ಎಂ.ಪಿ. ಎಲೆಕ್ಷನ್: ಕಾರ್ಯಕರ್ತರ ಕಡೆಗಣನೆ...

ಕುಟುಂಬ ರಾಜಕಾರಣ ಬೇಡ ಎಂಬ ಆದರ್ಶಪ್ರಾಯ ಮಾದರಿಗಳು ಭಾರತದಲ್ಲಿ-ಕರ್ನಾಟಕದಲ್ಲಿ ವಿರಳ. ಪಕ್ಷದ ಕಾರ್ಯಕರ್ತರೇ ವಂಶದ ಕುಡಿಗಳು ಎಂದು ಭಾವಿಸಿ ರಾಜಕಾರಣ ಮಾಡಿದವರು ಕಡಿಮೆ. ಹೀಗಿದ್ದೂ ಮಾಜಿ ಮುಖ್ಯಮಂತ್ರಿಗಳಾಗಿದ್ದ ಎಸ್. ನಿಜಲಿಂಗಪ್ಪ, ಕಡಿದಾಳು ಮಂಜಪ್ಪ, ಬಿ.ಡಿ. ಜತ್ತಿ, ರಾಮಕೃಷ್ಣ ಹೆಗಡೆ ಮುಂತಾದವರು ಮಕ್ಕಳನ್ನು ರಾಜಕಾರಣಕ್ಕೆ ತರಲಿಲ್ಲ. ಕಮ್ಯುನಿಸ್ಟ್ ನಾಯಕರು ಮಾತ್ರ ಪಕ್ಷದ ಕಾರ್ಯಕರ್ತರನ್ನೇ ಮಕ್ಕಳೆಂದು ಬೆಳೆಸಿದ ನಿದರ್ಶನಗಳಿವೆ. ಸಿಪಿಐನ ಶ್ರೀನಿವಾಸ್ ಕುಲಕರ್ಣಿ, ಗುಡಿಮಾಮಾ ಕೆ.ಬಿ. ಶಾಣಪ್ಪ ಅವರಂಥ ಕಾರ್ಯಕರ್ತರನ್ನು ಮಕ್ಕಳಂತೆ ಬೆಳೆಸಿದ ಬೆರಳೆಣಿಕೆಯ ನಿದರ್ಶನಗಳು ದೊರೆಯುತ್ತವೆ. ಇದು ಎಲ್ಲರಿಗೂ ಮಾದರಿಯಾಗಬೇಕು.

Update: 2024-03-23 04:05 GMT

ಭಾರತ ದೇಶಕ್ಕೆ ಸ್ವಾತಂತ್ರ್ಯ ಲಭಿಸಿ 75 ವರ್ಷಗಳೇ ಕಳೆದು ‘ಆಝಾದಿ ಕಾ ಅಮೃತ ಮಹೋತ್ಸವ’ವನ್ನು ಅದ್ಧೂರಿಯಾಗಿ ಆಚರಿಸಲಾಯಿತು. ಪ್ರಜಾಪ್ರಭುತ್ವದ ಒಟ್ಟಾಶಯ ಇನ್ನೂ ಸಾಕಾರಗೊಂಡಿಲ್ಲ. ಈ ದೇಶದ ಕಟ್ಟಕಡೆಯ ಮನುಷ್ಯನ ವಿಮೋಚನೆ ಮರೀಚಿಕೆಯಾಗಿಯೇ ಉಳಿದಿದೆ. ಜನತಂತ್ರದ ಸಾಧ್ಯತೆಗಳು ವಿಸ್ತರಣೆಯಾಗಿವೆ. ಆದರೆ ಪಟ್ಟಭದ್ರ ಶಕ್ತಿಗಳು ಜನತಂತ್ರವನ್ನು ನಿಯಂತ್ರಿಸುತ್ತಿವೆ. ಚಹಾ ಮಾರುವ ಹುಡುಗ ಈ ದೇಶದ ಪ್ರಧಾನಿಯಾಗಿ ಆಯ್ಕೆಯಾಗಿದ್ದು ಜನತಂತ್ರದ ಪವಾಡವೇ ಸರಿ. ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಭಾರತೀಯ ಜನತಾ ಪಕ್ಷದಲ್ಲೂ ಸಾಮಾನ್ಯ ಕಾರ್ಯಕರ್ತರ ಕಡೆಗಣನೆಯಾಗುತ್ತಿದೆ. ಹಾಗೆ ನೋಡಿದರೆ ಮೋದಿ, ಅಮಿತ್ ಶಾ, ಜೆ.ಪಿ. ನಡ್ಡಾ ಸೇರಿದಂತೆ ಬಿಜೆಪಿಯ ಈಗಿನ ಬಹುಪಾಲು ಮುಖಂಡರು ಪಕ್ಷದ ಸಾಮಾನ್ಯ ಕಾರ್ಯಕರ್ತರಾಗಿದ್ದು ಈ ಮಟ್ಟಕ್ಕೆ ಬೆಳೆದು ನಿಂತಿದ್ದಾರೆ. ಬಿಜೆಪಿ ಅಂಬೆಗಾಲಿಡುತ್ತಿದ್ದಾಗ ಪಕ್ಷದಲ್ಲಿ ಸಾಮಾನ್ಯ ಕಾರ್ಯಕರ್ತರಿಗೆ ಬಹಳ ಕಿಮ್ಮತ್ತು ಇತ್ತು. ಪಕ್ಷ ಅಧಿಕಾರ ಸ್ಥಾನಕ್ಕೆ ಹತ್ತಿರವಾಗುತ್ತಾ ಹೋದಂತೆ ಕಾರ್ಯಕರ್ತರು ಹಿಂದಕ್ಕೆ ಸರಿಯದೊಡಗಿದರು. ಅಷ್ಟಕ್ಕೂ ಬಿಜೆಪಿ ಮತ್ತು ಎಲ್ಲ ಕಾಂಗ್ರೆಸೇತರ ಪಕ್ಷಗಳು ರಾಜಕೀಯ ಅಸ್ತಿತ್ವ ಕಂಡುಕೊಂಡಿದ್ದು, ಪ್ರವರ್ಧಮಾನಕ್ಕೆ ಬಂದಿದ್ದು ಕಾಂಗ್ರೆಸ್ ಪಕ್ಷದ ವಂಶಾಡಳಿತ ಸರ್ವಾಧಿಕಾರಿ ನಡೆಯನ್ನು ವಿರೋಧಿಸಿ.

ಸ್ವಾತಂತ್ಯಾನಂತರ ಈ ದೇಶದ ಅಧಿಕಾರ ಚುಕ್ಕಾಣಿ ಹಿಡಿದ ಆರಂಭದ ವರ್ಷಗಳಲ್ಲಿ ಕಾಂಗ್ರೆಸ್ ಪಕ್ಷ ಎಲ್ಲ ಹಿರಿಯ-ಕಿರಿಯ ಸ್ವಾತಂತ್ರ್ಯ ಹೋರಾಟಗಾರರನ್ನು ಒಳಗೊಂಡಿತ್ತು. ಪಕ್ಷದಲ್ಲಿ ಒಬ್ಬ ನಾಯಕ ಮತ್ತು ಒಂದು ಕುಟುಂಬದ ಹಿಡಿತ ಬಲಗೊಳ್ಳುತ್ತಿದ್ದಂತೆ ಡಾ. ಬಾಬಾ ಸಾಹೇಬ್ ಅಂಬೇಡ್ಕರ್, ರಾಮ್ ಮನೋಹರ ಲೋಹಿಯಾ, ಜಯಪ್ರಕಾಶ್ ನಾರಾಯಣ್ ಸೇರಿದಂತೆ ಭಿನ್ನ ವಿಚಾರಧಾರೆಯ ಹಲವು ಹಿರಿಯ ನಾಯಕರು ಕಾಂಗ್ರೆಸ್ ತೊರೆದು ಬೇರೆ ಬೇರೆ ಪಕ್ಷಗಳಲ್ಲಿ ಗುರುತಿಸಿಕೊಂಡರು. ಕಮ್ಯುನಿಸ್ಟರು ಮೊದಲಿನಿಂದಲೂ ಪ್ರತ್ಯೇಕ ಧಾರೆಯಲ್ಲೇ ಸಂಘಟಿತರಾಗಿದ್ದರು. ಈ ಹೊತ್ತಿನ ಬಿಜೆಪಿಯವರಿಗೆ ಆದರ್ಶಪ್ರಾಯರಾಗಿರುವ ಶ್ಯಾಮಪ್ರಸಾದ್ ಮುಖರ್ಜಿ, ದೀನದಯಾಳ್ ಉಪಾಧ್ಯಾಯರು ಆಗಿನ ಸರಕಾರದ ಭಾಗವಾಗಿದ್ದರು. ಜವಾಹರ ಲಾಲ್ ನೆಹರೂ ಅವರ ಉತ್ತರಾಧಿಕಾರಿ ಶ್ರೀಮತಿ ಇಂದಿರಾಗಾಂಧಿ ಅವರು ಪಕ್ಷ ಮತ್ತು ಸರಕಾರದ ಮೇಲೆ ಹಿಡಿತ ಸಾಧಿಸುತ್ತಾ ಹೋದಂತೆ ವಂಶಾಡಳಿತದ ವಿರುದ್ಧ ಜನಾಂದೋಲನವೇ ಹುಟ್ಟಿಕೊಂಡಿತು. ಈ ಜನಾಂದೋಲನದ ಭಾಗವಾಗಿದ್ದ ಮುಲಾಯಂ ಸಿಂಗ್ ಯಾದವ್, ಲಾಲು ಪ್ರಸಾದ್ ಯಾದವ್, ಎಚ್.ಡಿ. ದೇವೇಗೌಡರು ಸೇರಿದಂತೆ ಹಲವರು ರಾಜಕೀಯದಲ್ಲಿ ಎತ್ತರಕ್ಕೆ ಬೆಳೆದರು. ಆರಂಭದ ವರ್ಷಗಳಲ್ಲಿ ವಂಶಾಡಳಿತವನ್ನು ನಖಶಿಖಾಂತ ವಿರೋಧಿಸಿದ ಈ ಮುಖಂಡರು ಅಧಿಕಾರ ರಾಜಕಾರಣದ ಭಾಗವಾಗುತ್ತಲೇ ಅನುಯಾಯಿಗಳು, ನಿಷ್ಠಾವಂತ ಕಾರ್ಯಕರ್ತರನ್ನು ದೂರ ಮಾಡಿ ಮಕ್ಕಳು, ಮೊಮ್ಮಕ್ಕಳನ್ನು ರಾಜಕೀಯದಲ್ಲಿ ಬೆಳೆಸತೊಡಗಿದರು. ಉತ್ತರದ ಚೌಧರಿ ಚರಣ್ ಸಿಂಗ್ ಅವರಿಂದ ಹಿಡಿದು ದಕ್ಷಿಣದ ಕರುಣಾನಿಧಿ ಕುಟುಂಬದವರೆಗೂ ವಂಶಾಡಳಿತ ವ್ಯಾಪಕವಾಗಿ ಆವರಿಸಿತು.

ವಂಶಾಡಳಿತ ಗಂಗೋತ್ರಿಯಂತಿರುವ ಕಾಂಗ್ರೆಸ್ ಪಕ್ಷವನ್ನು ಮೀರಿಸುವ ರೀತಿಯಲ್ಲಿ ಕಾಂಗ್ರೆಸೇತರ ಪಕ್ಷಗಳು ಕುಟುಂಬ ರಾಜಕಾರಣವನ್ನೇ ಉಸಿರಾಡುತ್ತಿವೆ. ಕುಟುಂಬ ರಾಜಕಾರಣದ ಉಗ್ರವಿರೋಧಿ ಬಿಜೆಪಿಯೂ ಅಪ್ಪ-ಮಕ್ಕಳು, ಅಳಿಯಂದಿರಿಗೆ ಮನೆ ಹಾಕುತ್ತಿದೆ. ಪಕ್ಷದ ನಿಷ್ಠಾವಂತ ಕಾರ್ಯಕರ್ತರನ್ನು ನಿರಂತರವಾಗಿ ಕಡೆಗಣಿಸುತ್ತಿರುವುದಕ್ಕೆ ನೂರಾರು ನಿದರ್ಶನ ಕೊಡಬಹುದು. ಪಿಯೂಷ್ ಗೋಯಲ್, ಧರ್ಮೇಂದ್ರ ಪ್ರಧಾನ್, ಪಂಕಜಾ ಮುಂಡೆ, ರಾಜನಾಥ್ ಸಿಂಗ್ ಅವರ ಮಗ, ಪ್ರಮೋದ್ ಮಹಾಜನ್ ಅವರ ಪುತ್ರಿ ರಾಜಕಾರಣದಲ್ಲಿ ಬೆಳೆದು ನಿಂತಿದ್ದು ಡಿಎನ್‌ಎ ರಾಜಕಾರಣಕ್ಕೆ. ಬಿಜು ಜನತಾದಳದ ನವೀನ್ ಪಟ್ನಾಯಕ್ ಡಿಎನ್‌ಎ ಫಲಾನುಭವಿ. ಬಿಎಸ್‌ಪಿಯ ಮಾಯಾವತಿ, ಟಿಎಂಸಿಯ ಮಮತಾ ಬ್ಯಾನರ್ಜಿ ಸಾಮಾನ್ಯ ಕಾರ್ಯಕರ್ತರ ನೆಲೆಯಿಂದ ಬೆಳೆದವರು. ಆದರೆ ಅವರಿಗೂ ಕುಟುಂಬ ವ್ಯಾಮೋಹ ಬಿಡುತ್ತಿಲ್ಲ. ಅವರನ್ನು ಈ ಮಟ್ಟಕ್ಕೆ ಬೆಳೆಸಿದ ನಿಷ್ಠಾವಂತ ಕಾರ್ಯಕರ್ತರು ಅವಕಾಶ ಪಡೆಯಲು ಸಾಧ್ಯವಾಗುತ್ತಿಲ್ಲ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕಾಂಗ್ರೆಸ್ ಪಕ್ಷದ ವಂಶಾಡಳಿತದ ಬಗ್ಗೆ ಗಟ್ಟಿಯಾಗಿ ಮಾತನಾಡುವ ನೈತಿಕತೆಯನ್ನೇ ಕಳೆದುಕೊಳ್ಳುತ್ತಿದ್ದಾರೆ. ಬಿಜೆಪಿ ವಂಶಾಡಳಿತವನ್ನು ತಾತ್ವಿಕವಾಗಿ ವಿರೋಧಿಸುತ್ತಲೇ ಕುಟುಂಬ ರಾಜಕಾರಣವನ್ನು ನಿತ್ಯ ಉಸಿರಾಡುವ ಚಿರಾಗ್ ಪಾಸ್ವಾನ್, ಉತ್ತರಪ್ರದೇಶದ ಅಪ್ನಾದಳ, ಕರ್ನಾಟಕದ ಜೆಡಿಎಸ್, ಆಂಧ್ರಪ್ರದೇಶದ ಟಿಡಿಪಿಯ ಚಂದ್ರಬಾಬು ನಾಯ್ಡು ಅವರ ಜೊತೆ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಂಡಿದೆ.

ಕಾಂಗ್ರೆಸ್, ಬಿಜೆಪಿ ಮತ್ತು ಇನ್ನಿತರ ಪ್ರಾದೇಶಿಕ ಪಕ್ಷಗಳು ಕುಟುಂಬದವರ ಹಿತ ಮೊದಲು, ನಿಷ್ಠಾವಂತ ಕಾರ್ಯಕರ್ತರು ನಂತರ ಎಂಬ ಧೋರಣೆಯನ್ನು ನಿರ್ಲಜ್ಜವಾಗಿ ಅನುಷ್ಠಾನಗೊಳಿಸುತ್ತಿವೆ. ಕರ್ನಾಟಕದ ರಾಜಕೀಯ ವಿದ್ಯಮಾನಗಳನ್ನೇ ಗಮನಿಸಿ: ದೇವೇಗೌಡ ಮತ್ತು ಕುಮಾರಸ್ವಾಮಿಯವರು ಜೆಡಿಎಸ್ ಮುನ್ನಡೆಸುತ್ತಿದ್ದಾರೆ. ಪ್ರತೀ ಸಾರ್ವಜನಿಕ ಸಭೆಯಲ್ಲಿ ಉಭಯ ನಾಯಕರು ‘‘ಪಕ್ಷದ ಕಾರ್ಯಕರ್ತರೇ ನಮ್ಮ ಶಕ್ತಿ ಅವರ ಕ್ರಿಯಾಶೀಲತೆ ಮತ್ತು ಬದ್ಧತೆಯ ಕಾರಣ ಪಕ್ಷ ಉಳಿದುಕೊಂಡಿದೆ’’ ಎಂದು ಕಣ್ಣೀರು ಹರಿಸುತ್ತಾ ಹೇಳುತ್ತಲೇ ಇರುತ್ತಾರೆ. ಆದರೆ ಚುನಾವಣಾ ಸಂದರ್ಭದಲ್ಲಿ ನಿಶ್ಚಿತವಾಗಿ ಗೆಲ್ಲುವ ಕ್ಷೇತ್ರಗಳಲ್ಲಿ ಪಕ್ಷದ ನಿಷ್ಠಾವಂತ ಕಾರ್ಯಕರ್ತರನ್ನು ಕಣಕ್ಕಿಳಿಸಿ ಗೆಲ್ಲಿಸಿಕೊಳ್ಳುವ ಪ್ರಯತ್ನ ಮಾಡುವುದೇ ಇಲ್ಲ. ದೇವೇಗೌಡ, ಕುಮಾರಸ್ವಾಮಿ, ರೇವಣ್ಣ, ಅನಿತಾ ಕುಮಾರಸ್ವಾಮಿ, ಪ್ರಜ್ವಲ್ ರೇವಣ್ಣ ಅವರ ಗೆಲುವಿಗಾಗಿ ಶ್ರಮಿಸುವ ಪಕ್ಷದ ಸಾಮಾನ್ಯ ಕಾರ್ಯಕರ್ತರಿಗೆ ಟಿಕೆಟ್ ನೀಡಬೇಕು, ಅವರನ್ನೂ ಸಂಸದೀಯ ಪ್ರಜಾಪ್ರಭುತ್ವದ ಮುಖ್ಯವಾಹಿನಿಗೆ ತರಬೇಕೆಂದು ಅನಿಸುವುದೇ ಇಲ್ಲ. ಜೆಡಿಎಸ್ ಕಾರ್ಯಕರ್ತರ ಶ್ರಮ, ಬದ್ಧತೆ ಮತ್ತು ತ್ಯಾಗದ ಕಾರಣಕ್ಕೆ ದೇವೇಗೌಡರು ಈ ದೇಶದ ಪ್ರಧಾನಿಯಾಗಲು ಸಾಧ್ಯವಾಯಿತು. ಮಗ ಕುಮಾರಸ್ವಾಮಿ ಎರಡು ಬಾರಿ ಮುಖ್ಯಮಂತ್ರಿಯಾದರು. ಇನ್ನೊಬ್ಬ ಮಗ ರೇವಣ್ಣ ಹಲವು ಬಾರಿ ಪ್ರಮುಖ ಖಾತೆಗಳಿಗೆ ಮಂತ್ರಿಯಾಗಿದ್ದರು. ಮೊಮ್ಮಗ ಪ್ರಜ್ವಲ್ ಲೋಕಸಭೆಯನ್ನು ಪ್ರವೇಶಿಸಿದರು. ಆದರೆ ಜೆಡಿಎಸ್‌ನ ನಿಷ್ಠಾವಂತ ಕಾರ್ಯಕರ್ತ ಪಕ್ಷಕ್ಕಾಗಿ ದುಡಿಯುತ್ತಲೇ ಇದ್ದಾನೆ.

ಕರ್ನಾಟಕದಲ್ಲಿ ಬಿಜೆಪಿ ಮತ್ತಷ್ಟು ಭೀಕರವಾಗಿದೆ. ಬಿಜೆಪಿಯ ಬೆಳವಣಿಗೆಯಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ಪಾತ್ರ ನಿರ್ಣಾಯಕವಾದುದು ಎಂದೇ ಒಪ್ಪಿಕೊಳ್ಳೋಣ. ಆದರೆ ಅವರೊಂದಿಗೆ ಪಕ್ಷದ ಕಾರ್ಯಕರ್ತರು ನಿಷ್ಠೆಯಿಂದ ದುಡಿಯದಿದ್ದರೆ ಯಡಿಯೂರಪ್ಪ ಶಿಕಾರಿಪುರದಲ್ಲಿ ಶಾಸಕರು ಆಗಲು ಸಾಧ್ಯವಾಗುತ್ತಿತ್ತೇ? ರಾಜ್ಯಾದ್ಯಂತ ಬಿಜೆಪಿ ಕಾರ್ಯಕರ್ತರು, ಅದರ ಅಂಗಸಂಸ್ಥೆಗಳ ಪದಾಧಿಕಾರಿಗಳು ಕ್ರಿಯಾಶೀಲವಾಗಿ ತೊಡಗಿಸಿಕೊಳ್ಳದಿದ್ದರೆ ಪಕ್ಷ ಅಧಿಕಾರಕ್ಕೆ ಬರಲು ಸಾಧ್ಯವಾಗುತ್ತಿತ್ತೇ? ಪಕ್ಷಕ್ಕೆ ಹೆಚ್ಚು ಶಾಸಕರ ಬಲ ಸಿಗದೇ ಹೋಗಿದ್ದರೆ ಯಡಿಯೂರಪ್ಪ ಒಂದಲ್ಲ, ಎರಡಲ್ಲ ನಾಲ್ಕು ಬಾರಿ ಮುಖ್ಯಮಂತ್ರಿಯಾಗಲು ಸಾಧ್ಯವಾಗುತ್ತಿತ್ತೇ? ಯಡಿಯೂರಪ್ಪ ಮುಖ್ಯಮಂತ್ರಿಯಾದ ಮೇಲೆ ಮಕ್ಕಳಾದ ರಾಘವೇಂದ್ರ, ವಿಜಯೇಂದ್ರ ದಿಢೀರ್ ಕಾಣಿಸಿಕೊಂಡರು. ಎಷ್ಟು ಬೇಕೋ ಅಷ್ಟು ಬಾಚಿಕೊಂಡು ಶ್ರೀಮಂತರಾದರು. ಅಂತಿಂಥ ಶ್ರೀಮಂತರಲ್ಲ, ಸಾವಿರಾರು ಕೋಟಿ ರೂ.ಗಳಿಗೆ ಒಡೆಯರು. ಒಂದೇ ಒಂದು ಸಲ ಪಕ್ಷದ ಸಂಘಟನೆಗಾಗಿ ದುಡಿಯಲಿಲ್ಲ. ಲಾಟಿ ಏಟು ತಿನ್ನಲಿಲ್ಲ. ಕೇಸು ಹಾಕಿಸಿಕೊಳ್ಳಲಿಲ್ಲ. ಸೆರೆವಾಸ ಅನುಭವಿಸಲಿಲ್ಲ. ಅನಾಯಾಸವಾಗಿ ರಾಘವೇಂದ್ರ ಶಿವಮೊಗ್ಗ ಲೋಕಸಭಾ ಸದಸ್ಯರಾದರು. ವಿಜಯೇಂದ್ರ ಶಾಸಕರಾಗಿ ಪಕ್ಷದ ರಾಜ್ಯಾಧ್ಯಕ್ಷರಾಗಿ ದರ್ಬಾರು ನಡೆಸುತ್ತಿದ್ದಾರೆ.

ಪಕ್ಷಕ್ಕಾಗಿ ದುಡಿದವರು, ವಿವಿಧ ಸಂಘಟನೆಗಳು ಆಯೋಜಿಸುವ ಉಗ್ರ ಸ್ವರೂಪದ ಹೋರಾಟಗಳಲ್ಲಿ ಭಾಗವಹಿಸಿ ಮನೆಮಠ ಕಳೆದುಕೊಂಡವರು, ಅದೆಷ್ಟೋ ಸಂಖ್ಯೆಯ ನಿಷ್ಠಾವಂತ ಕಾರ್ಯಕರ್ತರು ಅಧಿಕಾರಕ್ಕೆ ಹತ್ತಿರವಾಗಲು ಸಾಧ್ಯವಾಗಿಯೇ ಇಲ್ಲ. ಬಿಜೆಪಿಯಲ್ಲಿ 40 ವರ್ಷಗಳ ಕಾಲ ದುಡಿದ ಅಸಂಖ್ಯಾತ ಕಾರ್ಯಕರ್ತರಿಗೆ ಒಂದೇ ಒಂದು ಬಾರಿ ಶಾಸಕರಾಗಲು ಅವಕಾಶ ಸಿಕ್ಕಿಲ್ಲ. ಹಣ ಬಾಲ, ಜಾತಿ ಬಲ ಮತ್ತಿತರ ಬಲವುಳ್ಳ ಹಲವರು ಶಾಸಕ, ಮಂತ್ರಿಯಾಗಿ ನಿವೃತ್ತಿಯೂ ಹೊಂದಿದ್ದಾರೆ. ಯಡಿಯೂರಪ್ಪ ಯಾರ ಮೇಲೆ ಕೃಪಾದೃಷ್ಟಿ ಬೀರಿದ್ದಾರೋ ಅವರೆಲ್ಲ ಉದ್ಧಾರವಾಗಿದ್ದಾರೆ. ಯಾರ ಮೇಲೆ ವಕ್ರದೃಷ್ಟಿ ಹರಿಸಿದ್ದಾರೋ ಅವರೆಲ್ಲ ಸರ್ವನಾಶವಾಗಿದ್ದಾರೆ. ಶೋಭಾ ಕರಂದ್ಲಾಜೆಯವರು ಅತ್ಯಂತ ಕಿರಿಯ ವಯಸ್ಸಿನಲ್ಲಿಯೇ ಶಾಸಕಿಯಾಗಿ, ಪ್ರಭಾವಿ ಖಾತೆಗಳ ಮಂತ್ರಿಯಾಗಿ, ಎರಡು ಬಾರಿ ಲೋಕಸಭಾ ಸದಸ್ಯರಾಗಿ ಕೇಂದ್ರದಲ್ಲಿ ಮಂತ್ರಿಯೂ ಆದರು. ಅಷ್ಟಾಗಿಯೂ ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಗಾಗಿ ತ್ಯಾಗ ಮಾಡಬೇಕೆಂಬ ಔದಾರ್ಯ ತೋರಲಿಲ್ಲ. ಶಿವಮೊಗ್ಗದ ಭಾರತಿ ಶೆಟ್ಟಿ ಪಕ್ಷದ ಸಂಘಟನೆಗಾಗಿ ಅದ್ಯಾವ ಪರಿಯಲ್ಲಿ ಸೇವೆ ಸಲ್ಲಿಸಿದರೋ ಯಡಿಯೂರು ಸಿದ್ದಲಿಂಗೇಶ ಅವರೇ ಬಲ್ಲರು. ಎರಡೆರಡು ಬಾರಿ ವಿಧಾನಪರಿಷತ್ ಸದಸ್ಯರಾದರು. ಒಮ್ಮೆಯೂ ಸದನದಲ್ಲಿ ಉತ್ತಮ ಸಂಸದೀಯ ಪಟು ಅನಿಸಿಕೊಳ್ಳಲೇ ಇಲ್ಲ.

ಬಸವರಾಜ ಬೊಮ್ಮಾಯಿ ಜನತಾ ಪರಿವಾರದಲ್ಲಿದ್ದವರು. ಅಪ್ಪನ ಹೆಸರಲ್ಲಿ ಎರಡು ಬಾರಿ ವಿಧಾನ ಪರಿಷತ್ ಸದಸ್ಯರಾದರು. ಜನತಾದಳ ಸಂಘಟನೆಗಾಗಿ ಯಾವತ್ತೂ ಕಷ್ಟಪಟ್ಟು ದುಡಿದವರಲ್ಲ. ಅಲ್ಲಿ ಅವಕಾಶಗಳಿಲ್ಲ ಎಂದು ತಿಳಿಯುತ್ತಲೇ ಭಾರತೀಯ ಜನತಾ ಪಕ್ಷ ಸೇರಿದರು. ಬಿಜೆಪಿಯೊಂದಿಗೆ ತಾತ್ವಿಕವಾಗಿ ಸಹಮತ ಹೊಂದಿರಲಿಲ್ಲ. ಬಿಜೆಪಿ ಸೇರುತ್ತಲೇ, ಶಿಗ್ಗಾವಿ ಮತಕ್ಷೇತ್ರದ ಟಿಕೆಟ್ ಗಿಟ್ಟಿಸಿಕೊಂಡರು. ದಶಕಗಳ ಕಾಲ ಪಕ್ಷಕ್ಕಾಗಿ ದುಡಿದವರಿಗೆ ಚಳ್ಳೆಹಣ್ಣು ತಿನ್ನಿಸಿ ಶಾಸಕರಾದರು. ಯಡಿಯೂರಪ್ಪ ಕೃಪೆಯಿಂದ ಸರಕಾರ ಬಂದಾಗಲೆಲ್ಲಾ ಅತ್ಯಂತ ಪ್ರಭಾವಿ ಖಾತೆಗಳ ಮಂತ್ರಿಯಾದರು. ಒಂದೇ ಒಂದು ಬಾರಿ ಬಿಜೆಪಿಯ ಪದಾಧಿಕಾರಿಯಾಗಿ ಪಕ್ಷ ಸಂಘಟನೆಗೆ ಬೆವರು ಸುರಿಸದ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಹುದ್ದೆಯನ್ನೂ ಅಲಂಕರಿಸಿದರು. ಹಾಗೆ ನೋಡಿದರೆ ಬೊಮ್ಮಾಯಿ ಅವರ ಆರೋಗ್ಯ ಸರಿಯಿಲ್ಲ. ಅನಾಯಾಸವಾಗಿ ಎಷ್ಟೆಲ್ಲಾ ಅಧಿಕಾರ ಅನುಭವಿಸಿದ್ದೇನೆ. ಮೇಲಾಗಿ ಹಾಲಿ ಶಾಸಕನಾಗಿದ್ದೇನೆ. ಪಕ್ಷಕ್ಕಾಗಿ ಶ್ರಮಿಸಿದ, ಶಿಗ್ಗಾವಿಯಲ್ಲಿ ನಾಲ್ಕು ಬಾರಿ ಗೆಲ್ಲಿಸಲು ಯತ್ನಿಸಿದ ಪಕ್ಷದ ನಿಷ್ಠಾವಂತ ಕಾರ್ಯಕರ್ತ ಹಾವೇರಿ ಸಂಸದನಾಗಲಿ ಎಂದು ಬೊಮ್ಮಾಯಿ ಮನಸ್ಸು ಹಂಬಲಿಸಲೇ ಇಲ್ಲ. ತಂತ್ರ ಕುತಂತ್ರ ಮಾಡಿ ಹಾವೇರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ. ಎಲ್ಲೋ ಇದ್ದ ಸಂಗಣ್ಣ ಕರಡಿಯವರಿಗೆ ಎರಡು ಬಾರಿ ಕೊಪ್ಪಳ ಲೋಕಸಭಾ ಸದಸ್ಯರಾಗುವ ಅವಕಾಶ ದೊರೆಯಿತು. ಅವರೂ ಪಕ್ಷದ ನಿಷ್ಠಾವಂತ ಕಾರ್ಯಕರ್ತರ ಬಗ್ಗೆ ಚಿಂತಿಸುತ್ತಿಲ್ಲ. ತನಗಾಗಿ ಕಣ್ಣೀರುಹಾಕುತ್ತಿದ್ದಾರೆ. ಜಿ.ಎಂ. ಸಿದ್ದೇಶ್ ಅವರು ದಾವಣಗೆರೆಯ ಟಿಕೆಟ್ ತನಗಾಗಿ ದುಡಿದ ಪಕ್ಷ ಕಾರ್ಯಕರ್ತರಿಗೆ ಬಿಟ್ಟುಕೊಡಲಿಲ್ಲ. ತನ್ನ ಹೆಂಡತಿಗೆ ಟಿಕೆಟ್ ಪಡೆದುಕೊಂಡರು.

ಹೆಂಡತಿ ಶಾಸಕಿಯಾಗಿದ್ದಾರೆ ಆದರೂ ಚಿಕ್ಕೋಡಿ ಲೋಕಸಭಾ ಕ್ಷೇತ್ರಕ್ಕೆ ಅಣ್ಣ ಸಾಹೇಬ ಜೊಲ್ಲೆ ಬಿಜೆಪಿ ಅಭ್ಯರ್ಥಿಯಾಗುತ್ತಾರೆ. ಉತ್ತರ ಕನ್ನಡ ಲೋಕಸಭಾ ಸಂಸದ ಅನಂತಕುಮಾರ್ ಹೆಗಡೆಗೆ ಆರೋಗ್ಯ ಕೈ ಕೊಟ್ಟಿದೆ. ಮೊದಲಿನ ಕ್ರಿಯಾಶೀಲತೆ ಉಳಿದಿಲ್ಲ. ಆದರೆ ‘ದೇಶಭಕ್ತ’ನಿಗೆ ಪಕ್ಷದ ನಿಷ್ಠಾವಂತ ಕಾರ್ಯಕರ್ತನಿಗೆ ಟಿಕೆಟ್ ತ್ಯಾಗ ಮಾಡುವ ದೊಡ್ಡ ಮನಸ್ಸು ಬರುವುದಿಲ್ಲ. ಕೇವಲ ಕೆ.ಎಂ.ಎಫ್. ಅಧ್ಯಕ್ಷ ಸ್ಥಾನ ಸಿಕ್ಕರೆ ಬದುಕು ಬಂಗಾರವಾಗುತ್ತದೆ ಎಂದು ಭಾವಿಸಿದ ಸದಾನಂದ ಗೌಡ ಮುಖ್ಯಮಂತ್ರಿಯಾದರು, ಮೂರು ಬಾರಿ ಸಂಸದರು, 7 ವರ್ಷ ಕೇಂದ್ರ ಮಂತ್ರಿಗಿರಿ, ಇಷ್ಟೆಲ್ಲ ಸಿಕ್ಕರೂ ಸದಾನಂದ ಗೌಡರ ಅರಣ್ಯರೋದನ ನಿಂತಿಲ್ಲ. ಬಿಜೆಪಿಯಲ್ಲಿ ಸಾಮಾನ್ಯ ಕಾರ್ಯಕರ್ತನಾಗಿದ್ದ ಬಳ್ಳಾರಿ ಮೂಲದ ಕೆ.ಎಸ್. ಈಶ್ವರಪ್ಪ ಶಿವಮೊಗ್ಗ ನಗರದ ಶಾಸಕನಾಗಿದ್ದೇ ಒಂದು ಪವಾಡ. ಶಾಸಕನಾಗಿ, ಪ್ರಭಾವಿ ಖಾತೆಗಳ ಮಂತ್ರಿಯಾಗಿ, ಉಪಮುಖ್ಯಮಂತ್ರಿಯಾಗಿ ಅಧಿಕಾರ ಅನುಭವಿಸಿದ ಈಶ್ವರಪ್ಪ ಮಗ ಕಾಂತೇಶ್‌ರನ್ನು ಎಂಪಿ ಮಾಡಲು ಹಂಬಲಿಸಿ ತಮ್ಮ ದೇಶಭಕ್ತಿಯ ಪರಿಯನ್ನು ಪ್ರದರ್ಶಿಸುತ್ತಿದ್ದಾರೆ. ಬಿಜೆಪಿ ಸೇರಿಕೊಳ್ಳದಿದ್ದರೆ ಚಿಕ್ಕನಾಯಕನಹಳ್ಳಿಯ ಮಾಧುಸ್ವಾಮಿ ಮಂತ್ರಿ ಭಾಗ್ಯ ಪಡೆಯುತ್ತಿರಲಿಲ್ಲ. ಆದರೆ ಈಗ ಎಂಪಿ ಟಿಕೆಟ್ ಸಿಗಲಿಲ್ಲವೆಂದು ಅರಚಾಡುತ್ತಿದ್ದಾರೆ. ಹೆದರಿಸಿದರೆ ಎಂಎಲ್‌ಸಿ ಮಾಡಿ ಪ್ರತಿಪಕ್ಷದ ನಾಯಕ ಸ್ಥಾನ ನೀಡಬಹುದೆಂಬ ದುರಾಸೆ ಅವರದ್ದು. ಹಿಂದಿ, ಇಂಗ್ಲಿಷ್ ಬಾರದ ವಿ. ಸೋಮಣ್ಣ ತುಮಕೂರು ಲೋಕಸಭೆ ಟಿಕೆಟ್ ಪಡೆದು ವರುಣಾ, ಚಾಮರಾಜನಗರದಲ್ಲಿ ಕಳೆದುಕೊಂಡ ಮಾನ ಮರಳಿ ಪಡೆಯುವ ಹುಂಬ ಹುಮ್ಮಸ್ಸು.

ಇನ್ನು ಕಾಂಗ್ರೆಸ್ ಪಕ್ಷದವರು ಪಕ್ಷಕ್ಕೆ ಕಾರ್ಯಕರ್ತರ ಅಗತ್ಯವೇ ಇಲ್ಲ ಎಂಬ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದಾರೆ. 1972ರಿಂದ ಕಲಬುರಗಿ ಜಿಲ್ಲೆಯ ಕಾಂಗ್ರೆಸ್ ಪಕ್ಷದ ಅಸಂಖ್ಯಾತ ಸಾಮಾನ್ಯ ಕಾರ್ಯಕರ್ತರು ಮಲ್ಲಿಕಾರ್ಜುನ ಖರ್ಗೆಯವರ ಗೆಲುವಿನಲ್ಲೇ ಖುಷಿ ಕಾಣುತ್ತಾ ಬಂದಿದ್ದಾರೆ. ಅಖಿಲ ಭಾರತ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿರುವ ಮಲ್ಲಿಕಾರ್ಜುನ ಖರ್ಗೆಯವರಿಗೆ ಕಲಬುರಗಿ ಲೋಕಸಭಾ ಕ್ಷೇತ್ರದಲ್ಲಿ ಪಕ್ಷದ ಸಾಮಾನ್ಯ ಕಾರ್ಯಕರ್ತನಿಗೆ ಟಿಕೆಟ್ ನೀಡಿ ಗೆಲ್ಲಿಸಿ ಕೊಳ್ಳಬೇಕು ಎಂದು ಅನಿಸಲೇ ಇಲ್ಲ. ಮಗ ಪ್ರಿಯಾಂಕ್ ಖರ್ಗೆ ಸಿದ್ದರಾಮಯ್ಯ ಸರಕಾರದಲ್ಲಿ ಅತ್ಯಂತ ಪ್ರಭಾವಿ ಮಂತ್ರಿ. ಕಲಬುರಗಿ ಲೋಕಸಭಾ ಟಿಕೆಟ್ ಅಳಿಯ ಉದ್ಯಮಿ ರಾಧಾಕೃಷ್ಣ ದೊಡ್ಡಮನಿ ಅವರಿಗೆ ನೀಡಿದ್ದಾರೆ. ಪಕ್ಷದ ಮಹಾನ್ ನಾಯಕರೇ ಕುಟುಂಬ ವ್ಯಾಮೋಹ ತೋರಿದರೆ ಉಳಿದವರು ಅನುಸರಿಸದೆ ಇರುತ್ತಾರೆಯೇ? ಮಹದೇವಪ್ಪ, ಈಶ್ವರ ಖಂಡ್ರೆ, ಸತೀಶ್ ಜಾರಕಿಹೊಳಿ, ಶಿವಾನಂದ ಪಾಟೀಲ್, ರಾಮಲಿಂಗಾ ರೆಡ್ಡಿ, ಲಕ್ಷ್ಮೀ ಹೆಬ್ಬಾಳ್ಕರ್ ಮಹಾನ್ ನಾಯಕನನ್ನು ಅನುಸರಿಸುತ್ತಿದ್ದಾರೆ. ಸುನೀಲ್ ಭೋಸ್, ಸಾಗರ್ ಖಂಡ್ರೆ, ಪ್ರಿಯಾಂಕಾ ಜಾರಕಿಹೊಳಿ, ಸಂಯುಕ್ತಾ ಪಾಟೀಲ್, ಸೌಮ್ಯಾರೆಡ್ಡಿ, ಮೃಣಾಲ್ ಹೆಬ್ಬಾಳ್ಕರ್ ಸಂಸತ್ ಪ್ರವೇಶಿಸುವ ಕನಸು ಕಾಣುತ್ತಿದ್ದಾರೆ. ಕೋಲಾರದ ಕೆ.ಎಚ್. ಮುನಿಯಪ್ಪ ಒಬ್ಬರನ್ನೇ ಟೀಕಿಸಿದರೆ ಹೇಗೆ? ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಮುಖಂಡರು ಪಕ್ಷದ ಕಾರ್ಯಕರ್ತರನ್ನು ಜೀತದಾಳುಗಳು ಎಂದು ಭಾವಿಸಿದಂತಿದೆ.

ಕುಟುಂಬ ರಾಜಕಾರಣ ಬೇಡ ಎಂಬ ಆದರ್ಶಪ್ರಾಯ ಮಾದರಿಗಳು ಭಾರತದಲ್ಲಿ-ಕರ್ನಾಟಕದಲ್ಲಿ ವಿರಳ. ಪಕ್ಷದ ಕಾರ್ಯಕರ್ತರೇ ವಂಶದ ಕುಡಿಗಳು ಎಂದು ಭಾವಿಸಿ ರಾಜಕಾರಣ ಮಾಡಿದವರು ಕಡಿಮೆ. ಹೀಗಿದ್ದೂ ಮಾಜಿ ಮುಖ್ಯಮಂತ್ರಿಗಳಾಗಿದ್ದ ಎಸ್. ನಿಜಲಿಂಗಪ್ಪ, ಕಡಿದಾಳು ಮಂಜಪ್ಪ, ಬಿ.ಡಿ. ಜತ್ತಿ, ರಾಮಕೃಷ್ಣ ಹೆಗಡೆ ಮುಂತಾದವರು ಮಕ್ಕಳನ್ನು ರಾಜಕಾರಣಕ್ಕೆ ತರಲಿಲ್ಲ. ಕಮ್ಯುನಿಸ್ಟ್ ನಾಯಕರು ಮಾತ್ರ ಪಕ್ಷದ ಕಾರ್ಯಕರ್ತರನ್ನೇ ಮಕ್ಕಳೆಂದು ಬೆಳೆಸಿದ ನಿದರ್ಶನಗಳಿವೆ. ಸಿಪಿಐನ ಶ್ರೀನಿವಾಸ್ ಕುಲಕರ್ಣಿ, ಗುಡಿಮಾಮಾ ಕೆ.ಬಿ. ಶಾಣಪ್ಪ ಅವರಂಥ ಕಾರ್ಯಕರ್ತರನ್ನು ಮಕ್ಕಳಂತೆ ಬೆಳೆಸಿದ ಬೆರಳೆಣಿಕೆಯ ನಿದರ್ಶನಗಳು ದೊರೆಯುತ್ತವೆ. ಇದು ಎಲ್ಲರಿಗೂ ಮಾದರಿಯಾಗಬೇಕು.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಡಾ. ರಾಜಶೇಖರ ಹತಗುಂದಿ

contributor

Similar News