ರಾಜ್ಯ ಬಿಜೆಪಿಯಲ್ಲಿ ಅರಾಜಕತೆ
ವಿ. ಸೋಮಣ್ಣ, ಸಿ.ಟಿ. ರವಿ ಯಾರ ಬಲ ನಂಬಿ ಮನೆಯ ಹಿರಿಯ ಯಡಿಯೂರಪ್ಪನವರ ವಿರುದ್ಧ ಮಸಲತ್ತ ಮಾಡಿದರು? ಕ್ರಿಯೆಗೆ ಪ್ರತಿಕ್ರಿಯೆ ಇರುತ್ತದೆ ಎನ್ನುವುದು ಸರಳ ಸತ್ಯ. ಜಗದೀಶ್ ಶೆಟ್ಟರ್, ಲಕ್ಷ್ಮಣ ಸವದಿ ಸೇರಿದಂತೆ ಹಲವರಿಗೆ ಸಕಾರಣ ನೀಡದೆ ಬಿಜೆಪಿ ಟಿಕೆಟ್ ನಿರಾಕರಿಸಿದ್ದು ಯಾರು? ಆಗ ಬಾಯಿ ಮುಚ್ಚಿಕೊಂಡು ಕೂತ ಸೋಮಣ್ಣ ಎರಡು ಕಡೆ ಸ್ಪರ್ಧಿಸಿ ಸೋತ ಮೇಲೆ ಒಂದೇ ಸಮನೆ ಗೋಳಾಡುತ್ತಿದ್ದಾರೆ. ಕೇವಲ ಐದು ವರ್ಷ ಅಧಿಕಾರ ವಂಚಿತರಾದ ಸೋಮಣ್ಣ, ಸಿ.ಟಿ. ರವಿ ಅವರಿಗೆ 14 ವರ್ಷ ವನವಾಸ ಅನುಭವಿಸಿದ ಶ್ರೀ ರಾಮ ಆದರ್ಶವಾಗಲಿಲ್ಲ. ಅಧಿಕಾರದ ಲೋಲುಪತೆಯಲ್ಲಿ ಸಿಕ್ಕಿ ಒದ್ದಾಡುತ್ತಿರುವ ಯತ್ನಾಳ್, ಸೋಮಣ್ಣ, ಸಿ.ಟಿ. ರವಿ ಮುಂತಾದವರು ರಾಮಭಕ್ತರಾಗಲು ಸಾಧ್ಯವೇ?
ರಾಷ್ಟ್ರೀಯ ಸ್ವಯಂಸೇವಕ ಸಂಘ, ಭಾರತೀಯ ಜನಸಂಘ, ಭಾರತೀಯ ಜನತಾ ಪಕ್ಷ ಕಠೋರ ಶಿಸ್ತಿನ ಪ್ರಾತಿನಿಧಿಕ ಸಂಸ್ಥೆಗಳು ಎಂಬಂತೆ ಬಿಂಬಿಸಲಾಗಿತ್ತು. ಸಂಘಟನಾ ಕೌಶಲ್ಯ, ಸಹೋದರತ್ವ, ಒಗ್ಗಟ್ಟು ಬಿಜೆಪಿಯಿಂದ ಕಲಿತುಕೊಳ್ಳಬೇಕು ಎನ್ನುವಷ್ಟರ ಮಟ್ಟಿಗೆ ಬಿಜೆಪಿ ಹೆಸರು ಮಾಡಿತ್ತು. ಆದರೆ 80-90ರ ದಶಕದಲ್ಲಿ ಭಾರತೀಯ ಜನತಾ ಪಕ್ಷ ಎಷ್ಟೇ ಹೋರಾಟಗಳನ್ನು ಸಂಘಟಿಸಿದರೂ ಚುನಾವಣೆಗಳಲ್ಲಿ ಜನಬೆಂಬಲ ಸಿಗುತ್ತಿರಲಿಲ್ಲ. 80ರ ದಶಕದಲ್ಲಿ ಕರ್ನಾಟಕದ ಮತದಾರರು ಕಾಂಗ್ರೆಸ್ ಪಕ್ಷಕ್ಕೆ ಪರ್ಯಾಯವಾಗಿ ಜನತಾ ಪಕ್ಷವನ್ನು ಆಯ್ಕೆ ಮಾಡಿಕೊಂಡಿದ್ದರು. ಬಿಜೆಪಿ, ಸಿಪಿಎಂ, ಸಿಪಿಐ, ರೈತ ಸಂಘ, ದಲಿತ ಸಂಘಟನೆಗಳು ಆಗಿನ ಮುಖ್ಯಮಂತ್ರಿ ಆರ್. ಗುಂಡೂರಾವ್ ನೇತೃತ್ವದ ಕಾಂಗ್ರೆಸ್ ಸರಕಾರದ ವಿರುದ್ಧ ಬಲಿಷ್ಠವಾದ ಚಳವಳಿ ರೂಪಿಸಿದ್ದರ ಫಲವಾಗಿ 1983ರಲ್ಲಿ ಮೊದಲ ಬಾರಿಗೆ ಕರ್ನಾಟಕದಲ್ಲಿ ಕಾಂಗ್ರೆಸೇತರ ಸರಕಾರ ಅಸ್ತಿತ್ವಕ್ಕೆ ಬಂದಿತ್ತು. ಅದು ಸಮ್ಮಿಶ್ರ ಸರಕಾರ. ರಾಮಕೃಷ್ಣ ಹೆಗಡೆ ನೇತೃತ್ವದ ಜನತಾ ಪಕ್ಷಕ್ಕೆ ಬಿಜೆಪಿ, ಸಿಪಿಐ, ಸಿಪಿಎಂ ಬೆಂಬಲ ಸೂಚಿಸಿದ್ದವು. ಭಾರತೀಯ ಜನತಾ ಪಕ್ಷದ ಶಾಸಕ ಯಡಿಯೂರಪ್ಪ ರೈತ ಪರ ಹೋರಾಟಗಾರ ಎಂದು ಹೆಸರು ಮಾಡಿದ್ದು ಆಗಲೇ. ಕೇವಲ ಎರಡು ವರ್ಷಗಳಲ್ಲಿ ಅತ್ಯಂತ ಜನಪರ ಆಡಳಿತ ನೀಡಿದ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಮತ್ತವರ ತಂಡ ಮನೆಮಾತಾಗಿತ್ತು. ಜನತಾ ಪಕ್ಷದ ಸರಕಾರ ರೂಪಿಸಿದ ಜನಪ್ರಿಯ ಯೋಜನೆಗಳು ಜನಸಾಮಾನ್ಯರಿಗೆ ತಲುಪಿದ್ದವು. ಅಷ್ಟಕ್ಕೂ ಜನತಾ ಪಕ್ಷದ ಧುರೀಣರಾದ ರಾಮಕೃಷ್ಣ ಹೆಗಡೆ, ಎಸ್.ಆರ್. ಬೊಮ್ಮಾಯಿ, ಎಚ್.ಡಿ. ದೇವೇಗೌಡರು ಒಗ್ಗಟ್ಟಾಗಿದ್ದರು. 1984ರ ಲೋಕಸಭಾ ಚುನಾವಣೆಯಲ್ಲಿ ರಾಮಕೃಷ್ಣ ಹೆಗಡೆಯವರ ನೇತೃತ್ವದ ಜನತಾ ಪಕ್ಷ ಹೀನಾಯವಾಗಿ ಸೋತಿತು. ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಸಾವಿನ ಅನುಕಂಪದ ಅಲೆಯಲ್ಲಿ ಜನತಾ ಪಕ್ಷದ ಜನಪ್ರಿಯ ಕಾರ್ಯಕ್ರಮಗಳು ಲೆಕ್ಕಕ್ಕೇ ಬರಲಿಲ್ಲ.
ಆದರೆ ರಾಮಕೃಷ್ಣ ಹೆಗಡೆಯವರಿಗೆ ತಮ್ಮ ಸರಕಾರದ ಸಾಧನೆಗಳ ಬಗ್ಗೆ ಅಪಾರವಾದ ನಂಬಿಕೆ ಇತ್ತು. ಲೋಕಸಭಾ ಚುನಾವಣಾ ಸೋಲನ್ನೇ ಗೆಲುವಿನ ಮೆಟ್ಟಿಲನ್ನಾಗಿ ಮಾಡಿಕೊಳ್ಳಲು ನಿರ್ಧರಿಸಿದರು. ಹೊಸ ಜನಾದೇಶ ಪಡೆಯುವುದಾಗಿ ಹೇಳಿ ವಿಧಾನಸಭೆಯನ್ನು ವಿಸರ್ಜಿಸಿದರು. ಸಮರ್ಪಕವಾದ ಸಾಮಾಜಿಕ ಸಮೀಕರಣ ರೂಪಿಸಿ ಒಗ್ಗಟ್ಟಿನ ಮಂತ್ರ ಪಠಿಸಿದರು. ಸರಕಾರದ ಎರಡು ವರ್ಷಗಳ ಸಾಧನೆಯನ್ನು ಪ್ರಚಾರ ಮಾಡಿಕೊಂಡರು. ತಾಳಿಭಾಗ್ಯದಂತಹ ಜನಪ್ರಿಯ ಕಾರ್ಯಕ್ರಮಗಳನ್ನು ಜಾರಿಗೊಳಿಸುವುದಾಗಿ ಭರವಸೆ ನೀಡಿದರು. ರಾಮಕೃಷ್ಣ ಹೆಗಡೆಯವರು ಆಗ ಲಿಂಗಾಯತರಿಗೂ ಪ್ರಶ್ನಾತೀತ ನಾಯಕರೆನಿಸಿಕೊಂಡಿದ್ದರು. ಹಾಗಾಗಿ 1985ರಲ್ಲಿ ನಡೆದ ವಿಧಾನಸಭಾ ಚುನಾವಣಾ ಫಲಿತಾಂಶ ಅಚ್ಚರಿ ಮೂಡಿಸುವಂತಿತ್ತು. ಕರ್ನಾಟಕದ ಮತದಾರರು ಪ್ರಬುದ್ಧತೆ ಮೆರೆದರು. 1983ರಲ್ಲಿ 95 ಶಾಸಕರನ್ನು ಹೊಂದಿದ್ದ ಜನತಾ ಪಕ್ಷ 1985ರಲ್ಲಿ 139 ಶಾಸಕರನ್ನು ಗೆಲ್ಲಿಸಿಕೊಂಡಿತು. ಕಾಂಗ್ರೆಸ್ ಶಾಸಕರ ಸಂಖ್ಯೆ 82ರಿಂದ 65ಕ್ಕೆ ಇಳಿಯಿತು. 1983ರಲ್ಲಿ ಬಿಜೆಪಿಯು 18 ಶಾಸಕರನ್ನು ಹೊಂದಿದ್ದು 1985ರಲ್ಲಿ ಕೇವಲ ಇಬ್ಬರು ಶಾಸಕರನ್ನು ಮಾತ್ರ ಗೆಲ್ಲಿಸಿಕೊಳ್ಳಲು ಸಾಧ್ಯವಾಗಿತ್ತು. ಯಡಿಯೂರಪ್ಪ, ಈಶ್ವರಪ್ಪ ಬಿಜೆಪಿಯಿಂದ ಗೆದ್ದ ಶಾಸಕರು. ಆಗ ಬಿಜೆಪಿ 16 ಶಾಸಕರನ್ನು ಕಳೆದುಕೊಂಡಿತ್ತು. 1985ರ ವಿಧಾನಸಭಾ ಚುನಾವಣೆಯಲ್ಲಿ 13 ಜನ ಸ್ವತಂತ್ರ ಅಭ್ಯರ್ಥಿಗಳು ಶಾಸಕರಾಗಿದ್ದರು. ಸಿಪಿಐ ಮೂರು, ಸಿಪಿಎಂ ಇಬ್ಬರು ಶಾಸಕರನ್ನು ಹೊಂದಿದ್ದವು. ಆಗ ಬಿಜೆಪಿಯ ಶಾಸಕರ ಸಂಖ್ಯೆ ಸಿಪಿಐ ಪಕ್ಷಕ್ಕಿಂತಲೂ ಕಡಿಮೆ ಇತ್ತು. ಆದರೆ ವಿಧಾನಸಭೆಯಲ್ಲಿ ಯಡಿಯೂರಪ್ಪ, ವಿಧಾನ ಪರಿಷತ್ತಿನಲ್ಲಿ ಎ.ಕೆ. ಸುಬ್ಬಯ್ಯ ಮುಂತಾದವರು ಸರಕಾರವನ್ನು ತುದಿಗಾಲ ಮೇಲೆ ನಿಲ್ಲಿಸುವಷ್ಟು ಬಲಿಷ್ಠರಾಗಿದ್ದರು.
60ರ ದಶಕದಲ್ಲಿ ಒಂದು ಅವಧಿಗೆ ಭಾರತೀಯ ಜನಸಂಘದ ಸದಾಶಿವ ಶೆಟ್ಟರ್ ಶಾಸಕರಾಗಿ ಆಯ್ಕೆಯಾಗಿದ್ದರು. ಹಾಗೆ ನೋಡಿದರೆ ಭಾರತದಲ್ಲಿ ಬಿಜೆಪಿ ಸ್ಥಾಪನೆಯಾದದ್ದೇ ಎಪ್ರಿಲ್ 6, 1980ರಲ್ಲಿ. 1980ರಿಂದ 83ರವರೆಗೆ ಕರ್ನಾಟಕ ಬಿಜೆಪಿಗೆ ಅಧ್ಯಕ್ಷರಾಗಿದ್ದವರು ಎ.ಕೆ. ಸುಬ್ಬಯ್ಯನವರು. ಮೊದಲ ಬಾರಿಗೆ 1983ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 18 ಶಾಸಕರನ್ನು ಗೆಲ್ಲಿಸಿಕೊಂಡಿತ್ತು. 18 ಜನ ಶಾಸಕರಲ್ಲಿ ಯಡಿಯೂರಪ್ಪ ಒಬ್ಬರು. ಆಗ ಪಕ್ಷವನ್ನು ಸಂಘಟಿಸಿದವರು ಎ.ಕೆ. ಸುಬ್ಬಯ್ಯ, ಬಿ.ಬಿ. ಶಿವಪ್ಪ, ಎಸ್. ಮಲ್ಲಿಕಾರ್ಜುನಯ್ಯ ಮುಂತಾದವರು. 1983ರಿಂದ 88ರವರೆಗೆ 5 ವರ್ಷಗಳ ಕಾಲ ಬಿ.ಬಿ. ಶಿವಪ್ಪನವರು ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದರು. ಆದರೆ ಅವರು ಚುನಾವಣಾ ರಾಜಕಾರಣದಲ್ಲಿ ಹೆಚ್ಚು ಯಶಸ್ಸು ಪಡೆಯಲಿಲ್ಲ. ಎ.ಕೆ.ಸುಬ್ಬಯ್ಯನವರು ಬಿಜೆಪಿ ತೊರೆದರು. 1984ರಲ್ಲಿ ಬಿ.ಬಿ. ಶಿವಪ್ಪನವರನ್ನು ವಿಧಾನಸಭೆಯಿಂದ ವಿಧಾನ ಪರಿಷತ್ತಿಗೆ ಸದಸ್ಯರಾಗಿ ಆಯ್ಕೆ ಮಾಡಿ ಕಳಿಸಿದ್ದರು. 1988ರಲ್ಲಿ ಬಿ.ಎಸ್. ಯಡಿಯೂರಪ್ಪ ಕರ್ನಾಟಕ ಬಿಜೆಪಿಯ ರಾಜ್ಯಾಧ್ಯಕ್ಷ ಸ್ಥಾನ ವಹಿಸಿಕೊಂಡರು. ಅಂದಿನಿಂದ ಅವರು ಉಪಮುಖ್ಯಮಂತ್ರಿ, ಮುಖ್ಯಮಂತ್ರಿಯ ಸ್ಥಾನ ಅಲಂಕರಿಸುವವರೆಗೂ ರಾಜ್ಯ ಬಿಜೆಪಿ ಚುಕ್ಕಾಣಿ ಯಡಿಯೂರಪ್ಪನವರ ಕೈಯಲ್ಲೇ ಇತ್ತು. ಆಗ ಯಡಿಯೂರಪ್ಪ-ಈಶ್ವರಪ್ಪ ಅಣ್ಣತಮ್ಮಂದಿರಂತೆ ಇದ್ದರು. ಶಿವಮೊಗ್ಗದ ಈ ಜೋಡಿ ರಾಷ್ಟ್ರ ರಾಜಕಾರಣವನ್ನು ಅನಂತ ಕುಮಾರ್ ಅವರಿಗೆ ಬಿಟ್ಟುಕೊಟ್ಟು ಪಕ್ಷ ಸಂಘಟನೆಗಾಗಿ ಕರ್ನಾಟಕದುದ್ದಕ್ಕೂ ಸುತ್ತಾಡುತ್ತಿದ್ದರು. ಅವರಿಬ್ಬರ ನಡುವಿನ ಒಗ್ಗಟ್ಟು, ಸಂಘಟನಾ ಶಿಸ್ತು; ಒಳ ಜಗಳಕ್ಕೆ ಹೆಸರಾದ ಜನತಾದಳ ನಾಯಕರಿಗೆ ಮಾದರಿಯಂತಿತ್ತು. 1989ರ ಚುನಾವಣೆಯಲ್ಲಿ ಬಿಜೆಪಿ ಶಾಸಕರ ಸಂಖ್ಯೆ 2ರಿಂದ 4ಕ್ಕೆ ಏರಿತು. 1994ರ ವಿಧಾನಸಭಾ ಚುನಾವಣೆಯಲ್ಲಿ ಈ ಶಿವಮೊಗ್ಗದ ಲವಕುಶರು ಬಿಜೆಪಿ ಶಾಸಕರ ಸಂಖ್ಯೆಯನ್ನು 4ರಿಂದ 40ಕ್ಕೆ ಹೆಚ್ಚಿಸಿಕೊಂಡರು.
ಹಾಗೆ ನೋಡಿದರೆ; 1999ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸ್ವಂತ ಬಲದ ಮೇಲೆ ಅಖಾಡಕ್ಕಿಳಿದಿದ್ದರೆ ಶಾಸಕರ ಸಂಖ್ಯೆ ಅಧಿಕಾರದ ಹತ್ತಿರಕ್ಕೆ ಬಂದು ನಿಲ್ಲುತ್ತಿತ್ತು. ವಿಘಟನೆಗೊಂಡ ಹೆಗಡೆ-ಪಟೇಲ್ ನೇತೃತ್ವದ ಜನತಾದಳದ ಜೊತೆಗೆ ಮೈತ್ರಿ ಮಾಡಿಕೊಂಡು ಬಿಜೆಪಿ ಕೈಸುಟ್ಟುಕೊಂಡಿತ್ತು. ಆಗ ಯಡಿಯೂರಪ್ಪ ಗುಡುಗಿದರೆ ವಿಧಾನಸೌಧ ನಡುಗುತ್ತಿತ್ತು. ಅಂತಹ ಉತ್ತುಂಗದ ಕಾಲದಲ್ಲಿ ಜೆಡಿಯು ಜೊತೆಗಿನ ಮೈತ್ರಿ ಬಿಜೆಪಿಗೆ ಮುಳುವಾಯಿತು. ಮಾತ್ರವಲ್ಲ ಸ್ವತಃ ಯಡಿಯೂರಪ್ಪ, ಈಶ್ವರಪ್ಪ ಕ್ರಮವಾಗಿ ಶಿಕಾರಿಪುರ- ಶಿವಮೊಗ್ಗ ವಿಧಾನಸಭಾ ಮತಕ್ಷೇತ್ರಗಳಲ್ಲಿ ಹಿನ್ನಡೆ ಅನುಭವಿಸಿದರು. ಶಾಸಕರ ಸಂಖ್ಯೆ 40ರಿಂದ 44ಕ್ಕೆ ಏರಿತು. 83, 85, 89 ಮತ್ತು 94ರ ವಿಧಾನಸಭಾ ಚುನಾವಣೆಗಳಲ್ಲಿ ಸತತವಾಗಿ ಗೆದ್ದ ಯಡಿಯೂರಪ್ಪ ಸೋಲರಿಯದ ಸರದಾರರ ಸಾಲಿಗೆ ಸೇರಿಕೊಂಡಿದ್ದರು. ಈಶ್ವರಪ್ಪ ಕೂಡ 1985ರಿಂದ ಸತತ ಮೂರು ಬಾರಿ ಗೆದ್ದು ಶಿವಮೊಗ್ಗವನ್ನು ಬಿಜೆಪಿಯ ಭದ್ರಕೋಟೆಯನ್ನಾಗಿಸಿದ್ದರು. ಬಿಜೆಪಿಯಲ್ಲಿ ಯಡಿಯೂರಪ್ಪ, ಈಶ್ವರಪ್ಪ, ಅನಂತಕುಮಾರ್ ಒಗ್ಗಟ್ಟಿನ ಬಲ ಹೆಚ್ಚುತ್ತಾ ಹೋಯಿತು. 1999ರ ಚುನಾವಣೆಯಲ್ಲಿ ಸೋತ ಯಡಿಯೂರಪ್ಪನವರನ್ನು ವಿಧಾನ ಪರಿಷತ್ ಸದಸ್ಯನನ್ನಾಗಿಸಲಾಯಿತು. ಅದೇ ಚುನಾವಣೆಯಲ್ಲಿ ಸೋತಿದ್ದ ಈಶ್ವರಪ್ಪನವರನ್ನು ಕೇಂದ್ರ ರೇಷ್ಮೆ ಮಂಡಳಿ ಅಧ್ಯಕ್ಷರನ್ನಾಗಿಸಿದ್ದರು. 1990ರ ಚುನಾವಣೆಯಲ್ಲಿ ಸಕಲೇಶಪುರ ಮತಕ್ಷೇತ್ರದಿಂದ ಶಾಸಕರಾಗಿದ್ದ ಬಿಜೆಪಿಯ ಹಿರಿಯ ನಾಯಕ ಬಿ.ಬಿ. ಶಿವಪ್ಪನವರಿಗೆ ತ್ರಿಮೂರ್ತಿಗಳು ವಿರೋಧ ಪಕ್ಷದ ನಾಯಕ ಸ್ಥಾನ ಸಿಗದಂತೆ ನೋಡಿಕೊಂಡರು. ಶಿವಪ್ಪನವರು ಹಿರಿಯರು ಮಾತ್ರವಲ್ಲ 84ರಿಂದ 90ರವರೆಗೆ ವಿಧಾನಪರಿಷತ್ ಸದಸ್ಯರಾಗಿ, 1994 ರಿಂದ 99ರವರೆಗೆ ಸಕಲೇಶಪುರ ಮತಕ್ಷೇತ್ರದ ಶಾಸಕರಾಗಿ ಕಾರ್ಯನಿರ್ವಹಿಸಿ ಸಂಸದೀಯ ಪಟುವಾಗಿ ಗುರುತಿಸಿಕೊಂಡಿದ್ದರು. ಅನುಭವ ಮತ್ತು ಹಿರಿತನವನ್ನು ಬದಿಗೊತ್ತಿ ಎರಡನೇ ಬಾರಿಗೆ ಶಾಸಕರಾಗಿದ್ದ ಜಗದೀಶ್ ಶೆಟ್ಟರ್ ಅವರನ್ನು ವಿರೋಧ ಪಕ್ಷದ ನಾಯಕನನ್ನಾಗಿಸಿದರು. ಸ್ವತಃ ಜಗದೀಶ್ ಶೆಟ್ಟರ್ ಅವರೂ ‘ನ್ಯಾಯಯುತವಾಗಿ ಆ ಹುದ್ದೆ ಶಿವಪ್ಪನವರಿಗೆ ನೀಡಿ’ ಎಂದು ಹೇಳಲಿಲ್ಲ. ಬಿಜೆಪಿಯಲ್ಲಿ ತುಳಿಯುವ ರಾಜಕಾರಣದ ಬೀಜಾಂಕುರವಾಗಿದ್ದು ಆಗಲೇ. ಅಲ್ಲಿಯವರೆಗೂ ರಾಮಾಯಣ ರಾಮ-ಲಕ್ಷ್ಮಣ, ಲವ-ಕುಶ ರಂತಿದ್ದ ಬಿಜೆಪಿ ನಾಯಕರು ಮಹಾಭಾರತದ ದಾಯಾದಿ ಕಲಹದಿಂದ ಪ್ರೇರಣೆ ಪಡೆಯ ತೊಡಗಿದರು.
2004ರ ಹೊತ್ತಿಗೆ ಜನತಾ ಪರಿವಾರದ ನಾಯಕರು ದಾಯಾದಿ ಕಲಹದ ಉತ್ತುಂಗ ತಲುಪಿದ್ದರು. ಜೆಡಿಯು, ಸಮತಾಪಕ್ಷ, ಜೆಡಿಎಸ್, ಎಬಿಜೆಡಿ, ಲೋಕಶಕ್ತಿಗಳಲ್ಲಿ ಹರಿದು ಹಂಚಿಹೋಗಿದ್ದರು. ಈಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ, ಎಂ.ಪಿ. ಪ್ರಕಾಶ್, ಪಿ.ಜಿ.ಆರ್. ಸಿಂಧ್ಯಾ ಮುಂತಾದವರು ದೇವೇಗೌಡ ನೇತೃತ್ವದ ಜೆಡಿಎಸ್‌ನಲ್ಲಿದ್ದರು. ಕಾಂಗ್ರೆಸ್-ಬಿಜೆಪಿಯನ್ನು ಸೈದ್ಧಾಂತಿಕವಾಗಿ ವಿರೋಧಿಸುತ್ತಿದ್ದ ಜನತಾ ಪರಿವಾರದ ನಾಯಕರು ಅನಿವಾರ್ಯವಾಗಿ ಜೆಡಿಎಸ್‌ನೊಂದಿಗೆ ಗುರುತಿಸಿಕೊಂಡಿದ್ದರು. ಅಷ್ಟು ಹೊತ್ತಿಗೆ ಬಹುಪಾಲು ಜನತಾ ಪರಿವಾರದ ನಾಯಕರು ಬಿಜೆಪಿ ಪಾಲಾಗಿದ್ದರು. ವಿಶೇಷವಾಗಿ ರಾಮಕೃಷ್ಣ ಹೆಗಡೆಯವರ ಬೆಂಬಲಿಗರಿಗೆ ಬಿಜೆಪಿ ಅನಿವಾರ್ಯವಾಯಿತು. ಬಿಜೆಪಿಯ ತ್ರಿಮೂರ್ತಿಗಳಾದ ಯಡಿಯೂರಪ್ಪ, ಅನಂತಕುಮಾರ್, ಈಶ್ವರಪ್ಪ, ಸಹಕಲಾವಿದರಂತಿದ್ದ ಡಿ.ಎಚ್. ಶಂಕರಮೂರ್ತಿ, ರಾಮಚಂದ್ರೇಗೌಡ ಒಗ್ಗಟ್ಟಿನಿಂದ ಇದ್ದರು. ಅನಂತಕುಮಾರ್ ಮಾತ್ರ ಕೇಂದ್ರಮಂತ್ರಿಯಾಗಿ ಅಧಿಕಾರದ ರುಚಿ ಅನುಭವಿಸಿದ್ದರು. ಯಡಿಯೂರಪ್ಪ ಅಷ್ಟೆಲ್ಲ ಗುಡುಗಿದ್ದರೂ ಅಲ್ಪ ಅವಧಿಗೆ ವಿರೋಧಪಕ್ಷದ ನಾಯಕನಾಗಿ ಗೂಟದ ಕಾರಿನ ಸುಖ ಅನುಭವಿಸಿದ್ದರು. ಹಾಗೆ ನೋಡಿದರೆ; ಎರಡನೇ ಬಾರಿಗೆ ಶಾಸಕರಾದಾಗಲೇ ಐದು ವರ್ಷಗಳ ಕಾಲ ಆಬಾಧಿತವಾಗಿ ವಿರೋಧ ಪಕ್ಷದ ನಾಯಕ ಸ್ಥಾನದಲ್ಲಿದ್ದರು. 2004ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಜಾಕ್‌ಪಾಟ್ ಹೊಡೆದಂತಾಯಿತು. ಬಿಜೆಪಿ ಶಾಸಕರ ಸಂಖ್ಯೆ 79ಕ್ಕೆ ಏರಿತು. ಜೆಡಿಎಸ್ 58 ಶಾಸಕರನ್ನು ಗೆಲ್ಲಿಸಿಕೊಂಡು ಮುಖ್ಯಮಂತ್ರಿ ಹುದ್ದೆಗೆ ಚೌಕಾಸಿ ಮಾಡತೊಡಗಿತು. ಮೊದಲೇ ಸ್ಪಷ್ಟ ನೀಲನಕ್ಷೆ ಸಿದ್ಧಪಡಿಸಿಟ್ಟುಕೊಂಡಿದ್ದ ಜೆಡಿಎಸ್ ಅಧಿನಾಯಕ ಎಚ್.ಡಿ. ದೇವೇಗೌಡರು ಕಾಂಗ್ರೆಸ್‌ನ ಧರಂ ಸಿಂಗ್ ಅವರನ್ನು ಮುಖ್ಯಮಂತ್ರಿಯನ್ನಾಗಿಸಿ ತಮ್ಮ ಪಕ್ಷದ ಸಿದ್ದರಾಮಯ್ಯ ಅವರನ್ನು ಉಪಮುಖ್ಯಮಂತ್ರಿಯನ್ನಾಗಿಸಿದರು. ಆನಂತರ ನಡೆದ ಬೃಹನ್ನಾಟಕವೆಲ್ಲ ಬಿಜೆಪಿ ಪಾಲಿಗೆ ವರವಾದಂತೆ ಶಾಪವೂ ಆಯಿತು. ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿ, ಯಡಿಯೂರಪ್ಪ ಉಪಮುಖ್ಯಮಂತ್ರಿಯಾಗಿ ಕೆ.ಎಸ್. ಈಶ್ವರಪ್ಪ, ಶಂಕರಮೂರ್ತಿ ಮುಂತಾದವರು ಮಂತ್ರಿಗಳಾಗಿ ಅಧಿಕಾರದ ರುಚಿ ಅನುಭವಿಸುತ್ತಿದ್ದಂತೆ ಬಿಜೆಪಿಯವರು ರಾಮಾಯಣದ ಓದು ನಿಲ್ಲಿಸಿದರು. ಮಹಾಭಾರತದ ದಾಯಾದಿ ಕಲಹವನ್ನು ಆವಾಹಿಸಿಕೊಂಡು ಶಕುನಿ, ಕೃಷ್ಣ, ದುರ್ಯೋಧನ ಇತ್ಯಾದಿ ಪಾತ್ರಗಳಾಗಿ ವಿಭಿನ್ನವಾಗಿ ನಡೆದುಕೊಳ್ಳತೊಡಗಿದರು.
2004ರಲ್ಲಿ ಕರ್ನಾಟಕ ಬಿಜೆಪಿ ಬಂಪರ್ ಬೆಳೆಯೇನೋ ತೆಗೆಯಿತು. ಆದರೆ ಕೇಂದ್ರದಲ್ಲಿ ಬಿಜೆಪಿ ಅಧಿಕಾರ ಕಳೆದುಕೊಂಡಿತು. ಕೇಂದ್ರ ಮಂತ್ರಿ ಮಂಡಲದಲ್ಲಿ ದೊಡ್ಡ ದೊಡ್ಡ ಖಾತೆಗಳ ಜವಾಬ್ದಾರಿ ಹೊತ್ತಿದ್ದ ಅನಂತಕುಮಾರ್ 2004ರ ಹೊತ್ತಿಗೆ ಸಂಪೂರ್ಣ ನಿರುದ್ಯೋಗಿಯಾದರು. ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಹುದ್ದೆಗೆ ಏರದಂತೆ ನಿಗಾ ವಹಿಸುವುದೇ ಅವರ ಮುಖ್ಯಕೆಲಸವಾಯಿತು. ಯಡಿಯೂರಪ್ಪ ಉಪಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳುವ ಹೊತ್ತಿಗೆ ತ್ರಿಮೂರ್ತಿಗಳ ಸಂಬಂಧ ಹಳಸಿ ಒಗ್ಗಟ್ಟು ಮೂರಾಬಟ್ಟೆಯಾಗಿತ್ತು. 20 ತಿಂಗಳ ಕಾಲ ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿಯವರು ‘ಬಿಜೆಪಿಗೆ ಅಧಿಕಾರ ಹಸ್ತಾಂತರ ಮಾಡದಿರಲು ಅನಂತ ಕುಮಾರ್ ಅವರೇ ಕಾರಣ’ ಎಂಬರ್ಥದ ಮಾತುಗಳನ್ನು ಸಾಕಷ್ಟು ಸಲ ಆಡಿದ್ದಾರೆ. ಅನಂತಕುಮಾರ್ ಚಾಪೆಯ ಕೆಳಗೆ ತೂರಿದರೆ, ಯಡಿಯೂರಪ್ಪ ರಂಗೋಲಿಯ ಕೆಳಗೆ ತೂರಿ ವಚನಭ್ರಷ್ಟತೆ ಅಸ್ತ್ರ ಬಳಸಿ 2008ರ ವಿಧಾನಸಭಾ ಚುನಾವಣೆಯಲ್ಲಿ 110 ಶಾಸಕರನ್ನು ಗೆಲ್ಲಿಸಿಕೊಂಡು ಬಂದರು. ಅಷ್ಟು ಮಾತ್ರವಲ್ಲ, ದುರಂತ ನಾಯಕನೆಂದು ಬಿಂಬಿಸಿಕೊಂಡು ಲಿಂಗಾಯತ ಸಮುದಾಯದ ಬಲವು ಪಡೆದುಕೊಂಡರು. ಯಡಿಯೂರಪ್ಪ ಮೊದಲ ಬಾರಿಗೆ ಮುಖ್ಯಮಂತ್ರಿಯ ಸ್ಥಾನ ಅಲಂಕರಿಸಿದ ಗಳಿಗೆಯಿಂದ ಅವರನ್ನು ಪರಿಪರಿಯಾಗಿ ಕಾಡಿದವರು ವಿರೋಧ ಪಕ್ಷದವರಲ್ಲ. ಅನಂತಕುಮಾರ್, ಬಿ.ಎಲ್. ಸಂತೋಷ್, ಈಶ್ವರಪ್ಪ, ಜನಾರ್ದನ ರೆಡ್ಡಿ ಸೇರಿದಂತೆ ಬಿಜೆಪಿಯವರೇ, ಹಿಂದೂ ಹುಲಿಗಳೇ, ರಾಮಭಕ್ತರೇ ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಸಿ ಜೈಲುಪಾಲು ಮಾಡುವವರೆಗೆ ವಿರಮಿಸಲಿಲ್ಲ. ಯಡಿಯೂರಪ್ಪ ಜೈಲು ಸೇರಿದ ದಿನ ಹಾಲಿ ವಿರೋಧ ಪಕ್ಷದ ನಾಯಕರಾಗಿರುವ ಆರ್. ಅಶೋಕ್ ಅವರು ಕುಣಿದು ಕುಪ್ಪಳಿಸಿ ಸಂಭ್ರಮಾಚರಣೆ ಮಾಡಿದ್ದರು.
ಆಗ ಈ ರಾಮಭಕ್ತರಿಗೆ ಯಡಿಯೂರಪ್ಪ ಬಿಜೆಪಿಯ ಹಿರಿಯ ನಾಯಕ, ಪಕ್ಷವನ್ನು ತಳಮಟ್ಟದಿಂದ ಸಂಘಟಿಸಿ ಅಧಿಕಾರಕ್ಕೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ, ಅವರು ಹಿಂದೂ ಧರ್ಮಕ್ಕೆ ಸೇರಿದವರು, ರಾಮ ಭಕ್ತ ಕೂಡಾ, ಇಂತಹ ಹಿರಿಯ ನಾಯಕನಿಗೆ ಬಿಟ್ಟುಬಿಡದಂತೆ ಕಾಡಿ, ಅಧಿಕಾರದಿಂದ ಕೆಳಗಿಳಿಸಿ, ಜೈಲಿಗಟ್ಟಿದ್ದು ತಪ್ಪು ಎಂದು ಬಿಜೆಪಿಯ ಯಾವ ನಾಯಕನಿಗೂ ಅನ್ನಿಸಲೇ ಇಲ್ಲ. ಆದರೆ ಹುಬ್ಬಳ್ಳಿಯ ಶ್ರೀಕಾಂತ ಪೂಜಾರಿಯೇ ಮಹಾನ್ ರಾಮಭಕ್ತ ಎಂದು ಬಿಜೆಪಿಯ ಸಮಸ್ತ ನಾಯಕರು ಈಗ ಬೊಬ್ಬೆ ಹಾಕುತ್ತಿದ್ದಾರೆ. ಆತನ ಮೇಲೆ ಅಕ್ರಮ ಸಾರಾಯಿ ಮಾರಾಟ, ದೊಂಬಿ, ಮಟ್ಕಾ, ಜೂಜಾಟ ಮುಂತಾದ 16 ಸಮಾಜಘಾತಕ ಕೃತ್ಯಗಳಲ್ಲಿ ಭಾಗಿಯಾದ ಆರೋಪಗಳಿವೆ. ಪೊಲೀಸ್ ಮತ್ತು ನ್ಯಾಯಾಲಯದ ಹಂತದಲ್ಲಿ ಸಹಜವಾಗಿ ಕೈಗೊಳ್ಳುವ ಕ್ರಮ ತಪ್ಪು ಎಂದು ಕಿರಿಚಾಡುತ್ತಿದ್ದಾರೆ. ಇದು ಕಾಮನ್ ಸೆನ್ಸ್ ಇರುವ ಎಲ್ಲರಿಗೂ ಅರ್ಥವಾಗುತ್ತದೆ. ಶ್ರೀಕಾಂತ ಪೂಜಾರಿ ವಿರುದ್ಧ ಕೇಸಿನಲ್ಲಿ ಸಿಎಂ ಸಿದ್ದರಾಮಯ್ಯ, ಗೃಹ ಮಂತ್ರಿ ಪರಮೇಶ್ವರ ಅವರಿಗೆ ಸಿಗುವ ಲಾಭವಾದರೂ ಏನು? ಬಿಜೆಪಿಯವರು ರಾಮಭಕ್ತ, ಹಿಂದೂ ಧರ್ಮಿಯ ಯಡಿಯೂರಪ್ಪನವರಿಗೆ ಮಾನಸಿಕವಾಗಿ ಕಿರುಕುಳ ನೀಡಿ ಪಕ್ಷ ಬಿಡುವಂತೆ ಮಾಡಿದರೆ ನಡೆಯುತ್ತದೆ. ಒಬ್ಬ ಕ್ರಿಮಿನಲ್ ಗೆ ಸಹಜ ಪ್ರಕ್ರಿಯೆಯಲ್ಲಿ ಪೊಲೀಸ್ ಕ್ರಮ ಜರುಗಿಸಿದರೆ ಹಿಂದೂ ವಿರೋಧಿ ಬಣ್ಣ ಹಚ್ಚುತ್ತಾರೆ. ಹಾಗಾದರೆ ಡಿ.ಕೆ. ಶಿವಕುಮಾರ್, ಡಿ.ಕೆ. ಸುರೇಶ್ ಅವರು ಹಿಂದೂಗಳಲ್ಲವೇ? ಅವರುಗಳ ವಿರುದ್ಧ ಈ.ಡಿ., ಸಿಬಿಐ, ಆದಾಯ ತೆರಿಗೆ ಇಲಾಖೆಯವರು ಯಾಕೆ ತನಿಖೆ ಮಾಡುತ್ತಿದ್ದಾರೆ? ಅಪರಾಧಿಗಳನ್ನು ಹಿಂದೂ, ಮುಸ್ಲಿಮ್, ಕ್ರಿಶ್ಚಿಯನ್ ಎಂದು ವರ್ಗೀಕರಿಸಲು ಆಗುವುದಿಲ್ಲ. ಕಾನೂನಿನ ಎದುರು ಎಲ್ಲರೂ ಸಮಾನರು, ಅಪರಾಧಿಯನ್ನು ರಾಮಭಕ್ತ, ಶಿವಭಕ್ತ ಎಂದು ರಕ್ಷಿಸಲು ಸಾಧ್ಯವಿಲ್ಲ.
ರಾಜ್ಯ ಬಿಜೆಪಿಯಲ್ಲಿ ಅರಾಜಕತೆ ತಾಂಡವವಾಡುತ್ತಿದೆ. ರಾಮಭಕ್ತ, ಹಿಂದೂ ಹುಲಿಯೆಂದು ತನ್ನಷ್ಟಕ್ಕೆ ಬಡಾಯಿ ಕೊಚ್ಚಿಕೊಳ್ಳುವ ಬಸನಗೌಡ ಪಾಟೀಲ್ ಯತ್ನಾಳ್‌ಗೆ ಮರ್ಯಾದಾ ಪುರುಷೋತ್ತಮ ರಾಮನ ಮೇಲೆ ನಿಜವಾಗಿಯೂ ಭಕ್ತಿ ಇದ್ದಿದ್ದರೆ ಹೈಕಮಾಂಡ್ ನಿರ್ಧಾರವನ್ನು ಬೀದಿರಂಪ ಮಾಡುತ್ತಿರಲಿಲ್ಲ. ತಂದೆ ದಶರಥ ಮಹಾರಾಜ ಹೇಳಿದ ಎಂಬ ಏಕೈಕ ಕಾರಣಕ್ಕೆ ಶ್ರೀರಾಮ ಮರುಮಾತನಾಡದೆ ಭರತನಿಗೆ ರಾಜ್ಯಕೊಟ್ಟು ಹೆಂಡತಿ ಸೀತೆ, ತಮ್ಮ ಲಕ್ಷ್ಮಣನೊಂದಿಗೆ ಕಾಡಿಗೆ ಹೋಗುತ್ತಾನೆ. ದಶರಥ ಮಹಾರಾಜರ ಸ್ಥಾನದಲ್ಲಿರುವ; ಬಿಜೆಪಿ ಹೈಕಮಾಂಡ್‌ನ ಭಾಗವಾಗಿರುವ ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ, ಜೆ.ಪಿ. ನಡ್ಡಾ ಸೇರಿ ವಿಜಯೇಂದ್ರ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ನೇಮಕ ಮಾಡಿದ್ದಾರೆ. ಆ ತೀರ್ಮಾನವನ್ನು ಯಡಿಯೂರಪ್ಪ ಬ್ಲ್ಯಾಕ್‌ಮೇಲ್ ಮಾಡಿ ಮಗನಿಗೆ ಹುದ್ದೆ ಕೊಡಿಸಿದ್ದಾರೆ ಎಂದು ಯತ್ನಾಳ್ ಆಕಾಶ-ಭೂಮಿ ಒಂದಾಗುವ ಹಾಗೆ ಒದರಾಡುತ್ತಿದ್ದಾರೆ. ಯತ್ನಾಳ್ ಯಾವ ಸೀಮೆಯ ರಾಮ ಭಕ್ತ? ಮೋದಿ, ಅಮಿತ್ ಶಾ, ನಡ್ಡಾ ಅವರು ಯಡಿಯೂರಪ್ಪ ಅವರ ಬ್ಲ್ಯಾಕ್‌ಮೇಲ್‌ಗೆ ಮಣಿಯುವಷ್ಟು ದುರ್ಬಲರೇ ?
ವಿ. ಸೋಮಣ್ಣ, ಸಿ.ಟಿ. ರವಿ ಯಾರ ಬಲ ನಂಬಿ ಮನೆಯ ಹಿರಿಯ ಯಡಿಯೂರಪ್ಪನವರ ವಿರುದ್ಧ ಮಸಲತ್ತ ಮಾಡಿದರು? ಕ್ರಿಯೆಗೆ ಪ್ರತಿಕ್ರಿಯೆ ಇರುತ್ತದೆ ಎನ್ನುವುದು ಸರಳ ಸತ್ಯ. ಜಗದೀಶ್ ಶೆಟ್ಟರ್, ಲಕ್ಷ್ಮಣ ಸವದಿ ಸೇರಿದಂತೆ ಹಲವರಿಗೆ ಸಕಾರಣ ನೀಡದೆ ಬಿಜೆಪಿ ಟಿಕೆಟ್ ನಿರಾಕರಿಸಿದ್ದು ಯಾರು? ಆಗ ಬಾಯಿ ಮುಚ್ಚಿಕೊಂಡು ಕೂತ ಸೋಮಣ್ಣ ಎರಡು ಕಡೆ ಸ್ಪರ್ಧಿಸಿ ಸೋತ ಮೇಲೆ ಒಂದೇ ಸಮನೆ ಗೋಳಾಡುತ್ತಿದ್ದಾರೆ. ಕೇವಲ ಐದು ವರ್ಷ ಅಧಿಕಾರ ವಂಚಿತರಾದ ಸೋಮಣ್ಣ, ಸಿ.ಟಿ. ರವಿ ಅವರಿಗೆ 14 ವರ್ಷ ವನವಾಸ ಅನುಭವಿಸಿದ ಶ್ರೀ ರಾಮ ಆದರ್ಶವಾಗಲಿಲ್ಲ. ಅಧಿಕಾರದ ಲೋಲುಪತೆಯಲ್ಲಿ ಸಿಕ್ಕಿ ಒದ್ದಾಡುತ್ತಿರುವ ಯತ್ನಾಳ್, ಸೋಮಣ್ಣ, ಸಿ.ಟಿ. ರವಿ ಮುಂತಾದವರು ರಾಮಭಕ್ತರಾಗಲು ಸಾಧ್ಯವೇ? ಪ್ರಹ್ಲಾದ್ ಜೋಶಿಯವರಿಗೆ ಅಣ್ಣನ ಸ್ಥಾನದಲ್ಲಿ ನಿಂತು ರಾಜಕೀಯವಾಗಿ ಬೆಳೆಸಿದವರು ದಿ. ಅನಂತ ಕುಮಾರ್. ಅವರ ನಿಧನದ ನಂತರ ಸಹಜವಾಗಿಯೇ ತೇಜಸ್ವಿನಿ ಅನಂತಕುಮಾರ್ ಅವರು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದರು. ತೇಜಸ್ವಿನಿಯವರಿಗೆ ಟಿಕೆಟ್ ನಿರಾಕರಿಸಿದಾಗ ಲಕ್ಷ್ಮಣನಂತಿದ್ದ ಪ್ರಹ್ಲಾದ್ ಜೋಶಿ ತ್ಯಾಗದ ಮಾತುಗಳನ್ನು ಆಡಲೇ ಇಲ್ಲ. ಬೇರೆಯವರಾಗಿದ್ದರೆ ಧಾರವಾಡ ಲೋಕಸಭಾ ಕ್ಷೇತ್ರ ಬಿಟ್ಟು ಕೊಡುತ್ತಿದ್ದರು.
ಕರ್ನಾಟಕದ ಬಿಜೆಪಿಯಲ್ಲಿ ಸ್ವಾರ್ಥ, ಈರ್ಷೆ, ಕಪಟ, ಸಮಯ ಸಾಧಕತನ ತುಂಬಿ ತುಳುಕುತ್ತಿದೆ. ಕಾಂಗ್ರೆಸ್ ಪಕ್ಷ ಸಿದ್ದರಾಮಯ್ಯನವರಿಗೆ 2013ರಿಂದ 2018ರ ವರೆಗೆ ಮುಖ್ಯಮಂತ್ರಿ ಸ್ಥಾನ ನೀಡಿ ಈಗ ಎರಡನೇ ಅವಧಿಗೆ ಮುಖ್ಯಮಂತ್ರಿ ಯನ್ನಾಗಿಸಿದೆ. ಯಡಿಯೂರಪ್ಪಗೆ ಆ ಭಾಗ್ಯ ಸಿಗಲೇ ಇಲ್ಲ. ರಾಮಭಕ್ತರೆಂದು, ಹಿಂದೂ ಹುಲಿಗಳೆಂದು ಹೇಳಿಕೊಳ್ಳುವವರೇ ಯಡಿಯೂರಪ್ಪನವರ ರಾಜಕೀಯ ಭವಿಷ್ಯ ಹಾಳು ಮಾಡಿದರು. ಬಿಜೆಪಿಯಲ್ಲಿನ ಪ್ರತಿಯೊಬ್ಬರು ಪರಸ್ಪರ ಮುಗಿಸಲು ಕತ್ತಿಮಸೆಯುತ್ತಲೇ ಇದ್ದಾರೆ. ಈ ಪಕ್ಷವನ್ನು ಮುಗಿಸಲು ಬೇರೆ ಯಾರೂ ಬೇಕಿಲ್ಲ, ಜನತಾ ಪರಿವಾರದಂತೆ ಇವರು ತಮ್ಮ ಭಾರದಿಂದಲೇ ಕುಸಿಯುತ್ತಾರೆ.