ಸಾಂಸ್ಕೃತಿಕ ಉತ್ಸವಗಳಲ್ಲೂ ‘ಸುಗ್ಗಿ’

ಸಾಂಸ್ಕೃತಿಕ ಉತ್ಸವಗಳ ಹೊಣೆಗಾರಿಕೆ ಜಿಲ್ಲಾಧಿಕಾರಿಗಳಿಗೆ ವಹಿಸಿದ ಮೇಲೆ ಬಹುತೇಕ ಎಲ್ಲಾ ಉತ್ಸವಗಳು ಮಾಫಿಯಾ ಸ್ವರೂಪ ಪಡೆದವು. ಕಲಾವಿದರ ಆಯ್ಕೆಯಲ್ಲಿ ಪ್ರತಿಭೆ ಮತ್ತು ಗುಣಮಟ್ಟವನ್ನು ಗೌಣವಾಗಿ ಕಾಣಲಾಯಿತು. ಎಲ್ಲಾ ಕಲಾ ಪ್ರಕಾರಗಳಿಗೆ ಸಮಾನ ಅವಕಾಶ, ಸಮಾನ ಗೌರವ, ಸಮಾನ ಸಂಭಾವನೆ ನೀಡುವುದನ್ನು ನಿಲ್ಲಿಸಿದರು. ಸಾಂಸ್ಕೃತಿಕ ಉತ್ಸವಗಳೆಂದರೆ ಹಿಂದಿ ಸಿನೆಮಾ ಹಾಡುಗಳ ಉತ್ಸವ ಎಂಬಂತೆ ಬಿಂಬಿಸಲಾಯಿತು. ಕಲಾವಿದರೆಂದರೆ ಸಿನೆಮಾ ಹಾಡು ಹಾಡುವ ಗಾಯಕರೆಂದೇ ನಂಬಿಸಲಾಯಿತು. ಮಾತ್ರವಲ್ಲ ಜನಸಾಮಾನ್ಯರು ಸಿನೆಮಾ ಹಾಡು ಹಾಡುವ ಕಲಾವಿದರನ್ನು ಮಾತ್ರ ಇಷ್ಟಪಡುತ್ತಾರೆ ಎಂಬಂತೆ ಪ್ರಚಾರ ಮಾಡಲಾಯಿತು.

Update: 2023-10-28 05:11 GMT

 Photo: twitter.com/RajivAluri

ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಾಹಿತ್ಯ-ಸಂಸ್ಕೃತಿ ಬಗ್ಗೆ ಪ್ರೀತಿ, ಗೌರವ ಹೊಂದಿದವರು. ಸಾಹಿತಿ-ಕಲಾವಿದರನ್ನು ಗೌರವದಿಂದ ಕಾಣುವ ಸ್ವಭಾವದವರು. ಒಟ್ಟು ಬದುಕಿನಲ್ಲಿ; ಪ್ರತಿಭಾ ನ್ಯಾಯದ ಜೊತೆಗೆ ಸಾಮಾಜಿಕ ನ್ಯಾಯ, ಪ್ರಾದೇಶಿಕ ನ್ಯಾಯ, ಮಹಿಳಾ ನ್ಯಾಯ ದೊರಕಬೇಕೆಂಬ ಅಪೇಕ್ಷೆ ಉಳ್ಳವರು. ಸಮಸಮಾಜದ ಕನಸುಗಾರರು. ಸಿದ್ದರಾಮಯ್ಯನವರ ಸುತ್ತುವರಿದ ಕೆಲ ಸ್ವಾರ್ಥಿಗಳು ಮತ್ತು ಪೂರ್ವಾಗ್ರಹ ಪೀಡಿತ ವ್ಯಕ್ತಿಗಳಿಂದ ಎಡವಟ್ಟುಗಳು ಆಗುತ್ತಿವೆಯೇ ಹೊರತು ಅವರು ಅಶಿಸ್ತು, ಅನ್ಯಾಯ, ತಾರತಮ್ಯವನ್ನು ಸಹಿಸುವ ಜಾಯಮಾನದವರಲ್ಲ. ಸಾಮಾಜಿಕ ನ್ಯಾಯದ ಹರಿಕಾರ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಊರಿನವರಾದ ಸಿಎಂ ಸಿದ್ದರಾಮಯ್ಯನವರು ಎರಡನೇ ಬಾರಿಗೆ ಮುಖ್ಯಮಂತ್ರಿ ಹುದ್ದೆ ಅಲಂಕರಿಸಿದ ಮೇಲೆ ಹೆಚ್ಚು ಮಾಗಿದಂತೆ ನಡೆದುಕೊಳ್ಳುತ್ತಿದ್ದಾರೆ. ಪ್ರತೀ ಹೆಜ್ಜೆಗೂ ಜವಾಬ್ದಾರಿ ಫೀಲ್ ಮಾಡುತ್ತಿದ್ದಾರೆ. ಬರಗಾಲದ ದಿನಮಾನಗಳಲ್ಲಿ ಸರಳ ಮೈಸೂರು ದಸರಾ ಆಚರಿಸಿ ನಾಡ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಸಿದ್ದರಾಮಯ್ಯನವರು ರಚನಾತ್ಮಕ ಟೀಕೆಗಳನ್ನು ಕ್ರೀಡಾ ಮನೋಭಾವದಿಂದ ಸ್ವೀಕರಿಸುತ್ತಾರೆ ಎಂಬ ಏಕೈಕ ಕಾರಣಕ್ಕೆ ಸಾಂಸ್ಕೃತಿಕ ಲೋಕದ ಲೋಪಗಳ ಕುರಿತು ವಿವರವಾಗಿ ಬರೆಯಲಾಗುತ್ತಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಅವರಿಗೆ ಈ ಎಲ್ಲಾ ಸಂಗತಿಗಳು ಅರ್ಥವಾಗುವುದೇ ಇಲ್ಲ.

ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಸಾಂಸ್ಕೃತಿಕ ಕಾಳಜಿಯ ಕಾರಣಕ್ಕೆ ನಾಡಹಬ್ಬ ಎಂದು ಬಿಂಬಿತವಾಗಿರುವ ಮೈಸೂರು ದಸರಾ ಸೌಹಾರ್ದ ಬದುಕಿನ ಪ್ರತೀಕದಂತಿದೆ. ಕರ್ನಾಟಕದಲ್ಲಿ ಸಾಹಿತ್ಯ-ಸಂಸ್ಕೃತಿ ಮತ್ತು ವಿವಿಧ ಕಲಾ ಪ್ರಕಾರಗಳಿಗೆ ನಿರಂತರ ಪ್ರೋತ್ಸಾಹ ನೀಡಿ ದೊಡ್ಡ ಮಟ್ಟದಲ್ಲಿ ಬೆಳೆದು ನಿಲ್ಲಲು ಅವರು ಕಾರಣರಾಗಿದ್ದಾರೆ. ಸಾಹಿತ್ಯ-ಸಂಸ್ಕೃತಿಯ ಬೆಳವಣಿಗೆಗೆಂದೇ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕರ್ನಾಟಕ ವಿದ್ಯಾವರ್ಧಕ ಸಂಘಗಳ ಸ್ಥಾಪನೆಗೆ ಒತ್ತಾಸೆಯಾಗಿ ನಿಂತವರು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು. ಅವರ ಆಸ್ಥಾನದಲ್ಲಿ ಕರ್ನಾಟಕ ಸಂಗೀತದ ದಿಗ್ಗಜ ಕಲಾವಿದರು ಆಶ್ರಯ ಪಡೆದಿದ್ದರು. ಕರ್ನಾಟಕ ಶಾಸ್ತ್ರೀಯ ಸಂಗೀತದ ಕಲಾವಿದರು ಮಾತ್ರವಲ್ಲ ವಿವಿಧ ವಾದ್ಯಗಳನ್ನು ನುಡಿಸುವ ಪ್ರತಿಭಾವಂತ ವಾದ್ಯ ಕಲಾವಿದರಿಗೂ ಸಮಾನ ಗೌರವ ನೀಡುತ್ತಿದ್ದರು. ಸ್ವತಃ ನಾಲ್ವಡಿ ಅವರೇ 8 ವಾದ್ಯಗಳನ್ನು ನುಡಿಸುವಲ್ಲಿ ಪ್ರವೀಣರಾಗಿದ್ದರು. ಕೊಳಲು, ಪಿಟೀಲು, ಸ್ಯಾಕ್ಸೊಫೋನ್, ಪಿಯಾನೊ, ಮೃದಂಗ, ನಾದಸ್ವರ, ಸಿತಾರ್ ಮತ್ತು ವೀಣೆ ನುಡಿಸುತ್ತಿದ್ದರು. ಕರ್ನಾಟಕದಲ್ಲಿ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ಮತ್ತು ಅದರ ಪ್ರಕಾರಗಳು ನೆಲೆ ಕಂಡುಕೊಂಡಿದ್ದೇ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಆಸಕ್ತಿಯ ಫಲವಾಗಿ.

ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ತಮ್ಮ ಆಸ್ಥಾನದಲ್ಲಿ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ಕಚೇರಿಗಳನ್ನು ಏರ್ಪಡಿಸಿ ಉತ್ತರ ಭಾರತದ ದಿಗ್ಗಜ ಕಲಾವಿದರನ್ನು ಆಹ್ವಾನಿಸುತ್ತಿದ್ದರು. ಕಿರಾಣಾ ಘರಾಣೆಯ ಪ್ರವರ್ತಕ ಅಬ್ದುಲ್ ಕರೀಂ ಖಾನ್, ಜೈಪುರ ಅತ್ರೌಲಿ ಘರಾಣೆಯ ಸ್ಥಾಪಕ ಅಲ್ಲಾದಿಯಾಖಾನ್ ಸಾಹೇಬರ ಪಟ್ಟದ ಶಿಷ್ಯೆ ಕೇಸರ ಬಾಯಿ ಕೇಳ್ಕರ್, ಖ್ಯಾತ ಠುಮರಿ ಗಾಯಕಿ ಗೋಹರ್‌ಜಾನ್, ಗ್ವಾಲಿಯರ್ ಘರಾಣೆಯ ಖ್ಯಾತ ಗಾಯಕ ಫಯಾಝ್‌ಖಾನ್, ಖ್ಯಾತ ತಬಲವಾದಕ ಬರ್ಕತುಲ್ಲಾ ಖಾನ್, ಖ್ಯಾತ ಸಿತಾರ್ ವಾದಕ ರಹಮತ್ ಖಾನ್ ಸೇರಿದಂತೆ ಹಲವರು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಆಸ್ಥಾನಕ್ಕೆ ಬಂದು ಹೋಗಿದ್ದರ ಪರಿಣಾಮವಾಗಿ ಕರ್ನಾಟಕದಲ್ಲಿ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಬೀಜಾಂಕುರವಾಯಿತು. ಕಿರಾಣಾ ಘರಾಣೆಯ ಪ್ರವರ್ತಕ ಉಸ್ತಾದ್ ಅಬ್ದುಲ್ ಕರೀಂ ಖಾನ್ ಸಾಹೇಬರು ಮೈಸೂರಿಗೆ ಬಂದು ಹೋಗುವ ಸಂದರ್ಭದಲ್ಲಿ ಕರ್ನಾಟಕ ಮೂಲದ ಸವಾಯಿ ಗಂಧರ್ವರಿಗೆ ಗುರುಗಳಾಗಿ ಸಂಗೀತ ಕಲಿಸುತ್ತಾರೆ. ಹಾಗೆ ಸಂಗೀತ ಕಲಿತ ಸವಾಯಿ ಗಂಧರ್ವರು ಭಾರತ ರತ್ನ ಬೀಮಸೇನ್ ಜೋಶಿ ಮತ್ತು ಪದ್ಮವಿಭೂಷಣ ವಿದುಷಿ ಡಾ. ಗಂಗೂಬಾಯಿ ಹಾನಗಲ್ ಅವರಂಥ ಶಿಷ್ಯರಿಗೆ ಕಿರಾಣ ಘರಾಣೆಯ ಸಂಗೀತ ಕಲಿಸಿ ಆ ಸಂಗೀತ ಪರಂಪರೆ ದೇಶವಿದೇಶಗಳಲ್ಲಿ ಜನಪ್ರಿಯಗೊಳ್ಳುವಂತೆ ಮಾಡುತ್ತಾರೆ. ಸಿತಾರ್ ರತ್ನ ರಹಮತ್ ಖಾನ್‌ರಂತೂ ಧಾರವಾಡದಲ್ಲಿ ನೆಲೆನಿಂತು ಸಿತಾರ್ ವಾದ್ಯ ಕರ್ನಾಟಕದಾದ್ಯಂತ ಪಸರಿಸುವಂತೆ ಮಾಡುತ್ತಾರೆ.

ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಕೇವಲ ಸಂಗೀತ ಲೋಲುಪರಾಗಿರಲಿಲ್ಲ. ಸಾಹಿತ್ಯ, ಸಂಗೀತ ಮಾತ್ರವಲ್ಲ ಮೈಸೂರು ಸಂಸ್ಥಾನವನ್ನು ಮಾದರಿ ರಾಜ್ಯವನ್ನಾಗಿ ರೂಪಿಸಿದ ಅಭಿವೃದ್ಧಿಯ ಪ್ರವರ್ತಕರೂ ಆಗಿದ್ದರು. 1918ರಲ್ಲಿ ಮಿಲ್ಲರ್ ಆಯೋಗ ರಚಿಸಿ ಸಾಮಾಜಿಕ ನ್ಯಾಯ ಪರಿಕಲ್ಪನೆಗೆ ನಾಂದಿ ಹಾಡಿದರು. ಮಿಲ್ಲರ್ ಆಯೋಗದ ವರದಿ ಆಧರಿಸಿ ಸರಕಾರಿ ನೌಕರಿಗಳಲ್ಲಿ ಬ್ರಾಹ್ಮಣೇತರರಿಗೆ ಮೊದಲ ಬಾರಿಗೆ ಪ್ರತಿಶತ 25ರಷ್ಟು ಮೀಸಲಾತಿಯ ಅವಕಾಶ ಕಲ್ಪಿಸಿದರು. ಮೈಸೂರು ವಿವಿ ಸ್ಥಾಪಿಸುವುದರ ಜೊತೆಗೆ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಹಮ್ಮಿಕೊಂಡು ರಾಜ್ಯವನ್ನು ಬಹು ಆಯಾಮದಲ್ಲಿ ಕಟ್ಟಿದರು. ಅಭಿವೃದ್ಧಿ ರಾಜಕಾರಣದ ಗಂಧ ಗಾಳಿ ಇಲ್ಲದ ನಮ್ಮ ಶಾಸಕರು, ಮಂತ್ರಿಗಳು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಂದ ಪ್ರೇರಣೆ ಪಡೆಯುವ ಅಗತ್ಯವಿದೆ. ಕರ್ನಾಟಕದಲ್ಲಿ ಸಾಹಿತ್ಯ-ಸಂಸ್ಕೃತಿ, ಸಾಂಸ್ಕೃತಿಕ ಉತ್ಸವಗಳಿಗೆ ಪ್ರೇರಣೆ ಒದಗಿಸಿದವರೇ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು. ವಿಜಯನಗರದ ಅರಸರು ತೆಲುಗು ಪ್ರಿಯರಾಗಿದ್ದರಿಂದ ಕನ್ನಡ ಅಸ್ಮಿತೆಗೆ ಮೈಸೂರು ಅರಸರು ರೂಪಿಸಿದ ಸಾಂಸ್ಕೃತಿಕ ಮಾದರಿಯೇ ಅನುಕರಣೀಯ.

ನಾಡಹಬ್ಬ ಮೈಸೂರು ದಸರಾ ಉತ್ಸವದಿಂದ ಪ್ರೇರಣೆ ಪಡೆದು ಹಿರಿಯ ರಾಜಕಾರಣಿ ಸಂಸ್ಕೃತಿಪ್ರಿಯರೂ ಆಗಿದ್ದ ಎಂ.ಪಿ. ಪ್ರಕಾಶ್ ಅವರು ‘ಹಂಪಿ ಉತ್ಸವ’ ಆರಂಭಿಸಿದರು. ಆನಂತರ ‘ಕಿತ್ತೂರು ಉತ್ಸವ’, ‘ನವರಸಪುರ ಉತ್ಸವ’, ‘ಕಲ್ಯಾಣ ಕರ್ನಾಟಕ ಉತ್ಸವ’, ‘ಕರಾವಳಿ ಉತ್ಸವ’, ‘ಆನೆಗೊಂದಿ ಉತ್ಸವ’ ಮತ್ತು ಜಿಲ್ಲಾ ಉತ್ಸವಗಳು ತಲೆ ಎತ್ತಿದವು. ಈ ಬಾರಿಯ ಮೈಸೂರು ದಸರಾ ಉತ್ಸವಕ್ಕೂ ಮುನ್ನ ಕಲಾವಿದರಿಗೆ ಕಾರ್ಯಕ್ರಮ ನೀಡಲು ಕಮಿಷನ್ ಕೇಳಲಾಗಿದೆ ಎಂಬ ಸುದ್ದಿ ಸದ್ದು ಮಾಡಿತು. ಖ್ಯಾತ ಸರೋದ್ ವಾದಕ ಪಂ. ರಾಜೀವ್ ತಾರಾನಾಥ್ ಅವರಿಗೆ ಕಾರ್ಯಕ್ರಮದ ಅವಕಾಶ ಕಲ್ಪಿಸಲು ಅಧಿಕಾರಿಯೊಬ್ಬರು ಲಂಚ ಕೇಳಿದ್ದಾರೆ ಎಂಬುದು ಆ ಸುದ್ದಿಯ ಸಾರ. ಜೊತೆಗೆ ಪಂ. ರಾಜೀವ್ ತಾರಾನಾಥ್ ಅವರಿಗೆ 8 ಲಕ್ಷ ರೂ. ಸಂಭಾವನೆ ನೀಡಿದ್ದಾರೆ ಎಂಬುದು ಜಾಹೀರಾಯಿತು. ತಾರಾನಾಥರು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರು. ಹಿರಿಯರು, ಖ್ಯಾತನಾಮರೂ ಆಗಿದ್ದರಿಂದ ಆ ಸುದ್ದಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತು. ಮುಖ್ಯಮಂತ್ರಿ ಕಚೇರಿ ಲಂಚದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿತು. ಖುದ್ದು ತಾರಾನಾಥ್ ಅವರೇ ‘‘ನನಗೆ ಯಾರೂ ಲಂಚ ಕೇಳಿಲ್ಲ’’ ಎಂದು ಹೇಳಿದರು. ಸುದ್ದಿ ಮಾಡಿದವರು ತಾರಾನಾಥ್‌ರ ಮತ್ತೊಂದು ಆಡಿಯೊ ವೈರಲ್ ಮಾಡಿ ಕಮಿಷನ್ ಕೇಳಿದ್ದು ನಿಜ ಎಂಬುದನ್ನು ಬಲವಾಗಿ ಪ್ರತಿಪಾದಿಸಿದರು. ಆ ಪ್ರಕರಣ ಗೊಂದಲದಲ್ಲೇ ಪರ್ಯಾವಸಾನಗೊಂಡಿತು.

ಅನ್ಯಾಯದ, ತಾರತಮ್ಯದ ಹಲವು ಪ್ರಕರಣಗಳು ಸುದ್ದಿಯಾಗದೆ ಕಾಲಗರ್ಭ ಸೇರಿಕೊಂಡವು. ಮೈಸೂರು ದಸರಾದ ತಾಜಾ ನಿದರ್ಶನ: ಕನ್ನಡದ ಹಿರಿಯ ಕವಿ, ರಾಜ್ಯಸಭಾ ಸದಸ್ಯ, ಡಾ.ಎಲ್. ಹನುಮಂತಯ್ಯ ಅವರನ್ನು ‘ಕಾಂಜಿಪೀಂಜಿ’ ಕವಿಗಳ ಜೊತೆ ಕವಿತೆ ಓದಲು ಆಹ್ವಾನಿಸಿದ್ದು. ಅವರ ಕಾವ್ಯಪ್ರತಿಭೆಯನ್ನು ಗೌಣವಾಗಿ ಕಂಡದ್ದು ದೊಡ್ಡ ಸುದ್ದಿಯಾಗಲೇ ಇಲ್ಲ. ಮೈಸೂರು ದಸರಾ ಕವಿಗೋಷ್ಠಿಗಳಲ್ಲಿ ಅನೇಕ ಸಂಘಪರಿವಾರದ ಕವಿಗಳು ಕಾಣಿಸಿಕೊಂಡಿದ್ದು ಯಾರೊಬ್ಬರ ಗಮನ ಸೆಳೆಯಲಿಲ್ಲ. ದಸರಾ ಉತ್ಸವದಲ್ಲಿ ಪಾಲ್ಗೊಂಡ ಅನೇಕ ದಲಿತ-ಹಿಂದುಳಿದ ಪ್ರತಿಭಾವಂತ ಕಲಾವಿದರ ಸಂಭಾವನೆ ಅತ್ಯಂತ ಕಡಿಮೆಯಾಗಿತ್ತು ಎಂಬುದು ಮಾಧ್ಯಮದವರ ಕಣ್ಣಿಗೆ ಬೀಳಲಿಲ್ಲ. ಸಮಾಧಾನದ ಸಂಗತಿ ಎಂದರೆ; ಬಾಲಿವುಡ್ ಸಿನೆಮಾ ಹಾಡುಗಳು ಮಾತ್ರ ಸಂಗೀತ ಎಂಬ ಹುಚ್ಚು ಭ್ರಮೆಗೆ ಈ ಬಾರಿಯ ಮೈಸೂರು ದಸರಾದಲ್ಲಿ ಆಸ್ಪದ ನೀಡಲಿಲ್ಲ. ಶುಭಾ ಮುದ್ಗಲ್, ಟಿ.ಎಂ. ಕೃಷ್ಣ ಸೇರಿದಂತೆ ಪ್ರತಿಭಾವಂತ ಕಲಾವಿದರಿಗೆ ಮಾತ್ರ ವೇದಿಕೆ ನೀಡಲಾಗಿತ್ತು. ಈ ಬಾರಿಯ ಮೈಸೂರು ದಸರಾ ಸರಳವಾಗಿ ಆಚರಿಸಲಾಗುತ್ತಿದೆ ಎಂಬ ಸುದ್ದಿ ತಿಳಿದು ಬಾಲಿವುಡ್ ಗಾಯಕರ ಪಿಆರ್‌ಒಗಳು ತಮ್ಮ ಮಾಫಿಯಾ ಹಸ್ತ ಚಾಚಿಲ್ಲವೆನ್ನಿಸುತ್ತಿದೆ.

ಕರ್ನಾಟಕದಲ್ಲಿ ಬಿಜೆಪಿ ಮೊದಲ ಬಾರಿಗೆ ಅಧಿಕಾರಕ್ಕೆ ಬಂದಾಗಿನಿಂದ ಸಾಂಸ್ಕೃತಿಕ ಉತ್ಸವಗಳು ಮಾಫಿಯಾದ ಸ್ವರೂಪ ಪಡೆದುಕೊಂಡಿವೆ. ಹಣ ಮಾಡುವವರಿಗೆ ಸುಗ್ಗಿಯಾಗಿ ಪರಿಣಮಿಸಿದೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಹಾಕಿಕೊಟ್ಟ ಸಾಂಸ್ಕೃತಿಕ ಉತ್ಸವಗಳ ಸ್ವರೂಪವನ್ನು ವಿರೂಪಗೊಳಿಸಲಾಗುತ್ತಿದೆ. ವೈವಿಧ್ಯಮಯವಾದ ಸಾಂಸ್ಕೃತಿಕ ಕಲಾ ಪರಂಪರೆಯ ಕತ್ತು ಹಿಚುಕಿ ಅಧಿಕಾರಿಗಳಿಗೆ ಹಣ ಗಳಿಸಲು ಪೂರಕವಾಗಿರುವ ಸಾಂಸ್ಕೃತಿಕ ಉತ್ಸವಗಳು ವಿಜೃಂಭಿಸುತ್ತಿವೆ. ಕನ್ನಡ ಸಂಸ್ಕೃತಿಯ ಅಸ್ಮಿತೆಯ ಭಾಗವಾಗಿರುವ ಕಲಾ ಪರಂಪರೆಗಳನ್ನು ಮತ್ತು ಕಲಾವಿದರನ್ನು ನಿಕೃಷ್ಟವಾಗಿ ಕಾಣಲಾಗುತ್ತಿದೆ. ಎಂ.ಪಿ. ಪ್ರಕಾಶ್ ಅವರ ಉಸ್ತುವಾರಿಯಲ್ಲೇ ನಡೆಯುತ್ತಿದ್ದ ಸಾಂಸ್ಕೃತಿಕ ಉತ್ಸವಗಳು; ದಸರಾ-ಹಂಪಿ ಉತ್ಸವಗಳೂ ಸೇರಿದಂತೆ ಅಪ್ಪಟ ಕಲೆಗಳ ಸಂಗಮದಂತೆ ಆಯೋಜನೆ ಮಾಡಲಾಗುತ್ತಿತ್ತು. ಎಲ್ಲಕ್ಕೂ ಮಿಗಿಲಾಗಿ ಸಾಂಸ್ಕೃತಿಕ ಉತ್ಸವಗಳು ಮಾಫಿಯಾದ ಸ್ವರೂಪ ಪಡೆದಿರಲಿಲ್ಲ. ಹೆಚ್ಚೆಂದರೆ ಮೇಲ್ಜಾತಿಯ ಪ್ರತಿಷ್ಠಿತರಿಗೆ ಮೊದಲ ಆದ್ಯತೆ ದೊರೆಯುತ್ತಿತ್ತು. ವೇದಿಕೆ ನಿರ್ಮಿಸುವ ಗುತ್ತಿಗೆದಾರರು ನಾಲ್ಕು ಕಾಸು ಮಾಡಿಕೊಳ್ಳುತ್ತಿದ್ದರು. ಅಷ್ಟಕ್ಕೂ ಕಲಾವಿದರ ಆಯ್ಕೆಯಲ್ಲಿ ನಿರ್ದಿಷ್ಟ ಮಾನದಂಡಗಳನ್ನು ಅನುಸರಿಸಲಾಗುತ್ತಿತ್ತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯೇ ಉತ್ಸವಗಳನ್ನು ಆಯೋಜಿಸುತ್ತಿರುವುದರಿಂದ ಗುಣಮಟ್ಟ ಕಾಪಾಡುತ್ತಿದ್ದರು. ಎಲ್ಲಾ ಕಲಾ ಪ್ರಕಾರಗಳನ್ನು ಒಳಗೊಳ್ಳಲು ಪ್ರಯತ್ನಿಸುತ್ತಿದ್ದರು.

ಸಾಂಸ್ಕೃತಿಕ ಉತ್ಸವಗಳ ಹೊಣೆಗಾರಿಕೆ ಜಿಲ್ಲಾಧಿಕಾರಿಗಳಿಗೆ ವಹಿಸಿದ ಮೇಲೆ ಬಹುತೇಕ ಎಲ್ಲಾ ಉತ್ಸವಗಳು ಮಾಫಿಯಾ ಸ್ವರೂಪ ಪಡೆದವು. ಕಲಾವಿದರ ಆಯ್ಕೆಯಲ್ಲಿ ಪ್ರತಿಭೆ ಮತ್ತು ಗುಣಮಟ್ಟವನ್ನು ಗೌಣವಾಗಿ ಕಾಣಲಾಯಿತು. ಎಲ್ಲಾ ಕಲಾ ಪ್ರಕಾರಗಳಿಗೆ ಸಮಾನ ಅವಕಾಶ, ಸಮಾನ ಗೌರವ, ಸಮಾನ ಸಂಭಾವನೆ ನೀಡುವುದನ್ನು ನಿಲ್ಲಿಸಿದರು. ಸಾಂಸ್ಕೃತಿಕ ಉತ್ಸವಗಳೆಂದರೆ ಹಿಂದಿ ಸಿನೆಮಾ ಹಾಡುಗಳ ಉತ್ಸವ ಎಂಬಂತೆ ಬಿಂಬಿಸಲಾಯಿತು. ಕಲಾವಿದರೆಂದರೆ ಸಿನೆಮಾ ಹಾಡು ಹಾಡುವ ಗಾಯಕರೆಂದೇ ನಂಬಿಸಲಾಯಿತು. ಮಾತ್ರವಲ್ಲ ಜನಸಾಮಾನ್ಯರು ಸಿನೆಮಾ ಹಾಡು ಹಾಡುವ ಕಲಾವಿದರನ್ನು ಮಾತ್ರ ಇಷ್ಟಪಡುತ್ತಾರೆ ಎಂಬಂತೆ ಪ್ರಚಾರ ಮಾಡಲಾಯಿತು. ಎಚ್.ಆರ್. ಮಹದೇವ ಎಂಬವರು ಬೀದರ್ ಜಿಲ್ಲಾಧಿಕಾರಿಯಾಗಿದ್ದರು. ಆತ ಬೆಂಗಳೂರಿನ ಸುಗಮ ಸಂಗೀತ ಕಲಾವಿದರು ಮಾತ್ರ ನಿಜವಾದ ಕಲಾವಿದರು, ಉಳಿದವರಿಗೆ ಕಲಾವಿದರು ಎಂದು ಹೇಳಿಕೊಳ್ಳುವ ಯೋಗ್ಯತೆ ಇಲ್ಲ ಎಂದು ಭಾವಿಸಿದ್ದರು. ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಆಗಿದ್ದಾಗ ನಡೆದ ಎಲ್ಲಾ ಉತ್ಸವಗಳಲ್ಲಿ ಸೋನು ನಿಗಮ್, ಮಂಗ್ಲಿ, ಅನನ್ಯ ಭಟ್ ಮುಂತಾದವರು ಸ್ಟಾರ್ ಕಲಾವಿದರು. ಎಲ್ಲಾ ವೇದಿಕೆಗಳಲ್ಲಿ ಅವರಿಗೆ ಮೊದಲು ಆದ್ಯತೆ, ಹೆಚ್ಚು ಸಮಯ. ಆಗಿನ ಮಂತ್ರಿ ಆನಂದ್ ಸಿಂಗ್ ಉಸ್ತುವಾರಿಯಲ್ಲಿ ನಡೆದ ಹಂಪಿ ಉತ್ಸವದಲ್ಲಿ ಸೋನು ನಿಗಮ್, ಮಂಗ್ಲಿ, ಅನನ್ಯ ಭಟ್, ವಿಜಯ ಪ್ರಕಾಶ್ ಅವರಿಗೆ ಎರಡೆರಡು ತಾಸು ಸಮಯಾವ ಕಾಶ. ಆದರೆ ಪದ್ಮಶ್ರೀ ಪಂ. ರಾಜೀವ್ ತಾರನಾಥ್ ಅವರಿಗೆ ಸರೋದ್ ನುಡಿಸಲು 20 ನಿಮಿಷ ಸಮಯ ನಿಗದಿಪಡಿಸಲಾಗಿತ್ತು. ಅವರಿಗೆಲ್ಲ 15ರಿಂದ 60 ಲಕ್ಷ ರೂ. ಸಂಭಾವನೆ. ಆನಂದ್ ಸಿಂಗ್ ತನ್ನ ಪಕ್ಷದ ಕಾರ್ಯಕರ್ತರನ್ನೆಲ್ಲ ಕಲಾವಿದರ ಪಟ್ಟಿಯಲ್ಲಿ ಸೇರಿಸಿ ಸಂಭಾವನೆ ಕೊಡಿಸಿದ್ದರು. ಹಂಪಿಯ ಉತ್ಸವ ದುಡ್ಡಿನಲ್ಲೇ ಚುನಾವಣೆ ಮಾಡಿ ಮಣ್ಣುಮುಕ್ಕಿದರು.

ಈ ಹಿಂದಿನ ಸರಕಾರದಲ್ಲಿ ಸಾಂಸ್ಕೃತಿಕ ಉತ್ಸವಗಳೆಂದರೆ ಮಂಗ್ಲಿ, ಅನನ್ಯ ಭಟ್‌ರಂತಹ ಅರೆಬೆಂದ ಕಲಾವಿದರ ವಿಜೃಂಭಣೆ, ಸಿನೆಮಾ ಹಾಡಿನ ಗಾಯಕರದ ಸೋನು ನಿಗಮ್, ವಿಜಯಪ್ರಕಾಶ್‌ರ ಅಬ್ಬರದ ಸಂಗೀತವೇ ಉತ್ಸವಗಳ ಪ್ರಮುಖ ಆಕರ್ಷಣೆ ಎಂಬಂತಾಗಿತ್ತು. ಕಲಾವಿದರ ಆಯ್ಕೆ ಮತ್ತು ಸಂಭಾವನೆ ನೀಡುವಲ್ಲಿ ಯಾವ ಮಾನದಂಡಗಳೂ ಇರಲಿಲ್ಲ. ಸಿನೆಮಾ ಹಾಡು ಹಾಡುವವರಿಗೆ, ಹಿನ್ನೆಲೆ ಗಾಯಕರಿಗೆ 60ರಿಂದ 75 ಲಕ್ಷದವರೆಗೆ ಸಂಭಾವನೆ. ಅದರಲ್ಲಿ ಪಿಆರ್‌ಒಗಳ ಮೂಲಕ ಅವಕಾಶ ಕಲ್ಪಿಸಿದವರಿಗೆ ಶೇ. 40 ಲಂಚ ಸಂದಾಯವಾಗುತ್ತಿತ್ತು. ಉಳಿದ ಕಲಾ ಪ್ರಕಾರಗಳಿಗೆ ಮತ್ತು ಕಲಾವಿದರಿಗೆ 10ರಿಂದ 15 ನಿಮಿಷ ಸಮಯ 15,000 ರೂ. ಸಂಭಾವನೆ. ಒಬ್ಬ ಹಿಂದುಸ್ತಾನಿ ಶಾಸ್ತ್ರೀಯ ಗಾಯಕ ತನ್ನ ಕಲೆಯನ್ನು ತಾಜಾ ಆಗಿ ಇರಿಸಿಕೊಳ್ಳಲು ಪ್ರತಿದಿನ ನಾಲ್ಕರಿಂದ ಐದು ತಾಸು ಅಭ್ಯಾಸ ಮಾಡಲೇಬೇಕು. ಕೊಳಲು, ಶಹನಾಯ್, ಸಿತಾರ್, ಪಿಟೀಲು, ಕ್ಲಾರಿಯೊನೆಟ್ ವಾದಕರೂ ನಿರಂತರ ಅಭ್ಯಾಸ ಮಾಡಿದಾಗಲೇ ಶುದ್ಧ ಸ್ವರ ಹಚ್ಚಲು ಸಾಧ್ಯವಾಗುತ್ತದೆ. ಎಲ್ಲ ಜನಪದ ಕಲೆಗಳು ಪ್ರದರ್ಶನಕ್ಕೆ ಶ್ರಮ, ತಾಳ್ಮೆ, ಶ್ರದ್ಧೆ ಬಯಸುತ್ತವೆ. ಶೇ. 40 ಲಂಚದ ಆಸೆಗಾಗಿ ಬಿಜೆಪಿಯವರು ಸ್ಥಳೀಯ ಕಲಾವಿದರಿಗೆ, ಕಲಾ ಪ್ರಕಾರಗಳಿಗೆ ನಿರಂತರ ಅನ್ಯಾಯ ಮಾಡಿ ಮಣ್ಣುಮುಕ್ಕಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸರಕಾರವಾದರೂ ಸಾಂಸ್ಕೃತಿಕ ಉತ್ಸವಗಳ ಆಯೋಜನೆಯಲ್ಲಿ ಲಂಚದ ಹಾವಳಿಗೆ ಕಡಿವಾಣ ಹಾಕುವಂತಾಗಲಿ. ಕಲಾ ಪ್ರಕಾರಗಳಲ್ಲಿ ಮತ್ತು ಕಲಾವಿದರಲ್ಲಿ ತಾರತಮ್ಯ ಮಾಡದೆ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಂತೆ ಸಮಾನ ಅವಕಾಶ ಕಲ್ಪಿಸಲಿ. ಸಿನೆಮಾ ಹಾಡು ಹಾಡುವವರೂ ಕಲಾವಿದರೇ. ಆದರೆ ಅವರೇ ಎಲ್ಲವನ್ನೂ ಆವರಿಸಬಾರದು. ಸಾಂಸ್ಕೃತಿಕ ಉತ್ಸವಗಳನ್ನು ಆಯೋಜನೆ ಮಾಡುವ ಮುನ್ನ ತಜ್ಞ ಕಲಾವಿದರ ಆಯ್ಕೆ ಸಮಿತಿ ಮಾಡಬೇಕು. ಎಲ್ಲಾ ಕಲಾಪ್ರಕಾರಗಳನ್ನು ಸಮಾನವಾಗಿ ಒಳಗೊಳ್ಳಬೇಕು. ಸೋನು ನಿಗಮ್, ವಿಜಯ ಪ್ರಕಾಶ್, ಶ್ರೇಯಾ ಘೋಷಾಲ್‌ರಂತಹ ಗಾಯಕರನ್ನು ಕರೆಸಿದರೆ ಅವರಿಂದ ವಚನ, ತತ್ವಪದ ಅಥವಾ ದಾಸರ ಪದಗಳನ್ನು ಹಾಡಿಸಬೇಕು. ಈ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿಯವರಿಗೆ ಎಲ್ಲವೂ ತಿಳಿದಿರಬೇಕೆಂದಿಲ್ಲ. ನೈಜ ಕಲೆ ಮತ್ತು ಕಲಾವಿದರ ಬಗ್ಗೆ ಕಳಕಳಿ ಇದ್ದರೆ ಸಾಂಸ್ಕೃತಿಕ ಉತ್ಸವಗಳಲ್ಲಿನ ಜಾತೀಯತೆ, ಭ್ರಷ್ಟಾಚಾರ, ತಾರತಮ್ಯಕ್ಕೆ ಕಡಿವಾಣ ಹಾಕಬಹುದು.

ಕರ್ನಾಟಕ ರಾಜ್ಯ ಅತ್ಯಂತ ಕಲಾಸಂಪನ್ನ ನಾಡು. ಕರ್ನಾಟಕ ಸಂಗೀತ, ಹಿಂದುಸ್ತಾನಿ ಸಂಗೀತ, ವಿವಿಧ ವಾದ್ಯಗಳ ಸಂಗೀತಕ್ಕೆ ಖ್ಯಾತಿ ಪಡೆದಿದೆ. ತೊಗಲುಗೊಂಬೆಯ ಬೆಳಗಲ್ಲು ವೀರಣ್ಣ, ಹಿಂದುಸ್ತಾನಿ ಶಾಸ್ತ್ರೀಯ ಗಾಯಕರಾದ ಪಂ. ಬೀಮಸೇನ್ ಜೋಶಿ, ಡಾ. ಗಂಗೂಬಾಯಿ ಹಾನಗಲ್, ಪಂ. ಕುಮಾರ ಗಂಧರ್ವ, ಪಂ. ಮಲ್ಲಿಕಾರ್ಜುನ ಮನ್ಸೂರ, ಪಂ. ಬಸವರಾಜ ರಾಜಗುರು ಕಲೆಯ ಶಿಖರ ತಲುಪಿದವರು. ಈ ಪರಂಪರೆ ಉಳಿಯಬೇಕು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Contributor - ಡಾ. ರಾಜಶೇಖರ ಹತಗುಂದಿ

ಹಿರಿಯ ಬರಹಗಾರ, ಪತ್ರಕರ್ತ

Similar News