ಬಿಜೆಪಿಯ ಸೋಲು ಅನಾಥ
ಚುನಾವಣೆಗಳಲ್ಲಿ ಸೋಲು-ಗೆಲುವು ಸಹಜ. ಚುನಾವಣೆಯಲ್ಲಿ ಸೋತ ವ್ಯಕ್ತಿ ಮತ್ತು ಪಕ್ಷದ ಕಥೆ ಮುಗಿಯಿತು ಎಂದು ಯಾರೂ ಭಾವಿಸುವಂತಿಲ್ಲ. ಗೆದ್ದಾಗ ಗೆಲುವಿಗೆ ನಾವೇ ಕಾರಣ ಎಂದು ಬೀಗುವವರು ಸೋತಾಗಲೂ ಸೋಲಿನ ನೈತಿಕ ಹೊಣೆ ಹೊತ್ತು ಸೌಜನ್ಯ ಮೆರೆಯುವುದು ಭವಿಷ್ಯದ ದೃಷ್ಟಿಯಿಂದ ಒಳ್ಳೆಯದು. ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆ ನಡೆದು ಫಲಿತಾಂಶ ಹೊರ ಬಿದ್ದು ಎರಡೂವರೆ ತಿಂಗಳಾಯಿತು. ಕರ್ನಾಟಕದ ಬಿಜೆಪಿ ಮುಖಂಡರು ಸೋಲಿನ ನೈತಿಕ ಹೊಣೆ ಹೊರುವುದು, ಆತ್ಮಾವಲೋಕನ ಮಾಡಿಕೊಳ್ಳುವುದು ಒತ್ತಟ್ಟಿಗಿರಲಿ ಸೋಲಿಗೆ ಕಾರಣವಾದ ಅಂಶಗಳು ಯಾವುವು? ಯಾರ ತಂತ್ರಗಾರಿಕೆಯಿಂದ ಹೀನಾಯ ಸೋಲಾಯಿತು ಎಂದು ಪ್ರಾಮಾಣಿಕವಾಗಿ ಒಪ್ಪಿಕೊಳ್ಳುವ ಮನಸ್ಥಿತಿಯನ್ನೇ ಹೊಂದಿಲ್ಲ.
ಆ ಕಾರಣಕ್ಕೆ ಗೆದ್ದ ಬಿಜೆಪಿ ಶಾಸಕರಿಗೆ ಒಬ್ಬ ನಾಯಕನನ್ನು ಆಯ್ಕೆ ಮಾಡಿಕೊಳ್ಳಲು ಸಾಧ್ಯವಾಗಿಲ್ಲ. ಸೋಲಿನ ನೈತಿಕ ಹೊಣೆಹೊತ್ತು ಬಿಜೆಪಿಯ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡದೆ ಇರುವುದರಿಂದ ಆ ಸ್ಥಾನದ ನೇಮಕದ ಬಗ್ಗೆ ಮಾತನಾಡದಿರುವುದು ಒಳ್ಳೆಯದು. ಹಾಗೆ ನೋಡಿದರೆ; ಬಿಜೆಪಿ ರಾಜ್ಯಾಧ್ಯಕ್ಷರಾಗಿ ನಳಿನ್ ಕುಮಾರ್ ಕಟೀಲು ಅವರನ್ನು ನೇಮಕ ಮಾಡಿದ ದಿನದಿಂದ ಪಕ್ಷ ಸಂಘಟನೆಯಲ್ಲಿ ವಿಘಟನೆ ಮತ್ತು ಅಶಿಸ್ತು ಗೋಚರಿಸತೊಡಗಿತು. ಎಲ್ಲಕ್ಕೂ ಮಿಗಿಲಾಗಿ ೨೦೧೮ರ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ಹಂಚಿಕೆ ಸಮಯದಲ್ಲಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರು ಹಸ್ತಕ್ಷೇಪ ಮಾಡಿದ್ದರಿಂದಲೇ ಸರಳ ಬಹುಮತ ದಕ್ಕಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಆಗ ಸಂತೋಷ್ ಅವರು ಇನ್ನೂ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಹುದ್ದೆಯನ್ನು ಅಲಂಕರಿಸಿರಲಿಲ್ಲ. ರಾಮ್ ಲಾಲ್ ಮೂಲಕ ತಮಗೆ ಬೇಕಾದ್ದನ್ನು ಸಾಧಿಸಿಕೊಳ್ಳುತ್ತಿದ್ದರು.
ಬಿ.ಎಲ್. ಸಂತೋಷ್ ಅಪಾರವಾದ ರಾಜಕೀಯ ತಿಳುವಳಿಕೆ ಮತ್ತು ಸಂಘಟನಾ ಸಾಮರ್ಥ್ಯ ಹೊಂದಿರುವ ಮುಖಂಡ. ಆದರೆ ಜನಸಾಮಾನ್ಯರ ನಾಡಿಮಿಡಿತ ಅರಿಯಬಲ್ಲ ಜನನಾಯಕ ಅಲ್ಲ. ಆರೆಸ್ಸೆಸ್ ತತ್ವ ಸಿದ್ಧಾಂತಗಳಲ್ಲಿ ಗಾಢ ಶ್ರದ್ಧೆ-ನಿಷ್ಠೆ ಹೊಂದಿದ್ದಾರೆ. ತತ್ವ ಸಿದ್ಧಾಂತಗಳಿಗೆ ಮಾನವೀಯ ಸ್ಪರ್ಶ ಇರುವಷ್ಟು ಕರುಣಾಮಯಿ ಅಲ್ಲ. ಒಂದೇ ಮಾತಿನಲ್ಲಿ ಹೇಳಬೇಕೆಂದರೆ ಬಿ.ಎಸ್. ಯಡಿಯೂರಪ್ಪನವರ ತದ್ವಿರುದ್ಧ ಸ್ವಭಾವದವರು. ಸಂತೋಷ್ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿಯಾಗಿ ನೇಮಕವಾದ ದಿನದಿಂದ ಕರ್ನಾಟಕ ಬಿಜೆಪಿಯಲ್ಲಿ ತಾಳಮೇಳ ತಪ್ಪಿಹೋಯಿತು. ೨೦೧೯ರ ಲೋಕಸಭಾ ಚುನಾವಣೆಯ ಹೊತ್ತಿಗೆ ಸಂತೋಷ್ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಅವರಿಗೆ ಹತ್ತಿರವಾದರು. ಅರ್ಥಾತ್ ಬಿಜೆಪಿ ಹೈಕಮಾಂಡ್‌ನ ಭಾಗವಾದರು. ‘‘ವ್ಯಕ್ತಿಯ ಡಿಎನ್‌ಎ ನೋಡಿ ಟಿಕೆಟ್ ಕೊಡಲಾಗದು’’ ಎಂದು ಹೇಳಿ ಬಿಜೆಪಿಯ ಹಿರಿಯ ನಾಯಕ ದಿ.ಅನಂತ್ ಕುಮಾರ್ ಪತ್ನಿ ಶ್ರೀಮತಿ ತೇಜಸ್ವಿನಿ ಅನಂತಕುಮಾರ್ ಅವರಿಗೆ ಲೋಕಸಭಾ ಟಿಕೆಟ್ ತಪ್ಪಿಸುವ ಮೂಲಕ ಸಂತೋಷ್ ಪ್ರಾಬಲ್ಯ ಮೆರೆದರು.
ಯಡಿಯೂರಪ್ಪ ಮತ್ತು ಅನಂತ್ ಕುಮಾರ್ ಅವರ ಸಂಬಂಧ ಕೊನೆಗಾಲದಲ್ಲಿ ಸಂಪೂರ್ಣ ಹಳಸಿತ್ತು. ಹಾಗಿದ್ದರೂ ಯಡಿಯೂರಪ್ಪ ತೇಜಸ್ವಿನಿ ಅನಂತ್ ಕುಮಾರ್ ಅವರಿಗೆ ಟಿಕೆಟ್ ಕೊಡಲು ಒಲವು ಹೊಂದಿದ್ದರು. ೨೦೧೯ರ ಲೋಕಸಭಾ ಚುನಾವಣಾ ಫಲಿತಾಂಶ ಹೊರಬೀಳುವವರೆಗೂ ಬಿಜೆಪಿ ಹೈಕಮಾಂಡ್ ಯಡಿಯೂರಪ್ಪ ಮಾತಿಗೆ ಮನ್ನಣೆ ನೀಡುತ್ತಿತ್ತು. ಯಾವಾಗ ಬಿಜೆಪಿಗೆ ಬಂಪರ್ ಗೆಲುವು ಪ್ರಾಪ್ತವಾಯಿತೋ ಹೈಕಮಾಂಡ್ ವರಸೆ ಬದಲಾಯಿತು. ೨೮ ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಸುಮಲತಾ ಸೇರಿ ೨೬ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದರು. ಆ ಭರ್ಜರಿ ಗೆಲುವಿಗೆ ಅಪ್ಪ ಅಮ್ಮ ಎಲ್ಲ ಮೋದಿಯವರೇ ಆಗಿದ್ದರು. ಸಂತೋಷ್ ತಂತ್ರಗಾರಿಕೆ ಹೈಕಮಾಂಡ್ ಮೆಚ್ಚುಗೆ ಗಳಿಸಿತು. ಯಡಿಯೂರಪ್ಪ ಸೇರಿ ಸ್ಥಳೀಯ ಮುಖಂಡರ ಪಾತ್ರವನ್ನು ಲೆಕ್ಕಕ್ಕೆ ತೆಗೆದುಕೊಳ್ಳಲಿಲ್ಲ. ಕರ್ನಾಟಕ ಲಿಂಗಾಯತ ಮತಗಳು ಸಂಪೂರ್ಣ ಕೈ ತಪ್ಪಬಾರದು ಎಂದು ಯಡಿಯೂರಪ್ಪರ ‘ಆಪರೇಷನ್ ಕಮಲ’ಕ್ಕೆ ಬಿಜೆಪಿ ಹೈಕಮಾಂಡ್ ಬೆಂಬಲಿಸಿತು. ‘ಆಪರೇಷನ್ ಕಮಲ’ದ ಮೂಲಕ ಮುಖ್ಯಮಂತ್ರಿಯಾದ ದಿನದಿಂದ ಅವರನ್ನು ಕುರ್ಚಿಯಿಂದ ಕೆಳಗಿಳಿಸುವ ‘ಬ್ಲೂಪ್ರಿಂಟ್’ ಸಿದ್ಧವಾಗಿತ್ತು. ಕೆಟ್ಟ ಹೆಸರು ಯಡಿಯೂರಪ್ಪ ತಲೆಗೆ ಕಟ್ಟುವುದು, ಲಾಭ ಮಾತ್ರ ಸಂಘ ಪರಿವಾರದ ಎಲ್ಲರಿಗೂ ಸೇರುವಂತೆ ನೋಡಿಕೊಂಡರು.
ಸಮಸ್ತ ಚುನಾವಣಾ ವಿದ್ಯಮಾನಗಳು ಸಂತೋಷ್ ಆಣತಿಯಂತೆ ಮೋದಿ ಕೇಂದ್ರಿತವಾಗಿ ನಡೆದಿರುವಾಗ ಸೋಲಿನ ಹೊಣೆ ಯಾರದು? ಕುಮಾರಸ್ವಾಮಿಯವರು ಬ್ರಾಹ್ಮಣ ಮುಖ್ಯಮಂತ್ರಿ ಅಸ್ತ್ರಬಿಟ್ಟಾಗಲಾದರೂ ಬಿಜೆಪಿ ಹೈಕಮಾಂಡ್ ಸ್ಪಷ್ಟ ನಿರ್ಧಾರ ಕೈಗೊಳ್ಳಬೇಕಾಗಿತ್ತು. ಈಗಲೂ ಕಾಲ ಮಿಂಚಿಲ್ಲ. ಬಿ.ಎಲ್. ಸಂತೋಷ್ ಅವರು ‘‘ಈ ಸೋಲಿಗೆ ನಾನೇ ಕಾರಣ’’ ಎಂದು ಒಪ್ಪಿಕೊಂಡು ನೇರ ರಾಜಕಾರಣಕ್ಕೆ ಬಂದರೆ ರಾಜ್ಯದ ಜನತೆ ಅವರನ್ನು ಆಯ್ಕೆ ಮಾಡಬೇಕೋ ಬೇಡವೋ ಎಂದು ನಿರ್ಧರಿಸಿಯಾರು. ಕುತಂತ್ರದ ಮತ್ತು ಕೋಮುವಾದಿ ರಾಜಕಾರಣವನ್ನು ರಾಜ್ಯದ ಮತದಾರ ಯಾವತ್ತೂ ಒಪ್ಪಿಕೊಳ್ಳುವುದಿಲ್ಲ ಎಂಬ ಸತ್ಯ ಮನಗಾಣ ಬೇಕಷ್ಟೇ.
ಆ ಕಾರಣಕ್ಕೆ ಬಿಜೆಪಿ ಹೈಕಮಾಂಡ್ ಯಡಿಯೂರಪ್ಪ ಅವರಿಗೆ ಫ್ರೀ ಹ್ಯಾಂಡ್ ನೀಡಲಿಲ್ಲ. ಆಗ ಉತ್ತರ ಕರ್ನಾಟಕ ಅತಿವೃಷ್ಟಿಯಿಂದ ಪ್ರವಾಹದಲ್ಲಿ ಮುಳುಗಿ ಹೋಗಿತ್ತು. ಜನರ ಬದುಕು ಬೀದಿ ಪಾಲಾಗಿತ್ತು. ಮುಖ್ಯಮಂತ್ರಿ ಯಡಿಯೂರಪ್ಪ ಏಕಾಂಗಿಯಾಗಿ ರಾಜ್ಯ ಸುತ್ತಿದರು. ಮಂತ್ರಿಮಂಡಲ ರಚನೆಗೆ ಅವಕಾಶವೇ ನೀಡಲಿಲ್ಲ. ಪ್ರವಾಹದಲ್ಲಿ ಜನ ಬದುಕು ಕಳೆದುಕೊಂಡರೂ ಪ್ರಧಾನಿ ನರೇಂದ್ರ ಮೋದಿಯವರು ಸೌಜನ್ಯಕ್ಕೂ ಸಾಂತ್ವನ ಹೇಳಲಿಲ್ಲ. ತಡವಾಗಿ ಸಂಪುಟ ರಚನೆಗೆ ಅವಕಾಶವೇನೋ ದೊರೆಯಿತು. ಬಿ.ಎಲ್. ಸಂತೋಷ್ ಸೂಚಿಸಿದ ಮೂವರಿಗೆ ಉಪಮುಖ್ಯಮಂತ್ರಿ ಹುದ್ದೆ ನೀಡಲಾಯಿತು. ಅದರಲ್ಲೂ ಚುನಾವಣೆಯಲ್ಲಿ ಸೋತ ಲಕ್ಷ್ಮಣ್ ಸವದಿಯವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಿದ್ದು ಬಿಜೆಪಿಯ ಎಲ್ಲರಿಗೂ ಬೆರಗು ಹುಟ್ಟಿಸಿತ್ತು. ಹೆಚ್ಚಿನ ಅನುದಾನಕ್ಕೆ ಯಡಿಯೂರಪ್ಪ ಎಷ್ಟೇ ಗೋಗರೆೆದರೂ ಕೇಂದ್ರ ಸರಕಾರ ಸ್ಪಂದಿಸಲಿಲ್ಲ. ಸಂತೋಷ್ ‘ಇಶಾರೆ’ಯಂತೆ ನಡೆದುಕೊಳ್ಳತೊಡಗಿತು. ಹೈಕಮಾಂಡ್ ‘ಗುಮ್ಮ’ ತೋರಿಸಿ ಸಂತೋಷ್ ಮತ್ತು ಸಂಘ ಪರಿವಾರ ಮುಖ್ಯಮಂತ್ರಿ ಯಡಿಯೂರಪ್ಪನವರ ಮೇಲೆ ಅಕ್ಷರಶಃ ಸವಾರಿ ಮಾಡತೊಡಗಿದರು. ಪುತ್ರ ವ್ಯಾಮೋಹದ ಕಾರಣಕ್ಕೆ ಯಡಿಯೂರಪ್ಪ ಎಲ್ಲವನ್ನೂ ಸಹಿಸಿಕೊಂಡರು. ಅಕಾಡಮಿ, ಪ್ರಾಧಿಕಾರ, ಸಿಂಡಿಕೇಟ್ ಸದಸ್ಯರ ನೇಮಕಾತಿಯಲ್ಲಿ ಯಡಿಯೂರಪ್ಪನವರ ಮಾತು ನಡೆಯದಂತೆ ನೋಡಿಕೊಂಡರು. ಕುವೆಂಪು ಭಾಷಾ ಭಾರತಿ, ಲಲಿತಕಲಾ ಅಕಾಡಮಿ, ಸಂಗೀತ ಅಕಾಡಮಿ ಸೇರಿದಂತೆ ಸುಮಾರು ೨೦ ಕಡೆ ಒಂದೇ ಕೋಮಿನ ಸಂಘಗಳು ಸ್ಥಾನಮಾನ ಗಿಟ್ಟಿಸಿಕೊಂಡವು. ಸಾಮಾಜಿಕ ನ್ಯಾಯ, ಮಹಿಳಾ ನ್ಯಾಯ, ಪ್ರಾದೇಶಿಕ ನ್ಯಾಯ ಲೆಕ್ಕಕ್ಕೆ ಹಿಡಿಯಲಿಲ್ಲ. ‘ಸಂತೋಷ್ ನ್ಯಾಯ’ವೊಂದೇ ಪಾಲನೆಯಾಗ ತೊಡಗಿತು. ರೈತರು, ಬಡವರು, ನಿರುದ್ಯೋಗಿ ಯುವಕರು ಮತ್ತು ಅವರ ಸಮಸ್ಯೆಗಳು ಸಂತೋಷ್ ಕಾಳಜಿಯ ವಲಯದಲ್ಲಿ ಸೇರಿಕೊಳ್ಳಲೇ ಇಲ್ಲ.
ಹೆಜ್ಜೆ ಹೆಜ್ಜೆಗೂ ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಸಂತೋಷ್ ಸೂಚನೆಗಳು ಹೈಕಮಾಂಡ್ ಆದೇಶ ರೂಪದಲ್ಲಿ ಕಟ್ಟಿ ಹಾಕತೊಡಗಿದವು. ಮಗ ವಿಜಯೇಂದ್ರರ ಭವಿಷ್ಯದ ದೃಷ್ಟಿಯಿಂದ ಹುಲಿಯಂತಿದ್ದ ಯಡಿಯೂರಪ್ಪ ಅಕ್ಷರಶಃ ಇಲಿಯಾದರು. ‘ಸಂತೋಷ’ಮಯವಾದ ಮಾಧ್ಯಮಗಳಲ್ಲಿ ವಿಜಯೇಂದ್ರರ ಭ್ರಷ್ಟಾಚಾರ ವ್ಯಾಪಕ ಪ್ರಚಾರ ಪಡೆಯಿತು. ಕೂಗು ಮಾರಿ ಖ್ಯಾತಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತವರ ಮಗ ವಿಜಯೇಂದ್ರರನ್ನು ಟೀಕಿಸುವುದನ್ನು ದಂಧೆ ಮಾಡಿಕೊಂಡರು. ಬಿಜೆಪಿಯ ಪ್ರಶ್ನಾತೀತ ನಾಯಕ ಯಡಿಯೂರಪ್ಪ ಯತ್ನಾಳ್ ನಾಲಿಗೆಯ ಮೇಲೆ ಯಕಶ್ಚಿತ್ ಬೈಗುಳದ ವಸ್ತುವಾದರು. ಬೇರೆ ಪಕ್ಷದಲ್ಲಿ ನಾಯಕನನ್ನು ಹೀಗೆ ಟೀಕಿಸಿದ್ದರೆ ಪಕ್ಷದಿಂದ ಉಚ್ಚಾಟನೆ ಮಾಡುತ್ತಿದ್ದರು. ಮೊದಲಿನ ಸ್ವಾಭಿಮಾನಿ ಯಡಿಯೂರಪ್ಪರಾಗಿದ್ದರೆ ತಕ್ಕ ಶಾಸ್ತಿ ಮಾಡುತ್ತಿದ್ದರು. ಪುತ್ರ ವ್ಯಾಮೋಹಿ ಯಡಿಯೂರಪ್ಪ ಎಲ್ಲವನ್ನು ಕೃಪೆ ಎಂದೇ ‘ಸಂತೋಷ’ದಿಂದ ಸಹಿಸಿಕೊಂಡರು. ಪಕ್ಷಕ್ಕೆ ಒಂದೇ ಒಂದು ವೋಟು ತಂದುಕೊಡಲಾಗದ ಈರಣ್ಣ ಕಡಾಡಿ, ಅಶೋಕ್ ಗಸ್ತಿ, ಕೃಷ್ಣಮೂರ್ತಿ ರಾಜ್ಯಸಭಾ ಸದಸ್ಯರಾದರು. ಶಾಂತರಾಮ ಸಿದ್ದಿ, ಕೇಶವಪ್ರಸಾದ್ ಮುಂತಾದವರೆಲ್ಲ ‘ಸಂತೋಷ’ವಾಗಿ ವಿಧಾನಪರಿಷತ್ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಏಕಾಏಕಿ ಬಿಜೆಪಿ ಹೈಕಮಾಂಡ್‌ಗೆ ಯಡಿಯೂರಪ್ಪನವರ ವಯಸ್ಸು ನೆನಪಾಯಿತು. ವಯಸ್ಸು ಮೀರಿದ್ದರಿಂದ ಮುಖ್ಯಮಂತ್ರಿ ಹುದ್ದೆ ತಜಿಸಲೇಬೇಕೆಂಬ ಒತ್ತಡ ಜಾಸ್ತಿಯಾಯಿತು. ಕೇರಳದ ಚುನಾವಣೆಯಲ್ಲಿ ೮೫ ವರ್ಷದ ಶ್ರೀಧರನ್ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯೆಂದು ಬಿಂಬಿಸಲು ಸಲಹೆ ನೀಡಿದ ಸಂತೋಷ್ ಅವರೇ ಯಡಿಯೂರಪ್ಪ ಪೀಠದ ತ್ಯಾಗದ ದಿನಗಳನ್ನು ಕಾತರದಿಂದ ಎದುರು ನೋಡತೊಡಗಿದರು. ಕಣ್ಣೀರು ಹಾಕಿ ಪುತ್ರ ವ್ಯಾಮೋಹಿ ಯಡಿಯೂರಪ್ಪ ಮುಖ್ಯಮಂತ್ರಿ ಹುದ್ದೆ ಬಿಟ್ಟುಕೊಟ್ಟರು. ಮಗನ ಏಳ್ಗೆಯಾಗಬಹುದು ಎಂದು ಸಂಘ ಪರಿವಾರಕ್ಕೆ ಸೇರದ, ಜನತಾ ಪರಿವಾರದಿಂದ ಬಂದ ಬಸವರಾಜ ಬೊಮ್ಮಾಯಿ ಅವರನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ಕೂರಿಸಲು ಕೊನೆ ಆಸೆ ಎನ್ನುವಂತೆ ಹೈಕಮಾಂಡ್‌ಗೆ ಯಡಿಯೂರಪ್ಪ ಮನವಿ ಮಾಡಿಕೊಂಡರು. ಅಸಂತೋಷದಿಂದಲೇ ಬಸವರಾಜ ಬೊಮ್ಮಾಯಿ ಅವರ ಪಟ್ಟಾಭಿಷೇಕವಾಯಿತು. ಆಕಸ್ಮಿಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಮ್ಮ ರಾಜಕೀಯ ಅನುಭವ ಆಧರಿಸಿ ರಾಜ್ಯದ ಹಿತ ದೃಷ್ಟಿಯಿಂದ ಉತ್ತಮ ಆಡಳಿತ ನೀಡಿದರೆ ಮತದಾರ ಕೈಬಿಡುತ್ತಿರಲಿಲ್ಲವೇನೋ? ಬಸವರಾಜ ಬೊಮ್ಮಾಯಿ ಅವರು ಅಕ್ಷರಶಃ ಸಂತೋಷ್ ಕೈಯ ಸೂತ್ರದ ಗೊಂಬೆಯಾದರು. ರೈತರ ಮಕ್ಕಳಿಗೆ ಸಹಾಯ ಧನ ನೀಡುವ ನಿರ್ಧಾರವನ್ನು ಹೊರತುಪಡಿಸಿ ಉಳಿದೆಲ್ಲ ಪ್ರಮುಖ ತೀರ್ಮಾನಗಳನ್ನು ಸಂಘ ಪರಿವಾರ ಮತ್ತು ಸಂತೋಷ್ ಆಣತಿಯಂತೆ ಕೈಗೊಳ್ಳುತ್ತಿದ್ದರು. ಮತಾಂತರ ಕಾಯ್ದೆ, ಗೋಹತ್ಯೆ ನಿಷೇಧ ಸೇರಿದಂತೆ ಮತೀಯವಾದಿ ನಿಲುವುಗಳು ಸಂತೋಷ ಸೂಚನೆಯಲ್ಲೇ ಜಾರಿಗೊಳ್ಳುತ್ತಿದ್ದವು. ಕೂಗುಮಾರಿ ಬಸನಗೌಡ ಪಾಟೀಲ್ ಯತ್ನಾಳ್ ಪಂಚಮಸಾಲಿ ಹೋರಾಟವನ್ನು ಮುನ್ನಡೆಸುವಾಗ ‘ಸಂತೋಷ’ದಿಂದಲೇ ಕಿರುಕುಳವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಹಿಸಿಕೊಂಡರು. ಬೊಮ್ಮಾಯಿಯವರು ಕೂಡ ಪರಮ ಗುಲಾಮನಂತೆ ಆಜ್ಞಾಪಾಲಕರಾದರು. ಮತಕ್ಷೇತ್ರ ಗಟ್ಟಿ ಮಾಡಿಕೊಂಡು ಆದೇಶ ಪಾಲಿಸಿದರೆ ಲಾಭವಾಗಬಹುದೆಂದು ಭಾವಿಸಿದ ಅವರು ಚುನಾವಣಾ ಫಲಿತಾಂಶದಿಂದ ಖಳನಾಯಕರಾಗಿದ್ದಾರೆ.
೨೦೨೩ರ ಚುನಾವಣೆಯಲ್ಲಿ ಟಿಕೆಟ್ ಹಂಚಿಕೆ ತಂತ್ರಗಾರಿಕೆ ರೂಪಿಸುವುದ ರಿಂದ ಹಿಡಿದು ಎಲ್ಲಾ ಹಂತದಲ್ಲೂ ಸಂತೋಷ್ ಮೇಲುಗೈ ಸಾಧಿಸಿದ್ದರು. ಟಿಪ್ಪು, ಹಿಜಾಬ್, ಹಲಾಲ್, ಜಟ್ಕಾ, ಮತೀಯ ಸಂಘರ್ಷ, ಹಿಂದುತ್ವ ಒಳಮೀಸಲಾತಿ, ಮುಸ್ಲಿಮ್ ಮೀಸಲಾತಿ ರದ್ದು ಇತ್ಯಾದಿಗಳು ಸಂತೋಷ್ ಪರಿಕಲ್ಪನೆಯ ಕೂಸುಗಳು. ಶೆಟ್ಟರ್, ಸವದಿಗೆ ಟಿಕೆಟ್ ಇಲ್ಲ ಕಾಗೇರಿ, ಸುರೇಶ್ ಕುಮಾರ್‌ಗೆ ಟಿಕೆಟ್ ಸಿಗುತ್ತದೆ. ಅರವಿಂದ ಲಿಂಬಾವಳಿ ಟಿಕೆಟ್ ಕೇಳಿದರೆ ಡಿಎನ್‌ಎ ಫಾರ್ಮುಲಾದಿಂದ ಅವರ ಹೆಂಡತಿಗೆ ಅವಕಾಶ ಕಲ್ಪಿಸಲಾಗುತ್ತದೆ. ಸಂಸದ ಸಂಗಣ್ಣ ಕರಡಿ ಕೊಪ್ಪಳ ಟಿಕೆಟ್ ಕೇಳಿದರೆ ಡಿಎನ್‌ಎ ಫಾರ್ಮುಲಾ ಮಗನಿಗೂ ಬೇಡ ಸೊಸೆಗೆ ಅವಕಾಶ ನೀಡು ಎಂದು ಹೇಳುತ್ತದೆ.
ಸಮಸ್ತ ಚುನಾವಣಾ ವಿದ್ಯಮಾನಗಳು ಸಂತೋಷ್ ಆಣತಿಯಂತೆ ಮೋದಿ ಕೇಂದ್ರಿತವಾಗಿ ನಡೆದಿರುವಾಗ ಸೋಲಿನ ಹೊಣೆ ಯಾರದು? ಕುಮಾರಸ್ವಾಮಿಯವರು ಬ್ರಾಹ್ಮಣ ಮುಖ್ಯಮಂತ್ರಿ ಅಸ್ತ್ರಬಿಟ್ಟಾಗಲಾದರೂ ಬಿಜೆಪಿ ಹೈಕಮಾಂಡ್ ಸ್ಪಷ್ಟ ನಿರ್ಧಾರ ಕೈಗೊಳ್ಳಬೇಕಾಗಿತ್ತು. ಈಗಲೂ ಕಾಲ ಮಿಂಚಿಲ್ಲ. ಬಿ.ಎಲ್. ಸಂತೋಷ್ ಅವರು ‘‘ಈ ಸೋಲಿಗೆ ನಾನೇ ಕಾರಣ’’ ಎಂದು ಒಪ್ಪಿಕೊಂಡು ನೇರ ರಾಜಕಾರಣಕ್ಕೆ ಬಂದರೆ ರಾಜ್ಯದ ಜನತೆ ಅವರನ್ನು ಆಯ್ಕೆ ಮಾಡಬೇಕೋ ಬೇಡವೋ ಎಂದು ನಿರ್ಧರಿಸಿಯಾರು. ಕುತಂತ್ರದ ಮತ್ತು ಕೋಮುವಾದಿ ರಾಜಕಾರಣವನ್ನು ರಾಜ್ಯದ ಮತದಾರ ಯಾವತ್ತೂ ಒಪ್ಪಿಕೊಳ್ಳುವುದಿಲ್ಲ ಎಂಬ ಸತ್ಯ ಮನಗಾಣ ಬೇಕಷ್ಟೇ.