ಖಾಲಿ ಇಲ್ಲದ ಕುರ್ಚಿಗಾಗಿ ಭಾರೀ ಪೈಪೋಟಿ...

ಮುಡಾ ಪ್ರಕರಣ ಕಾನೂನಿನ ತಾರ್ಕಿಕ ಅಂತ್ಯ ಕಾಣುವ ಮೊದಲೇ ‘‘ನಾನೇ ಮುಖ್ಯಮಂತ್ರಿ’’ ಎಂದು ಬಯಕೆ ವ್ಯಕ್ತಪಡಿಸುವುದು ಸಿದ್ದರಾಮಯ್ಯನವರ ನಿರ್ಗಮನವನ್ನು ಖಚಿತಪಡಿಸಿದಂತಾಗುತ್ತದೆ. ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿ ಮುಂದುವರಿಯಬೇಕೇ ಬೇಡವೇ ಎನ್ನುವುದು ಸಂತೆಯ ಸುದ್ದಿ ಆಗಬಾರದು. ಜನನಾಯಕರಾದ ಸಿದ್ದರಾಮಯ್ಯನವರ ಮನವೊಲಿಸಿ ಹೊಸಬರಿಗೆ ಅವಕಾಶ ಕೊಡುವುದಕ್ಕೂ, ಮುಡಾ ಪ್ರಕರಣದಲ್ಲಿ ಕಟಕಟೆಯಲ್ಲಿ ನಿಲ್ಲಿಸಿ ರಾಜೀನಾಮೆ ಪಡೆಯುವುದಕ್ಕೂ ವ್ಯತ್ಯಾಸವಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಗೌರವಯುತವಾಗಿ ನಡೆಸಿಕೊಂಡರೆ ಕಾಂಗ್ರೆಸ್‌ಗೆ ಒಳ್ಳೆಯದು.

Update: 2024-09-14 05:02 GMT

‘ವಿನಾಶಕಾಲೇ ವಿಪರೀತ ಬುದ್ಧಿ’ ಎಂಬ ಜನಪ್ರಿಯ ಮಾತೊಂದಿದೆ. ಈ ಮಾತು ಸದ್ಯ ಕರ್ನಾಟಕ ಕಾಂಗ್ರೆಸ್‌ನಲ್ಲಿನ ಅರಾಜಕ ಮನಸ್ಥಿತಿಗೆ ನೂರಕ್ಕೆ ನೂರು ಅನ್ವಯವಾಗುತ್ತದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮುಡಾ ಪ್ರಕರಣಕ್ಕೆ ರಾಜ್ಯಪಾಲರು ಪ್ರಾಸಿಕ್ಯೂಶನ್‌ಗೆ ಅನುಮತಿಯೇನೋ ನೀಡಿದ್ದಾರೆ. ಅದು ಕರ್ನಾಟಕ ಹೈಕೋರ್ಟ್‌ನಲ್ಲಿ ತೀರ್ಪು ನೀಡುವ ಹಂತದಲ್ಲಿದೆ. ತೀರ್ಪು ಸಿದ್ದರಾಮಯ್ಯನವರ ಪರ ಬರಲೂ ಬಹುದು. ಸದ್ಯ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯನವರೇ ಕಾರ್ಯನಿರ್ವಹಿಸುತ್ತಿದ್ದಾರೆ. ಅದರ ಅರ್ಥ ಮುಖ್ಯಮಂತ್ರಿ ಹುದ್ದೆ ಖಾಲಿ ಇಲ್ಲ. ಆದರೆ ಅವರ ಸಚಿವ ಸಂಪುಟದಲ್ಲಿನ ಅನೇಕ ಸಚಿವರು ಖಾಲಿ ಇಲ್ಲದ ಸಿಎಂ ಪದವಿಗಾಗಿ ಭಾರೀ ಪೈಪೋಟಿ ನಡೆಸಿದ್ದಾರೆ. ಸಚಿವರ ಮಾತು, ನಡವಳಿಕೆ ಕಂಡು ಮತದಾರರು ಅಸಹ್ಯ ಪಡುವಂತಾಗಿದೆ. ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ್ ಮತ್ತು ಸಕ್ಕರೆ ಸಚಿವ ಶಿವಾನಂದ ಪಾಟೀಲರ ಮಾತಿನ ಜಟಾಪಟಿ ನೋಡಿದರೆ ಕಾಂಗ್ರೆಸ್ ಪಕ್ಷದ ಬಗ್ಗೆ ಜನ ಹಾದಿ ಬೀದಿಯಲ್ಲಿ ಆಡಿಕೊಳ್ಳುವಂತಾಗಿದೆ. ಮಾಜಿ ಸಚಿವ ಆರ್. ವಿ. ದೇಶಪಾಂಡೆ, ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ, ಲೋಕೋಪಯೋಗಿ ಮಂತ್ರಿ ಸತೀಶ್ ಜಾರಕಿಹೊಳಿ, ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಖಾಲಿ ಇಲ್ಲದ ಮುಖ್ಯಮಂತ್ರಿ ಹುದ್ದೆ ಕುರಿತು ಆಡಿದ ಮಾತುಗಳು ಸಿದ್ದರಾಮಯ್ಯನವರ ಭವಿಷ್ಯದ ಬಗ್ಗೆ ಅನುಮಾನ ಮೂಡಿಸಿವೆ.

ಬಿಜೆಪಿ-ಜೆಡಿಎಸ್ ಮುಖಂಡರ ಹೇಳಿಕೆಗಳನ್ನು ಗಮನಿಸಿದರೆ; ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಾಜೀನಾಮೆ ನೀಡಿ ಮನೆಗೆ ಹೋಗುವುದು ನಿಶ್ಚಿತ ಎಂಬ ಕಲ್ಪನೆ ಮೂಡುತ್ತದೆ. ಆದರೆ ಇಷ್ಟೆಲ್ಲ ಬೆಳವಣಿಗೆ ನಡೆಯುತ್ತಿದ್ದರೂ ಕಾಂಗ್ರೆಸ್ ಅಧಿ ನಾಯಕಿ ಸೋನಿಯಾ ಗಾಂಧಿಯವರಾಗಲಿ, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರಾಗಲಿ, ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರಾಗಲಿ ‘‘ಸಿದ್ದರಾಮಯ್ಯನವರೇ ಐದು ವರ್ಷಗಳ ಕಾಲ ಮುಖ್ಯಮಂತ್ರಿ ಯಾಗಿರುತ್ತಾರೆ’’ ಎಂದು ಒಮ್ಮೆಯೂ ಹೇಳಿಲ್ಲ. ಮುಖ್ಯಮಂತ್ರಿ ಹುದ್ದೆ ಕುರಿತ ಗೊಂದಲದ ಹೇಳಿಕೆಗಳಿಗೆ ಕಡಿವಾಣ ಹಾಕಲು ಗಂಭೀರ ಪ್ರಯತ್ನ ಮಾಡಿಲ್ಲ. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಅಸ್ತಿತ್ವಕ್ಕೆ ಬಂದು ಹೆಚ್ಚು ಕಡಿಮೆ ಒಂದು ವರ್ಷ ನಾಲ್ಕು ತಿಂಗಳು ಕಳೆದಿವೆ. ಅವರು ಎರಡನೇ ಬಾರಿಗೆ ಸಿಎಂ ಹುದ್ದೆ ಅಲಂಕರಿಸಿದ ಗಳಿಗೆಯಿಂದ ‘ಪೂರ್ಣಾವಧಿ’ ಸಿಎಂ ಹೌದೋ ಅಲ್ಲವೋ ಎಂಬ ಚರ್ಚೆಗಳು ಜಾಸ್ತಿ ನಡೆದಿವೆ. ಲೋಕಸಭೆ ಚುನಾವಣೆ ಮುಂದಿಟ್ಟುಕೊಂಡು ಕೆಲ ತಿಂಗಳುಗಳ ಕಾಲ ಜಾತಿಗೊಂದು ಉಪ ಮುಖ್ಯಮಂತ್ರಿ ಹುದ್ದೆ ಕುರಿತ ಚರ್ಚೆಗಳು ಜೋರಾಗಿ ನಡೆದವು. ಸಹಕಾರ ಸಚಿವ ಕೆ.ಎನ್. ರಾಜಣ್ಣ ಅವರಂತೂ ಮೂರ್ನಾಲ್ಕು ಜನ ಉಪಮುಖ್ಯಮಂತ್ರಿಗಳು ಅಗತ್ಯವೆಂದು ಬಲವಾಗಿಯೇ ಪ್ರತಿಪಾದಿಸಿದ್ದರು. ಆದರೆ ಕಾಂಗ್ರೆಸ್ ಹೈಕಮಾಂಡ್ ಮಾತ್ರ ಯಾರೊಬ್ಬರ ಮಾತನ್ನೂ ಗಂಭೀರವಾಗಿ ಪರಿಗಣಿಸಲಿಲ್ಲ. ಕನಿಷ್ಠ ಪಕ್ಷ ಮುಖ್ಯಮಂತ್ರಿ ಮತ್ತು ಕೆಲ ಹಿರಿಯ ಸಚಿವರ ಜೊತೆ ಹೆಚ್ಚುವರಿ ಉಪಮುಖ್ಯಮಂತ್ರಿ ಕುರಿತು ಹೈಕಮಾಂಡ್ ಸಮಾಲೋಚನಾ ಸಭೆಯನ್ನೂ ನಡೆಸಲಿಲ್ಲ. ಮೂರ್ನಾಲ್ಕು ಜನ ಉಪಮುಖ್ಯಮಂತ್ರಿ ಸ್ಥಾನ ಕಲ್ಪಿಸಿದ್ದರೆ ಕರ್ನಾಟಕದಲ್ಲಿ ಕಾಂಗ್ರೆಸ್ ಲೋಕಸಭಾ ಸದಸ್ಯರ ಸಂಖ್ಯೆ 15ರ ಗಡಿ ತಲುಪುತ್ತಿತ್ತು. ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಸ್ಥಾನಗಳ ಬಗ್ಗೆ ಕೆಲಸಕ್ಕೆ ಬಾರದ ಅನಗತ್ಯ ಚರ್ಚೆಗಳನ್ನು ನಡೆಸದೆ ಅಭಿವೃದ್ಧಿ ಕೆಲಸಗಳಲ್ಲಿ ಗಂಭೀರವಾಗಿ ತೊಡಗಿಸಿಕೊಂಡಿದ್ದರೂ ಲೋಕಸಭಾ ಸದಸ್ಯರ ಸಂಖ್ಯೆ ಹೆಚ್ಚುತ್ತಿತ್ತು.

ಕರ್ನಾಟಕದ ಕಾಂಗ್ರೆಸ್ ನಾಯಕರು 2023ರ ವಿಧಾನಸಭಾ ಚುನಾವಣೆಯಲ್ಲಿ ಪ್ರದರ್ಶಿಸಿದ ಒಗ್ಗಟ್ಟನ್ನು ನಂತರ ಬಂದ ಲೋಕಸಭಾ ಚುನಾವಣೆಯಲ್ಲಿ ಪ್ರದರ್ಶಿಸಲೇ ಇಲ್ಲ. ಮುಖ್ಯಮಂತ್ರಿ ಹುದ್ದೆಯ ಅನಿಶ್ಚಿತತೆ, ಉಪಮುಖ್ಯಮಂತ್ರಿ ಸ್ಥಾನದ ಹಂಬಲ ಅಕ್ಷರಶಃ ಕಾಂಗ್ರೆಸ್ ಪಕ್ಷದಲ್ಲಿನ ಐಕ್ಯತೆಗೆ ಭಂಗ ತಂದಿದ್ದವು. ಒಂದು ವರ್ಷ ನಾಲ್ಕು ತಿಂಗಳ ಕಾಂಗ್ರೆಸ್ ಆಡಳಿತ ಬೆಂಗಳೂರು ಸಮಸ್ಯೆಗಳಿಗೆ ಕನಿಷ್ಠ ಪರಿಹಾರವನ್ನೂ ಕಂಡುಕೊಳ್ಳಲಿಲ್ಲ. ಬಹುಪಾಲು ಮಂತ್ರಿಗಳು ತಮ್ಮ ಇಲಾಖೆಯಲ್ಲಿನ ಅಭಿವೃದ್ಧಿ ಕಾರ್ಯಗಳ ಕನಸುಗಳನ್ನು ಮಾಧ್ಯಮದವರೊಂದಿಗೆ ಹಂಚಿಕೊಂಡಿಲ್ಲ. ಅಭಿವೃದ್ಧಿ ಕಾರ್ಯಗಳ ಅನುಷ್ಠಾನ ದೂರದ ಮಾತು. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಾತ್ರ 5 ಗ್ಯಾರಂಟಿಗಳ ಅನುಷ್ಠಾನದ ಬಗ್ಗೆ ಗಂಭೀರವಾಗಿದ್ದರು. ಅಷ್ಟು ಮಾತ್ರವಲ್ಲ ಕೊಟ್ಟ ಮಾತಿನಂತೆ ನಡೆದುಕೊಂಡಿದ್ದಾರೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ಹಲವು ಹಿರಿಯ ಸಚಿವರ ಇಲಾಖೆಗಳಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಅಭಿವೃದ್ಧಿ ಕಾರ್ಯಗಳು ಅನುಷ್ಠಾನಗೊಂಡಿಲ್ಲ. ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯನವರು ಆಡಳಿತ ಯಂತ್ರದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿದ್ದರು. ರಾಜಕೀಯ ಅಸ್ಥಿರತೆ ಮತ್ತು ಗೊಂದಲದ ಹೇಳಿಕೆಗಳು ನೇರವಾಗಿ ಆಡಳಿತ ವ್ಯವಸ್ಥೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ.

ಬಿಜೆಪಿ-ಜೆಡಿಎಸ್ ಪ್ರತಿಪಕ್ಷಗಳಾಗಿ ಕಾಂಗ್ರೆಸ್ ಆಡಳಿತ ವೈಖರಿಯ ಗುಣಗಾನ ಮಾಡಲು ಸಾಧ್ಯವಿಲ್ಲ. ಎಷ್ಟು ಸಾಧ್ಯವೋ ಅಷ್ಟು ಆಡಳಿತ ಪಕ್ಷದ ವೈಫಲ್ಯಗಳನ್ನು ಎತ್ತಿ ತೋರಿಸಲು ಪ್ರತಿಪಕ್ಷಗಳು ಪ್ರಯತ್ನಿಸುತ್ತಲೇ ಇರುತ್ತವೆ. ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಇಲ್ಲಿಯ ವರೆಗೆ ಸಿದ್ದರಾಮಯ್ಯ ಸರಕಾರದ ದಿನನಿತ್ಯದ ವಹಿವಾಟಿನಲ್ಲಿ ಹಸ್ತಕ್ಷೇಪವೇನೂ ಮಾಡಿರಲಿಲ್ಲ. ಅಷ್ಟಕ್ಕೂ ರಾಜ್ಯಪಾಲ ಹುದ್ದೆಯೇ ಕೈಗೊಂಬೆ. ಕಾಂಗ್ರೆಸ್ ಪಕ್ಷದೊಳಗಿನ ಕೆಲವರು ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡರೊಂದಿಗೆ ಕೈಜೋಡಿಸದೆ ಹೋಗಿದ್ದರೆ ರಾಜ್ಯಪಾಲರು ಇಷ್ಟು ಮುಂದುವರಿಯುತ್ತಿರಲಿಲ್ಲ. ಮಾಜಿ ಮುಖ್ಯಮಂತ್ರಿ ದೇವೇಗೌಡರು ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿ ಮುಂದುವರಿಯುವುದನ್ನು ಸಹಜವಾಗಿಯೇ ಸಹಿಸುವುದಿಲ್ಲ. ಕಾಂಗ್ರೆಸ್ ಪಕ್ಷದಲ್ಲಿನ ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿಗಳು ಕ್ರಿಯಾಶೀಲವಾಗದೆ ಹೋಗಿದ್ದರೆ ಟಿ.ಜೆ. ಅಬ್ರಹಾಂ, ಸ್ನೇಹಮಯಿ ಕೃಷ್ಣ ಮುಂತಾದವರು ಹುಟ್ಟಿಕೊಳ್ಳುತ್ತಲೇ ಇರಲಿಲ್ಲ. ಅಷ್ಟಕ್ಕೂ ಕಾಂಗ್ರೆಸ್ ಹೈಕಮಾಂಡ್ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ‘‘ನೀವು ಪೂರ್ಣಾವಧಿ ಮುಖ್ಯಮಂತ್ರಿಯಲ್ಲ’’ ಎನ್ನುವುದನ್ನು ಮನವರಿಕೆ ಮಾಡಿಕೊಟ್ಟಿದ್ದರೆ ಮುಡಾ ಪ್ರಕರಣವೇ ಹೊರ ಬರುತ್ತಿರಲಿಲ್ಲ. ಮುಡಾ ಪ್ರಕರಣದ ಸತ್ಯಾಸತ್ಯತೆ ಏನೇ ಇರಲಿ, ಇದು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮಾತ್ರವಲ್ಲ ಕಾಂಗ್ರೆಸ್ ಪಕ್ಷದ ಇಮೇಜಿಗೂ ಧಕ್ಕೆಯನ್ನುಂಟು ಮಾಡಿದೆ.

ಕಾಂಗ್ರೆಸ್ ಹೈಕಮಾಂಡ್ ಮೊದಲಿನಿಂದಲೂ ಸ್ಥಳೀಯ ಜನ ನಾಯಕರನ್ನು ನಿಯಂತ್ರಿಸಲು ಹೋಗಿಯೇ ನೆಲೆ ಕಳೆದುಕೊಂಡಿದೆ. ಜನನಾಯಕರಾಗಿ ಬೆಳೆದು ನಿಂತವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಹೈಕಮಾಂಡ್ ಬಲದಿಂದ ನಿಯಂತ್ರಿಸಲು ಯತ್ನಿಸಿದರೆ ಪಕ್ಷಕ್ಕೆ ಹಾನಿ ಕಟ್ಟಿಟ್ಟ ಬುತ್ತಿ. ದೇವರಾಜ ಅರಸು ಕಾಲದಿಂದ ಪಂಜಾಬ್‌ನ ಅಮರಿಂದರ್ ಸಿಂಗ್ ವರೆಗೆ ನೂರಾರು ನಿದರ್ಶನ ದೊರೆಯುತ್ತವೆ. ಹೇಳಿ ಕೇಳಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅತ್ಯಂತ ಜನಪ್ರಿಯ ಜನನಾಯಕ. ಅವರನ್ನು ನಿಯಂತ್ರಿಸಲು ಸಾಧ್ಯವಿಲ್ಲವೆಂದಾದರೆ; 2019ರಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ಪತನಗೊಂಡಾಗಲೇ ಕಾಂಗ್ರೆಸ್ ಹೈಕಮಾಂಡ್ ಎಚ್ಚೆತ್ತುಕೊಳ್ಳಬೇಕಿತ್ತು. ಸಿದ್ದರಾಮಯ್ಯನವರು ಮನಸ್ಸು ಮಾಡಿದ್ದರೆ; 2018ರ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ಐದು ವರ್ಷಗಳ ಕಾಲ ಅಧಿಕಾರದಲ್ಲಿ ಇರುತ್ತಿತ್ತು. ಅವರಿಗೆ ಅದು ಮುಂದುವರಿಯುವುದು ಬೇಕಿರಲಿಲ್ಲ. ಹಾಗಾಗಿ ಅದು ಪತನವಾಯಿತು. ಇದು ನಾಡಿನ ಎಳೆಯ ಮಕ್ಕಳಿಗೂ ಗೊತ್ತಾಗುವ ಸಂಗತಿ. ಆಗಲೇ ಹೈಕಮಾಂಡ್ ಬೇರೊಬ್ಬರನ್ನು ಶಾಸಕಾಂಗ ಪಕ್ಷದ ನಾಯಕನನ್ನಾಗಿಸಿ ಪಕ್ಷ ಸಂಘಟಿಸಲು ಮುಂದಾಗಿದ್ದರೆ ಏನೋ ಒಂದು ಫಲ ಸಿಗುತ್ತಿತ್ತು. ಪಕ್ಷಕ್ಕೆ ಸಿದ್ದರಾಮಯ್ಯನವರು ಅನಿವಾರ್ಯ ಎಂದು ಕಾಂಗ್ರೆಸ್ ಹೈಕಮಾಂಡ್ ಬಲವಾಗಿ ನಂಬಿದ್ದರಿಂದಲೇ ಆಗ ಅವರನ್ನೇ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರನ್ನಾಗಿ ಆಯ್ಕೆ ಮಾಡಿದರು. ಈಗ ಮುಖ್ಯಮಂತ್ರಿ ಹುದ್ದೆಯ ಕನಸು ಕಾಣುತ್ತಿರುವ ಯಾರೊಬ್ಬರೂ ‘‘ನನ್ನನ್ನು ಶಾಸಕಾಂಗ ಪಕ್ಷದ ನಾಯಕನನ್ನಾಗಿ ಆಯ್ಕೆ ಮಾಡಿ ಸಮರ್ಥ ವಿರೋಧ ಪಕ್ಷದ ನಾಯಕನಾಗಿ ಕಾರ್ಯನಿರ್ವಹಿಸುತ್ತೇನೆ. ಅಷ್ಟು ಮಾತ್ರವಲ್ಲ 2023ರ ವಿಧಾನಸಭಾ ಚುನಾವಣೆಯಲ್ಲಿ 136 ಸ್ಥಾನಗಳೊಂದಿಗೆ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುತ್ತೇನೆ’’ ಎಂದು ಬಲವಾಗಿ ಕೇಳಲೇ ಇಲ್ಲ. ಕಾಂಗ್ರೆಸ್‌ನ ಅತ್ಯಂತ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರೇ ಆ ಜವಾಬ್ದಾರಿ ಹೊರಬಹುದಿತ್ತು. ಅವರು ಕೇಳಿದ್ದರೆ ಕಾಂಗ್ರೆಸ್ ಹೈಕಮಾಂಡ್ ಇಲ್ಲ ಎನ್ನುತ್ತಿರಲಿಲ್ಲ. ಹೇಗೋ 2019ರ ಲೋಕಸಭಾ ಚುನಾವಣೆಯಲ್ಲಿ ಖರ್ಗೆಯವರು ಸೋತಿದ್ದರು. ಸೋತ ಖರ್ಗೆಯವರನ್ನು ರಾಜ್ಯಸಭಾ ಸದಸ್ಯರನ್ನಾಗಿ ನಾಮಕರಣ ಮಾಡಿದ ಹೈಕಮಾಂಡ್ ಕೆಪಿಸಿಸಿ ಅಧ್ಯಕ್ಷರನ್ನಾಗಿ ನೇಮಕ ಮಾಡುತ್ತಿರಲಿಲ್ಲವೇ? ಆಗ ಬಹುದೊಡ್ಡ ಜವಾಬ್ದಾರಿ ಹೊರಲು ಸಿದ್ದರಾಮಯ್ಯನವರು ಹಿಂಜರಿಯಲಿಲ್ಲ. ನಾಲ್ಕು ವರ್ಷಗಳ ಕಾಲ ಸಮರ್ಥ ವಿರೋಧ ಪಕ್ಷದ ನಾಯಕನಾಗಿ ಕಾರ್ಯ ನಿರ್ವಹಿಸಿದ್ದಲ್ಲದೆ 2023ರ ವಿಧಾನಸಭಾ ಚುನಾವಣೆಯಲ್ಲಿ ಜನರೆದುರು ಹೋಗಿ ಜನಾದೇಶ ಪಡೆದುಕೊಳ್ಳುವಲ್ಲಿ ಯಶಸ್ವಿಯಾದರು.

ಅನಿವಾರ್ಯವಾಗಿ ಕಾಂಗ್ರೆಸ್ ಹೈಕಮಾಂಡ್ ಸಿದ್ದರಾಮಯ್ಯನವರನ್ನೇ ಮುಖ್ಯಮಂತ್ರಿಯನ್ನಾಗಿಸಿತು. ಅದು ಸಾಮಾನ್ಯ ಮತದಾರರ ಅಪೇಕ್ಷೆಯೂ ಆಗಿತ್ತು. ಅವರು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಮೊದಲ ದಿನವೇ ಕಾಂಗ್ರೆಸ್ ಹೈಕಮಾಂಡ್ ‘‘ಸಿದ್ದರಾಮಯ್ಯ ಪೂರ್ಣಾವಧಿ ಮುಖ್ಯಮಂತ್ರಿ’’ ಎಂಬ ಸಂದೇಶ ರವಾನಿಸಿದ್ದರೆ ಮತದಾರರಿಗೆ ಅತ್ಯುತ್ತಮ ಸರಕಾರ ದೊರೆಯುತ್ತಿತ್ತು. ಪ್ರತಿಪಕ್ಷಗಳು 2013ರಿಂದ 2018ರ ಅವಧಿಯಲ್ಲಿ ನಡೆದುಕೊಂಡಂತೆ ರಚನಾತ್ಮಕ ಟೀಕೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದವು. ಚುನಾವಣೆ ಎದುರಿಸಲು, ಜನಾದೇಶ ಪಡೆದುಕೊಳ್ಳಲು ಸಿದ್ದರಾಮಯ್ಯ ಬೇಕು. ಆದರೆ ಪೂರ್ಣಾವಧಿ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಲು ಅವರು ಬೇಡ ಎನ್ನುವುದಾದರೆ ಮತದಾರರು ನೀಡಿದ ಜನಾದೇಶಕ್ಕೆ ಅಪಮಾನ ಮಾಡಿದಂತೆ. ಮುಡಾ ಪ್ರಕರಣದಲ್ಲಿ ಬಲಿ ಹಾಕಿ ಸಿದ್ದರಾಮಯ್ಯನವರನ್ನು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಸಿದರೆ ಕಾಂಗ್ರೆಸ್ ತನ್ನ ಕಾಲ ಮೇಲೆ ತಾನೇ ಕಲ್ಲು ಹಾಕಿಕೊಂಡಂತೆ. ಸಿದ್ದರಾಮಯ್ಯನವರ ಸಚಿವ ಸಂಪುಟದ ಎಲ್ಲಾ ಮಂತ್ರಿಗಳ ಹಿನ್ನೆಲೆ ಅವಲೋಕಿಸಿ ಹೇಳುವುದಾದರೆ ಅವರೊಬ್ಬರೇ ಸಾರ್ವಜನಿಕ ಬದುಕು ಒಪ್ಪಿಸಿಕೊಳ್ಳುವಷ್ಟು ಪ್ರಾಮಾಣಿಕರು. ಸಂವೇದನಾಶೀಲರು ಮತ್ತು ಸಾಮಾಜಿಕ ನ್ಯಾಯದ ಘನತೆ ಗೌರವ ಎತ್ತಿ ಹಿಡಿಯುವ ಸಾಮರ್ಥ್ಯ ಹೊಂದಿದವರು.

‘‘ನಾನೂ ಮುಖ್ಯಮಂತ್ರಿ ಹುದ್ದೆ ಆಕಾಂಕ್ಷಿ’’ ಎಂದು ಬಹಿರಂಗವಾಗಿಯೇ ಹೇಳಿಕೊಳ್ಳುತ್ತಿರುವ ಆರ್.ವಿ. ದೇಶಪಾಂಡೆ, ಎಂ.ಬಿ. ಪಾಟೀಲ್, ಬಸವರಾಜ ರಾಯರೆಡ್ಡಿ ಅವರ ಹಗರಣಗಳನ್ನು ಹೊರತೆಗೆದರೆ ನೂರಾರು ಮುಡಾ ಪ್ರಕರಣಗಳು ಎದ್ದು ಕುಣಿಯಬಹುದು. ಆರ್.ವಿ. ದೇಶಪಾಂಡೆಯವರು ಸುದೀರ್ಘ ಕಾಲ ಕೈಗಾರಿಕಾ ಮಂತ್ರಿಯಾಗಿದ್ದರು. ಆರ್‌ಟಿಐ ಕಾರ್ಯಕರ್ತರು ದಾಖಲೆ ಹೊರ ತೆಗೆಯಲು ಮುಂದಾದರೆ ಆರ್.ವಿ. ದೇಶಪಾಂಡೆಯವರು ಮಂತ್ರಿಯಾಗಲೂ ಯೋಗ್ಯರೆನಿಸಿಕೊಳ್ಳುವುದಿಲ್ಲ. ಮುಖ್ಯಮಂತ್ರಿ ಹುದ್ದೆಯ ರೇಸ್‌ನಲ್ಲಿರುವ ಎಲ್ಲರ ಆಸ್ತಿಪಾಸ್ತಿಯ ತನಿಖೆ ನಡೆದರೆ ‘ಮುಡಾ ಪಕರಣ’ ಸಣ್ಣದಾಗಿ ಕಾಣುತ್ತದೆ. ಸಿದ್ದರಾಮಯ್ಯನವರಿಗಿರುವ ಜನಪ್ರಿಯತೆ, ತಿಳುವಳಿಕೆ, ವಾಕ್ಚಾತುರ್ಯ, ಆಡಳಿತದ ಅನುಭವ ಮತ್ತು ವಿಶ್ವಾಸಾರ್ಹತೆಗೆ ಮ್ಯಾಚ್ ಮಾಡಬಲ್ಲ ಇನ್ನೊಬ್ಬ ನಾಯಕ ಕಾಂಗ್ರೆಸ್‌ನಲ್ಲಿ ಇಲ್ಲ. ಆರ್.ವಿ. ದೇಶಪಾಂಡೆಗೆ ಉತ್ತರ ಕರ್ನಾಟಕ ಲೋಕಸಭಾ ಕ್ಷೇತ್ರದಲ್ಲಿ ಅಂಜಲಿ ನಿಂಬಾಳ್ಕರ್ ಅವರನ್ನು ಗೆಲ್ಲಿಸಿಕೊಳ್ಳಲು ಸಾಧ್ಯವಾಗಲೇ ಇಲ್ಲ. ಎಂ.ಬಿ. ಪಾಟೀಲ್‌ರಿಗೆ ಜನಪ್ರಿಯತೆ ಇದ್ದಿದ್ದರೆ ವಿಜಯಪುರ ಲೋಕಸಭಾ ಕ್ಷೇತ್ರದಲ್ಲಿ ರಾಜು ಅಲಗೂರ ಸೋಲು ಕಾಣುತ್ತಿರಲಿಲ್ಲ. ಮಂತ್ರಿ ಶಿವಾನಂದ ಪಾಟೀಲ್ ಬಾಗಲಕೋಟ ಲೋಕಸಭಾ ಕ್ಷೇತ್ರದಲ್ಲಿ ತನ್ನ ಮಗಳ ಸೋಲು ನೋಡುವಂತಾಗಿದ್ದು ಅವರ ಜನಪ್ರಿಯತೆಗೆ ಸಾಕ್ಷಿಯಾಗಿ ನಿಲ್ಲುತ್ತದೆ. ಮುಖ್ಯಮಂತ್ರಿ ಹುದ್ದೆಯ ಪ್ರಬಲ ಆಕಾಂಕ್ಷಿ ಆದರೆ ಬಹಿರಂಗವಾಗಿ ಎಲ್ಲೂ ಹೇಳಿಕೊಳ್ಳದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೂ ತನ್ನ ತಮ್ಮನನ್ನು ಗೆಲ್ಲಿಸಿಕೊಳ್ಳುವಲ್ಲಿ ವಿಫಲರಾದರು.

ಡಿ.ವಿ. ಸದಾನಂದ ಗೌಡರ ಹಾಗೆ ಲಕ್ಕಿ ಸಿಎಂ ಆಗಿ ಹೊರಹೊಮ್ಮಲು ಕನಸು ಕಾಣುತ್ತಿರುವ ಡಾ.ಜಿ. ಪರಮೇಶ್ವರ್ ಅವರು ಅವಕಾಶ ಸಿಕ್ಕಾಗ ಜನನಾಯಕನಾಗಿ ರೂಪುಗೊಳ್ಳಲು ಯತ್ನಿಸಲಿಲ್ಲ. ಹಾಗಂತ ಕಾಂಗ್ರೆಸ್‌ನಲ್ಲಿ ಹೊಸ ನಾಯಕತ್ವಕ್ಕೆ ಮಣೆ ಹಾಕಲೇಬಾರದೇ? ಎಂಬ ಪ್ರಶ್ನೆ ಉದ್ಭವಿಸುತ್ತದೆ. ಹೊಸಬರು, ಹಳಬರು ಯಾರೇ ಮುಖ್ಯಮಂತ್ರಿ ಹುದ್ದೆ ಅಲಂಕರಿಸಬೇಕೆಂದರೆ; ಜನಾದೇಶ ಪಡೆದುಕೊಂಡು ಬಂದಿರುವ ಸಿದ್ದರಾಮಯ್ಯನವರನ್ನು ವಿಶ್ವಾಸಕ್ಕೆ ತೆಗೆದುಕೊಂಡೇ ಮುಂದುವರಿಯಬೇಕು. 1989ರ ವಿಧಾನಸಭಾ ಚುನಾವಣೆಯನ್ನು ವೀರೇಂದ್ರ ಪಾಟೀಲರ ನೇತೃತ್ವದಲ್ಲಿ ಎದುರಿಸಲಾಗಿತ್ತು. ಆಗ ಕಾಂಗ್ರೆಸ್ ಪಕ್ಷ 178 ಸ್ಥಾನಗಳ ಐತಿಹಾಸಿಕ ಗೆಲುವು ಪಡೆದಿತ್ತು. ಆ ಅವಧಿಯಲ್ಲಿ ಮೂರು ಜನ ಮುಖ್ಯಮಂತ್ರಿಗಳು ಅಧಿಕಾರ ನಡೆಸಿದ್ದರ ಫಲವಾಗಿ 1994ರ ಚುನಾವಣೆಯಲ್ಲಿ ಕಾಂಗ್ರೆಸ್ ಸಂಖ್ಯಾಬಲ 34ಕ್ಕೆ ಕುಸಿದಿತ್ತು. ಹಾಗೆ ನೋಡಿದರೆ ವೀರೇಂದ್ರ ಪಾಟೀಲರು ಉತ್ತಮ ಆಡಳಿತಗಾರರಾಗಿದ್ದರು. ಸಿದ್ದರಾಮಯ್ಯನವರಷ್ಟು ಜನಪ್ರಿಯ ಜನನಾಯಕ ಆಗಿರಲಿಲ್ಲ. ಹಾಗಿದ್ದೂ ಕಾಂಗ್ರೆಸ್ ಪಕ್ಷ ಭಾರೀ ಬೆಲೆ ತೆರಬೇಕಾಯಿತು.

ಕಾಂಗ್ರೆಸ್ ಪಕ್ಷದ ನಿಷ್ಠಾವಂತರಾದ ಮಾಜಿ ಸಚಿವ ಬಿ.ಆರ್. ಶಂಕರ್, ಎಚ್.ಎಂ. ರೇವಣ್ಣ, ಮಾಜಿ ರಾಜ್ಯಸಭಾ ಸದಸ್ಯ ಡಾ. ಎಲ್. ಹನುಮಂತಯ್ಯ, ಮಾಜಿ ಸಂಸದರಾದ ವಿ.ಎಸ್. ಉಗ್ರಪ್ಪ, ಬಿ.ಎನ್. ಚಂದ್ರಪ್ಪ, ಮಾಜಿ ಸಭಾಪತಿ ವಿ.ಆರ್. ಸುದರ್ಶನ್, ಚಿಂತಕ ಡಾ. ಸಿ.ಎಸ್. ದ್ವಾರಕಾನಾಥ್ ಮುಂತಾದವರು ಹೈಕಮಾಂಡ್ ನಾಯಕರಾದ ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆಯವರಿಗೆ ಪತ್ರ ಬರೆದು ‘‘ನಾನೇ ಮುಖ್ಯಮಂತ್ರಿ’’ ಹೇಳಿಕೆಗೆ ಕಡಿವಾಣ ಹಾಕಬೇಕೆಂದು ಮನವಿ ಮಾಡಿದ್ದಾರೆ. ಪಕ್ಷದ ವರ್ಚಸ್ಸಿಗೆ ಧಕ್ಕೆ ಬರುತ್ತಿದೆ ಎಂದೂ ಆತಂಕ ವ್ಯಕ್ತಪಡಿಸಿದ್ದಾರೆ. ಮುಡಾ ಪ್ರಕರಣ ಕಾನೂನಿನ ತಾರ್ಕಿಕ ಅಂತ್ಯ ಕಾಣುವ ಮೊದಲೇ ‘‘ನಾನೇ ಮುಖ್ಯಮಂತ್ರಿ’’ ಎಂದು ಬಯಕೆ ವ್ಯಕ್ತಪಡಿಸುವುದು ಸಿದ್ದರಾಮಯ್ಯನವರ ನಿರ್ಗಮನವನ್ನು ಖಚಿತಪಡಿಸಿದಂತಾಗುತ್ತದೆ. ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿ ಮುಂದುವರಿಯಬೇಕೇ ಬೇಡವೇ ಎನ್ನುವುದು ಸಂತೆಯ ಸುದ್ದಿ ಆಗಬಾರದು. ಜನನಾಯಕರಾದ ಸಿದ್ದರಾಮಯ್ಯನವರ ಮನವೊಲಿಸಿ ಹೊಸಬರಿಗೆ ಅವಕಾಶ ಕೊಡುವುದಕ್ಕೂ, ಮುಡಾ ಪ್ರಕರಣದಲ್ಲಿ ಕಟಕಟೆಯಲ್ಲಿ ನಿಲ್ಲಿಸಿ ರಾಜೀನಾಮೆ ಪಡೆಯುವುದಕ್ಕೂ ವ್ಯತ್ಯಾಸವಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಗೌರವಯುತವಾಗಿ ನಡೆಸಿಕೊಂಡರೆ ಕಾಂಗ್ರೆಸ್‌ಗೆ ಒಳ್ಳೆಯದು.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಡಾ. ರಾಜಶೇಖರ ಹತಗುಂದಿ

contributor

Similar News