ಕೇಂದ್ರ ಬಜೆಟ್: ವಿಕಸಿತ ಭಾರತದ ಹಸಿ ಸುಳ್ಳುಗಳು

ಕಳೆದ ಹತ್ತು ವರ್ಷಗಳಲ್ಲಿ ಮೋದಿ ಸರಕಾರದ ಬಜೆಟ್‌ಗಳಿಂದ ಭಾರತದ ಜನಸಾಮಾನ್ಯರಿಗೆ ಕವಡೆ ಕಿಮ್ಮತ್ತಿನಷ್ಟು ಅನುಕೂಲವಾಗಿಲ್ಲ. ಆದರೆ ಅದಾನಿ-ಅಂಬಾನಿಯಂತಹ ಕಾರ್ಪೊರೇಟ್ ಕುಳಗಳ ಆದಾಯ ನೂರಾರು ಪಟ್ಟು ಹೆಚ್ಚಾಗಿದೆ. ನಿರ್ಮಲಾ ಸೀತಾರಾಮನ್ ಅವರ ಕಾರ್ಪೊರೇಟ್ ಹಿತ ಕಾಪಾಡುವ ಬಜೆಟ್‌ಗಳು ಹೀಗೆ ಮುಂದುವರಿದರೆ ಮಧ್ಯಮವರ್ಗವೇ ಇಲ್ಲದಂತಾಗುತ್ತದೆ. ಇನ್ನೊಂದೆಡೆ ಎರಡು ಹೊತ್ತಿನ ಊಟಕ್ಕೂ ಗತಿಯಿಲ್ಲದವರ ಸಂಖ್ಯೆ ಹೆಚ್ಚುತ್ತದೆ ವಿಕಸಿತ ಭಾರತದ ಹೆಸರಲ್ಲಿ.

Update: 2024-07-27 05:17 GMT

ಲೋಕಸಭಾ ಚುನಾವಣೆಗೂ ಮುಂಚೆ ಎಲ್ಲಾ ರಾಷ್ಟ್ರೀಯ ಚಾನೆಲ್ ಗಳಲ್ಲಿ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ವಿಶೇಷ ಸಂದರ್ಶನಗಳು ಪ್ರಸಾರವಾಗುತ್ತಿದ್ದವು. ಆ ಎಲ್ಲಾ ಸಂದರ್ಶನಗಳ ಒಟ್ಟು ಸಾರ ಇಷ್ಟೇ; ಮೂರನೇ ಅವಧಿಗೆ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ಮೊದಲ ನೂರು ದಿನಗಳಲ್ಲಿ ವಿಕಸಿತ ಭಾರತದ ಕನಸು ಸಾಕಾರಗೊಳಿಸಲು ವಿಶೇಷ ಯೋಜನೆ ರೂಪಿಸಿದ್ದೇನೆ ಎಂಬುದು. ೧೦ ವರ್ಷಗಳ ಕಾಲ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಸುಳ್ಳಿನ ಭಾಷಣ ಕೇಳಿ ಕೇಳಿ ಬೇಸತ್ತ ಮತದಾರ ಈ ಬಾರಿ ಅವರನ್ನು ಮನೆಗೆ ಕಳುಹಿಸಲು ನಿರ್ಧರಿಸಿದ್ದ. ಆದರೆ ಒಂದಷ್ಟು ಮತದಾರರು ವಿಕಸಿತ ಭಾರತದ ಕಟ್ಟು ಕಥೆಗೆ ಮಾರುಹೋಗಿದ್ದರಿಂದ ನರೇಂದ್ರ ಮೋದಿಯವರು ಎನ್‌ಡಿಎ ಬಲದ ಮೇಲೆ ಮೂರನೇ ಬಾರಿಗೆ ಪ್ರಧಾನ ಮಂತ್ರಿ ಹುದ್ದೆ ಅಲಂಕರಿಸಿದರು. ಚರಿತ್ರಾರ್ಹ ಅಭಿವೃದ್ಧಿ ಕೆಲಸಗಳನ್ನು ಮಾಡುವುದು ಅವರ ಇರಾದೆ ಆಗಿರಲಿಲ್ಲ. ಮೂರನೇ ಅವಧಿಗೆ ಪ್ರಧಾನಿಯಾದೆ ಎಂದು ಜಂಬ ಕೊಚ್ಚಿಕೊಳ್ಳುವುದು ಅವರ ಅಭಿಲಾಷೆಯಾಗಿತ್ತು. ಈಗ ಅದು ಸಾಕಾರಗೊಂಡಿದೆ. ಹಾಗೆ ನೋಡಿದರೆ ನರೇಂದ್ರ ಮೋದಿಯವರು ಅತಿ ಹೆಚ್ಚು ಬಾರಿ ವಿದೇಶಗಳಿಗೆ ಭೇಟಿ ನೀಡಿದ್ದಾರೆ. ಆ ದೇಶಗಳಿಗೆ ಹೋದಾಗಲೆಲ್ಲ ಅವರಿಗೆ ಅಪರಾಧಿ ಪ್ರಜ್ಞೆ ಕಾಡಬೇಕಿತ್ತು. ಆ ದೇಶದ ರಾಜಕಾರಣಿಗಳು ಕೈಗೊಂಡ ಅಭಿವೃದ್ಧಿ ಯೋಜನೆಗಳು ಮೋದಿಯವರಿಗೆ ಪ್ರೇರಣೆಯಾಗಬೇಕಿತ್ತು. ಹತ್ತು ವರ್ಷಗಳ ಅಮೂಲ್ಯ ಸಮಯವನ್ನು ಸುಳ್ಳು ಹೇಳುವುದರಲ್ಲೇ ಕಳೆದ ಮೋದಿಯವರು ಭಾರತದ ಅಭಿವೃದ್ಧಿಗಿಂತ ತಮ್ಮ ವರ್ಚಸ್ಸು ಹೆಚ್ಚಿಸಿಕೊಳ್ಳುವುದರಲ್ಲಿ ಯಶಸ್ವಿಯಾದರು. ಭಾರತ ಮಾತ್ರ ನಿಂತಲ್ಲೇ ನಿಂತಿದೆ.

ನೆಹರೂ ಯುಗದಲ್ಲಿ ಭಾರತ ಪಂಚವಾರ್ಷಿಕ ಯೋಜನೆಗಳ ಮೂಲಕವೇ ಎದ್ದು ನಿಂತಿತು. ಬ್ರಿಟಿಷರು ಹಾಳು ಕೊಂಪೆಯಂತಹ ಭಾರತ ಬಿಟ್ಟು ಹೋಗಿದ್ದರು. ಅವರ ಕಾಲದಲ್ಲಿ ಸಮಸ್ತ ಭಾರತವನ್ನು ಸಂಪರ್ಕಿಸುವ ಏಕೈಕ ಸಾಧನವೆಂದರೆ ರೈಲು ಮಾತ್ರವಾಗಿತ್ತು. ಪಂಚವಾರ್ಷಿಕ ಯೋಜನೆಗಳು ಆದ್ಯತಾ ವಲಯಗಳನ್ನು ನಿಗದಿಪಡಿಸಿದರೆ ಪ್ರತೀ ವರ್ಷ ಸಂಸತ್‌ನಲ್ಲಿ ಮಂಡಿಸುವ ವಾರ್ಷಿಕ ಬಜೆಟ್ ಅಭಿವೃದ್ಧಿಯ ವೇಗವನ್ನು ಹೆಚ್ಚಿಸುವ ಚಾಲಕ ಶಕ್ತಿಯಾಗಿದ್ದವು. ಬಜೆಟ್‌ನಲ್ಲಿ ಪ್ರಕಟಿಸಿದ ಎಲ್ಲಾ ಯೋಜನೆಗಳು ಯುದ್ಧೋಪಾದಿಯಲ್ಲಿ ಅನುಷ್ಠಾನಗೊಳ್ಳುತ್ತಿದ್ದವು. ವಾರ್ಷಿಕ ಆಯವ್ಯಯಕ್ಕೆ ಆ ಮಟ್ಟದ ಪಾವಿತ್ರ್ಯತೆ ಇತ್ತು. ಆಗ ಚುನಾವಣೆ ಗೆಲ್ಲುವುದು ದುಬಾರಿಯಾಗಿರಲಿಲ್ಲ. ಸುಳ್ಳು ಹೇಳುವುದು ರಾಜಕಾರಣಿಗಳಿಗೆ ಅನಿವಾರ್ಯವಾಗಿರಲಿಲ್ಲ. ಸುಳ್ಳು ನೆರೆಟೀವ್ ಸೃಷ್ಟಿಸಿ ಮತದಾರರನ್ನು ಮರುಳು ಮಾಡುವುದು ಅಂದಿನ ರಾಜಕಾರಣಿಗಳಿಗೆ ಅಗತ್ಯವಾಗಿರಲಿಲ್ಲ. ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿದ್ದನ್ನೇ ವಾರ್ಷಿಕ ಬಜೆಟ್‌ನಲ್ಲಿ ಅಳವಡಿಸಿಕೊಳ್ಳಲಾಗುತ್ತಿತ್ತು. ಚುನಾವಣಾ ಪ್ರಣಾಳಿಕೆ ಮತ್ತು ವಾರ್ಷಿಕ ಬಜೆಟ್ ಸಮಾನ ಮೌಲ್ಯ ಪಡೆದುಕೊಂಡಿದ್ದವು. ಸುಳ್ಳು ಭರವಸೆ ನೀಡಲು ಅಂದಿನ ರಾಜಕಾರಣಿಗಳು ಅಳುಕುತ್ತಿದ್ದರು, ಅಂಜುತ್ತಿದ್ದರು. ಮೋದಿಯವರು ಕಳೆದ ಹತ್ತು ವರ್ಷಗಳ ಕಾಲ ಸುಳ್ಳುಗಳಿಂದಲೇ ವಿಜೃಂಭಿಸಿದ್ದಾರೆ. ಸುಳ್ಳನ್ನು ಮಾರ್ಕೆಟ್ ಮಾಡಿ ಲಾಭ ಮಾಡಿಕೊಳ್ಳಬಹುದೆಂದು ಜಗತ್ತಿಗೆ ತೋರಿಸಿಕೊಟ್ಟವರು ನರೇಂದ್ರ ಮೋದಿ.

೨೦೧೪ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ನರೇಂದ್ರ ಮೋದಿಯವರು ಯುಪಿಎ ಸರಕಾರಗಳ ಹತ್ತು ವರ್ಷಗಳ ಕಾಲದ ವೈಫಲ್ಯ, ಹಗರಣಗಳನ್ನು ಮಾತ್ರ ಪ್ರಚಾರ ಮಾಡಲಿಲ್ಲ. ವಿದೇಶದಿಂದ ಕಪ್ಪು ಹಣ ತರುವುದು, ಎಲ್ಲ ಮತದಾರರ ಖಾತೆಗೆ ರೂ. ಹದಿನೈದು ಲಕ್ಷ ಜಮೆ ಮಾಡುವುದು ಸೇರಿದಂತೆ ಹತ್ತು ಹಲವು ಕನಸುಗಳನ್ನು ಬಿತ್ತರಿಸಿದರು. ಗುಜರಾತ್ ಮಾದರಿಯ ಅಭಿವೃದ್ಧಿ ಎಂಬುದು ಇಳೆಯ ಮೇಲಿನ ಸ್ವರ್ಗ ಎನ್ನುವಷ್ಟು ಪ್ರಚಾರ ಪಡೆದುಕೊಂಡಿತು. ಬಿಜೆಪಿಯ ಕೋಮುವಾದಿ ಅಜೆಂಡಾದಿಂದ ಬೇಸತ್ತ ಭಾರತೀಯರನ್ನು ‘ಸಬ್‌ಕಾ ಸಾಥ್ ಸಬ್ ಕಾ ವಿಕಾಸ್’- ಅಭಿವೃದ್ಧಿ ರಾಜಕಾರಣದ ಈ ಘೋಷಣೆ ಮತ್ತು ಹೊಸ ಪರಿಭಾಷೆ ಸೆಳೆಯಿತು. ಟೀ ಮಾರಿ ಅನುಭವ ಇರುವ ಮೋದಿಯವರಿಗೆ ಬಡತನದ ಬವಣೆ ಗೊತ್ತಿದೆ. ಭಾರತವನ್ನು ಅಭಿವೃದ್ಧಿ ಪಥದತ್ತ ಮುನ್ನಡೆಸುತ್ತಾರೆ ಎಂದೇ ಮತದಾರರು ಬಲವಾಗಿ ನಂಬಿದ್ದರು. ನಿರುದ್ಯೋಗ, ಬಡತನ ನಿವಾರಣೆಯಾಗಿ ನಿಜವಾದ ಅರ್ಥದಲ್ಲಿ ‘ಅಚ್ಛೇ ದಿನ್’ ಬಂದೇ ಬರುತ್ತದೆ ಎಂದು ಗಾಢವಾಗಿ ನಂಬಿದ್ದರು. ಅಚ್ಛೇದಿನ್ ಬರುವುದು ಒತ್ತಟ್ಟಿಗಿರಲಿ ಇರುವ ಒಳ್ಳೆಯ ದಿನಗಳು ಮಾಯವಾದವು. ಮೋದಿಯವರ ಮೊದಲ ಕಾಲಾವಧಿಯ ನೋಟ್‌ಬ್ಯಾನ್ ಮತದಾರರನ್ನು ಅಕ್ಷರಶಃ ಬೀದಿ ಪಾಲು ಮಾಡಿತು. ಪರ್ಯಾಯ ಅರ್ಥವ್ಯವಸ್ಥೆಯನ್ನು ಹಾಳುಗೆಡವಿದ ಮೋದಿ ಸರಕಾರ ಕಪ್ಪು ಹಣದ ವಹಿವಾಟು ಹೆಚ್ಚುವಂತೆ ಮಾಡಿತು. ೧೫ ಲಕ್ಷ ಹಣ ಯಾರ ಬ್ಯಾಂಕ್ ಖಾತೆಗೂ ಜಮೆಯಾಗಲಿಲ್ಲ. ಅಷ್ಟೋ ಇಷ್ಟೋ ಉಳಿತಾಯ ಮಾಡಿದ ಹಣ ಕಳೆದುಕೊಂಡು ಜನ ಪಾಪರ್ ಆದರು. ಆದರೆ ಅಂಬಾನಿ, ಅದಾನಿಯಂತಹ ಕಾರ್ಪೊರೇಟ್ ಕುಳಗಳು ಆರ್ಥಿಕವಾಗಿ ದಷ್ಟಪುಷ್ಟವಾದರು.

ಪ್ರಸಕ್ತ ಸಾಲಿನ (೨೦೨೪) ಬಜೆಟ್ ಮೇಲೆ ಒಮ್ಮೆ ಕಣ್ಣಾಡಿಸಿದರೆ ಕಳೆದ ಹತ್ತು ವರ್ಷಗಳಲ್ಲಿ ಮೋದಿ ಸರಕಾರ ಮಂಡಿಸಿದ ಬಜೆಟ್‌ಗಳನ್ನೇ ನೆನಪಿಸುತ್ತದೆ. ಅಷ್ಟು ಮಾತ್ರವಲ್ಲ, ಅದು ಅಭಿವೃದ್ಧಿಯ ಭ್ರಮೆ ಮೂಡಿಸುತ್ತದೆಯೇ ಹೊರತು ಆಳದಲ್ಲಿ ಕಾರ್ಪೊರೇಟ್ ಕುಳಗಳ ವ್ಯಾಪಾರ-ವಹಿವಾಟುಗಳಿಗೆ ಪೂರಕವಾಗಿ ನಿಲ್ಲುವ ಅಂಶಗಳನ್ನು ಒಳಗೊಂಡಿದೆ. ನಮ್ಮ ಬುದ್ಧಿಜೀವಿಗಳು, ಅರ್ಥಶಾಸ್ತ್ರಜ್ಞರು ಅಷ್ಟೇ ಯಾಕೆ, ಕಾಂಗ್ರೆಸ್ ಸೇರಿದಂತೆ ಎಲ್ಲಾ ಪ್ರತಿಪಕ್ಷಗಳ ಮುಖಂಡರು ಮೋದಿ ಸರಕಾರಗಳ ಎಲ್ಲಾ ಬಜೆಟ್‌ಗಳ ಒಳಮರ್ಮ ಅರಿಯಲೇ ಇಲ್ಲ. ಕಳೆದ ಹತ್ತು ವರ್ಷಗಳಲ್ಲಿ ಕೃಷಿಕ್ಷೇತ್ರಕ್ಕೆಂದು ಸಾಕಷ್ಟು ಹಣ ವ್ಯಯಿಸಿದ್ದಾರೆ. ರೈತ ಯೋಜನೆಗಳು ರೈತರ ಒಳಿತಿಗಾಗಿ ಕಾರ್ಯನಿರ್ವಹಿಸಿದ್ದರೆ ರೈತರ ಆತ್ಮಹತ್ಯೆಗಳು ಸಂಭವಿಸುತ್ತಿರಲಿಲ್ಲ. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ ನೇರ ನಗದು ವರ್ಗಾವಣೆಯ ಹಣ ಮಾತ್ರ ರೈತರಿಗೆ ತಲುಪಿದೆ. ಕೃಷಿ ಕ್ಷೇತ್ರದ ಉಳಿದೆಲ್ಲ ಯೋಜನೆಗಳು ಕಾರ್ಪೊರೇಟ್ ಕುಳಗಳ ಕಿಸೆ ತುಂಬಿಸಿವೆ. ಆಯವ್ಯಯದಲ್ಲಿ ಹಣ ಮೀಸಲಿಡುವುದೇ ಕೃಷಿ ಮತ್ತು ಕೃಷಿ ಸಂಬಂಧಿತ ವ್ಯವಹಾರಗಳು ಎಂಬ ಶೀರ್ಷಿಕೆಯಡಿ. ಕೃಷಿ ಸಂಬಂಧಿತ ಸಬ್ಸಿಡಿಗಳೂ ಕಾರ್ಪೊರೇಟ್ ಕುಳಗಳ ಪಾಲಾಗುತ್ತವೆ. ಹತ್ತು ವರ್ಷಗಳ ಮೋದಿ ಆಡಳಿತದ ನಂತರವೂ ಬಡತನ, ನಿರುದ್ಯೋಗ ಹೆಚ್ಚಿದೆ. ರೈತರಿಗೆ ಉಚಿತ ಪಡಿತರ ಮತ್ತು ವಾರ್ಷಿಕ ರೂ. ೬,೦೦೦ ನೇರ ನಗದು ವರ್ಗಾವಣೆಯಾಗುತ್ತಿರುವುದರಿಂದ ಬಹುದೊಡ್ಡ ರೈತ ಸಮುದಾಯ ದಂಗೆ ಎದ್ದಿಲ್ಲ. ಕಳೆದ ಹತ್ತು ವರ್ಷಗಳಲ್ಲಿ ರೈತಾಪಿ ಸಮುದಾಯ ಸ್ವಾವಲಂಬಿ ಬದುಕು ಕಟ್ಟಿಕೊಳ್ಳುವ ಹಂತ ತಲುಪಬೇಕಿತ್ತು. ರೈತರಿಗೆ ಬಲ ನೀಡುವ ಕನಿಷ್ಠ ಬೆಂಬಲ ಬೆಲೆ ಕಾಯ್ದೆ ರಚಿಸಬೇಕೆಂದು ಮೊದಲಿನಿಂದಲೂ ಒತ್ತಾಯವಿದ್ದರೂ ಆ ನಿಟ್ಟಿನಲ್ಲಿ ಗಮನಹರಿಸಲೇ ಇಲ್ಲ. ರೈತರಿಗೆ ಒಳಿತು ಮಾಡುವ ಇರಾದೆ ಸರಕಾರಕ್ಕೆ ಇದ್ದಿದ್ದರೆ ಎಂ. ಎಸ್. ಸ್ವಾಮಿನಾಥನ್ ವರದಿಯ ಶಿಫಾರಸುಗಳನ್ನು ಒಪ್ಪಿಕೊಂಡು ಜಾರಿಗೊಳಿಸಬೇಕಿತ್ತು. ಸ್ವಾಮಿನಾಥನ್ ಅವರಿಗೆ ಭಾರತ ರತ್ನ ನೀಡಿದ ಮೋದಿ ಸರಕಾರ ಅವರ ಶಿಫಾರಸುಗಳನ್ನು ಗೆದ್ದಲು ತಿನ್ನುವಂತೆ ಮಾಡಿದ್ದು ಅಗೌರವದ ಸೂಚನೆಯಂತಿದೆ.

ಕಳೆದ ಹತ್ತು ವರ್ಷಗಳಲ್ಲಿ ಮಂಡನೆಯಾದ ಎಲ್ಲಾ ಬಜೆಟ್‌ಗಳಲ್ಲಿ ಉದ್ಯೋಗ ಸೃಷ್ಟಿಗೆ, ಬಡತನ ನಿವಾರಣೆಗೆ, ಶಿಕ್ಷಣಕ್ಕೆ, ಮೂಲಸೌಕರ್ಯ ಅಭಿವೃದ್ಧಿಗೆ, ನಗರಾಭಿವೃದ್ಧಿಗೆ, ಕೃಷಿಗೆ, ಆರೋಗ್ಯಕ್ಕೆ, ಲಕ್ಷ ಲಕ್ಷ ಕೋಟಿ ಯಷ್ಟು ಹಣವನ್ನು ವ್ಯಯಮಾಡಲಾಗಿದೆ. ಸ್ಮಾರ್ಟ್ ಸಿಟಿ ಯೋಜನೆಯಡಿ ಬರುವ ನಗರಗಳಿಗೆ ಒಮ್ಮೆ ಭೇಟಿ ನೀಡಿದರೆ ನಗರಾಭಿವೃದ್ಧಿಯ ವಿರಾಟ್ ಸ್ವರೂಪ ಮನದಟ್ಟಾಗುತ್ತದೆ. ಮೋದಿ ಅಧಿಕಾರ ಅವಧಿಯಲ್ಲಿ ಉನ್ನತ ಶಿಕ್ಷಣ ಸಂಪೂರ್ಣ ಗುಣಮಟ್ಟ ಕಳೆದುಕೊಂಡಿದೆ. ವಿಶ್ವವಿದ್ಯಾನಿಲಯದ ಧನಸಹಾಯ ಆಯೋಗ ಮೋದಿ ಬರುವ ಮುಂಚೆ ವಿಶ್ವವಿದ್ಯಾನಿಲಯಗಳಿಗೆ ಧನ ಸಹಾಯ ನೀಡುತ್ತಿತ್ತು. ಈಗ ಧನ ಆಯೋಗ ನೀತಿ ನಿರೂಪಣಾ ಕೇಂದ್ರವಾಗಿದೆ. ಭಾರತದಲ್ಲಿನ ಕಾಲೇಜು, ವಿಶ್ವವಿದ್ಯಾನಿಲಯಗಳು ಅಗತ್ಯದ ಬೋಧಕ ಸಿಬ್ಬಂದಿ ಇಲ್ಲದೆ ಅಧ್ಯಾಪನ, ಅಧ್ಯಯನ, ಸಂಶೋಧನೆಗಳಿಂದ ಎರವಾಗಿವೆ. ಜಿಲ್ಲೆಗೊಂದು ವಿಶ್ವವಿದ್ಯಾನಿಲಯ ನೀತಿ ತಂದು ಉನ್ನತ ಶಿಕ್ಷಣ ತ್ರಿಶಂಕುವಾಗಿದೆ. ಪ್ರಸಕ್ತ ಸಾಲಿನ ಬಜೆಟ್ ಸ್ವರೂಪ, ಅದ್ಯತಾವಲಯ ಇಲಾಖಾವಾರು ಹಣ ಹಂಚಿಕೆಯ ವಿವರ ಗಮನಿಸಿದರೆ ಸರಕಾರದ ಕಾರ್ಪೊರೇಟ್ ಕಾಳಜಿ ಎದ್ದು ಕಾಣುತ್ತದೆ. ಕಳೆದ ಹತ್ತು ವರ್ಷಗಳ ಎಲ್ಲ ಬಜೆಟ್‌ಗಳ ಹಣೆಬರಹವೂ ಇದೇ ಆಗಿದೆ. ರಾಷ್ಟ್ರೀಯ ಹೆದ್ದಾರಿಗಳ ನಿರ್ಮಾಣ, ನಿರ್ವಹಣೆ ಮತ್ತು ಬಹುದೊಡ್ಡ ಲಾಭ ಕಾರ್ಪೊರೇಟ್ ಕಂಪೆನಿಗಳ ಪಾಲಾಗುತ್ತದೆ. ಗ್ರಾಮೀಣ ಅರ್ಥ ವ್ಯವಸ್ಥೆಯ ಅಭಿವೃದ್ಧಿಗೆ ರಾಷ್ಟ್ರೀಯ ಹೆದ್ದಾರಿಗಳು ಪೂರಕವಾಗುವುದರ ಬದಲು ಮಾರಕವಾಗಿವೆ. ಪ್ರಸಕ್ತ ಸಾಲಿನ ಬಜೆಟ್ ಗಾತ್ರ ರೂ. ೪೭.೬೬ ಲಕ್ಷ ಕೋಟಿ ಇದೆ. ಇದು ಮಿಗುತಾಯ ಬಜೆಟ್ ಅಲ್ಲವೇ ಅಲ್ಲ. ಉತ್ಪಾದಕತೆ, ಉದ್ಯೋಗ, ಸಾಮಾಜಿಕ ನ್ಯಾಯ, ನಗರಾಭಿವೃದ್ಧಿ, ಇಂಧನ ಭದ್ರತೆ, ಮೂಲ ಸೌಕರ್ಯ, ನಾವೀನ್ಯತೆ, ಸುಧಾರಣೆಗಳು ಈ ಬಜೆಟ್‌ನ ಆದ್ಯತೆಗಳು. ಕೃಷಿ, ಶಿಕ್ಷಣ, ಆರೋಗ್ಯ, ಗ್ರಾಮೀಣಾಭಿವೃದ್ಧಿ ಈ ಬಜೆಟ್‌ನ ಮೊದಲ ಆದ್ಯತೆಯಲ್ಲ ಎನ್ನುವುದು ಮೇಲ್ನೋಟಕ್ಕೆ ಮನವರಿಕೆಯಾಗುತ್ತದೆ. ಉತ್ಪಾದಕತೆ, ನಗರಾಭಿವೃದ್ಧಿ, ಇಂಧನ ಭದ್ರತೆ, ಮೂಲಸೌಕರ್ಯ, ನಾವೀನ್ಯತೆ, ಸುಧಾರಣೆ ಹೆಸರುಗಳಲ್ಲಿ ವಿನ್ಯಾಸಗೊಳ್ಳುವ ಅಭಿವೃದ್ಧಿ ಯೋಜನೆಗಳು ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ವರವಾಗುವುದು ಕಾರ್ಪೊರೇಟ್ ಕುಳಗಳಿಗೆ ಅರ್ಥಾತ್ ಅಂಬಾನಿ, ಅದಾನಿಯಂತಹ ಅಗರ್ಭ ಶ್ರೀಮಂತರಿಗೆ. ಸೌರ ಯೋಜನೆ ರೂಪಿಸಿ ಜಾರಿಗೊಳಿಸಿದರೆ ಅದರ ಲಾಭ ಅಂಬಾನಿ, ಅದಾನಿಯ ಲೆಕ್ಕಕ್ಕೇ ಸೇರುತ್ತದೆ.

ಇಲಾಖಾವಾರು ಹಣಕಾಸು ಹಂಚಿಕೆಯ ವಿವರ ಗಮನಿಸಿ; ಸಾಮಾಜಿಕ ಕಲ್ಯಾಣಕ್ಕೆೆ ರೂ. ೫,೫೦೧೧ ಕೋಟಿ, ಆರೋಗ್ಯಕ್ಕೆ ರೂ. ೮೯,೨೮೭ ಕೋಟಿ, ಶಿಕ್ಷಣಕ್ಕೆ ರೂ. ೧,೨೫,೬೩೮ ಕೋಟಿ, ಕೃಷಿಗೆ ರೂ. ೧,೫೧,೮೫೧ ಕೋಟಿ, ಗ್ರಾಮೀಣಾಭಿವೃದ್ಧಿಗೆ ರೂ. ೨,೬೫,೮೦೮ ಕೋಟಿ, ರಕ್ಷಣೆಗೆ ಅತಿ ಹೆಚ್ಚು ಮೊತ್ತ ರೂ. ೪,೫೪,೭೭೩ ಕೋಟಿ ಹಣವನ್ನು ಮೀಸಲಿಡಲಾಗಿದೆ. ಕೃಷಿಯಲ್ಲಿ ಕೃಷಿ ಮತ್ತು ಕೃಷಿ ಸಂಬಂಧಿತ ವ್ಯವಹಾರಗಳು ಸೇರಿರುವುದರಿಂದ ಕಾರ್ಪೊರೇಟ್ ಕಂಪೆನಿಗಳಿಗೆ ಅನುಕೂಲವಾಗುವ ಯೋಜನೆಗಳೇ ಜಾರಿಗೊಳ್ಳುತ್ತವೆ. ಕೃಷಿಕರು ಸಂಪೂರ್ಣ ಸ್ವಾವಲಂಬಿಯಾಗಿ ನಿಲ್ಲುವ ಯೋಜನೆಗಳೇ ರೂಪುಗೊಳ್ಳುವುದಿಲ್ಲ. ಮಳೆಯಾಧಾರಿತ ಕೃಷಿಯ ಅನಿಶ್ಚಿತತೆ ಒಂದೆಡೆಯಾದರೆ; ಕೃಷಿ ಉತ್ಪನ್ನಗಳ ಬೆಲೆ ನಿಗದಿ ವಿಧಾನವೇ ಸಂಪೂರ್ಣ ಅವೈಜ್ಞಾನಿಕ ಮತ್ತು ರೈತ ವಿರೋಧಿಯಾಗಿದೆ. ವಿಕಸಿತ ಭಾರತದ ಕನಸು ಬಿತ್ತುತ್ತಿರುವ ಮೋದಿ ಸರಕಾರ ಕಿಸಾನ್ ಕ್ರೆಡಿಟ್ ಕಾರ್ಡ್‌ಗಳನ್ನು ಪ್ರಾಯೋಗಿಕವಾಗಿ ಐದು ರಾಜ್ಯಗಳಲ್ಲಿ ನೀಡುವುದಾಗಿ ಬಜೆಟ್‌ನಲ್ಲಿ ಪ್ರಸ್ತಾವಿಸಿದೆ. ನಿಶ್ಚಿತವಾಗಿ ತೆರಿಗೆ ಪಾವತಿಸುವ ಉದ್ಯೋಗಿಗಳಿಗೆ ಮೂಗಿಗೆ ತುಪ್ಪ ಸವರುವುದು ಮೋದಿ ಸರಕಾರದ ಚಾಳಿ. ವಾಸ್ತವದಲ್ಲಿ ಸರಕಾರಿ ಮತ್ತು ಐಟಿ-ಬಿಟಿ ಉದ್ಯೋಗಿಗಳಿಗೆ ಹೆಚ್ಚಿನ ಲಾಭವೇನೂ ಆಗಿರುವುದಿಲ್ಲ. ಈ ಬಾರಿಯೂ ತೆರಿಗೆ ಪಾವತಿಸುವ ಉದ್ಯೋಗಿಗಳ ಜೇಬಿಗೆ ಕತ್ತರಿ ಹಾಕಲಾಗಿದೆ.

ಭಾರತೀಯ ಜನತಾ ಪಕ್ಷವನ್ನು ಆರಂಭದ ದಿನಗಳಿಂದ ಬೆಂಬಲಿಸುತ್ತಾ ಬಂದವರು ಸರಕಾರಿ ನೌಕರರೇ. ಆರೆಸ್ಸೆಸ್ ಶಾಖೆಗಳಲ್ಲಿ ಕಾಣಿಸಿಕೊಳ್ಳುವವರೂ ಸರಕಾರಿ ನೌಕರರೇ. ದುರಂತವೆಂದರೆ ಸರಕಾರಿ ನೌಕರರು ಮತ್ತವರ ಕುಟುಂಬದವರ ಕತ್ತು ಹಿಚುಕುವ ನಿರ್ಧಾರ ಕೈಗೊಂಡಿದ್ದು ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಬಿಜೆಪಿ ಸರಕಾರ. ಸುದೀರ್ಘ ೨೦-೩೦ ವರ್ಷಗಳ ಕಾಲ ಸರಕಾರಿ ನೌಕರಿಯಲ್ಲಿದ್ದು ನಿವೃತ್ತಿಯಾಗುವ ಸರಕಾರಿ ನೌಕರರಿಗೆ, ಮತ್ತವರ ಕುಟುಂಬದವರಿಗೆ ನಿಶ್ಚಿತ ವರಮಾನದ ಪಿಂಚಣಿ ಯೋಜನೆಯನ್ನು ಜಾರಿಗೊಳಿಸಲಾಗಿತ್ತು. ೨೦೦೩ರಲ್ಲಿ ಅಟಲ್ ಬಿಹಾರಿ ವಾಜಪೇಯಿ ಸರಕಾರ ಹಳೆಯ ಪಿಂಚಣಿ ಯೋಜನೆಯನ್ನು ರದ್ದುಗೊಳಿಸಿ ಕಾರ್ಪೊರೇಟ್ ಕುಳಗಳಿಗೆ ಲಾಭ ಮಾಡಿಕೊಡುವ ರಾಷ್ಟ್ರೀಯ ಪಿಂಚಣಿ ಯೋಜನೆಯನ್ನು ಜಾರಿಗೊಳಿಸಿತ್ತು. ಐದು ವರ್ಷ ಸಂಸದರಾಗಿರುವವರ ಪಿಂಚಣಿಗೆ ಕುತ್ತು ಬರಲಿಲ್ಲ. ಎನ್‌ಪಿಎಸ್‌ಗೆ ವ್ಯಾಪಕ ವಿರೋಧ ಕೇಳಿಬಂದಿದ್ದರಿಂದ ಮೋದಿ ಸರಕಾರ ಪರಿಶೀಲನೆಗೆಂದು ಸಮಿತಿ ರಚಿಸಿತ್ತು. ಹಳೆ ಪಿಂಚಣಿ ಯೋಜನೆಯನ್ನು ಜಾರಿಗೊಳಿಸುವ ನಿರ್ಧಾರವನ್ನು ಈ ಬಜೆಟ್‌ನಲ್ಲಿ ಪ್ರಸ್ತಾಪಿಸಬಹುದೆಂದು ಸರಕಾರಿ ನೌಕರರು ಆಶಾಭಾವನೆ ಹೊಂದಿದ್ದರು. ಕಾಂಗ್ರೆಸ್ ಸರಕಾರ ಇರುವ ರಾಜ್ಯಗಳಲ್ಲಿ ಹಳೆಯ ಪಿಂಚಣಿ ಯೋಜನೆಯನ್ನು ಮರು ಸ್ಥಾಪಿಸಲಾಗಿದೆ. ಕಾಂಗ್ರೆಸ್ ಮಾತ್ರವಲ್ಲ, ಆಪ್ ಸೇರಿದಂತೆ ‘ಇಂಡಿಯಾ’ ಕೂಟದ ಪ್ರಣಾಳಿಕೆಯಲ್ಲಿ ಸರಕಾರ ಆಡಳಿತಕ್ಕೆ ಬಂದರೆ ಹಳೆಯ ಪಿಂಚಣಿ ಯೋಜನೆಯನ್ನು ಮರುಸ್ಥಾಪಿಸುವುದಾಗಿ ಭರವಸೆ ನೀಡಿತ್ತು. ಒಪಿಎಸ್ ಫ್ಯಾಕ್ಟರ್ ಚುನಾವಣಾ ಫಲಿತಾಂಶದಲ್ಲಿ ಸಾಕಷ್ಟು ಪ್ರಭಾವ ಬೀರಿದೆ. ಒಂದು ಕಾಲಕ್ಕೆ ಬಿಜೆಪಿಯನ್ನು ತನು-ಮನ-ಧನದಿಂದ ಬೆಂಬಲಿಸಿದ ಸರಕಾರಿ ನೌಕರರ ಹಿತ ಬಲಿ ಕೊಡಲು ಹೇಸದ ಮೋದಿ ಸರಕಾರದ ಈ ಬಜೆಟ್ ಸರಕಾರಿ ನೌಕರರ ಆಕ್ರೋಶಕ್ಕೆ ಗುರಿಯಾಗುವುದು ನಿಶ್ಚಿತ.

ಹಣಕಾಸು ಮಂತ್ರಿ ನಿರ್ಮಲಾ ಸೀತಾರಾಮನ್ ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ. ತಾನು ಪ್ರತಿನಿಧಿಸುತ್ತಿರುವ ರಾಜ್ಯ ಎಂದು ಕರ್ನಾಟಕಕ್ಕೆ ವಿಶೇಷ ಅನುದಾನ ನೀಡಿಲ್ಲ. ವಿಶೇಷ ಅನುದಾನ ನೀಡುವುದು ದೂರದ ಮಾತು. ಕಳೆದ ಬಜೆಟ್‌ನಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆಂದು ರೂ.೫,೩೦೦ ಕೋಟಿ ನೀಡುವ ಪ್ರಸ್ತಾವ ಮಾಡಿದ್ದರು. ಈ ಬಾರಿ ಅದೂ ಮಾಯವಾಗಿದೆ. ಮಹಾದಾಯಿ ಯೋಜನೆಗೆ ಅನುಮತಿ, ರಾಯಚೂರಿಗೆ ಏಮ್ಸ್ ಮಂಜೂರು ಮಾಡಬೇಕೆಂಬ ಬೇಡಿಕೆಗೆ ಮಾನ್ಯತೆ ದೊರೆತಿಲ್ಲ. ಮೋದಿ ನೇತೃತ್ವದ ಎನ್‌ಡಿಎ ಸರಕಾರದ ಪ್ರಮುಖ ಸ್ತಂಭವಾಗಿರುವ ಆಂಧ್ರ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಮತ್ತು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಸಂತೃಪ್ತಿ ಪಡಿಸಲು ಬಿಹಾರ, ಆಂಧ್ರ ರಾಜ್ಯಗಳಿಗೆ ‘ವಿಶೇಷ’ ಅನುದಾನ ನೀಡಲಾಗಿದೆ. ಇಷ್ಟು ಹೊರತುಪಡಿಸಿದರೆ ಬಿಜೆಪಿಯೇತರ ರಾಜ್ಯಗಳಿಗೆ ಬೇಕೆಂತಲೇ ಬಜೆಟ್‌ನಲ್ಲಿ ಅನ್ಯಾಯ ಮಾಡಲಾಗಿದೆ. ಆಂಧ್ರಕ್ಕೆ ದೊರೆತ ‘ವಿಶೇಷ’ ಪಕ್ಕದ ತೆಲಂಗಾಣಕ್ಕೆ ಇಲ್ಲ. ಈ ಬಜೆಟ್ ಭಾರತದ ಒಕ್ಕೂಟ ವ್ಯವಸ್ಥೆಯನ್ನು ಅಪಮಾನಿಸುವಂತಿದೆ. ಉದ್ಯೋಗಿಗಳಿಗೆ ತೆರಿಗೆ ರಿಯಾಯಿತಿ, ಜಲಜೀವನ ಮಿಷನ್, ಪ್ರಧಾನ ಮಂತ್ರಿ ಆವಾಸ್ ಯೋಜನೆ, ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಗಳನ್ನು ಹೊರತುಪಡಿಸಿದರೆ; ಇಡೀ ಬಜೆಟ್ ಕಾರ್ಪೊರೇಟ್ ಕುಳಗಳ ಅನುಕೂಲಕ್ಕಾಗಿ ಸಿದ್ಧಪಡಿಸಲಾಗಿದೆ. ಬಡವರನ್ನು ಮತ್ತಷ್ಟು ಬಡವರನ್ನಾಗಿಸುವ, ಮಧ್ಯಮ ವರ್ಗದವರನ್ನು ಭ್ರಮೆಯಲ್ಲಿರಿಸುವ ಅದಾನಿ-ಅಂಬಾನಿಯಂತಹ ಕಾರ್ಪೊರೇಟ್ ಕುಳಗಳು ಮತ್ತಷ್ಟು ಶ್ರೀಮಂತರಾಗಲು ಪೂರಕವಾಗುವ ಅಂಶಗಳೇ ಬಜೆಟ್ ನಲ್ಲಿ ಆವರಿಸಿವೆ.

ಕಾರ್ಪೊರೇಟ್ ತೆರಿಗೆಯನ್ನು ಹೆಚ್ಚಿಸಿ ಅಲ್ಲಿಂದ ಬರುವ ಹೆಚ್ಚುವರಿ ಸಂಪನ್ಮೂಲದಿಂದ ಬಡತನ ನಿವಾರಣೆ ಕಾರ್ಯಕ್ರಮಗಳಿಗೆ ಹೆಚ್ಚು ಆದ್ಯತೆ ನೀಡಬಹುದಾಗಿತ್ತು. ಬಡವರನ್ನು ಭಾವನಾತ್ಮಕವಾಗಿ ನಿಭಾಯಿಸುವ, ಮಧ್ಯಮ ವರ್ಗದವರಲ್ಲಿ ದೇಶಾಭಿಮಾನದ ಭ್ರಮೆ ಬಿತ್ತಿ ಬೆಳೆ ತೆಗೆಯುವ ಮೋದಿಯವರಿಗೆ ಮುಂದೊಂದು ದಿನ ಬಹುದೊಡ್ಡ ಕಂಟಕ ಎದುರಾಗುವುದು ಈ ಎರಡು ವಲಯಗಳಿಂದಲೇ. ಸರಕಾರಿ ನೌಕರರು ಮೋದಿ ಸರಕಾರದ ಹುನ್ನಾರಗಳನ್ನು ಅರ್ಥ ಮಾಡಿಕೊಂಡು ಕಳೆದ ಚುನಾವಣೆಯಲ್ಲಿ ಬಿಸಿ ಮುಟ್ಟಿಸಿದ್ದಾರೆ. ಕಳೆದ ಹತ್ತು ವರ್ಷಗಳಲ್ಲಿ ಮೋದಿ ಸರಕಾರದ ಬಜೆಟ್‌ಗಳಿಂದ ಭಾರತದ ಜನಸಾಮಾನ್ಯರಿಗೆ ಕವಡೆ ಕಿಮ್ಮತ್ತಿನಷ್ಟು ಅನುಕೂಲವಾಗಿಲ್ಲ. ಆದರೆ ಅದಾನಿ-ಅಂಬಾನಿಯಂತಹ ಕಾರ್ಪೊರೇಟ್ ಕುಳಗಳ ಆದಾಯ ನೂರಾರು ಪಟ್ಟು ಹೆಚ್ಚಾಗಿದೆ. ನಿರ್ಮಲಾ ಸೀತಾರಾಮನ್ ಅವರ ಕಾರ್ಪೊರೇಟ್ ಹಿತ ಕಾಪಾಡುವ ಬಜೆಟ್‌ಗಳು ಹೀಗೆ ಮುಂದುವರಿದರೆ ಮಧ್ಯಮವರ್ಗವೇ ಇಲ್ಲದಂತಾಗುತ್ತದೆ. ಇನ್ನೊಂದೆಡೆ ಎರಡು ಹೊತ್ತಿನ ಊಟಕ್ಕೂ ಗತಿಯಿಲ್ಲದವರ ಸಂಖ್ಯೆ ಹೆಚ್ಚುತ್ತದೆ ವಿಕಸಿತ ಭಾರತದ ಹೆಸರಲ್ಲಿ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಡಾ. ರಾಜಶೇಖರ ಹತಗುಂದಿ

contributor

Similar News