ಧರ್ಮದ ಹೆಸರಲ್ಲಿ ರಾಜಕಾರಣ
ಬಿಜೆಪಿಯ ನಕಲಿ ಹಿಂದುತ್ವದ ಹುನ್ನಾರಗಳನ್ನು ಪ್ರತಿಯೊಬ್ಬ ಭಾರತೀಯ ಅರ್ಥ ಮಾಡಿಕೊಳ್ಳಬೇಕು. ಯಾವತ್ತೂ ಹಿಂದೂಗಳನ್ನು ಸಮಾನವಾಗಿ ಕಾಣದ ಬಿಜೆಪಿ ಹುಟ್ಟುಹಾಕುವ ಹಿಂದುತ್ವದ ಭ್ರಮೆ ಹೊಟ್ಟೆ ತುಂಬಿಸುವುದಿಲ್ಲ. ಬಿಜೆಪಿಯವರನ್ನು ಹೊರತುಪಡಿಸಿ ಭಾರತದ ಜನಸಾಮಾನ್ಯ ಹಿಂದೂಗಳೇ ನಿಜವಾದ ಹಿಂದೂ ಧರ್ಮದ ವಾರಸುದಾರರು. ಸಂಕುಚಿತ ಮನೋಭಾವದ ಧರ್ಮ ಅಪಾಯಕಾರಿ. ಎಚ್ಚರ ವಹಿಸಬೇಕು.
ವೇದಕ್ಕೆ ಒರೆಯ ಕಟ್ಟುವೆ
ಶಾಸ್ತ್ರಕ್ಕೆ ನಿಗಳವನಿಕ್ಕುವೆ
ತರ್ಕದ ಬೆನ್ನ ಬಾರನೆತ್ತುವೆ
ಆಗಮದ ಮೂಗ ಕೊಯ್ಯುವೆ
ನೋಡಯ್ಯ ಮಹಾದಾನಿ ಕೂಡಲಸಂಗಮದೇವಾ
ಮಾದಾರ ಚೆನ್ನಯ್ಯನ ಮಗ ನಾನಯ್ಯ
-ಬಸವಣ್ಣ
ಸನಾತನ ಧರ್ಮ ಕುರಿತ ಹೇಳಿಕೆ; ಈಗ ರಾಷ್ಟ್ರೀಯ ಸುದ್ದಿಯಾಗಿದೆ. ಭಾರತೀಯ ಜನತಾ ಪಕ್ಷ ಮತ್ತು ಅದರ ಮತೀಯ ರಾಜಕಾರಣವನ್ನು ವಿರೋಧಿಸುವ ‘ಇಂಡಿಯಾ’ ಕೂಟವನ್ನು ‘ಹಿಂದೂ ಧರ್ಮವಿರೋಧಿ, ಹಿಂದೂಗಳ ವಿರೋಧಿ’ ಎಂದು ಫಿಕ್ಸ್ ಮಾಡಲು ಬಿಜೆಪಿಯ ಹಿರಿ-ಕಿರಿಯ ಮುಖಂಡರು ಶತಾಯಗತಾಯ ಪ್ರಯತ್ನಿಸುತ್ತಿದ್ದಾರೆ. ಅಷ್ಟಕ್ಕೂ ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್: ‘‘ಸನಾತನ ಧರ್ಮ ಡೆಂಗಿ, ಮಲೇರಿಯಾ ಇದ್ದಂತೆ. ಅದನ್ನು ನಿರ್ಮೂಲನೆ ಮಾಡಬೇಕು’’ ಎಂದಿದ್ದಾರೆ. ಉದಯ ನಿಧಿ ಹೇಳಿಕೆಗೆ ಭಾರತೀಯ ಜನತಾ ಪಕ್ಷ ಮತ್ತು ಸಂಘ ಪರಿವಾರದವರು ಮಾತ್ರ ತೀವ್ರವಾಗಿ ಪ್ರತಿಕ್ರಿಯಿಸುತ್ತಿದ್ದಾರೆ ಯಾಕೆ? ಸನಾತನ ಎಂಬ ಪದಕ್ಕೆ ಬ್ರಾಹ್ಮಣ, ಬ್ರಾಹ್ಮಣ್ಯ ಎಂಬ ಅರ್ಥ ಇಲ್ಲ. ಸನಾತನ ಎಂಬ ಪದಕ್ಕೆ ತುಂಬಾ ದಿನದಿಂದ ನಡೆದುಕೊಂಡು ಬಂದಿರುವುದು ಅಂತ ಅರ್ಥವಿದೆ. ಇನ್ನೊಂದು ಅರ್ಥ: ಬ್ರಹ್ಮನ ಮಾನಸ ಪುತ್ರ ಎಂದಿದೆ. ಉದಾಹರಣೆಗೆ: ಸನಕ, ಸನಂದನ, ಸನತ್ಕುಮಾರ ಮತ್ತು ಸನಾತನ ಮುಂತಾದವರು ಬ್ರಹ್ಮನ ಮಾನಸ ಪುತ್ರರು ಎಂಬ ನಂಬಿಕೆ ಇದೆ. ದ್ರಾವಿಡ ತತ್ವಾದರ್ಶಗಳಲ್ಲಿ ನಂಬಿಕೆ ಇರುವ, ಪೆರಿಯಾರ್ ಅವರಿಂದ ಪ್ರಭಾವಿತರಾಗಿರುವ ಡಿಎಂಕೆ ನಾಯಕ ಉದಯ ನಿಧಿ ಸ್ಟಾಲಿನ್ ಗ್ರಹಿಸಿದ ‘ಸನಾತನ ಧರ್ಮ’ ಪದದ ಅರ್ಥ ಬೇರೆಯದೇ ಇರಬೇಕು.
ಉದಯನಿಧಿಗೆ ಸನಾತನ ಧರ್ಮ ಎಂಬುದು ಡೆಂಗಿ, ಮಲೇರಿಯಾದಂತೆ ಕಂಡಿದೆ. ಆ ಕಾರಣಕ್ಕೆ ಅದು ನಿರ್ಮೂಲನೆಯಾಗಬೇಕೆಂದು ಅಪೇಕ್ಷಿಸಿದ್ದಾರೆ. ಸಮಸ್ತ ದ್ರಾವಿಡ ಸಮುದಾಯಕ್ಕೆ ಏನೋ ಕೆಟ್ಟದ್ದಾಗಿರಬೇಕು. ಉದಯನಿಧಿ ಹೇಳಿಕೆಗೆ ಕರ್ನಾಟಕದ ಶೈವ, ವೀರಶೈವ, ಲಿಂಗಾಯತ ಮಠಮಾನ್ಯಗಳಾಗಲಿ, ಹಿಂದೂ ಧರ್ಮವನ್ನು ವಿಶಾಲ ಅರ್ಥದಲ್ಲಿ ಪರಿಭಾವಿಸಿ ಅದನ್ನು ವ್ಯಾಪಕವಾಗಿ ಪ್ರಚಾರ ಮಾಡಿದ ರಾಮಕೃಷ್ಣ ಮಠದವರಾಗಲಿ, ಗಾಂಧಿ ಅನುಯಾಯಿಗಳಾಗಲಿ ಪ್ರತಿಕ್ರಿಯಿಸುವ ಗೋಜಿಗೆ ಹೋಗಿಲ್ಲ. ಬಿಜೆಪಿ, ಪೇಜಾವರ ಮಠ ಸೇರಿದಂತೆ ಬೆರಳೆಣಿಕೆಯ ಸಂಸ್ಥೆಗಳು ಉದಯನಿಧಿ ಹೇಳಿಕೆಯಿಂದ ಗಲಿಬಿಲಿಗೊಂಡಿವೆ. ಭಾರತೀಯ ಪರಂಪರೆಯಲ್ಲಿ ಸಾಕಷ್ಟು ಪರವಿರೋಧದ ವಿಚಾರಧಾರೆಗಳಿವೆ. ಪರಂಪರೆಯಿಂದ ನಡೆದುಕೊಂಡು ಬಂದಿರುವುದು ಸನಾತನ ಧರ್ಮ ಎಂದು ಭಾವಿಸಿದರೆ ಅದರಲ್ಲಿ ಹಲವಾರು ಧಾರೆಗಳಿವೆ. ಉದಯನಿಧಿ ಗುರಿ ಇಟ್ಟಿರುವ ಸನಾತನಕ್ಕೂ, ಬಿಜೆಪಿ ಬಲವಾಗಿ ನಂಬಿರುವ ಸನಾತನಕ್ಕೂ ನಿಕಟ ಹೋಲಿಕೆ ಇರುವುದರಿಂದ ಕಿಚ್ಚು ಹತ್ತಿದೆ. ಬಿಜೆಪಿ ಪರ ಇರುವ ಮಾಧ್ಯಮಗಳು ‘ಸನಾತನ’ ಪದಕ್ಕೆ ‘ಹಿಂದೂ’ ಎಂಬ ಅರ್ಥ ಕಲ್ಪಿಸಿ ಮತ್ತಷ್ಟು ರಾಡಿ ಎಬ್ಬಿಸಿವೆ. ಜಗತ್ತಿನೆಲ್ಲೆಡೆ ಹಿಂದೂ ಧರ್ಮದ ವೈಶಾಲ್ಯತೆಯನ್ನು ಪ್ರಚಾರ ಮಾಡಿದ ಸ್ವಾಮಿ ವಿವೇಕಾನಂದರು, ರಾಮಕೃಷ್ಣ ಪರಮಹಂಸರು, ಮಹಾತ್ಮಾ ಗಾಂಧೀಜಿ ಮುಂತಾದವರು ಜಗತ್ತಿನ ಎಲ್ಲ ಧರ್ಮಗಳನ್ನು ಸಮಾನವಾಗಿ ಕಾಣುತ್ತಿದ್ದರು ಮತ್ತು ಅಪಾರವಾಗಿ ಗೌರವಿಸುತ್ತಿದ್ದರು. ಆ ಕಾರಣಕ್ಕೆ ಮಹಾತ್ಮಾ ಗಾಂಧೀಜಿಯವರನ್ನು ಗುಂಡಿಕ್ಕಿ ಕೊಲ್ಲಲಾಯಿತು.
ಆಗಮ-ಪದದ ಅರ್ಥವೂ ಪರಂಪರೆಯಿಂದ ಬಂದ ಶಾಸ್ತ್ರ ಎಂದಿದೆ. ಭಾರತೀಯ ಪರಂಪರೆಯಲ್ಲಿ ಋಗ್ವೇದ, ಯಜುರ್ವೇದ, ಸಾಮವೇದ, ಅಥರ್ವ ವೇದ ಎಂಬ ನಾಲ್ಕು ವೇದಗಳಿವೆ. ಐತರೇಯ, ಬೃಹದಾರಣ್ಯಕ, ಈಶಾವಾಸ್ಯ, ತೈತ್ತಿರೀಯ, ಛಾಂದೋಗ್ಯ, ಕೇನ, ಮುಂಡಕ, ಮಾಂಡೂಕ್ಯ, ಕಠ, ಪ್ರಶ್ನೆ, ಶ್ವೇತಾಶ್ವತರ ಎಂಬ ಉಪನಿಷತ್ತುಗಳಿವೆ. ಗರುಡ, ಅಗ್ನಿ, ನಾರದ, ಪದ್ಮ, ಸ್ಕಾಂದ, ಭವಿಷ್ಯ, ಬ್ರಹ್ಮ, ಭಾಗವತ, ಬ್ರಹ್ಮವೈವರ್ತ, ಬ್ರಹ್ಮಾಂಡ, ವಾಯು, ಲಿಂಗ, ವಿಷ್ಣು, ವಾಮನ, ಮಾರ್ಕಂಡೇಯ, ವರಾಹ, ಕೂರ್ಮ, ಮತ್ಸ್ಯ ಎಂಬ 18 ಪುರಾಣಗಳಿವೆ. ರಾಮಾಯಣ, ಮಹಾಭಾರತದಂತಹ ಮಹಾಕಾವ್ಯಗಳಿವೆ. ಆಗಮಗಳನ್ನು: ಶೈವ, ವೈಷ್ಣವ ಮತ್ತು ಶಾಕ್ತ ಎಂಬ ಮೂರು ವಿಭಾಗಗಳಾಗಿ ವಿಂಗಡಿಸಲ್ಪಟ್ಟಿವೆ. 67 ಶಾಕ್ತ ಆಗಮಗಳಿವೆ. 28 ಶೈವಾಗಮಗಳಿವೆ ಹಾಗೂ 78 ವೈಷ್ಣವ ಆಗಮಗಳು. ಅಷ್ಟು ಮಾತ್ರವಲ್ಲ, ಮನುಸ್ಮತಿ, ನಾರದ ಸ್ಮತಿ, ಯಾಜ್ಞವಲ್ಕ್ಯ ಮತ್ತು ಪರಾಶರ ಸ್ಮತಿ ಎಂಬ ನಾಲ್ಕು ಸ್ಮತಿಗಳೂ ಸೇರಿವೆ. ವೇದ, ಆಗಮ, ಸ್ಮತಿಗಳು, ಉಪನಿಷತ್ತುಗಳು-ಪರಂಪರೆಯಿಂದ ಬಂದವು. 12ನೇ ಶತಮಾನದ ವಚನ ಚಳವಳಿಯ ನೇತಾರರಾದ ಬಸವಣ್ಣನವರು: ವೇದಕ್ಕೆ ಒರೆಯ ಕಟ್ಟುವೆ, ಶಾಸ್ತ್ರಕ್ಕೆ ನಿಗಳವನಿಕ್ಕುವೆ, ತರ್ಕದ ಬೆನ್ನಬಾರನೆತ್ತುವೆ, ಆಗಮದ ಮೂಗ ಕೊಯ್ಯುವೆ ಎಂದು ಕಟುವಾಗಿ ಮಾತನಾಡುತ್ತಾರೆ. ವೇದ, ಆಗಮ, ತರ್ಕ, ಶಾಸ್ತ್ರಗಳ ಬಗ್ಗೆ ಅಷ್ಟು ಆಕ್ರೋಶ ವ್ಯಕ್ತಪಡಿಸಬೇಕಾದರೆ ಬಸವಣ್ಣನವರಲ್ಲಿ ಬಲವಾದ ಕಾರಣಗಳು ಇದ್ದಿರಲೇಬೇಕು.
ಬಸವಣ್ಣನವರು ಮೇಲಿನ ವಚನದಲ್ಲಿ ತಮ್ಮನ್ನು ಮಾದಾರ ಚೆನ್ನಯ್ಯನ ಮನೆಯ ಮಗನೆಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ವೇದ, ಶಾಸ್ತ್ರ, ತರ್ಕ, ಆಗಮಗಳು ಮಾದಾರ ಚೆನ್ನಯ್ಯನ ಮನೆಯ ಮಗನಾದ ಬಸವಣ್ಣನವರನ್ನು ಯಾಕೆ ಕೆರಳಿಸಿರಬೇಕು? ತಳ ಸಮುದಾಯಗಳನ್ನು ಅವು ನಿಕೃಷ್ಟವಾಗಿ ಕಂಡಿರಬೇಕು ಅಥವಾ ಮಾದಾರ ಚೆನ್ನಯ್ಯನ ಮನೆಯ ಮಕ್ಕಳ ಆತ್ಮಗೌರವಕ್ಕೆ ಧಕ್ಕೆಯನ್ನುಂಟು ಮಾಡಿರಬೇಕು. ಇದೇ ಅರ್ಥ ಬರುವ ವಚನವನ್ನು ಅಕ್ಕಮಹಾದೇವಿಯವರು ರಚಿಸಿದ್ದಾರೆ. 12ನೇ ಶತಮಾನದ ಮಹಾಶರಣೆ ಅಕ್ಕಮಹಾದೇವಿ ಅಪರೂಪದ ಸಂವೇದನಾಶೀಲ ಕವಯತ್ರಿ. ಅವರು ಬರೆಯುತ್ತಾರೆ: ‘‘ವೇದ, ಶಾಸ್ತ್ರ, ಆಗಮ, ಪುರಾಣಗಳೆಲ್ಲವೂ ಕೊಟ್ಟಣವ ಕುಟ್ಟಿದ ನುಚ್ಚು ತೌಡು ಕಾಣಿಭೋ, ಇವ ಕುಟ್ಟಲೇಕೆ, ಕುಸುಕಲೇಕೆ? ಅತ್ತಲಿತ್ತ ಹರಿವ ಮನದ ಶಿರವನರಿದಡೆ ಬಚ್ಚ ಬರಿಯ ಬಯಲು ಚೆನ್ನಮಲ್ಲಿಕಾರ್ಜುನಾ’’ ಎಂದು ವೇದ, ಶಾಸ್ತ್ರ, ಆಗಮ, ಪುರಾಣಗಳು ಅಕ್ಕ ಮಹಾದೇವಿಯವರಿಗೆ ‘ನುಚ್ಚು ತೌಡು’ ಮಾತ್ರ ಎನಿಸಿವೆ. ಮಹಿಳಾ ಸ್ವಾತಂತ್ರ್ಯಕ್ಕೆ ಅಡ್ಡಿಯಾಗಿರಬಹುದಾದ ವೇದ, ಶಾಸ್ತ್ರ, ಆಗಮ, ಪುರಾಣಗಳು ಅಕ್ಕಮಹಾದೇವಿಯವರಿಗೆ ಮುಖ್ಯ ಎನಿಸದೆ ಆತ್ಮಸಾಕ್ಷಾತ್ಕಾರಕ್ಕೆ, ಮಹಿಳಾ ಸಮಾನತೆಗೆ ಬಚ್ಚ ಬರಿಯ ಬಯಲು ಕಾಣಲು ಚಿತ್ತಶುದ್ಧಿ ಸಾಕು ಎನ್ನುತ್ತಾರೆ. ಬಸವಣ್ಣ, ಅಕ್ಕಮಹಾದೇವಿ ಕೂಡ ಅಸಮಾನತೆ ಪ್ರತಿಪಾದಿಸುವ ಮನುಸ್ಮತಿ ಪ್ರಣೀತ ಸನಾತನ ಧರ್ಮದ ವಿರುದ್ಧ 800 ವರ್ಷಗಳ ಹಿಂದೆಯೇ ತಮ್ಮ ಪ್ರತಿಭಟನೆ ದಾಖಲಿಸಿದ್ದರು.
ಬುದ್ಧ, ಬಸವ, ಅಂಬೇಡ್ಕರ್ ಅವರು ಸನಾತನ ಧರ್ಮದ ಬಗ್ಗೆ ತಳೆದ ನಿಲುವನ್ನೇ ಉದಯ ನಿಧಿ ಸ್ಟಾಲಿನ್ ಪುನರುಚ್ಚರಿಸಿದ್ದಾರೆ. ಸನಾತನ ಧರ್ಮದ ಬಗ್ಗೆ ಸಂಕುಚಿತ ನೆಲೆಯ ಗ್ರಹಿಕೆ ಇರುವುದರಿಂದಲೇ ಬಿಜೆಪಿಯವರಿಗೆ ಉದಯನಿಧಿ ಸ್ಟಾಲಿನ್ ಮಾತುಗಳು ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿ ನೋಡಿಕೊಳ್ಳುವಂತೆ ಮಾಡಿದೆ. ಬಿಜೆಪಿ ಪ್ರತಿಪಾದಿಸುತ್ತಾ ಬಂದಿರುವ ಹಿಂದುತ್ವ-ಸನಾತನ ಧರ್ಮ; ವಿಶಾಲ ನೆಲೆಯ ಹಿಂದೂ ಧರ್ಮದ ಒಟ್ಟಾರೆ ಆಶಯಕ್ಕೆ ತದ್ವಿರುದ್ಧವಾಗಿವೆ. ಬಸವಾದಿ ಶರಣರು ಮತ್ತು ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ರವರು ಬಿಜೆಪಿ ಪ್ರತಿಪಾದಿಸುವ ‘ಸನಾತನ-ಹಿಂದುತ್ವ’ವನ್ನು ನಿರಾಕರಿಸುತ್ತಲೇ ಬಂದಿದ್ದಾರೆ. ಬಸವಾದಿ ಶರಣರ ವಚನಗಳನ್ನು ಓದದ, ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಬರಹಗಳನ್ನು ಓದದ ಬಿಜೆಪಿಯವರು ಹಿಂದೂ ಧರ್ಮದ ನೈಜ ವಾರಸುದಾರರಲ್ಲ. ಸ್ವಾಮಿ ವಿವೇಕಾನಂದ, ರಾಮಕೃಷ್ಣ ಪರಮಹಂಸ, ಮಹಾತ್ಮ್ಮಾ ಗಾಂಧಿ ಹಾಗೂ ಈ ದೇಶದ ಅಸಂಖ್ಯಾತ ಸಂತರು ಪ್ರತಿಪಾದಿಸಿದ ಹಿಂದೂ ಧರ್ಮ ‘ಒಳಗೊಳ್ಳುವ ಗುಣದಿಂದ’ ಎಲ್ಲರಿಗೂ ಒಳಿತನ್ನೇ ಬಯಸುವ ವಿಶಾಲ ಮನೋಭಾವದ ಧರ್ಮ ಎನಿಸಿಕೊಂಡಿದೆ. ಹಿಂದೂ ಧರ್ಮ; ಒಂದು ಜೀವನಕ್ರಮವಾಗಿದೆ. ಅದು ಸಂಕುಚಿತ ನೆಲೆಯ ಧರ್ಮವಲ್ಲ. ಸರ್ವೇ ಜನ ಸುಖಿನೋ ಭವಂತು/ಎಲ್ಲಾ ಜನರು ಸುಖವಾಗಿರಲಿ ಎಂಬ ಆಶಯ ಹೊತ್ತ ಧರ್ಮ. ಬಿಜೆಪಿ ಪ್ರತಿಪಾದಿಸುವ ಸನಾತನ ಧರ್ಮ-ಹಿಂದುತ್ವ; ಮನುವಾದದಲ್ಲಿ ನಂಬಿಕೆ ಇರಿಸಿದೆ. ಅದು ಧರ್ಮವನ್ನು ರಾಜಕಾರಣಕ್ಕೆ ಅದೂ ಮತೀಯ ರಾಜಕಾರಣಕ್ಕೆ ಬಳಸಿಕೊಳ್ಳುತ್ತದೆ. ಸಂಕುಚಿತ ನೆಲೆಯಲ್ಲಿ ಧರ್ಮವನ್ನು ಪರಿಭಾವಿಸುತ್ತದೆ.
ಹಿಂದೂ ಧರ್ಮವನ್ನು ಎಲ್ಲೆಡೆ ಸಾರಿದ ಸ್ವಾಮಿ ವಿವೇಕಾನಂದರ ಈ ಮಾತುಗಳು: ‘‘ಧರ್ಮವು ಎಲ್ಲವನ್ನು ಒಳಗೊಳ್ಳುವಂತಿರಬೇಕು. ಇತರರನ್ನು, ಅವರ ದೇವರು ತಮಗಿಂತ ಬೇರೆ ಎಂದು ನಿಕೃಷ್ಟ ದೃಷ್ಟಿಯಿಂದ ನೋಡಕೂಡದು. ನನ್ನ ಜೀವನದಲ್ಲೇ ನಾನು ದೇವರನ್ನು ನಂಬದ ಎಷ್ಟೋ ಆಧ್ಯಾತ್ಮಿಕ ಜೀವಿಗಳನ್ನು ನೋಡಿರುವೆನು; ಎಷ್ಟೋ ವಿಚಾರವಂತರನ್ನು ನೋಡಿದ್ದೇನೆ. ಅಂದರೆ ಅವರು ಯಾವುದನ್ನು ನಾವು ದೇವರು ಎಂದು ಕರೆಯುತ್ತೇವೋ ಅದನ್ನು ನಂಬದೆ ಇರಬಹುದು. ಬಹುಶಃ ನಾವು ತಿಳಿದುಕೊಂಡಿರುವುದಕ್ಕಿಂತ ಹೆಚ್ಚಾಗಿ ಅವರು ದೇವರನ್ನು ತಿಳಿದುಕೊಂಡಿರಬಹುದು. ನಿರ್ಗುಣ, ಸುಗುಣ, ಅನಂತ ನೀತಿನಿಯಮಗಳು ಅಥವಾ ಆದರ್ಶ ಮನುಷ್ಯ. ಇವೆಲ್ಲವೂ ಧರ್ಮದ ವಿವರಣೆಯಲ್ಲಿ ಬರುವವು. ಧರ್ಮ ಹೀಗೆ ವಿಶಾಲವಾದರೆ ಮಾನವನ ಕಲ್ಯಾಣಕ್ಕೆ ಅವುಗಳ ಶಕ್ತಿ ನೂರು ಮಡಿ ಹೆಚ್ಚಿದಂತಾಗುತ್ತದೆ. ಅದ್ಭುತ ಶಕ್ತಿಯುಳ್ಳ ಧರ್ಮಗಳು ಪ್ರಪಂಚಕ್ಕೆ ಒಳ್ಳೆಯದನ್ನು ಮಾಡುವುದಕ್ಕಿಂತ ಕೆಟ್ಟದ್ದನ್ನು ಮಾಡಿವೆ. ಇದಕ್ಕೆ ಕಾರಣ ಆ ಧರ್ಮಗಳ ಸಂಕುಚಿತ ಭಾವನೆ.’’-ಭಾರತೀಯ ಜನತಾ ಪಕ್ಷದ ಧರ್ಮಾಂಧರಿಗೆ ಹೇಳಿದ ಕಿವಿ ಮಾತುಗಳಂತಿವೆ. ಬಿಜೆಪಿಯವರಿಂದ ನಿಜವಾದ ಹಿಂದೂ ಧರ್ಮವನ್ನು ರಕ್ಷಿಸಬೇಕಾಗಿದೆ.
ಕರ್ನಾಟಕದಲ್ಲಿ ಬಿಜೆಪಿ ಸೋತು ಸುಣ್ಣವಾಗಿದೆ. ಬಿಜೆಪಿಯ ಸಂಕುಚಿತ ನೆಲೆಯ ಹಿಂದುತ್ವವನ್ನು ನಾಡಿನ ಮತದಾರರು ತಿರಸ್ಕರಿಸುವ ಮೂಲಕ ಪ್ರಜ್ಞಾವಂತಿಕೆ ಮೆರೆದಿದ್ದಾರೆ. ರಾಷ್ಟ್ರಮಟ್ಟದಲ್ಲಿ ‘ಇಂಡಿಯಾ’ ಕೂಟ ಹೆಚ್ಚು ಬಲಶಾಲಿಯಾಗ ತೊಡಗಿದೆ. ‘ಇಂಡಿಯಾ’ ಕೂಟವನ್ನು ಹಿಂದೂ ಧರ್ಮದ ವಿರೋಧಿ ಎಂದು ಪ್ರಚಾರ ಮಾಡಿ ಮತ್ತೆ ಕೇಂದ್ರದಲ್ಲಿ ಅಧಿಕಾರ ಹಿಡಿಯುವುದು ಬಿಜೆಪಿಯ ಹುನ್ನಾರ. ಡಿಎಂಕೆ ‘ಇಂಡಿಯಾ’ ಕೂಟದ ಭಾಗವಾಗಿರುವುದರಿಂದ ಆ ಪಕ್ಷದ ನಾಯಕ ಉದಯನಿಧಿ ಹೇಳಿಕೆಯನ್ನು ರಾಜಕಾರಣಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಬಿಜೆಪಿ ಪ್ರತಿಪಾದಿಸುವ ಹಿಂದುತ್ವ-ಸನಾತನ ಧರ್ಮದ ಕುರಿತು ಉದಯನಿಧಿ ಹೇಳಿದ ಮಾತುಗಳಿಗಿಂತ ಹೆಚ್ಚು ಕಟುವಾಗಿ, ನೇರವಾಗಿ ಬಸವಾದಿ ಶರಣರು, ಸೂಫಿಗಳು, ಡಾ. ಬಿ.ಆರ್. ಅಂಬೇಡ್ಕರ್ ಅವರು ಬರೆದು ದಾಖಲಿಸಿದ್ದಾರೆ. ಅವರ ಬರಹವನ್ನು ಓದುವ, ಎದುರಿಸುವ ಧೈರ್ಯ ಇಲ್ಲದವರು ಉದಯನಿಧಿ ಮೇಲೆ ಮುಗಿಬಿದ್ದು ಕೀಳು ಮಟ್ಟದ ರಾಜಕಾರಣ ಮಾಡುತ್ತಿದ್ದಾರೆ. ಮಾಜಿ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ, ಸದಾನಂದಗೌಡ ಹಾಗೂ ಮಾಜಿ ಮಂತ್ರಿ ಕೆ.ಎಸ್. ಈಶ್ವರಪ್ಪನವರು ಯಾವಾಗ ಆಗಮ ಶಾಸ್ತ್ರ ಪುರಾಣಗಳನ್ನು ಓದಿದರೋ?. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪರವರ ಮಗ ವಿಜಯೇಂದ್ರ ಹಿಂದೂ ಧರ್ಮದ ಶ್ರೇಷ್ಠ ಗ್ರಂಥಗಳನ್ನು ಓದುವುದು ಒತ್ತಟ್ಟಿಗಿರಲಿ ನಾಲ್ಕು ವಚನಗಳನ್ನು ಓದಿಕೊಂಡಿದ್ದರೆ ಬಿ.ಎಲ್.ಸಂತೋಷ್ ಕುತಂತ್ರವನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿರುತ್ತಿದ್ದರು. ಉದಯ ನಿಧಿ ಸಾಂಕೇತಿಕವಾಗಿ ಹೇಳಿದ್ದು ಬಿ.ಎಲ್.ಸಂತೋಷ್ ಅವರ ತಂತ್ರಗಾರಿಕೆಯ ಬಗ್ಗೆಯೇ. ಬಿಜೆಪಿಯಲ್ಲಿ ಬಸವರಾಜ ಬೊಮ್ಮಾಯಿ, ಸದಾನಂದ ಗೌಡ, ಯಡಿಯೂರಪ್ಪ ಆರ್.ಅಶೋಕ್, ಕೆ.ಎಸ್.ಈಶ್ವರಪ್ಪ ಮುಂತಾದ ಶೂದ್ರರು ಎರಡನೆಯ
ದರ್ಜೆಯ ಪ್ರಜೆಗಳೆಂದೇ ಪರಿಗಣಿಸಲ್ಪಟ್ಟಿದ್ದಾರೆ. ಅದಕ್ಕೆ ಬಿಜೆಪಿಯ ಸಂಕುಚಿತ ಮನೋಭಾವದ ಹಿಂದುತ್ವ ಕಾರಣ. ಬಿ.ಎಲ್. ಸಂತೋಷ್, ಪ್ರಹ್ಲಾದ್ ಜೋಶಿ, ತೇಜಸ್ವಿ ಸೂರ್ಯ ಸದಾ ಮುಂಚೂಣಿಯಲ್ಲಿ ಇರುತ್ತಾರೆ. ಪಕ್ಷದೊಳಗೇ ಈ ಬಗೆಯ ತಾರತಮ್ಯ ಇರುವಾಗ ಬಡ ಶೂದ್ರ ಹಿಂದೂಗಳ ಪಾಡೇನು? ಕರ್ನಾಟಕದಲ್ಲಿ ದಿವಾಳಿಯಾದಂತೆ ಭಾರತೀಯ ಜನತಾ ಪಕ್ಷ ರಾಷ್ಟ್ರಮಟ್ಟದಲ್ಲಿ ಅಭಿವೃದ್ಧಿ ಮತ್ತು ಜನಕಲ್ಯಾಣದ ಹೆಸರಲ್ಲಿ ಮತ ಕೇಳುವ ನೈತಿಕತೆ ಉಳಿಸಿಕೊಂಡಿಲ್ಲ. ಚುನಾವಣೆ ಸಮೀಪಿಸುತ್ತಿರುವಂತೆ ಭಾರತೀಯ ಜನತಾ ಪಕ್ಷದ ಮುಖಂಡರು ಹಿಂದೂ ಧರ್ಮದ ಅಸ್ತ್ರವನ್ನು ಝಳಪಿಸುತ್ತಾರೆ. ಭಾರತದ ಜನಸಾಮಾನ್ಯರಿಗೆ ಹಿಂದೂ ಧರ್ಮ ಒಂದು ಜೀವನ ಪದ್ಧತಿ. ಆದರೆ ಬಿಜೆಪಿಯವರಿಗೆ ‘ಹಿಂದೂ’ ಪದ ಮತಗಳನ್ನು ದ್ರುವೀಕರಣಗೊಳಿಸಿ ಚುನಾವಣೆ ಗೆಲ್ಲುವ ಒಂದು ಅಸ್ತ್ರ-ಸಾಧನ. ಉದಯ ನಿಧಿ ಸ್ಟಾಲಿನ್ ಅವರ ‘ಸನಾತನ ಧರ್ಮ’ ಹೇಳಿಕೆಯನ್ನು ಎಷ್ಟು ಸಾಧ್ಯವೋ ಅಷ್ಟು ಅಮಾಯಕ ಹಿಂದೂ ಧರ್ಮೀಯರ ಭಾವನೆ ಕೆರಳಿಸಲು ಬಳಸಿಕೊಳ್ಳುತ್ತಾರೆ. ಅನ್ಯ ಧರ್ಮೀಯರನ್ನು ಅನುಮಾನದಿಂದ ನೋಡುವ ಹಾಗೆ ವಿಷ ಬೀಜ ಬಿತ್ತುತ್ತಾರೆ. ಭಾರತೀಯ ಜನತಾ ಪಕ್ಷದವರಿಗೆ ಭಾರತ ಪದ ನೆನಪಾಗುವುದು 9 ವರ್ಷಗಳ ನಂತರ. ಪ್ರತಿಪಕ್ಷಗಳು ಒಗ್ಗಟ್ಟಾಗಿ ‘ಇಂಡಿಯಾ’ ಕೂಟ ರಚಿಸಿಕೊಂಡ ಮೇಲೆ ಭಾರತ, ದೇಶಭಕ್ತಿ, ರಾಷ್ಟ್ರಧ್ವಜ, ಮುಂತಾದ ಸಂಕೇತಗಳು ಪ್ರಧಾನಿ ಮೋದಿ ನರೇಂದ್ರ ಮೋದಿ ಅವರ ಗುಣಗಾನಕ್ಕಿರುವ ಸಾಧನಗಳಾಗಿವೆ. ಮೋದಿಯವರನ್ನು ಪ್ರಶ್ನಿಸಿದರೆ ಭಾರತವನ್ನು ಅಪಮಾನಿಸಿದಂತೆ ಎಂಬ ಕಥಾನಕವನ್ನು ಭಾರತೀಯರ ತಲೆಯಲ್ಲಿ ತುಂಬಿದ್ದಾರೆ.
ಭಾರತವೆಂದರೆ ಅಲ್ಲಿನ ಪ್ರಜೆಗಳು. ಭಾರತದ ಅಭಿವೃದ್ಧಿ, ಹೆಮ್ಮೆಯೆಂದರೆ ಈ ದೇಶದ ಪ್ರತೀ ನಾಗರಿಕ ನೆಮ್ಮದಿಯಿಂದ, ಆತ್ಮಗೌರವದಿಂದ ಬದುಕು ಸಾಗಿಸುತ್ತಿರುವಂತಿರಬೇಕು. ಬಡತನ, ನಿರುದ್ಯೋಗ, ಆರ್ಥಿಕ ಅಸಮಾನತೆ, ಜಾತಿಭೇದ ಜೀವಂತವಾಗಿರುವಾಗ ‘ಭಾರತ’ ಬಡಾಯಿ ಕೊಚ್ಚಿಕೊಳ್ಳುವುದರಲ್ಲಿ ಅರ್ಥವಿಲ್ಲ. ಸಮೃದ್ಧ ದೇಶ ನಿರ್ಮಾಣವಾದಾಗ ಮಾತ್ರ ಸಂಕೇತಗಳು ಅರ್ಥ ಪಡೆದುಕೊಳ್ಳುತ್ತವೆ. ರಾಷ್ಟ್ರಪ್ರೇಮ, ಹಿಂದೂ ಧರ್ಮ ಮುಂತಾದ ಭಾವನಾತ್ಮಕ ವಿಷಯಗಳನ್ನು ಮುಂಚೂಣಿಗೆ ತಂದು ಜನಸಾಮಾನ್ಯರು ನಿತ್ಯ ಎದುರಿಸುತ್ತಿರುವ ಸಮಸ್ಯೆಗಳನ್ನು ಮರೆಸಿಬಿಡುತ್ತಾರೆ. ಬಿಜೆಪಿಯ ನಕಲಿ ಹಿಂದುತ್ವದ ಹುನ್ನಾರಗಳನ್ನು ಪ್ರತಿಯೊಬ್ಬ ಭಾರತೀಯ ಅರ್ಥ ಮಾಡಿಕೊಳ್ಳಬೇಕು. ಯಾವತ್ತೂ ಹಿಂದೂಗಳನ್ನು ಸಮಾನವಾಗಿ ಕಾಣದ ಬಿಜೆಪಿ ಹುಟ್ಟುಹಾಕುವ ಹಿಂದುತ್ವದ ಭ್ರಮೆ ಹೊಟ್ಟೆ ತುಂಬಿಸುವುದಿಲ್ಲ. ಬಿಜೆಪಿಯವರನ್ನು ಹೊರತುಪಡಿಸಿ ಭಾರತದ ಜನಸಾಮಾನ್ಯ ಹಿಂದೂಗಳೇ ನಿಜವಾದ ಹಿಂದೂ ಧರ್ಮದ ವಾರಸುದಾರರು. ಸಂಕುಚಿತ ಮನೋಭಾವದ ಧರ್ಮ ಅಪಾಯಕಾರಿ. ಎಚ್ಚರ ವಹಿಸಬೇಕು.