ಬಿಜೆಪಿ-ಜೆಡಿಎಸ್ ಮೈತ್ರಿಯಲ್ಲಿ ಅಪಸ್ವರ!

ಮೈತ್ರಿಗೆ ತಾತ್ವಿಕ ನೆಲೆ ಇಲ್ಲದೆ ಹೋದರೆ ಕುಮಾರಸ್ವಾಮಿ, ನಿತೀಶ್ ಕುಮಾರ್, ಚಂದ್ರಬಾಬು ನಾಯ್ಡು ತರಹದವರು ಮುನ್ನೆಲೆಗೆ ಬರುತ್ತಾರೆ. ಅವರಿಗೆ ಅಧಿಕಾರ ಬೇಕು, ಅಭಿವೃದ್ಧಿ ಬೇಡ. ದೇವೇಗೌಡರ ಕುಟುಂಬಕ್ಕೆ ಬಿಜೆಪಿಯವರು ವಿಷ ಹಾಕಿದ್ದು, ಸರ್ವನಾಶ ಮಾಡಲು ಹೊರಟಿದ್ದು ಕುಮಾರಸ್ವಾಮಿ ಅವರನ್ನು ಬಾಧಿಸಿದ್ದರೆ ಮಂತ್ರಿಗಿರಿಗೆ ರಾಜೀನಾಮೆ ಬಿಸಾಕಿ ಎನ್‌ಡಿಎ ಮೈತ್ರಿಕೂಟದಿಂದ ಹೊರಬರಬೇಕು. ಮಾಜಿ ಪ್ರಧಾನಿ ದೇವೇಗೌಡರು ರಾಜ್ಯಸಭಾ ಸದಸ್ಯರಾಗಿದ್ದೇ ಕಾಂಗ್ರೆಸ್ ಶಾಸಕರ ಬೆಂಬಲದಿಂದ. ಗೌಡರು ಅದು ಹೇಗೆ ಎನ್‌ಡಿಎ ಮೈತ್ರಿಕೂಟದಲ್ಲಿ ಮುಂದುವರಿಯುವ ನೈತಿಕತೆ ಹೊಂದುತ್ತಾರೆ? ಕುಮಾರಸ್ವಾಮಿ ಸದ್ಯ ತಮಗೆ ಸಿಕ್ಕ ಅವಕಾಶದಿಂದ ಕರ್ನಾಟಕಕ್ಕೆ ಒಳಿತು ಮಾಡುವ ಮೂಲಕವಾದರೂ ಪ್ರಾಯಶ್ಚಿತ್ತ ಮಾಡಿಕೊಳ್ಳಲಿ.

Update: 2024-08-03 06:41 GMT

‘‘ಬೆಂಗಳೂರಿನಿಂದ ಮೈಸೂರುವರೆಗೆ ನಮ್ಮ ಶಕ್ತಿ ಇರತಕ್ಕಂತಹದು. ಅಷ್ಟೆಲ್ಲ ಇದ್ದೂ ಸರಿಯಾದ ರೀತಿಯಲ್ಲಿ ನಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಹೋದರೆ ಬಿಜೆಪಿ ಪಾದಯಾತ್ರೆಗೆ ನಾವು ಯಾತಕ್ಕೆ ಬೆಂಬಲ ಕೊಡಬೇಕು? ಈ ರೀತಿಯ ಕಾರ್ಯಕ್ರಮದಿಂದ ಯಾವ ಸಾಧನೆಯಾಗುತ್ತದೆ? ಪಾದಯಾತ್ರೆಯ ಮುಖ್ಯಸ್ಥರನ್ನಾಗಿ ಯಾರನ್ನು ಆಯ್ಕೆ ಮಾಡಿಕೊಂಡಿದ್ದಾರೆ? ಯಾರು ಆ ಪ್ರೀತಂ ಗೌಡ? ದೇವೇಗೌಡರ ಕುಟುಂಬವನ್ನು ಸರ್ವನಾಶ ಮಾಡಲು ಹೋದಂತವನು. ಸಹಿಸಿಕೊಳ್ಳಲು ನನಗೂ ಒಂದು ಇತಿಮಿತಿ ಇದೆ. ಪ್ರೀತಂಗೌಡನನ್ನು ಪಕ್ಕದಲ್ಲಿ ಕೂರಿಸಿಕೊಂಡು ಮೀಟಿಂಗ್ ಮಾಡುತ್ತಾರೆ. ಆ ಮೀಟಿಂಗ್‌ಗೆ ನನ್ನನ್ನು ಕರೆಯುತ್ತಾರೆ. ನಮ್ಮ ಕುಟುಂಬಕ್ಕೆ ವಿಷ ಹಾಕಿದವನನ್ನು ಜೊತೆಯಲ್ಲಿ ಇರಿಸಿಕೊಂಡು ಪಾದಯಾತ್ರೆಗೆ ನಮ್ಮ ಬೆಂಬಲ ಕೇಳುತ್ತಾರೆ. ಹಾದಿಬೀದಿಯಲ್ಲಿ ಪೆನ್‌ಡ್ರೈವ್ ಹಂಚಿದವರು ಯಾರು?’’-ಮಾಜಿ ಮುಖ್ಯಮಂತ್ರಿ, ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರಕಾರದಲ್ಲಿ ಸಂಪುಟ ದರ್ಜೆಯ ಸಚಿವರಾಗಿರುವ ಜಾತ್ಯತೀತ ಜನತಾದಳದ ನಾಯಕ ಎಚ್.ಡಿ. ಕುಮಾರಸ್ವಾಮಿ ಅವರ ಆಕ್ರೋಶದ ನುಡಿಗಳಿವು. ಈ ಆಕ್ರೋಶದ ನುಡಿಗಳನ್ನು ಕೇಳಿಸಿಕೊಂಡ ಯಾರಾದರೂ ಹೊಸಬರು ರಾಜ್ಯದಲ್ಲಿ ‘ಬಿಜೆಪಿ-ಜೆಡಿಎಸ್ ಮೈತ್ರಿ ಖತಂ’ ಎಂಬ ತೀರ್ಮಾನಕ್ಕೆ ಬಂದರೆ ಅದು ತಪ್ಪು. ಕುಮಾರಸ್ವಾಮಿ ಮೂಗು ಹಿಡಿದು ಬಾಯಿ ತೆರೆಸುವುದರಲ್ಲಿ ನಿಸ್ಸೀಮರು. ಪ್ರೀತಂ ಗೌಡ ಮತ್ತು ಅವರನ್ನು ಬೆಂಬಲಿಸುವ ನಾಯಕರನ್ನು ಹಣಿಯುವ ಹುನ್ನಾರದ ಭಾಗವಾಗಿ ಕಟುವಾದ ಪದಗಳಲ್ಲಿ ಟೀಸಿದ್ದಾರೆ. ಜಸ್ಟ್ ಬಾರ್ಗೆನಿಂಗ್ ಪೊಲಿಟಿಕ್ಸ್ ಅಷ್ಟೇ.

ಬಿಜೆಪಿ ಜೊತೆಗಿನ ಮೈತ್ರಿ ಪೂರ್ವದಲ್ಲಿ ಇದೇ ಕುಮಾರಸ್ವಾಮಿ ಅವರು ಆರೆಸ್ಸೆಸ್, ಕಲ್ಲಡ್ಕ ಪ್ರಭಾಕರ್ ಭಟ್, ಬಿ.ಎಲ್. ಸಂತೋಷ್, ಪ್ರಹ್ಲಾದ್ ಜೋಶಿ ವಿರುದ್ಧ ಸೈದ್ಧಾಂತಿಕ ಎಲ್ಲೆಕಟ್ಟುಗಳನ್ನು ಮೀರಿ ಬಾಯಿ ಹರಿಯಬಿಟ್ಟಿದ್ದರು. ಈಗ ಎಲ್ಲವನ್ನು ಮರೆತು ಕೇಂದ್ರ ಸರಕಾರದಲ್ಲಿ ಪ್ರಭಾವಿ ಮಂತ್ರಿಯಾಗಿ ಮೆರೆಯುತ್ತಿದ್ದಾರೆ. ಹಾಗೆ ನೋಡಿದರೆ ಪ್ರೀತಂ ಗೌಡ ಸೇರಿದಂತೆ ಬಿಜೆಪಿಯ ಹಲವರ ಬಗ್ಗೆ ಲೋಕಸಭಾ ಚುನಾವಣೆಗೂ ಮುಂಚೆ ಕುಮಾರಸ್ವಾಮಿಯವರಲ್ಲಿ ಸಿಟ್ಟು ಇತ್ತು. ಆಗ ತಾಳ್ಮೆಯಿಂದ ಇದ್ದು ಈಗ ಬಿಜೆಪಿಯ ಮಹತ್ವಾಕಾಂಕ್ಷಿ ಯೋಜನೆಯಾದ ಮೈಸೂರು ಪಾದಯಾತ್ರೆ ಸಂದರ್ಭದಲ್ಲಿ ಸ್ಫೋಟಗೊಂಡಿದ್ದಾರೆ. ಕಾರಣ ಸ್ಪಷ್ಟ: ಹಳೆ ಮೈಸೂರು ಭಾಗದಲ್ಲಿ ಮೈತ್ರಿ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡ ಕ್ರೆಡಿಟ್ ಅವರ ಹೆಗಲೇರಿದೆ. ಮೋದಿ-ಅಮಿತ್ ಶಾ ಅವರಿಗೆ ಹತ್ತಿರವಾಗಿದ್ದಾರೆ. ಎಲ್ಲಕ್ಕೂ ಮಿಗಿಲಾಗಿ ತೂಕದ ಖಾತೆ ಬೆನ್ನಿಗಿದೆ. ಸಂದರ್ಭ ನೋಡಿ ದಾಳ ಉರುಳಿಸಿದ್ದಾರೆ. ಪ್ರೀತಂ ಗೌಡ ಮಾತ್ರವಲ್ಲ, ಆರ್. ಅಶೋಕ್, ಸಿ.ಟಿ. ರವಿ, ವಿಜಯೇಂದ್ರ ಅವರಿಗೂ ಪರೋಕ್ಷ ಸಂದೇಶ ರವಾನಿಸಿದ್ದಾರೆ.

ಕುಮಾರಸ್ವಾಮಿಯವರ ‘ಭುಜಬಲದ’ ಪರಾಕ್ರಮವನ್ನು ಕರ್ನಾಟಕದ ಜನತೆ ಅದರಲ್ಲೂ ಹಳೆ ಮೈಸೂರು ಭಾಗದ ಮತದಾರ ಚೆನ್ನಾಗಿ ಬಲ್ಲ. 2004ರ ವಿಧಾನಸಭಾ ಚುನಾವಣೆಯಲ್ಲಿ ಜಾತ್ಯತೀತ ಜನತಾದಳ 58 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. ಆ ಗೆಲುವಿನಲ್ಲಿ ಸಿದ್ದರಾಮಯ್ಯ, ಎಂ.ಪಿ. ಪ್ರಕಾಶ್, ಬಿ.ಆರ್. ಪಾಟೀಲ್, ವೈಜನಾಥ ಪಾಟೀಲ್ ಸೇರಿದಂತೆ ಜನತಾ ಪರಿವಾರದ ಹಲವು ನಾಯಕರ ಪಾಲಿತ್ತು. ಕಾಂಗ್ರೆಸ್ ಹೈಕಮಾಂಡ್ ಜಾತ್ಯತೀತ ಜನತಾ ದಳದವರಿಗೆ ಸಿಎಂ ಸ್ಥಾನ ಕೊಡಲು ಸಿದ್ಧರಿದ್ದರು. ಆದರೆ ದೇವೇಗೌಡರು ಮತ್ತವರ ಜಾಣ ಮಗ ಕುಮಾರಸ್ವಾಮಿ ಮುಖ್ಯಮಂತ್ರಿ ಹುದ್ದೆಯನ್ನು ಕಾಂಗ್ರೆಸ್‌ನ ಧರಂ ಸಿಂಗ್ ಅವರಿಗೆ ಬಿಟ್ಟುಕೊಟ್ಟು ಸಿದ್ದರಾಮಯ್ಯ ಉಪಮುಖ್ಯಮಂತ್ರಿ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳುವಂತೆ ಮಾಡಿದರು. 20 ತಿಂಗಳು ಕಳೆಯುತ್ತಲೇ ಧರಂ ಸಿಂಗ್ ಅವರನ್ನು ಪದಚ್ಯುತಗೊಳಿಸಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು ಕುಮಾರಸ್ವಾಮಿಯೇ ಮುಖ್ಯಮಂತ್ರಿಯಾದರು. ಅಸಲಿಗೆ ಜಾತ್ಯತೀತ ಜನತಾದಳ 58 ಸ್ಥಾನಗಳಲ್ಲಿ ಗೆಲ್ಲಲು ಶ್ರಮಿಸಿದ ಸಿದ್ದರಾಮಯ್ಯ, ಎಂ.ಪಿ. ಪ್ರಕಾಶ್ ಸಹಿತ ಜನತಾ ಪರಿವಾರದ ಪ್ರಮುಖ ಮುಖಂಡರು ಪಕ್ಷ ತೊರೆಯುವಂತೆ ಮಾಡಿದರು. 20 ತಿಂಗಳ ನಂತರ ಯಡಿಯೂರಪ್ಪನವರಿಗೆ ಮುಖ್ಯಮಂತ್ರಿಯ ಹುದ್ದೆ ಬಿಟ್ಟು ಕೊಡುವುದಾಗಿ ಮಾತುಕೊಟ್ಟು ನಂಬಿಕೆ ದ್ರೋಹ ಮಾಡಿದರು.

ಜಾತ್ಯತೀತ ಜನತಾದಳ ದೇವೇಗೌಡರ ಮಾರ್ಗದರ್ಶನದಲ್ಲಿ ಕುಮಾರಸ್ವಾಮಿಯವರ ಸುಪರ್ದಿಗೆ ಬಂದ ಮೇಲೆ ಒಂದು ಬಾರಿಯೂ 58 ಸ್ಥಾನಗಳಲ್ಲಿ ಗೆಲುವು ಸಾಧಿಸಲು ಸಾಧ್ಯವಾಗಲಿಲ್ಲ. 2008ರಿಂದ 2023ರ ವರೆಗೆ ನಡೆದ ಎಲ್ಲಾ ಚುನಾವಣೆಗಳಲ್ಲಿ ನಿರ್ಣಾಯಕ ಪಾತ್ರ ವಹಿಸುವ ಕನಸು ಕಂಡು ವಿಫಲರಾದರು. 2008ರ ವಿಧಾನಸಭಾ ಚುನಾವಣೆಯಲ್ಲಿ ಕುಮಾರಸ್ವಾಮಿಯವರಿಗೆ ‘ಮಾಜಿ ಮುಖ್ಯಮಂತ್ರಿ’ ಎಂಬ ಪ್ರತ್ಯಯ ಸೇರಿಕೊಂಡಿತ್ತು. ಮುಖ್ಯಮಂತ್ರಿಗಿರಿಯ ಸಾಧನೆ ಡಂಗೂರ ಸಾರಿದರೂ ಜಾತ್ಯತೀತ ಜನತಾದಳಕ್ಕೆ ದೊರಕ್ಕಿದ್ದು ಕೇವಲ 28 ಸ್ಥಾನಗಳ ಸಂಖ್ಯಾಬಲ. ಕಾಂಗ್ರೆಸ್ ಜೊತೆಗೆ ಚೌಕಾಸಿ ಸರಕಾರ ರಚಿಸಬೇಕು ಎನ್ನುವಷ್ಟರಲ್ಲಿ ಯಡಿಯೂರಪ್ಪ ಪಕ್ಷೇತರರ ಬೆಂಬಲ ಪಡೆದು ಮುಖ್ಯಮಂತ್ರಿ ಹುದ್ದೆ ಅಲಂಕರಿಸಿದ್ದರು. 2013ರ ವಿಧಾನಸಭಾ ಚುನಾವಣೆ ಹೊತ್ತಿಗೆ ಬಿಜೆಪಿ ಮೂರು ಭಾಗವಾಗಿತ್ತು. ಆ ಚುನಾವಣೆಯಲ್ಲಿ ಕುಮಾರಸ್ವಾಮಿಯವರ ಜಾತ್ಯತೀತ ಜನತಾದಳ 40 ಸ್ಥಾನಗಳಲ್ಲಿ ಗೆಲುವು ಸಾಧಿಸಿ ಬೀಗಿತ್ತಾದರೂ ಅಧಿಕಾರಕ್ಕೆ ಹತ್ತಿರವಾಗಲೇ ಇಲ್ಲ. ಆಗ 122 ಸ್ಥಾನಗಳಲ್ಲಿ ಗೆದ್ದಿದ್ದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಐದು ವರ್ಷ ಆಡಳಿತ ನಡೆಸಿ ಕುಮಾರಸ್ವಾಮಿ ಅವರು ಮಿಸುಕಾಡದಂತೆ ಮಾಡಿತ್ತು. ಆರಂಭದ ಒಂದು ವರ್ಷ ಕಾಲ ಅಧಿಕೃತ ವಿರೋಧ ಪಕ್ಷದ ನಾಯಕರಾಗಿದ್ದ ಕುಮಾರಸ್ವಾಮಿಯವರು ಹಿಟ್ ಆ್ಯಂಡ್ ರನ್ ಕೇಸುಗಳಿಗೆ ಖ್ಯಾತಿ ಪಡೆದರು. ಯಾವ ಪ್ರಕರಣವನ್ನೂ ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲೇ ಇಲ್ಲ. ಯಡಿಯೂರಪ್ಪ ಕೆಜೆಪಿಯನ್ನು ಬಿಜೆಪಿಯಲ್ಲಿ ವಿಲೀನ ಗೊಳಿಸಿದ ಮೇಲೆ ವಿರೋಧ ಪಕ್ಷದ ನಾಯಕ ಸ್ಥಾನವನ್ನೂ ಕಳೆದುಕೊಂಡರು.

2018ರ ವಿಧಾನಸಭಾ ಚುನಾವಣೆಯಲ್ಲಿ ಕುಮಾರಸ್ವಾಮಿಯವರ ಜಾತ್ಯತೀತ ಜನತಾದಳ 37 ಸ್ಥಾನಗಳಲ್ಲಿ ಗೆಲುವು ಸಾಧಿಸಿ ಅಕ್ಷರಶಃ ನಿಣಾಯಕ ಪಾತ್ರ ವಹಿಸುವ ಅವಕಾಶ ಪಡೆದಿದ್ದರು. ಕಾಂಗ್ರೆಸ್‌ನ ಘಟಾನುಘಟಿ ನಾಯಕರು ಕುಮಾರಸ್ವಾಮಿ ಅವರ ಮನೆ ಬಾಗಿಲಿಗೆ ಬಂದು ಮುಖ್ಯಮಂತ್ರಿ ಹುದ್ದೆ ನೀಡಿದ್ದರು. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರವನ್ನು ವಿನಯ, ತಾಳ್ಮೆ ಮತ್ತು ಘನತೆ ಗೌರವದಿಂದ ಮುನ್ನಡೆಸಿದ್ದರೆ ಕರ್ನಾಟಕದಲ್ಲಿ ಕೋಮು ಶಕ್ತಿಗಳು ತಲೆ ಎತ್ತಿ ನಿಲ್ಲಲು ಸಾಧ್ಯವಾಗುತ್ತಿರಲಿಲ್ಲ. ಸ್ವಯಂಕೃತ ಅಪರಾಧದಿಂದ ಮುಖ್ಯಮಂತ್ರಿ ಹುದ್ದೆ ಕಳೆದುಕೊಂಡರು. ಬೆಂಗಳೂರಿನಿಂದ ಮೈಸೂರುವರೆಗೆ ತಮ್ಮದೇ ಶಕ್ತಿ ಇದೆ ಎಂದು ಜಂಬ ಕೊಚ್ಚಿಕೊಳ್ಳುವ ಕುಮಾರಸ್ವಾಮಿ ಅವರು 2019ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡಾಗಲೂ ಮಂಡ್ಯದಲ್ಲಿ ತಮ್ಮ ಮಗ ನಿಖಿಲ್‌ರನ್ನು ಗೆಲ್ಲಿಸಿಕೊಳ್ಳಲಾಗಲಿಲ್ಲ. ಬಿಜೆಪಿ ಬೆಂಬಲಿತ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ದಾಖಲೆ ವಿಜಯ ಸಾಧಿಸಿದ್ದರು. ಕುಮಾರಸ್ವಾಮಿ ತಮ್ಮ ಶಕ್ತಿ ಬಳಸಿ ಮೈಸೂರು, ಕೋಲಾರ, ಚಿಕ್ಕಬಳ್ಳಾಪುರ, ಚಿತ್ರದುರ್ಗ ಲೋಕಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಯಾಕೆ ಗೆಲ್ಲಿಸಲಿಲ್ಲ? ಅಷ್ಟೇ ಯಾಕೆ ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಸ್ವತಃ ಪೂಜ್ಯ ತಂದೆಯವರಾದ ಮಾಜಿ ಪ್ರಧಾನಿ ದೇವೇಗೌಡರೇ ಸ್ಪರ್ಧಿಸಿದ್ದರು. ಸೂಪರ್‌ಮ್ಯಾನ್ ಶಕ್ತಿ ಬಳಸಿ ಅವರನ್ನು ಯಾಕೆ ಗೆಲ್ಲಿಸಿಕೊಳ್ಳಲು ಸಾಧ್ಯವಾಗಲಿಲ್ಲ? ಆ ಸಂದರ್ಭದಲ್ಲಿ ಕುಮಾರಸ್ವಾಮಿ ಅವರು ಕರ್ನಾಟಕದ ಮುಖ್ಯಮಂತ್ರಿಯಾಗಿದ್ದರು. ಆಡಳಿತ ಯಂತ್ರ ಅವರ ಬೆರಳ ತುದಿಯಲ್ಲಿತ್ತು. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಕಾರಣಕ್ಕೆ ಹಾಸನದಲ್ಲಿ ಪ್ರಜ್ವಲ್ ರೇವಣ್ಣ ಗೆಲುವು ಸಾಧಿಸಿದ್ದರು. ಅಲ್ಲಿ ಕಾಂಗ್ರೆಸ್‌ಗೆ ಭದ್ರ ನೆಲೆ ಇದೆ ಎನ್ನುವುದನ್ನು ಶ್ರೇಯಸ್ ಪಟೇಲ್ ಗೆದ್ದು ತೋರಿಸಿದ್ದಾರೆ.

ಯಾವುದೇ ಮೈತ್ರಿಯಲ್ಲಿ ಸೋಲು ಗೆಲುವನ್ನು ಸಮಾನವಾಗಿ ಹಂಚಿಕೊಳ್ಳುವುದು ಮೈತ್ರಿ ಧರ್ಮದ ಮೂಲಪಾಠ. ಮಂಡ್ಯದಲ್ಲಿ ಮಗ ನಿಖಿಲ್, ತುಮಕೂರಿನಲ್ಲಿ ತಂದೆ ದೇವೇಗೌಡರು ಸೋತಾಗ ಕಾಂಗ್ರೆಸ್ ಮುಖಂಡರನ್ನು ಹೊಣೆಗಾರರನ್ನಾಗಿಸಿದರು. ಬಹಿರಂಗವಾಗಿ ಆಕ್ರೋಶ ವ್ಯಕ್ತಪಡಿಸಿದರು. ಆದರೆ ಮೈಸೂರಿನಲ್ಲಿ ಜೆಡಿಎಸ್ ಕಾರ್ಯಕರ್ತರು ಬಿಜೆಪಿಯ ಪ್ರತಾಪ ಸಿಂಹ ಅವರನ್ನು ಬೆಂಬಲಿಸಿ ಕಾಂಗ್ರೆಸ್ ಅಭ್ಯರ್ಥಿ ವಿಜಯಶಂಕರ್ ಅವರನ್ನು ಸೋಲಿಸಿದರು. ಕೋಲಾರ, ಚಿಕ್ಕಬಳ್ಳಾಪುರ, ಚಿತ್ರದುರ್ಗ ಸೇರಿದಂತೆ ಜಾತ್ಯತೀತ ಜನತಾದಳಕ್ಕೆ ನೆಲೆ ಇರುವಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಗೆಲ್ಲಲಿಲ್ಲ. ಆ ಸೋಲಿನ ಹೊಣೆಯನ್ನು ಕುಮಾರಸ್ವಾಮಿಯವರು ಹೊರಲೇ ಇಲ್ಲ. ಅಷ್ಟಕ್ಕೂ ಮಂಡ್ಯದಲ್ಲಿ ನಿಖಿಲ್, ತುಮಕೂರಿನಲ್ಲಿ ಎಚ್.ಡಿ. ದೇವೇಗೌಡರು ಸೋತಿದ್ದು ಕುಮಾರಸ್ವಾಮಿ ಅವರ ಮಿತಿಮೀರಿದ ದುರಹಂಕಾರದಿಂದ. 2023ರ ವಿಧಾನಸಭಾ ಚುನಾವಣೆಯಲ್ಲಿ ಜಾತ್ಯತೀತ ಜನತಾದಳ ಹೀನಾಯವಾಗಿ ಮುಗ್ಗರಿಸಲು ಕಾರಣ ಕುಮಾರಸ್ವಾಮಿ ಅವರ ಅತಿಯಾದ ಆತ್ಮವಿಶ್ವಾಸ ಮತ್ತು ಎಲ್ಲೆ ಮೀರಿದ ದುರಹಂಕಾರ. ಸೇಡು, ಪ್ರತಿಕಾರ, ಲೂಸ್‌ಟಾಕ್, ದುರಹಂಕಾರದ ಗುಣಗಳು ಕುಮಾರಸ್ವಾಮಿಯವರಲ್ಲಿ ಮೇಲುಗೈ ಸಾಧಿಸಿದಾಗಲೆಲ್ಲ ಅವರು ರಾಜಕೀಯವಾಗಿ ಹಿನ್ನಡೆ ಅನುಭವಿಸಿದ್ದಾರೆ. ವಿನಯವಂತರಾಗಿ, ದುರಹಂಕಾರ ತೋರದೆ ಇದ್ದಾಗಲೆಲ್ಲ ಮತ್ತೆ ಮತ್ತೆ ಗೆಲುವು ಸಾಧಿಸಿದ್ದಾರೆ.

2023ರ ವಿಧಾನಸಭಾ ಚುನಾವಣೆಯಲ್ಲಿ ಕುಮಾರಸ್ವಾಮಿಯವರ ಜಾತ್ಯತೀತ ಜನತಾದಳ ಕೇವಲ 19 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. 136 ಸ್ಥಾನಗಳ ಅತ್ಯಧಿಕ ಬಹುಮತ ಗಳಿಸಿದ ಕಾಂಗ್ರೆಸ್‌ಗೆ ಜೆಡಿಎಸ್ ಯಾವ ಕಾರಣಕ್ಕೂ ಅನಿವಾರ್ಯವಾಗಿರಲಿಲ್ಲ. ಎರಡನೇ ಬಾರಿಗೆ ಮುಖ್ಯಮಂತ್ರಿಯಾದ ಸಿದ್ದರಾಮಯ್ಯನವರಿಗೆ ದೇವೇಗೌಡ, ಕುಮಾರಸ್ವಾಮಿ ಮತ್ತು ಜೆಡಿಎಸ್ ಸಹವಾಸ ಬೇಕಾಗಿರಲಿಲ್ಲ. ದೇವೇಗೌಡರಿಗೆ ‘ಇಂಡಿಯಾ’ ಕೂಟದ ಭಾಗವಾಗಬೇಕೆಂಬ ಆಸೆ ಇತ್ತು. ಆ ಕಾರಣಕ್ಕೆ ಕಾಂಗ್ರೆಸ್ ಹೈಕಮಾಂಡ್ ದೇವೇಗೌಡರು ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾಗಲು ಬೆಂಬಲಿಸಿತ್ತು. ಆದರೆ ನಂತರದ ದಿನಗಳಲ್ಲಿ ದೇವೇಗೌಡರಿಗೆ ಎನ್‌ಡಿಎ ಕೂಟ ಅನಿವಾರ್ಯವಾಯಿತು. ಬೆಂಗಳೂರಿನಲ್ಲಿ ನಡೆದ ‘ಇಂಡಿಯಾ’ ಕೂಟದ ಸಭೆಗೆ ಜಾತ್ಯತೀತ ಜನತಾದಳದ ಮುಖಂಡರಿಗೆ ಆಹ್ವಾನ ನೀಡಲಿಲ್ಲ. ಜೆಡಿಎಸ್ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಬಿಜೆಪಿಯೊಂದಿಗೆ ಅನಿವಾರ್ಯವಾಗಿ ಮೈತ್ರಿ ಮಾಡಿಕೊಂಡಿತು. ವಿಶೇಷವಾಗಿ ಬಿ.ಎಲ್.ಸಂತೋಷ್, ಸಿ.ಟಿ.ರವಿ, ಪ್ರಹ್ಲಾದ್ ಜೋಶಿಯವರಿಗೆ ಈ ಮೈತ್ರಿ ಇಷ್ಟವಿರಲಿಲ್ಲ. ಅಷ್ಟಕ್ಕೂ ಬಿಜೆಪಿ- ಜೆಡಿಎಸ್ ಮೈತ್ರಿಯಿಂದ ಹೆಚ್ಚು ಲಾಭವಾದದ್ದು ಜೆಡಿಎಸ್ ಮತ್ತು ಕುಮಾರಸ್ವಾಮಿ ಅವರಿಗೆ. ಮೈತ್ರಿ ಏರ್ಪಡದೆ ಹೋಗಿದ್ದರೆ ಮಂಡ್ಯದಲ್ಲಿ ಕುಮಾರಸ್ವಾಮಿ, ಕೋಲಾರದಲ್ಲಿ ಎಂ. ಮಲ್ಲೇಶ ಬಾಬು ಖಂಡಿತ ಗೆಲ್ಲುತ್ತಿರಲಿಲ್ಲ. ಕುಮಾರಸ್ವಾಮಿಯವರಿಂದ ಮೈಸೂರು, ಬೆಂಗಳೂರು ಚಿಕ್ಕಬಳ್ಳಾಪುರ, ಚಿತ್ರದುರ್ಗ, ಶಿವಮೊಗ್ಗದ ಬಿಜೆಪಿ ಅಭ್ಯರ್ಥಿಗಳ ಗೆಲುವಿಗೆ ಅನುಕೂಲವಾಗಿದೆ. ಅದನ್ನೇ ಕುಮಾರಸ್ವಾಮಿಯವರು ತಲೆಗೇರಿಸಿಕೊಂಡು ಬೆಂಗಳೂರಿನಿಂದ ಮೈಸೂರುವರೆಗೆ ತಮಗೆ ಶಕ್ತಿ ಇದೆ ಎಂದು ಜಂಬ ಕೊಚ್ಚಿಕೊಂಡಿದ್ದಾರೆ. ಹಳೆ ಮೈಸೂರು ಭಾಗದಲ್ಲಿ ಬಿಜೆಪಿ ಕಾರ್ಯಕರ್ತರು ಒಮ್ಮನದಿಂದ ಸಹಕರಿಸದೇ ಹೋಗಿದ್ದರೆ ಕುಮಾರಸ್ವಾಮಿಯವರು ಕೇಂದ್ರದಲ್ಲಿ ಮಂತ್ರಿಯೇ ಆಗುತ್ತಿರಲಿಲ್ಲ.

ಕರ್ನಾಟಕದಲ್ಲಿ ಬಿಜೆಪಿ 17 ಲೋಕಸಭಾ ಕ್ಷೇತ್ರದಲ್ಲಿ ಗೆಲ್ಲಲು ಕುಮಾರಸ್ವಾಮಿ ಪಾತ್ರ ಮುಖ್ಯವಾದದ್ದು ಎಂದು ಪ್ರಚಾರ ಮಾಡಿಕೊಳ್ಳುವ ಮೂಲಕ ಗೆಲುವಿನಲ್ಲಿ ತುಸು ಜಾಸ್ತಿ ಕ್ರೆಡಿಟ್ ತೆಗೆದುಕೊಂಡರು. ಆದರೆ ಬೀದರ್, ಕಲಬುರ್ಗಿ, ರಾಯಚೂರು, ಕೊಪ್ಪಳ, ಬಳ್ಳಾರಿ ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಕಡಿಮೆ ಅಂತರದಲ್ಲಿ ಸೋತರು. ಆ ಸೋಲಿನ ಹೊಣೆಯನ್ನು ಕುಮಾರಸ್ವಾಮಿಯವರು ಹೊರಬೇಕಲ್ಲವೇ? ಅವರ ಪಕ್ಷದ ಬಂಡೆಪ್ಪ ಕಾಶಂಪುರ್, ದೊಡ್ಡಪ್ಪಗೌಡ ಪಾಟೀಲ ನರಿಬೋಳ, ಶರಣಗೌಡ ಕಂದಕೂರ, ವೆಂಕಟರಾವ್ ನಾಡಗೌಡ, ಡಾ. ಎ.ಬಿ. ಮಾಲಕರೆಡ್ಡಿ ಮುಂತಾದವರು ಕೆಲಸ ಮಾಡಿದ್ದರೆ ಬಿಜೆಪಿಗೆ ಅನುಕೂಲವಾಗುತಿತ್ತು. ಉತ್ತರ ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲಿ ಜೆಡಿಎಸ್ -ಬಿಜೆಪಿ ಮೈತ್ರಿ ನೀರಿಕ್ಷಿತ ಮಟ್ಟದಲ್ಲಿ ಯಶಸ್ವಿಯಾಗಲಿಲ್ಲ. ಗುರುಮಠಕಲ್ ಶಾಸಕ ಶರಣಗೌಡ ಕಂದಕೂರ, ದೇವದುರ್ಗ ಶಾಸಕಿ ಕರೆಮ್ಮ ಜಾತ್ಯತೀತ ಜನತಾದಳದ ಟಿಕೆಟ್ ಮೇಲೆ ಗೆದ್ದಿದ್ದರೂ ಮೈತ್ರಿ ಧರ್ಮ ಪಾಲಿಸಲಿಲ್ಲ. ಕೇಂದ್ರದಲ್ಲಿ ಪ್ರಭಾವಿ ಖಾತೆಯ ಮಂತ್ರಿಯಾಗಿರುವ ಕುಮಾರಸ್ವಾಮಿಯವರಿಗೆ ಬಿಜೆಪಿಯ ಯಾರೊಬ್ಬರೂ ಸೋಲಿನಲ್ಲೂ ಪಾಲು ಕೊಟ್ಟಿಲ್ಲ.

ಕರ್ನಾಟಕದ ಬಿಜೆಪಿ ಒಡೆದ ಮನೆಯಾಗಿದೆ. ಬಸನಗೌಡ ಯತ್ನಾಳ್ ಸದನದಲ್ಲೇ ಯಡಿಯೂರಪ್ಪ, ವಿಜಯೇಂದ್ರ ಅವರನ್ನು ಕಟುವಾಗಿ ಟೀಕಿಸಿದ್ದಾರೆ. ಆರ್. ಅಶೋಕ್ ತಾನು ವಿರೋಧ ಪಕ್ಷದ ನಾಯಕನಾಗಿ ಕೆಲಸ ಮಾಡಬಲ್ಲೆ ಎಂದು ರುಜುವಾತು ಪಡಿಸಲು ಹೆಣಗಾಡುತ್ತಿದ್ದಾರೆ. ವಿಜಯೇಂದ್ರರನ್ನು ರಾಜ್ಯಾಧ್ಯಕ್ಷ ಎಂದು ರಮೇಶ್ ಜಾರಕಿಹೊಳಿ, ಅರವಿಂದ ಲಿಂಬಾವಳಿ ಒಪ್ಪಿಕೊಂಡೇ ಇಲ್ಲ. ಈ ಎಲ್ಲ ಗೊಂದಲಗಳ ಲಾಭವನ್ನು ಕುಮಾರಸ್ವಾಮಿಯವರು ಪಡೆದುಕೊಳ್ಳುತ್ತಿದ್ದಾರೆ. ಒಂದು ಮೂಲದ ಪ್ರಕಾರ ಕುಮಾರಸ್ವಾಮಿಯವರಿಗೆ ಮುಡಾ ಹಗರಣವನ್ನು ಹೆಚ್ಚು ಬೆಳೆಸುವುದು ಇಷ್ಟವಿಲ್ಲ. ಮುಡಾ ಹಗರಣದ ಎಲ್ಲಾ ದಾಖಲೆಗಳು ಹೊರ ಬಂದರೆ ಕುಮಾರಸ್ವಾಮಿ ಮತ್ತವರ ಪರಿವಾರಕ್ಕೆ ಸುತ್ತಿಕೊಳ್ಳುತ್ತದೆಯಂತೆ. ಸಾ.ರಾ. ಮಹೇಶ್ ಮುಂತಾದವರಿಗೆ ಈ ಸತ್ಯ ಗೊತ್ತಿರುವುದರಿಂದಲೇ ಕುಮಾರಸ್ವಾಮಿ ಸದನದಲ್ಲಿ ಅದನ್ನು ಪ್ರಸ್ತಾಪಿಸುವ ಗೊಡವೆಗೆ ಹೋಗಿರಲಿಲ್ಲ. ಕರ್ನಾಟಕದ ಎನ್‌ಡಿಎ ಮೈತ್ರಿಕೂಟದಲ್ಲಿ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಅವರ ಪರ ಬಣಗಳು ಹುಟ್ಟಿಕೊಂಡಿವೆ. ಬಸನಗೌಡ ಯತ್ನಾಳ್ ಮತ್ತು ರಮೇಶ್ ಜಾರಕಿಹೊಳಿಯವರಿಗೆ ಮುಡಾ ಹಗರಣಕ್ಕಿಂತಲೂ ವಾಲ್ಮೀಕಿ ನಿಗಮದ ಹಗರಣ ಹೆಚ್ಚು ಮುಖ್ಯ ಎನಿಸಿದೆ. ಬಸನಗೌಡ ಯತ್ನಾಳ್ ಬಹಿರಂಗವಾಗಿ ‘‘ವಿಜಯೇಂದ್ರ ಮತ್ತು ಆರ್. ಅಶೋಕ್ ಮುಡಾ ಹಗರಣದಲ್ಲಿ ಸಿದ್ದರಾಮಯ್ಯ ಅವರನ್ನು ಸಿಲುಕಿಸಿ ಡಿ.ಕೆ. ಶಿವಕುಮಾರ್ ಅವರನ್ನು ಮುಖ್ಯಮಂತ್ರಿಯನ್ನಾಗಿಸಲು ಪ್ರಯತ್ನಿಸುತ್ತಿದ್ದಾರೆ’’ ಎಂದು ಕುಹಕವಾಡಿದ್ದಾರೆ.

ಪ್ರತಿಪಕ್ಷದಲ್ಲಿ ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಯಾರೇ ಇರಲಿ, ಜನರ ಧ್ವನಿಯಾಗಿ ಕೆಲಸ ಮಾಡಬೇಕು. ಸರಕಾರ ನಡೆಸುವವರು ತಪ್ಪು ಮಾಡಿದಾಗ ರಚನಾತ್ಮಕವಾಗಿ ಟೀಕಿಸುವ, ತಿದ್ದುವ ಹೊಣೆಗಾರಿಕೆ ಪ್ರತಿಪಕ್ಷಗಳದ್ದು. ಬಿಜೆಪಿ ಹಮ್ಮಿಕೊಳ್ಳಲು ನಿರ್ಧರಿಸಿರುವ ಮುಡಾ ಹಗರಣದ ಮೈಸೂರು ಪಾದಯಾತ್ರೆ ಆರಂಭದಲ್ಲೇ ಬಿಜೆಪಿ ಮತ್ತು ಎನ್‌ಡಿಎ ಮೈತ್ರಿಕೂಟದ ನಾಯಕರಿಂದ ವಿರೋಧ ಎದುರಿಸುತ್ತಿದೆ. ಮುಡಾ ಹಗರಣದಲ್ಲಿ ಕುಮಾರಸ್ವಾಮಿ ಮತ್ತವರ ಪರಿವಾರದವರ ಹುಳುಕುಗಳು ಇವೆ ಎನ್ನಲಾಗಿದೆ. ವಾಲ್ಮೀಕಿ ನಿಗಮದ ಹಗರಣದಲ್ಲಿ ಕೋಟ ಶ್ರೀನಿವಾಸ ಪೂಜಾರಿ, ಬಸವರಾಜ ಬೊಮ್ಮಾಯಿ ಪಾಲುದಾರರು ಎಂಬ ಆರೋಪವಿದೆ. ಕುಮಾರಸ್ವಾಮಿಯವರ ಅವಕಾಶವಾದಿ ಮೈತ್ರಿ ಬೆತ್ತಲಾಗಿದೆ. ಕೇಂದ್ರದಲ್ಲಿ ಉನ್ನತ ಹುದ್ದೆ ಅಲಂಕರಿಸಿರುವ ಕುಮಾರಸ್ವಾಮಿ ಈಗಾಗಲೇ ಸ್ನೇಹಕ್ಕೆ ಯೋಗ್ಯರಲ್ಲ ಎನ್ನುವುದು ಸಾಬೀತುಪಡಿಸಿದ್ದಾರೆ.

ಮೈತ್ರಿಗೆ ತಾತ್ವಿಕ ನೆಲೆ ಇಲ್ಲದೆ ಹೋದರೆ ಕುಮಾರಸ್ವಾಮಿ, ನಿತೀಶ್ ಕುಮಾರ್, ಚಂದ್ರಬಾಬು ನಾಯ್ಡು ತರಹದವರು ಮುನ್ನೆಲೆಗೆ ಬರುತ್ತಾರೆ. ಅವರಿಗೆ ಅಧಿಕಾರ ಬೇಕು, ಅಭಿವೃದ್ಧಿ ಬೇಡ. ದೇವೇಗೌಡರ ಕುಟುಂಬಕ್ಕೆ ಬಿಜೆಪಿಯವರು ವಿಷ ಹಾಕಿದ್ದು, ಸರ್ವನಾಶ ಮಾಡಲು ಹೊರಟಿದ್ದು ಕುಮಾರಸ್ವಾಮಿ ಅವರನ್ನು ಬಾಧಿಸಿದ್ದರೆ ಮಂತ್ರಿಗಿರಿಗೆ ರಾಜೀನಾಮೆ ಬಿಸಾಕಿ ಎನ್‌ಡಿಎ ಮೈತ್ರಿಕೂಟದಿಂದ ಹೊರಬರಬೇಕು. ಮಾಜಿ ಪ್ರಧಾನಿ ದೇವೇಗೌಡರು ರಾಜ್ಯಸಭಾ ಸದಸ್ಯರಾಗಿದ್ದೇ ಕಾಂಗ್ರೆಸ್ ಶಾಸಕರ ಬೆಂಬಲದಿಂದ. ಗೌಡರು ಅದು ಹೇಗೆ ಎನ್‌ಡಿಎ ಮೈತ್ರಿಕೂಟದಲ್ಲಿ ಮುಂದುವರಿಯುವ ನೈತಿಕತೆ ಹೊಂದುತ್ತಾರೆ? ಕುಮಾರಸ್ವಾಮಿ ಸದ್ಯ ತಮಗೆ ಸಿಕ್ಕ ಅವಕಾಶದಿಂದ ಕರ್ನಾಟಕಕ್ಕೆ ಒಳಿತು ಮಾಡುವ ಮೂಲಕವಾದರೂ ಪ್ರಾಯಶ್ಚಿತ್ತ ಮಾಡಿಕೊಳ್ಳಲಿ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಡಾ. ರಾಜಶೇಖರ ಹತಗುಂದಿ

contributor

Similar News