ವಿಪಕ್ಷ ನಾಯಕ: ಜನ ಕಲ್ಯಾಣದ ಕಾವಲುಗಾರ
ವಿರೋಧ ಪಕ್ಷದ ನಾಯಕನೆಂದರೆ; ಜನಹಿತ ಮತ್ತು ಜನಕಲ್ಯಾಣದ ಕಾವಲುಗಾರನಿದ್ದಂತೆ. ಮುಖ್ಯಮಂತ್ರಿಗಿಂತ ಹೆಚ್ಚು ತಿಳುವಳಿಕೆ ಮತ್ತು ಸಮಸ್ಯೆಗಳ ಅರಿವಿರಬೇಕು. ಹೆಜ್ಜೆ ಹೆಜ್ಜೆಗೂ ಸರಕಾರದ ಲೋಪಗಳನ್ನು ಸಾಕ್ಷ್ಯಾಧಾರದ ಸಹಿತ ಜನತೆಯ ಮುಂದಿಡಬೇಕು. ಜನಸಾಮಾನ್ಯರ ‘ನಿಜದನಿ’ಯಾಗುವ ಅವಕಾಶ ಇರುವುದೇ ವಿರೋಧ ಪಕ್ಷದ ನಾಯಕನಿಗೆ.
ಅಂತೂ ಇಂತೂ ಕರ್ನಾಟಕ ಬಿಜೆಪಿ ತನ್ನ ಶಾಸಕಾಂಗ ಪಕ್ಷದ ನಾಯಕನನ್ನು ಆಯ್ಕೆ ಮಾಡಿಕೊಂಡಿದೆ. ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಒಂದು ರಾಷ್ಟ್ರೀಯ ಪಕ್ಷ ಆರು ತಿಂಗಳುಗಳ ಕಾಲ ತನ್ನ ಶಾಸಕಾಂಗ ಪಕ್ಷದ ನಾಯಕನನ್ನು ಆಯ್ಕೆ ಮಾಡಿಕೊಳ್ಳದೇ ಇರುವುದು ಇದೇ ಮೊದಲು. ಕರ್ನಾಟಕ ಮಾತ್ರವಲ್ಲ, ಇಡೀ ದೇಶದಲ್ಲಿ ಇದು ಅಪರೂಪದ ಪ್ರಸಂಗ. 2021ರಿಂದ 2023ರ ಕಾಲಾವಧಿಯಲ್ಲಿ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿ ಆಗಿದ್ದರು. ಬಿಜೆಪಿ ಶಾಸಕಾಂಗ ಪಕ್ಷದ ನಾಯಕರಾಗಿದ್ದ ಅವರ ನೇತೃತ್ವದಲ್ಲಿ 2023ರ ವಿಧಾನಸಭೆಯ ಚುನಾವಣೆಯನ್ನು ಎದುರಿಸಲಾಯಿತು. ಬೊಮ್ಮಾಯಿ ನೇತೃತ್ವಕ್ಕೆ ಕರ್ನಾಟಕದ ಜನ ಮನ್ನಣೆ ನೀಡಲಿಲ್ಲ. 2023ರ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿಗೆ ಹೀನಾಯ ಸೋಲಾಯಿತು. 135 ವಿಧಾನಸಭಾ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ ಕಾಂಗ್ರೆಸ್ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿಯಿತು. ಹಾಗೆ ನೋಡಿದರೆ, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ಅಷ್ಟೊಂದು ಸರಳವಾಗಿ ಆಗುತ್ತದೆ ಎಂದು ಯಾರೂ ಭಾವಿಸಿರಲಿಲ್ಲ. ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಮಿಟಿಯ ಅಧ್ಯಕ್ಷರಾಗಿ ಕ್ರಿಯಾಶೀಲರಾಗಿ ಕಾರ್ಯನಿರ್ವಹಿಸಿದ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಹುದ್ದೆಯ ಪ್ರಬಲ ಆಕಾಂಕ್ಷಿಯಾಗಿದ್ದರು. ಅಷ್ಟಕ್ಕೂ ಕಾಂಗ್ರೆಸ್ ಪಕ್ಷದಲ್ಲಿ ಸಾಮಾನ್ಯವಾಗಿ ಕೆಪಿಸಿಸಿ ಅಧ್ಯಕ್ಷರಾಗಿದ್ದವರೇ ಮುಖ್ಯಮಂತ್ರಿ ಹುದ್ದೆ ಅಲಂಕರಿಸುತ್ತಾರೆ. ಆದರೆ ಚುನಾವಣೆಗೂ ಮುನ್ನ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾಗಿದ್ದ ಸಿದ್ದರಾಮಯ್ಯನವರು ಅಪಾರ ಜನ ಬೆಂಬಲವುಳ್ಳ ಜನನಾಯಕ. ಅವರನ್ನು ಪಕ್ಕಕ್ಕೆ ಸರಿಸಲು ಸಾಧ್ಯವಾಗಿರಲಿಲ್ಲ. ಮೇಲಾಗಿ ಹೆಚ್ಚು ಶಾಸಕರ ಬೆಂಬಲ ಹೊಂದಿದ್ದರು. ಕಾಂಗ್ರೆಸ್ ಪಕ್ಷ ಶಾಸಕರ ಅಭಿಪ್ರಾಯ ಸಂಗ್ರಹಿಸಿ ‘ನಾಯಕನನ್ನು’ ಆಯ್ಕೆ ಮಾಡಿಯೇ ಬಿಟ್ಟಿತು. ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿ, ಡಿ.ಕೆ. ಶಿವಕುಮಾರ್ ಅವರು ಉಪಮುಖ್ಯಮಂತ್ರಿಯಾಗಿ ಆಯ್ಕೆಯಾದರು. ಅಷ್ಟು ಮಾತ್ರವಲ್ಲ ಪೂರ್ಣ ಪ್ರಮಾಣದ ಸಚಿವ ಸಂಪುಟ ರಚಿಸಿ ‘ಗ್ಯಾರಂಟಿ’ಗಳ ಅನುಷ್ಠಾನದತ್ತ ಚಿತ್ತಹರಿಸಿದರು.
ಚುನಾವಣೆಯ ನಂತರ ಬಿಜೆಪಿಗೆ ಶಾಸಕಾಂಗ ಪಕ್ಷದ ನಾಯಕನ ಆಯ್ಕೆಯಲ್ಲಿ ಗೊಂದಲಗಳೇ ಇರಬಾರದಿತ್ತು. ಯಾಕೆಂದರೆ ಚುನಾವಣಾ ಪೂರ್ವದಲ್ಲಿ ಬಸವರಾಜ ಬೊಮ್ಮಾಯಿಯವರು ಮುಖ್ಯಮಂತ್ರಿ ಆಗಿದ್ದರು. ಅವರ ನೇತೃತ್ವದಲ್ಲಿ ಚುನಾವಣೆ ಎದುರಿಸಿ 66 ಸ್ಥಾನಗಳಲ್ಲಿ ಗೆಲುವು ಕಂಡಿದ್ದರು. 2013ರ ಚುನಾವಣಾ ಫಲಿತಾಂಶಕ್ಕೆ ಹೋಲಿಸಿದರೆ ಇದು ಉತ್ತಮ ಸಾಧನೆಯಾಗಿತ್ತು. 2013ರ ಚುನಾವಣೆಯಲ್ಲಿ ಬಿಜೆಪಿ ಕೇವಲ 40 ಸ್ಥಾನಗಳನ್ನು ಗೆದ್ದು ವಿರೋಧ ಪಕ್ಷದ ನಾಯಕ ಸ್ಥಾನದಿಂದ ವಂಚಿತವಾಗಿತ್ತು. ಆಗ ಜಾತ್ಯತೀತ ಜನತಾದಳ ಕೂಡ 40 ಶಾಸಕರನ್ನು ಗೆಲ್ಲಿಸಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು. ಬಿಜೆಪಿಗೆ ಸಾಕಷ್ಟು ನಷ್ಟ ಉಂಟು ಮಾಡಿದ ಕೆಜೆಪಿ ಮತ್ತದರ ನಾಯಕ ಯಡಿಯೂರಪ್ಪ ಕೇವಲ ಆರು ಶಾಸಕರನ್ನು ಇಟ್ಟುಕೊಂಡು ಗುಡುಗುತ್ತಿದ್ದರು. ಅಷ್ಟಕ್ಕೂ 2013ರ ಚುನಾವಣೆಯಲ್ಲಿ ಬಿಜೆಪಿಗೆ ಪ್ರಹ್ಲಾದ್ ಜೋಶಿಯವರು ಅಧ್ಯಕ್ಷರಾಗಿದ್ದರು. ಚುನಾವಣಾ ಪೂರ್ವದಲ್ಲಿ ಜಗದೀಶ್ ಶೆಟ್ಟರ್ ಮುಖ್ಯಮಂತ್ರಿ ಆಗಿದ್ದರು. ಹಿರಿಯ ರಾಷ್ಟ್ರೀಯ ನಾಯಕ ಅನಂತಕುಮಾರ್ ಅವರ ಮಾರ್ಗದರ್ಶನದಲ್ಲಿ ಹುಬ್ಬಳ್ಳಿಯ ಜೋಡೆತ್ತುಗಳಾದ ಜಗದೀಶ್ ಶೆಟ್ಟರ್ ಮತ್ತು ಪ್ರಹ್ಲಾದ್ ಜೋಶಿ ಹೀನಾಯವಾಗಿ ಮುಗ್ಗರಿಸಿದರು. ಅಂತಹ ಹೀನಾಯ ಸೋಲಿಗೆ ಕಾರಣರಾದ ಶೆಟ್ಟರ್- ಜೋಶಿಯವರ ತಲೆದಂಡ ಪಡೆಯಬೇಕಿತ್ತು. 2012ರಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆ ಅಲಂಕರಿಸಿದ್ದ ಪ್ರಹ್ಲಾದ್ ಜೋಶಿ 2013ರ ಚುನಾವಣಾ ಸೋಲಿನ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕಿತ್ತು. ದುರಂತವೆಂದರೆ ಪ್ರಹ್ಲಾದ್ ಜೋಶಿ 2016ವರೆಗೆ ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದರು. ಯಡಿಯೂರಪ್ಪ 2014ರ ಲೋಕಸಭಾ ಚುನಾವಣೆಗೂ ಮುನ್ನ ‘ಮೋದಿ ಮೇಲಿನ ಪ್ರೀತಿ’ ಮತ್ತು ಮಕ್ಕಳ ಮೇಲಿನ ಮೋಹಕ್ಕೆ ಕೆಜೆಪಿಯನ್ನು ಬಿಜೆಪಿಯೊಂದಿಗೆ ವಿಲೀನಗೊಳಿಸಿದ್ದರು. ಆಗ ವಿಧಾನಸಭೆಯಲ್ಲಿ ಬಿಜೆಪಿಯ ಸಂಖ್ಯಾಬಲ 40ರಿಂದ 46ಕ್ಕೆ ಏರಿತು. ಸಹಜವಾಗಿಯೇ ಜೆಡಿಎಸ್‌ನ ಕುಮಾರಸ್ವಾಮಿ ಅವರು ವಿರೋಧ ಪಕ್ಷದ ನಾಯಕ ಸ್ಥಾನವನ್ನು ಕಳೆದುಕೊಂಡರು. ವಿರೋಧ ಪಕ್ಷದ ನಾಯಕನ ಸ್ಥಾನ ಸಿಗಲು ಕಾರಣರಾದ ಯಡಿಯೂರಪ್ಪನವರನ್ನು ಬಿಜೆಪಿ ಶಾಸಕಾಂಗ ಪಕ್ಷದ ನಾಯಕರನ್ನಾಗಿ ಆಯ್ಕೆ ಮಾಡುವುದಿಲ್ಲ. ಬಿಜೆಪಿಯ ಹೀನಾಯ ಸೋಲಿಗೆ ಕಾರಣರಾದ ಜಗದೀಶ್ ಶೆಟ್ಟರ್ ಅವರಿಗೆ ವಿರೋಧ ಪಕ್ಷದ ನಾಯಕನ ಪಟ್ಟ ನೀಡುತ್ತಾರೆ. 2014ರಿಂದ 2018ರವರೆಗೆ ಶೆಟ್ಟರ್ ಆ ಹುದ್ದೆಯಲ್ಲಿದ್ದು ಹುದ್ದೆಯ ಘನತೆ ಗೌರವ ಕುಗ್ಗಿಸುತ್ತಾರೆ. ಜಗದೀಶ್ ಶೆಟ್ಟರ್ ವಿಫಲ ವಿರೋಧ ಪಕ್ಷದ ನಾಯಕ ಎನ್ನುವುದು 1999ರಿಂದ 2004ರ ಅವಧಿಯಲ್ಲಿ ಸಾಬೀತಾದ ಸತ್ಯ. ಆಗ ಬಿಜೆಪಿ ಹೈಕಮಾಂಡ್ ಅನ್ನು ತಕ್ಕಮಟ್ಟಿಗೆ ಅನಂತಕುಮಾರ್ ನಿಯಂತ್ರಿಸುತ್ತಿದ್ದರು. ಹಾಗಾಗಿ ಪ್ರಹ್ಲಾದ್ ಜೋಶಿ-ಜಗದೀಶ್ ಶೆಟ್ಟರ್ ಜೋಡಿ ಮುಂದುವರಿದರು.
ಸಾಮಾನ್ಯವಾಗಿ ಚುನಾವಣಾ ಪೂರ್ವದಲ್ಲಿ ಮುಖ್ಯಮಂತ್ರಿ ಆಗಿದ್ದವರೇ ಪಕ್ಷ ಅಧಿಕಾರ ಕಳೆದುಕೊಂಡಾಗ ಅಗತ್ಯದ ಸಂಖ್ಯಾಬಲ ಇದ್ದರೆ ಅವರೇ ವಿರೋಧ ಪಕ್ಷದ ನಾಯಕರಾಗುತ್ತಾರೆ. 2013ರಿಂದ 2018ರವರೆಗೆ ಐದು ವರ್ಷಗಳ ಕಾಲ ಸಿದ್ದರಾಮಯ್ಯನವರು ರಾಜ್ಯದ ಮುಖ್ಯಮಂತ್ರಿಯಾಗಿದ್ದವರು. 2019ರಿಂದ 2023ರ ವರೆಗಿನ ಬಿಜೆಪಿ ಅಧಿಕಾರಾವಧಿಯಲ್ಲಿ (ಯಡಿಯೂರಪ್ಪ-ಬಸವರಾಜ ಬೊಮ್ಮಾಯಿ) ವಿರೋಧ ಪಕ್ಷದ ನಾಯಕನಾಗಿ ಕಾರ್ಯನಿರ್ವಹಿಸುತ್ತಾರೆ. ಚುನಾವಣಾ ಪೂರ್ವದಲ್ಲಿ ಮುಖ್ಯಮಂತ್ರಿಯಾಗಿದ್ದು ಅವರ ನೇತೃತ್ವದಲ್ಲಿ ಚುನಾವಣೆ ಎದುರಿಸಿದರೆ ಪಕ್ಷ ಗೆದ್ದಾಗ ಅಥವಾ ಸೋತಾಗ ಅವರೇ ಶಾಸಕಾಂಗ ಪಕ್ಷದ ನಾಯಕರಾಗಿ ಮುಂದುವರಿಯುವುದು ನಡೆದುಕೊಂಡು ಬಂದ ವಾಡಿಕೆ. ಚುನಾವಣೆಯಲ್ಲಿ ‘ನಾಯಕ’ ಸೋತಾಗ ಮಾತ್ರ ನಂತರ ಬೇರೊಬ್ಬರನ್ನು ಶಾಸಕಾಂಗ ಪಕ್ಷದ ನಾಯಕರನ್ನಾಗಿ ಆಯ್ಕೆ ಮಾಡಿಕೊಳ್ಳುತ್ತಾರೆ. 2004ರಿಂದ 2006ರವರೆಗೆ ಮುಖ್ಯಮಂತ್ರಿ ಆಗಿದ್ದ ಧರಂಸಿಂಗ್ ಅವರು ಕುಮಾರಸ್ವಾಮಿ-ಯಡಿಯೂರಪ್ಪ ಜೋಡಿ 2006 ರಿಂದ 2008ರ ಅವಧಿಯಲ್ಲಿ ಅಧಿಕಾರ ಹಿಡಿದಾಗ ವಿರೋಧ ಪಕ್ಷದ ನಾಯಕನಾಗಿ ಮುಂದುವರಿಯುತ್ತಾರೆ ಹಾಗೆ ನೋಡಿದರೆ; ಧರಂಸಿಂಗ್ ಅವರಷ್ಟೇ ಹಿರಿಯರಾದ 1996ರಿಂದ 1999ರವರೆಗೆ ಯಶಸ್ವಿ ವಿರೋಧ ಪಕ್ಷದ ನಾಯಕರಾಗಿ ಕಾರ್ಯನಿರ್ವಹಿಸಿದ ಮಲ್ಲಿಕಾರ್ಜುನ ಖರ್ಗೆ ಅವರನ್ನು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕನನ್ನಾಗಿ ಆಯ್ಕೆ ಮಾಡುವುದಿಲ್ಲ. ಮುಖ್ಯಮಂತ್ರಿಯಾಗಿದ್ದ ಧರಂಸಿಂಗ್ ಅವರಿಗೆ ಪಕ್ಷ ಗೌರವ ನೀಡುತ್ತದೆ. 2008ರ ಸಾರ್ವತ್ರಿಕ ವಿಧಾನಸಭಾ ಚುನಾವಣಾ ಚುನಾವಣೆಯಲ್ಲಿ ಧರಂಸಿಂಗ್ ಅವರು ಸೋಲುತ್ತಾರೆ. ಆಗ 80 ಶಾಸಕರನ್ನು ಪಡೆದ ಕಾಂಗ್ರೆಸ್‌ಗೆ ಅಗತ್ಯದ ಬಹುಮತ ಸಿಗುವುದಿಲ್ಲ. ಪತಿಪಕ್ಷ ಸ್ಥಾನದಲ್ಲಿ ಕೂರುವುದು ಅನಿವಾರ್ಯವಾಗುತ್ತದೆ. ಆಗ ಕಾಂಗ್ರೆಸ್ ಪಕ್ಷ ಅನಿವಾರ್ಯವಾಗಿ ಶಾಸಕಾಂಗ ಪಕ್ಷದ ನಾಯಕರನ್ನಾಗಿ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆಯವರನ್ನು ಆಯ್ಕೆ ಮಾಡುತ್ತಾರೆ. ಖರ್ಗೆಯವರು 2009ರ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿ ದಿಲ್ಲಿಗೆ ಹೋದ ಮೇಲೆ ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ಸಿದ್ದರಾಮಯ್ಯನವರನ್ನು ತರುತ್ತಾರೆ.
ಮೊತ್ತ ಮೊದಲ ಬಾರಿಗೆ ಬಿಜೆಪಿ ಸತ್ಸಂಪ್ರದಾಯವನ್ನು ಮುರಿದಿದೆ. 2023ರ ಚುನಾವಣಾ ಪೂರ್ವದಲ್ಲಿ ಬಿಜೆಪಿ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾಗಿ ಎರಡು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿದ್ದ ಬಸವರಾಜ ಬೊಮ್ಮಾಯಿಯವರು ಪಕ್ಷದ ಹಿನ್ನಡೆಗೆ ಕಾರಣವಾಗಿರಬಹುದು. ಆದರೆ ಚುನಾವಣೆಯಲ್ಲಿ ಗೆದ್ದಿದ್ದಾರೆ. 2013ರ ಚುನಾವಣಾ ಫಲಿತಾಂಶಕ್ಕೆ ಹೋಲಿಸಿದರೆ 66 ಶಾಸಕರನ್ನು ಗೆಲ್ಲಿಸಿ ಉತ್ತಮ ಸಾಧನೆ ಮಾಡಿದ್ದಾರೆ. ಅದೂ ನಳಿನ್ ಕುಮಾರ್ ಕಟೀಲುರಂತಹ ಡಮ್ಮಿ ರಾಜ್ಯಾಧ್ಯಕ್ಷರನ್ನು ಜೊತೆಗಿಟ್ಟುಕೊಂಡು. ಬಸವರಾಜ ಬೊಮ್ಮಾಯಿ ಅವರು ಚುನಾವಣಾ ಸೋಲಿನ ನಂತರ ಬಿಜೆಪಿ ಶಾಸಕಾಂಗ ಪಕ್ಷದ ನಾಯಕರಾಗಿ ಸಹಜವಾಗಿಯೇ ಆಯ್ಕೆಯಾಗಬೇಕಿತ್ತು. ಅಷ್ಟಕ್ಕೂ ಬೊಮ್ಮಾಯಿ ದಡ್ಡರೇನಲ್ಲ. ಅಪಾರ ರಾಜಕೀಯ ಅನುಭವವುಳ್ಳ, ಅತ್ಯುತ್ತಮ ಸಂಸದೀಯ ಪಟುವಾಗಿರುವ ಅವರನ್ನು, ಅವರ ಪ್ರತಿಭೆಯನ್ನು ಬಿಜೆಪಿ ಅವಮಾನಿಸಿದೆ.
ಆರು ತಿಂಗಳ ಕಾಲ ಶಾಸಕಾಂಗ ಪಕ್ಷದ ನಾಯಕನನ್ನು ಆಯ್ಕೆ ಮಾಡದ ಬಿಜೆಪಿ ಏಕಕಾಲಕ್ಕೆ ರಾಜ್ಯದ ಜನತೆಯನ್ನು, ಬಿಜೆಪಿಯ 66 ಶಾಸಕರನ್ನು, ಸಂಸದೀಯ ಪ್ರಜಾಪ್ರಭುತ್ವವನ್ನು ಮತ್ತು ತಮ್ಮದೇ ಪಕ್ಷದ ನಾಯಕ ಬಸವರಾಜ ಬೊಮ್ಮಾಯಿ ಅವರನ್ನು ಅಪಮಾನಿಸಿದೆ.
ಮಾಜಿ ಮುಖ್ಯಮಂತ್ರಿಗಳಾದ ರಾಮಕೃಷ್ಣ ಹೆಗಡೆ, ಎಸ್.ಆರ್. ಬೊಮ್ಮಾಯಿ, ಜೆ.ಎಚ್. ಪಟೇಲ್ ಮತ್ತು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಸಾಮಿಪ್ಯ-ಗರಡಿಯಲ್ಲಿ ಬೆಳೆದ ಬಸವರಾಜ ಬೊಮ್ಮಾಯಿ ಸುದೀರ್ಘ ರಾಜಕೀಯ ಅನುಭವವನ್ನು ತಾವು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಸಮರ್ಪಕವಾಗಿ ಬಳಸಿಕೊಳ್ಳಲೇ ಇಲ್ಲ. ಯಡಿಯೂರಪ್ಪ ಸಚಿವ ಸಂಪುಟದಲ್ಲಿ ನೀರಾವರಿ, ಗೃಹ ಸೇರಿದಂತೆ ಪ್ರಮುಖ ಖಾತೆಗಳನ್ನು ನಿಭಾಯಿಸಿದ ಬೊಮ್ಮಾಯಿ ಮುಖ್ಯಮಂತ್ರಿಯಾಗಿ ಸಂಪೂರ್ಣ ವಿಫಲರಾದರು. ಪಂಚಮಶಾಲಿ ಮೀಸಲಾತಿ ವಿವಾದ ಮತ್ತು ದಲಿತರ ಒಳ ಮೀಸಲಾತಿಯಂತಹ ಸೂಕ್ಷ್ಮ ವಿಷಯಗಳನ್ನು ಮುಖ್ಯಮಂತ್ರಿಯಾದ ಮೊದಲ ದಿನದಿಂದಲೇ ಜಾಣತನದಿಂದ ನಿಭಾಯಿಸಿದ್ದರೆ ಬೊಮ್ಮಾಯಿಯವರು ಈ ಪರಿ ಹಿನ್ನಡೆ ಅನುಭವಿಸುತ್ತಿರಲಿಲ್ಲ. ಎಂ.ಎನ್. ರಾಯ್ ತತ್ವಾದರ್ಶಗಳಲ್ಲಿ ನಂಬಿಕೆ ಇಟ್ಟಿದ್ದ, ಜೀವನದುದ್ದುಕ್ಕೂ ಜಾತ್ಯತೀತ ರಾಜಕಾರಣ ಮಾಡಿದ್ದ ಎಸ್.ಆರ್. ಬೊಮ್ಮಾಯಿ ಅವರು ಬಸವರಾಜ ಬೊಮ್ಮಾಯಿಯವರಿಗೆ ಆದರ್ಶವಾಗಿದ್ದಿದ್ದರೆ ಬಿಜೆಪಿಯ ಸ್ಕೋರ್ ಹೆಚ್ಚುತಿತ್ತು. ಎಲ್ಲಕ್ಕೂ ಮಿಗಿಲಾಗಿ ಬಸವರಾಜ ಬೊಮ್ಮಾಯಿಯವರು ಅತ್ಯುತ್ತಮ ಆಡಳಿತಕ್ಕೆ ಮೊದಲ ಆದ್ಯತೆ ನೀಡಬೇಕಿತ್ತು. ಉರಿಗೌಡ-ನಂಜೇಗೌಡ, ಹಲಾಲ್‌ಕಟ್-ಜಟ್ಕಾಕಟ್, ಟಿಪ್ಪು, ಹಿಜಾಬ್ ಸೇರಿದಂತೆ ಮತೀಯ ರಾಜಕಾರಣವನ್ನು ಉತ್ತೇಜಿಸುವ ವಿಷಯವನ್ನು ಬದಿಗೆ ತಳ್ಳಿ ‘ಸಬ್‌ಕಾ ಸಾತ್, ಸಬ್‌ಕಾ ವಿಕಾಸ್’ ಮಂತ್ರ ಪಠಿಸಿದ್ದರೂ 100 ಶಾಸಕರನ್ನು ಅನಾಯಾಸವಾಗಿ ಗೆಲ್ಲಿಸಿಕೊಳ್ಳಬಹುದಿತ್ತು. ಕರ್ನಾಟಕ ಲಿಂಗಾಯಿತರೇ ‘ಮತಾಂತರ’ದ ಫಲವಾಗಿ ಬಹುಸಂಖ್ಯಾತರಾಗಿದ್ದಾರೆ. ಬಸವಪೂರ್ವ ಯುಗದಲ್ಲಿ ಯಾವ್ಯಾವುದೋ ಮತ-ಪಂಥಗಳಿಗೆ ಸೇರಿದವರು ‘ಲಿಂಗಾಯತ’ರಾಗಿದ್ದಾರೆ.
ಮತಾಂತರ ಕಾಯ್ದೆ, ಗೋಹತ್ಯೆ ಕಾಯ್ದೆ, ಎಪಿಎಂಸಿ ಕಾಯ್ದೆ ಸೇರಿದಂತೆ ಹಲವು ಕಾಯ್ದೆಗಳನ್ನು ಆತುರಾತುರವಾಗಿ ತರುವ ಅಗತ್ಯವೇ ಇರಲಿಲ್ಲ. ಪಠ್ಯಪುಸ್ತಕ ವಿವಾದ, ಪಿಎಸ್ಸೈ ನೇಮಕಾತಿ ಹಗರಣ, ಸಂತೋಷ್ ಪಾಟೀಲ್ ಆತ್ಮಹತ್ಯೆಯಂತಹ ಪ್ರಕರಣಗಳನ್ನು ಅತ್ಯುತ್ತಮ ಆಡಳಿತದ ಮೂಲಕ ನಿಯಂತ್ರಿಸಬಹುದಿತ್ತು. ಕರ್ನಾಟಕದ ಸಾಮಾನ್ಯ ಜನ ಸಿನೆಮಾ ನೋಡುತ್ತಾರೆ ಆದರೆ ಸಿನೆಮಾದವರನ್ನು ಆದರ್ಶವಾಗಿ ಸ್ವೀಕರಿಸುವುದಿಲ್ಲ. ಸಿನೆಮಾ ನಟರನ್ನು ನೋಡಿ ಮತ ಚಲಾಯಿಸುವುದಿಲ್ಲ. ಮಠ-ಮಂದಿರಗಳಿಗೆ ನಡೆದುಕೊಳ್ಳುತ್ತಾರೆ. ಆದರೆ ಮತ ನೀಡುವಾಗ ಭಿನ್ನ ಮಾನದಂಡ ಅನುಸರಿಸುತ್ತಾರೆ. ಆದರೆ ಅನುಭವಿ ಬೊಮ್ಮಾಯಿ ಕನ್ನಡಿಗರ ನಾಡಿಮಿತ ಅರಿಯುವಲ್ಲಿ ವಿಫಲರಾದರು. ಸುದೀರ್ಘ ರಾಜಕೀಯ ಬದುಕಿನಲ್ಲಿ ದಕ್ಕಿದ್ದ ಸಮೃದ್ಧ ಅನುಭವವನ್ನು ಬಳಸಿಕೊಂಡಿದ್ದರೂ ಬಸವರಾಜ ಬೊಮ್ಮಾಯಿ ಮಧ್ಯಪ್ರದೇಶದ ಶಿವರಾಜ್ ಸಿಂಗ್ ಚೌಹಾಣ್ ಮಾದರಿಯಲ್ಲಿ ಜನನಾಯಕರಾಗಿ ಹೊರಹೊಮ್ಮುತ್ತಿದ್ದರು. ಬಿ.ಎಲ್ ಸಂತೋಷ್, ಪ್ರಹ್ಲಾದ್ ಜೋಶಿಯ ಮಾರ್ಗದರ್ಶನ ಮತ್ತು ನನಗೆಲ್ಲ ಗೊತ್ತು ಎಂಬ ಅಹಂಭಾವ ಬೊಮ್ಮಾಯಿಯವರನ್ನು ಈ ಸ್ಥಿತಿಗೆ ತಂದು ನಿಲ್ಲಿಸಿದೆ. ಯಡಿಯೂರಪ್ಪನವರ ಪುತ್ರ ವ್ಯಾಮೋಹಕ್ಕ್ಕೂ ಬೊಮ್ಮಾಯಿ ಬಲಿಪಶುವಾಗಿದ್ದಾರೆ. ಯಾವುದೇ ಪೂರ್ವಗ್ರಹವಿಲ್ಲದೆ ಹೇಳಬೇಕೆಂದರೆ ಆರ್. ಅಶೋಕ್‌ಗಿಂತಲೂ ಬಸವರಾಜ ಬೊಮ್ಮಾಯಿ ಅತ್ಯುತ್ತಮ ವಿರೋಧ ಪಕ್ಷದ ನಾಯಕರಾಗಿ ಕಾರ್ಯನಿರ್ವಹಿಸುವ ಸಾಮರ್ಥ್ಯ ಹೊಂದಿದ್ದರು. ಯಡಿಯೂರಪ್ಪನವರ ಮಗನಿಗಾಗಿ ಅಶೋಕ್ ಆಯ್ಕೆ ಅನಿವಾರ್ಯವಾಗಿದೆ.
ಅಧಿಕೃತ ವಿರೋಧ ಪಕ್ಷದ ನಾಯಕನಾಗಿ ಆಯ್ಕೆಯಾಗಿರುವ ಆರ್. ಅಶೋಕ್ ಶೋ ರನ್ ಮಾಡಬಹುದೇ ಹೊರತು ‘ಪರಿಣಾಮಕಾರಿ’ಯಾಗಿ ಕೆಲಸ ಮಾಡುವ ಸಾಮರ್ಥ್ಯ ಇಲ್ಲ. ಬೊಮ್ಮಾಯಿಯವರಿಗಾದರೆ ಇಂಗ್ಲಿಷ್, ಹಿಂದಿ, ಕನ್ನಡ ಭಾಷೆಗಳು ಗೊತ್ತಿದ್ದವು. ಅಪಾರ ಓದಿನ ತಿಳುವಳಿಕೆ ಇತ್ತು. ನೀರಾವರಿ, ಹಣಕಾಸು ಸೇರಿದಂತೆ ರಾಜ್ಯಾಡಳಿತದ ಒಳಹೊರಗು ಬಲ್ಲವರಾಗಿದ್ದರು. ವಿರೋಧ ಪಕ್ಷದ ನಾಯಕನೆಂದರೆ; ಜನಹಿತ ಮತ್ತು ಜನಕಲ್ಯಾಣದ ಕಾವಲುಗಾರನಿದ್ದಂತೆ. ಮುಖ್ಯಮಂತ್ರಿಗಿಂತ ಹೆಚ್ಚು ತಿಳುವಳಿಕೆ ಮತ್ತು ಸಮಸ್ಯೆಗಳ ಅರಿವಿರಬೇಕು. ಹೆಜ್ಜೆ ಹೆಜ್ಜೆಗೂ ಸರಕಾರದ ಲೋಪಗಳನ್ನು ಸಾಕ್ಷ್ಯಾಧಾರದ ಸಹಿತ ಜನತೆಯ ಮುಂದಿಡಬೇಕು. ಜನಸಾಮಾನ್ಯರ ‘ನಿಜದನಿ’ಯಾಗುವ ಅವಕಾಶ ಇರುವುದೇ ವಿರೋಧ ಪಕ್ಷದ ನಾಯಕನಿಗೆ. ಮಲ್ಲಿಕಾರ್ಜುನ ಖರ್ಗೆಯವರನ್ನು ಹೊರತುಪಡಿಸಿ ಯಶಸ್ವಿ ವಿರೋಧ ಪಕ್ಷದ ನಾಯಕರಾದವರೆಲ್ಲ ಮುಖ್ಯಮಂತ್ರಿಯಾಗಿದ್ದಾರೆ. ದೇವರಾಜ ಅರಸು ಮುಖ್ಯಮಂತ್ರಿಯಾಗಿದ್ದಾಗ ಎಚ್.ಡಿ. ದೇವೇಗೌಡರು (1972-76) ವಿರೋಧ ಪಕ್ಷದ ನಾಯಕರಾಗಿದ್ದರು. ದೇವೇಗೌಡರು ಕರ್ನಾಟಕ ಅತಿ ಹೆಚ್ಚು ಅರ್ಥ ಮಾಡಿಕೊಂಡಿದ್ದು, ಜನನಾಯಕರಾಗಿ ರೂಪುಗೊಂಡಿದ್ದು ಆಗಲೇ. 1985ರಿಂದ 1987ರವರೆಗೆ ವಿರೋಧ ಪಕ್ಷದ ನಾಯಕರಾಗಿ ರಾಮಕೃಷ್ಣ ಹೆಗಡೆಯವರ ವಿರುದ್ಧ ಯಶಸ್ವಿಯಾಗಿ ಗುಡುಗಿದ್ದು ಎಸ್. ಬಂಗಾರಪ್ಪ. ಬಂಗಾರಪ್ಪ ಜನಾನುರಾಗಿ ನಾಯಕರಾಗಿ ಹೊರಹೊಮ್ಮಲು ವಿರೋಧ ಪಕ್ಷದ ನಾಯಕ ಸ್ಥಾನ ನೆರವಾಗಿದೆ.
ಯಡಿಯೂರಪ್ಪ ಮುಖ್ಯಮಂತ್ರಿ ಆಗಿ ತೊಂದರೆ ಅನುಭವಿಸಿದರು. ಹೆಸರೂ ಕೆಡಿಸಿಕೊಂಡರು. ಆದರೆ ವಿರೋಧ ಪಕ್ಷದ ನಾಯಕರಾಗಿ ಅಪಾರ ಜನಪ್ರಿಯತೆ ಗಳಿಸಿದ್ದರು. ಮುಖ್ಯಮಂತ್ರಿ-ಮಂತ್ರಿಗಳಿಗೆ ದುಃಸ್ವಪ್ನವಾಗಿದ್ದರು. ‘ಯಡಿಯೂರಪ್ಪ ಗುಡುಗಿದರೆ ವಿಧಾನಸೌಧ ನಡುಗುವುದು’ ಎಂಬ ಮಾತು ಚಾಲ್ತಿಗೆ ಬಂದದ್ದು ಆಗಲೇ. ಕರ್ನಾಟಕ ವಿಧಾನ ಮಂಡಲದ ಇತಿಹಾಸದಲ್ಲೇ ರಾಜಿರಹಿತ ಮತ್ತು ರಚನಾತ್ಮಕ ಟೀಕೆಗಳಿಗೆ ಹೆಸರಾದವರು ಮಲ್ಲಿಕಾರ್ಜುನ ಖರ್ಗೆ. 1996ರಿಂದ 1999 ವರೆಗೆ ವಿಧಾನಸಭೆಯಲ್ಲಿ ಅಧಿಕೃತ ವಿರೋಧ ಪಕ್ಷದ ನಾಯಕರಾಗಿದ್ದ ಮಲ್ಲಿಕಾರ್ಜುನ ಖರ್ಗೆಯವರು ಸಂಸದೀಯ ಪ್ರಜಾಪ್ರಭುತ್ವದ ಘನತೆ-ಗೌರವ ಹೆಚ್ಚಿಸಿದ್ದರು. 2014ರಿಂದ 2019ರವರೆಗೆ ಲೋಕಸಭೆಯಲ್ಲಿ ಕಾಂಗ್ರೆಸ್ ಪಕ್ಷದ ನಾಯಕರಾಗಿ ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿದರು. ಅವರ ಆ ಕೆಲಸವೇ ಅವರನ್ನು ಅಖಿಲ ಭಾರತ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಸ್ಥಾನದವರೆಗೆ ಕೊಂಡೊಯ್ದಿದೆ. ಗುಡ್ ಫಾರ್ ನಥಿಂಗ್ ವಿರೋಧ ಪಕ್ಷದ ನಾಯಕರಾಗಿದ್ದವರು ಜಗದೀಶ್ ಶೆಟ್ಟರ್. 1999ರಿಂದ 2004 ಹಾಗೂ 2014ರಿಂದ 2018ರವರೆಗೆ ಒಟ್ಟು ಒಂಭತ್ತು ವರ್ಷಗಳ ಕಾಲ ವಿರೋಧ ಪಕ್ಷದ ನಾಯಕರಾಗಿ ಅಧಿಕಾರ ಅನುಭವಿಸಿದ್ದಾರೆ. ಪರಿಣಾಮಕಾರಿಯಾಗಿ ಕೆಲಸ ಮಾಡಲು ಜಗದೀಶ್ ಶೆಟ್ಟರ್ ಅವರಿಂದ ಸಾಧ್ಯವಾಗಲಿಲ್ಲ. ಶೆಟ್ಟರ್ ಹೊರತುಪಡಿಸಿದರೆ ಹೆಚ್ಚು ಕಾಲ ಅಂದರೆ ಎಂಟು ವರ್ಷಗಳ ಕಾಲ ವಿರೋಧ ಪಕ್ಷದ ನಾಯಕರಾಗಿ ಆಡಳಿತ ಪಕ್ಷದವರಿಗೆ ಸಿಂಹಸ್ವಪ್ನರಾಗಿ ಜನಸಾಮಾನ್ಯರ ಆಶೋತ್ತರಗಳಿಗಾಗಿ ಸಿದ್ದರಾಮಯ್ಯನವರು ಹೋರಾಡಿದ್ದಾರೆ. (2009ರಿಂದ 2013, 2019ರಿಂದ 2023) ಸಂಸದೀಯ ಪ್ರಜಾಪ್ರಭುತ್ವ ಹೆಮ್ಮೆ ಪಡುವಂತೆ ಮಾಡಿದ್ದಾರೆ.
ಬ್ಲ್ಯಾಕ್‌ಮೇಲ್ ತಂತ್ರಗಾರಿಕೆಗೆ ಹೆಸರಾದ ಕುಮಾರಸ್ವಾಮಿ ಅವರು ಜನ ಹಿತ ಗಮನದಲ್ಲಿಟ್ಟುಕೊಂಡು ಕೆಲಸ ಮಾಡಿದರೆ ಯಶಸ್ವಿ ಪ್ರತಿಪಕ್ಷ ನಾಯಕರಾಗಬಲ್ಲರು. ಅಷ್ಟೊಂದು ದಾಖಲೆಗಳು ಅವರಲ್ಲಿ ಇರುತ್ತವೆ. ಆರ್. ಅಶೋಕ್ ಮತೀಯ ರಾಜಕಾರಣದ ಅಜೆಂಡಾ ಬದಿಗೆ ಸೇರಿಸಿ ಜನಕಲ್ಯಾಣದ ಕಾವಲುಗಾರನಂತೆ ಕಾರ್ಯ ನಿರ್ವಹಿಸಿದರೆ ಉತ್ತಮ ಸಂಸದೀಯ ಪಟು ಆಗಬಲ್ಲರು. ಸರಕಾರವನ್ನು ಸದಾ ಎಚ್ಚರಿಸುವ, ಸರಿದಾರಿಗೆ ತರುವ ಹೊಣೆಗಾರಿಕೆ ಅಶೋಕ್ ಅವರ ಮೇಲಿದೆ.