‘ಆಶಾಕಿರಣ’ ಕಾರ್ಯಕ್ರಮದಡಿ ನೇತ್ರ ತಪಾಸಣೆ, ಸರ್ಜರಿಗೆ ಕ್ರಮ : ಸಚಿವ ದಿನೇಶ್ ಗುಂಡೂರಾವ್

Update: 2024-03-07 13:39 GMT

ಕಲಬುರಗಿ: ಕಲಬುರಗಿ ಸೇರಿದಂತೆ ರಾಜ್ಯದ ಎಂಟು ಜಿಲ್ಲೆಗಳಲ್ಲಿ ಆಶಾಕಿರಣ ಕಾರ್ಯಕ್ರಮದ ಅಡಿಯಲ್ಲಿ ಒಟ್ಟು 1.12 ಕೋಟಿ ಜನರ ಕಣ್ಣು ಪರೀಕ್ಷೆ ಮಾಡುವ ಗುರಿಹೊಂದಿದ್ದು, ಪರೀಕ್ಷೆ ಮಾಡಿಸಿಕೊಂಡವರ ಪೈಕಿ ಈಗಾಗಲೆ 3.32 ಲಕ್ಷ ಮಂದಿಗೆ ಕನ್ನಡಕ ವಿತರಣೆ ಮಾಡಲಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.

ಗುರುವಾರ ನಗರದ ಪಿಡಿಎ ಇಂಜಿನಿಯರಿಂಗ್ ಕಾಲೇಜು ಸಭಾಂಗಣದಲ್ಲಿ ಪ್ರೇರಣಾ ಹಾಗೂ ಆಶಾಕಿರಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕಲಬುರಗಿ ಜಿಲ್ಲೆಯೊಂದರಲ್ಲೆ ಈಗಾಗಲೇ 21 ಲಕ್ಷ ಜನರಿಗೆ ಸ್ಕ್ರೀನಿಂಗ್ ಮಾಡಲಾಗಿದೆ. ಅವರಲ್ಲಿ 75,200 ಜನರಿಗೆ ಸರ್ಜರಿ ಮಾಡಲಾಗಿದೆ. ಇದಕ್ಕಾಗಿ 61 ಕೋಟಿ ರೂ. ವ್ಯಯಿಸಲಾಗುತ್ತಿದೆ ಎಂದರು.

ಮುಂದಿನ ದಿನಗಳಲ್ಲಿ ಯಾದಗಿರಿ ಸೇರಿದಂತೆ ಮತ್ತೆ ಎಂಟು ಜಿಲ್ಲೆಗಳಿಗೆ ಈ ಕಾರ್ಯಕ್ರಮ ವಿಸ್ತರಿಸುವ ಆಲೋಚನೆ ಇದೆ. ಒಟ್ಟಾರೆ ರಾಜ್ಯದ ಪ್ರತಿಯೊಬ್ಬರು ಕಣ್ಣುಗಳ ರಕ್ಷಣೆಗೆ ಬೇಕಾಗುವ ತಪಾಸಣೆ ಹಾಗೂ ಸರ್ಜರಿಗೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ದಿನೇಶ್ ಗುಂಡೂರಾವ್ ತಿಳಿಸಿದರು.

ಮುಟ್ಟು ಆಗುವ ಸ್ತ್ರೀಯರಿಗೆ ಪ್ರೇರಣಾ ಕಾರ್ಯಕ್ರಮದಲ್ಲಿ ಮುಟ್ಟಿನ ಕಪ್ ವಿತರಣೆಗೆ ಕ್ರಮ ಕೈಗೊಳ್ಳಲು ನಿರ್ಧರಿಸಿದ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಅಭಿನಂದಿಸುತ್ತೇನೆ. ಮುಟ್ಟಿನ ವಿಚಾರದಲ್ಲಿ ಮಡಿವಂತಿಕೆ ಇದೆ. ಆ ಮನಸ್ಥಿತಿ ಈಗ ಬದಲಾಗಬೇಕಿದೆ. ಮುಟ್ಟು ಎನ್ನುವುದು ಮಹಿಳೆಯರಿಗೆ ಪ್ರಕೃತಿ ನೀಡಿದ ಸಹಜ ಪ್ರಕ್ರಿಯೆಯಾಗಿದೆ. ಈ ವಿಚಾರದಲ್ಲಿ ಮುಚ್ಚುಮರೆ ಮಾಡದೆ ಮಹಿಳೆಯರು ಮುಟ್ಟಿನ ಕಪ್ ಬಳಕೆ ಮಾಡಬೇಕು. ಶುಚಿ ಕಾರ್ಯಕ್ರಮದಡಿಯಲ್ಲಿ ಮಂಗಳೂರಿನಲ್ಲಿ ಸ್ಯಾನಿಟರಿ ಪ್ಯಾಡ್ ವಿತರಣೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು.

ರಾಜ್ಯ ಹೆದ್ದಾರಿಗಳಲ್ಲಿ ಅಪಘಾತ ನಡೆಯುವಂತ ಹಾಟ್ ಸ್ಪಾಟ್ ಗಳನ್ನು ಗುರಿತಿಸಲಾಗಿದ್ದು. ಅಪಘಾತ ನಡೆದ ಸಂದರ್ಭದಲ್ಲಿ ಗಾಯಾಳುಗಳನ್ನು ತಕ್ಷಣ ಸಮೀಪ ಆರೋಗ್ಯ ಕೇಂದ್ರಕ್ಕೆ ರವಾನಿಸಲು 65 ಆಂಬುಲೆನ್ಸ್ ಗಳನ್ನು ಬಳಕೆ ಮಾಡಲಾಗುತ್ತಿದೆ. ಅಗತ್ಯ ಹಾಗೂ ತುರ್ತು ಚಿಕಿತ್ಸೆ ನೀಡಲು ಅನುಕೂಲವಾಗುವಂತ ತರಬೇತಿ ನೀಡಲು ಹಾಗೂ ಅಗತ್ಯ ವೈದ್ಯಕೀಯ ವೆಚ್ಚಕ್ಕಾಗಿ 65 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ದಿನೇಶ್ ಗುಂಡೂರಾವ್ ತಿಳಿಸಿದರು.

ಕಾರ್ಯಕ್ರಮದಲ್ಲಿ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ, ಕೆಕೆಆರ್ ಡಿಬಿ ಅಧ್ಯಕ್ಷ ಡಾ.ಅಜಯ್ ಸಿಂಗ್, ಶಾಸಕರಾದ ಅಲ್ಲಮಪ್ರಭು ಪಾಟೀಲ್, ಕನೀಝ್ ಫಾತಿಮಾ, ವಿಧಾನಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರು, ಕುಡಾ ಅಧ್ಯಕ್ಷ ಮಝರ್ ಖಾನ್, ಜಿಲ್ಲಾಧಿಕಾರಿ ಫೌಝಿಯಾ ತರನ್ನುಮ್, ಮಹಾನಗರ ಪಾಲಿಕೆ ಆಯುಕ್ತ ಭುವನೇಶ್ ಪಾಟೀಲ್, ಜಿಪಂ ಸಿಇಒ ಭಂವರ್ ಸಿಂಗ್ ಮೀನಾ ಸೇರಿದಂತೆ ಹಲವರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News