ಉನ್ನತ ಶಿಕ್ಷಣ: ಹೊಸ ಸರಕಾರ-ಹಳೆ ವ್ಯವಸ್ಥೆ

ಶಿಕ್ಷಣ ತಜ್ಞರೊಂದಿಗೆ ಸಮಾಲೋಚನೆ ನಡೆಸಿ ಉನ್ನತ ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಮತ್ತು ವಿವಿಗಳ ಆಡಳಿತ ವ್ಯವಸ್ಥೆಯಲ್ಲಿ ಪಾರದರ್ಶಕತೆ ತರಲು ಗಂಭೀರ ಪ್ರಯತ್ನ ಮಾಡಬೇಕಿದೆ. ಉನ್ನತ ಶಿಕ್ಷಣ ಇಲಾಖೆಯನ್ನು ಮರು ಸಂಘಟಿಸಲು ದಕ್ಷ ಮತ್ತು ಪ್ರಾಮಾಣಿಕರ ತಂಡ ಕಟ್ಟಬೇಕಾಗಿದೆ. ಸ್ವಾತಂತ್ರ್ಯ ಬಂದು ೭೫ ವರ್ಷ ಗತಿಸಿದರೂ ಬಡವರಿಗೆ ಉನ್ನತ ಶಿಕ್ಷಣ ನಿಲುಕಿಲ್ಲ. ಖಾಸಗಿ ವಿವಿಗಳು ಇರುವುದೇ ಹಣವಂತರಿಗೆ. ಸರಕಾರಿ ವಿವಿಗಳು ಸದೃಢವಾದರೆ ಮಾತ್ರ ಬಡವರು ಉನ್ನತ ಶಿಕ್ಷಣ ಪಡೆದು ಕೊಳ್ಳಬಹುದು. ವಸ್ತುನಿಷ್ಠ ಸಂಶೋಧನೆಗಳು ಮತ್ತೆ ಜೀವಪಡೆಯಬಹುದು. ಸಚಿವ ಡಾ. ಎಂ.ಸಿ. ಸುಧಾಕರ ಈ ಕೂಡಲೇ ಎಚ್ಚೆತ್ತುಕೊಂಡಲ್ಲಿ ಕೇಸರಿ ಕೊಳೆ ಮತ್ತು ಭ್ರಷ್ಟಾಚಾರ ಇಲ್ಲವಾಗಿಸಬಹುದು.

Update: 2023-09-23 04:08 GMT

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ರಾಜ್ಯದಲ್ಲಿ ಅಸ್ತಿತ್ವಕ್ಕೆ ಬಂದು ನಾಲ್ಕು ತಿಂಗಳಾಗುತ್ತಾ ಬಂತು. ಚುನಾವಣಾ ಪೂರ್ವದಲ್ಲಿ ನೀಡಿದ ಭರವಸೆಯಂತೆ ಗ್ಯಾರಂಟಿಗಳನ್ನು ಮೊದಲ ಆದ್ಯತೆಯಾಗಿ ಜಾರಿಗೊಳಿಸಿದ್ದಾರೆ. ಗ್ಯಾರಂಟಿಗಳ ಅನುಷ್ಠಾನದಲ್ಲಿ ಹಣಕಾಸು, ಇಂಧನ, ಸಾರಿಗೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸೇರಿದಂತೆ ನಾಲ್ಕೈದು ಇಲಾಖೆಗಳು ಮಹತ್ವದ ಪಾತ್ರ ವಹಿಸುತ್ತವೆ. ಹಣಕಾಸು ಇಲಾಖೆಯನ್ನು ಹೊಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಗ್ಯಾರಂಟಿಗಳ ಜಾರಿಯಲ್ಲಿ ಹೆಚ್ಚು ಮುತುವರ್ಜಿ ವಹಿಸಿದ್ದರಿಂದ ಆಡಳಿತ ಯಂತ್ರ ಸಹಜವಾಗಿಯೇ ಚುರುಕಾಗಿದೆ. ಆದರೆ ಉಳಿದ ಇಲಾಖೆಯ ಜವಾಬ್ದಾರಿ ಹೊತ್ತುಕೊಂಡಿರುವ ಮಂತ್ರಿಗಳು ಹೊಸ ಸರಕಾರ ಬಂದರೂ ಹಳೆಯ ವ್ಯವಸ್ಥೆಯನ್ನೇ ಮುಂದುವರಿಸಿದ್ದಾರೆ. ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್ ಹಾಗೂ ಐಟಿ, ಬಿಟಿಯಂತಹ ಅತ್ಯಂತ ಮಹತ್ವದ ಖಾತೆಗಳನ್ನು ಹೊಂದಿರುವ ಪ್ರಿಯಾಂಕ್ ಖರ್ಗೆಯವರಿಗೆ ಬಿಜೆಪಿ ಸರಕಾರದಲ್ಲಿ ಪರಮ ಭ್ರಷ್ಟ ಎಂಬ ಹಣೆಪಟ್ಟಿ ಅಂಟಿಸಿಕೊಂಡಿರುವ ಭೀಮಾಶಂಕರ ತೆಗ್ಗಳ್ಳಿಯೇ ಆಪ್ತ ಕಾರ್ಯದರ್ಶಿಯಾಗಿ ಮುಂದುವರಿದಿದ್ದಾರೆ. ಇದು ಒಬ್ಬಿಬ್ಬರು ಮಂತ್ರಿಗಳ ಮಾತಲ್ಲ. ಬಹುಪಾಲು ಮಂತ್ರಿಗಳಿಗೆ ಹಿಂದಿನ ಸರಕಾರದಲ್ಲಿದ್ದ ಬಿಜೆಪಿ, ಆರೆಸ್ಸೆಸ್ ಗರಡಿಯಲ್ಲಿ ಪಳಗಿದ ಅಧಿಕಾರಿ ಮತ್ತು ಸಿಬ್ಬಂದಿಯೇ ಮುಂದುವರಿದಿದ್ದಾರೆ. ಹಾಗಾಗಿ ಹೊಸ ಸರಕಾರದ ಆಶೋತ್ತರಗಳನ್ನು ಸಾಕಾರಗೊಳಿಸಬಲ್ಲ ಹೊಸ ವ್ಯವಸ್ಥೆಯೇ ರೂಪುಗೊಂಡಿಲ್ಲ.

ಈ ವಿಷಯದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಖಾತೆಯ ಮಂತ್ರಿ ಮಧು ಬಂಗಾರಪ್ಪ ಅವರ ಬದ್ಧತೆ, ಕಾಳಜಿ ಮತ್ತು ಕ್ರಿಯಾಶೀಲತೆಯನ್ನು ಮೆಚ್ಚಿಕೊಳ್ಳಬೇಕು. ಅಧಿಕಾರವಹಿಸಿಕೊಂಡ ದಿನದಿಂದಲೇ ಕ್ರಿಯಾಶೀಲರಾದ ಅವರು ಬಿಜೆಪಿಯ ಅಧಿಕಾರಾವಧಿಯಲ್ಲಿ ಸೇರ್ಪಡೆಗೊಂಡ ವಿವಾದಿತ ಪಠ್ಯಗಳ ಕುರಿತು ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ ಅವರ ಜೊತೆ ಸಮಾಲೋಚನೆ ನಡೆಸಿ ತಜ್ಞರ ಸಮಿತಿ ರಚಿಸಿ; ಅಭಿಪ್ರಾಯ ಪಡೆದು ಇತ್ಯರ್ಥ ಮಾಡಿದರು. ರೋಹಿತ್ ಚಕ್ರತೀರ್ಥ ಅಧ್ಯಕ್ಷತೆಯ ಸಮಿತಿ ಸೇರ್ಪಡೆ ಮಾಡಿದ ವಿವಾದಿತ ಪಠ್ಯಗಳನ್ನು ಕಲಿಸಬಾರದೆಂದು ಸುತ್ತೋಲೆ ಹೊರಡಿಸುವ ಮೂಲಕ ಪಠ್ಯ ವಿವಾದಕ್ಕೆ ತೆರೆ ಎಳೆದರು. ಅಷ್ಟು ಮಾತ್ರವಲ್ಲ, ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಪುಸ್ತಕ ಆಯ್ಕೆ ಸಮಿತಿಯನ್ನು ಪುನರ್ ರಚಿಸಿ ಆದೇಶ ಹೊರಡಿಸಿದ್ದಾರೆ. ಅಷ್ಟರ ಮಟ್ಟಿಗೆ ಹೊಸ ವ್ಯವಸ್ಥೆ ರೂಪುಗೊಂಡಂತಾಯಿತು. ಈ ಹಿಂದೆ ಬಿಜೆಪಿ ಸರಕಾರ ಕರ್ನಾಟಕದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಾಗಲೆಲ್ಲ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ, ಉನ್ನತ ಶಿಕ್ಷಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಂತಹ ಖಾತೆಗಳನ್ನು ಆರೆಸ್ಸೆಸ್ ಮೂಲದಿಂದ ಬಂದವರಿಗೇ ವಹಿಸಿಕೊಡಲಾಗುತ್ತಿತ್ತು. ೨೦೦೮ರಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ಆರೆಸ್ಸೆಸ್ ಗರಡಿಯಲ್ಲಿ ಪಳಗಿದ ವಿಶ್ವೇಶ್ವರ ಹೆಗಡೆ ಕಾಗೇರಿ ಮತ್ತು ಅರವಿಂದ ಲಿಂಬಾವಳಿಯವರನ್ನು ಕ್ರಮವಾಗಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ, ಉನ್ನತ ಶಿಕ್ಷಣ ಸಚಿವರನ್ನಾಗಿ ಮಾಡಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಿಎಂ ಸುಪರ್ದಿಯಲ್ಲಿ ಇದ್ದಿದ್ದರಿಂದ ಹೆಚ್ಚು ಕೇಸರೀಕರಣಗೊಳ್ಳಲಿಲ್ಲ. ಆದರೆ ಬಿಜೆಪಿ ಅಧಿಕಾರ ಹಿಡಿದಾಗಲೆಲ್ಲ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ, ಉನ್ನತ ಶಿಕ್ಷಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳನ್ನು ಶಕ್ತಿ ಮೀರಿ ಕೇಸರೀಕರಣಗೊಳಿಸಿದ್ದಾರೆ.

೨೦೧೩ರಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ರಚನೆಯಾದಾಗ ಎರಡು ಇಲಾಖೆಗಳು ಕೇಸರೀಕರಣದ ಕಳಂಕದಿಂದ ಮುಕ್ತಿ ಪಡೆದವು. ಸಂವೇದನಾಶೀಲ ಮತ್ತು ಕ್ರಿಯಾಶೀಲರಾದ ಕಿಮ್ಮನೆ ರತ್ನಾಕರ್ ಅವರು ಪ್ರಾಥಮಿಕ ಪ್ರೌಢ ಶಿಕ್ಷಣ ಸಚಿವರಾಗಿದ್ದರಿಂದ ಸವಾಲಾಗಿ ಸ್ವೀಕರಿಸಿ ಕೇಸರೀಕರಣದ ಕಲೆಗಳನ್ನು ಸಂಪೂರ್ಣ ತೊಳೆದು ಹಾಕಿದರು. ಡಾ. ಬರಗೂರು ರಾಮಚಂದ್ರಪ್ಪ ಅವರ ಸರ್ವಾಧ್ಯಕ್ಷತೆಯಲ್ಲಿ ರಚನೆಯಾದ ಪಠ್ಯಪುಸ್ತಕ ಪರಿಷ್ಕರಣ ಸಮಿತಿ ಎಡಬಲದ ಹಂಗು ತೊರೆದು ‘ಜೀವ ಪರ’ ಪಠ್ಯಗಳನ್ನು ಸಿದ್ಧಪಡಿಸಿ ಕೊಟ್ಟಿತು. ಕಿಮ್ಮನೆ ರತ್ನಾಕರ್ ನಂತರ ಪ್ರಾಥಮಿಕ, ಪ್ರೌಢ ಶಿಕ್ಷಣ ಸಚಿವರಾದ ತನ್ವೀರ್ ಶೇಠ್ ಬದ್ಧತೆಯಿಂದ ಕೆಲಸ ಮಾಡಿದರು. ಸಿದ್ದರಾಮಯ್ಯನವರ ಸರಕಾರದಲ್ಲಿ (೨೦೧೩) ಕನ್ನಡ ಮತ್ತು ಸಂಸ್ಕೃತಿ ಖಾತೆಯ ಮಂತ್ರಿಯಾಗಿದ್ದ ಉಮಾಶ್ರೀ ಅವರು ‘ಎಲ್ಲ ಬಲ್ಲವರಿಂದ’ ಕಲಿತು ಅತ್ಯುತ್ತಮ ಮಂತ್ರಿ ಎಂಬ ಖ್ಯಾತಿ ಪಡೆದರು. ಆದರೆ ಆ ಅವಧಿಯಲ್ಲಿ ಉನ್ನತ ಶಿಕ್ಷಣ ಸಚಿವರಾಗಿ ಕಾರ್ಯನಿರ್ವಹಿಸಿದ ಯಾರೊಬ್ಬರೂ ಕೇಸರೀಕರಣದ ಕೊಳೆ ತೊಳೆದು ಇಲಾಖೆಗೆ ಕಾಯಕ ಮಾಡಲು ಮುಂದಾಗಲೇ ಇಲ್ಲ. ೨೦೧೩ರ ಸಿದ್ದರಾಮಯ್ಯ ಸರಕಾರದಲ್ಲಿ ಮೊದಲಿಗೆ ಉನ್ನತ ಶಿಕ್ಷಣ ಸಚಿವರಾದವರು ಆರ್.ವಿ. ದೇಶಪಾಂಡೆ. ಕೈಗಾರಿಕಾ ಮಂತ್ರಿ ಆಗಿ ಅನುಭವ ಪಡೆದಿದ್ದ ದೇಶಪಾಂಡೆ ಅವರಿಗೆ ಉನ್ನತ ಶಿಕ್ಷಣ ಖಾತೆ ಮೇಲೆ ಪ್ರೀತಿ ಹುಟ್ಟಲೇ ಇಲ್ಲ. ಇಲಾಖಾ ಅಧಿಕಾರಿಗಳು ಮತ್ತು ಹನುಮಂತ ಕೊಟಬಾಗಿ ಎಂಬ ಶಿಷ್ಯನ ಕೈಯಲ್ಲಿ ಕೊಟ್ಟು ದೇಶಪಾಂಡೆ ಅವರು ಉನ್ನತ ಶಿಕ್ಷಣ ಇಲಾಖೆ ಪಾತಾಳ ತಲುಪುವಂತೆ ಮಾಡಿದರು. ಬಿಜೆಪಿ ಕಾಲದ ಕೊಳಕು ತೊಳೆಯುವುದು ಒತ್ತಟ್ಟಿಗಿರಲಿ, ಉನ್ನತ ಶಿಕ್ಷಣ ಇಲಾಖೆಯಲ್ಲಿ ಅರಾಜಕತೆ ತಾಂಡವ ವಾಡುವಂತೆ ಮಾಡಿದರು.

ಆರ್.ವಿ. ದೇಶಪಾಂಡೆ ಅವರ ಶಿಷ್ಯ ಹನುಮಂತ ಕೊಟಬಾಗಿ ಕುಲಸಚಿವ, ಕುಲಪತಿ ಮತ್ತು ಸಿಂಡಿಕೇಟ್ ಸದಸ್ಯ ಸ್ಥಾನಗಳನ್ನು ಸೂಕ್ತ ಬೆಲೆಗೆ ಮಾರಾಟ ಮಾಡುವ ಅಂಗಡಿಯನ್ನೇ ತೆರೆದರು. ಅದಕ್ಕೆ ಪ್ರೇರಣೆಯೊದಗಿಸಿದ್ದು ಹಿಂದಿನ ಮಂತ್ರಿ ಅರವಿಂದ ಲಿಂಬಾವಳಿ. ಆರೆಸ್ಸೆಸ್ ಮೂಲದ ಅರವಿಂದ ಲಿಂಬಾವಳಿ ಅರ್ಧದಷ್ಟು ಸ್ಥಾನಮಾನಗಳನ್ನು ಸಂಘ ಮೂಲದವರಿಗೆ ಶೈಕ್ಷಣಿಕ ಅರ್ಹತೆಯನ್ನು ಪರಿಗಣಿಸದೆ ಹಂಚುತ್ತಿದ್ದರು. ಇನ್ನುಳಿದ ಸ್ಥಾನಮಾನಗಳನ್ನು ಅಂಗಡಿ ತೆರೆದು ಮಾರುಕಟ್ಟೆ ಬೆಲೆಯಲ್ಲಿ ಮಾರುತ್ತಿದ್ದರು. ಕುಲಪತಿ, ಕುಲ ಸಚಿವ ಹಾಗೂ ಸಿಂಡಿಕೇಟ್ ಸದಸ್ಯ ಸ್ಥಾನಗಳನ್ನು ಮಾರಾಟ ಮಾಡುವ ಪದ್ಧತಿ ಯಾವತ್ತೂ ಇರಲಿಲ್ಲ. ಆ ಪದ್ಧತಿಯನ್ನು ಚಾಲನೆಗೆ ತಂದ ಶ್ರೇಯಸ್ಸು ಬಿಜೆಪಿಯವರಿಗೆ ಸಲ್ಲಬೇಕು. ಆ ಪದ್ಧತಿಗೆ ಮತ್ತಷ್ಟು ವೇಗ ಕಲ್ಪಿಸಿದವರು ಆರ್.ವಿ. ದೇಶಪಾಂಡೆಯವರ ಶಿಷ್ಯ ಹನುಮಂತ ಕೊಟಬಾಗಿ. ಬಿಜೆಪಿ ಅವಧಿಯಲ್ಲಿ ಅರ್ಧದಷ್ಟು ಸ್ಥಾನಮಾನಗಳನ್ನು ಮಾರಾಟ ಮಾಡುತ್ತಿದ್ದರೆ; ಎಲ್ಲಾ ಸ್ಥಾನಮಾನಗಳನ್ನು ಈ ಕೊಟಬಾಗಿ ಮಹಾಶಯ ಹರಾಜಿನಲ್ಲಿ ಮಾರಾಟ ಮಾಡಿ ತೈಲಿ ತುಂಬಿಸಿಕೊಂಡರು. ದೇಶಪಾಂಡೆಯವರು ಉನ್ನತ ಶಿಕ್ಷಣದ ಬಗ್ಗೆ ಹೊಂದಿರುವ ಉದಾಸೀನತೆ ಕಂಡ ಅಧಿಕಾರಿಗಳು ಪದವಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಹುದ್ದೆಗಳ ನೇಮಕಾತಿ ನಿಯಮಗಳನ್ನು ಬದಲಾಯಿಸಿದರು.

ಪದವಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕರ ಹುದ್ದೆಗಳ ನೇಮಕಾತಿ ಕರ್ನಾಟಕ ಲೋಕಸೇವಾ ಆಯೋಗದ ಮೂಲಕ ನಡೆಯುತ್ತಿತ್ತು. ಕರ್ನಾಟಕ ಲೋಕಸೇವಾ ಆಯೋಗ ಅಂಕಗಳ ಆಧಾರದಲ್ಲಿ ಒಂದು:ಮೂರು ಅನುಪಾತದಲ್ಲಿ ಮೆರಿಟ್ ಪಟ್ಟಿ ಸಿದ್ಧಪಡಿಸಿ ಸಂದರ್ಶನದ ಮೂಲಕ ಪದವಿ ಕಾಲೇಜಿನ ಸಹಾಯಕ ಅಧ್ಯಾಪಕರ ಆಯ್ಕೆ ಮಾಡುತ್ತಿತ್ತು. ಮೆರಿಟ್ ಇದ್ದವರಿಗೆ ಅವಕಾಶ ತಪ್ಪುವ ಸಾಧ್ಯತೆ ಕಡಿಮೆ ಇತ್ತು. ಯಾರೇ ಆಯ್ಕೆಯಾದರೂ ಮೆರಿಟ್ ಹೊಂದಿದವರಿಗೇ ಆದ್ಯತೆ ದೊರೆಯುತ್ತಿತ್ತು. ದೇಶಪಾಂಡೆ ಸಾಹೇಬರ ದಿವ್ಯ ನಿರ್ಲಕ್ಷ್ಯ ಗಮನಿಸಿದ ಇಲಾಖಾ ಅಧಿಕಾರಿಗಳು ಪದವಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಹೊಣೆಗಾರಿಕೆಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ವರ್ಗಾಯಿಸಿದರು. ಒ.ಎಂ.ಆರ್. ಸೀಟು ಮೂಲಕ ಪರೀಕ್ಷೆ ನಡೆಸಿ ಅತ್ಯಂತ ಪಾರದರ್ಶಕವಾಗಿ, ಲಂಚಕ್ಕೆ ಅವಕಾಶ ಇಲ್ಲದಂತೆ ನೇಮಕಾತಿ ಪ್ರಕ್ರಿಯೆ ನಡೆಸಲಾಗುವುದೆಂದು ನಂಬಿಸಲಾಯಿತು. ಕಾಟಾಚಾರಕ್ಕೆ ಪ್ರವೇಶ ಪರೀಕ್ಷೆ ನಡೆಸಿ ಒ.ಎಂ.ಆರ್. ಸೀಟು ತಿದ್ದುವ ಮೂಲಕ ದಂಧೆ ನಡೆಯಿತು. ಯಾರಿಗೂ ಗೊತ್ತಾಗಲಿಲ್ಲ. ಹಣ ಕೊಟ್ಟವರಿಗೆ ಮತ್ತು ಕಡಿಮೆ ಅಂಕ ಹೊಂದಿದವರಿಗೂ ಒ.ಎಂ.ಆರ್. ಕೃಪೆಯಾಗುತ್ತಿತ್ತು. ಉನ್ನತ ಶಿಕ್ಷಣ ಇಲಾಖೆ ಎಂಬುದು ಲೋಕೋಪಯೋಗಿ ಇಲಾಖೆಯನ್ನು ಮೀರಿಸುವಂತೆ ಕಾಂಚಾಣಮಯವಾಯಿತು. ಕುಲಪತಿ, ಕುಲಸಚಿವ, ಸಿಂಡಿಕೇಟ್ ಸದಸ್ಯರ ನೇಮಕಾತಿಗೆ ಲಂಚ; ಪದವಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾಗಲು ಲಂಚ. ಉನ್ನತ ಶಿಕ್ಷಣ ಇಲಾಖೆ ಉನ್ನತ ಲಂಚದ ಇಲಾಖೆಯಾಗಿ ಮಾರ್ಪಟ್ಟಿತು. ದೇಶಪಾಂಡೆ ಅವರಿಗೆ ಕೈಗಾರಿಕಾ ಖಾತೆ ದೊರೆತ ಮೇಲೆ ಕೆಲಕಾಲ ಉನ್ನತ ಶಿಕ್ಷಣ ಇಲಾಖೆ ಟಿ.ಬಿ. ಜಯಚಂದ್ರ ಅವರ ಹೆಗಲಿಗೆ ಬಿತ್ತು. ಅದು ಅವರಿಗೆ ಹೆಚ್ಚುವರಿ ಹೊಣೆಗಾರಿಕೆ ಆಗಿದ್ದರಿಂದ ಆ ಕಡೆ ಹೆಚ್ಚು ಗಮನ ಹರಿಸಲಿಲ್ಲ.

ಜಯಚಂದ್ರ ಅವರ ನಂತರ ಉನ್ನತ ಶಿಕ್ಷಣ ಇಲಾಖೆಗೆ ಹಿರಿಯ ಕಾಂಗ್ರೆಸಿಗ, ಅತ್ಯಂತ ಕ್ರಿಯಾಶೀಲ ನಾಯಕರಾದ ಬಸವರಾಜ ರಾಯರೆಡ್ಡಿಯವರು ಮಂತ್ರಿಯಾದರು. ರಾಯರೆಡ್ಡಿಯವರು ಉನ್ನತ ಶಿಕ್ಷಣ ಇಲಾಖೆಯ ಮಂತ್ರಿ ಆಗಿದ್ದರಿಂದ ವಿದ್ಯಾರ್ಥಿಗಳು ಮತ್ತು ಶಿಕ್ಷಕರಲ್ಲಿ ಆಶಾಭಾವನೆ ಮೂಡಿತು. ನಿರೀಕ್ಷೆಗಳು ಗರಿಗೆದರಿದವು. ದುರಂತವೆಂದರೆ; ರಾಯರೆಡ್ಡಿ ಅವರು ನಿರೀಕ್ಷೆಗಳನ್ನು ಹುಸಿಗೊಳಿಸಿದರು. ಅವರ ಅಧಿಕಾರಾವಧಿಯಲ್ಲಿ ಕುಲಪತಿ, ಕುಲಸಚಿವ ಹುದ್ದೆಯ ಆಕಾಂಕ್ಷಿಗಳು ಗುತ್ತಿಗೆದಾರ ನವಲೆಮಠ ಅವರನ್ನು ಕಾಣಲೇಬೇಕಾದ ಅನಿವಾರ್ಯತೆ ಸೃಷ್ಟಿಯಾಯಿತು. ಅಷ್ಟು ಮಾತ್ರವಲ್ಲ; ವಿಶ್ವವಿದ್ಯಾನಿಲಯಗಳ ಅಧ್ಯಾಪಕರ ನೇಮಕಾತಿಗೆ ತಡೆ ನೀಡಿದರು. ಯುಜಿಸಿ ನಿಯಮಾವಳಿಗೆ ವಿರುದ್ಧ ನೇಮಕಾತಿ ವಿಧಾನ ಬದಲಿಸಲು ಯತ್ನಿಸಿದರು. ವಿಶ್ವವಿದ್ಯಾನಿಲಯಗಳ ಕಾನೂನು ತಿದ್ದುಪಡಿಗೆ ಮುಂದಾದರು. ವಿಶ್ವವಿದ್ಯಾನಿಲಯಗಳ ಸ್ವಾಯತ್ತತೆಗೆ ಧಕ್ಕೆ ತರಲು ಕಾನೂನು ತಿದ್ದುಪಡಿಗೆ ಮುಂದಾದರು. ವಿವಿಯ ಕಟ್ಟಡ ನಿರ್ಮಾಣ ಮತ್ತು ನೇಮಕಾತಿಗಳನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಳ್ಳಲು ಏನೆಲ್ಲ ಪ್ರಯತ್ನ ಮಾಡಿದರು. ಕನ್ನಡ ವಿವಿಯ ಅಸ್ಮಿತೆಗೆ ಧಕ್ಕೆ ತರಲು ಬಹಳ ಪ್ರಯತ್ನ ಮಾಡಿದರು. ಆಗ ಕನ್ನಡ ವಿವಿಯ ಕುಲಪತಿಯಾಗಿದ್ದ ಡಾ. ಮಲ್ಲಿಕಾ ಘಂಟಿಯವರು ಬಲವಾಗಿ ವಿರೋಧಿಸಿದ್ದರಿಂದ ರಾಯರೆಡ್ಡಿಯವರಿಗೆ ಹಿನ್ನಡೆಯಾಯಿತು. ಉನ್ನತ ಶಿಕ್ಷಣ ಇಲಾಖೆಯಲ್ಲಿ ವಿಶಿಷ್ಟ ಹೆಜ್ಜೆ ಗುರುತುಗಳನ್ನು ಮೂಡಿಸುವ ಅವಕಾಶ ಹೊಂದಿದ್ದ ರಾಯರೆಡ್ಡಿ ಅತಿಥಿ ಉಪನ್ಯಾಸಕರ ಟೀಕೆಗೆ ಗುರಿಯಾದರು. ಉನ್ನತ ಶಿಕ್ಷಣ ಇಲಾಖೆ ಮತ್ತಷ್ಟು ಹಾಳಾಗುವಂತೆ ಮಾಡಿದರು.

ಕುಮಾರಸ್ವಾಮಿ ಸರಕಾರದಲ್ಲಿ ಒಲ್ಲದ ಮನಸ್ಸಿನಿಂದ ಉನ್ನತ ಶಿಕ್ಷಣ ಸಚಿವರಾದ ಜಿ.ಟಿ. ದೇವೇಗೌಡರು ಮಗ ಮತ್ತು ಅಳಿಯನ ಮೂಲಕ ಸಾಧ್ಯವಾದಷ್ಟು ಬಾಚಿಕೊಂಡರೇ ಹೊರತು ಉನ್ನತ ಶಿಕ್ಷಣ ಇಲಾಖೆಯ ಕಾಯಕಲ್ಪದ ಕುರಿತು ಗಂಭೀರವಾಗಿ ಚಿಂತಿಸಲೇ ಇಲ್ಲ. ಬೀದಿಗಳಲ್ಲಿ ಅಕ್ರಮ ನೇಮಕಾತಿ ನಡೆದಾಗಲೂ ಅದರಲ್ಲಿ ತಮ್ಮ ಪಾಲು ಪಡೆದರೇ ಹೊರತು ಪ್ರತಿಭಾವಂತರ ಪರ ನಿಲ್ಲಲಿಲ್ಲ. ೨೦೧೯ರಲ್ಲಿ ಆಪರೇಷನ್ ಕಮಲದ ಬಿಜೆಪಿ ಸರಕಾರ ಬಂತು. ಯಡಿಯೂರಪ್ಪ ಮುಖ್ಯಮಂತ್ರಿಯಾದರು. ರೂಢಿಯಂತೆ ಆರೆಸ್ಸೆಸ್ ಆಯ್ಕೆಯಾಗಿ ಸಿ.ಎನ್. ಅಶ್ವತ್ಥನಾರಾಯಣ ಉನ್ನತ ಶಿಕ್ಷಣ ಸಚಿವರಾದರು. ಸ್ವಜಾತಿ ಪ್ರೇಮ ಮತ್ತು ಆರೆಸ್ಸೆಸ್ ಒಲವನ್ನು ಸಮನ್ವಯಗೊಳಿಸಿ ನಾಲ್ಕು ವರ್ಷಗಳ ಕಾಲ ಭರ್ಜರಿ ಸುಗ್ಗಿ ಮಾಡಿದರು. ರಾಜ್ಯದ ಎಲ್ಲಾ ವಿವಿಗಳನ್ನು ಬಲಪಡಿಸುವುದು ಒತ್ತಟ್ಟಿಗಿರಲಿ, ಬಿಜೆಪಿ ಸರಕಾರವಿದ್ದಾಗ ಅಸ್ತಿತ್ವಕ್ಕೆ ಬಂದ ಕರ್ನಾಟಕ ಜಾನಪದ ವಿಶ್ವವಿದ್ಯಾನಿಲಯ ಹಾಗೂ ಕರ್ನಾಟಕ ರಾಜ್ಯ ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆೆಗಳ ವಿವಿಗಳನ್ನು ಪೂರ್ಣ ಪ್ರಮಾಣದಲ್ಲಿ ಬೆಳೆದು ನಿಲ್ಲುವಂತೆ ಅನುಕೂಲ ಒದಗಿಸಲಿಲ್ಲ. ನಾಲ್ಕು ವರ್ಷಗಳಲ್ಲಿ ಒಂದೇ ಒಂದು ಹುದ್ದೆ ಭರ್ತಿಗೆ ಅವಕಾಶ ಕಲ್ಪಿಸಲಿಲ್ಲ. ಕುಲಪತಿ, ಕುಲಸಚಿವ ಹಾಗೂ ಸಿಂಡಿಕೇಟ್ ಸ್ಥಾನಗಳಿಗೆ ಆರೆಸ್ಸೆಸ್ ಮತ್ತು ಸ್ವಜಾತಿ ಬಂಧುಗಳಿಗೆ ಸಾಕಷ್ಟು ಅವಕಾಶ ಮಾಡಿಕೊಟ್ಟರು. ವಿವಿಗಳಲ್ಲಿ ಕನಿಷ್ಠ ಮೂಲಭೂತ ಸೌಕರ್ಯಗಳಿಲ್ಲದಿದ್ದರೂ ‘ಹೊಸ ಶಿಕ್ಷಣ ನೀತಿ’ ಜಾರಿಗೊಳಿಸುವುದಾಗಿ ಬಡಾಯಿ ಕೊಚ್ಚಿಕೊಂಡರು. ಇರುವ ವಿವಿಗಳನ್ನು ಬಲಪಡಿಸದೆ ಜಿಲ್ಲೆಗೊಂದರಂತೆ ಮತ್ತೆ ಎಂಟು ವಿವಿಗಳನ್ನು ಸ್ಥಾಪಿಸಿ, ಕುಲಪತಿಗಳನ್ನೂ ನೇಮಿಸಿ ಉಂಡೂ ಕೊಂಡೂ ಹೋದರು.

ಸದ್ಯ ಹೊಸ ಸರಕಾರವೇನೋ ಅಸ್ತಿತ್ವಕ್ಕೆ ಬಂದಿದೆ. ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾರೆ. ಉನ್ನತ ಶಿಕ್ಷಣ ಸಚಿವರಾಗಿ ಡಾ. ಎಂ.ಸಿ. ಸುಧಾಕರ್ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಆದರೆ ಇಲಾಖೆ ಮಾತ್ರ ಅಶ್ವತ್ಥನಾರಾಯಣ ಸಲಹೆಯಂತೆ ನಡೆಯುತ್ತಿರುವಂತೆ ಭಾಸವಾಗುತ್ತಿದೆ. ಉನ್ನತ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿ ಬಿಜೆಪಿ ಕಾಲದ ಉಮಾಶಂಕರ ಮುಂದುವರಿದಿದ್ದಾರೆ. ಜಾತಿವಾದಿ ಉಮಾಶಂಕರ ಅಶ್ವತ್ಥನಾರಾಯಣ ಮಾರ್ಗದರ್ಶನ ಪಡೆದು ಕೆಲಸ ಮಾಡಿದರೆ ಕೇಸರೀಕರಣ ತಡೆಯುವುದಾದರೂ ಹೇಗೆ? ರಾಜ್ಯದ ವಿವಿಗಳಲ್ಲಿ ಶೇ. ೬೦ರಷ್ಟು ಹುದ್ದೆಗಳು ಖಾಲಿ ಇವೆ. ಅತಿಥಿ ಉಪನ್ಯಾಸಕರು ವಿವಿಗಳ ಚಾಲನಾಶಕ್ತಿಯಾಗಿದ್ದಾರೆ. ಕಡಿಮೆ ಸಂಬಳದ ಅವರಿಗೆ ಉದ್ಯೋಗ ಗ್ಯಾರಂಟಿ ಇಲ್ಲ. ಕನ್ನಡ ವಿವಿ, ಸಂಗೀತ ವಿವಿ, ಜಾನಪದ ವಿವಿ ಮುಚ್ಚುವ ಸ್ಥಿತಿಯಲ್ಲಿ ಇವೆ. ರಾಜ್ಯ ಸರಕಾರ ತಾತ್ವಿಕವಾಗಿ ಕೇಂದ್ರ ಸರಕಾರ ರೂಪಿಸಿದ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಯನ್ನು ತಿರಸ್ಕರಿಸಿದೆ. ರಾಜ್ಯ ಶಿಕ್ಷಣ ನೀತಿ ರೂಪಿಸುವುದಾಗಿ ಮುಖ್ಯಮಂತ್ರಿ ಹೇಳಿದ್ದಾರೆ. ಆದರೆ ಆ ನಿಟ್ಟಿನಲ್ಲಿ ಗಂಭೀರ ಪ್ರಯತ್ನಗಳೇ ನಡೆದಿಲ್ಲ.

ದೇವರಾಜ ಅರಸು ಅವರು ಮುಖ್ಯಮಂತ್ರಿಯಾಗಿದ್ದಾಗ; ೧೯೭೬ರಲ್ಲಿ ವಿಶ್ವವಿದ್ಯಾನಿಲಯಗಳ ಕಾಯ್ದೆ ರೂಪಿಸಲಾಗಿತ್ತು. ನಂತರ ೨೦೦೦ದಲ್ಲಿ ಡಾ. ಜಿ. ಪರಮೇಶ್ವರ್ ಅವರು ಉನ್ನತ ಶಿಕ್ಷಣ ಸಚಿವರಾಗಿದ್ದಾಗ ವಿವಿ ಕಾಯ್ದೆಗೆ ಹೊಸರೂಪ ನೀಡಲಾಗಿತ್ತು. ಸಿಂಡಿಕೇಟ್-ಸೆನೆಟ್ ಸದಸ್ಯರ ನೇಮಕಾತಿಯಲ್ಲಿ ಮೀಸಲಾತಿ ಕಲ್ಪಿಸಲಾಗಿತ್ತು. ಆಗ ಕುಲಪತಿ, ಕುಲಸಚಿವ ಹಾಗೂ ಸಿಂಡಿಕೇಟ್ ಸದಸ್ಯರ ನೇಮಕಾತಿಯಲ್ಲಿ ಲಂಚದ ಹಾವಳಿ ಇರಲಿಲ್ಲ. ಈ ವ್ಯವಸ್ಥೆ ಸಂಪೂರ್ಣ ಹಾಳಾಗಿದೆ. ಶಿಕ್ಷಣ ತಜ್ಞರೊಂದಿಗೆ ಸಮಾಲೋಚನೆ ನಡೆಸಿ ಉನ್ನತ ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಮತ್ತು ವಿವಿಗಳ ಆಡಳಿತ ವ್ಯವಸ್ಥೆಯಲ್ಲಿ ಪಾರದರ್ಶಕತೆ ತರಲು ಗಂಭೀರ ಪ್ರಯತ್ನ ಮಾಡಬೇಕಿದೆ. ಉನ್ನತ ಶಿಕ್ಷಣ ಇಲಾಖೆಯನ್ನು ಮರು ಸಂಘಟಿಸಲು ದಕ್ಷ ಮತ್ತು ಪ್ರಾಮಾಣಿಕರ ತಂಡ ಕಟ್ಟಬೇಕಾಗಿದೆ. ಸ್ವಾತಂತ್ರ್ಯ ಬಂದು ೭೫ ವರ್ಷ ಗತಿಸಿದರೂ ಬಡವರಿಗೆ ಉನ್ನತ ಶಿಕ್ಷಣ ನಿಲುಕಿಲ್ಲ. ಖಾಸಗಿ ವಿವಿಗಳು ಇರುವುದೇ ಹಣವಂತರಿಗೆ. ಸರಕಾರಿ ವಿವಿಗಳು ಸದೃಢವಾದರೆ ಮಾತ್ರ ಬಡವರು ಉನ್ನತ ಶಿಕ್ಷಣ ಪಡೆದು ಕೊಳ್ಳಬಹುದು. ವಸ್ತುನಿಷ್ಠ ಸಂಶೋಧನೆಗಳು ಮತ್ತೆ ಜೀವಪಡೆಯಬಹುದು. ಸಚಿವ ಡಾ. ಎಂ.ಸಿ. ಸುಧಾಕರ ಈ ಕೂಡಲೇ ಎಚ್ಚೆತ್ತುಕೊಂಡಲ್ಲಿ ಕೇಸರಿ ಕೊಳೆ ಮತ್ತು ಭ್ರಷ್ಟಾಚಾರ ಇಲ್ಲವಾಗಿಸಬಹುದು.

Tags:    

Writer - ವಾರ್ತಾಭಾರತಿ

contributor

Editor - Safwan

contributor

Contributor - ಡಾ. ರಾಜಶೇಖರ ಹತಗುಂದಿ

ಹಿರಿಯ ಬರಹಗಾರ, ಪತ್ರಕರ್ತ

Similar News