳನ್ನು ನೋಡಿ; ಮೋಕ್ಷ ಸನ್ಯಾಸ ಯೋಗ-೧೮ ಅಧ್ಯಾಯದ ೩೨ನೇ ಶ್ಲೋಕವು ‘‘ಎಲೈ ಅರ್ಜುನ ಯಾವುದು ತಮಸ್ಸಿನಿಂದ ಆವೃತವಾಗಿ ಅಧರ್ಮವನ್ನು ಧರ್ಮವೆಂದು ತಿಳಿಯುವುದೋ, ತಿಳಿಯಲ್ಪಡತಕ್ಕ ಸಮಸ್ತ ವಸ್ತುಗಳನ್ನು ವಿಪರೀತವಾಗಿ ತಿಳಿಯುತ್ತದೆಯೋ ಆ ಬುದ್ಧಿಯು ತಾಮಸಿಕವು’’ ಎಂದು ಹೇಳುತ್ತದೆ. ಶ್ರೀಕೃಷ್ಣ ಅರ್ಜುನನಿಗೆ ಉಪದೇಶಿಸಿದ ಈ ನುಡಿಗಳನ್ನು ತುಸು ಬದಲಾಯಿಸಿ ಅರ್ಜುನ ಎಂಬಲ್ಲಿ ‘ನರೇಂದ್ರ ಮೋದಿ’ ಎಂದು ಅಥವಾ ‘ಸಂಘ ಪರಿವಾರದ ಸಮಸ್ತ ಸದಸ್ಯರೇ’ ಎಂದು ಓದಿಕೊಂಡರೆ ಮತೀಯವಾದ, ಧರ್ಮಾಂಧತೆಗೆ ಶಾಸ್ತ್ರ ಗ್ರಂಥಗಳಲ್ಲಿ ಅವಕಾಶವೇ ಇಲ್ಲ ಎಂಬುದು ಮನವರಿಕೆ ಮಾಡಿಕೊಟ್ಟಂತಾಗುತ್ತದೆ.

ಭಗವದ್ಗೀತೆಯ ೧೭ನೇ ಅಧ್ಯಾಯವಾದ ಶ್ರದ್ಧಾತ್ರಯ ವಿಭಾಗ ಯೋಗದ ೧೯ನೇ ಶ್ಲೋಕ ಹೀಗೆ ಹೇಳುತ್ತದೆ: ‘‘ಮೂಢ ಬುದ್ಧಿಯಿಂದ ತನಗೆ ಪೀಡೆಯನ್ನುಂಟು ಮಾಡುವುದರ ಮೂಲಕ ಅಥವಾ ಇತರರ ನಾಶಕ್ಕಾಗಿ ಯಾವ ತಪಸ್ಸು ಮಾಡಲ್ಪಡುವುದೋ ಅದು ತಾಮಸವೆಂದು ಹೇಳಲ್ಪಟ್ಟಿದೆ’’ ಎಂದು. ಈ ಶ್ಲೋಕವರಿತು, ಗುಜರಾತಿನಲ್ಲಿ ನಡೆದ ಕೋಮುಗಲಭೆ ಮತ್ತು ಹಿಂಸಾಚಾರ, ಸಾವು ನೋವನ್ನು-ತಾಮಸ ಪ್ರವೃತ್ತಿ ಎಂದು ಸ್ಪಷ್ಟವಾಗಿ ಖಂಡಿಸುತ್ತದೆ. ಮುಂಬೈಯ ಬೀಭತ್ಸ ಕೋಮು ಹಿಂಸಾಚಾರ, ಬಾಬರಿ ಮಸೀದಿ ಕೆಡವಿದ್ದು, ಇತ್ತೀಚಿನ ಮಣಿಪುರ ಜನಾಂಗೀಯ ಹಿಂಸಾಚಾರಗಳನ್ನು ಎಲ್ಲಾ ಧರ್ಮ ಮತ್ತು ಶಾಸ್ತ್ರ ಗ್ರಂಥಗಳು ಅಧರ್ಮವೆಂದು ಹೇಳುತ್ತವೆ. ಭಾರತೀಯ ಜನತಾ ಪಕ್ಷ ಮತ್ತು ಅದರ ಮೆದುಳಿನಂತಿರುವ ಸಂಘ ಪರಿವಾರಕ್ಕೆ ಭಾರತದ ಧಾರ್ಮಿಕತೆ, ಆಧ್ಯಾತ್ಮಿಕತೆ ಹಾಗೂ ಶ್ರೇಷ್ಠ ಧರ್ಮ ಗ್ರಂಥಗಳ ಬಗ್ಗೆ ಕಿಂಚಿತ್ತೂ ಗೌರವವಿಲ್ಲ ಎಂಬುದು ಸ್ವಯಂ ಸ್ಪಷ್ಟವಿದೆ. ಮನುಸ್ಮತಿಯೇ ಭಾರತದ ಪ್ರಾತಿನಿಧಿಕ ಧರ್ಮ ಗ್ರಂಥವೆಂದು ಬಿಜೆಪಿಯವರು ಮತ್ತು ಸಂಘ ಪರಿವಾರದವರು ಬಲವಾಗಿ ನಂಬಿದ್ದಾರೆ. ಹಾಗಾಗಿಯೇ ಭಾರತದ ನೈಜ ಧಾರ್ಮಿಕತೆ, ಆಧ್ಯಾತ್ಮಿಕತೆ ಹಾಗೂ ಅಪ್ಪಟ ಸೌಹಾರ್ದ ಪರಂಪರೆಯನ್ನು ನಾಶ ಮಾಡಲು ಪ್ರತಿನಿತ್ಯ ಪ್ರಯತ್ನಿಸುತ್ತಿರುತ್ತಾರೆ.

ಭಾರತೀಯ ಜನತಾ ಪಕ್ಷ ಮತ್ತು ಸಂಘ ಪರಿವಾರದವರಿಗೆ ಮತ ಧರ್ಮಗಳ ಹೆಸರಲ್ಲಿ ಭಾವನಾತ್ಮಕ ನೆಲೆಯ ರಾಜಕಾರಣ ಮಾಡಬೇಕಾಗಿದೆ. ಇವರಿಗೆ ಭಾರತೀಯರ ಬದುಕು ಹಸನಾಗಬೇಕೆಂಬುದರ ಬಗ್ಗೆ ಕಿಂಚಿತ್ ಕಾಳಜಿ ಇಲ್ಲ. ಸಮಭಾವದ, ಸರ್ವ ಜನಾಂಗದ ಶಾಂತಿಯ ತೋಟದಂತಿರುವ ಭವ್ಯ ಸುಂದರ ಭಾರತದ ನಿರ್ಮಾಣದ ಕನಸುಗಳಿಲ್ಲ. ಭಾರತದ ಧಾರ್ಮಿಕ, ಆಧ್ಯಾತ್ಮಿಕ, ನೈತಿಕ, ಸಾಂಸ್ಕೃತಿಕ ಪರಂಪರೆ ಬಗ್ಗೆ ಆಳದ ಕಾಳಜಿ ಇಲ್ಲ. ಭಾರತದ ವಿಭೂತಿ ಪುರುಷರ ಬಗ್ಗೆ, ಅಪ್ಪಟ ಮಾನವತೆ ಪ್ರತಿಪಾದಿಸುವ ಧರ್ಮ ಗ್ರಂಥಗಳ ಬಗ್ಗೆ ಗೌರವ ಭಾವನೆ ಇಲ್ಲ. ಮನುಸ್ಮತಿಯನ್ನು ಭಾರತೀಯ ಬದುಕಿನಲ್ಲಿ ಪ್ರತಿಷ್ಠಾಪಿಸಲು ಅವರಿಗೆ ರಾಜಕೀಯ ಅಧಿಕಾರ ಬೇಕು. ಭಾರತೀಯತೆ, ಹಿಂದೂ ಧರ್ಮ, ದೇಶಭಕ್ತಿ ಮುಂತಾದ ಪದಗಳನ್ನು ಬಳಸಿ ಭಾರತೀಯರನ್ನು, ಅದರಲ್ಲೂ ಬಹುಸಂಖ್ಯಾತ ಹಿಂದೂಗಳಲ್ಲಿ ಕೆಲವರನ್ನು ‘ಕುರಿಗಳಂತೆ’ ತಮ್ಮ ಯೋಜಿತ ಉದ್ದೇಶಕ್ಕೆ ಬಳಸಿಕೊಳ್ಳಲಾಗುತ್ತಿದೆ. ರಾಜಕೀಯ ಅಧಿಕಾರವನ್ನು ನಿರಂತರ ಉಳಿಸಿಕೊಳ್ಳಲು ಗುಜರಾತ್ ಮಾದರಿಯ ಮತೀಯ ರಾಜಕಾರಣದ ಪ್ರಯೋಗ ಸಿದ್ಧವಾಗಿದೆ. ಸಾಬೀತಾಗಿದೆ. ನರೇಂದ್ರ ಮೋದಿಯವರು ಗುಜರಾತಿನಲ್ಲಿ ನಿರಂತರ ನಿರಂಕುಶ ಆಡಳಿತ ನಡೆಸಿದರು.

೨೦೧೪ರಲ್ಲಿ ದೇಶದ ಚುಕ್ಕಾಣಿ ಹಿಡಿಯುವ ಕನಸು ಹೊತ್ತ ಮೋದಿಯವರು ಗುಜರಾತ್ ಮಾದರಿಯ ಮತೀಯ ರಾಜಕಾರಣವನ್ನು ತಾತ್ಕಾಲಿಕವಾಗಿ ಹಿಂದಕ್ಕೆ ತಳ್ಳಿದ್ದರು. ಕಾರಣ ಸ್ಪಷ್ಟ. ೨೦೦೯ರಲ್ಲಿ ಬಿಜೆಪಿ ಪ್ರಧಾನಿ ಅಭ್ಯರ್ಥಿಯಾದ ಲಾಲ್‌ಕೃಷ್ಣ ಅಡ್ವಾಣಿ ಅವರ ರಾಮಮಂದಿರ ನಿರ್ಮಾಣ ಅಭಿಯಾನದ ರಥಯಾತ್ರೆ ಹೀನಾಯವಾಗಿ ಮುಗ್ಗರಿಸಿತ್ತು. ಭಾರತದ ಪ್ರಜ್ಞಾವಂತ ಮತದಾರ ಗುಜರಾತ್ ಮಾದರಿಯ ಮತೀಯ ರಾಜಕಾರಣವನ್ನು ಒಪ್ಪಲಾರ ಎಂಬ ಕಟು ಸತ್ಯ ಅರಿತ ನರೇಂದ್ರ ಮೋದಿಯವರು ೨೦೧೪ರಲ್ಲಿ ತಂತ್ರಗಾರಿಕೆ ಬದಲಿಸಿದರು. ಅಣ್ಣಾ ಹಝಾರೆ ಮುಂತಾದ ಹೋರಾಟಗಾರರ ಚಳವಳಿಯ ಫಲವಾಗಿ ಆಗ ದೇಶದಲ್ಲಿ ಯುಪಿಎ ಆಡಳಿತ ವಿರೋಧಿ ಅಲೆಯು ರಭಸವಾಗಿ ಬೀಸುತ್ತಿತ್ತು. ಆಡಳಿತ ವಿರೋಧಿ ಅಲೆಯನ್ನು ಮತಗಳಾಗಿ ಪರಿವರ್ತನೆ ಮಾಡಲು ಮತೀಯ ರಾಜಕಾರಣದ ಅಗತ್ಯ ಇರಲಿಲ್ಲ. ಭಾರತೀಯರಿಗೆ ಭ್ರಷ್ಟಾಚಾರ ಮುಕ್ತ ಆಡಳಿತ ನೀಡುವ ಅಭಿವೃದ್ಧಿಯ ಕನಸುಗಳನ್ನು ಸಾಕಾರಗೊಳಿಸುವ ಭವ್ಯ ಭಾರತ ನಿರ್ಮಾಣದ ಕನಸು ಹೊತ್ತ ಹರಿಕಾರನ ಅಗತ್ಯವಿತ್ತು. ಆಡಳಿತ ವಿರೋಧಿ ಅಲೆ ಸೃಷ್ಟಿಸಿದ ಅಣ್ಣಾ ಹಝಾರೆ ಮುಂತಾದವರಿಗೆ ಅಧಿಕಾರದ ರಾಜಕಾರಣದ ಬಗ್ಗೆ ಸ್ಪಷ್ಟತೆ ಇರಲಿಲ್ಲ. ಜೊತೆಗೆ ಆ ತಂಡದಲ್ಲಿ ರಾಜಕಾರಣಕ್ಕೆ ಅಗತ್ಯವಾದ ಸೈದ್ಧಾಂತಿಕ ಸ್ಪಷ್ಟತೆ, ಒಗ್ಗಟ್ಟು ಎರಡೂ ಇರಲಿಲ್ಲ. ಹರಿಕಾರನ ಹುದ್ದೆ ಖಾಲಿ ಇತ್ತು. ‘ಸಬ್ ಕಾ ಸಾಥ್ ಸಬ್ ಕಾ ವಿಕಾಸ್’, ‘ಅಚ್ಛೇ ದಿನ್ ಆಯೆಗಾ’, ವಿದೇಶದಿಂದ ಕಪ್ಪು ಹಣ ತಂದು ಎಲ್ಲರ ಖಾತೆಗೆ ೧೫ ಲಕ್ಷ ರೂ. ಜಮಾ ಮಾಡುವ ಆಮಿಷ ತೋರಿದರು. ಭಾರತೀಯರಲ್ಲಿ ಬಣ್ಣ ಬಣ್ಣದ ಕನಸು ಬಿತ್ತಿದ ನರೇಂದ್ರ ಮೋದಿಯವರನ್ನು ಜನ ಬಲವಾಗಿ ನಂಬಿದರು. ಹೀಗಾಗಿ ಮೋದಿಯವರು ಪ್ರಧಾನಿ ಹುದ್ದೆಯನ್ನು ಅನಾಯಾಸವಾಗಿ ಅಲಂಕರಿಸಿದರು. ಹಾಗೆ ನೋಡಿದರೆ ಮೋದಿಯವರು ೨೦೧೪ರಿಂದ ೨೦೧೯ರ ಅಧಿಕಾರ ಅವಧಿಯಲ್ಲಿ ಗಮನಾರ್ಹ ಕೆಲಸ ಮಾಡಲೇ ಇಲ್ಲ. ಅಭಿವೃದ್ಧಿಯ ಹರಿಕಾರ ಆಗುವ ಮಾತು ದೂರವೇ ಉಳಿಯಿತು. ವಿದೇಶದಿಂದ ಕಪ್ಪು ಹಣ ಹೊರತಂದು ಭಾರತದ ಎಲ್ಲರ ಖಾತೆಗೆ ಜಮಾ ಮಾಡುವುದನ್ನು ಮೋದಿ ಮರೆತೇ ಬಿಟ್ಟರು. ಅಷ್ಟು ಸಾಲದ್ದಕ್ಕೆ ‘ನೋಟ್‌ಬ್ಯಾನ್’ ನಿರ್ಧಾರ ಮಾಡುವ ಮೂಲಕ, ಬಡವರು, ಮಧ್ಯಮ ವರ್ಗದವರು ಬೀದಿ ಪಾಲಾಗುವಂತೆ ಮಾಡಿದರು. ನೋಟ್ ಬ್ಯಾನ್ ಪ್ರಕರಣವನ್ನು ಜನಾಂದೋಲನವಾಗಿ ರೂಪಿಸುವಲ್ಲಿ ಕಾಂಗ್ರೆಸ್ ಮತ್ತು ಇನ್ನಿತರ ವಿರೋಧ ಪಕ್ಷಗಳು ಸಂಪೂರ್ಣ ವಿಫಲವಾದವು. ಕೋವಿಡ್ ಸನ್ನಿವೇಶವನ್ನು ಮೋದಿ ಸರಕಾರ ಸಮರ್ಪಕವಾಗಿ ನಿಭಾಯಿಸಲಿಲ್ಲ. ಅಪಾರ ಪ್ರಮಾಣದ ಜೀವಹಾನಿಗೆ ಸರಕಾರದ ಹೊಣೆಗೇಡಿತನವೇ ಕಾರಣವಾಯಿತು. ಮೋದಿ ಸರಕಾರದ ವಿರುದ್ಧ ಆಡಳಿತ ವಿರೋಧ ಪ್ರಬಲವಾಗಿತ್ತು. ಕಂಗಾಲಾದ ನರೇಂದ್ರ ಮೋದಿಯವರು ಪುಲ್ವಾಮಾ ದಾಳಿಯ ಬಗ್ಗೆ ರೋಚಕತೆ ಸೃಷ್ಟಿಸಿ ದಡ ತಲುಪಿದರು. ಮೋದಿ ವಿರೋಧಿ ಮಾತೆಂದರೆ ದೇಶ ವಿರೋಧಿ ನಡೆ ಎಂಬಂತೆ ಬಿಂಬಿಸಿಕೊಳ್ಳಲಾಯಿತು. ಆಡಳಿತ ವಿರೋಧಿ ಅಲೆಯನ್ನು ಮತಗಳನ್ನಾಗಿ ಪರಿವರ್ತಿಸಲು ಕಾಂಗ್ರೆಸ್ ಮತ್ತು ಇತರ ಪಕ್ಷಗಳಿಂದ ಸಾಧ್ಯವಾಗಲೇ ಇಲ್ಲ.

ಈಗ ಮೋದಿಯವರು ಮತ್ತೆ ಹತಾಶರಾಗಿದ್ದಾರೆ. ಅವರಿಗೆ ಸೋಲಿನ ಭೀತಿ ಬಲವಾಗಿ ಕಾಡುತ್ತಿದೆ. ಭಾರತೀಯರು, ಧರ್ಮ ಎಲ್ಲವೂ ನೆನಪಾಗುತ್ತಿದೆ. ಚರಿತ್ರೆ, ಇತಿಹಾಸ ಪುರಾಣಗಳು ನೆನಪಾಗುತ್ತಿವೆ. ಚರಿತ್ರೆಯ ಪುಟಗಳಲ್ಲಿನ ಗಾಯಗಳನ್ನು ನೆನಪು ಮಾಡಿ ಕೆರೆಯುವುದು, ಆನಂತರ ಅದರ ಮೇಲೆ ಮುಲಾಮು ಸವರುವುದು. ಉತ್ತರ ಪ್ರದೇಶ, ಮಧ್ಯ ಪ್ರದೇಶ ಸೇರಿದಂತೆ ಬಹುತೇಕ ಉತ್ತರದ ರಾಜ್ಯಗಳಲ್ಲಿ ಬಿಜೆಪಿ ಗೆಲುವಿನ ಸೂತ್ರವೇ ಮತೀಯ ರಾಜಕಾರಣವಾಗಿದೆ. ಮಣಿಪುರ ಹೊತ್ತಿ ಉರಿದರೂ, ಮಹಿಳೆಯರ ಮೇಲೆ ಅತ್ಯಾಚಾರವಾದರೂ ‘ಮೋದಿ ಅಂತರಾತ್ಮ’ ಕಂಗೆಡುವುದಿಲ್ಲ. ೨೦೨೪ರ ಚುನಾವಣೆ ಗೆಲುವಿನ ಮೇಲೆ ಕಣ್ಣಿಟ್ಟಿರುವ ಮೋದಿಗೆ ಯಾರ ಸಂಕಟ, ಆರ್ತನಾದವೂ ಕೇಳುವುದಿಲ್ಲ. ಜ್ಞಾನವಾಪಿ, ಕಾಮನ್ ಸಿವಿಲ್ ಕೋಡ್, ಮತಾಂತರ ಕಾಯ್ದೆ, ಮಂದಿರ ನಿರ್ಮಾಣ, ಎಲ್ಲಾ ಮಸೀದಿಗಳಲ್ಲಿ ಶಿವಲಿಂಗಗಳನ್ನು ಹುಡುಕುವುದು ಬಿಜೆಪಿ, ಆರೆಸ್ಸೆಸ್‌ನವರ ಪ್ರಧಾನ ಕಾಳಜಿಯಾಗಿದೆ.

ಕಳೆದ ೯ ವರ್ಷಗಳಲ್ಲಿ ಅದೆಷ್ಟು ಜನ ರೈತರು ಆತ್ಮಹತ್ಯೆ ಮಾಡಿಕೊಂಡರು? ಭಾರತದ ಬಡತನ ಪ್ರಮಾಣ ಎಷ್ಟಿದೆ, ನಿರುದ್ಯೋಗ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗಿದೆಯೇ? ಸರಕಾರಿ ಸ್ವಾಮ್ಯದ ಉದ್ದಿಮೆಗಳು ಖಾಸಗಿಯವರ ಪಾಲಾಗಿದೆ. ನೌಕರರ ಹಿತ ಕಾಪಾಡಲಾಗಿದೆಯೇ? ಸಮಾನ ಶಿಕ್ಷಣ ದೊರೆಯುತ್ತಿದೆಯೇ? ಭಾರತದ ಸಮಸ್ತ ಜನತೆ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆಯೇ? ದಿನನಿತ್ಯದ ಬದುಕಿನೊಂದಿಗೆ ಏಗುವುದೇ ದುಸ್ತರವಾಗಿರುವಾಗ ಕೋಮು ಗಲಭೆ, ಜನಾಂಗೀಯ ಹಿಂಸೆ, ಧರ್ಮ ದಂಗಲ್ ಅಗತ್ಯವಿದೆಯೇ? ಕೇಂದ್ರ ಸರಕಾರ ತಂಡ ಕೆಲಸವನ್ನು ಸಮರ್ಪಕವಾಗಿ ಕಾರ್ಯನಿರ್ವಹಿಸಿದ್ದರೆ ಬೆಲೆ ಏರಿಕೆ ಈ ಪ್ರಮಾಣದಲ್ಲಿ ಇರುತ್ತಿರಲಿಲ್ಲ. ಭಾರತದ ಸೌಹಾರ್ದ ಪರಂಪರೆಯನ್ನು ಹಾಳು ಮಾಡದೆ ಇದ್ದರೆ ಅದೂ ಪುಣ್ಯದ ಕೆಲಸವೇ. ರಾಜ ಧರ್ಮವನ್ನು ಅರಿಯದ ಮೋದಿ ಮತ್ತವರ ಪಡೆ ಅಧರ್ಮವನ್ನೇ ಮಾಡುತ್ತಿದೆ. ಭಾರತೀಯ ಅಸ್ಮಿತೆಗೆ ಅಪಮಾನಿಸುತ್ತಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Contributor - ಡಾ. ರಾಜಶೇಖರ ಹತಗುಂದಿ

ಹಿರಿಯ ಬರಹಗಾರ, ಪತ್ರಕರ್ತ

Similar News