‘ಕೂಡಿಕೆಗೆ’ ಮುಂದಾದ ಬಿಜೆಪಿ-ಜೆಡಿಎಸ್ ನಾಯಕರು

ಎಚ್.ಡಿ. ದೇವೇಗೌಡ ನೇತೃತ್ವದ ಜಾತ್ಯತೀತ ಜನತಾದಳ ತಾತ್ವಿಕವಾಗಿ ಬಿಜೆಪಿ ಮತ್ತು ಆರೆಸ್ಸೆಸ್‌ನ ತತ್ವ-ಸಿದ್ಧಾಂತಗಳನ್ನು ವಿರೋಧಿಸುತ್ತಾ ಬಂದ ಪಕ್ಷ. ಜಾತ್ಯತೀತ ಜನತಾದಳದ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹೀಂ ಅವರು ಬಸವ ಕೃಪಾ ಮತ್ತು ಕೇಶವ ಕೃಪಾದ ನಡುವಿನ ಸೈದ್ಧಾಂತಿಕ ಸಂಘರ್ಷದ ಸ್ವರೂಪವನ್ನು ನಾಡಿನ ಜನತೆಗೆ ಮನವರಿಕೆ ಮಾಡಿಕೊಟ್ಟವರು. ಕೇಶವ ಕೃಪಾದ ನಿರ್ದೇಶನದಂತೆ ನಡೆಯುತ್ತಿರುವ ರಾಜ್ಯ ಬಿಜೆಪಿಯೊಂದಿಗೆ ಅದು ಹೇಗೆ ಕೂಡಿಕೆಗೆ ಒಪ್ಪಿಕೊಳ್ಳುತ್ತಾರೆ? ಜಾತ್ಯತೀತ ಜನತಾದಳ ಹೇಳಿಕೇಳಿ ಒಂದು ಅಪ್ಪಟ ಪ್ರಾದೇಶಿಕ ಪಕ್ಷ. ಪ್ರಾದೇಶಿಕ ಆಶೋತ್ತರಗಳನ್ನು ಹತ್ತಿಕ್ಕುವ ರಾಷ್ಟ್ರೀಯ ಪಕ್ಷವಾದ ಬಿಜೆಪಿಯು ಜಾತ್ಯತೀತ ಜನತಾ ದಳವನ್ನು ‘ಸಮಾನ ಮಿತ್ರ’ ಎಂದು ಸ್ವೀಕರಿಸಲು ಸಾಧ್ಯವಿಲ್ಲ.

Update: 2023-09-16 08:20 GMT

ಅಪ್ಪಟ ಮತೀಯ ರಾಜಕಾರಣ ಮಾಡುವ, ರಾಷ್ಟ್ರೀಯ ಪಕ್ಷವಾಗಿರುವ ಭಾರತೀಯ ಜನತಾ ಪಕ್ಷವೂ, ಸ್ಥಳೀಯ ಪಕ್ಷವಾಗಿರುವ, ಹೆಸರಿನಲ್ಲೇ ‘ಜಾತ್ಯತೀತ’ ಪದವನ್ನು ಅಂಟಿಸಿಕೊಂಡಿರುವ ಜಾತ್ಯತೀತ ಜನತಾದಳ ಪಕ್ಷವೂ ‘ಕೂಡಿಕೆಗೆ’ ಮುಂದಾಗುತ್ತಿವೆ. ಜಾತ್ಯತೀತ ಜನತಾದಳದ ಅಧಿನಾಯಕ

ಎಚ್.ಡಿ. ದೇವೇಗೌಡರು ಕೊಟ್ಟ ಕಾರಣ: ಪಕ್ಷವನ್ನು ಉಳಿಸಬೇಕಾಗಿದೆ ಎಂದು. ಅವರಿಗೆ ದೇಶ ಮತ್ತು ರಾಜ್ಯದ ಉಳಿವಿಗಿಂತಲೂ ಪಕ್ಷ ಮತ್ತು ಕುಟುಂಬ ಉಳಿಯುವುದು ಮುಖ್ಯವಾಗಿದೆ ಎನಿಸುತ್ತದೆ. ದೇವೇಗೌಡರ ಕಾಳಜಿ ಮತ್ತು ಆತಂಕವನ್ನು ಅರ್ಥ ಮಾಡಿಕೊಳ್ಳುವುದು ಪಕ್ಷದ ಕಾರ್ಯಕರ್ತರಿಗೆ ಅನಿವಾರ್ಯ ಎಂಬ ಸಂದೇಶವನ್ನು ಅವರ ಮಗ ಕುಮಾರಸ್ವಾಮಿಯವರು ಈಗಾಗಲೇ ರವಾನಿಸಿದ್ದಾರೆ. ಹಿರಿಯ ರಾಜಕಾರಣಿ ದೇವೇಗೌಡರ ಜಾತ್ಯತೀತ-ಸೆಕ್ಯುಲರ್ ನಿಲುವನ್ನು ಅಷ್ಟು ಸರಳವಾಗಿ ಅನುಮಾನಿಸಲಾಗದು. ಸುದೀರ್ಘ ಕಾಲದವರೆಗೆ ಭಾರತೀಯ ಜನತಾ ಪಕ್ಷವನ್ನು, ಅದರ ಕೋಮುವಾದಿ ತಾತ್ವಿಕತೆಯನ್ನು ವಿರೋಧಿಸುತ್ತಾ ಬಂದವರು. ಬಿಜೆಪಿಯೊಂದಿಗೆ ಸೈದ್ಧಾಂತಿಕ ಭಿನ್ನಾಭಿಪ್ರಾಯ ಹೊಂದಿರದಿದ್ದರೆ ಆ ಪಕ್ಷದ ಜೊತೆಗೆ ಸೇರಿ ಸಾಕಷ್ಟು ಫಲವನ್ನು ಅನುಭವಿಸಬಹುದಿತ್ತು. ಅಷ್ಟಕ್ಕೂ ವಾಜಪೇಯಿ-ಅಡ್ವಾಣಿ ಕಾಲದ ಬಿಜೆಪಿ ಈಗಿನಷ್ಟು ಮುಸ್ಲಿಮ್ ದ್ವೇಷಿ ಆಗಿರಲಿಲ್ಲ. ಆ ಕಾರಣಕ್ಕೆ ಜಾರ್ಜ್ ಫೆರ್ನಾಂಡಿಸ್, ರಾಮಕೃಷ್ಣ ಹೆಗಡೆ, ಜೆ.ಎಚ್. ಪಟೇಲ್, ಬಿಹಾರದ ನಿತೀಶ್ ಕುಮಾರ್ ಆದಿಯಾಗಿ ಬಹುತೇಕ ಜನತಾ ಪರಿವಾರದ ಮುಖಂಡರು ಬಿಜೆಪಿಯೊಂದಿಗೆ ಕೈಜೋಡಿಸಿ ಸರಕಾರದ ಭಾಗವಾಗಿದ್ದರು.

ಕರ್ನಾಟಕದಲ್ಲಿ ಕಮ್ಯುನಿಸ್ಟ್ ನಾಯಕ ಕೆ.ಬಿ. ಶಾಣಪ್ಪ, ಜನತಾ ಪರಿವಾರದ ಹಿರಿಯ ನಾಯಕರಾದ ರಮೇಶ್ ಜಿಗಜಿಣಗಿ, ಸಿ.ಎಂ. ಉದಾಸಿ, ಸೋಮಶೇಖರ್, ಚಂದ್ರಕಾಂತ್ ಬೆಲ್ಲದ, ಗೋವಿಂದ ಕಾರಜೋಳ, ಉಮೇಶ್ ಕತ್ತಿ, ಎಸ್.ಆರ್. ಬೊಮ್ಮಾಯಿ ಅವರ ಮಗ ಬಸವರಾಜ ಬೊಮ್ಮಾಯಿ ಮುಂತಾದವರು ಬಿಜೆಪಿ ಸೇರಿ ಉದ್ಧಾರವಾದರು. ಬಸವರಾಜ ಬೊಮ್ಮಾಯಿಯಂತೂ ಮುಖ್ಯಮಂತ್ರಿ ಹುದ್ದೆಯನ್ನೇ ಅಲಂಕರಿಸಿದರು. ಅವರೆಲ್ಲ ಯಡಿಯೂರಪ್ಪ ಮತ್ತು ಅನಂತ ಕುಮಾರ್ ಅವರನ್ನು ನಂಬಿ ಬಿಜೆಪಿ ಸೇರಿದ್ದರು. ದುರಿತ ಕಾಲದಲ್ಲೇ ಬಿಜೆಪಿ ಬಗ್ಗೆ ಕಠೋರ ನಿಲುವು ತಳೆದ ದೇವೇಗೌಡರಿಗೆ ಈಗಲೂ ಬಿಜೆಪಿ ಅನಿವಾರ್ಯ ಆಗಿರಲಿಲ್ಲ. 2006ರಲ್ಲಿ ಬಿಜೆಪಿಯೊಂದಿಗೆ ಕೂಡಿಕೆ ಮಾಡಿಕೊಂಡ ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಹುದ್ದೆ ಅಲಂಕರಿಸಿದಾಗಲೂ ಸೆಕ್ಯುಲರ್ ಮನಸ್ಥಿತಿಯ ದೇವೇಗೌಡರು ಸಮ್ಮತಿ ಸೂಚಿಸಿರಲಿಲ್ಲ. ಆಗ ಬಿಜೆಪಿ ಕೇವಲ ಒಂದು ರಾಜಕೀಯ ಪಕ್ಷದ ಮನಸ್ಥಿತಿ ಹೊಂದಿತ್ತು. ಕೋಮುವಾದ ‘ಹಿಡನ್ ಅಜೆಂಡಾ’ ಆಗಿತ್ತು. ಯಡಿಯೂರಪ್ಪ ರೈತ ನಾಯಕನಾಗಿ, ಅನಂತಕುಮಾರ್ ರಾಷ್ಟ್ರೀಯ ನಾಯಕನಾಗಿ ಕರ್ನಾಟಕದಲ್ಲಿ ಪಕ್ಷವನ್ನು ಎಲ್ಲರ ಒಳಗೊಳ್ಳುವಿಕೆಯ ಮೂಲಕ ವಿಸ್ತರಿಸುವ ಅಪೇಕ್ಷೆ ಹೊಂದಿದ್ದರು. ಅಷ್ಟಕ್ಕೂ ಆಗಿನ ಬಿಜೆಪಿ ಆರೆಸ್ಸೆಸ್ ಕೈಗೊಂಬೆಯಾಗಿರಲಿಲ್ಲ. ಸಲಹೆ-ಸಹಕಾರ ಪಡೆದು ಸಗೌರವದಿಂದ ದೂರ ಉಳಿದಿತ್ತು. ರಾಜಕೀಯ ನಿರ್ಧಾರಕ್ಕೆ ವಾಜಪೇಯಿ-ಅಡ್ವಾಣಿಯವರ ಮೊರೆ ಹೋಗುತ್ತಿದ್ದರು.

ಈಗ ಬಿಜೆಪಿ ಸಂಪೂರ್ಣ ಬದಲಾಗಿದೆ. ರಾಷ್ಟ್ರಮಟ್ಟದಲ್ಲಿ ಶಕ್ತಿಶಾಲಿಯಾಗಿ ಬೆಳೆದಿದೆ. ಮೋದಿ, ಅಮಿತ್ ಶಾ, ಜೆ.ಪಿ. ನಡ್ಡಾ ಅವರ ಕಪಿಮುಷ್ಟಿಯಲ್ಲಿದೆ. ಸಂವಾದಕ್ಕೆ ಆಸ್ಪದ ಕೊಡದ ನಾಯಕರಿವರು. ತಂತ್ರ-ಕುತಂತ್ರ, ದ್ವೇಷ-ಅಸೂಯೆಯನ್ನು ಉಸಿರಾಡುತ್ತಾರೆ. ಅಧಿಕಾರಕ್ಕಾಗಿ ಏನನ್ನು ಬೇಕಾದರೂ ಮಾಡಲು ಹೇಸದವರು, ಹಿಂದುತ್ವದ ವಿಷಯದಲ್ಲಿ ಆರೆಸ್ಸೆಸನ್ನೂ ಮೀರಿಸುವಂತಿದ್ದ, ತಾತ್ವಿಕ ನೆಲೆಯಲ್ಲಿ ಸಮಾನಮನಸ್ಕರಾಗಿದ್ದ ಬಾಳಾಸಾಹೇಬ ಠಾಕ್ರೆ ಕಟ್ಟಿದ್ದ; ಸುದೀರ್ಘಕಾಲದ ಮೈತ್ರಿಯಲ್ಲಿ ಸಾಕಷ್ಟು ಅಧಿಕಾರ ಅನುಭವಿಸಿದ ಬಿಜೆಪಿಯು ಶಿವಸೇನೆಯನ್ನು ಎರಡು ಹೋಳು ಮಾಡಿತು. ಬಾಳಾಸಾಹೇಬ ಠಾಕ್ರೆಯ ಮಗ ಉದ್ಧವ್ ಠಾಕ್ರೆಯನ್ನು ಅಕ್ಷರಶಃ ಬೀದಿ ಪಾಲು ಮಾಡಿದೆ. ವಾಜಪೇಯಿ-ಅಡ್ವಾಣಿ ಕಾಲದ ಬಿಜೆಪಿಯನ್ನು ಸೈದ್ಧಾಂತಿಕ ಭಿನ್ನಾಭಿಪ್ರಾಯದ ನಡುವೆಯೂ ನಂಬಬಹುದಾಗಿತ್ತು. ಮೋದಿ-ಶಾ ಕಾಲದ ಬಿಜೆಪಿಯನ್ನು ಮಿತ್ರಪಕ್ಷಗಳೇ ಅನುಮಾನದಿಂದ ನೋಡುವಂತಾಗಿದೆ. ಕರ್ನಾಟಕದ ಬಿಜೆಪಿ ಮೋದಿ-ಶಾ ಬೆಂಬಲಿತ ಬಿ.ಎಲ್. ಸಂತೋಷ್-ಪ್ರಹ್ಲಾದ್ ಜೋಷಿಯ ಸಂಪೂರ್ಣ ಹಿಡಿತದಲ್ಲಿದೆ. ಕರ್ನಾಟಕದ ಬಿಜೆಪಿ ಮೊದಲ ಹಾಗೆ ಒಂದು ರಾಜಕೀಯ ಪಕ್ಷವಾಗಿ ಉಳಿದಿಲ್ಲ. ಆರೆಸ್ಸೆಸ್ ಹಿಡಿತದ ಕೋಮುವಾದಿ ರಾಜಕಾರಣ ಮಾಡುವ ಪಕ್ಷವಾಗಿ ಮಾರ್ಪಟ್ಟಿದೆ. ಹಲಾಲ್-ಜಟ್ಕಾ, ಟಿಪ್ಪು-ಉರಿಗೌಡ, ನಂಜೇಗೌಡ, ಹಿಜಾಬ್ ಎಂಬ ಪರಿಭಾಷೆಯಲ್ಲಿ ಮಾತನಾಡುವ ಪಕ್ಷವಾಗಿ ಬದಲಾಗಿದೆ. ಈ ಹಿಂದೆ ತೆರೆಮರೆಯಲ್ಲಿದ್ದ ವಿಚಾರಗಳು ಮುನ್ನೆಲೆಗೆ ಬಂದಿವೆ. ಅಭಿವೃದ್ಧಿ ಮಂತ್ರವನ್ನು ಕಾಲಕಸ ಮಾಡಲಾಗಿದೆ. ಯಾರಾದರೂ ಸನಾತನ ಧರ್ಮದ ದೋಷಗಳ ಬಗ್ಗೆ ಮಾತನಾಡಿದರೆ ಇದು ‘ಹಿಂದೂ ಧರ್ಮಕ್ಕೆ ಮಾಡಿದ ಅಪಮಾನ’ ಎಂದು ತಿರುಚುವ ಮತೀಯವಾದಿಗಳ ಅಡ್ಡೆಯಾಗಿದೆ. 2023ರ ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ಬಿಜೆಪಿಯ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಅವರು ಬಹಿರಂಗವಾಗಿಯೇ ‘‘ಅಭಿವೃದ್ಧಿ ಬಗ್ಗೆ ಮಾತನಾಡಬೇಡಿ, ಮತೀಯ ವಿಷಯಗಳು ಚರ್ಚಾ ಸಂಗತಿಗಳಾಗಿರಲಿ’’ ಎಂದು ಫರ್ಮಾನು ಹೊರಡಿಸಿದ್ದರು.

ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಸೈದ್ಧಾಂತಿಕ ರಾಜಕಾರಣದ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡವರಲ್ಲ. ಯಾವ ತಾತ್ವಿಕ ಮುಜುಗರವಿಲ್ಲದ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು ಅಧಿಕಾರ ಅನುಭವಿಸಿದವರು. ಅಂತಹ ಕುಮಾರಸ್ವಾಮಿ ಅವರು ಆರೆಸ್ಸೆಸ್‌ನ ಮತೀಯ ರಾಜಕಾರಣದ ‘ವಿರಾಟ್ ಸ್ವರೂಪ’ವನ್ನು ಅರ್ಥ ಮಾಡಿಕೊಂಡು 2023ರ ಚುನಾವಣೆ ಪೂರ್ವದಲ್ಲಿ ಸೈದ್ಧಾಂತಿಕ ಸ್ಪಷ್ಟತೆಯೊಂದಿಗೆ ಮಾತನಾಡಿದ ವೀಡಿಯೊ ಕ್ಲಿಪ್ಪಿಂಗ್‌ಗಳು ನೋಡಲು ಈಗಲೂ ಸಿಗುತ್ತವೆ. ಅಂತಹ ಒಂದು ವೀಡಿಯೊ ತುಣುಕಿನ ಮಾತುಗಳು ಹೀಗಿವೆ: ‘‘ಒಂದು ಕಾಲದಲ್ಲಿ ಆರೆಸ್ಸೆಸ್‌ನವರು ಬಿಜೆಪಿ ಪಕ್ಷವನ್ನು ವಿಸರ್ಜಿಸಲು ಮುಂದಾಗಿದ್ದರು. ಆರೆಸ್ಸೆಸ್ ಚರಿತ್ರೆಯನ್ನು ಇತ್ತೀಚೆಗೆ ಹೆಚ್ಚು ತಿಳಿದುಕೊಂಡಿದ್ದೇನೆ. ಈ ದೇಶ ಮತ್ತು ರಾಜ್ಯವನ್ನು ನೂರಾರು ವರ್ಷ ಹಿಂದಕ್ಕೆ ಸರಿಸುವ ಹುನ್ನಾರಗಳು ನಡೆಯುತ್ತಿರುವುದು ಯಾರು ಬೇಕಾದರೂ ಗಮನಿಸಬಹುದು. ಈ ದೇಶದ ಸಣ್ಣ ಪುಟ್ಟ ಸಮಾಜಗಳಿಗೆ ಆರೆಸ್ಸೆಸ್‌ನವರು ಶಿಕ್ಷಣ ಕೊಡಲಿಲ್ಲ. ಸಂಘ-ಸಂಸ್ಥೆಗಳು ಕೊಟ್ಟಿವೆ. ಆರೆಸ್ಸೆಸ್‌ನವರಿಗೆ ಇರುವುದು ಒಂದೇ ಅಜೆಂಡಾ. ‘ದಿ ಡೀಪ್‌ನೆಸ್’ ಕೃತಿಯ ಪ್ರಕಾರ ಅವರು ಬಡತನದ ಬಗ್ಗೆ, ಇನ್ನಿತರ ಸಮಸ್ಯೆಗಳ ಬಗ್ಗೆ, ಅಭಿವೃದ್ಧಿ ಬಗ್ಗೆ ಕಿಂಚಿತ್ ಕಾಳಜಿ ಹೊಂದಿಲ್ಲ. ಅವರ ಬೈಠಕ್‌ಗಳಲ್ಲಿ ಚರ್ಚೆ ನಡೆದಿಲ್ಲ. ಅವರ ಚರ್ಚೆಗಳು ಈ ದೇಶವನ್ನು ತಮ್ಮ ಕಪಿಮುಷ್ಟಿಯಲ್ಲಿ ಹೇಗೆ ಹಿಡಿದಿಟ್ಟುಕೊಳ್ಳಬೇಕೆಂಬುದಷ್ಟೇ ಮುಖ್ಯ. ವಾಜಪೇಯಿಯವರು ಪ್ರಧಾನಿಯಾಗಿದ್ದಾಗ ದಿಲ್ಲಿಯಲ್ಲಿ ಆರೆಸ್ಸೆಸ್ ಬೈಠಕ್ ನಡೆಯುತ್ತದೆ. ಆ ಬೈಠಕ್‌ನಲ್ಲಿ ಭಾಗವಹಿಸಬೇಕೆಂದರೆ ಪ್ರಧಾನಿ, ಗೃಹಮಂತ್ರಿ ಚಡ್ಡಿ ಹಾಕಿಕೊಂಡು ಬರಬೇಕೆಂದು ಷರತ್ತು ವಿಧಿಸುತ್ತಾರೆ. ಆವತ್ತಿನ ಬಿಜೆಪಿಯ ಅಧ್ಯಕ್ಷರು ಚಡ್ಡಿ ಹಾಕಿಕೊಂಡು, ದೊಣ್ಣೆ ತರಲಿಲ್ಲ ಎಂದು ಹೇಳಿ ಬೈಠಕ್ ನಿಂದ ಹೊರದಬ್ಬುತ್ತಾರೆ. ಇದೆಲ್ಲ ಇತಿಹಾಸವನ್ನು ಓದುತ್ತಾ ಹೋದರೆ ನನಗೆ ಮೈನಡುಕ ಬಂತು. ಇವತ್ತು ಈ ನಾಡಿನ ಯುವಕರು ಆರೆಸ್ಸೆಸ್‌ನ ಹುನ್ನಾರಗಳಿಗೆ ಬಲಿಯಾಗಬಾರದು ಎಂದು ವಿನಂತಿಸುತ್ತೇನೆ. ಆರೆಸ್ಸೆಸ್ ಕುರಿತ ವಾಸ್ತವ ಅಂಶಗಳನ್ನು ಈ ದೇಶದ ಜನತೆಗೆ ತಿಳಿಸದಿದ್ದರೆ ಈ ದೇಶದ ಜನರಿಗೆ ದ್ರೋಹ ಮಾಡಿದಂತೆ’’ ಎಂದು ಜ್ಞಾನೋದಯವಾದಂತೆ ಮಾತುಗಳನ್ನಾಡಿದ್ದರು.

ಕೇವಲ ಒಂದು ವರ್ಷದ ಹಿಂದೆಯಷ್ಟೇ ಆರೆಸ್ಸೆಸ್ ಅಜೆಂಡಾವನ್ನು ಸಂಪೂರ್ಣ ಅರ್ಥ ಮಾಡಿಕೊಂಡು ಆ ಸಂಘಟನೆಯ ಬಗ್ಗೆ ಎಚ್ಚರದಿಂದ ಇರಿ ಎಂದು ಕರೆಕೊಟ್ಟ ಕುಮಾರಣ್ಣ ಅವರು ಈಗ ಬಿಜೆಪಿಯೊಂದಿಗಿನ ಮೈತ್ರಿಯನ್ನು ನಾಡಿನ ಒಳಿತಿಗಾಗಿ ಅನಿವಾರ್ಯ ಎಂದು ವಾದಿಸುತ್ತಿದ್ದಾರೆ. ಪ್ರಹ್ಲಾದ್ ಜೋಷಿಯವರನ್ನು ಗುರಿಮಾಡಿ ಚಿತ್ಪಾವನ ಬ್ರಾಹ್ಮಣರು, ಗೋಡ್ಸೆ ಸಂತತಿ ಈ ರಾಜ್ಯದ ಮುಖ್ಯಮಂತ್ರಿಯಾಗಬಹುದೆಂದು ಹೇಳುವ ಮೂಲಕ ಕಿಡಿ ಹೊತ್ತಿಸಿದರು. 2023ರ ಚುನಾವಣೆಯಲ್ಲಿ ನಾಡಿನ ಅಲ್ಪಸಂಖ್ಯಾತರು ಜೆಡಿಎಸ್‌ನ ಕೈ ಹಿಡಿಯಲಿಲ್ಲ. ಹಾಗಾಗಿ ಆ ಪಕ್ಷಕ್ಕೆ ನಿರೀಕ್ಷಿತ ಸೀಟುಗಳು ಬರಲಿಲ್ಲ. ಕುಮಾರಸ್ವಾಮಿಯವರ ಸಂಕಟವನ್ನು ಅರ್ಥಮಾಡಿಕೊಳ್ಳಬಹುದು. ಅಷ್ಟಕ್ಕೂ ದೇವೇಗೌಡ ಮತ್ತು ಕುಮಾರಸ್ವಾಮಿಯವರಿಗೆ ಕಾಂಗ್ರೆಸ್ ಮತ್ತದರ ಹೈಕಮಾಂಡ್ ಬಗ್ಗೆ ಅಪಾರ ಗೌರವ ಇದೆ. ‘ಇಂಡಿಯಾ’ ಮೈತ್ರಿಕೂಟದಲ್ಲಿನ ಎಲ್ಲಾ ನಾಯಕರು ದೇವೇಗೌಡರಿಗೆ ಅತ್ಯಂತ ಆತ್ಮೀಯರು. ಕಾಂಗ್ರೆಸ್ ಜೊತೆಗಿನ ಸಖ್ಯಕ್ಕೆ ಅಡ್ಡಿಯಾಗಿರುವುದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗಿನ ಹಳೆಯ ಮನಸ್ತಾಪ. ಕಾಂಗ್ರೆಸ್ ಹೈಕಮಾಂಡ್‌ಗೆ ಸಿದ್ದರಾಮಯ್ಯ ಅನಿವಾರ್ಯವಾಗಿದ್ದರಿಂದ ಎಲ್ಲರೂ ಸಾಂದರ್ಭಿಕ ಶಿಶುಗಳಂತೆ ನಡೆದುಕೊಳ್ಳುತ್ತಿದ್ದಾರೆ. ಸೈದ್ಧಾಂತಿಕ ರಾಜಕಾರಣಕ್ಕಿಂತಲೂ ವೈಯಕ್ತಿಕ ದ್ವೇಷಾಸೂಯೆಗಳು ಮುಖ್ಯವಾಗುತ್ತಿವೆ. ದೇವೇಗೌಡರು ಮೋದಿ-ಶಾರನ್ನು ಭೇಟಿ ಮಾಡಿ ಬಿಜೆಪಿಯೊಂದಿಗೆ ಸಖ್ಯ ಬೆಳೆಸಲು ಘನವಾದ ಸೈದ್ಧಾಂತಿಕ ಕಾರಣಗಳಿಲ್ಲ.

ಎಚ್.ಡಿ. ದೇವೇಗೌಡ ನೇತೃತ್ವದ ಜಾತ್ಯತೀತ ಜನತಾದಳ ತಾತ್ವಿಕವಾಗಿ ಬಿಜೆಪಿ ಮತ್ತು ಆರೆಸ್ಸೆಸ್‌ನ ತತ್ವ-ಸಿದ್ಧಾಂತಗಳನ್ನು ವಿರೋಧಿಸುತ್ತಾ ಬಂದ ಪಕ್ಷ. ಜಾತ್ಯತೀತ ಜನತಾದಳದ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹೀಂ ಅವರು ಬಸವ ಕೃಪಾ ಮತ್ತು ಕೇಶವ ಕೃಪಾದ ನಡುವಿನ ಸೈದ್ಧಾಂತಿಕ ಸಂಘರ್ಷದ ಸ್ವರೂಪವನ್ನು ನಾಡಿನ ಜನತೆಗೆ ಮನವರಿಕೆ ಮಾಡಿಕೊಟ್ಟವರು. ಕೇಶವ ಕೃಪಾದ ನಿರ್ದೇಶನದಂತೆ ನಡೆಯುತ್ತಿರುವ ರಾಜ್ಯ ಬಿಜೆಪಿಯೊಂದಿಗೆ ಅದು ಹೇಗೆ ಕೂಡಿಕೆಗೆ ಒಪ್ಪಿಕೊಳ್ಳುತ್ತಾರೆ? ಜಾತ್ಯತೀತ ಜನತಾದಳ ಹೇಳಿಕೇಳಿ ಒಂದು ಅಪ್ಪಟ ಪ್ರಾದೇಶಿಕ ಪಕ್ಷ. ಪ್ರಾದೇಶಿಕ ಆಶೋತ್ತರಗಳನ್ನು ಹತ್ತಿಕ್ಕುವ ರಾಷ್ಟ್ರೀಯ ಪಕ್ಷವಾದ ಬಿಜೆಪಿಯು ಜಾತ್ಯತೀತ ಜನತಾ ದಳವನ್ನು ‘ಸಮಾನ ಮಿತ್ರ’ ಎಂದು ಸ್ವೀಕರಿಸಲು ಸಾಧ್ಯವಿಲ್ಲ.

2023ರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಭದ್ರಕೋಟೆಯಂತಿರುವ ಹಳೆ ಮೈಸೂರು ಭಾಗದ ಮೇಲೆ ಹಿಡಿತ ಸಾಧಿಸಲು ಬಿಜೆಪಿ ಏನೆಲ್ಲಾ ಕಸರತ್ತು ಮಾಡಿತು ಎನ್ನುವುದು ದೇವೇಗೌಡ ಮತ್ತು ಕುಮಾರಸ್ವಾಮಿಯವರಿಗೆ ಚೆನ್ನಾಗಿ ಗೊತ್ತಿದೆ. ಸಿ.ಟಿ. ರವಿ ಅವರಿಗೆ ಬಿಜೆಪಿಯ ರಾಷ್ಟ್ರೀಯ ಜನರಲ್ ಸೆಕ್ರೆಟರಿ ಹುದ್ದೆ ನೀಡಿದ್ದು, ಅಶ್ವತ್ಥನಾರಾಯಣ ಅವರಿಗೆ ಉಪಮುಖ್ಯಮಂತ್ರಿ ಮಾಡಿ ರಾಮನಗರ ಜಿಲ್ಲಾ ಉಸ್ತುವಾರಿಯನ್ನಾಗಿಸಿದ್ದು, ಪ್ರತಾಪಸಿಂಹ ಅವರ ಹಾರಾಟಕ್ಕೆ ಮತ್ತಷ್ಟು ಬಲ ನೀಡಿದ್ದು, ಅಂಬರೀಷ್ ಅವರ ಪತ್ನಿ ಸುಮಲತಾ ಅವರನ್ನು ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಬಹಿರಂಗವಾಗಿ ಬೆಂಬಲಿಸಿದ್ದು, ಟಿಪ್ಪು ಕೊಂದಿದ್ದು ಊರಿಗೌಡ ನಂಜೇಗೌಡರು ಎಂಬ ಕಟ್ಟುಕತೆಗೆ ವ್ಯಾಪಕ ಪ್ರಚಾರ ನೀಡಿದ್ದು ಒಕ್ಕಲಿಗ ಸಮುದಾಯದ ಮತಬ್ಯಾಂಕ್ ಮೇಲೆ ಸಂಪೂರ್ಣ ಹಿಡಿತ ಸಾಧಿಸುವ ರಾಜಕೀಯ ತಂತ್ರದ ಭಾಗವಾಗಿ.

ಬಿಜೆಪಿಯ ಎಲ್ಲಾ ತಂತ್ರಗಳು ವಿಫಲವಾದಾಗ ಈಗ ಜೆಡಿಎಸ್‌ನೊಂದಿಗೆ ಸ್ನೇಹ ಬೆಳೆಸಲು ಮುಂದಾಗಿದ್ದು ಕೂಡ ರಾಜಕೀಯ ತಂತ್ರಗಾರಿಕೆಯೇ. ಹಾಗೆ ನೋಡಿದರೆ ಬಿಜೆಪಿ-ಜೆಡಿಎಸ್ ಮೈತ್ರಿಯಿಂದ ಎರಡೂ ಪಕ್ಷಗಳಿಗೆ ಹೆಚ್ಚಿನ ಲಾಭವಿಲ್ಲ. ಸಿದ್ದರಾಮಯ್ಯ, ಸಿಂಧ್ಯಾ, ಎಂ.ಪಿ. ಪ್ರಕಾಶ್ ಹೊರತುಪಡಿಸಿದ ಜಾತ್ಯತೀತ ಜನತಾದಳ ಹೆಚ್ಚು ಸೀಟು ಪಡೆದದ್ದು 2013ರ ಚುನಾವಣೆಯಲ್ಲಿ. 2013ರ ಚುನಾವಣೆಯಲ್ಲಿ ಬಿಜೆಪಿ ಕೇವಲ 40 ಸೀಟು ಪಡೆದು ಪಾತಾಳಕ್ಕೆ ಕುಸಿದಿತ್ತು. ಆಗ ಜೆಡಿಎಸ್ ಕೂಡ ಬಿಜೆಪಿಗೆ ಸಮಾನವಾಗಿ 40 ಸೀಟು ಗಳಿಸಿತ್ತು. ಅಂದರೆ ಬಿಜೆಪಿ ಬಲ ಕುಸಿದಾಗ ಜೆಡಿಎಸ್‌ಗೆ ಹೆಚ್ಚು ಲಾಭವಾಗಿದೆ. 2008ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 110 ಸೀಟುಗಳನ್ನು ಗಳಿಸಿತ್ತು. ಅಂದರೆ ಬಿಜೆಪಿಯ ಬಲ ಮೊದಲ ಬಾರಿಗೆ ಗಣನೀಯವಾಗಿ ಹೆಚ್ಚಿತ್ತು. ಆಗ ಜೆಡಿಎಸ್ ಕೇವಲ 28 ಸ್ಥಾನಗಳಿಗೆ ತೃಪ್ತಿಪಟ್ಟುಕೊಳ್ಳಬೇಕಾಯಿತು. ಕಾಂಗ್ರೆಸ್ ತನ್ನ ಬಲವನ್ನು 80ಕ್ಕೆ ಹೆಚ್ಚಿಸಿಕೊಂಡಿತ್ತು. 2018ರ ಚುನಾವಣೆಯಲ್ಲಿ ಬಿಜೆಪಿ 104 ಸ್ಥಾನ ಪಡೆದು ಮೊದಲ ಸ್ಥಾನದಲ್ಲಿ ಇದ್ದರೆ; ಐದು ವರ್ಷಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್ 80 ಸೀಟುಗಳನ್ನು ಪಡೆದಿತ್ತು. ಆದರೆ ಜೆಡಿಎಸ್ 37 ಸ್ಥಾನಗಳನ್ನು ಪಡೆಯುವ ಮೂಲಕ 3 ಸ್ಥಾನಗಳನ್ನು ಕಳೆದುಕೊಂಡಿತ್ತು. 2023ರ ಚುನಾವಣೆಯಲ್ಲಿ ಜೆಡಿಎಸ್ 19 ಸ್ಥಾನಗಳಿಗೆ ಕುಸಿದಿದೆ. 1983, 1985, 1994ರ ವಿಧಾನಸಭಾ ಚುನಾವಣೆಯಲ್ಲಿ ಜನತಾದಳ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಪರ್ಯಾಯ ಶಕ್ತಿಯಾಗಿ ಅಧಿಕಾರದ ಗದ್ದುಗೆ ಏರಿತ್ತು. ಜನತಾದಳ ಸೋತ ಮತ್ತು ಗೆದ್ದ ಚುನಾವಣೆಗಳಲ್ಲಿ ಬಿಜೆಪಿ ಮೂರನೇ ಸ್ಥಾನದಲ್ಲಿ ಇರುತ್ತಿತ್ತು. 2004ರ ಚುನಾವಣೆಯಲ್ಲಿ ಬಿಜೆಪಿ 79 ಸ್ಥಾನ ಪಡೆಯುವ ಮೂಲಕ ಮೊದಲ ಸ್ಥಾನದಲ್ಲಿತ್ತು. ಕಾರಣ ಜನತಾ ಪರಿವಾರದ ಅನೇಕರು ಬಿಜೆಪಿ ಸೇರಿದ್ದರು. ಸಿದ್ದರಾಮಯ್ಯನವರು ಜನತಾದಳ (ಜೆಡಿಎಸ್)ದಲ್ಲಿದ್ದಾಗ ಆ ಪಕ್ಷ 58 ಸೀಟು ಪಡೆದು ಎರಡನೇ ಸ್ಥಾನದಲ್ಲಿತ್ತು. ಸಿದ್ದರಾಮಯ್ಯನವರು ಕಾಂಗ್ರೆಸ್ ಸೇರಿದಾಗಿನಿಂದ ಆ ಪಕ್ಷ ಒಂದೋ ಅಧಿಕಾರದ ಚುಕ್ಕಾಣಿ ಹಿಡಿದಿದೆ; ಇಲ್ಲ 80 ಸೀಟು ಪಡೆದು ಎರಡನೇ ಸ್ಥಾನದಲ್ಲಿದೆ. ಬಿಜೆಪಿ ಬೆಳವಣಿಗೆಯಿಂದ ಹಾನಿಯಾದದ್ದು ಜನತಾ ಪರಿವಾರ ಮತ್ತು ಜೆಡಿಎಸ್‌ಗೆ. ರಾಜ್ಯದಲ್ಲಿ ಬಿಜೆಪಿ ಬೆಳವಣಿಗೆಯಾದಷ್ಟು ಜೆಡಿಎಸ್ ದುರ್ಬಲವಾಗುತ್ತಾ ಹೋಗುತ್ತದೆ. ಜೆಡಿಎಸ್ ಮೂರನೇ ಸ್ಥಾನಕ್ಕಿಳಿಯುವ ಮೂಲಕ ಬಿಜೆಪಿಯ ಮತಬ್ಯಾಂಕ್ ಪ್ರಮಾಣ ಹೆಚ್ಚಿಸಿದೆ. ಅರ್ಥಾತ್ ಬಿಜೆಪಿ-ಜೆಡಿಎಸ್ ಮತಬ್ಯಾಂಕ್ ಕಾಂಗ್ರೆಸ್ ವಿರೋಧಿ ನೆಲೆಗೆ ಸೇರಿದ್ದು. ಕಾಂಗ್ರೆಸ್ ಮತಬ್ಯಾಂಕ್ ಅಧಿಕಾರಕ್ಕೆ ಬಂದಾಗ ಹೆಚ್ಚಿರುತ್ತದೆ. ಸೋತಾಗ ಬಿಜೆಪಿ ಅಧಿಕಾರಕ್ಕೆ ಹತ್ತಿರವಾಗುತ್ತದೆ.

ಬಿಜೆಪಿ ಜೆಡಿಎಸ್ ಮೈತ್ರಿಯ ತಾತ್ವಿಕ ಆಯಾಮ ಬದಿಗಿಟ್ಟು ನೋಡಿದರೂ ಮೈತ್ರಿಯಿಂದ ಜಾತ್ಯತೀತ ಜನತಾದಳಕ್ಕೆ ಹೆಚ್ಚಿನ ಲಾಭವಿಲ್ಲ. ಹಾಲಿ 19 ಸೀಟುಗಳಲ್ಲಿ ಶಾರದಾ ಪೂರ್ಯಾ ನಾಯಕ, ಕರೆಮ್ಮ ನಾಯಕ, ಶರಣಗೌಡ ಕಂದಕೊರ ಮುಂತಾದವರು ಗೆದ್ದದ್ದೇ ಬಿಜೆಪಿ ಅಭ್ಯರ್ಥಿಗಳ ವಿರುದ್ಧ ಸೆಣಸಾಡಿ. ಬೀದರ್‌ನಲ್ಲಿ ಬಿಜೆಪಿಯ ಶೈಲೇಂದ್ರ ಬೆಲ್ದಾಳೆ ಗೆದ್ದದ್ದೇ ಜೆಡಿಎಸ್‌ನ ಬಂಡೆಪ್ಪ ಖಾಶೆಂಪುರ್ ವಿರುದ್ಧ. ದಾಸರಳ್ಳಿಯಲ್ಲಿ ಮುನಿರಾಜು ಗೆಲುವು ಸಾಧಿಸಿದ್ದು ಜೆಡಿಎಸ್‌ನ ಮಂಜುನಾಥ್‌ರ ಮೇಲೆ. ಹಾಸನದಲ್ಲಿ ಬಿಜೆಪಿಯ ಪ್ರೀತಮ್ ಗೌಡ ಸೋತಿದ್ದು ಜೆಡಿಎಸ್‌ನ ಸ್ವರೂಪ್ ಪ್ರಕಾಶ್ ವಿರುದ್ಧ. ಕಾಂಗ್ರೆಸ್‌ಗೆ ಬಿಜೆಪಿ ಪರ್ಯಾಯ ಶಕ್ತಿಯಾಗಿ ಬೆಳೆದು ನಿಂತಿದೆ. ಹೀಗಿರುವಾಗ ಜೆಡಿಎಸ್-ಬಿಜೆಪಿ ಮೈತ್ರಿಯಿಂದ ಕಾಂಗ್ರೆಸ್ ಶಕ್ತಿ ಕುಂದಿಸಲಾಗದು. ಈ ಮೈತ್ರಿಯಿಂದ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್‌ಗೆ ತಾತ್ಕಾಲಿಕ ಲಾಭ ದೊರೆಯಬಹುದು. ಆದರೆ ಕಾಂಗ್ರೆಸ್‌ಗೆ ಪರ್ಯಾಯ ಶಕ್ತಿಯಾಗಿ ಜೆಡಿಎಸ್ ಬೆಳೆಯಲು ಆಗುವುದಿಲ್ಲ. ಶಿವಮೊಗ್ಗದಲ್ಲಿ ಜೆಡಿಎಸ್‌ಗೆ ತುಸು ನೆಲೆ ಇರುವುದರಿಂದ ಬಿಜೆಪಿ ಅಭ್ಯರ್ಥಿಗೆ ಲಾಭವಾಗಬಹುದು. ಉತ್ತರ ಕರ್ನಾಟಕದಲ್ಲಿ ಜೆಡಿಎಸ್‌ಗೆ ಖಾಯಂ ಮತಬ್ಯಾಂಕ್ ಇಲ್ಲ. ಮೈತ್ರಿಯಿಂದ ಬಿಜೆಪಿಗೆ ಲಾಭವಿಲ್ಲ. ಕಾಂಗ್ರೆಸ್ ಮೂರನೆಯ ಅಭ್ಯರ್ಥಿಯ ಮತ ವಿಭಜನೆ ಅಪಾಯದಿಂದ ಸುರಕ್ಷಿತವಾಗಿ ಉಳಿಯುತ್ತದೆ. ಬಿಹಾರದಲ್ಲಿ ಲಾಲು ಪ್ರಸಾದ್ ಅವರನ್ನು ಜೈಲಿಗೆ ಕಳುಹಿಸಿದ್ದೇ ನಿತೀಶ್ ಕುಮಾರ್. ಅವರಿಬ್ಬರನ್ನು ಒಂದು ಮಾಡಿದ್ದೇ ಬಿಜೆಪಿಯ ಬೆಳವಣಿಗೆ. ಬಿಜೆಪಿಯೊಂದಿಗಿನ ಮೈತ್ರಿಯಿಂದ ನಿತೀಶ್ ಕುಮಾರ್ ಪಕ್ಷ ದುರ್ಬಲವಾಯಿತು. ಇದು ಜೆಡಿಎಸ್‌ಗೆ ಪಾಠವಾಗಬೇಕು. ಇಲ್ಲದಿದ್ದರೆ ಪಶ್ಚಾತ್ತಾಪ ಗ್ಯಾರಂಟಿ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Contributor - ಡಾ. ರಾಜಶೇಖರ ಹತಗುಂದಿ

ಹಿರಿಯ ಬರಹಗಾರ, ಪತ್ರಕರ್ತ

Similar News