ಭಕ್ತಿ ಎಂಬುದು ತೋರುಂಬ ಲಾಭ

ರಾಮಭಕ್ತ ಮಹಾತ್ಮಾ ಗಾಂಧೀಜಿಯವರಿಗೆ ಅತ್ಯಂತ ಪ್ರಿಯವಾದ ‘‘ರಘುಪತಿ ರಾಘವ ರಾಜಾರಾಮ್, ಪತಿತ ಪಾವನ ಸೀತಾರಾಮ್, ಈಶ್ವರ ಅಲ್ಲಾ ತೇರೋ ನಾಮ್ ಸಬಕೋ ಸನ್ಮತಿ ದೇ ಭಗವಾನ್’’-ಭಜನ್ ಆಶಯ ನುಚ್ಚುನೂರಾಗಿದೆ. ಬಿಜೆಪಿಯವರು ‘ಒಂದು ದೇಶ ಒಂದು ಚುನಾವಣೆ’ ಘೋಷಣೆಯ ಜೊತೆಗೆ ಒಂದು ದೇವರು-ಅದು ರಾಮ ಎಂದು ಸಾರಿ ಸಾರಿ ಹೇಳುತ್ತಿದ್ದಾರೆ. ಮರ್ಯಾದಾ ಪುರುಷೋತ್ತಮ ರಾಮನನ್ನು, ಎಲ್ಲರ ಆದರ್ಶ ಪುರುಷ ರಾಮನನ್ನು ಬಿಜೆಪಿಯ ರಾಮನನ್ನಾಗಿ ಮಾಡಿ ಚುನಾವಣಾ ರಾಜಕಾರಣಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ. ಭಾರತದಲ್ಲಿ ಮೊದಲ ಬಾರಿಗೆ ಮಂದಿರವೊಂದು ನಿರ್ಮಾಣವಾಗುತ್ತಿದೆ ಎಂಬಂತೆ ಬಿಂಬಿಸುತ್ತಿದ್ದಾರೆ. ಹಾಗೆ ಮಾಡುವ ಮೂಲಕ ಶ್ರೀ ರಾಮನನ್ನು, ನೈಜ ರಾಮಭಕ್ತರನ್ನು, ಹಿಂದೂ ಧರ್ಮವನ್ನು ಅಪಮಾನಿಸುತ್ತಿದ್ದಾರೆ.

Update: 2024-01-13 04:41 GMT

Photo: PTI

ಶ್ರೀರಾಮ ಋಷಿ ವಾಲ್ಮೀಕಿ ವಿರಚಿತ ‘ವಾಲ್ಮೀಕಿ ರಾಮಾಯಣ’ ಮಹಾ ಕಾವ್ಯದ ಕೇಂದ್ರ. ಸಂಸ್ಕೃತ ಭಾಷೆಯಲ್ಲಿ ರಚನೆಯಾದ ಅತ್ಯಂತ ಪ್ರಾಚೀನವಾದ ಲಭ್ಯ ಮಹಾಕಾವ್ಯ. ಶ್ರೀರಾಮನೇ ಮುಖ್ಯ ನಾಯಕನಾಗಿರುವುದರಿಂದ ‘ರಾಮಾಯಣ’ ಹೆಸರಲ್ಲೇ ಖ್ಯಾತಿ ಪಡೆದಿದೆ. ವಾಲ್ಮೀಕಿ ರಾಮಾಯಣದ ಕಥೆಯೇ ಮೂಲವಾಗಿ ರಾಮನ ಕಥಾನಕ ಜನಜನಿತವಾಗಿದೆ. ಕೋಶಲ ರಾಜ್ಯದ ಮಹಾರಾಜ ದಶರಥ. ಆ ರಾಜ್ಯದ ರಾಜಧಾನಿ ಅಯೋಧ್ಯಾ: ಸರಯೂ ನದಿ ತಟದ ನಗರ. ದಶರಥ ಮಹಾರಾಜನಿಗೆ ಮೂವರು ಪತ್ನಿಯರು, ನಾಲ್ಕು ಜನ ಮಕ್ಕಳು, ರಾಮ, ಲಕ್ಷ್ಮಣ, ಭರತ, ಶತ್ರುಘ್ನ. ದಶರಥ ಮಹಾರಾಜ-ಕೌಶಲ್ಯ ಅವರ ಪುತ್ರ ರಾಮ. ಕೈಕೇಯಿ, ಸುಮಿತ್ರ ರಾಮನ ಮಲ ತಾಯಂದಿರು. ತಂದೆ ದಶರಥ ಮಹಾರಾಜ ಮಲತಾಯಿ ಕೈಕೇಯಿಗೆ ಕೊಟ್ಟ ಮಾತಿನಂತೆ ಪಿತೃವಾಕ್ಯ ಪರಿಪಾಲಕನಾಗಿ ರಾಮ ಕೋಶಲ ರಾಜ್ಯವನ್ನು ತಮ್ಮ ಭರತನಿಗೆ ಬಿಟ್ಟುಕೊಟ್ಟು ಕಾಡಿಗೆ ಹೋಗುತ್ತಾನೆ. ತಮ್ಮ ಲಕ್ಷ್ಮಣ, ಹೆಂಡತಿ ಸೀತೆ ರಾಮನನ್ನು ಅನುಸರಿಸುತ್ತಾರೆ. ಬರೋಬ್ಬರಿ 14 ವರ್ಷ ವನವಾಸದ ಬದುಕು ನಡೆಸುತ್ತಾರೆ. ವನವಾಸದ ಬದುಕಿನಲ್ಲಿ ರಾಮಾಯಣ ಮಹಾಕಾವ್ಯ ಬಹು ಆಯಾಮದಲ್ಲಿ ಅನಾವರಣಗೊಳ್ಳುತ್ತದೆ. ಕ್ರಿಸ್ತಪೂರ್ವ ಏಳರಿಂದ ನಾಲ್ಕನೇ ಶತಮಾನದಲ್ಲಿ ರಚಿತವಾದ ವಾಲ್ಮೀಕಿ ರಾಮಾಯಣ ಮಹಾ ಕಾವ್ಯ ಒಟ್ಟು ಏಳು ಕಾಂಡಗಳಲ್ಲಿ ವ್ಯಾಪಿಸಿಕೊಂಡಿದೆ. ಬಾಲಕಾಂಡ, ಅಯೋಧ್ಯಾ ಕಾಂಡ, ಅರಣ್ಯ ಕಾಂಡ, ಕಿಷ್ಕಿಂದಾ ಕಾಂಡ, ಸುಂದರಕಾಂಡ, ಯುದ್ಧಕಾಂಡ, ಉತ್ತರ ಕಾಂಡಗಳಲ್ಲಿ ಒಟ್ಟು 500 ಸರ್ಗಗಳು, 24,000 ಶ್ಲೋಕಗಳಿವೆ.

ಮೂಲ ವಾಲ್ಮೀಕಿ ರಾಮಾಯಣ ಮಹಾ ಕಾವ್ಯದಿಂದ ಪ್ರೇರಣೆ ಪಡೆದು ಬಹುಪಾಲು ಭಾರತೀಯ ಭಾಷೆಗಳಲ್ಲಿ ಹಲವಾರು ರಾಮಾಯಣಗಳು ಮರು ಸೃಷ್ಟಿಗೊಂಡಿವೆ. ವಾಲ್ಮೀಕಿ ರಾಮಾಯಣದೊಂದಿಗಿನ ಸೃಜನಶೀಲ ಅನುಸಂಧಾನದಿಂದ ವಿಶಿಷ್ಟ-ವಿಭಿನ್ನ ರಾಮಾಯಣಗಳು ಹುಟ್ಟಿಕೊಂಡಿವೆ. ಮಧ್ಯಕಾಲೀನ ಭಕ್ತಿ ಚಳವಳಿಯ ಭಾಗವಾಗಿ ಹುಟ್ಟಿಕೊಂಡ ಅವಧ ಭಾಷೆಯಲ್ಲಿನ ತುಳಸಿದಾಸ ವಿರಚಿತ (16ನೇ ಶತಮಾನ) ‘ರಾಮಚರಿತ ಮಾನಸ’ ಕೃತಿಯು ಶ್ರೀರಾಮ ಕಥಾನಕವನ್ನು ಉತ್ತರ ಭಾರತದ ಜನಮಾನಸದಲ್ಲಿ ಸ್ಥಾಯಿಯಾಗಿ ನೆಲೆ ನಿಲ್ಲುವಂತೆ ಮಾಡಿದೆ. ಹಿಂದಿ ಭಾಷಿಕ ಜನಸಾಮುದಾಯಗಳಲ್ಲಿ ರಾಮ ಮತ್ತು ಆಂಜನೇಯ ಅವರನ್ನು ಆರಾಧ್ಯ ದೈವಗಳನ್ನಾಗಿ ರೂಪಿಸಿದ್ದೇ ತುಳಸಿದಾಸರ ರಾಮಚರಿತಮಾನಸ ಕೃತಿ. ತುಳಸಿದಾಸ ವಿರಚಿತ ಹನುಮಾನ್ ಚಾಲೀಸಾ ಜನಸಾಮಾನ್ಯರ ನಂಬಿಕೆಯ ಭಾಗವಾಗಿ ಬಿಟ್ಟಿದೆ. ಕನ್ನಡದಲ್ಲೂ ಮೂರು ರಾಮಾಯಣಗಳು ರಚನೆಯಾಗಿವೆ. 12ನೇ ಶತಮಾನದ ಆದಿಭಾಗದಲ್ಲಿದ್ದ, ಅಭಿನವ ಪಂಪ ಎಂದೇ ಖ್ಯಾತಿ ಪಡೆದಿದ್ದ ಜೈನ ಕವಿ ನಾಗಚಂದ್ರನ ‘ಶ್ರೀರಾಮಚಂದ್ರ ಚರಿತಪುರಾಣ’ವು ‘ಪಂಪ ರಾಮಾಯಣ’ ಎಂದು ಜನಪ್ರಿಯವಾಗಿದೆ. 15ನೇ ಶತಮಾನದ ಕವಿ ಕುಮಾರ ವಾಲ್ಮೀಕಿ ವಿರಚಿತ ನಡುಗನ್ನಡದ ತೊರವೆ ರಾಮಾಯಣ ಮಹತ್ವದ ಕಾವ್ಯವಾಗಿದೆ. ಕಳೆದ ಶತಮಾನದಲ್ಲಿ ಮಹಾಕವಿ ಕುವೆಂಪು ವಿರಚಿತ ‘ಶ್ರೀ ರಾಮಾಯಣ ದರ್ಶನಂ’ ಮಹಾ ಕಾವ್ಯ ಶ್ರೀ ರಾಮನ ಕಥೆ ಹೊಸ ಆಯಾಮ ಕಲ್ಪಿಸಿದೆ.

ತಮಿಳು ಭಾಷೆಯ ‘ರಾಮಾವತಾರಂ’ (12ನೇ ಶತಮಾನ) ಆಸಾಮಿ ಭಾಷೆಯ ಮಾಧವ ಕಂಡಲಿ ವಿರಚಿತ (14ನೇ ಶತಮಾನ) ಸಪ್ತಕಾಂಡ ರಾಮಾಯಣ, ಬೆಂಗಾಲಿ ಭಾಷೆಯ ಕವಿ ಕೃತ್ತಿಬಾಸ ಓಜಾ (15ನೇ ಶತಮಾನ) ಕೃತ್ತಿಬಾಸಿ ರಾಮಾಯಣ, ಮರಾಠಿ ಭಾಷೆ ಕವಿ ಸಂತ ಏಕನಾಥ ವಿರಚಿತ (16ನೇ ಶತಮಾನ) ಭಾವಾರ್ಥ ರಾಮಾಯಣ, ತೆಲುಗು ಭಾಷೆಯಲ್ಲಿನ ಮೂರು ರಾಮಾಯಣಗಳು; ಕವಿ ರಂಗನಾಥ ವಿರಚಿತ ರಂಗನಾಥ ರಾಮಾಯಣಂ, ಮೊಲ್ಲಕವಿಯ ಮೊಲ್ಲ ರಾಮಾಯಣ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ವಿಶ್ವನಾಥ ಸತ್ಯನಾರಾಯಣ ರಚಿಸಿದ ರಾಮಾಯಣ ಕಲ್ಪವೃಕ್ಷಂ, ಒಡಿಯಾ ಭಾಷೆಯಲ್ಲಿನ ವಿಲಂಕಾ ರಾಮಾಯಣ, ಮಲಯಾಳಂ ಭಾಷೆಯ ಎಳುತ್ತುಚನ ರಾಮಾಯಣ ಕಾವ್ಯಗಳು ರಾಮನನ್ನು ಎಲ್ಲಾ ಭಾರತೀಯ ಭಾಷೆಗಳ ಮೂಲಕ ಜನ ಮಾನಸಕ್ಕೆ ಹತ್ತಿರ ಮಾಡಿದೆ. ಸಂಸ್ಕೃತ ಭಾಷೆಯಲ್ಲಿನ ಅಧ್ಯಾತ್ಮ ರಾಮಾಯಣ, ಕಾಳಿದಾಸ ರಚಿಸಿದ ರಘುವಂಶ ರಾಮಾಯಣದ ಕಥೆಯನ್ನೇ ಭಿನ್ನ ಆಶಯದ ನಿರೂಪಣೆಗೆ ಬಳಸಿಕೊಳ್ಳಲಾಗಿದೆ. ಭಾನುಭಕ್ತ ಆಚಾರ್ಯ ವಿರಚಿತ ನೇಪಾಳಿ ರಾಮಾಯಣ ಸೇರಿದಂತೆ ಕಾಂಬೋಡಿಯನ್, ಇಂಡೋನೇಶ್ಯನ್, ಪಿಲಿಪ್ಫಿನೋ, ಥಾಯಿ, ಲಾವೊ, ಬರ್ಮೀಸ್, ಮಲಯಾ, ಮಾಲ್ದೀವಿಯನ್, ವಿಯೆಟ್ನಾಮಿಸ್, ಟಿಬಿಟೋ ಆವೃತ್ತಿಗಳಲ್ಲೂ ರಾಮಾಯಣಗಳಿವೆ. ಜಾನಪದ ರಾಮಾಯಣಗಳು ಅಸಂಖ್ಯಾತ. ವಾಲ್ಮೀಕಿ ರಾಮಾಯಣಕ್ಕಿಂತಲೂ ಭಿನ್ನವಾದ ಕಥಾಹಂದರ ಹೊಂದಿತುವ ಜಾನಪದ ರಾಮಾಯಣಗಳು ಅವರವರ ಸಂಸ್ಕೃತಿಗನುಗುಣವಾಗಿ, ಅವರವರ ಭಾವಕ್ಕೆ ಮರು ಹುಟ್ಟು ಪಡೆದಿವೆ. ವಿಷ್ಣುಪುರಾಣ, ಪದ್ಮಪುರಾಣ, ಗರುಡ ಪುರಾಣ, ಅಗ್ನಿಪುರಾಣ ಹಾಗೂ ಮಹಾಭಾರತದ ವನಪರ್ವದಲ್ಲಿಯೂ ರಾಮಾಯಣದ ಕಥೆ ಹೇಳಲಾಗಿದೆ. ವೈಷ್ಣವ ಪಂಥದಲ್ಲಿ ರಾಮ ವಿಷ್ಣುವಿನ ಏಳನೇ ಅವತಾರ. ಜೈನ ಪಠ್ಯಗಳಲ್ಲಿ ರಾಮನನ್ನು ‘ಬಲಭದ್ರ’ ಎಂದು ಕರೆಯಲಾಗುತ್ತದೆ. ಜೈನ ನಂಬಿಕೆಯ ಪ್ರಕಾರ 63 ಸಲಾಕ ಪುರುಷರಲ್ಲಿ ರಾಮ ಒಬ್ಬ.

ರಾಜಾ ಪ್ರತ್ಯಕ್ಷಃ ದೈವ ಎಂಬ ಮಾತಿಗೆ ಶ್ರೀರಾಮ ಅನ್ವರ್ಥಕ ಪದ. ರಾಮ; ಜಾತಿ, ಧರ್ಮ, ಮತ, ಪಂಥ ಮಾತ್ರವಲ್ಲ ದೇಶದ ಗಡಿಗೆರೆಗಳ ಎಲ್ಲೆ ಕಟ್ಟುಗಳನ್ನು ಮೀರಿ ಜನಾನುರಾಗಿಯಾಗಲು, ಜನಸಾಮಾನ್ಯರ ಭಾವ ಕೋಶದ ಭಾಗವಾಗಲು ಸಾಧ್ಯವಾದದ್ದು ಘನವಾದ ವ್ಯಕ್ತಿತ್ವದಿಂದ. ಶ್ರೀರಾಮನನ್ನು ‘ಮರ್ಯಾದಾ ಪುರುಷೋತ್ತಮ’ ಎಂದು ಗುರುತಿಸುತ್ತಾರೆ. ದಶರಥ ಮಹಾರಾಜ ಸಂದಿಗ್ಧ ಸ್ಥಿತಿಯಲ್ಲಿದ್ದಾಗ ರಾಮ ತಂದೆಯನ್ನು ಮುಜುಗುರಕ್ಕೀಡು ಮಾಡುವುದಿಲ್ಲ. ಪಿತೃವಾಕ್ಯ ಪರಿಪಾಲಕನಾಗಿ ಕೋಶಲ ರಾಜ್ಯವನ್ನು ತಮ್ಮ ಭರತನಿಗೆ ಬಿಟ್ಟು ಕೊಡುತ್ತಾನೆ. ಒಂದಲ್ಲ ಎರಡಲ್ಲ 14 ವರ್ಷ. ಆ 14 ವರ್ಷ ಅರಮನೆಯಲ್ಲೇನೋ ಇರುವುದಿಲ್ಲ. ಕಾಡಿಗೆ ಹೋಗುತ್ತಾನೆ, ವನವಾಸ ಅನುಭವಿಸುತ್ತಾನೆ. ಅಧಿಕಾರ ತ್ಯಾಗ ರಾಮನನ್ನು ಉಳಿದ ರಾಜ ಮಹಾರಾಜರಿಗಿಂತಲೂ ಭಿನ್ನವಾಗಿಸುತ್ತದೆ. ರಾಮ ಕುರ್ಚಿಗೆ ಅಂಟಿಕೊಂಡಿದ್ದರೆ ಪುರುಷರಲ್ಲಿ ಉತ್ತಮ ಮರ್ಯಾದಾ ಪುರುಷೋತ್ತಮನೆನಿಸಿಕೊಳ್ಳುತ್ತಿರಲಿಲ್ಲ. ತಮ್ಮ ಲಕ್ಷ್ಮಣನಿಗೆ ಅಧಿಕಾರ ಕೇಂದ್ರ ಸ್ಥಾನಕ್ಕಿಂತಲೂ ಅಣ್ಣನ ಸಾಮಿಪ್ಯವೇ ಹಿರಿದಾಗಿ ಕಾಣಿಸುತ್ತದೆ. ಪತ್ನಿ ಸೀತೆ ರಾಮನ ಕಷ್ಟ-ಸುಖಗಳಲ್ಲಿ ಸಮಾನ ಪಾಲುದಾರಲಾಗುತ್ತಾಳೆ. ರಾಮ; ಆದರ್ಶ ಮಗ, ಗಂಡ, ಅಣ್ಣನಾಗಿ ಜನಸಾಮಾನ್ಯರಿಗೂ ‘ಮಾದರಿ’ ವ್ಯಕ್ತಿ ಎನಿಸಿದ್ದರಿಂದಲೇ ಮನೆಯ ಹಿರಿಯ ಮಗನಂತೆ ಭಾವಿಸುತ್ತಾರೆ. ಭಾರತದಲ್ಲಿ ರಾಮ-ಲಕ್ಷ್ಮಣರ ಹೆಸರುಗಳಿಲ್ಲದ ಊರು-ಕೇರಿಗಳಿಲ್ಲ. ದಕ್ಷಿಣ ಭರತದಲ್ಲಿ ರಾಮಭಕ್ತ ಆಂಜನೇಯ ಹೆಚ್ಚು ಜನಪ್ರಿಯ. ಹನುಮಾನ್ ದೇವರ ಗುಡಿಗಳಿಲ್ಲದ ಊರುಗಳು ಸಿಗುವುದಿಲ್ಲ. ಆಂಜನೇಯ ಯಾವುದೇ ಪಲಾಪೇಕ್ಷೆ ಇಲ್ಲದೆ ರಾಮನ ಸೇವೆ ಮಾಡಿದ.ರಾಮನಿಗಾಗಿ ತನ್ನನ್ನೇ ಸಮರ್ಪಿಸಿಕೊಂಡು ಪರಮ ರಾಮಭಕ್ತ ಎನಿಸಿಕೊಂಡ. ಭಾರತದಲ್ಲಿ, ಭಾರತದ ಆಚೆ ಶ್ರೀರಾಮನಿಗೆ ಅಸಂಖ್ಯಾತ ಭಕ್ತರಿದ್ದಾರೆ. ಆದರೆ ಅಪ್ಪಟ ಪರಮರಾಮ ಭಕ್ತರೆಂದರೆ; ಒಂದು: ಆಂಜನೇಯ, ಎರಡು: ಮಹಾತ್ಮಾ ಗಾಂಧಿ.

ನಾಥೂರಾಮ್ ಗೋಡ್ಸೆಯ ಗುಂಡೇಟು ಎದೆಗೆ ಬಿದ್ದು ಮಹಾತ್ಮಾ ಗಾಂಧೀಜಿಯವರು ನೆಲಕ್ಕುರುಳುತ್ತಾರೆ. ‘ಹೇ ರಾಮ್’ ಎಂದೇ ಕೊನೆಯುಸಿರೆಳೆಯುತ್ತಾರೆ. ರಾಮನಾಮ ಮತ್ತು ಚರಕ ಮಹಾತ್ಮಾ ಗಾಂಧೀಜಿಯವರ ಬದುಕಿನ ಅವಿಭಾಜ್ಯ ಅಂಗವಾಗಿದ್ದವು. ರಾಮನ ವ್ಯಕ್ತಿತ್ವವನ್ನು ಭಾರತೀಯ ಸಮಾಜಕ್ಕೆ ಭಿನ್ನವಾಗಿ ತೋರಿಸಿಕೊಟ್ಟ ಅವರು ಸುದೀರ್ಘ ಸಾರ್ವಜನಿಕ ಬದುಕಿನಲ್ಲಿ ಅಧಿಕಾರದಿಂದ ದೂರವೇ ಉಳಿದರು. ಎಲ್ಲರ ಹಿತ ಮುಖ್ಯ ಎಂದು ಪತಿಪಾದಿಸಿದ ಮಹಾತ್ಮಾ ಗಾಂಧೀಜಿಯವರು ಕೆಲವರ ಕೆಂಗಣ್ಣಿಗೂ ಗುರಿಯಾದರು. ಅವರ ಬದುಕಿನಲ್ಲಿ ರಾಮ ಆದಿ-ಅಂತ್ಯ ಎಲ್ಲವೂ ಆಗಿದ್ದರು. ಚರಕ ಗುರಿ ಸಾಧನೆಯ ಕ್ರಿಯಾಶೀಲ ಸಾಧನವಾಗಿತ್ತು. ರಾಮನಾಮ ಆಧ್ಯಾತ್ಮಿಕ ಉನ್ನತಿಗೆ ಬಳಸಿಕೊಂಡರೇ ಹೊರತು ರಾಜಕೀಯ ಲಾಭಕ್ಕೆ ಬಳಸಿಕೊಳ್ಳಲಿಲ್ಲ. ಅಷ್ಟಕ್ಕೂ ಮಹಾತ್ಮಾ ಗಾಂಧೀಜಿಯವರಿಗೆ ರಾಮರಾಜ್ಯ ಸಾಕಾರಗೊಳ್ಳುವುದು ಮುಖ್ಯವಾಗಿತ್ತೇ ಹೊರತು ಅಧಿಕಾರ ರಾಜಕಾರಣದಲ್ಲಿ ರಾಮನಂತೆ ನಿರಾಸಕ್ತಿ ಹೊಂದಿದ್ದರು. ರಾಮನ ತತ್ವಾದರ್ಶಗಳಲ್ಲಿ ಅಚಲ ನಿಷ್ಠೆಯುಳ್ಳವರು, ಅಪ್ಪಟ ರಾಮಭಕ್ತರಾದ ಆಂಜನೇಯ ಮತ್ತು ಮಹಾತ್ಮಾ ಗಾಂಧೀಜಿಯವರಂತೆ ನಿಸ್ವಾರ್ಥ ಬದುಕು ನಡೆಸುವ ಸಾಮಾನ್ಯ ಪ್ರಜೆಯೂ ನೈಜ ರಾಮಭಕ್ತನೇ. ಅಷ್ಟಕ್ಕೂ ಭಾರತೀಯ ಅಧ್ಯಾತ್ಮ ಪರಂಪರೆಯಲ್ಲಿ ದೇವರು ಧರ್ಮ ಮತ್ತು ಭಕ್ತಿ ವ್ಯಕ್ತಿಗತವಾದುದು. ಮಂತ್ರ ಜಪದಲ್ಲಿ ಮಾನಸಿಕ ಜಪವನ್ನು ಅತ್ಯಂತ ಶ್ರೇಷ್ಠವಾದ ಪದ್ಧತಿಯೆಂದು ಬಲವಾಗಿ ನಂಬಲಾಗಿದೆ.

ಜನಮಾನಸದಲ್ಲಿ ನೆಲೆ ನಿಂತ ಮರ್ಯಾದಾ ಪುರುಷೋತ್ತಮ ರಾಮ; ಭಾರತೀಯ ಜನತಾ ಪಕ್ಷದವರಿಗೆ 90ರ ದಶಕದವರೆಗೆ ನೆನಪಿಗೆ ಬರಲೇ ಇಲ್ಲ. ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಮಹಾತ್ಮಾ ಗಾಂಧೀಜಿಯವರು ರಾಮ ನಾಮವನ್ನು ತಮ್ಮ ಉಸಿರಿನ ಭಾಗವಾಗಿಸಿಕೊಂಡಿದ್ದರು. 1980ಕ್ಕೂ ಮುಂಚೆ ಭಾರತೀಯ ಜನತಾ ಪಕ್ಷದ ಮುಖಂಡರು ಆರೆಸ್ಸೆಸ್ ತತ್ವಾದರ್ಶಗಳಲ್ಲಿ ಅಚಲವಾದ ನಂಬಿಕೆ ಇಟ್ಟುಕೊಂಡಿದ್ದರೂ ರಾಜಕೀಯ ನೆಲೆ ಕಂಡುಕೊಳ್ಳಲು ಕೆಲವು ಕಾಲ ಜೆಪಿ ಚಳವಳಿ ಮತ್ತು ಜನತಾ ಪಕ್ಷದ ಭಾಗವಾಗಿದ್ದರು. ಆಗ ವಂಶಾಡಳಿತ ಮತ್ತು ಕಾಂಗ್ರೆಸ್ ವಿರೋಧಿ ರಾಜಕಾರಣವೇ ಎಲ್ಲ ಪಕ್ಷಗಳ ಗುರಿಯಾಗಿತ್ತು. ಕಾಂಗ್ರೆಸ್ ವಿರೋಧಿ ಶಕ್ತಿಗಳೆಲ್ಲ ಒಗ್ಗೂಡಿ ಮೊರಾರ್ಜಿ ದೇಸಾಯಿ ಅವರ ನೇತೃತ್ವದಲ್ಲಿ ಕೇಂದ್ರದಲ್ಲಿ ಸರಕಾರವೂ ರಚನೆಯಾಗಿತ್ತು. ಬಿಜೆಪಿಯ ಹಿರಿಯ ಮುಖಂಡ ಅಟಲ್ ಬಿಹಾರಿ ವಾಜಪೇಯಿಯವರು ಕೇಂದ್ರ ಸರಕಾರದಲ್ಲಿ ಮಂತ್ರಿಯೂ ಆಗಿದ್ದರು. ಆ ಸಮ್ಮಿಶ್ರ ಸರಕಾರ ಹೆಚ್ಚು ಕಾಲ ಬಾಳಲಿಲ್ಲ. ಸಂಘ ಪರಿವಾರ ಮತ್ತು ಜನಸಂಘದೊಂದಿಗೆ ಗುರುತಿಸಿ ಕೊಂಡ ಮುಖಂಡರು 1980ರಲ್ಲಿ ಭಾರತೀಯ ಜನತಾ ಪಕ್ಷ ಎಂಬ ಪಕ್ಷವನ್ನು ಹುಟ್ಟು ಹಾಕಿದರು. 1980ರಿಂದ 1990ರ ವರೆಗೆ ಬಿಜೆಪಿಯವರು ಎಷ್ಟೇ ಪ್ರಯತ್ನಿಸಿದರೂ ರಾಜಕೀಯವಾಗಿ ಪ್ರವರ್ಧಮಾನಕ್ಕೆ ಬರಲು ಸಾಧ್ಯವಾಗಲೇ ಇಲ್ಲ. ಆಗ ಅವರಿಗೆ ರಾಮ ಮತ್ತು ರಾಮ ಜನ್ಮಭೂಮಿ ನೆನಪಾದವು.

ಹಿಂದಿ ಭಾಷಿಕ ರಾಜ್ಯಗಳಲ್ಲಿ ತುಳಸಿದಾಸರ ರಾಮಚರಿತ ಮಾನಸ ಮತ್ತು ರಾಮ ಮನೆಮಾತಾಗಿದ್ದರು. ಉತ್ತರ ಭಾರತದಲ್ಲಿ ದಿಲ್ಲಿ ಸುಲ್ತಾನರು ಮತ್ತು ಸ್ಥಳೀಯ ರಾಜರುಗಳ ನಡುವೆ ಯುದ್ಧ ನಡೆದ ರಕ್ತಸಿಕ್ತ ಚರಿತ್ರೆ ಕಣ್ಣೆದುರಿಗಿತ್ತು. ಹಳೆಯ ಗಾಯಗಳನ್ನು ಕೆರೆದು ಚರಿತ್ರೆ ನೆನಪು ಮಾಡಿಕೊಳ್ಳುವುದು ಮತ್ತು ಮುಸ್ಲಿಮ್ ವಿರೋಧಿ ಭಾವನೆ ಕೆರಳಿಸಿ ಹಿಂದೂ ಮತಗಳನ್ನು ಧ್ರುವೀಕರಿಸುವುದು ಬಿಜೆಪಿಯ ಕಾರ್ಯಸೂಚಿಯಾಯಿತು. ಮರ್ಯಾದಾ ಪುರುಷೋತ್ತಮ, ಆದರ್ಶವಾದಿ ಶ್ರೀರಾಮನನ್ನು ಬಿಜೆಪಿ ಕಣ್ಣೋಟದಲ್ಲಿ ‘ಜೈ ಶ್ರೀ ರಾಮ್’ ಘೋಷಣೆಯಲ್ಲಿ ಹಿಡಿದಿಟ್ಟು ಅಯೋಧ್ಯೆಗೆ ಸೀಮಿತಗೊಳಿಸುವ ಹುನ್ನಾರ ಮಾಡತೊಡಗಿತು. ಬಿಜೆಪಿಯ ಹಿರಿಯ ಮುಖಂಡ ಲಾಲ್‌ಕೃಷ್ಣ ಅಡ್ವಾಣಿ ಅವರ ನೇತೃತ್ವದಲ್ಲಿ ರಾಮರಥಯಾತ್ರೆ ಸಜ್ಜುಗೊಳಿಸಿತು. ಹೊಸ ಕಥಾನಕ ಸೃಷ್ಟಿಸಲಾಯಿತು. ಅಯೋಧ್ಯೆಯ ಬಾಬರಿ ಮಸೀದಿಯನ್ನು ವಿವಾದಿತ ಸ್ಥಳವನ್ನಾಗಿ ಮಾಡಲಾಯಿತು. ಬಾಬರ್ ಬರುವ ಮುಂಚೆ ಅಲ್ಲಿ ರಾಮ ಮಂದಿರ ಇತ್ತು, ಅದು ರಾಮ ಜನಿಸಿದ ಪವಿತ್ರ ಸ್ಥಳ, ರಾಮಮಂದಿರವನ್ನು ಕೆಡವಿ ಬಾಬರಿ ಮಸೀದಿ ಕಟ್ಟಲಾಗಿದೆ, ರಾಮಮಂದಿರ ಕಟ್ಟಲು ಅವಕಾಶ ನೀಡಬೇಕು ಎಂದು ನ್ಯಾಯಾಲಯದ ಮೊರೆ ಹೋಗಲಾಯಿತು.

ಆದರೆ ಅವರಿಗೆ ತೀರ್ಪು ಬರುವವರೆಗೂ ತಾಳ್ಮೆ ಇರಲಿಲ್ಲ. ಡಿಸೆಂಬರ್ 6, 1992ರಂದು ವಿಶ್ವ ಹಿಂದೂ ಪರಿಷತ್ ಮತ್ತು ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು ಲಾಲ್‌ಕೃಷ್ಣ ಅಡ್ವಾಣಿ, ಮುರಳಿ ಮನೋಹರ ಜೋಶಿ, ಉಮಾ ಭಾರತಿ ಮುಂತಾದವರ ನೇತೃತ್ವದಲ್ಲಿ ವಿವಾದಿತ ಬಾಬರಿ ಮಸೀದಿಯತ್ತ ಧಾವಿಸಿದರು. ಆಗ ಉತ್ತರ ಪ್ರದೇಶದಲ್ಲಿ ಬಿಜೆಪಿಯ ಕಲ್ಯಾಣ್‌ಸಿಂಗ್ ಮುಖ್ಯಮಂತ್ರಿಯಾಗಿದ್ದರು. ಲಕ್ಷಾಂತರ ಸಂಖ್ಯೆಯಲ್ಲಿದ್ದ ಕರಸೇವಕರು ನೋಡ ನೋಡುತ್ತಿದ್ದಂತೆ ಬಾಬರಿ ಮಸೀದಿಯನ್ನು ಧ್ವಂಸಗೊಳಿಸಿದರು. ಅದರ ಪರಿಣಾಮವಾಗಿ ದೇಶಾದ್ಯಂತ ಕೋಮುಗಲಭೆಗಳಾಗಿ ಅಂದಾಜು 2,000 ಜನ ಜೀವಕಳೆದುಕೊಂಡರು. ಅಟಲ್ ಬಿಹಾರಿ ವಾಜಪೇಯಿಯವರು ‘‘ಇದು ಆಗಬಾರದಿತ್ತು. ವಿಷಾದ ವ್ಯಕ್ತಪಡಿಸುತ್ತೇನೆ’’ ಎಂದು ಹೇಳಿ ಮೊಸಳೆ ಕಣ್ಣೀರು ಸುರಿಸಿದರು.

ಬಾಬರಿ ಮಸೀದಿ ಧ್ವಂಸ ಪ್ರಕರಣದ ತನಿಖೆಗೆ ಎಂ. ಎಸ್. ಲಿಬರ್ಹಾನ್ ಅಧ್ಯಕ್ಷತೆಯ ಆಯೋಗ ನೇಮಿಸಲಾಯಿತು. ಆಯೋಗವು 2009ರ ಜೂನ್ 30ರಂದು 1,029 ಪುಟಗಳ ವರದಿಯನ್ನು ಅಂದಿನ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರಿಗೆ ಸಲ್ಲಿಸಿತು. ನ್ಯಾಯಾಲಯಗಳ ತಿರುಗಣಿಯಲ್ಲಿ ವರ್ಷಗಳು ಕಳೆದವು. ಆದರೆ ತಪ್ಪಿತಸ್ಥರಿಗೆ ಶಿಕ್ಷೆಯಾಗಲಿಲ್ಲ. 30.9.2020ರಂದು ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸುರೇಂದ್ರ ಕುಮಾರ್ ಅವರು ಸಾಕ್ಷ್ಯಾಧಾರದ ಕೊರತೆ ಮುಂದು ಮಾಡಿ ಎಲ್.ಕೆ. ಅಡ್ವಾಣಿ, ಡಾ. ಮುರಳಿ ಮನೋಹರ ಜೋಶಿ, ಉಮಾ ಭಾರತಿ, ವಿನಯ ಕಟಿಯಾರ್ ಸೇರಿ ಎಲ್ಲಾ 23 ಜನ ಆರೋಪಿಗಳನ್ನು ಖುಲಾಸೆಗೊಳಿಸಿದರು. ಭಾರತದ ಸಮಸ್ತ ಜನತೆಯೇ ಸಾಕ್ಷಿಯಾಗಿದ್ದ ಬಾಬರಿ ಮಸೀದಿ ಧ್ವಂಸ ಪಕಾರಣ ಪ್ರಜಾಪ್ರಭುತ್ವ ಮತ್ತು ನ್ಯಾಯಾಂಗವನ್ನು ಅಣಕಿಸುವಂತೆ ಇತಿಹಾಸದ ಭಾಗವಾಯಿತು. ಆರೋಪಿಗಳು ಖುಲಾಸೆಯಾಗುವ ಮುಂಚೆಯೇ ಸುಪ್ರೀಂ ಕೋರ್ಟ್ ದಿನಾಂಕ 9.11.2019ರಲ್ಲಿ ಮುಖ್ಯ ನ್ಯಾಯಮೂರ್ತಿ ಡಿ. ವೈ. ಚಂದ್ರಚೂಡ್ ನೇತೃತ್ವದ ಐದು ಜನ ನ್ಯಾಯಾಧೀಶರ ಪೀಠ ಬಾಬರಿ ಮಸೀದಿ ಕಡವಿದ ಜಾಗದಲ್ಲಿ ರಾಮಮಂದಿರ ಕಟ್ಟಲು ಆದೇಶದಲ್ಲಿ ಒಪ್ಪಿಗೆ ನೀಡಿತು. ಮೂರು ತಿಂಗಳಲ್ಲಿ ರಾಮಮಂದಿರ ನಿರ್ಮಾಣದ ಟ್ರಸ್ಟ್ ರಚಿಸಲು ಸೂಚಿಸಿತ್ತು. ರಾಮಮಂದಿರ ನಿರ್ಮಾಣ ಸ್ಥಳದಲ್ಲಿ ಮಸೀದಿ ಕಟ್ಟಲು ಉತ್ತರಪ್ರದೇಶದ ಸುನ್ನಿ ಕೇಂದ್ರ ವಕ್ಫ್ ಬೋರ್ಡ್‌ಗೆ ಐದು ಎಕರೆ ಜಮೀನು ನೀಡಲೂ ಸೂಚಿಸಿದೆ.

ರಾಮಭಕ್ತ ಮಹಾತ್ಮಾ ಗಾಂಧೀಜಿಯವರಿಗೆ ಅತ್ಯಂತ ಪ್ರಿಯವಾದ ‘‘ರಘುಪತಿ ರಾಘವ ರಾಜಾರಾಮ್, ಪತಿತ ಪಾವನ ಸೀತಾರಾಮ್, ಈಶ್ವರ ಅಲ್ಲಾ ತೇರೋ ನಾಮ್ ಸಬಕೋ ಸನ್ಮತಿ ದೇ ಭಗವಾನ್’’ -ಭಜನ್ ಆಶಯ ನುಚ್ಚುನೂರಾಗಿದೆ. ಬಿಜೆಪಿಯವರು ‘ಒಂದು ದೇಶ ಒಂದು ಚುನಾವಣೆ’ ಘೋಷಣೆಯ ಜೊತೆಗೆ ಒಂದು ದೇವರು-ಅದು ರಾಮ ಎಂದು ಸಾರಿ ಸಾರಿ ಹೇಳುತ್ತಿದ್ದಾರೆ. ಮರ್ಯಾದಾ ಪುರುಷೋತ್ತಮ ರಾಮನನ್ನು, ಎಲ್ಲರ ಆದರ್ಶ ಪುರುಷ ರಾಮನನ್ನು ಬಿಜೆಪಿಯ ರಾಮನನ್ನಾಗಿ ಮಾಡಿ ಚುನಾವಣಾ ರಾಜಕಾರಣಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ. ಭಾರತದಲ್ಲಿ ಮೊದಲ ಬಾರಿಗೆ ಮಂದಿರವೊಂದು ನಿರ್ಮಾಣವಾಗುತ್ತಿದೆ ಎಂಬಂತೆ ಬಿಂಬಿಸುತ್ತಿದ್ದಾರೆ. ಹಾಗೆ ಮಾಡುವ ಮೂಲಕ ಶ್ರೀ ರಾಮನನ್ನು, ನೈಜ ರಾಮಭಕ್ತರನ್ನು, ಹಿಂದೂ ಧರ್ಮವನ್ನು ಅಪಮಾನಿಸುತ್ತಿದ್ದಾರೆ. ಹಿಂದೂ ಧರ್ಮ; ಹಲವು ಮತ ಪಂಥಗಳ ಒಕ್ಕೂಟ. ವೈಷ್ಣವ, ಶೈವ, ಶಾಕ್ತ ಸೇರಿದಂತೆ ಅಸಂಖ್ಯಾತ ವಿಚಾರಧಾರೆಗಳು ಹಿಂದೂ ಧರ್ಮದ ಭಾಗವಾಗಿವೆ. ಬಹುಸಂಸ್ಕೃತಿ, ಬಹುದೇವತೆಗಳ ಸಮ್ಮಿಲನದಂತಿರುವ ಹಿಂದೂ ಧರ್ಮದಲ್ಲಿ ಬಿಜೆಪಿಯ ರಾಮನನ್ನು ವಿಜೃಂಭಿಸುವ ಮೂಲಕ ಆದಿಯೋಗಿ ಶಿವ ಸೇರಿದಂತೆ ಭಾರತದ ಅಸಂಖ್ಯಾತ ದೇವತೆಗಳನ್ನು ಗೌಣವಾಗಿ ಕಂಡು ಅವಮಾನಿಸುತ್ತಿದ್ದಾರೆ. ಕೇರಳ ರಾಜ್ಯದಲ್ಲಿ ಒಟ್ಟು 108 ದೇವಸ್ಥಾನಗಳಿವೆ. ಅವುಗಳ ಪೈಕಿ 105 ಶಿವನ ದೇವಸ್ಥಾನಗಳಿವೆ.

ಕಳೆದ ಹತ್ತು ವರ್ಷಗಳಲ್ಲಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ನಿರೀಕ್ಷಿತ ಪ್ರಮಾಣದಲ್ಲಿ ಭಾರತವನ್ನು ಅಭಿವೃದ್ಧಿಪಥದಲ್ಲಿ ಮುನ್ನಡೆಸಲು ಸಾಧ್ಯವಾಗಿಲ್ಲ. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ನಿಜವಾಗಿಯೂ ಶ್ರೀರಾಮನ ಮೇಲೆ ಭಕ್ತಿ ಇದ್ದಿದ್ದರೆ ರಾಮರಾಜ್ಯದ ಕನಸು ಸಾಕಾರಗೊಳಿಸುತ್ತಿದ್ದರು. ರಾಮರಾಜ್ಯವೆಂದರೆ ಸುಭಿಕ್ಷವಾದ, ಬಡತನ, ನಿರುದ್ಯೋಗ, ಜಾತೀಯತೆ ಇಲ್ಲದ ರಾಷ್ಟ್ರದ ಉನ್ನತ ಆದರ್ಶ ಕಲ್ಪನೆ. ಮೋದಿಯವರೇ ಹೇಳಿದಂತೆ ಕಪ್ಪು ಹಣವನ್ನು ವಿದೇಶದಿಂದ ತರಲಿಲ್ಲ. ಪ್ರತೀ ಭಾರತೀಯನ ಖಾತೆಗೆ 15 ಲಕ್ಷ ರೂ. ಜಮಾ ಆಗಲಿಲ್ಲ. ಎರಡು ಕೋಟಿ ಉದ್ಯೋಗ ಸೃಷ್ಟಿಸಲು ಸಾಧ್ಯವಾಗಲಿಲ್ಲ. ಭಾರತದಲ್ಲಿ ವಸತಿರಹಿತರ ಸಂಖ್ಯೆ ಹೆಚ್ಚಿದೆ. ಗ್ರಾಮೀಣ ಪ್ರದೇಶದಲ್ಲಿ ಶೌಚಾಲಯಗಳೇ ಇಲ್ಲ. ಸ್ಲಂ ವಾಸಿಗಳ ಸಂಖ್ಯೆ ಹೆಚ್ಚುತ್ತಿದೆ. ಬೆಲೆ ಏರಿಕೆಯನ್ನು ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ. ಸಾಕ್ಷರತಾ ಪ್ರಮಾಣ ಹೆಚ್ಚಿಲ್ಲ. ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ನಿರೀಕ್ಷಿತ ಪ್ರಮಾಣದ ಗುರಿ ತಲುಪಿಲ್ಲ. ರಾಮಭಕ್ತಿಯ ಹೆಸರಲ್ಲಿ ಉನ್ಮಾದ ತುಂಬುತ್ತಿದ್ದಾರೆ. ಬಿಜೆಪಿಯ ರಾಮನ ಹೆಸರಿನ ರಾಜಕಾರಣ ಅವರಿಗೇ ತಿರುಗುಬಾಣವಾಗುವ ಸಾಧ್ಯತೆ ಇದೆ. ಶಂಕರಾಚಾರ್ಯ ಪೀಠದ ಜೋಶಿ ಮಠದ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ, ಗೋವರ್ಧನ ಮಠದ ಸ್ವಾಮಿ ಶ್ರೀನಿಶ್ಚಲಾನಂದ ಸರಸ್ವತಿಯವರು ಬಿಜೆಪಿಯ ರಾಜಕಾರಣಕ್ಕೆ ಬೇಸತ್ತು ರಾಮಮಂದಿರ ಉದ್ಘಾಟನೆಗೆ ಹೋಗುವುದಿಲ್ಲ ಎಂದು ಹೇಳಿದ್ದಾರೆ. ಭಾರತೀಯರಿಗೆ ಶಿವ, ಪಾರ್ವತಿ, ಷಣ್ಮುಖ, ಗಣೇಶ ಸೇರಿದಂತೆ ಅಸಂಖ್ಯಾತ ದೇವರಿದ್ದಾರೆ. ಆ ಭಕ್ತರು ಏಕದೈವ ಒಪ್ಪಲಾರರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ಡಾ. ರಾಜಶೇಖರ ಹತಗುಂದಿ

ಹಿರಿಯ ಬರಹಗಾರ, ಪತ್ರಕರ್ತ

Similar News