ಸ್ವಜಾತಿಪ್ರೇಮ: ಕಾಂಗ್ರೆಸ್ ನಾಯಕರ ಕಿತ್ತಾಟ

ಶಾಮನೂರು ಶಿವಶಂಕರಪ್ಪ ಸೇರಿದಂತೆ ಕಾಂಗ್ರೆಸ್‌ನ ಎಲ್ಲಾ ಜನಪ್ರತಿನಿಧಿಗಳಿಗೆ ಜನಹಿತ ಸರಕಾರ ಮತ್ತು ಪಕ್ಷದ ನಾಯಕತ್ವ ಮೊದಲ ಆದ್ಯತೆಯಾಗಬೇಕು. ಮೂರು ಕಾಸಿಗೆ ಮಾರಿಕೊಳ್ಳುವ ಸ್ವಾರ್ಥಿ, ಭ್ರಷ್ಟ ಹಾಗೂ ಜಾತಿ ಸೋಂಕಿನ ಅಧಿಕಾರಿಗಳು ಮುಖ್ಯವಾಗಬಾರದು. ಬಿಜೆಪಿಯ ದುರಾಡಳಿತ ಮತ್ತು ಸಂಘ ಪರಿವಾರದ ಮತೀಯ ರಾಜಕಾರಣದಿಂದ ಬೇಸತ್ತು ಎಲ್ಲಾ ಸಮುದಾಯದ ಜನ ಕಾಂಗ್ರೆಸನ್ನು ಬೆಂಬಲಿಸಿದ್ದಾರೆ. ಇದು ಎಲ್ಲರ ಸರಕಾರವಾದಾಗ ಮಾತ್ರ 2028ರ ಚುನಾವಣೆಯಲ್ಲೂ ಜನತೆಯ ಪ್ರೀತಿ-ವಿಶ್ವಾಸ ಗಳಿಸಲು ಸಾಧ್ಯ. ಸರಕಾರದಲ್ಲಿ ಇರುವವರು ಹೊಣೆಯರಿತು ಅಧಿಕಾರ ನಡೆಸಬೇಕು.

Update: 2023-10-07 07:19 GMT

ಕರ್ನಾಟಕದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದು ಆರು ತಿಂಗಳೂ ಕಳೆದಿಲ್ಲ. ಆಗಲೇ ಬಹಿರಂಗ ಹೇಳಿಕೆ ನೀಡುವ ಮೂಲಕ ಸರಕಾರದಲ್ಲಿ ಎಲ್ಲವೂ ಸರಿ ಇಲ್ಲ ಎಂಬ ಸಂದೇಶ ರವಾನಿಸುತ್ತಿದ್ದಾರೆ. ಅವರ ಕಿತ್ತಾಟ ಗಮನಿಸಿದರೆ; 1989ರ ರಾಜಕೀಯ ಸನ್ನಿವೇಶ ನೆನಪಿಸುತ್ತಿದೆ. ಕಾಂಗ್ರೆಸ್‌ನವರಿಗೆ ಅತ್ಯಧಿಕ ಬಹುಮತ ಅರಗಿಸಿಕೊಳ್ಳುವ ಶಕ್ತಿಯೇ ಇಲ್ಲ ಎನ್ನುವುದನ್ನು ರುಜುವಾತು ಪಡಿಸುತ್ತಿದ್ದಾರೆ. ಆಗ ವೀರೇಂದ್ರ ಪಾಟೀಲರ ನೇತೃತ್ವದಲ್ಲಿ ಚುನಾವಣೆ ಎದುರಿಸಲಾಗಿತ್ತು. ಕಾಂಗ್ರೆಸ್ ಪಕ್ಷದಿಂದ 178 ಶಾಸಕರು ಆಯ್ಕೆಯಾಗಿದ್ದರು. ಸುಭದ್ರ ಸರಕಾರ ಅಸ್ತಿತ್ವಕ್ಕೆ ಬಂತು ಎಂದೇ ಭಾವಿಸಿದ್ದರು. ಲಿಂಗಾಯತರು ಸೇರಿದಂತೆ ಎಲ್ಲಾ ಸಮುದಾಯದವರ ಬೆಂಬಲ ಕಾಂಗ್ರೆಸ್ ಪಕ್ಷಕ್ಕೆ ದೊರಕಿತ್ತು. ಜನತಾ ಪರಿವಾರದ ಒಳಜಗಳದಿಂದ ಬೇಸತ್ತ ಕರ್ನಾಟಕದ ಜನತೆ ‘ಕಿತ್ತಾಟ’ವಿಲ್ಲದ ಸರಕಾರವನ್ನು ಬಯಸಿದ್ದರು. ಅತ್ಯುತ್ತಮ ಆಡಳಿತ ನೀಡಿ ಒಗ್ಗಟ್ಟು ಪ್ರದರ್ಶಿಸಿದ್ದರೆ ಮುಂದಿನ ಮೂರು ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷವೇ ಜಯಭೇರಿ ಬಾರಿಸುತ್ತಿತ್ತು. ಕೇವಲ 11 ತಿಂಗಳಿಗೇ ಮುಖ್ಯಮಂತ್ರಿ ವೀರೇಂದ್ರ ಪಾಟಿಲರನ್ನು ಪದಚ್ಯುತಗೊಳಿಸಲಾಯಿತು. ಆನಂತರ ಬಂದ ಎಸ್. ಬಂಗಾರಪ್ಪ ಅವರನ್ನು ಉಳಿದ ಅವಧಿಗೆ ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರಿಸಿದ್ದರೆ ಜನತೆಯ ಪ್ರೀತಿ ವಿಶ್ವಾಸ ಗಳಿಸುವ ಅವಕಾಶಗಳಿದ್ದವು. ಎರಡು ವರ್ಷಗಳ ನಂತರ ಎಸ್. ಬಂಗಾರಪ್ಪ ಅವರನ್ನ್ನೂ ಸ್ಥಾನಪಲ್ಲಟಗೊಳಿಸಲಾಯಿತು. ಮೂರನೆಯ ಮುಖ್ಯಮಂತ್ರಿ ಆಗಿ ಬಂದ ವೀರಪ್ಪ ಮೊಯ್ಲಿ ಅವರು ಎಷ್ಟೇ ಒಳ್ಳೆಯದು ಮಾಡಲು ಯತ್ನಿಸಿದರೂ ‘ಡ್ಯಾಮೇಜ್ ಕಂಟ್ರೋಲ್’ ಮಾಡಲು ಸಾಧ್ಯವಾಗಲೇ ಇಲ್ಲ. ವೀರೇಂದ್ರ ಪಾಟೀಲರನ್ನು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಸಿದ್ದರಿಂದ ಲಿಂಗಾಯತರು ಕಾಂಗ್ರೆಸ್‌ನಿಂದ ದೂರವಾದರು. ಎಸ್. ಬಂಗಾರಪ್ಪನವರಿಗೆ ಡಿಸ್ಟರ್ಬ್ ಮಾಡಿದ್ದರಿಂದ ಅವರ ಅಭಿಮಾನಿಗಳು ಕೆಸಿಪಿ ಭಾಗವಾದರು. ಈ ಎಲ್ಲಾ ಬೆಳವಣಿಗೆಯ ಒಟ್ಟು ಪರಿಣಾಮ; 1994ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಧೂಳೀಪಟವಾಯಿತು. ಜನತಾದಳ ಅಧಿಕಾರ ಹಿಡಿಯಿತು.

2023ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ 135 ಶಾಸಕರು ಆಯ್ಕೆಯಾಗಿದ್ದಾರೆ. ಇದು ಅತ್ಯಧಿಕ ಬಹುಮತವೇ. ಬಿಜೆಪಿ; ದುರಾಡಳಿತ ಮತ್ತು ಆಂತರಿಕ ಕಚ್ಚಾಟದಿಂದ 66 ಸ್ಥಾನ ಪಡೆದು ಬೀದಿಗೆ ಬಂದು ನಿಂತಿದೆ. ಹಾಗೆ ನೋಡಿದರೆ; ಈ ಬಾರಿಯ ಗೆಲುವು ಕರ್ನಾಟಕ ಜನತೆಯದು. ಅಧಿಕಾರ ಹಿಡಿದ ಕಾಂಗ್ರೆಸ್ ಮುಖಂಡರು ಹಿಂದಿನ ತಪ್ಪುಗಳಿಂದ ಪಾಠ ಕಲಿತು ಅತ್ಯಂತ ಸಮಚಿತ್ತದಿಂದ ಆಡಳಿತ ನಡೆಸಬೇಕಿತ್ತು. 2013ರಿಂದ 2018ರವರೆಗೆ ಅತ್ಯುತ್ತಮ ಆಡಳಿತ ನೀಡಿದ್ದ ಸಿದ್ದರಾಮಯ್ಯನವರು ಅಪಸ್ವರಕ್ಕೆ ಆಸ್ಪದವಾಗದಂತೆ ಕಾರ್ಯನಿರ್ವಹಿಸಿದ್ದರು. ಆಗಲೂ ಬಿ.ಕೆ. ಹರಿಪ್ರಸಾದ್, ಶಾಮನೂರು ಶಿವಶಂಕರಪ್ಪ, ಬಸವರಾಜ ರಾಯರೆಡ್ಡಿ, ಬಿ. ಆರ್. ಪಾಟೀಲ, ಎಚ್. ವಿಶ್ವನಾಥರಂತಹ ಪಾತ್ರಧಾರಿಗಳಿದ್ದರು. ಆಗ ಬಿ.ಕೆ. ಹರಿಪ್ರಸಾದ್ ಅವರು ಒಮ್ಮೆ ಕೂಡಾ ಬಾಯಿತಪ್ಪಿಯೂ ‘‘ಸಿದ್ದರಾಮಯ್ಯನವರನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ಕೂರಿಸಲು ನನ್ನ ಶ್ರಮವೂ ಇದೆ’’ ಎಂದು ಹೇಳಿಕೊಂಡಿರಲಿಲ್ಲ. ಹಿಂದುಳಿದ ಸಮುದಾಯಕ್ಕೆ ಸೇರಿರುವ ಬಿ.ಕೆ. ಹರಿಪ್ರಸಾದ್‌ರವರು ಸಹಜವಾಗಿಯೇ ಸಿದ್ದರಾಮಯ್ಯನವರ ಬೆಂಬಲಕ್ಕೆ ನಿಂತಿರುತ್ತಾರೆ. ಆಗ ಮೊದಲ ಬಾರಿಗೆ ರಚಿಸಿದ ಸಚಿವ ಸಂಪುಟದಲ್ಲಿ ಬಸವರಾಜ ರಾಯರೆಡ್ಡಿಯವರಿಗೆ ಸ್ಥಾನ ಸಿಕ್ಕಿರಲಿಲ್ಲ. ಹಾಗಂತ ರಾಯರೆಡ್ಡಿ ‘ಭಿನ್ನ’ಮಾತು ಆಡಿರಲಿಲ್ಲ. ಬಿ.ಆರ್. ಪಾಟೀಲರಂತೂ ಕೆಜೆಪಿಯಿಂದ ಶಾಸಕರಾಗಿ ಕಾಂಗ್ರೆಸ್‌ನೊಂದಿಗೆ ಗುರುತಿಸಿಕೊಂಡಿದ್ದರಿಂದ ‘ಸಿಟ್ಟು’ ಮಾಡಿಕೊಳ್ಳುವ ಪ್ರಮೇಯವೇ ಬರುತ್ತಿರಲಿಲ್ಲ. ಆಗಲೂ ಅಧಿಕಾರಿಗಳಿದ್ದರು, ಶಾಮನೂರು ಶಿವಶಂಕರಪ್ಪ ವೀರಶೈವ ಮಹಾಸಭಾ ಭಾಗವಾಗಿದ್ದರು. ಆದರೆ ಲಿಂಗಾಯತ ಅಧಿಕಾರಿಗಳಿಗೆ ಅನ್ಯಾಯವಾಗಿದೆ ಎಂದು ಒಮ್ಮೆಯೂ ಹೇಳಿರಲಿಲ್ಲ. ಹಾಗೆ ನೋಡಿದರೆ ಆಗ ಕಾಂಗ್ರೆಸ್ ಪಕ್ಷಕ್ಕೆ ಸರಳ ಬಹುಮತ ಮಾತ್ರ ದೊರೆತಿತ್ತು. ಆಗ ಸಿದ್ದರಾಮಯ್ಯನವರಿಗೆ ಎಚ್. ವಿಶ್ವನಾಥ್ ತಲೆನೋವು ಆಗಿದ್ದರು. ಆಗಾಗ ಸರಕಾರದ ವಿರುದ್ಧ ಚಾಟಿ ಬೀಸುತ್ತಿದ್ದರು. 2014ರಲ್ಲಿ ಮೈಸೂರು ಲೋಕಸಭಾ ಕ್ಷೇತ್ರದಲ್ಲಿ ಸೋತ ಮೇಲಂತೂ ವಿಶ್ವನಾಥ್ ನೇರ ನಿಷ್ಠುರ ಮಾತುಗಳು ಪ್ರಖರವಾಗಿದ್ದವು.

ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿದ್ದಾಗ ಸಿದ್ದರಾಮಯ್ಯನವರು ಎಲ್ಲದರಲ್ಲೂ ಎಚ್ಚರಿಕೆಯ ಹೆಜ್ಜೆಗಳನ್ನಿರಿಸಿದ್ದರು. ಮಾಧ್ಯಮ ಸಲಹೆಗಾರರನ್ನಾಗಿ ಪ್ರಾಮಾಣಿಕ ಪತ್ರಕರ್ತ ದಿನೇಶ್ ಅಮಿನ್ ಮಟ್ಟು ಅವರನ್ನು ಆಯ್ಕೆ ಮಾಡಿಕೊಂಡಿದ್ದರು. ಹಿಂದುಳಿದ ಈಡಿಗ ಸಮುದಾಯದ ದಿನೇಶ್ ಅಮಿನ್ ಮಟ್ಟು ಜಾತಿ ಮೀರಿ ವ್ಯಕ್ತಿತ್ವ ಬೆಳೆಸಿಕೊಂಡವರು. ಅವರು ಸಿಎಂ ತಂಡದಲ್ಲಿದ್ದಾರೆಂದರೆ ಅದಕ್ಕೊಂದು ವಿಶ್ವಾಸಾರ್ಹತೆ ಪ್ರಾಪ್ತವಾಗುತ್ತಿತ್ತು. ಕೆಲವು ಕಾಲ ಮುಖ್ಯಮಂತ್ರಿಗಳ ಪ್ರಿನ್ಸಿಪಲ್ ಸೆಕ್ರೆಟರಿಯಾಗಿ ಡಿ.ಎನ್. ನರಸಿಂಹರಾಜು ಅವರು ಕಾರ್ಯನಿರ್ವಹಿಸಿದ್ದರು. ಅವರಿಗೆ ಆಡಳಿತದ ಮೇಲೆ ಹಿಡಿತವಿತ್ತು. ಅತ್ಯಂತ ಪ್ರಾಮಾಣಿಕ ವ್ಯಕ್ತಿ. ಅವರಿಗೆ ಯಾವುದೇ ಪೂರ್ವಗ್ರಹಗಳಿರಲಿಲ್ಲ. ಮುಖ್ಯಮಂತ್ರಿಗಳ ಕನಸುಗಳನ್ನು ಸಾಕಾರಗೊಳಿಸುವುದಷ್ಟೇ ಕೆಲಸ ಎಂದು ನಂಬಿಕೊಂಡಿದ್ದರು. 2014ರ ಅಷ್ಟೊತ್ತಿಗೆ ಆ ಸ್ಥಾನಕ್ಕೆ ಹಿರಿಯ ಐಪಿಎಸ್ ಅಧಿಕಾರಿ ಎಲ್.ಕೆ. ಅತೀಕ್ ಅವರನ್ನು ತಂದರು. ಅತೀಕ್ ಅತ್ಯಂತ ಪ್ರಾಮಾಣಿಕ ಹಾಗೂ ಕ್ರಿಯಾಶೀಲ ಅಧಿಕಾರಿ. ಅವರ ಬಳಿ ಬರುವ ಶಾಸಕರಿಗೆ ತಮ್ಮ ಹಂತದಲ್ಲೇ ಪರಿಹಾರ ಹುಡುಕಿ ಸಮಾಧಾನ ಪಡಿಸುತ್ತಿದ್ದರು. ಮುಖ್ಯಮಂತ್ರಿಗಳ ಬಳಿ ಸಮಸ್ಯೆ ಹೊತ್ತು ಹೋಗಲು ಅವಕಾಶವೇ ಕೊಡುತ್ತಿರಲಿಲ್ಲ. ಅಧಿಕಾರಿಗಳ ಸಾಮರ್ಥ್ಯವನ್ನು ಯಾವುದೇ ಪೂರ್ವಗ್ರಹವಿಲ್ಲದೆ ಗುರುತಿಸುತ್ತಿದ್ದರು. ಅಧಿಕಾರಿಗಳಿಗೆ ಹೊಣೆಗಾರಿಕೆ ನೀಡುವಾಗ ‘ಜಾತಿ ಮೀರಿದ’ ಕ್ರಿಯಾಶೀಲತೆ, ಪ್ರಾಮಾಣಿಕತೆ ಮತ್ತು ಬದ್ಧತೆಯನ್ನು ಪರಿಗಣಿಸಿ ‘ಸ್ಥಳ’ ತೋರಿಸುತ್ತಿದ್ದರು. ಎಲ್.ಕೆ. ಅತೀಕ್ ಅವರ ಬಲದೊಡ್ಡ ಗುಣ ಎಂದರೆ ಮುಖ್ಯಮಂತ್ರಿಯವರಿಗೆ ಕಳಂಕ ತಗಲದಂತೆ ಮುಜುಗರವಾಗದಂತೆ ಆಡಳಿತಯಂತ್ರ ಸರಾಗವಾಗಿ, ಚುರುಕಾಗಿ ನಡೆಯುವಂತೆ ನಿಗಾ ವಹಿಸುತ್ತಿದ್ದರು. ವ್ಯಕ್ತಿಗತ ಸ್ವಾರ್ಥಕ್ಕಾಗಿ ಆಡಳಿತ ಯಂತ್ರದ ವೇಗವನ್ನು ತಗ್ಗಿಸುತ್ತಿರಲಿಲ್ಲ.

ಆಗ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಆಪ್ತ ಕಾರ್ಯದರ್ಶಿಯಾಗಿದ್ದ ಲಂಬಾಣಿ ಸಮುದಾಯದ ಹೀರಾ ನಾಯಕ ಜನಪ್ರತಿನಿಧಿಗಳು ಮತ್ತು ಜನಸಾಮಾನ್ಯರ ಒಡನಾಡಿಯಾಗಿದ್ದರು. ಸರಕಾರದ ಆಶೋತ್ತರಗಳನ್ನು ಅರಿತು ಕಾರ್ಯನಿರ್ವಹಿಸುತ್ತಿದ್ದರು. ಸಿಎಂ ಅವರ ಸಮರ್ಥ ಪ್ರತಿನಿಧಿಯಾಗಿ ದುಡಿಯುತ್ತಿದ್ದರು. ಅಧಿಕಾರಿಯ ಗತ್ತು, ಧಿಮಾಕು ಅವರಿಗಿರಲಿಲ್ಲ. ಇವರ ಕಾರ್ಯ ವೈಖರಿಯಿಂದ ಜನಪ್ರತಿನಿಧಿಗಳು ಸಂತೃಪ್ತರಾಗಿದ್ದರು. ಮುಖ್ಯಮಂತ್ರಿ ಅವರ ಮೇಲಿನ ಹೊರೆಯನ್ನು ಗಣನೀಯವಾಗಿ ತಗ್ಗಿಸಿದ್ದರು. ಮುಖ್ಯಮಂತ್ರಿಯವರಿಗೆ ಜಂಟಿ ಕಾರ್ಯದರ್ಶಿಯಾಗಿದ್ದ ಡಾ. ಭೀಮಸೇನ ರಾವ್ ಸಿಂಧೆಯವರು ಸರಕಾರಿ ಕೆಲಸವನ್ನು ಮನೆ ಕೆಲಸ ಎಂಬಂತೆ ದುಡಿಯುತ್ತಿದ್ದರು. ಹೊತ್ತುಗೊತ್ತು ಲೆಕ್ಕಿಸದೆ ಸಿಎಂ ಕಚೇರಿಯಲ್ಲೇ ಮುಳುಗಿರುತ್ತಿದ್ದರು. ಮುಖ್ಯಮಂತ್ರಿಗಳ ಪರಿಹಾರ ನಿಧಿಯನ್ನು ನೋಡಿಕೊಳ್ಳುತ್ತಿದ್ದ ಅವರು ಶರವೇಗದಲ್ಲಿ ಕೆಲಸಗಳು ಆಗುವಂತೆ ಮಾಡುತ್ತಿದ್ದರು. ಶಾಸಕರು, ಸಂಸದರು ಸೇರಿದಂತೆ ಬಹುಪಾಲು ಜನ ಇವರ ಕಚೇರಿಯಲ್ಲಿ ಕೂತು ಕೆಲಸ ಕಾರ್ಯಗಳನ್ನು ಮಾಡಿಸಿಕೊಂಡು ಹೋಗುತ್ತಿದ್ದರು. ನಿಗಮ ಮಂಡಳಿ ಕಚೇರಿಯಲ್ಲಿ ಸಣ್ಣ ಲೋಪವಾಗದಂತೆ ಕಾರ್ಯನಿರ್ವಹಿಸಿದ್ದರು. ತುಷಾರ ಗಿರಿನಾಥ್ ಸೇರಿದಂತೆ ಹಲವು ಅಧಿಕಾರಿಗಳು ಬದ್ಧತೆಯೊಂದಿಗೆ ಕೆಲಸ ಮಾಡಿದ್ದರಿಂದಲೇ 2013ರಿಂದ 2018ರ ಅವಧಿಯಲ್ಲಿ ಸಿದ್ದರಾಮಯ್ಯನವರಿಗೆ ಹೆಸರು ಬಂತು. ಸಿಎಂ ಕಚೇರಿ ಮತ್ತು ಆ ತಂಡದ ಮುಖ್ಯಸ್ಥರಾಗಿದ್ದ ಎಲ್.ಕೆ. ಅತೀಕ್ ಅವರು ಜಾತಿ-ಮತ ಭೇದ ಮಾಡದೆ ಹಿರಿಯ-ಕಿರಿಯ ಎಂದೆಣಿಸದೆ ಅಧಿಕಾರಿಗಳಿಗೆ ಸ್ಫೂರ್ತಿ ತುಂಬುತ್ತಿದ್ದರು.

ಎರಡನೆಯ ಬಾರಿಗೆ ಮುಖ್ಯಮಂತ್ರಿ ಹುದ್ದೆ ಅಲಂಕರಿಸಿದ ಸಿದ್ದರಾಮಯ್ಯನವರು ಅಧಿಕಾರಿಗಳ ಆಯ್ಕೆಯಲ್ಲಿ ಯಾಕೆ ವಿಶೇಷ ಗಮನ ಹರಿಸಲಿಲ್ಲವೋ ಸಿಎಂ ಪ್ರಿನ್ಸಿಪಲ್ ಸೆಕ್ರೆಟರಿ ಆಗಿರುವ ರಜನೀಶ್ ಗೋಯಲ್ ಬಿಜೆಪಿ ಸರಕಾರದಲ್ಲಿ ಸೈದ್ಧಾಂತಿಕ ಕಾರಣಕ್ಕೆ ಹಲವರಿಗೆ ಹತ್ತಿರವಾಗಿದ್ದರು. ಅತ್ಯುತ್ತಮ ಆಡಳಿತ ನೀಡುವವರಿಗೆ ಸೈದ್ಧಾಂತಿಕ ಸಂಗತಿಗಳು ಬಾಧಿಸಬಾರದು. ರಜನೀಶ್ ಗೋಯಲ್ ಸೇರಿದಂತೆ ಹಲವು ಹಿರಿಯ ಅಧಿಕಾರಿಗಳು ಸರಕಾರದ ಆಶೋತ್ತರಗಳಿಗೆ ಅನುಗುಣವಾಗಿ ಮತ್ತು ಸಿದ್ದರಾಮಯ್ಯನವರ ವೇಗಕ್ಕೆ ಪೂರಕವಾಗಿ ಕಾರ್ಯನಿರ್ವಹಿಸದೆ ಇರುವುದರಿಂದ ಗೊಂದಲಗಳು ಹುಟ್ಟಿಕೊಳ್ಳುತ್ತವೆ. ಬಿ.ಆರ್.ಪಾಟೀಲ್, ಬಸವರಾಜ ರಾಯರೆಡ್ಡಿ ಅಪಸ್ವರಕ್ಕೆ ಪರಿಹಾರ ಸಿಕ್ಕಿ ತಣ್ಣಗಾಗುವ ಹೊತ್ತಿಗೆ ಕಾಂಗ್ರೆಸ್‌ನ ಹಿರಿಯ ಮುಖಂಡ ಶಾಮನೂರು ಶಿವಶಂಕರಪ್ಪ ಲಿಂಗಾಯತ ಅಧಿಕಾರಿಗಳಿಗೆ ಆಯಕಟ್ಟಿನ ಜಾಗದಲ್ಲಿ ಅವಕಾಶ ಸಿಕ್ಕಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಶಾಮನೂರು ಅವರು ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷರಾಗಿರುವುದರಿಂದ ಅವರ ಮಾತುಗಳಿಗೆ ರಾಜಕೀಯ ಆಯಾಮ ಪ್ರಾಪ್ತವಾಯಿತು. ಬಕಪಕ್ಷಿಗಳಂತೆ ಕಾದು ಕೂತ ಬಿಜೆಪಿಯವರಿಗೆ ರಾಜಕೀಯ ಅಸ್ತ್ರ ದೊರೆಯಿತು. ಕಾಂಗ್ರೆಸ್ ಸರಕಾರ ಲಿಂಗಾಯತರನ್ನು ಸಂಪೂರ್ಣ ಕಡೆಗಣಿಸಿದೆ ಎಂಬಂತೆ ಯಡಿಯೂರಪ್ಪ, ಬೊಮ್ಮಾಯಿ ಉರಿಯುವ ಬೆಂಕಿಗೆ ತುಪ್ಪ ಸುರಿದರು. ಕರ್ನಾಟಕದ ಸಮಸ್ತ ಲಿಂಗಾಯತರ ಉದ್ಧಾರಕರು ತಾವೇ ಎನ್ನುವ ಭಾವ ಅವರ ಮಾತಿನಲ್ಲಿತ್ತು. ಶಾಮನೂರು ಶಿವಶಂಕರಪ್ಪ ಮಾತಿಗೆ ಕೆರಳಿ ಕೆೆಂಡವಾದ ಎಚ್. ವಿಶ್ವನಾಥ್ ಅವರ ವಯಸ್ಸನ್ನು ಲೆಕ್ಕಿಸದೆ ಮತ್ತಷ್ಟು ಕೆರಳಿಸುವ ಹೇಳಿಕೆ ನೀಡಿದರು. ವಿಶ್ವನಾಥ್ ಮಾತಿಗೆ ಪ್ರತಿಕ್ರಿಯೆಯಾಗಿ ಶಾಮನೂರು ‘‘ಅವನ ಹಾಗೆ ಬೆಣ್ಣೆಹಚ್ಚಿ ಎಂಎಲ್‌ಸಿ ಆಗಿಲ್ಲ. ನಾನು ಎಂಎಲ್‌ಎ. ವಿಶ್ವನಾಥ್ ಹುಚ್ಚ’’ ಎಂದರು. ಕಾಂಗ್ರೆಸ್ ನಾಯಕರ ಕಿತ್ತಾಟವನ್ನು ಮಾಧ್ಯಮಗಳು ಅತಿರಂಜಿತವಾಗಿ ಬಿಂಬಿಸಿದವು. ಬಿಜೆಪಿಯವರು ಲಿಂಗಾಯತರ ಉದ್ಧಾರಕರು ಎಂಬ ಪೋಸ್ ಕೊಟ್ಟರು. ಎಲ್.ಕೆ. ಅತೀಕ್ ಅವರಂತಹ ಅನುಭವಿ-ದಕ್ಷ ಅಧಿಕಾರಿ ಕೇವಲ 5 ನಿಮಿಷದಲ್ಲಿ ಬಗೆಹರಿಸಿ ಬಿಡಬಹುದಾದ ಕೆಲಸ ಇದು.

ಯಾವನೋ ಒಬ್ಬ ಪರಮ ಸ್ವಾರ್ಥವಾಗಿರುವ ‘ಲಿಂಗಾಯತ’ ಅಧಿಕಾರಿ ಉರಿಗೆ ಉಪ್ಪುಸುರಿದು ಶಾಮನೂರು ಶಿವಶಂಕರಪ್ಪ ಅವರ ತಲೆ ಕೆಡಿಸಿದ್ದರ ಫಲವಾಗಿ ಕಡ್ಡಿ ಗುಡ್ಡವಾಗಿದೆ. ಎಲ್.ಕೆ. ಅತೀಕ್, ಕೆಂಪಯ್ಯ, ನರಸಿಂಹರಾಜು, ಹೀರಾ ನಾಯಕ, ಭೀಮಸೇನರಾವ್ ಸಿಂಧೆ, ತುಷಾರ ಗಿರಿನಾಥ್ ಸೇರಿದಂತೆ ಹಲವು ಅಧಿಕಾರಿಗಳು ಕ್ರಿಯಾಶೀಲರೂ, ದಕ್ಷರೂ, ಪ್ರಾಮಾಣಿಕರೂ, ಜನಪರ ನಿಲುವು ಹೊಂದಿದವರೂ ಆಗಿದ್ದರಿಂದ ಉತ್ತಮ ಆಡಳಿತ ಅವರ ಮೊದಲ ಆದ್ಯತೆಯಾಗಿರುತ್ತದೆ. ಅಂತಹವರು ತಮ್ಮ ಸಾಮರ್ಥ್ಯವನ್ನು ಮಾತ್ರ ಅವಲಂಬಿಸಿರುತ್ತಾರೆ. ಈ ತರಹದ ಅಧಿಕಾರಿಗಳು ಕ್ರಿಯಾಶೀಲರ ತಂಡವನ್ನೇ ಕಟ್ಟಿಕೊಳ್ಳುತ್ತಾರೆ. ಭ್ರಷ್ಟರು, ಸ್ವಾರ್ಥಿಗಳು ಮತ್ತು ಅವಕಾಶವಾದಿಗಳು ಕೇವಲ ಜಾತಿಬಲ, ಹಣಬಲವನ್ನು ಅವಲಂಬಿಸಿರುತ್ತಾರೆ. ನೇರ ಐಎಎಸ್ ಪಾಸು ಮಾಡಿದವರಿಗೆ ಕ್ರಿಯಾಶೀಲತೆ-ಪ್ರಾಮಾಣಿಕತೆಯೇ ಬಂಡವಾಳ. ಕೆಎಎಸ್ ಮೂಲಕ ಬಂದು ಐಎಎಸ್‌ಗೆ ಭಡ್ತಿ ಪಡೆದ ಕೆಲವರಿಗೆ ಜಾತಿ ಸೋಂಕು ತಗಲಿರುತ್ತದೆ. ಜಾತಿ ಸೋಂಕು ತಗಲಿಸಿಕೊಂಡು ಭ್ರಷ್ಟರು, ಸ್ವಾರ್ಥಿಗಳೂ ಆಗಿರುವ ಈ ತರಹದ ಅಧಿಕಾರಿಗಳೇ ರಾಜಕಾರಣಿಗಳನ್ನು ಜಾತಿಗೆ ಸೀಮಿತಗೊಳಿಸಿಬಿಡುತ್ತಾರೆ. ಅಂತಹ ಜಾತಿವಾದಿ, ಭ್ರಷ್ಟ ಅಧಿಕಾರಿಗಳಿಗೆ ತಮ್ಮ ಸಮುದಾಯದ ಬಡವರ ಬಗ್ಗೆ, ಅಷ್ಟೇ ಯಾಕೆ ಒಂದು ಕಾಲದಲ್ಲಿ ಜಾತಿಯ ಕಾರಣಕ್ಕೆ ಆಯಕಟ್ಟಿನ ಹುದ್ದೆ ದಯಪಾಲಿಸಿದ್ದ ನಾಯಕರ ಬಗ್ಗೆ ಕಿಂಚಿತ್ ಗೌರವ ಇರುವುದಿಲ್ಲ. ಜಾತಿವಾದಿ, ಭ್ರಷ್ಟ ಅಧಿಕಾರಿಗಳ ಬಣ್ಣದ ಮಾತುಗಳಿಗೆ ಕಿವಿಗೊಟ್ಟಾಗಲೇ ರಾಜಕಾರಣಿಗಳ ಸ್ವಜಾತಿ ಅಧಿಕಾರಿಗಳ ಪ್ರೇಮ ಅಂಕುರಿಸುವುದು.

ಮುಖ್ಯಮಂತ್ರಿ ಮತ್ತು ಎಲ್ಲಾ ಮಂತ್ರಿಗಳನ್ನು ಈ ಜಾತಿ ಸೋಂಕಿತ ಅಧಿಕಾರಿಗಳು ಭಾವನಾತ್ಮಕವಾಗಿ ಮರುಳು ಮಾಡಿರುತ್ತಾರೆ. ಶಾಸಕರನ್ನು ಮರುಳು ಮಾಡುವುದು ಸರ್ವೇಸಾಮಾನ್ಯ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್‌ನ ಹಿರಿಯ ಮುಖಂಡ ಶಾಮನೂರು ಶಂಕರಪ್ಪ ಒಂದೇ ಪಕ್ಷಕ್ಕೆ ಸೇರಿದವರು. 2006ರಿಂದ ಕಾಂಗ್ರೆಸ್ ಪಕ್ಷದಲ್ಲಿ ನಿತ್ಯ ಒಡನಾಡಿದ್ದಾರೆ. ಒಂದೆಡೆ ಕೂತು ಕಷ್ಟ ಸುಖ ಹಂಚಿಕೊಂಡಿದ್ದಾರೆ. ಎಲ್ಲಕ್ಕೂ ಮೀರಿ ಪರಸ್ಪರರ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಶಾಮನೂರು ಶಿವಶಂಕರಪ್ಪ ಮತ್ತವರ ಮಗ ಮಲ್ಲಿಕಾರ್ಜುನ ದಾವಣಗೆರೆಯಲ್ಲಿ ಗೆಲ್ಲಬೇಕೆಂದರೆ ದಲಿತರು, ಕುರುಬರು ಮತ್ತು ಮುಸ್ಲಿಮರು ವೋಟು ಹಾಕಿರಲೇಬೇಕು. ಕೇವಲ ಲಿಂಗಾಯತರ ಮತಗಳಿಂದ ಗೆಲುವು ಸಾಧ್ಯವಿಲ್ಲ. ವರುಣಾದಲ್ಲಿ ಸಿದ್ದರಾಮಯ್ಯನವರು ಗೆಲುವು ಸಾಧಿಸಿದ್ದು ಎಲ್ಲರ ಮತಗಳಿಂದ. ಶಾಮನೂರರಿಗೆ ಸಿದ್ದರಾಮಯ್ಯ, ಸಿದ್ದರಾಮಯ್ಯನವರಿಗೆ ಶಾಮನೂರು ರಾಜಕೀಯ ಬದುಕಿನ ಅಗತ್ಯ. ದಾವಣಗೆರೆಯಲ್ಲಿನ ಸಿದ್ದರಾಮೋತ್ಸವ ಯಶಸ್ಸಿನಲ್ಲಿ ಶಾಮನೂರು ಪಾತ್ರ ಇರುತ್ತದೆ. ಆದರೆ ಅಧಿಕಾರಿಗಳು ಅಧಿಕಾರವಿದ್ದಾಗ ಮಾತ್ರ ಸುತ್ತುವರಿಯುತ್ತಾರೆ. ಸ್ವಜಾತಿ ಅಧಿಕಾರಿಗಳಲ್ಲಿ ದಕ್ಷರು, ಪ್ರಾಮಾಣಿಕರು, ಕ್ರಿಯಾಶೀಲರು ಇದ್ದರೆ ಅವರನ್ನು ಒಳಗೊಳ್ಳಬೇಕು. 2013ರಲ್ಲಿ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದಾಗ ಹಿರಿಯ ಐಪಿಎಸ್ ಅಧಿಕಾರಿ ಕೆಂಪಯ್ಯನವರು ರಕ್ಷಾ ಕವಚದಂತಿದ್ದರು. ಹಾಗೆ ನೋಡಿದರೆ ಕೆಂಪಯ್ಯನವರು ತಮ್ಮ ಸೇವಾ ದಕ್ಷತೆ, ಪ್ರಾಮಾಣಿಕತೆ, ಕ್ರಿಯಾಶೀಲತೆ ಮತ್ತು ಜಾತ್ಯತೀತ ನಿಲುವಿನಿಂದ ಆಯಕಟ್ಟಿನ ಹುದ್ದೆಯಲ್ಲಿದ್ದರು.

ಇದಕ್ಕೆ ತದ್ವಿರುದ್ಧ ನಿದರ್ಶನ: 2004ರಲ್ಲಿ ಸಿದ್ದರಾಮಯ್ಯನವರು ಉಪಮುಖ್ಯಮಂತ್ರಿಯಾಗಿದ್ದರು.ಆಗ ಅವರಿಗೆ ಎಸ್. ಪುಟ್ಟಸ್ವಾಮಿ ಎಂಬ ಕುರುಬ ಸಮುದಾಯದ ಕೆಎಎಸ್ ಅಧಿಕಾರಿ ಆಪ್ತ ಕಾರ್ಯದರ್ಶಿಯಾಗಿದ್ದರು. ಹುದ್ದೆಯ ಕಾರಣಕ್ಕೆ ಸಾಕಷ್ಟು ಅನುಕೂಲ ಮಾಡಿಕೊಂಡ ಅವರು ದುಂಡಗಾದರು. ನಿವೃತ್ತಿಯಾಗುತ್ತಿದ್ದಂತೆ ಕೆಜೆಪಿ, ಬಿಜೆಪಿ ಸೇರಿ ವಿಫಲ ನಾಯಕರಾದರು. ಇಷ್ಟೇ ಆಗಿದ್ದರೆ ಅವರನ್ನು ಕ್ಷಮಿಸಬಹುದಿತ್ತೇನೋ. 2023ರ ಚುನಾವಣೆಗೂ ಮುಂಚೆ ಸಿದ್ದರಾಮಯ್ಯನವರ ಬಗ್ಗೆ ಕೆಟ್ಟದಾಗಿ ಮಾತನಾಡಿಕೊಂಡು ಸುದ್ದಿಯಾದರು. ಅಧಿಕಾರಿಗಳಲ್ಲಿ ಕೆಂಪಯ್ಯರಂತಹ ಪ್ರಾಮಾಣಿಕರು, ಬದ್ಧತೆ ಉಳ್ಳವರು, ಪುಟ್ಟಸ್ವಾಮಿಯವರಂತಹ ಅವಕಾಶವಾದಿಗಳೂ ಇರುತ್ತಾರೆ. ಸಿದ್ದರಾಮಯ್ಯನವರ ಯಶಸ್ಸಿನ ಗುಟ್ಟೇ ಉತ್ತಮರ ತಂಡ ಕಟ್ಟಿಕೊಳ್ಳುವುದರಲ್ಲಿ. ಶಾಮನೂರರಿಗೆ ನಾಯಕ ಸಿದ್ದರಾಮಯ್ಯ ಅವರು ಮುಖ್ಯವಾಗಿರಬೇಕೇ ಹೊರತು ತನ್ನ ಸ್ವಾರ್ಥ ಸಾಧನೆಗೆ ಆಯಕಟ್ಟಿನ ಜಾಗ ಬಯಸುವ ಮತ್ತು ಭಾವನಾತ್ಮಕವಾಗಿ ಮರುಳು ಮಾಡುವ ಜಾತಿ ಸೋಂಕಿನ ಅಧಿಕಾರಿಗಳಲ್ಲ. ಕಾಂಗ್ರೆಸ್‌ನಲ್ಲಿ ಭಾವನಾತ್ಮಕ ಒಗ್ಗಟ್ಟಿದ್ದರೆ ಯಾವ ಹೊರಗಿನ ಶಕ್ತಿಯೂ ಸರಕಾರವನ್ನು ಅಸ್ಥಿರಗೊಳಿಸುವುದಿಲ್ಲ.

ಇದು ಹೊಸ ಸರಕಾರವಾಗಿದ್ದರೂ ಹಳೆ ವ್ಯವಸ್ಥೆ ಮುಂದುವರಿಯುತ್ತಿದೆ ಎಂಬ ಭಾವನೆ ಮೂಡಲು ಕಾರಣ; ಜಡ್ಡುಗಟ್ಟಿದ ಆಡಳಿತ ಯಂತ್ರ. ಆಡಳಿತ ಯಂತ್ರ ಚುರುಕುಗೊಳ್ಳಬೇಕೆಂದರೆ ಕ್ರಿಯಾಶೀಲ ಮತ್ತು ಪ್ರಾಮಾಣಿಕ ಅಧಿಕಾರಿಗಳ ತಂಡವನ್ನು ಕಟ್ಟಬೇಕಷ್ಟೇ. ಭ್ರಷ್ಟ, ಸ್ವಾರ್ಥಿ ಮತ್ತು ಜಾತಿ ಸೋಂಕಿನ ಅಧಿಕಾರಿಗಳನ್ನು ಸರಕಾರದಲ್ಲಿರುವ ಎಲ್ಲರೂ ದೂರ ಇಟ್ಟರೆ ಸರಕಾರ ಹೆಚ್ಚು ದಕ್ಷವಾಗುತ್ತದೆ. ಅಧಿಕಾರಿಗಳು ಸಮುದಾಯಗಳ ಪ್ರತಿನಿಧಿಗಳಲ್ಲ. ಜಾತಿ ಕಾರಣಕ್ಕೆ ಆಯಕಟ್ಟಿನ ಜಾಗ ನೀಡುವುದೆಂದರೆ ದಕ್ಷತೆ ಮತ್ತು ಪ್ರಾಮಾಣಿಕತೆಯನ್ನು ಕಡೆಗಣಿಸಿದಂತೆ. ಶಾಮನೂರು ಶಿವಶಂಕರಪ್ಪ ಸೇರಿದಂತೆ ಕಾಂಗ್ರೆಸ್‌ನ ಎಲ್ಲಾ ಜನಪ್ರತಿನಿಧಿಗಳಿಗೆ ಜನಹಿತ ಸರಕಾರ ಮತ್ತು ಪಕ್ಷದ ನಾಯಕತ್ವ ಮೊದಲ ಆದ್ಯತೆಯಾಗಬೇಕು. ಮೂರು ಕಾಸಿಗೆ ಮಾರಿಕೊಳ್ಳುವ ಸ್ವಾರ್ಥಿ, ಭ್ರಷ್ಟ ಹಾಗೂ ಜಾತಿ ಸೋಂಕಿನ ಅಧಿಕಾರಿಗಳು ಮುಖ್ಯವಾಗಬಾರದು. ಬಿಜೆಪಿಯ ದುರಾಡಳಿತ ಮತ್ತು ಸಂಘ ಪರಿವಾರದ ಮತೀಯ ರಾಜಕಾರಣದಿಂದ ಬೇಸತ್ತು ಎಲ್ಲಾ ಸಮುದಾಯದ ಜನ ಕಾಂಗ್ರೆಸನ್ನು ಬೆಂಬಲಿಸಿದ್ದಾರೆ. ಇದು ಎಲ್ಲರ ಸರಕಾರವಾದಾಗ ಮಾತ್ರ 2028ರ ಚುನಾವಣೆಯಲ್ಲೂ ಜನತೆಯ ಪ್ರೀತಿ-ವಿಶ್ವಾಸ ಗಳಿಸಲು ಸಾಧ್ಯ. ಸರಕಾರದಲ್ಲಿ ಇರುವವರು ಹೊಣೆಯರಿತು ಅಧಿಕಾರ ನಡೆಸಬೇಕು.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Contributor - ಡಾ. ರಾಜಶೇಖರ ಹತಗುಂದಿ

ಹಿರಿಯ ಬರಹಗಾರ, ಪತ್ರಕರ್ತ

Similar News