ಏಕೀಕೃತ ಪಿಂಚಣಿ: ಮೋದಿಯವರ ಮೋಸದಾಟ

ಸರಕಾರಿ ನೌಕರರು ನಿರಂತರ ಹೋರಾಟ ಮಾಡಿದ್ದು, ಮೋದಿ ಸರಕಾರದ ವಿರುದ್ಧ ಮತ ಚಲಾಯಿಸಿದ್ದು ಹಳೆಯ ಪಿಂಚಣಿ ಯೋಜನೆಯನ್ನು ಯಥಾವತ್ತಾಗಿ ಮರುಸ್ಥಾಪಿಸಬೇಕೆಂಬ ಬೇಡಿಕೆ ಈಡೇರಿಕೆಗಾಗಿ. ಆದರೆ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರಕಾರ ಒಪ್ಪಿಕೊಂಡಿದ್ದು ಏಕೀಕೃತ ಪಿಂಚಣಿ ಯೋಜನೆ (ಯೂನಿಫೈಡ್ ಪಿಂಚಣಿ ಯೋಜನೆ) ಎಂಬ ಹೈಬ್ರಿಡ್ ವ್ಯವಸ್ಥೆಯನ್ನು. ಸರಕಾರಿ ನೌಕರರನ್ನು ಯಾಮಾರಿಸುವ ಉದ್ದೇಶ ಈ ಯೋಜನೆಯ ಹಿಂದಿದೆ. ಏಕೀಕೃತ ಪಿಂಚಣಿ ಯೋಜನೆಯಲ್ಲೂ ಮೋದಿಯವರ ಕಾರ್ಪೊರೇಟ್ ಕುಳಗಳ ಮೇಲಿನ ವ್ಯಾಮೋಹ ಎದ್ದು ಕಾಣುತ್ತದೆ.

Update: 2024-08-31 07:11 GMT

ಭಾರತೀಯ ಜನಸಂಘದ ಕಾಲದಿಂದಲೂ ಸಂಘ ಪರಿವಾರದ ವಿವಿಧ ಸಂಘಟನೆಗಳ ಕಾಲಾಳುಗಳಾಗಿ ದುಡಿದವರು ಮಧ್ಯಮ ವರ್ಗದವರು. ಅದರಲ್ಲೂ ವಿಶೇಷವಾಗಿ ಸರಕಾರಿ ನೌಕರರು. ಸಣ್ಣ ಮತ್ತು ಮಧ್ಯಮ ವರ್ಗದ ವ್ಯಾಪಾರಿಗಳು ಸಂಘ ಪರಿವಾರದ ಸಂಘಟನೆಗಳಿಗೆ ತನು-ಮನ-ಧನದಿಂದ ಬೆಂಬಲಿಸುತ್ತಿದ್ದರು. 1980ರಲ್ಲಿ ಭಾರತೀಯ ಜನತಾ ಪಕ್ಷ ಜನ್ಮ ತಾಳಿದಾಗ ಅದನ್ನು ಬ್ರಾಹ್ಮಣ-ಬನಿಯಾ ಪಕ್ಷವೆಂದು ಬ್ರಾಂಡ್ ಮಾಡಲಾಗಿತ್ತು. ಆಗ ಸರಕಾರಿ ನೌಕರಿಯಲ್ಲಿ ಬ್ರಾಹ್ಮಣರೇ ಹೆಚ್ಚಾಗಿದ್ದರು. ಬನಿಯಾ ಎಂದರೆ ವ್ಯಾಪಾರಿಗಳು. ಮಾರವಾಡಿಗಳು ಸೇರಿದಂತೆ ಎಲ್ಲಾ ಸಮುದಾಯಗಳ ಸಣ್ಣ ಮಧ್ಯಮ ವರ್ಗದ ವ್ಯಾಪಾರಿಗಳು ಬಿಜೆಪಿಗೆ ಹಣಕಾಸಿನ ನೆರವು ನೀಡುತ್ತಿದ್ದರು. ಸಂಘ ಪರಿವಾರ, ಭಾರತೀಯ ಜನಸಂಘ ಮತ್ತು ಬಿಜೆಪಿ ಈ ಹೊತ್ತು ಎಲ್ಲೆಡೆ ಬೇರು ಬಿಡಲು ಸಾಧ್ಯವಾಗಿದ್ದು ಸರಕಾರಿ ನೌಕರರು ಮತ್ತು ವ್ಯಾಪಾರಿ ವರ್ಗ. ಭಾರತೀಯ ಜನತಾ ಪಕ್ಷ ವಿವಿಧ ರಾಜ್ಯಗಳಲ್ಲಿ ಮತ್ತು ಕೇಂದ್ರದಲ್ಲಿ ಅಧಿಕಾರ ಹಿಡಿಯುತ್ತಲೇ ಕಾರ್ಪೊರೇಟ್ ಕುಳಗಳ ಸಖ್ಯ ಪ್ರಾಪ್ತವಾಯಿತು. ಕಾರ್ಪೊರೇಟ್ ಕುಳಗಳು ಬಿಜೆಪಿಗೆ ಫಂಡ್ ಮಾಡಲು ಶುರು ಮಾಡಿದ ದಿನದಿಂದ ಅವರ ಇಷಾರೆಯ ಮೇರೆಗೆ ಸರಕಾರಿ ಯೋಜನೆಗಳು ರೂಪುಗೊಳ್ಳತೊಡಗಿದವು.

ಬಿಜೆಪಿಯ ಸ್ಥಾಪಕ ಅಧ್ಯಕ್ಷ ಅಟಲ್ ಬಿಹಾರಿ ವಾಜಪೇಯಿ ಅವರು ಕೇಂದ್ರದಲ್ಲಿ ಪ್ರಧಾನಿ ಹುದ್ದೆ ಅಲಂಕರಿಸುತ್ತಲೇ ಕಾರ್ಪೊರೇಟ್ ಕುಳಗಳಿಗಾಗಿ ಲಾಭದಲ್ಲಿರುವ ಸಾರ್ವಜನಿಕ ಉದ್ದಿಮೆಗಳನ್ನು ಒಂದೊಂದಾಗಿ ಬಿಕರಿ ಮಾಡತೊಡಗಿದರು. ಬಂಡವಾಳ ಹಿಂದೆಗೆತ ಸಚಿವಾಲಯವನ್ನೇ ಪ್ರಾರಂಭ ಮಾಡಿದರು. ಆರಂಭದ ದಿನಗಳಲ್ಲಿ ಬಿಜೆಪಿಗೆ ಹಿಂದ್ ಮಜ್ದೂರ್ ಸಂಘ ಹಣ ಒದಗಿಸುವ ಕಾಮಧೇನುವಾಗಿತ್ತು. ಎಚ್‌ಎಂಎಸ್ ಸೇರಿದಂತೆ ಎಲ್ಲ ಬಗೆಯ ಟ್ರೇಡ್ ಯೂನಿಯನ್‌ಗಳು ಬಿಜೆಪಿಯ ಕೈಗಾರಿಕಾ ಮತ್ತು ಕಾರ್ಮಿಕ ನೀತಿಯಿಂದ ದಿನೇದಿನೇ ದುರ್ಬಲವಾಗತೊಡಗಿದವು. 2003ರಲ್ಲಿ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್‌ಡಿಎ ಸರಕಾರ, ಸರಕಾರಿ ನೌಕರರಿಗೆ ಮರಣ ಶಾಸನದಂತಿರುವ ರಾಷ್ಟ್ರೀಯ ಪಿಂಚಣಿ ಯೋಜನೆ ರೂಪಿಸಿತು. ಬಿಜೆಪಿ ಸರಕಾರಿ ನೌಕರರನ್ನು ಏಣಿಯಂತೆ ಬಳಸಿಕೊಂಡು ಆ ವರ್ಗದ ಕತ್ತನ್ನೇ ಹಿಚುಕಿತು. ಅದು ಕಾರ್ಪೊರೇಟ್ ಕಂಪೆನಿಗಳ ಲಾಭಕ್ಕಾಗಿ. ಹಳೆಯ ಪಿಂಚಣಿ ಯೋಜನೆಯಲ್ಲಿ ನಿವೃತ್ತಿಯಾಗುವ ಸರಕಾರಿ ನೌಕರರ ಕುಟುಂಬ ವರ್ಗದವರ ಹಿತ ಕಾಪಾಡುವ ಜೀವಪರ ಕಾಳಜಿಯ ಅಂಶಗಳಿದ್ದವು. ಸರಕಾರಿ ನೌಕರ ನಿವೃತ್ತಿಯಾದರೆ ಆತನ ಕೊನೆಯ ಸಂಬಳದ (ಮೂಲವೇತನದ) ಅರ್ಧದಷ್ಟು ಮತ್ತು ತುಟ್ಟಿಭತ್ತೆ ಸೇರಿಸಿ ಪ್ರತೀ ತಿಂಗಳು ನಿವೃತ್ತಿ ವೇತನ ಪಾವತಿಸಲಾಗುತ್ತಿತ್ತು.

ಇದೇ ಮಾದರಿಯ ಪಿಂಚಣಿ ಸೌಲಭ್ಯ ಶಾಸಕರು, ಸಂಸದರಿಗೂ ಇತ್ತು. ಈಗಲೂ ಮುಂದುವರಿದಿದೆ. ಆದರೆ 2003ರಲ್ಲಿ ವಾಜಪೇಯಿ ಸರಕಾರ ಆರ್ಥಿಕ ಹೊರೆಯ ಕಾರಣ ಮುಂದೆ ಮಾಡಿ ಹಳೆಯ ಪಿಂಚಣಿ ಯೋಜನೆಯನ್ನು ಸ್ಥಗಿತಗೊಳಿಸಿತು. ಕಷ್ಟದ ದಿನಗಳಲ್ಲಿ ತನ್ನ ಬೆಂಬಲಕ್ಕೆ ನಿಂತ ಸರಕಾರಿ ನೌಕರರನ್ನು ಬೀದಿ ಪಾಲು ಮಾಡಿದ ಬಿಜೆಪಿ ಸರಕಾರ ಕಾರ್ಪೊರೇಟ್ ಕಂಪೆನಿಗಳಿಗೆ ಲಾಭ ತಂದು ಕೊಡುವ ಎನ್‌ಪಿಎಸ್ (ರಾಷ್ಟ್ರೀಯ ಪಿಂಚಣಿ ಯೋಜನೆ) ಜಾರಿಗೆ ತಂದಿತು. ಈ ಯೋಜನೆಯಲ್ಲಿ ನಿವೃತ್ತಿಯಾದ ನೌಕರ ಮತ್ತು ಆತನ ಕುಟುಂಬಕ್ಕೆ ನಿಶ್ಚಿತ ಸಂಬಳದ-ಆದಾಯದ ಖಾತ್ರಿ ಇರಲಿಲ್ಲ. ಪ್ರತೀ ತಿಂಗಳು ಸರಕಾರಿ ನೌಕರರ ಸಂಬಳದಿಂದ ಪ್ರತಿಶತ ಹತ್ತರಷ್ಟು ವಂತಿಗೆಯನ್ನು ಕಡಿತಗೊಳಿಸಿ ಅದಕ್ಕೆ ಸರಕಾರ ಪ್ರತೀ ತಿಂಗಳು ಪ್ರತಿಶತ 14ರಷ್ಟು ಹಣ ಸೇರಿಸಿ ಆ ಒಟ್ಟು ಹಣವನ್ನು ಮ್ಯೂಚುವಲ್ ಫಂಡ್ ಅಥವಾ ಇಕ್ವಿಟಿಯಲ್ಲಿ ಹೂಡಿಕೆ ಮಾಡಿ ಬಂದ ಲಾಭದಲ್ಲಿ ನಿವೃತ್ತಿ ವೇತನ ನೀಡುವ ವ್ಯವಸ್ಥೆ ಕಲ್ಪಿಸಲಾಗುತ್ತಿತ್ತು. ಎನ್‌ಪಿಎಸ್ ಯೋಜನೆಯ ಭಾಗವಾಗಿರುವ ಸರಕಾರಿ ನೌಕರರಿಗೆ ಅತ್ಯಂತ ಕನಿಷ್ಠ ಹಣ ಬರ ತೊಡಗಿತು. ಹಣ ಹೂಡಿಕೆಯಲ್ಲಿ ಮಾರುಕಟ್ಟೆಯ ರಿಸ್ಕ್ ಇದ್ದಿದ್ದರಿಂದ ನಿರೀಕ್ಷಿತ ಪ್ರಮಾಣದ ಆದಾಯ ಬರಲೇ ಇಲ್ಲ. ಅದು ಸರಕಾರಿ ನೌಕರರ ಹಿತ ಕಾಪಾಡಲಾರದು ಎನ್ನುವುದು ಸಾಬೀತಾಯಿತು. 2004ರ ನಂತರ ನೌಕರಿಗೆ ಸೇರಿದ ಕೇಂದ್ರ ಮತ್ತು ರಾಜ್ಯ ಸರಕಾರಿ ನೌಕರರು ಎನ್‌ಪಿಎಸ್‌ನ ಅಪಾಯಕಾರಿ ಅಂಶಗಳನ್ನು ಮನಗಂಡು ಮತ್ತೆ ಹಳೆಯ ಪಿಂಚಣಿ ಯೋಜನೆಯನ್ನೇ ಮರುಸ್ಥಾಪಿಸಲು ಹೋರಾಟ ಮಾಡತೊಡಗಿದರು. ರಾಜಕೀಯ ಪಕ್ಷಗಳು ಒಪಿಎಸ್ ಜಾರಿ ಮಾಡುವ ಭರವಸೆಯನ್ನು ಚುನಾವಣಾ ಪ್ರಣಾಳಿಕೆಯಲ್ಲಿ ಸೇರಿಸತೊಡಗಿದವು.

ವಾಜಪೇಯಿ ಸರಕಾರ ರೂಪಿಸಿದ ಎನ್‌ಪಿಎಸ್ ಅನ್ನು ಇಂಡಿಯಾ ಶೈನಿಂಗ್ ಮಾದರಿಯಲ್ಲಿ ಅದೊಂದು ಕ್ರಾಂತಿಕಾರಿ ಮತ್ತು ಹೆಚ್ಚು ಲಾಭ ತಂದು ಕೊಡುವ ಯೋಜನೆ ಎಂದು ವ್ಯಾಪಕವಾಗಿ ಪ್ರಚಾರ ಮಾಡಲಾಯಿತು. ಆಗ ಸರಕಾರಿ ನೌಕರರೂ ನಂಬಿಬಿಟ್ಟರು. 2004ರಿಂದ 2014ರ ವರೆಗೆ ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ ಆಡಳಿತ ನಡೆಸುತ್ತಿತ್ತು. ಆ ಯೋಜನೆಯ ಟೊಳ್ಳುತನ ಗೊತ್ತಾಗಿದ್ದರೆ ಆಗಲೇ ಬದಲಾಗುತ್ತಿತ್ತೇನೋ.. 2014ರಲ್ಲಿ ನರೇಂದ್ರ ಮೋದಿಯವರು ಬಣ್ಣದ ಕನಸು ಬಿತ್ತಿದ್ದರಿಂದ ಕೆಟ್ಟ ದಿನಗಳ ಕಲ್ಪನೆಯನ್ನು ಯಾರೂ ಮಾಡಿರಲಿಲ್ಲ. 2015ರಲ್ಲಿ ಮೋದಿ ಸರಕಾರ ಜಾರಿಗೊಳಿಸಿದ ಅತ್ಯಂತ ಕ್ರೂರವಾದ ನೋಟು ಅಮಾನ್ಯ ಭಾರತದ ಪರ್ಯಾಯ ಅರ್ಥ ವ್ಯವಸ್ಥೆಯನ್ನೇ ಬುಡಮೇಲು ಮಾಡಿತು. ನೋಟು ರದ್ದತಿಯಿಂದ; ಬಿಜೆಪಿಗೆ ಅನಾದಿಕಾಲದಿಂದಲೂ ಬೆಂಬಲಿಸುತ್ತ ಬಂದ ಸಣ್ಣ ಮತ್ತು ಮಧ್ಯಮ ವರ್ಗದ ವ್ಯಾಪಾರಿಗಳ ಕತ್ತು ಹಿಚುಕಲಾಯಿತು. 2003ರಲ್ಲಿ ಸರಕಾರಿ ನೌಕರರ ಬಲಿ ಪಡೆದ ಅದೇ ಸರಕಾರ 2015ರಲ್ಲಿ ವ್ಯಾಪಾರಿ ಸಮುದಾಯವನ್ನು ಬೀದಿಪಾಲು ಮಾಡಿತ್ತು. ಅಷ್ಟಾಗಿಯೂ ಭಾರತದ ಮತದಾರರು ಮೋದಿಯವರು ಇಂದಲ್ಲ ನಾಳೆ ಒಳ್ಳೆಯದು ಮಾಡಬಹುದೆಂದು 2019ರ ಸಾರ್ವತ್ರಿಕ ಚುನಾವಣೆಯಲ್ಲಿ ಅತ್ಯಧಿಕ ಬೆಂಬಲ ವ್ಯಕ್ತಪಡಿಸಿದರು.

ಎರಡನೇ ಬಾರಿಗೆ ಪ್ರಧಾನಿ ಹುದ್ದೆ ಅಲಂಕರಿಸಿದ ನರೇಂದ್ರ ಮೋದಿಯವರು ಮತ್ತೆ ಕಾರ್ಪೊರೇಟ್ ಕುಳಗಳ ಸೇವೆಗೆ ನಿಂತರು. ಅದರ ಪರಿಣಾಮವಾಗಿ ದೇಶವೇ ದಿವಾಳಿಯಾದರೂ ಮೋದಿ ಬೆಂಬಲಿತ ಕಾರ್ಪೊರೇಟ್ ಮಾಲಕರ ಆಸ್ತಿ ಸಾವಿರ ಪಟ್ಟು ಹೆಚ್ಚಾಗಿತ್ತು. ಆಗ ಸರಕಾರಿ ನೌಕರರು ಮತ್ತು ಸಣ್ಣ-ಮಧ್ಯಮ ವ್ಯಾಪಾರಿಗಳು ಮೋದಿ ಸರಕಾರದ ವಿರುದ್ಧ ಕುದಿಯ ತೊಡಗಿದರು. ಸರಕಾರಿ ನೌಕರರಂತೂ ಬಹಿರಂಗವಾಗಿ ಹಳೆಯ ಪಿಂಚಣಿ ವ್ಯವಸ್ಥೆಗೆ ಒತ್ತಾಯಿಸಿ ದೇಶಾದ್ಯಂತ ಹೋರಾಟ ರೂಪಿಸಿತೊಡಗಿದರು. ಒಪಿಎಸ್ ಹೋರಾಟದ ತೀವ್ರತೆ ಅರಿತ ಕಾಂಗ್ರೆಸ್ ಪಕ್ಷ ಸರಕಾರಿ ನೌಕರರ ಬೇಡಿಕೆಗಳನ್ನು ಬೆಂಬಲಿಸ ತೊಡಗಿತು. ಅಷ್ಟು ಮಾತ್ರವಲ್ಲ ಹಿಮಾಚಲ ಪ್ರದೇಶ, ಛತ್ತೀಸ್‌ಗಡ, ರಾಜಸ್ಥಾನ ಮತ್ತು ಕರ್ನಾಟಕ ವಿಧಾನಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್ ತಮ್ಮ ಪಕ್ಷದ ಸರಕಾರ ಆಡಳಿತದ ಚುಕ್ಕಾಣಿ ಹಿಡಿದರೆ ಹಳೆಯ ಪಿಂಚಣಿ ವ್ಯವಸ್ಥೆ ಮರುಸ್ಥಾಪಿಸುವುದಾಗಿ ಭರವಸೆ ನೀಡಿ ಯಶಸ್ವಿಯಾಗಿತ್ತು. ಆಮ್ ಆದ್ಮಿ ಪಕ್ಷ ಪಂಜಾಬ್‌ನಲ್ಲಿ ಗೆಲುವು ಸಾಧಿಸುವಲ್ಲಿ ಹಳೆಯ ಪಿಂಚಣಿ ಭರವಸೆ ನಿರ್ಣಾಯಕ ಪಾತ್ರ ವಹಿಸಿತ್ತು.

ಇಷ್ಟಾದರೂ ನರೇಂದ್ರ ಮೋದಿ ಸರಕಾರ ಸರಕಾರಿ ನೌಕರರ ಬೇಡಿಕೆಯನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ಮಂದಿರ-ಮಸೀದಿ, ಧರ್ಮದ ಅಫೀಮು ಮಾತ್ರ ಮತಗಳನ್ನು ತಂದುಕೊಡಬಲ್ಲದೆಂದು ಬಲವಾಗಿ ನಂಬಿತ್ತು. 10 ವರ್ಷಗಳ ಕಾಲ ಆಡಳಿತ ನಡೆಸಿದ ಮೋದಿ ಸರಕಾರ ಸರಕಾರಿ ನೌಕರರಿಗಿಂತ ಕಾರ್ಪೊರೇಟ್ ಕುಳಗಳ ಹಿತವೇ ಮುಖ್ಯವೆಂದು ಭಾವಿಸಿ ದರ್ಬಾರು ನಡೆಸಿತು. ಆಡಳಿತ ಯಂತ್ರದ ಪ್ರಮುಖ ಭಾಗವಾಗಿರುವ ಸರಕಾರಿ ನೌಕರರನ್ನೇ ಲೆಕ್ಕಕ್ಕೆ ತೆಗೆದುಕೊಳ್ಳದ ಮೋದಿ ಸರಕಾರ ರೈತರು, ನಿರುದ್ಯೋಗಿಗಳು, ಸಣ್ಣ-ಮಧ್ಯಮ ವ್ಯಾಪಾರಿಗಳನ್ನು ಕಾಲ ಕಸವಾಗಿ ಪರಿಗಣಿಸಿತ್ತು. ಮೋದಿಯವರಿಗೆ ಅದಾನಿ-ಅಂಬಾನಿಯವರ ವ್ಯಾಪಾರ-ವಹಿವಾಟು ವೃದ್ಧಿಯಾಗುವುದು ಮುಖ್ಯವಾಯಿತೇ ಹೊರತು ಉಳಿದವರ ಕಷ್ಟ-ಸುಖಕ್ಕೆ ಸ್ಪಂದಿಸಲೇ ಇಲ್ಲ. ಗೆಲ್ಲುವ ಸೂತ್ರ ಕೈವಶವಾಗಿದೆಯೆಂದೇ ಭ್ರಮಿಸಿದ ಪ್ರಧಾನಿ ನರೇಂದ್ರ ಮೋದಿಯವರು 2024ರ ಲೋಕಸಭಾ ಚುನಾವಣಾ ಫಲಿತಾಂಶ ಹೊರ ಬಿದ್ದಾಗಲೇ ವಾಸ್ತವಕ್ಕೆ ಮರಳಿದ್ದು. ಅಯೋಧ್ಯೆಯ ರಾಮ ಮೋದಿಯವರ ಮೇಲೆ ಕೃಪೆ ತೋರಲೇ ಇಲ್ಲ. ಗೋದಿ ಮೀಡಿಯಾಗಳ ವ್ಯಾಪಕ ಪ್ರಚಾರ, ಕಾರ್ಪೊರೇಟ್ ಶೈಲಿಯ ಚುನಾವಣಾ ರ್ಯಾಲಿಗಳು ಸುಳ್ಳೇ ಸರಕಾಗಿದ್ದ ಮೋದಿಯವರ ಬೊಗಳೆ ಭಾಷಣಗಳು ಭಾರತದ ಮತದಾರರ ಮನಕ್ಕೆ ತಟ್ಟಲೇ ಇಲ್ಲ. ಮೋದಿ ನೇತೃತ್ವದ ಬಿಜೆಪಿ ಸರಳ ಬಹುಮತ ಗಳಿಸುವಲ್ಲಿ ವಿಫಲವಾಯಿತು. ಅನಿವಾರ್ಯವಾಗಿ ಎನ್‌ಡಿಎ ಮಿತ್ರಪಕ್ಷಗಳ ಮರ್ಜಿಯಲ್ಲಿ ಮೋದಿ ಸರಕಾರ ತೆವಳುತ್ತಿದೆ. ಹತ್ತು ವರ್ಷಗಳ ಕಾಲ ಮಾಡಿದ ತಪ್ಪಿನ ಅರಿವಾದಂತೆ ನರೇಂದ್ರ ಮೋದಿಯವರು ಸರಕಾರಿ ನೌಕರರ ಬೇಡಿಕೆಗೆ ಸ್ಪಂದಿಸಿದಂತೆ ನಾಟಕವಾಡಿದ್ದಾರೆ. ನಿಜ ಹೇಳಬೇಕೆಂದರೆ ನರೇಂದ್ರ ಮೋದಿಯವರ ಮೋಸದಾಟ ಮುಂದುವರಿದಿದೆ. ಸರಕಾರಿ ನೌಕರರು ನಿರಂತರ ಹೋರಾಟ ಮಾಡಿದ್ದು, ಮೋದಿ ಸರಕಾರದ ವಿರುದ್ಧ ಮತ ಚಲಾಯಿಸಿದ್ದು ಹಳೆಯ ಪಿಂಚಣಿ ಯೋಜನೆಯನ್ನು ಯಥಾವತ್ತಾಗಿ ಮರುಸ್ಥಾಪಿಸಬೇಕೆಂಬ ಬೇಡಿಕೆ ಈಡೇರಿಕೆಗಾಗಿ. ಆದರೆ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರಕಾರ ಒಪ್ಪಿಕೊಂಡಿದ್ದು ಏಕೀಕೃತ ಪಿಂಚಣಿ ಯೋಜನೆ (ಯೂನಿಫೈಡ್ ಪಿಂಚಣಿ ಯೋಜನೆ) ಎಂಬ ಹೈಬ್ರಿಡ್ ವ್ಯವಸ್ಥೆಯನ್ನು. ಸರಕಾರಿ ನೌಕರರನ್ನು ಯಾಮಾರಿಸುವ ಉದ್ದೇಶ ಈ ಯೋಜನೆಯ ಹಿಂದಿದೆ. ಏಕೀಕೃತ ಪಿಂಚಣಿ ಯೋಜನೆಯಲ್ಲೂ ಮೋದಿಯವರ ಕಾರ್ಪೊರೇಟ್ ಕುಳಗಳ ಮೇಲಿನ ವ್ಯಾಮೋಹ ಎದ್ದು ಕಾಣುತ್ತದೆ. ಅಷ್ಟು ಮಾತ್ರವಲ್ಲ ನಿವೃತ್ತ ಸರಕಾರಿ ನೌಕರರು ಮತ್ತು ಅವರ ಕುಟುಂಬದವರಿಗೆ ಒಳಿತು ಮಾಡುವ ಇರಾದೆಯೇ ಪ್ರಧಾನಮಂತ್ರಿಯವರಿಗೆ ಇಲ್ಲ ಎನ್ನುವುದು ಏಕೀಕೃತ ಪಿಂಚಣಿ ಯೋಜನೆಯ ಸ್ವರೂಪ ನೋಡಿದರೇನೇ ಸ್ಪಷ್ಟವಾಗುತ್ತದೆ. ಸರಕಾರಿ ನೌಕರರಿಂದ ನಿರ್ದಿಷ್ಟ ಪ್ರಮಾಣದ ವಂತಿಗೆ ಸ್ವೀಕರಿಸಿ ಅದಕ್ಕೆ ಸರಕಾರದ ಪಾಲು ಸೇರಿಸಿ ಒಂದೆಡೆ ಹೂಡಿಕೆ ಮಾಡುವುದೆಂದರೆ ಅದು ಕಾರ್ಪೊರೇಟ್ ಕುಳಗಳಿಗೆ ಅನುಕೂಲ ಮಾಡಿಕೊಡುವ ಉದ್ದೇಶವಾಗಿರುತ್ತದೆ. ಸರಕಾರಿ ನೌಕರರು ಸಲ್ಲಿಸುವ ಅಮೂಲ್ಯ ಸೇವೆಯೇ ಬೆಲೆಬಾಳುವ ವಂತಿಗೆ. ಶಾಸಕರು, ಸಂಸದರು ಯಾವ ವಂತಿಗೆ ನೀಡುವುದಿಲ್ಲ. ಆದರೂ ಖಾತ್ರಿ ಆದಾಯದ ಪಿಂಚಣಿ ಪಡೆಯುತ್ತಾರೆ. ಸರಕಾರಿ ನೌಕರರೇಕೆ ವಂತಿಗೆ ನೀಡಬೇಕು? ಸರಕಾರಿ ನೌಕರರ ವಂತಿಗೆಯ ಪ್ರಮಾಣ ಹೆಚ್ಚಿಸಲಿಲ್ಲ. ಏಕೀಕೃತ ಪಿಂಚಣಿ ಯೋಜನೆಯಲ್ಲಿ ಸರಕಾರದ ಪಾಲನ್ನು ಪ್ರತಿಶತ 18.5ಕ್ಕೆ ಹೆಚ್ಚಿಸಲಾಗಿದೆ. ನೌಕರರ ವಂತಿಗೆ ಮತ್ತು ಸರಕಾರದ ಪಾಲನ್ನು ಒಂದೆಡೆ ಹೂಡಿಕೆ ಮಾಡುವುದೆಂದರೆ ಕಾರ್ಪೊರೇಟ್ ಕುಳಗಳಿಗೆ ಲಾಭ ಮಾಡಿಕೊಟ್ಟಂತೆ.

ಎಲ್ಲಕ್ಕೂ ಮಿಗಿಲಾಗಿ ಏಕೀಕೃತ ಪಿಂಚಣಿ ಯೋಜನೆಯ ಪೂರ್ಣ ಪ್ರಮಾಣದ ಲಾಭ ಪಡೆದುಕೊಳ್ಳಲು ಸರಕಾರಿ ನೌಕರ 25 ವರ್ಷಗಳ ಕಾಲ ಸೇವೆ ಸಲ್ಲಿಸಿರಬೇಕು. ಕನಿಷ್ಠ 10 ವರ್ಷ ಸೇವೆ ಸಲ್ಲಿಸಿ ನಿವೃತ್ತನಾಗುವ ನೌಕರ ಪ್ರತೀ ತಿಂಗಳು ಕೇವಲ 10,000 ರೂ. ಪಿಂಚಣಿ ಪಡೆಯಲು ಅರ್ಹ. ಕೇಂದ್ರ ಸರಕಾರಿ ನೌಕರರ ನಿವೃತ್ತಿ ಪಿಂಚಣಿ ಪತೀ ತಿಂಗಳು 10,000 ರೂ. ನಿಗದಿಯಾದರೆ ಆತ ಮರಣ ಹೊಂದಿದ ಮೇಲೆ ಆತನ ಪತ್ನಿ ಪ್ರತಿಶತ 60ರಷ್ಟು ಅಂದರೆ ಕೇವಲ 6,000 ರೂ. ಪಿಂಚಣಿ ಪಡೆಯುತ್ತಾರೆ. ಹೆಚ್ಚು ಲಾಭ ಕಾರ್ಪೊರೇಟ್ ಕಂಪೆನಿಗಳಿಗೆ. ಪಿಂಚಣಿದಾರರ ಕುಟುಂಬಕ್ಕೆ ಕನಿಷ್ಠ ಮೊತ್ತದ ಆದಾಯ. ಷೇರು, ಮ್ಯೂಚುವಲ್ ಫಂಡ್, ಇಕ್ವಿಟಿಯಲ್ಲಿ ಆ ಹಣವನ್ನು ಹೂಡಿಕೆ ಮಾಡದೆ ಪಿಂಚಣಿ ಯೋಜನೆಯನ್ನು ಸರಕಾರವೇ ನಿಭಾಯಿಸಬಹುದಲ್ಲ.

ಏಕೀಕೃತ ಪಿಂಚಣಿ ಯೋಜನೆಯ ಪೂರ್ಣ ಪ್ರಮಾಣದ ಲಾಭ ಪಡೆಯಲು ಸರಕಾರಿ ನೌಕರ ಕನಿಷ್ಠ 25 ವರ್ಷಗಳ ಕಾಲ ಸೇವೆ ಸಲ್ಲಿಸಿರಬೇಕು. ಸರಕಾರಿ ನೌಕರಿಗೆ ಸೇರುವ ಗರಿಷ್ಠ ವಯೋಮಿತಿ 40ಕ್ಕೆ ನಿಗದಿಯಾಗಿದೆ. ಇತ್ತೀಚೆಗೆ ಕೋವಿಡ್ ಕಾರಣಕ್ಕೆ ಮತ್ತು ಆರ್ಥಿಕ ತೊಂದರೆ ಮುಂದೆ ಮಾಡಿ ಸರಕಾರಿ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳುತ್ತಿಲ್ಲ. ಭರ್ತಿ ಮಾಡಿಕೊಂಡರೂ 40 ವರ್ಷ ವಯಸ್ಸಿನ ನಂತರವೇ ನೌಕರಿ ದೊರೆಯುತ್ತಿದೆ. 40ನೇ ವರ್ಷಕ್ಕೆ ನೌಕರಿ ಪಡೆದರೆ ಕೇವಲ 20 ವರ್ಷ ಸೇವೆ ಸಲ್ಲಿಸುವ ಅವಕಾಶ ದೊರೆಯುತ್ತದೆ. ಅಂದರೆ ಬಹುಪಾಲು ಜನ ಸರಕಾರಿ ನೌಕರರು ಮೋದಿ ಸರಕಾರ ರೂಪಿಸಿದ ಏಕೀಕೃತ ಪಿಂಚಣಿ ಯೋಜನೆಯ ಪೂರ್ಣ ಪ್ರಮಾಣದ ಲಾಭ ಪಡೆಯಲು ಸಾಧ್ಯವಾಗುವುದೇ ಇಲ್ಲ. ಅಷ್ಟಕ್ಕೂ ಸೇನೆಯಲ್ಲಿ ಕಾರ್ಯನಿರ್ವಹಿಸುವ ಯೋಧರಿಗೆ 15 ವರ್ಷಗಳ ಸೇವೆಯೇ ಗರಿಷ್ಠ ಮಟ್ಟದ್ದಾಗಿರುತ್ತದೆ. ಸೇನೆಯಲ್ಲಿ 25 ವರ್ಷಗಳ ಕಾಲ ಸೇವೆ ಸಲ್ಲಿಸಿದವರು ಸಿಗುವುದು ವಿರಳ. ಅವರಿಗೆಲ್ಲ ಪೂರ್ಣ ಪ್ರಮಾಣದ ಪಿಂಚಣಿ ಸೌಲಭ್ಯ ಸಿಗುವುದಿಲ್ಲ. ಚುನಾವಣೆಯಲ್ಲಿ ಹೀನಾಯ ಸೋಲುಂಡ ಮೇಲೂ ನರೇಂದ್ರ ಮೋದಿಯವರು ಜನಪರವಾಗಿ ಆಲೋಚಿಸುವುದನ್ನು ರೂಢಿಸಿಕೊಂಡಿಲ್ಲ. ಕಾಂಗ್ರೆಸ್ ನಾಯಕ ಮತ್ತು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರು ಹಳೆಯ ಪಿಂಚಣಿ ಯೋಜನೆಗಿಂತ ಕಡಿಮೆ ಸವಲತ್ತಿನ ಯೋಜನೆಯನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಅಷ್ಟು ಮಾತ್ರವಲ್ಲ ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ‘ಇಂಡಿಯಾ’ ಕೂಟದ ಸರಕಾರ ಅಸ್ತಿತ್ವಕ್ಕೆ ಬಂದರೆ ಹಳೆ ಪಿಂಚಣಿಯ ಯೋಜನೆಯನ್ನು ಯಥಾವತ್ತಾಗಿ ಜಾರಿಗೊಳಿಸುವುದಾಗಿ ಹೇಳಿಕೊಂಡಿದ್ದಾರೆ.

ನರೇಂದ್ರ ಮೋದಿಯವರ ಜನ ವಿರೋಧಿ ಮನಸ್ಥಿತಿಗೆ ತಕ್ಕ ಉತ್ತರ ಕೊಡಬೇಕೆಂದರೆ ಕಾಂಗ್ರೆಸ್ ಪಕ್ಷ ಆಡಳಿತ ನಡೆಸುತ್ತಿರುವ ರಾಜ್ಯಗಳಲ್ಲಿ ಹಳೆಯ ಪಿಂಚಣಿ ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವ ಮೂಲಕ ಅಪರೂಪದ ‘ಮಾದರಿ’ಯೊಂದನ್ನು ರೂಪಿಸಬೇಕು. ಆ ಮೂಲಕ ಮೋದಿಯವರ ಕಾರ್ಪೊರೇಟ್ ಕಂಪೆನಿಗಳ ಮೇಲಿನ ವ್ಯಾಮೋಹವನ್ನು ಬೆತ್ತಲೆಗೊಳಿಸಬೇಕು. ಮೋದಿಯವರ ಮೋಸದಾಟದ ಪರಿಯೇ ಹಾಗೆ, ತನ್ನ ಸರಕಾರ ಜನಪರವಾಗಿದೆ ಎಂದು ಬಿಂಬಿಸಿಕೊಳ್ಳಲು ಆಕರ್ಷಕ ಯೋಜನೆಗಳನ್ನು ರೂಪಿಸುತ್ತಾರೆ. ಆಳದಲ್ಲಿ ಆ ಎಲ್ಲ ಯೋಜನೆಗಳ ಫಲಾನುಭವಿಗಳು ಕಾರ್ಪೊರೇಟ್ ಧಣಿಗಳೇ ಆಗಿರುತ್ತಾರೆ. ಏಕೀಕೃತ ಪಿಂಚಣಿ ಯೋಜನೆಯೂ ಮೋದಿಯವರ ಮೋಸದಾಟದ ಭಾಗವೇ ಆಗಿದೆ. ನರೇಂದ್ರ ಮೋದಿಯವರ ಸರಕಾರ ಸರಕಾರಿ ನೌಕರರ ಕುತ್ತಿಗೆ ಕುಯ್ಯುತ್ತಲೇ ಇದೆ. ಆದರೆ ನೌಕರವರ್ಗ ಆರೆಸ್ಸೆಸ್‌ನತ್ತ ಆಕರ್ಷಿತವಾಗುತ್ತಲಿದೆ. ಏಕೀಕೃತ ಪಿಂಚಣಿ ಯೋಜನೆಯೂ ಸೇರಿದಂತೆ ಬಹುಪಾಲು ಯೋಜನೆಗಳ ಒಳಗೆ ಕಾರ್ಪೊರೇಟ್ ಹಿತಾಸಕ್ತಿಯೇ ಅಡಗಿರುತ್ತದೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಡಾ. ರಾಜಶೇಖರ ಹತಗುಂದಿ

contributor

Similar News