ಕುಟುಂಬ ರಾಜಕಾರಣದ ಪರಾಕಾಷ್ಠೆ

ರಾಜಕೀಯದಲ್ಲಿ ಜಾತಿ, ಉಪಜಾತಿಗಳನ್ನು ವ್ಯವಸ್ಥಿತವಾಗಿ ಬಳಸಿಕೊಳ್ಳಲಾಗುತ್ತದೆ. ಪಕ್ಷ, ಕಾರ್ಯಕರ್ತರು ಮತ್ತು ಎಲ್ಲರನ್ನೊಳಗೊಂಡ ಸಮಾಜ, ಜಾತ್ಯತೀತ ತತ್ವಗಳನ್ನು ಸಂದರ್ಭಾನುಸಾರ ಉಪಯೋಗಿಸುವ ಸಾಧನಗಳು. ಮಗ, ಮಗಳು, ಹೆಂಡತಿ, ಅಳಿಯ ಸಂಬಂಧಗಳೇ ಹೆಚ್ಚಾಗಿ ಉಳಿದೆಲ್ಲ ಸಂಬಂಧಗಳು ಗೌಣವಾಗಿ ಬಿಡುತ್ತವೆ. ಜಾತಿ, ಉಪಜಾತಿಗಳೂ ನಿರರ್ಥಕ ಎಂದು ಮನವರಿಕೆಯಾಗುವುದು ಅಧಿಕಾರ ಹಂಚಿಕೆಯ ಗಳಿಗೆಯಲ್ಲೇ. ರಾಜಕಾರಣಿಗಳ ಕುಟುಂಬ ವ್ಯಾಮೋಹದ ಪರಿ ಮನುಷ್ಯ ಸಂಬಂಧಗಳನ್ನೇ ಅವಮಾನಿಸುವಂತೆ ಮಾಡಿದೆ.

Update: 2024-03-30 05:47 GMT

ಪ್ರಜಾಪ್ರಭುತ್ವ ಎಂದರೇನು? ಪ್ರಶ್ನೆಗೆ ಶಾಲಾ ಮಕ್ಕಳು ತಟ್ಟನೆ ಉತ್ತರ ನೀಡುತ್ತಾರೆ- ‘‘ಪ್ರಜೆಗಳಿಂದ ಪ್ರಜೆಗಳಿಗಾಗಿ ನಡೆಯುವ ಪ್ರಜೆಗಳ ಸರಕಾರ’’ ಎಂದು. ಆದರೆ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದ ಪ್ರಮುಖ ರಾಜಕೀಯ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್, ಜೆಡಿಎಸ್‌ನವರು ಪ್ರಜಾಪ್ರಭುತ್ವದ ವ್ಯಾಖ್ಯಾನವನ್ನು ಸಂಪೂರ್ಣ ಬದಲಾಯಿಸಿದ್ದಾರೆ. ‘‘ಕುಟುಂಬದಿಂದ ಕುಟುಂಬಕ್ಕಾಗಿ ನಡೆಯುವ ಕುಟುಂಬದ ಸರಕಾರ’’ ಎಂಬುದು ಲೋಕಸಭಾ ಚುನಾವಣೆಯ ಟಿಕೆಟ್ ಹಂಚಿಕೆಯಲ್ಲಿ ಮೂರೂ ಪಕ್ಷಗಳು ಸಾಬೀತುಪಡಿಸಿವೆ. ವಂಶಾಡಳಿತದ ವಿರುದ್ಧ ಸೈದ್ಧಾಂತಿಕ ರಾಜಕಾರಣ ಮಾಡುತ್ತಾ ಬಂದ ಭಾರತೀಯ ಜನತಾ ಪಕ್ಷವೂ ಕುಟುಂಬ ವ್ಯಾಮೋಹ ತೋರಿದೆ. ಆದರೆ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ಹಾಗೆ ಸಾರಾ ಸಗಟಾಗಿ ಕುಟುಂಬ ರಾಜಕಾರಣವನ್ನು ಬೆಂಬಲಿಸಲಿಲ್ಲ. ಆದರೆ ಕುಟುಂಬ ರಾಜಕಾರಣದ ಬೀಜವನ್ನಂತೂ ಬಿತ್ತಿದ್ದಾರೆ. ಕಾಂಗ್ರೆಸ್-ಜೆಡಿಎಸ್ ಮುಖಂಡರು ಕುಟುಂಬದಾಚೆ ತಮ್ಮ ಪಕ್ಷಗಳಿಗೆ ಅಸ್ತಿತ್ವವೇ ಇಲ್ಲವೆನ್ನುವುದು ಸಿದ್ಧಪಡಿಸಿದ್ದಾರೆ. ಇದ್ದುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕುಟುಂಬ ರಾಜಕಾರಣದ ನಿರ್ಲಜ್ಜತನ ಮೆರೆದಿಲ್ಲ.

ಕುಟುಂಬ ರಾಜಕಾರಣದ ‘ಅತಿರೇಕದ’ ಅಪಾಯವನ್ನು ಮೊದಲೇ ಗ್ರಹಿಸಿದ್ದರೆ ಯಾರೂ ರಿಸ್ಕ್ ತೆಗೆದುಕೊಳ್ಳಲು ಮುಂದಾಗುತ್ತಿರಲಿಲ್ಲ. ಈ ಬಾರಿ ಬಿಜೆಪಿಯ ಯಡಿಯೂರಪ್ಪ ಸೇರಿದಂತೆ ಎಲ್ಲಾ ಪಕ್ಷಗಳ ಮುಖಂಡರು ಜಾತಿ ಸಮೀಕರಣದ ಲೆಕ್ಕಾಚಾರ ಮೀರಿ ರಿಸ್ಕ್ ತೆಗೆದುಕೊಂಡಿದ್ದಾರೆ. ಶಿವಮೊಗ್ಗದಲ್ಲಿ ಯಡಿಯೂರಪ್ಪ ತಮ್ಮ ಹಿರಿಯ ಪುತ್ರ ರಾಘವೇಂದ್ರರನ್ನು ಗೆಲ್ಲಿಸಿಕೊಳ್ಳಬೇಕೆಂದರೆ ಕೆ.ಎಸ್. ಈಶ್ವರಪ್ಪ ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಿತ್ತು. ಅಲ್ಲಿ ಕುರುಬ ಸಮುದಾಯದವರ ಮತಗಳು ನಿರ್ಣಾಯಕವಾಗಿಲ್ಲವಾದರೂ ಹಿಂದುಳಿದ ಸಮುದಾಯಗಳಲ್ಲಿ ಯಡಿಯೂರಪ್ಪ ಕುಟುಂಬದ ಬಗ್ಗೆ ಅಪನಂಬಿಕೆ ಮೂಡಬಹುದಾಗಿದೆ. ತುಮಕೂರಿನಲ್ಲಿ ಜೆ.ಸಿ. ಮಾಧುಸ್ವಾಮಿಯವರಿಗೆ ಟಿಕೆಟ್ ತಪ್ಪಿಸಿ ವಿ. ಸೋಮಣ್ಣ ಅವರಿಗೆ ಅವಕಾಶ ಮಾಡಿಕೊಟ್ಟಿದ್ದರಿಂದ ಶಿವಮೊಗ್ಗದಲ್ಲಿನ ನೊಣಬ ಸಮುದಾಯ ಕೈ ಕೊಡುವ ಸಾಧ್ಯತೆ ಇದೆ. ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಈಡಿಗ ಸಮುದಾಯಕ್ಕೆ ಟಿಕೆಟ್ ಕೊಡುವ ಇರಾದೆ ಇದ್ದರೆ ಕುಮಾರ್ ಬಂಗಾರಪ್ಪ ಅತ್ಯುತ್ತಮ ಆಯ್ಕೆ ಎನಿಸಿಕೊಳ್ಳುತ್ತಿದ್ದರು. ಹಿಂದಿ- ಇಂಗ್ಲಿಷ್ ಬಲ್ಲ ಕುಮಾರ್ ಬಂಗಾರಪ್ಪ ರಾಘವೇಂದ್ರರ ಗೆಲುವಿಗೆ ಪೂರಕವಾಗುತ್ತಿದ್ದರು. ಚಿತ್ರದುರ್ಗದಲ್ಲಿ ಭೋವಿ ಸಮುದಾಯದ ಜನಾರ್ದನ ಸ್ವಾಮಿಗೆ ಟಿಕೆಟ್ ನೀಡಿದ್ದರೆ ಶಿವಮೊಗ್ಗದಲ್ಲಿ ಬಿಜೆಪಿ ಅಭ್ಯರ್ಥಿಗೆ ಗೆಲುವು ಸುಲಭವಾಗುತ್ತಿತ್ತು. ನೊಣಬರು, ಈಡಿಗರು, ಕುರುಬರು ಮತ್ತು ಭೋವಿ ಸಮುದಾಯಗಳ ಮತ ಕೈತಪ್ಪಿದರೆ ರಾಘವೇಂದ್ರ ಭವಿಷ್ಯ ಏನಾಗಬಹುದು?

ಒಂದು ವೇಳೆ ಶಿವಮೊಗ್ಗದಲ್ಲಿ ಬಿಜೆಪಿಗೆ ವ್ಯತಿರಿಕ್ತ ಫಲಿತಾಂಶ ದೊರೆತರೆ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ತಲೆದಂಡ ಫಿಕ್ಸ್. ಕೆ.ಎಸ್. ಈಶ್ವರಪ್ಪನವರಿಗೆ ಶಿವಮೊಗ್ಗ ರಾಜಕಾರಣದ ಒಳಸುಳಿ ಗೊತ್ತಿದ್ದೇ ನಿರಂತರ ಗುಟುರು ಹಾಕುತ್ತಿದ್ದಾರೆ. ಅಷ್ಟಕ್ಕೂ ಈಶ್ವರಪ್ಪ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವ ನಿರ್ಧಾರ ತೆಗೆದುಕೊಳ್ಳುತ್ತಿರುವುದೂ ಮಗ ಕಾಂತೇಶ್‌ಗಾಗಿ. ಅಲ್ಲಿ ಈಶ್ವರಪ್ಪ ಸ್ಪರ್ಧೆಯಿಂದ ಹೆಚ್ಚೆಂದರೆ ರಾಘವೇಂದ್ರ ಸೋಲಬಹುದು. ಆದರೆ ಸ್ವತಃ ಈಶ್ವರಪ್ಪ ಗೆದ್ದು ಬೀಗುವ ಸಾಧ್ಯತೆ ಕಡಿಮೆ. ರಾಘವೇಂದ್ರ ಸೋತರೆ ಬಿಜೆಪಿಯಲ್ಲಿ ಕಾಂತೇಶ್‌ಗೆ ಮುಂದೆ ಅವಕಾಶ ಸಿಗಬಹುದು. ಮೋದಿ ಅಲೆಯಲ್ಲಿ ಬಿ.ವೈ. ರಾಘವೇಂದ್ರ ಗೆದ್ದರೆ ಈಶ್ವರಪ್ಪ ಮತ್ತು ಅವರ ಮಗನ ರಾಜಕೀಯ ಭವಿಷ್ಯವೇ ಕೊನೆಯಾದಂತೆ. ಈಶ್ವರಪ್ಪ ಪುತ್ರ ವ್ಯಾಮೋಹಕ್ಕಾಗಿ ಬಹುದೊಡ್ಡ ರಿಸ್ಕ್ ತೆಗೆದುಕೊಳ್ಳುತ್ತಿದ್ದಾರೆ. ಜೆಡಿಎಸ್ ಮುಖಂಡರಾದ ಎಚ್.ಡಿ. ದೇವೇಗೌಡರು, ಕುಮಾರಸ್ವಾಮಿಯವರು ಪಕ್ಷದ ಸಾಮಾನ್ಯ ಕಾರ್ಯಕರ್ತರಿಗಾಗಿ ರಿಸ್ಕ್ ತೆಗೆದುಕೊಳ್ಳುತ್ತಿಲ್ಲ. ಅವರಿಗೆ ಕುಟುಂಬ ಮತ್ತು ಪಕ್ಷದ ನಡುವೆ ವ್ಯತ್ಯಾಸವೇ ಇಲ್ಲ. ಕುಟುಂಬವೆಂದರೆ ಪಕ್ಷ, ಪಕ್ಷವೆಂದರೆ ಕುಟುಂಬ. ಆ ಕುಟುಂಬದಲ್ಲಿ ದೇವೇಗೌಡರು ರಾಜ್ಯಸಭಾ ಸದಸ್ಯರು. ರೇವಣ್ಣ ಶಾಸಕ, ಅವರ ಮಗ ಪ್ರಜ್ವಲ್ ರೇವಣ್ಣ ಸಂಸದ. ಇನ್ನೊಬ್ಬ ಮಗ ಸೂರಜ್ ರೇವಣ್ಣ ವಿಧಾನ ಪರಿಷತ್‌ನ ಸದಸ್ಯ. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಚನ್ನಪಟ್ಟಣದ ಶಾಸಕ. ಡಾ. ಸಿ.ಎನ್. ಮಂಜುನಾಥ್ ಅವರ ಖಾಸಾ ತಮ್ಮ ಶ್ರವಣಬೆಳಗೊಳದ ಶಾಸಕ. ಅದೇ ಕುಟುಂಬದ ಅನಿತಾ ಕುಮಾರಸ್ವಾಮಿ ಮಾಜಿ ಶಾಸಕಿ. ಭವಾನಿ ರೇವಣ್ಣ ಮತ್ತು ನಿಖಿಲ್ ಕುಮಾರಸ್ವಾಮಿ ಶಾಸಕರೋ, ಸಂಸದರೋ ಆಗಲು ಸರತಿ ಸಾಲಿನಲ್ಲಿ ನಿಂತಿದ್ದಾರೆ. ದೇವೇಗೌಡ ಕುಟುಂಬದ ಮೂವರು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕುಟುಂಬ ರಾಜಕಾರಣವನ್ನು ತಾತ್ವಿಕವಾಗಿ ವಿರೋಧಿಸುವ ಭಾರತೀಯ ಜನತಾ ಪಕ್ಷದ ಮೈತ್ರಿ ಅಭ್ಯರ್ಥಿಗಳಾಗಿ ಸ್ಪರ್ಧಿಸುತ್ತಿದ್ದಾರೆ. ದೇವೇಗೌಡರು ಅಳಿಯ ಡಾ. ಸಿ.ಎನ್. ಮಂಜುನಾಥ್ ಅವರನ್ನು ಬಿಜೆಪಿ ಟಿಕೆಟ್ ಮೇಲೆ ಹಾಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಸಹೋದರ, ಸಂಸದ ಡಿ.ಕೆ. ಸುರೇಶ್ ವಿರುದ್ಧ ಕಣಕ್ಕಿಳಿಸಿದ್ದಾರೆ. ಒಂದು ವೇಳೆ ಸಿ.ಎನ್. ಮಂಜುನಾಥ್ ಅವರು ಸೋತರೆ ಮೈತ್ರಿ ಕತೆ ಮುಗಿದಂತೆ. ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಸ್ವಾಭಿಮಾನಿ ಸುಮಲತಾ ಅವರ ಟಿಕೆಟ್ ಕಿತ್ತುಕೊಂಡು ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧಿಸುವ ಬಹುದೊಡ್ಡ ರಿಸ್ಕ್ ಅನ್ನು ಕುಮಾರಸ್ವಾಮಿ ಅವರು ತೆಗೆದುಕೊಂಡಿದ್ದಾರೆ. ಎರಡು ಬಾರಿ ಮುಖ್ಯಮಂತಿಯಾಗಿರುವ ಅವರು ಇಷ್ಟು ದೊಡ್ಡ ರಿಸ್ಕ್ ತೆಗೆದುಕೊಳ್ಳುತ್ತಿರುವುದು ಮಗ ನಿಖಿಲ್ ಕುಮಾರಸ್ವಾಮಿಯ ರಾಜಕೀಯ ಭವಿಷ್ಯಕ್ಕಾಗಿ. ಕುಟುಂಬದ ಹೊರಗಿರುವ ಸಿ.ಎಸ್. ಪುಟ್ಟರಾಜ ಮುಂತಾದವರು ಸಂದರ್ಭಕ್ಕನುಸಾರವಾಗಿ ಬಳಕೆಯಾಗುವ ಕಾರ್ಯಕರ್ತರು. ಕೋಲಾರ ಟಿಕೆಟ್ ಜೆಡಿಎಸ್‌ನವರಿಗೆ ಸಂಪನ್ಮೂಲ ಕ್ರೋಡೀಕರಣದ ಸಾಧನವಷ್ಟೇ. ಗೆದ್ದರೆ ಆತನ ಅದೃಷ್ಟ.

ಕರ್ನಾಟಕದ ರಾಜಕಾರಣಕ್ಕೆ ಮಾದರಿಯಾಗಬೇಕಿದ್ದ ಅಖಿಲ ಭಾರತ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆಯವರು 83ರ ಇಳಿಯ ವಯಸ್ಸಿನಲ್ಲಿ ಕುಟುಂಬ ವ್ಯಾಮೋಹಕ್ಕೆ ಬಲಿಯಾಗಿದ್ದಾರೆ. ಮಾತ್ರವಲ್ಲ, ಕಲಬುರ್ಗಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಅನ್ನು ಅಳಿಯ ರಾಧಾಕೃಷ್ಣ ಅವರಿಗೆ ಧಾರೆ ಎರೆಯುವ ಮೂಲಕ ಬಹುದೊಡ್ಡ ಸವಾಲನ್ನು ಸ್ವೀಕರಿಸಿದ್ದಾರೆ. ಕಲಬುರ್ಗಿ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಮಲ್ಲಿಕಾರ್ಜುನ ಖರ್ಗೆಯವರ ಪರ ಅನುಕಂಪದ ಅಲೆ ಇತ್ತು. ಅವರೇ ಸ್ಪರ್ಧಿಸಿದ್ದರೆ ಅತ್ಯಧಿಕ ಮತಗಳ ಅಂತರದಿಂದ ಗೆಲುವು ಸಾಧಿಸುತ್ತಿದ್ದರು. ಅವರ ಮಗ ಪ್ರಿಯಾಂಕ್ ಖರ್ಗೆಯವರು ಸಿದ್ದರಾಮಯ್ಯ ಸಚಿವ ಸಂಪುಟದಲ್ಲಿ ಪ್ರಭಾವಿ ಖಾತೆಯ ಸಚಿವರಾಗಿರುವುದರಿಂದ ಅದೇ ಕುಟುಂಬದ ಸದಸ್ಯರಿಗೆ ಲೋಕಸಭೆ ಟಿಕೆಟ್ ನೀಡಿದ್ದು ಪಕ್ಷ ಮತ್ತು ಸಾರ್ವಜನಿಕ ವಲಯದಲ್ಲಿ ಅಸಮಾಧಾನಕ್ಕೆ ಅವಕಾಶ ಮಾಡಿಕೊಟ್ಟಿದೆ. ಪ್ರಿಯಾಂಕ್ ಖರ್ಗೆ ಅವರು ಪಕ್ಷದ ಸಂಘಟನೆ ಮತ್ತು ಸರಕಾರದಲ್ಲಿ ಸೈದ್ಧಾಂತಿಕ ಬದ್ಧತೆಯೊಂದಿಗೆ ಕ್ರಿಯಾಶೀಲರಾಗಿರುವುದರಿಂದ ಅವರ ಬಗ್ಗೆ ಯಾರಿಗೂ ತಕರಾರಿಲ್ಲ. ಸಾರ್ವಜನಿಕರಿಗೆ ಮುಖ ಪರಿಚಯವೂ ಇಲ್ಲದ, ಕಾಂಗ್ರೆಸ್ ಪಕ್ಷದ ಸಂಘಟನೆಯಲ್ಲಿ ಒಮ್ಮೆಯೂ ಕಾಣಿಸಿಕೊಳ್ಳದ, ಜನಸಾಮಾನ್ಯರ ಕಷ್ಟ-ಸುಖಗಳಿಗೆ ಸ್ಪಂದಿಸದ ರಾಧಾಕೃಷ್ಣ ದೊಡ್ಡಮನಿಯವರಿಗೆ ಇರುವ ಏಕೈಕ ಅರ್ಹತೆ ಎಂದರೆ ಮಲ್ಲಿಕಾರ್ಜುನ ಖರ್ಗೆಯವರ ಅಳಿಯ ಎಂಬುದು.

ರಾಧಾಕೃಷ್ಣ ದೊಡ್ಡಮನಿಯವರು ಒಮ್ಮೆಯೂ ಪಕ್ಷದ ವೇದಿಕೆಯಲ್ಲಿ ಕಾಣಿಸಿಕೊಂಡಿಲ್ಲ. ಅವರ ಸಾರ್ವಜನಿಕ ಭಾಷಣವನ್ನು ಯಾರೂ ಕೇಳಿಸಿಕೊಂಡಿಲ್ಲ. ಅವರಿಗೆ ಟಿಕೆಟ್ ನೀಡಿದ್ದರಿಂದಲೇ ಉತ್ತೇಜಿತರಾಗಿ ಕೋಲಾರದ ಕೆ.ಎಚ್. ಮುನಿಯಪ್ಪ ಅವರು ತಮ್ಮ ಅಳಿಯ ಚಿಕ್ಕಪೆದ್ದಣ್ಣನಿಗೆ ಟಿಕೆಟ್ ಕೇಳಿದ್ದಾರೆ. ಪಕ್ಷದ ನಿಷ್ಠಾವಂತ ಕಾರ್ಯಕರ್ತರನ್ನು ಗುರುತಿಸಿ ಟಿಕೆಟ್ ನೀಡಿದ್ದರೆ ಮಲ್ಲಿಕಾರ್ಜುನ ಖರ್ಗೆಯವರು ಅನುಕರಣೀಯ ವ್ಯಕ್ತಿ ಎನಿಸಿಕೊಳ್ಳುತ್ತಿದ್ದರು. ದಲಿತ ಬಲಗೈ ಸಮುದಾಯದ ಡಿ.ಜಿ. ಸಾಗರ್ ಅವರು ಮೂರ್ನಾಲ್ಕು ದಶಕಗಳಿಂದ ಸಾರ್ವಜನಿಕ ಬದುಕಿನಲ್ಲಿ ಇದ್ದಾರೆ. ಅಂತಹವರನ್ನು ಪಕ್ಷಕ್ಕೆ ಆಹ್ವಾನಿಸಿ ಟಿಕೆಟ್ ನೀಡಿದ್ದರೂ ಜನ ಮೆಚ್ಚಿಕೊಳ್ಳುತ್ತಿದ್ದರು. ತಮ್ಮ ಕುಟುಂಬದ ಆಚೆಗೆ ಕಲಬುರ್ಗಿ ಲೋಕಸಭಾ ಅಭ್ಯರ್ಥಿ ಸಿಕ್ಕಿಲ್ಲವೆಂಬುದು ಆಘಾತಕಾರಿ ಸಂಗತಿ. ಸಾರ್ವಜನಿಕ ಬದುಕಲ್ಲಿ ಸೊನ್ನೆಯಾಗಿರುವ ರಾಧಾಕೃಷ್ಣ ದೊಡ್ಡಮನಿ ಗೆಲುವು ಸಾಧಿಸಿದರೆ ಕಾಂಗ್ರೆಸ್ ಪಕ್ಷಕ್ಕೆ ಬಲಬಂದಂತಾಗುತ್ತದೆ ಎಂದೇ ಭಾವಿಸೋಣ. ಕಷ್ಟದಲ್ಲಿರುವ ಪಕ್ಷಕ್ಕೆ ಸಂಸದರ ಸಂಖ್ಯಾಬಲ ಬಹಳ ಅಗತ್ಯವಿದೆ. ಆದರೆ ಅವರ ಗೆಲುವು ಸಾಕಾರಗೊಳ್ಳಬೇಕಾದರೆ ಲಿಂಗಾಯತರು, ಕೋಲಿ ಸಮಾಜ, ಲಂಬಾಣಿ, ಭೋವಿ, ದಲಿತರ ಎಡಗೈ ಸಮುದಾಯ ಸೇರಿದಂತೆ ಹತ್ತು ಹಲವು ಸಮುದಾಯಗಳ ಮತಗಳು ಕಾಂಗ್ರೆಸ್‌ಗೆ ಬರಬೇಕು. ಲಿಂಗಾಯತರ ಕೋಟಾದಲ್ಲಿ ಮಂತ್ರಿಗಿರಿ ಗಿಟ್ಟಿಸಿಕೊಂಡಿರುವ ಡಾ. ಶರಣ ಪ್ರಕಾಶ್ ಪಾಟೀಲ್‌ಗೆ ಆ ಸಮುದಾಯದ ಜನಸಂಪರ್ಕವೇ ಇಲ್ಲ. ಸಾಮಾಜಿಕ ಸಮೀಕರಣದ ಕೊರತೆಯಿಂದ ಒಂದು ವೇಳೆ ರಾಧಾಕೃಷ್ಣ ದೊಡ್ಡಮನಿ ಸೋತರೆ ಪ್ರಿಯಾಂಕ್ ಖರ್ಗೆ ಅವರ ಮಂತ್ರಿಗಿರಿಗೆ ಕುತ್ತು ಬರುತ್ತದೆ. ಮಲ್ಲಿಕಾರ್ಜುನ ಖರ್ಗೆಯವರ ವರ್ಚಸ್ಸಿಗೂ ಧಕ್ಕೆ. ಬಿಜೆಪಿಯವರು ಮೋದಿ ಹೆಸರಲ್ಲಿ ಮತ ಕೇಳಿದಂತೆ ರಾಧಾಕೃಷ್ಣ ದೊಡ್ಡಮನಿಯವರು ‘ಖರ್ಗೆ’ ಹೆಸರಲ್ಲಿ ಮತ ಕೇಳಬೇಕಾಗುತ್ತದೆ. ರಾಧಾಕೃಷ್ಣ ದೊಡ್ಡಮನಿಯವರಿಗೆ ಸಾರ್ವಜನಿಕ ವ್ಯಕ್ತಿತ್ವ ಎಂಬುದೇ ಇಲ್ಲ. ಅವರ ಪ್ರತಿಸ್ಪರ್ಧಿ ಉಮೇಶ್ ಜಾದವ್ ಶಾಸಕರಾಗಿ, ಸಂಸದರಾಗಿ ಚಿರಪರಿಚಿತರು.

ಕೆಪಿಸಿಸಿ ಅಧ್ಯಕ್ಷರು, ಸಿದ್ದರಾಮಯ್ಯ ಸರಕಾರದಲ್ಲಿ ಉಪಮುಖ್ಯಮಂತ್ರಿಯೂ ಆಗಿರುವ ಡಿ.ಕೆ. ಶಿವಕುಮಾರ್ ಅವರು ತಮ್ಮ ಡಿ.ಕೆ. ಸುರೇಶ್ ಗೆಲುವಿಗೆ ರಿಸ್ಕ್ ತೆಗೆದುಕೊಳ್ಳಬೇಕಾಗಿದೆ. ಕುಟುಂಬ ವ್ಯಾಮೋಹ ತಂದೊಡ್ಡುವ ಸವಾಲು ಎದುರಿಸುವಲ್ಲಿ ಮುಗ್ಗರಿಸಿದರೆ ಉಪಮುಖ್ಯಮಂತ್ರಿ ಹುದ್ದೆಗೇ ಕುತ್ತು ಒದಗಿ ಬರಬಹುದು. ಡಿ.ಕೆ. ಸುರೇಶ್ ರಾಜಕೀಯಕ್ಕೆ ಹೊಸಬರಲ್ಲವಾದರೂ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ ಈ ಬಾರಿ ಡಾ.ಸಿ.ಎನ್. ಮಂಜುನಾಥ್ ಅವರು ಬಿಜೆಪಿ ಅಭ್ಯರ್ಥಿಯಾಗಿರುವುದರಿಂದ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದೆ. ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಆಗಿರುವ ಮಂಜುನಾಥ್ ಗೆ ಮೋದಿ ನಾಮಬಲದ ಜೊತೆಗೆ ಮಾವ ದೇವೇಗೌಡರ ತಂತ್ರಗಾರಿಕೆಯೂ ಸೇರಿಕೊಂಡಿದೆ. ಡಿ.ಕೆ. ಸುರೇಶ್ ಗೆದ್ದರೆ ಅಣ್ಣ ಡಿ.ಕೆ. ಶಿವಕುಮಾರ್ ಅವರ ಮುಂದಿನ ಹಾದಿ ನಿಚ್ಚಳವಾಗುತ್ತದೆ. ಸೋತರೆ ಭವಿಷ್ಯಕ್ಕೆ ಕಾರ್ಮೋಡ ಕವಿಯುವುದಂತೂ ‘ಗ್ಯಾರಂಟಿ’. ಕೋಲಾರದ ಕೆ.ಎಚ್. ಮುನಿಯಪ್ಪ ಕಳೆದ ಬಾರಿ ಲೋಕಸಭಾ ಚುನಾವಣೆಯಲ್ಲಿ ಸೋತಿದ್ದೇ ಸ್ವಪಕ್ಷದವರಿಂದ. ಕಾಂಗ್ರೆಸ್ ಸರಕಾರದಲ್ಲಿ ಸಂಪುಟ ದರ್ಜೆಯ ಸಚಿವರಾಗಿರುವ ಮುನಿಯಪ್ಪ ತನ್ನ ಮಗಳನ್ನು ಶಾಸಕರನ್ನಾಗಿಸಿದ್ದಾರೆ. ಮುನಿಯಪ್ಪನವರಿಗೆ ಅಷ್ಟು ಕುಟುಂಬ ರಾಜಕಾರಣ ಸಾಕಾಗಿತ್ತು. ತನ್ನದೇ ಸಮುದಾಯದ ಕ್ರಿಯಾಶೀಲರಿಗೆ ಟಿಕೆಟ್ ಕೊಡಿಸಿ ಸಮುದಾಯದ ಪ್ರೀತಿ-ವಿಶ್ವಾಸಕ್ಕೆ ಪಾತ್ರರಾಗಬಹುದಿತ್ತು. ಈಗ ಅಳಿಯ ಚಿಕ್ಕಪೆದ್ದಣ್ಣನಿಗೆ ಟಿಕೆಟ್ ಕೊಡಿಸಲು ರಂಪ ಮಾಡಿ ಸ್ವಪಕ್ಷದವರ ಆಕ್ರೋಶಕ್ಕೆ ಗುರಿಯಾಗಿದ್ದಾರೆ.

ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಶಾಮನೂರು ಶಿವಶಂಕರಪ್ಪ ಅವರಿಗೆ ಕುಟುಂಬದ ಆಚೆಗೆ ಸಮರ್ಥ ಅಭ್ಯರ್ಥಿಗಳೇ ಕಂಡಿಲ್ಲ. ಸ್ವತಃ ಶಾಮನೂರು ಶಿವಶಂಕರಪ್ಪ ಶಾಸಕರಾಗಿದ್ದಾರೆ. ಮಗ ಮಲ್ಲಿಕಾರ್ಜುನ್ ಮಂತ್ರಿಯಾಗಿದ್ದಾರೆ. ಸಾಲದೆಂಬಂತೆ ಸೊಸೆ ಪ್ರಭಾ ಮಲ್ಲಿಕಾರ್ಜುನ್ ಗೆ ಎಂಪಿ ಟಿಕೆಟ್ ಕೊಡಿಸಿದ್ದಾರೆ. ತಮ್ಮ ರಾಜಕೀಯಕ್ಕಾಗಿ ಹಗಲಿರುಳೂ ಶ್ರಮಿಸಿದ ಪಕ್ಷದ ನಿಷ್ಠಾವಂತರನ್ನು ಗುರುತಿಸಿದ್ದರೆ ಶಾಮನೂರು ಕುಟುಂಬದ ವ್ಯಾಪ್ತಿ ಹಿರಿದಾಗುತ್ತಿತ್ತು. ಶಾಮನೂರು ಶಿವಶಂಕರಪ್ಪ ಈ ಇಳಿವಯಸ್ಸಿನಲ್ಲಿ ಸೊಸೆಗಾಗಿ ಮಗನ ಮಂತ್ರಿ ಗಿರಿಯನ್ನೇ ಪಣಕ್ಕಿಟ್ಟಿದ್ದಾರೆ. ಅಕಸ್ಮಾತ್ ಸಿದ್ದೇಶ್ವರ್ ಹೆಂಡತಿ ಗೆದ್ದರೆ ಮಲ್ಲಿಕಾರ್ಜುನ್ ಮಂತ್ರಿಗಿರಿ ಖತಂ. ಗಾಯತ್ರಿ ಸಿದ್ದೇಶ್ವರ್‌ಸೋತರೆ ಸಿದ್ದೇಶ್ವರ್ ಕುಟುಂಬದ ರಾಜಕೀಯವೇ ಅಂತ್ಯವಾಗುತ್ತದೆ. ಗಾಯತ್ರಿ ಸಿದ್ದೇಶ್ವರ್ ಅವರನ್ನು ಸೋಲಿಸಲು ಬಿಜೆಪಿಯಲ್ಲಿ ದೊಡ್ಡಪಡೆಯೇ ಸಿದ್ಧವಾಗಿ ನಿಂತಿದೆ. ಕುಟುಂಬದ ಅನುಕೂಲಕ್ಕೆ ರಾಜಕೀಯ ಭವಿಷ್ಯವನ್ನು ಎರಡೂ ಕುಟುಂಬಗಳು ಪಣಕ್ಕಿಟ್ಟಿವೆ. ಶಾಮನೂರರಂತಹ ಹಿರಿಯರು ಕಾಂಗ್ರೆಸ್‌ನ ಕಿರಿಯರಿಗೆ ಕುಟುಂಬ ರಾಜಕಾರಣದಲ್ಲಿ ಮಾದರಿ ವ್ಯಕ್ತಿಯೆನಿಸಿದ್ದಾರೆ. ಬೀದರ್ ಲೋಕಸಭಾ ಕ್ಷೇತ್ರದಲ್ಲಿ ಒಂದು ಬಾರಿ ಸ್ವತಃ ಈಶ್ವರ ಖಂಡ್ರೆಯವರು ಸ್ಪರ್ಧಿಸಿ ಸೋಲನ್ನುಂಡಿದ್ದಾರೆ. ಈ ಬಾರಿ ಮಾಜಿ ಶಾಸಕ ರಾಜಶೇಖರ ಪಾಟೀಲ್ ಅವರಿಗೆ ಟಿಕೆಟ್ ನೀಡಿದ್ದರೆ ಕಾಂಗ್ರೆಸ್ ಗೆಲುವು ನಿಶ್ಚಿತ ಎಂದು ಜನ ಆಡಿಕೊಳ್ಳುತ್ತಿದ್ದರು. ದುರಂತವೆಂದರೆ, ರಾಜಶೇಖರ ಪಾಟೀಲ್‌ರ ಇಬ್ಬರು ತಮ್ಮಂದಿರು ಕಾಂಗ್ರೆಸ್ ಪಕ್ಷದಿಂದಲೇ ವಿಧಾನ ಪರಿಷತ್‌ನ ಸದಸ್ಯರಾಗಿದ್ದಾರೆ. ಮಿತಿಮೀರಿದ ಕುಟುಂಬ ರಾಜಕಾರಣದಿಂದಾಗಿಯೇ ರಾಜಶೇಖರ ಪಾಟೀಲ್‌ರನ್ನು ಹುಮ್ನಾಬಾದ್ ವಿಧಾನಸಭಾ ಕ್ಷೇತ್ರದ ಮತದಾರರು ಹೀನಾಯವಾಗಿ ಸೋಲಿಸಿ ಪಾಠ ಕಲಿಸಿದ್ದರು. ರಾಜಶೇಖರ ಪಾಟೀಲ್ ಮತ್ತು ಈಶ್ವರ ಖಂಡ್ರೆ ಕುಟುಂಬ ಒಟ್ಟಿಗೆ ಸೇರಿ ಪಕ್ಷದ ನಿಷ್ಠಾವಂತ ಕಾರ್ಯಕರ್ತನಿಗೆ ಟಿಕೆಟ್ ಕೊಡಿಸಿ ಪ್ರಾಮಾಣಿಕವಾಗಿ ಶ್ರಮಿಸಿದ್ದರೆ ಬೀದರ್ ಲೋಕಸಭಾ ಕ್ಷೇತ್ರ ಕಾಂಗ್ರೆಸ್ ಪಾಲಾಗುತ್ತಿತ್ತು. ಈಶ್ವರ ಖಂಡ್ರೆ ಕುಟುಂಬ ವ್ಯಾಮೋಹದಿಂದ ಬೀದರ್ ಟಿಕೆಟ್ ಅವರ ಮಗ ಸಾಗರ್ ಖಂಡ್ರೆ ಪಾಲಾಗಿದೆ. ಸಾಗರ್ ಖಂಡ್ರೆಯವರನ್ನು ಸೋಲಿಸಲು ರಾಜಶೇಖರ್ ಪಾಟೀಲ್ ಕುಟುಂಬ ಕ್ರಿಯಾಶೀಲವಾಗುತ್ತದೆ. ಸಾಗರ್ ಖಂಡ್ರೆ ಸೋತರೆ ಈಶ್ವರ ಖಂಡ್ರೆಯವರ ಮಂತ್ರಿಗಿರಿಗೆ ಕುತ್ತು ಬರುತ್ತದೆ. ಬೆಳೆಯುವ ಹಂತದಲ್ಲಿ ಇದೆಲ್ಲ ಈಶ್ವರ ಖಂಡ್ರೆ ಅವರಿಗೆ ಬೇಕಿತ್ತೇ?

ಬೆಳಗಾವಿಯ ಸತೀಶ್ ಜಾರಕಿಹೊಳಿಯವರು ಮಂತ್ರಿಯಾಗಿ ಉತ್ತಮ ಕೆಲಸ ಮಾಡುತ್ತಿದ್ದರು. ಅವರ ಕುಟುಂಬದಲ್ಲಿ ಮೂವರು ಸಹೋದರರು ಶಾಸಕರಾಗಿದ್ದಾರೆ. ಮಗಳಿಗೆ ಎಂಪಿ ಟಿಕೆಟ್ ಕೊಡಿಸಿದ್ದಾರೆ. ಅವರ ಮಗ ಕೂಡ ಸರತಿ ಸಾಲಿನಲ್ಲಿದ್ದಾರೆ. ಲಕ್ಷ್ಮೀ ಹೆಬ್ಬಾಳ್ಕರ್ ಸಿದ್ದರಾಮಯ್ಯ ಸಂಪುಟದಲ್ಲಿ ಪ್ರಭಾವಿ ಮಂತ್ರಿ. ಅವರ ಸಹೋದರ ಚನ್ನರಾಜ್ ಹಟ್ಟಿಹೊಳಿ ವಿಧಾನ ಪರಿಷತ್‌ನ ಸದಸ್ಯರು. ಅಷ್ಟು ಸಾಲದೆಂಬಂತೆ ಮಗ ಮೃಣಾಲ್ ಹೆಬ್ಬಾಳ್ಕರ್‌ಗೆ ಬೆಳಗಾವಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ದಯಪಾಲಿಸಲಾಗಿದೆ. ಪಂಚಮಸಾಲಿ ಸಮಾಜದ ಉದ್ಧಾರಕಿ ಎಂದು ಬಡಾಯಿ ಕೊಚ್ಚಿಕೊಳ್ಳುವ ಲಕ್ಷ್ಮೀ ಹೆಬ್ಬಾಳ್ಕರ್‌ಗೆ ಬೇರೆಯವರಿಗೆ ಟಿಕೆಟ್ ಕೊಡಿಸಿ ಗೆಲ್ಲಿಸುವ ಮೂಲಕ ಸಮುದಾಯದ ಪ್ರೀತಿ ವಿಶ್ವಾಸಕ್ಕೆ ಪಾತ್ರರಾಗಬಹುದಿತ್ತು. ಬಾಗಲಕೋಟೆಯಲ್ಲಿ ಮಂತ್ರಿ ಶಿವಾನಂದ ಪಾಟೀಲ್ ತನ್ನ ಮಗಳು ಸಂಯುಕ್ತಾ ಪಾಟೀಲ್‌ಗೆ ಎಂಪಿ ಟಿಕೆಟ್ ಕೊಡಿಸಿ ಸಂಭ್ರಮದಲ್ಲಿದ್ದರೆ, ವಿಜಯಾನಂದ ಕಾಶಪ್ಪನವರ್‌ತನ್ನ ಹೆಂಡತಿ ವೀಣಾ ಅವರಿಗೆ ಟಿಕೆಟ್ ಕೊಡಿಸುವಲ್ಲಿ ವಿಫಲರಾಗಿ ಗೋಳಾಡುತ್ತಿದ್ದಾರೆ. ಇಬ್ಬರೂ ಪಂಚಮಸಾಲಿ ಸಮುದಾಯದವರೇ. ಅವರಿಗೆ ತಮ್ಮ ಮಗಳು, ಹೆಂಡತಿ ಹೊರತುಪಡಿಸಿ ಅದೇ ಸಮುದಾಯದ ಬೇರೆಯವರು ಕಣ್ಣಿಗೆ ಕಾಣುವುದಿಲ್ಲ. ಒಂದು ವೇಳೆ ಶಿವಾನಂದ ಪಾಟೀಲ್ ಪುತ್ರಿ ಸೋತರೆ ಮಂತ್ರಿಗಿರಿಗೆ ಕುತ್ತು ಬಂದೇ ಬರುತ್ತದೆ. ಹಿರಿಯ ಮಂತ್ರಿ ರಾಮಲಿಂಗಾರೆಡ್ಡಿ ಅವರೂ ಮಗಳು ಸೌಮ್ಯ ರೆಡ್ಡಿಗೆ ಟಿಕೆಟ್ ಕೊಡಿಸಿ ರಿಸ್ಕ್ ಎದುರಿಸುವಂಥಾಗಿದೆ.

ರಾಜಕೀಯದಲ್ಲಿ ಜಾತಿ, ಉಪಜಾತಿಗಳನ್ನು ವ್ಯವಸ್ಥಿತವಾಗಿ ಬಳಸಿಕೊಳ್ಳಲಾಗುತ್ತದೆ. ಪಕ್ಷ, ಕಾರ್ಯಕರ್ತರು ಮತ್ತು ಎಲ್ಲರನ್ನೊಳಗೊಂಡ ಸಮಾಜ, ಜಾತ್ಯತೀತ ತತ್ವಗಳನ್ನು ಸಂದರ್ಭಾನುಸಾರ ಉಪಯೋಗಿಸುವ ಸಾಧನಗಳು. ಮಗ, ಮಗಳು, ಹೆಂಡತಿ, ಅಳಿಯ ಸಂಬಂಧಗಳೇ ಹೆಚ್ಚಾಗಿ ಉಳಿದೆಲ್ಲ ಸಂಬಂಧಗಳು ಗೌಣವಾಗಿ ಬಿಡುತ್ತವೆ. ಜಾತಿ, ಉಪಜಾತಿಗಳೂ ನಿರರ್ಥಕ ಎಂದು ಮನವರಿಕೆಯಾಗುವುದು ಅಧಿಕಾರ ಹಂಚಿಕೆಯ ಗಳಿಗೆಯಲ್ಲೇ. ರಾಜಕಾರಣಿಗಳ ಕುಟುಂಬ ವ್ಯಾಮೋಹದ ಪರಿ ಮನುಷ್ಯ ಸಂಬಂಧಗಳನ್ನೇ ಅವಮಾನಿಸುವಂತೆ ಮಾಡಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ಡಾ. ರಾಜಶೇಖರ ಹತಗುಂದಿ

contributor

Similar News