ತೊಗರಿಗೆ ಹೆಚ್ಚಿನ ಬೆಂಬಲ ಬೆಲೆ ನಿಗದಿಗೆ ಕೇಂದ್ರಕ್ಕೆ ಮತ್ತೊಂದು ಪತ್ರ : ಕೃಷಿ ಸಚಿವ ಎನ್. ಚಲುವರಾಯಸ್ವಾಮಿ

Update: 2024-12-10 11:18 GMT

ಎನ್.ಚಲುವರಾಯಸ್ವಾಮಿ

ಬೆಳಗಾವಿ ಸುವರ್ಣ ವಿಧಾನಸೌಧ/ ಕಲಬುರಗಿ : ತೊಗರಿಗೆ ಹೆಚ್ಚಿನ ಬೆಂಬಲ ಬೆಲೆ ನಿಗದಿಪಡಿಸುವಂತೆ ಕೋರಿ ಕೇಂದ್ರ ಸರ್ಕಾರಕ್ಕೆ ಮತ್ತೊಂದು ಪತ್ರ ಬರೆಯಲಾಗುವುದು ಮತ್ತು ಕಲಬುರಗಿ ಜಿಲ್ಲೆಯ ತೊಗರಿಗೆ ಹೆಚ್ಚಿನ ರೀತಿಯಲ್ಲಿ ಬೆಂಬಲ ಬೆಲೆ ಘೋಷಿಸುವ ನಿಟ್ಟಿನಲ್ಲಿ ಕ್ರಮವಹಿಸಲಾಗುವುದು ಎಂದು ಕೃಷಿ ಸಚಿವರಾದ ಎನ್.ಚಲುವರಾಯಸ್ವಾಮಿ ಅವರು ತಿಳಿಸಿದರು.

ಕಲಬುರಗಿ ಜಿಲ್ಲೆಯಲ್ಲಿ 30 ಲಕ್ಷ ರೈತರು ಬೆಳೆಯುತ್ತಿರುವ ತೊಗರಿ ಜಿ1-ಟ್ಯಾಗ್ ಕ್ಲಾಸ್-31 ಪ್ರಮಾಣ ಪತ್ರ 2017 ರಿಂದ 2019ರಲ್ಲಿ ದೊರೆತಿದ್ದರೂ ಅದರ ಗುಣಧರ್ಮಕ್ಕೆ ಅನುಗುಣವಾಗಿ ವೈಜ್ಞಾನಿಕ ಬೆಂಬಲ ಬೆಲೆ ಘೋಷಿಸದಿರುವುದರಿಂದ ರೈತರಿಗೆ ನಷ್ಟ ಉಂಟಾಗುತ್ತಿದೆ ಎಂದು ಪರಿಷತ್ನಲ್ಲಿ ಸದಸ್ಯರಾದ ತಿಪ್ಪಣ್ಣಪ್ಪ ಕಮಕನೂರ ಅವರು ಮಂಡಿಸಿದ ಸೂಚನೆಗೆ ಸಚಿವರು ಪ್ರತಿಕ್ರಿಯಿಸಿದರು.

ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆಯನ್ನು ಕೇಂದ್ರ ಸರ್ಕಾರವು ಘೋಷಣೆ ಮಾಡುತ್ತದೆ. ಕೇಂದ್ರದ ಕೃಷಿ ವೆಚ್ಚ ಮತ್ತು ಬೆಲೆ ಆಯೋಗವು (Commission on Agriculture Costs and Prices-CACP) ಪ್ರತಿ ವರ್ಷ ಮುಂಗಾರು ಮತ್ತು ಹಿಂಗಾರು ಹಂಗಾಮಿನ ಬೆಳೆಗಳಿಗೆ ವಿವಿಧ ರಾಜ್ಯಗಳಲ್ಲಿ ಉತ್ಪಾದನಾ ವೆಚ್ಚ ವಿವರಗಳನ್ನು ಕೃಷಿ ವಿಶ್ವ ವಿದ್ಯಾನಿಲಯಗಳ ಸಹಯೋಗದಲ್ಲಿ ಲೆಕ್ಕಾಚಾರ ಮಾಡುತ್ತದೆ. ಜೊತೆಗೆ ಎಲ್ಲಾ ರಾಜ್ಯ ಸರ್ಕಾರಗಳಿಂದ ಬೆಳೆಗಳ ಉತ್ಪಾದನಾ ವೆಚ್ಚದ ಮಾಹಿತಿ ಪಡೆದು, ತಜ್ಞರು, ಅಧಿಕಾರಿಗಳು ಮತ್ತು ರೈತರೊಂದಿಗೆ ಚರ್ಚಿಸಿ, ಉತ್ಪಾದನಾ ವೆಚ್ಚ ವಿವರಗಳನ್ನು ಒಳಗೊಂಡ ಬೆಲೆ ನೀತಿ ವರದಿಯನ್ನು ತಯಾರಿಸಲಾಗುತ್ತದೆ.

ವರದಿಯ ಶಿಫಾರಸ್ಸುಗಳಿಗೆ ಸಂಬoಧಿಸಿದoತೆ ರಾಜ್ಯಗಳ ಅಭಿಪ್ರಾಯ ಪಡೆದು, ನಂತರ ಉತ್ಪಾದನಾ ವೆಚ್ಚದ ಮೇಲೆ ಶೇ.50 ರಷ್ಟು ಸೇರಿಸಿ ಬೆಂಬಲ ಬೆಲೆಯನ್ನು ನಿಗದಿಪಡಿಸಲು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡುತ್ತದೆ. ಸಿಎಸಿಪಿ (CACP) ಶಿಫಾರಸ್ಸಿನನ್ವಯ ಕೇಂದ್ರ ಸರ್ಕಾರವು ಬೆಂಬಲ ಬೆಲೆಯನ್ನು ಘೋಷಿಸುತ್ತದೆ. ತೊಗರಿಗೆ ಹೆಚ್ಚಿನ ಬೆಂಬಲ ಬೆಲೆ ನಿಗದಿಪಡಿಸಲು ರಾಜ್ಯದಿಂದ ಕೇಂದ್ರ ಸರ್ಕಾರಕ್ಕೆ ಪ್ರತಿ ವರ್ಷ ಶಿಫಾರಸ್ಸು ಮಾಡಲಾಗುತ್ತಿದೆ. ರಾಜ್ಯದ ಶಿಫಾರಸ್ಸಿನನ್ವಯ ಕೇಂದ್ರ ಬೆಂಬಲ ಬೆಲೆ ನಿಗದಿಪಡಿಸುತ್ತದೆ ಎಂದರು.

ಕಲಬುರಗಿ ಜಿಲ್ಲೆಯಲ್ಲಿ ಬೆಳೆಯುವ ತೊಗರಿಗೆ ಜಿ.ಐ. ಟ್ಯಾಗ್ (ಕ್ಲಾಸ್-31) ಪ್ರಮಾಣ ಪತ್ರ ದೊರೆತಿದ್ದು, ಇದಕ್ಕೆ ಶೇ. 20 ರಿಂದ 25 ರಷ್ಟು ಹೆಚ್ಚಿನ ಬೆಂಬಲ ಬೆಲೆ ನಿಗದಿಪಡಿಸಲು ಕೇಂದ್ರದ ಕೃಷಿ ವೆಚ್ಚ ಮತ್ತು ಬೆಲೆ ಆಯೋಗವನ್ನು (Commission for Agriculture Crops and Prices- CACP) ಕೋರಲಾಗಿದೆ ಎಂದು ಸಚಿವರಾದ ಎನ್.ಚಲುವರಾಯಸ್ವಾಮಿ ಮಾಹಿತಿ ನೀಡಿದರು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News