‘ಇಂಡಿಯಾ’ ಕೂಟ: ಖರ್ಗೆ ಅವರ ಬದ್ಧತೆಗೆ ಗೆಲುವು

ಮಲ್ಲಿಕಾರ್ಜುನ ಖರ್ಗೆಯವರು ಸೈದ್ಧಾಂತಿಕ ಬದ್ಧತೆಯ ಕಾರಣಕ್ಕೆ ಕಾಂಗ್ರೆಸ್ ಪಕ್ಷವನ್ನು, ‘ಇಂಡಿಯಾ’ ಕೂಟವನ್ನು ತಲೆಯೆತ್ತಿ ನಡೆಯುವಂತೆ ಮಾಡಿದ್ದಾರೆ. ಕಲ್ಯಾಣ ಕರ್ನಾಟಕದಲ್ಲಿ ಐದಕ್ಕೆ ಐದೂ ಲೋಕಸಭಾ ಕ್ಷೇತ್ರಗಳನ್ನು ಗೆಲ್ಲಿಸಿಕೊಂಡಿದ್ದಾರೆ. ಖರ್ಗೆಯವರು ಕೋಮುವಾದಿ ಶಕ್ತಿಯನ್ನು ಹಿಮ್ಮೆಟ್ಟಿಸುವಲ್ಲಿ ಮಹತ್ತರ ಪಾತ್ರ ವಹಿಸುತ್ತಿರುವಾಗ ಕರ್ನಾಟಕದ ಕಾಂಗ್ರೆಸಿಗರು ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಬಲ ನೀಡಬೇಕಿತ್ತು. ಕರ್ನಾಟಕದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಇದೆ. ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಮಿಟಿಗೆ ಡಿ.ಕೆ. ಶಿವಕುಮಾರ್ ಅವರು ಅಧ್ಯಕ್ಷರು. ಅಹಿಂದ ನಾಯಕ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಒಕ್ಕಲಿಗರ ನಾಯಕ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಜೋಡಿ ಶಾಸಕರನ್ನು, ಮಂತ್ರಿಗಳನ್ನು ಹದ್ದುಬಸ್ತಿನಲ್ಲಿಟ್ಟು ಹೆಚ್ಚುವರಿ ಶ್ರಮ ಹಾಕಿದ್ದರೆ 25 ಲೋಕಸಭಾ ಕ್ಷೇತ್ರಗಳನ್ನು ಗೆಲ್ಲುವ ಸಾಧ್ಯತೆ ಇತ್ತು.

Update: 2024-06-15 04:26 GMT

ಕೇವಲ ಎರಡು ವರ್ಷಗಳ ಹಿಂದೆ ಕಾಂಗ್ರೆಸ್‌ನ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಅಖಿಲ ಭಾರತ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿ ಚುನಾಯಿತರಾದಾಗ ಹಲವರು ಹುಬ್ಬೇರಿಸಿದ್ದರು. ಪಕ್ಷದ ಅಧ್ಯಕ್ಷರಾಗಿ ಖರ್ಗೆಯವರು ಜವಾಬ್ದಾರಿ ವಹಿಸಿಕೊಂಡಾಗ ಅವರಿಗೆ 80 ವರ್ಷ. ದಕ್ಷಿಣ ಭಾರತದ, ಅದರಲ್ಲೂ ಕರ್ನಾಟಕದ ಖರ್ಗೆಯವರು ಚುನಾವಣಾ ವರ್ಷದಲ್ಲಿ 139 ವರ್ಷ ಹಳೆಯದಾದ ಕಾಂಗ್ರೆಸ್ ಪಕ್ಷದ ನೇತೃತ್ವ ವಹಿಸಿ ಮುನ್ನಡೆಸುವುದು ಅತ್ಯಂತ ಸವಾಲಿನ ಕಾರ್ಯವಾಗಿತ್ತು. ಕಾಂಗ್ರೆಸ್ ಪಕ್ಷಕ್ಕೆ ವರಿಷ್ಠ ನಾಯಕಿ ಸೋನಿಯಾ ಗಾಂಧಿ ಮತ್ತು ಉತ್ಸಾಹಿ ಯುವ ನಾಯಕ ರಾಹುಲ್ ಗಾಂಧಿಯವರ ಬಲ ಇದ್ದಾಗಲೂ ಬಿಜೆಪಿ ಮತ್ತು ನರೇಂದ್ರ ಮೋದಿಯವರ ಸುಳ್ಳು ನೆರೇಟಿವ್‌ನಿಂದ ಕಾಂಗ್ರೆಸ್ ತೀವ್ರ ಹಿನ್ನಡೆ ಅನುಭವಿಸುವಂತಾಗಿತ್ತು. 2019ರ ಲೋಕಸಭಾ ಚುನಾವಣೆಯಲ್ಲಿ ಪಕ್ಷ ತುಸು ಚೇತರಿಸಿಕೊಂಡಿದ್ದರೂ ನಾಯಕ ರಾಹುಲ್ ಗಾಂಧಿಯವರು ಅಮೇಠಿ ಲೋಕಸಭಾ ಕ್ಷೇತ್ರದಲ್ಲಿ ಸೋಲನ್ನನುಭವಿಸಿದ್ದರು. ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕರಾಗಿದ್ದ ಮಲ್ಲಿಕಾರ್ಜುನ ಖರ್ಗೆಯವರಿಗೂ ಕಲಬುರ್ಗಿ ಲೋಕಸಭಾ ಕ್ಷೇತ್ರದಲ್ಲಿ ಸೋಲಾಗಿತ್ತು. ಬಿಜೆಪಿಯ ಕುತಂತ್ರ ರಾಜಕಾರಣದ ಭಾಗವಾಗಿ ಅವರಿಬ್ಬರಿಗೆ ತಾತ್ಕಾಲಿಕ ಹಿನ್ನಡೆಯಾಗಿತ್ತು.

ಮನಮೋಹನ್ ಸಿಂಗ್ ನೇತೃತ್ವದ ಸರಕಾರ 2004ರಿಂದ 2014ರವರೆಗೆ ಅತ್ಯುತ್ತಮ ಆಡಳಿತ ನೀಡಿತ್ತು. ಭಾರತದಲ್ಲಿ ಹಲವು ಕ್ರಾಂತಿಕಾರಿ ಸುಧಾರಣೆ ತಂದಿತ್ತು. ಆಹಾರ ಭದ್ರತಾ ಕಾಯ್ದೆ, ಆರ್‌ಟಿಇ ಕಾಯ್ದೆ ಸೇರಿದಂತೆ ಹಲವಾರು ಮಹತ್ವದ ತೀರ್ಮಾನಗಳಿಂದ ಜನಸಾಮಾನ್ಯರಿಗೆ ಸಾಕಷ್ಟು ಒಳ್ಳೆಯದಾಗಿತ್ತು. ಯುಪಿಎ ಮೈತ್ರಿಕೂಟದ ಆ ಸರಕಾರದಲ್ಲಿ ಡಿಎಂಕೆ ಪಾಲುದಾರ ಪಕ್ಷವಾಗಿತ್ತು. ಆ ಪಕ್ಷದ ಸಚಿವರ ಕೆಲವು ತಪ್ಪು ನಿರ್ಧಾರಗಳನ್ನು ಸಾಮಾಜಿಕ ಹೋರಾಟಗಾರ ಅಣ್ಣಾ ಹಝಾರೆ, ಪ್ರಶಾಂತ್ ಭೂಷಣ್, ಆಮ್ ಆದ್ಮಿ ಪಾರ್ಟಿಯ ಅರವಿಂದ ಕೇಜ್ರಿವಾಲ್ ಅಗತ್ಯಕ್ಕಿಂತ ಹೆಚ್ಚು ಅಪಪ್ರಚಾರ ಮಾಡಿದರು. ಯುಪಿಎ ಮೈತ್ರಿಕೂಟದ ಮೊದಲ ಅವಧಿಯ (2004-2009) ಸರಕಾರ ಅಪಪ್ರಚಾರಕ್ಕೆ ಬಲಿಯಾಗಿರಲಿಲ್ಲ. 2013ರಲ್ಲಿ ಭಾರತೀಯ ಜನತಾ ಪಕ್ಷ ಪ್ರಧಾನಿ ಅಭ್ಯರ್ಥಿ ಎಂದು ನರೇಂದ್ರ ಮೋದಿಯವರ ಹೆಸರನ್ನು ತೇಲಿಬಿಟ್ಟಿತು. ಆಗ ಅವರು ಗುಜರಾತ್ ಮುಖ್ಯಮಂತ್ರಿಯಾಗಿದ್ದರು. ಗುಜರಾತ್ ಮಾಡೆಲ್ ಎಂದು ಹೇಳುತ್ತಲೇ ವಿವಾದಗಳಿಂದ ಸುದ್ದಿಯಲ್ಲಿದ್ದರು. ಅಣ್ಣಾ ಹಝಾರೆ, ಪ್ರಶಾಂತ್ ಭೂಷಣ್, ಅರವಿಂದ ಕೇಜ್ರಿವಾಲ್‌ರ ಅಪಪ್ರಚಾರದ ಸರಕನ್ನು ಅನಾಮತ್ತಾಗಿ ಕೈಗೆತ್ತಿಕೊಂಡ ನರೇಂದ್ರ ಮೋದಿಯವರು ಕಾಂಗ್ರೆಸ್ ಪಕ್ಷ ಮತ್ತು ಯುಪಿಎ ಸರಕಾರದ ವಿರುದ್ಧ ನಂಬಬಹುದಾದ ಕಥೆಗಳನ್ನು ಕಟ್ಟಿದರು. ಅಭಿವೃದ್ಧಿ ಮಂತ್ರ ಜಪಿಸಿದರು. ವಿಕಾಸ ಪುರುಷನಂತೆ ಬಿಂಬಿಸಿಕೊಂಡರು.

ನರೇಂದ್ರ ಮೋದಿ ಮತ್ತು ಬಿಜೆಪಿಯ ಅಪಪ್ರಚಾರದ ತಂಡ ಕಟ್ಟಿದ ಕಥೆಗಳಿಗೆ ಉತ್ತರ ನೀಡುವಷ್ಟರಲ್ಲಿ 2014ರ ಲೋಕಸಭಾ ಚುನಾವಣೆ ಮುಗಿದು ಹೋಗಿತ್ತು. ಮೋದಿಯವರು ಬಿತ್ತಿದ ಅಭಿವೃದ್ಧಿಯ ಕನಸುಗಳನ್ನು ಮತದಾರರು ನಂಬಿದ್ದರು. 1984ರ ಲೋಕಸಭೆಯ ಚುನಾವಣೆಯ ನಂತರ ನಡೆದ ಯಾವ ಚುನಾವಣೆಯಲ್ಲೂ ಯಾವ ಪಕ್ಷಕ್ಕೂ ಸರಳ ಬಹುಮತ ದೊರೆತಿರಲಿಲ್ಲ. 1984ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ 414ರ ಸಂಸದರ ಬಲ ದೊರಕಿತ್ತು. ಅದೊಂದು ಐತಿಹಾಸಿಕ ದಾಖಲೆ. 1989ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಸಂಖ್ಯಾಬಲ 197ಕ್ಕೆ ಕುಸಿದಿತ್ತು. ಆ ಚುನಾವಣೆಯಲ್ಲಿ ವಿ.ಪಿ. ಸಿಂಗ್ ನೇತೃತ್ವದ ಜನತಾದಳ 143 ಸ್ಥಾನ ಗಳಿಸಿ ಮೈತ್ರಿ ಸರಕಾರ ರಚಿಸಿತ್ತು. 30 ವರ್ಷಗಳ ನಂತರ 2014ರಲ್ಲಿ ನರೇಂದ್ರ ಮೋದಿ ನೇತೃತ್ವದ ಸರಳ ಬಹುಮತದ ಸರಕಾರ ಅಸ್ತಿತ್ವಕ್ಕೆ ಬಂದಿತ್ತು. 2014ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮಾತ್ರವಲ್ಲ ಯುಪಿಎ ಮೈತ್ರಿಕೂಟಕ್ಕೇ ಭಾರೀ ಹಿನ್ನಡೆಯಾಗಿತ್ತು. ಆದರೆ ಆ ಚುನಾವಣೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು ಕಲಬುರ್ಗಿ ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದರು. ಕಾಂಗ್ರೆಸ್ ಪಕ್ಷದ ಸಂಸದ ಬಲ 44ಕ್ಕೆ ಕುಸಿದಿತ್ತು. 162 ಸ್ಥಾನಗಳು ನಷ್ಟವಾಗಿದ್ದವು. ಯುಪಿಎ ಸಂಖ್ಯಾಬಲ 59ಕ್ಕೆ ಇಳಿದಿತ್ತು. ಕಾಂಗ್ರೆಸ್ ಪಕ್ಷಕ್ಕೆ ಅಧಿಕೃತ ವಿರೋಧ ಪಕ್ಷದ ಸ್ಥಾನಮಾನವೂ ದೊರೆತಿರಲಿಲ್ಲ. ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕರಾಗಿ ಮಲ್ಲಿಕಾರ್ಜುನ ಖರ್ಗೆಯವರು ಆಯ್ಕೆಯಾದರು. ಮೋದಿ ಸರಕಾರದ ವಿರುದ್ಧದ ಅವರ ಹೋರಾಟ ಅಲ್ಲಿಂದಲೇ ಶುರುವಾಯಿತು.

ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕರಾಗಿ ಆಯ್ಕೆಯಾದ ಖರ್ಗೆಯವರು ಅಧಿಕೃತ ವಿರೋಧ ಪಕ್ಷದ ನಾಯಕನ ಸ್ಥಾನಮಾನ ಮತ್ತು ಸವಲತ್ತುಗಳು ದೊರೆಯದಿದ್ದರೂ ಮೋದಿ ನೇತೃತ್ವದ ಬಿಜೆಪಿ ಸರಕಾರವನ್ನು ‘ಬೆತ್ತಲೆ’ಗೊಳಿಸುವಲ್ಲಿ ಯಶಸ್ವಿಯಾಗಿದ್ದರು. ಎಲ್ಲಾ ಆಯಾಮಗಳಲ್ಲೂ ಮೋದಿ ಸರಕಾರದ ಹುಳುಕುಗಳನ್ನು ಅನಾವರಣಗೊಳಿಸುತ್ತಿದ್ದರು. ಖರ್ಗೆಯವರ ತಯಾರಿ, ಪ್ರಸ್ತುತಪಡಿಸುವ ಶೈಲಿ ಮತ್ತು ನೇರ ನಿಷ್ಠುರ ನುಡಿಗೆ ಮೋದಿ ಹೈರಾಣಾಗುತ್ತಿದ್ದರು. ಖರ್ಗೆಯವರ ಪಕ್ಷ ನಿಷ್ಠೆ, ರಾಜಿರಹಿತ ಹೋರಾಟ, ಮೋದಿ ಸರಕಾರಕ್ಕೆ ಹೆಜ್ಜೆ ಹೆಜ್ಜೆಗೂ ಮುಜುಗರಕ್ಕೀಡು ಮಾಡಿತ್ತು. ಆ ಕಾರಣಕ್ಕೆ ಮೋದಿ ಮತ್ತವರ ತಂಡ ಮಲ್ಲಿಕಾರ್ಜುನ ಖರ್ಗೆ ಅವರನ್ನು ಟಾರ್ಗೆಟ್ ಮಾಡಿತು. 2019ರ ಲೋಕಸಭಾ ಚುನಾವಣೆಯಲ್ಲಿ ಕಲಬುರ್ಗಿ ಮತಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ ಶಾಸಕನನ್ನೇ ಕಣಕ್ಕಿಳಿಸಿತು. ಚಿಂಚೋಳಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಉಮೇಶ್ ಜಾದವ್ ಅವರನ್ನು ಆಪರೇಷನ್ ಕಮಲದ ಮೂಲಕ ಪಕ್ಷಾಂತರ ಮಾಡಿಸಿ ಖರ್ಗೆಯವರ ವಿರುದ್ಧ ಬಿಜೆಪಿ ಅಭ್ಯರ್ಥಿಯನ್ನಾಗಿಸಿ ಗೆಲ್ಲಿಸಿಕೊಂಡರು. ಮೋದಿಯವರ ಕುತಂತ್ರಕ್ಕೆ ಮೊದಲ ಸೋಲು ಕಂಡ ಖರ್ಗೆಯವರನ್ನು ಕಾಂಗ್ರೆಸ್ ಹೈಕಮಾಂಡ್ ಕೈ ಬಿಡಲಿಲ್ಲ. ಖರ್ಗೆಯವರ ಸಾಮರ್ಥ್ಯದ ಅರಿವಿದ್ದ ಕಾಂಗ್ರೆಸ್ ಮುಖಂಡರು ಅವರನ್ನು ರಾಜ್ಯಸಭಾ ಸದಸ್ಯರನ್ನಾಗಿ ನಾಮನಿರ್ದೇಶನ ಮಾಡಿದರು. ಅಷ್ಟು ಮಾತ್ರವಲ್ಲ; ರಾಜ್ಯಸಭೆಯಲ್ಲಿ ಪ್ರತಿಪಕ್ಷದ ನಾಯಕನನ್ನಾಗಿಸಿದರು. 2019ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಯುಪಿಎ ತುಸು ಚೇತರಿಸಿಕೊಂಡಿತ್ತಾದರೂ ಹೆಚ್ಚಿನ ಬಲ ಸಿಕ್ಕಿರಲಿಲ್ಲ. ಕಾಂಗ್ರೆಸ್ ಸಂಸದರ ಸಂಖ್ಯಾಬಲ 52 ಮತ್ತು ಯುಪಿಎ ಬಲ 91ಕ್ಕೆ ಏರಿತ್ತು. ಆದರೆ ಈ ಬಾರಿಯೂ ಲೋಕಸಭೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅಧಿಕೃತ ವಿರೋಧ ಪಕ್ಷದ ನಾಯಕನ ಸ್ಥಾನಮಾನ ದೊರೆತಿರಲಿಲ್ಲ.

ಮಲ್ಲಿಕಾರ್ಜುನ ಖರ್ಗೆಯವರನ್ನು ಕಾಂಗ್ರೆಸ್ ಹೈಕಮಾಂಡ್ ಅಖಿಲ ಭಾರತ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರನ್ನಾಗಿ ಆಯ್ಕೆ ಮಾಡುವ ಮೂಲಕ ಜಾಣ ನಡೆ ಅನುಸರಿಸಿತು. 1969ರಿಂದ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಮತ್ತು ಕ್ರಿಯಾಶೀಲ ನಾಯಕರಾಗಿ ದುಡಿಯುತ್ತ ಬಂದ ಖರ್ಗೆಯವರ ಸುದೀರ್ಘ ಸಂಘಟನಾ ಅನುಭವವನ್ನು ಬಳಸಿಕೊಳ್ಳಲು ನಿರ್ಧರಿಸಿದ್ದೇ ಹೊಸ ತಿರುವಿಗೆ ಕಾರಣವಾಯಿತು. ಪಕ್ಷವನ್ನು ಕಾಲದ ಅಗತ್ಯಕ್ಕೆ ತಕ್ಕಂತೆ ಸಂಘಟಿಸತೊಡಗಿದರು. ಕಾರ್ಯಕರ್ತರಲ್ಲಿ ಆತ್ಮವಿಶ್ವಾಸ ಮೂಡಿಸಲು ಯತ್ನಿಸಿದರು. ರಾಹುಲ್ ಗಾಂಧಿಯವರ ‘ಭಾರತ ಜೋಡೊ ಯಾತ್ರೆ’, ‘ನ್ಯಾಯ ಯಾತ್ರೆ’ ಪೂರಕವಾಗಿ ನಿಂತವು. ಯುಪಿಎ (ಯುನೈಟೆಡ್ ಪ್ರೊಗ್ರೆಸಿವ್ ಅಲಯನ್ಸ್) ಹೆಸರನ್ನು ‘ಇಂಡಿಯಾ’ ಎಂದು ಬದಲಿಸುವ ಮೂಲಕ ಇತ್ಯಾತ್ಮಕ ನಡಿಗೆ ಆರಂಭಿಸಿದರು. ‘ಇಂಡಿಯಾ’ ಹೆಸರೇ ಎನ್‌ಡಿಎ ಮೈತ್ರಿಕೂಟದ ಆತ್ಮಬಲ ಕುಗ್ಗಿಸಿತು. ಮಾತ್ರವಲ್ಲ ‘ಇಂಡಿಯಾ’ ಮೈತ್ರಿಕೂಟದ ಬಲ ಹೆಚ್ಚುವಂತೆ ಮಾಡಿತು. ಮೈತ್ರಿಕೂಟವನ್ನು ಪುನರ್ ಸಂಘಟಿಸುವಲ್ಲಿ ಖರ್ಗೆಯವರು ಪ್ರಮುಖ ಪಾತ್ರ ವಹಿಸಿದ್ದಾರೆ. ‘ಇಂಡಿಯಾ’ ಮೈತ್ರಿಕೂಟದಲ್ಲಿ ಒಡಕು ಮೂಡಿಸಲು ಮೋದಿ ಮತ್ತವರ ಮಾಧ್ಯಮಗಳು ಶಕ್ತಿಮೀರಿ ಪ್ರಯತ್ನಿಸಿವೆ. ಖರ್ಗೆಯವರ ಬದ್ಧತೆ ಕಾಂಗ್ರೆಸ್ ಪಕ್ಷವನ್ನು, ‘ಇಂಡಿಯಾ’ ಮೈತ್ರಿಕೂಟವನ್ನು ಸಮರ್ಥವಾಗಿ ಮುನ್ನಡೆಯುವಂತೆ ಮಾಡಿತು. ಮೈತ್ರಿಕೂಟದ ವ್ಯಾಪ್ತಿ ವಿಸ್ತರಿಸಿತು. ಒಟ್ಟು 22 ಪಕ್ಷಗಳ ಈ ಮೈತ್ರಿಕೂಟದಲ್ಲಿ ಕಾಂಗ್ರೆಸ್, ಸಮಾಜವಾದಿ ಪಕ್ಷ, ಶಿವ ಸೇನಾ ಉದ್ಧವ್ ಬಣ, ಎನ್‌ಸಿಪಿ ಶರದ್ ಪವಾರ್ ಬಣ, ಆರ್‌ಜೆಡಿ, ಆಮ್ ಆದ್ಮಿ ಪಾರ್ಟಿ, ಸಿಪಿಐ(ಎಂ), ಜೆಎಂಎಂ, ಸಿಪಿಐ(ಎಮ್‌ಎಲ್), ಜಮ್ಮು ಮತ್ತು ಕಾಶ್ಮೀರ ನ್ಯಾಷನಲ್ ಕಾನ್ಫರೆನ್ಸ್, ಟಿಎಂಸಿ, ವಿಸಿಕೆ, ಡಿಎಂಕೆ, ಫಾರ್ವರ್ಡ್ ಬ್ಲಾಕ್, ಅಸ್ಸಾಂ ಜಾತಿಯ ಪರಿಷತ್, ಭಾರತ್ ಆದಿವಾಸಿ ಪಾರ್ಟಿ, ಇಂಡಿಯನ್ ಮುಸ್ಲಿಮ್ ಲೀಗ್, ಕೆಎಂಕೆ, ಎಂಡಿಎಂಕೆ, ರಾಷ್ಟ್ರೀಯ ಲೋಕ ತಾಂತ್ರಿಕ ಪಾರ್ಟಿ ಒಗ್ಗಟ್ಟು ಪ್ರದರ್ಶಿಸಿದವು.

ಖರ್ಗೆಯವರು ಕಾಂಗ್ರೆಸ್ ಪಕ್ಷವನ್ನು ಸಮರ್ಥವಾಗಿ ಮುನ್ನಡೆಸಿದ್ದರ ಪ್ರತಿಫಲವಾಗಿ ಹಿಮಾಚಲ ಪ್ರದೇಶದಲ್ಲಿ ಮೊದಲ ಗೆಲುವು ಪ್ರಾಪ್ತವಾಯಿತು. 68 ಸದಸ್ಯ ಬಲದ ಹಿಮಾಚಲ ವಿಧಾನಸಭೆಯಲ್ಲಿ ಸರಳ ಬಹುಮತಕ್ಕೆ 35 ಶಾಸಕರು ಸಾಕು. ಆದರೆ ಕಾಂಗ್ರೆಸ್ ಪಕ್ಷ 40 ಶಾಸಕರ ಬಲದೊಂದಿಗೆ ಸರಕಾರ ರಚಿಸಿತು. ಹಾಗೆ ನೋಡಿದರೆ ಅದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರ ತವರು ರಾಜ್ಯ. ಅಲ್ಲಿ ಬಿಜೆಪಿ ಹೀನಾಯವಾಗಿ ಸೋತಿತು.

ಕಾಂಗ್ರೆಸ್ ಗೆಲುವಿನ ಓಟ ದಕ್ಷಿಣದ ತೆಲಂಗಾಣ ರಾಜ್ಯದಲ್ಲಿಯೂ ಮುಂದುವರಿಯಿತು. 119 ಸಂಖ್ಯಾಬಲದ ತೆಲಂಗಾಣ ವಿಧಾನಸಭೆಯಲ್ಲಿ ಕಾಂಗ್ರೆಸ್‌ಗೆ 69 ಸ್ಥಾನಗಳು ದೊರೆತವು. ಮೈತ್ರಿ ಪಕ್ಷ ಸಿಪಿಐ ಒಂದು ಸ್ಥಾನದಲ್ಲಿ ಗೆಲುವು ಸಾಧಿಸಿತ್ತು. ಬಿಆರ್‌ಎಸ್, ಬಿಜೆಪಿ ಪ್ರಯತ್ನಕ್ಕೆ ಯಶಸ್ಸು ದೊರೆಯಲಿಲ್ಲ. ತೆಲಂಗಾಣದಲ್ಲಿ ಕಾಂಗ್ರೆಸ್ ಸರಕಾರ ಅಸ್ತಿತ್ವಕ್ಕೆ ಬಂತು. ಮಲ್ಲಿಕಾರ್ಜುನ ಖರ್ಗೆಯವರ ತವರು ರಾಜ್ಯ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ 136 ಶಾಸಕರ ಬಲದೊಂದಿಗೆ ಅಧಿಕಾರ ಹಿಡಿಯಿತು. ಅಬ್ಬರದ ಪ್ರಚಾರ, ಕೋಮು ಧ್ರುವೀಕರಣದ ಯತ್ನದ ಹೊರತಾಗಿಯೂ ಬಿಜೆಪಿ ಕರ್ನಾಟಕದಲ್ಲಿ ಮುಗ್ಗರಿಸಿತು. ಖರ್ಗೆಯವರು ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿದ್ದರಿಂದಲೇ ಕರ್ನಾಟಕದಲ್ಲಿ ಪಕ್ಷಕ್ಕೆ ದಾಖಲೆಯ ಗೆಲುವು ಪ್ರಾಪ್ತವಾಯಿತು.

ನರೇಂದ್ರ ಮೋದಿ ನೇತೃತ್ವದ ಬಿಜೆಪಿ 2024ರ ಲೋಕಸಭಾ ಚುನಾವಣೆ ಗೆದ್ದೇಬಿಟ್ಟಿದೆ ಎಂಬಂತೆ ಮಾಧ್ಯಮಗಳಲ್ಲಿ ಪ್ರಚಾರ ಪಡೆದುಕೊಂಡಿತು. ಅಬ್ಬರದ ಪ್ರಚಾರ, ‘ಚಾರ್ ಸೌ ಪಾರ್’ ಸ್ಲೋಗನ್, ಒಪಿನಿಯನ್ ಪೋಲ್, ಎಕ್ಸಿಟ್ ಪೋಲ್‌ಗಳು ಪ್ರತಿಪಕ್ಷಗಳನ್ನು ಅಧೀರಗೊಳಿಸುತ್ತಿದ್ದವು. ಕಾಂಗ್ರೆಸ್ ಪಕ್ಷದ ಆತ್ಮವಿಶ್ವಾಸ ಕುಗ್ಗಿಸುವ ಮಾತುಗಳು, ಧರ್ಮದ ಅಫೀಮು, ರಾಮನಾಮ ಜಪ, ಚುನಾವಣಾ ಪ್ರಚಾರದ ವೈಖರಿ ನೋಡಿಯೇ ಪ್ರತಿಪಕ್ಷಗಳು ಸೋಲೊಪ್ಪಿಕೊಳ್ಳುವ ವಾತಾವರಣ ನಿರ್ಮಾಣವಾಗಿತ್ತು. ಅಂತಹ ದುರಿತ ಕಾಲದಲ್ಲೂ ಖರ್ಗೆಯವರು ಎದೆಗುಂದದೆ ಕಾಂಗ್ರೆಸ್ ಪಕ್ಷವನ್ನು, ‘ಇಂಡಿಯಾ’ ಮೈತ್ರಿಕೂಟವನ್ನು ಸಮರ್ಥವಾಗಿ ಮುನ್ನಡೆಸಿದರು. ಸೀಟು ಹಂಚಿಕೆಯ ಸವಾಲನ್ನು ಎದುರಿಸಿ ಪ್ರತಿ ನೆರೇಟಿವ್ ಸೃಷ್ಟಿಸುವಲ್ಲಿ ಕಾಂಗ್ರೆಸ್ ಪಕ್ಷ ಮತ್ತು ಖರ್ಗೆಯವರು ಯಶಸ್ವಿಯಾದರು. ಸಂವಿಧಾನ ತಿದ್ದುಪಡಿ ಮಾಡುತ್ತಾರೆ, ಸಂವಿಧಾನ ಉಳಿಸಲು ಮತ ಹಾಕಿ ಎಂಬ ಕಾಂಗ್ರೆಸ್ ಪಕ್ಷದ ಅಪಿಲ್ ಬಾಣದಂತೆ ನಾಟಿತು. 10 ವರ್ಷಗಳ ನಂತರ ಕಾಂಗ್ರೆಸ್ ಪಕ್ಷದ ಸಂಸದರ ಬಲ 99ಕ್ಕೇರಿತು. ‘ಇಂಡಿಯಾ’ ಮೈತ್ರಿಕೂಟದ ಬಲ 234ಕ್ಕೆ ತಲುಪಿತು. ಕಾಂಗ್ರೆಸ್‌ಗೆ 47 ಸಂಸದರು ಹೆಚ್ಚುವರಿಯಾಗಿ ದೊರೆತರು. ‘ಇಂಡಿಯಾ’ ಮೈತ್ರಿಕೂಟದಲ್ಲಿ 112 ಸಂಸದರು ಸೇರಿ ಬಲ ಹೆಚ್ಚಿಸಿದರು. ಎನ್‌ಡಿಎ ಮೈತ್ರಿಕೂಟದ ಮತಪ್ರಮಾಣ ಶೇ. 42.5ಕ್ಕೆ ನಿಂತರೆ, ‘ಇಂಡಿಯಾ’ ಮೈತ್ರಿಕೂಟದ ಮತ ಪ್ರಮಾಣ ಶೇ. 40.6ಕ್ಕೆ ತಲುಪಿತು. ನರೇಂದ್ರ ಮೋದಿ ಅಹಂಕಾರಕ್ಕೆ ಈ ಚುನಾವಣಾ ಫಲಿತಾಂಶ ತಕ್ಕ ಪಾಠ ಕಲಿಸಿತು. ಬಿಜೆಪಿ ಸಂಸದರ ಬಲ 303ರಿಂದ 240ಕ್ಕೆ ಕುಸಿಯಿತು. ಬಿಜೆಪಿಗೆ ಸರಳ ಬಹುಮತವೂ ದೊರೆಯಲಿಲ್ಲ. ಮಿತ್ರಪಕ್ಷಗಳ ಹಂಗಿನಲ್ಲಿ ಸರಕಾರ ನಡೆಸುವ ಅನಿವಾರ್ಯತೆ ಸೃಷ್ಟಿಯಾಗಿದೆ. ಅಷ್ಟರ ಮಟ್ಟಿಗೆ ಖರ್ಗೆಯವರ ಅವಿರತ ಶ್ರಮ ಫಲ ನೀಡಿತು. ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿಯವರ ಕ್ರಿಯಾಶೀಲ ಭಾಗವಹಿಸುವಿಕೆಯೂ ಪ್ರಮುಖ ಪಾತ್ರ ವಹಿಸಿದೆ.

ಮಲ್ಲಿಕಾರ್ಜುನ ಖರ್ಗೆಯವರು ಸೈದ್ಧಾಂತಿಕ ಬದ್ಧತೆಯ ಕಾರಣಕ್ಕೆ ಕಾಂಗ್ರೆಸ್ ಪಕ್ಷವನ್ನು, ‘ಇಂಡಿಯಾ’ ಕೂಟವನ್ನು ತಲೆಯೆತ್ತಿ ನಡೆಯುವಂತೆ ಮಾಡಿದ್ದಾರೆ. ಕಲ್ಯಾಣ ಕರ್ನಾಟಕದಲ್ಲಿ ಐದಕ್ಕೆ ಐದೂ ಲೋಕಸಭಾ ಕ್ಷೇತ್ರಗಳನ್ನು ಗೆಲ್ಲಿಸಿಕೊಂಡಿದ್ದಾರೆ. ಖರ್ಗೆಯವರು ಕೋಮುವಾದಿ ಶಕ್ತಿಯನ್ನು ಹಿಮ್ಮೆಟ್ಟಿಸುವಲ್ಲಿ ಮಹತ್ತರ ಪಾತ್ರ ವಹಿಸುತ್ತಿರುವಾಗ ಕರ್ನಾಟಕದ ಕಾಂಗ್ರೆಸಿಗರು ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಬಲ ನೀಡಬೇಕಿತ್ತು. ಕರ್ನಾಟಕದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಇದೆ. ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಮಿಟಿಗೆ ಡಿ.ಕೆ. ಶಿವಕುಮಾರ್ ಅವರು ಅಧ್ಯಕ್ಷರು. ಅಹಿಂದ ನಾಯಕ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಒಕ್ಕಲಿಗರ ನಾಯಕ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಜೋಡಿ ಶಾಸಕರನ್ನು, ಮಂತ್ರಿಗಳನ್ನು ಹದ್ದುಬಸ್ತಿನಲ್ಲಿಟ್ಟು ಹೆಚ್ಚುವರಿ ಶ್ರಮ ಹಾಕಿದ್ದರೆ 25 ಲೋಕಸಭಾ ಕ್ಷೇತ್ರಗಳನ್ನು ಗೆಲ್ಲುವ ಸಾಧ್ಯತೆ ಇತ್ತು.

2014ರ ಲೋಕಸಭಾ ಚುನಾವಣೆ ನಡೆಯುವಾಗ ಕರ್ನಾಟಕದಲ್ಲಿ ಸಿದ್ದರಾಮಯ್ಯನವರೇ ಮುಖ್ಯಮಂತ್ರಿಯಾಗಿದ್ದರು. ಆಗ ನರೇಂದ್ರ ಮೋದಿ ಅಲೆ ಪ್ರಬಲವಾಗಿತ್ತು. ಕೆಪಿಸಿಸಿಗೆ ಅತ್ಯಂತ ಸಂಭಾವಿತ ಡಾ.ಜಿ. ಪರಮೇಶ್ವರ್ ಅವರು ಅಧ್ಯಕ್ಷರಾಗಿದ್ದರು. ಆ ಚುನಾವಣೆಯಲ್ಲೂ ರಾಜ್ಯದಿಂದ ಕಾಂಗ್ರೆಸ್ ಪಕ್ಷ 9 ಸಂಸದರನ್ನು ಗೆಲ್ಲಿಸಿ ಕೊಟ್ಟಿತ್ತು. ಸಿದ್ದರಾಮಯ್ಯನವರ ತವರು ಜಿಲ್ಲೆ-ಮೈಸೂರು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯ ಹೊಸ ಅಭ್ಯರ್ಥಿ ಪ್ರತಾಪ ಸಿಂಹ ಗೆಲುವು ಸಾಧಿಸಿದ್ದರು. ಆಗ ಕಾಂಗ್ರೆಸ್ ಶಾಸಕರ ಸಂಖ್ಯಾಬಲ 122 ಇತ್ತು. 2024ರ ಲೋಕಸಭಾ ಚುನಾವಣೆ ಎದುರಿಸುವಾಗ ಕಾಂಗ್ರೆಸ್ 136 ಶಾಸಕರನ್ನು ಹೊಂದಿತ್ತು. ಈ ಚುನಾವಣೆಯಲ್ಲೂ ಕರ್ನಾಟಕದಲ್ಲಿ ಕಾಂಗ್ರೆಸ್ 9 ಲೋಕಸಭಾ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ಅದರಲ್ಲಿ ಐದು ಜನ ಮಲ್ಲಿಕಾರ್ಜುನ ಖರ್ಗೆಯವರ ಕಲ್ಯಾಣ ಕರ್ನಾಟಕದಲ್ಲಿ ಗೆದ್ದಿದ್ದಾರೆ. ಚಿಕ್ಕೋಡಿ ಲೋಕಸಭಾ ಕ್ಷೇತ್ರ ಸತೀಶ್ ಜಾರಕಿಹೊಳಿಯವರ ಪ್ರತಿಷ್ಠೆಯ ಫಲವಾಗಿ ಗೆದ್ದಿದೆ. ಆ ಗೆಲುವಿನಲ್ಲಿ ಲಕ್ಷ್ಮಣ ಸವದಿಯವರ ಪಾಲೂ ಇಲ್ಲ. ಚಾಮರಾಜನಗರ ಗೆಲುವನ್ನು ಸಿಎಂ ಸಿದ್ದರಾಮಯ್ಯ ಮತ್ತು ಸಚಿವ ಮಹಾದೇವಪ್ಪನವರು ಹಂಚಿಕೊಳ್ಳಬಹುದೇನೋ? ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಬೆಂಗಳೂರು ಗ್ರಾಮಾಂತರದಲ್ಲಿ ಸ್ವತಃ ಸಹೋದರ ಡಿ.ಕೆ. ಸುರೇಶ್ ಅವರನ್ನೇ ಗೆಲ್ಲಿಸಿಕೊಳ್ಳಲಾಗಿಲ್ಲ. ಕಾಂಗ್ರೆಸ್ ಪಕ್ಷ ಅತಿಯಾಗಿ ಐದು ಗ್ಯಾರಂಟಿಗಳನ್ನು ಅವಲಂಬಿಸಿದ್ದರ ಫಲವಾಗಿ ಸೋಲು ಕಂಡಿದೆ.

2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಗೆಲುವಿಗೆ ಗ್ಯಾರಂಟಿಗಳು ಮಾತ್ರ ಕಾರಣವಾಗಿರಲಿಲ್ಲ. ಡಿ.ಕೆ. ಶಿವಕುಮಾರ್ ಅವರಿಗೆ ಮುಖ್ಯಮಂತ್ರಿಯಾಗುವ ಅವಕಾಶ ಸಿಗಬಹುದೇನೋ ಎಂಬ ಆಸೆಯಿಂದ ಒಕ್ಕಲಿಗ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್‌ಗೆ ಬೆಂಬಲಿಸಿತ್ತು. ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಸಿದ್ದರಿಂದ, ಬಿಜೆಪಿಯಲ್ಲಿ ಬಿ.ಎಲ್. ಸಂತೋಷ್ ಹಿಡಿತ ಬಲಗೊಂಡು ಜಗದೀಶ್ ಶೆಟ್ಟರ್ ಸೇರಿ ಅನೇಕ ಲಿಂಗಾಯತ ನಾಯಕರಿಗೆ ಟಿಕೆಟ್ ತಪ್ಪಿದ್ದರಿಂದ ಒಂದು ಪ್ರಮಾಣದಲ್ಲಿ ಲಿಂಗಾಯತರು ಕಾಂಗ್ರೆಸ್ ಬೆಂಬಲಿಸಿದ್ದರು. ಸಿದ್ದರಾಮಯ್ಯನವರ ಅಹಿಂದ ಫ್ಯಾಕ್ಟರ್, ಆಡಳಿತ ವಿರೋಧಿ ಅಲೆ, ಬಿಜೆಪಿಯ ಮುಸ್ಲಿಮ್ ವಿರೋಧಿ ನಿಲುವು ಕಾಂಗ್ರೆಸ್‌ಗೆ 136 ಶಾಸಕರ ಬಲ ದೊರೆಯುವಂತೆ ಮಾಡಿದ್ದವು. ಲೋಕಸಭಾ ಚುನಾವಣೆಯ ಹೊತ್ತಿಗೆ ಕರ್ನಾಟಕದ ರಾಜಕೀಯ ಸಮೀಕರಣ ಬದಲಾಯಿತು. ಬಿಜೆಪಿ-ಜೆಡಿಎಸ್ ಮೈತ್ರಿ ಮಾಡಿಕೊಂಡವು. ಬಿ.ಎಲ್. ಸಂತೋಷ್ ಹಿನ್ನೆಲೆಗೆ ಸರಿದು ಯಡಿಯೂರಪ್ಪ ಮುಖ್ಯ ಪಾತ್ರಧಾರಿಯಾದರು. ಅವರ ಮಗ ವಿಜಯೇಂದ್ರರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆ ನೀಡಿದರು. ಲಿಂಗಾಯತರು ಬಿಜೆಪಿ ಜೊತೆಗೆ, ಒಕ್ಕಲಿಗರು ಕುಮಾರಸ್ವಾಮಿ ಪರವಾದರು. ಮೋದಿ ಆಡಳಿತ ವಿರೋಧಿ ಅಲೆ, ಆರೆಸ್ಸೆಸ್ ಮುಖಂಡರು ಬಿಜೆಪಿ ವಿರುದ್ಧ ಪ್ರಚಾರ ಮಾಡಿದ್ದನ್ನೂ ಕಾಂಗ್ರೆಸ್ ನಾಯಕರು ಬಳಸಿಕೊಳ್ಳಲಿಲ್ಲ.

ಈಶ್ವರ ಖಂಡ್ರೆ, ಶರಣ ಪ್ರಕಾಶ್ ಪಾಟೀಲ್, ಪ್ರಿಯಾಂಕ್ ಖರ್ಗೆ, ಬಿ. ನಾಗೇಂದ್ರ ಸೇರಿದಂತೆ ಬೆರಳೆಣಿಕೆಯ ಮಂತ್ರಿಗಳು ಚುನಾವಣೆಯನ್ನು ಗಂಭೀರವಾಗಿ ತೆಗೆದುಕೊಂಡಿದ್ದರು. ಗ್ಯಾರಂಟಿ ಹೊರೆಯಿಂದ ಅನುದಾನ ಸಿಗುತ್ತಿಲ್ಲವೆಂದು ಕಾಂಗ್ರೆಸ್ ಶಾಸಕರು ನಿರಾಸಕ್ತಿ ಹೊಂದಿದ್ದರು. ಎಂ.ಬಿ. ಪಾಟೀಲ್, ಲಕ್ಷ್ಮೀ ಹೆಬ್ಬಾಳ್ಕರ್, ಶಿವಾನಂದ ಪಾಟೀಲ್, ಸಂತೋಷ್ ಲಾಡ್, ಚೆಲುವರಾಯಸ್ವಾಮಿ, ಡಿ. ಸುಧಾಕರ್, ಕೃಷ್ಣಬೈರೇಗೌಡ ಸೇರಿದಂತೆ ಬಹುಪಾಲು ಮಂತ್ರಿಗಳು ಅತ್ಯುತ್ತಮ ಕೆಲಸಗಳಿಂದ ಜನಪ್ರೀತಿ ಗಳಿಸುವಲ್ಲಿ ವಿಫಲರಾದರು. ಬಹುಪಾಲು ಮಂತ್ರಿಗಳು ಪ್ರತಿನಿಧಿಸುವ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳಿಗೆ ಲೀಡ್ ದೊರೆತಿದೆ. ಇದೇ ಪ್ರವೃತ್ತಿ ಮುಂದುವರಿದರೆ 2028ರ ಹೊತ್ತಿಗೆ ಬಿಜೆಪಿ-ಜೆಡಿಎಸ್ ಮೈತ್ರಿಗೆ ಮತದಾರ ಬೆಂಬಲಿಸಿದರೂ ಆಶ್ಚರ್ಯ ಪಡಬೇಕಿಲ್ಲ. ಈ ಸೋಲಿನ ನೈತಿಕ ಹೊಣೆಯನ್ನು ಕಾಂಗ್ರೆಸ್ ನಾಯಕರು ಹೊರಬೇಕು.

ಮಲ್ಲಿಕಾರ್ಜುನ ಖರ್ಗೆ ಅವರು ಬಿಕ್ಕಟ್ಟಿನ ದಿನಗಳಲ್ಲೂ ಕಾಂಗ್ರೆಸ್ ಮತ್ತು ‘ಇಂಡಿಯಾ’ ಕೂಟವನ್ನು ಮುನ್ನಡೆಸಿ ಒಂದು ಹಂತದ ಯಶಸ್ಸು ದೊರಕಿಸಿ ಕೊಟ್ಟಿದ್ದಾರೆ. ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿರುವ ಖರ್ಗೆಯವರು ಕರ್ನಾಟಕ ರಾಜಕಾರಣದಲ್ಲಿ ಆಸಕ್ತರಾಗಿದ್ದಾರೋ ಇಲ್ಲವೋ ತಿಳಿದಿಲ್ಲ. ನಿರಾಸಕ್ತಿ ಯೋಗದಲ್ಲಿರುವ ಸಿಎಂ ಸಿದ್ದರಾಮಯ್ಯ, ಒಕ್ಕಲಿಗ ಸಮುದಾಯದ ನೆೆಲೆ ಕಳೆದುಕೊಂಡಿರುವ ಡಿ.ಕೆ. ಶಿವಕುಮಾರ್ ಗಿಂತಲೂ ಬಿಜೆಪಿ-ಜೆಡಿಎಸ್ ಮೈತ್ರಿಯ ನಾಗಾಲೋಟಕ್ಕೆ ಕಡಿವಾಣ ಹಾಕುವ ಅನುಭವ ಬದ್ಧತೆ, ಕ್ರಿಯಾಶೀಲತೆ ಇರುವುದು ಮಲ್ಲಿಕಾರ್ಜುನ ಖರ್ಜಿಯವರಿಗೆ ಮಾತ್ರ. ಇಲ್ಲದಿದ್ದರೆ ಕರ್ನಾಟಕ ಕೋಮುವಾದಿಗಳ ವಶವಾಗುವುದು ಗ್ಯಾರಂಟಿ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ಡಾ. ರಾಜಶೇಖರ ಹತಗುಂದಿ

contributor

Similar News