ಭೀಮಾ ಕೊರೇಗಾಂವ್ ವಿಜಯೋತ್ಸವ ಆಚರಣೆಗೆ ಕಲಬುರಗಿ ಕೇಂದ್ರೀಯ ವಿವಿ ಆಡಳಿತ ಮಂಡಳಿ ಅಡ್ಡಿ : ವಿದ್ಯಾರ್ಥಿಗಳ ಆರೋಪ
ಕಲಬುರಗಿ : ಆಳಂದ ತಾಲೂಕಿನ ಕಡಗಂಚಿ ಸಮೀಪದಲ್ಲಿರುವ ಕೇಂದ್ರೀಯ ವಿಶ್ವವಿದ್ಯಾನಿಲಯದ ಆವರಣದಲ್ಲಿ ಭೀಮಾ ಕೊರೇಗಾಂವ್ ವಿಜಯೋತ್ಸವ ಆಚರಿಸಲು ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಸುತ್ತಲೂ ಹಾಕಿರುವ ದೀಪಾಲಂಕಾರವನ್ನು ತೆಗೆಸಿ, ವಿವಿಯ ಆಡಳಿತ ಮಂಡಳಿ ಅವರಿಗೆ ಅಪಮಾನ ಮಾಡಲಾಗಿದೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.
ಭೀಮಾ ಕೊರೇಗಾಂವ್ ವಿಜಯೋತ್ಸವ ಅಂಗವಾಗಿ ಮಂಗಳವಾರ ವಿವಿ ಆವರಣದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಅವರ ಪುತ್ಥಳಿ ಸುತ್ತಲೂ, ವಿದ್ಯಾರ್ಥಿಗಳು ದೀಪಾಲಂಕಾರ ಮಾಡಿದ್ದಾರೆ. ವಿದ್ಯುತ್ ದೀಪಗಳನ್ನು ಅಳವಡಿಸುವಾಗ ವಿವಿಯ ಆಡಳಿತ ಮಂಡಳಿ ಏನು ಹೇಳಿಲ್ಲ, ಬಳಿಕ ಅದನ್ನು ಹಾಕಲು ಅನುಮತಿ ತೆಗೆದುಕೊಳ್ಳಿ ಎಂದು ನೆಪ ಹೇಳಿಕೊಂಡು ಉದ್ದೇಶಪೂರ್ವಕವಾಗಿ ದೀಪಾಲಂಕಾರವನ್ನು ತೆಗೆಸಿ ಅಂಬೇಡ್ಕರ್ ಅವರಿಗೆ ಅಪಮಾನ ಎಸಗಿದ್ದಾರೆ ಎಂದು ಅಂಬೇಡ್ಕರ್ ವಿದ್ಯಾರ್ಥಿ ಸಂಘಟನೆಯ ಸಂಶೋಧನಾ ವಿದ್ಯಾರ್ಥಿ ನಂದಕುಮಾರ್ ಆರೋಪಿಸಿದ್ದಾರೆ.
ಅಂಬೇಡ್ಕರ್ ಅವರಿಗೆ ಹೂವಿನ ಹಾರ ಮತ್ತು ದೀಪಾಲಂಕಾರ ಮಾಡಲು ಅನುಮತಿ ಪಡೆಯಬೇಕಾ ಎಂದು ಪ್ರಶ್ನಿಸಿದ ಅವರು, ಆದರೂ ದೀಪಾಲಂಕಾರ ಮಾಡುವುದಕ್ಕಾಗಿ ವಿವಿಯ ರಿಜಿಸ್ಟ್ರಾರ್ ಆರ್.ಆರ್.ಬಿರಾದಾರ್ ಅವರ ಮನೆಗೆ ಹೋಗಿ, ಮನವಿ ಪತ್ರ ಕೊಟ್ಟಿದ್ದೇವೆ. ಆ ವಿಚಾರ ಮಾತನಾಡೋಣ ಎಂದು ಹೇಳಿ ವಿದ್ಯಾರ್ಥಿಗಳನ್ನು ಕಳುಹಿಸಿದ್ದಾರೆ. ಬಳಿಕ ರಿಜಿಸ್ಟ್ರಾರ್ ಅವರು ಅಲ್ಲಿನ ಸಿಬ್ಬಂದಿಗೆ ಕರೆ ಮಾಡಿ, ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದಾರೆ ಎಂದು ಅವರು ಆರೋಪಿಸಿದರು.
ಈ ಬಗ್ಗೆ ಅಂಬೇಡ್ಕರ್ ವಿದ್ಯಾರ್ಥಿ ಸಂಘದ ಅಧ್ಯಕ್ಷ ನಂದಕುಮಾರ್ ಅವರು ಸಾಮಾಜಿಕ ಜಾಲತಾಣದಲ್ಲಿ ವೀಡಿಯೊ ಹರಿಬಿಟ್ಟಿದ್ದಾರೆ. ವಿದ್ಯುತ್ ದೀಪಾಲಂಕಾರ ಕುರಿತಾಗಿ ಅನುಮತಿ ಪಡೆದ ಬಳಿಕವೂ ದೀಪಾಲಂಕಾರ ಕ್ಕೆ ಅನುಮತಿ ನೀಡಿಲ್ಲ, ಇಲ್ಲಿ ಮನುವಾದಿಗೆ ಸಂಬಂಧಿಸಿದ ಚಟುವಟಿಕೆಗಳು ನಡೆಯುತ್ತವೆ, ಅದಕ್ಕೆ ಏನು ಅನುಮತಿ ಬೇಕಾಗಿಲ್ಲ. ಅನುಮತಿಯ ನೆಪ ಹೇಳಿಕೊಂಡು ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಅಪಮಾನ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ವಿವಿಯ ಕ್ರಮದ ಕುರಿತು ಕೇಂದ್ರೀಯ ವಿಶ್ವವಿದ್ಯಾನಿಲಯದ ಹಲವು ವಿದ್ಯಾರ್ಥಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಕುರಿತಾಗಿ ವಿವಿಯ ಕುಲಸಚಿವರಿಗೆ ಸಂಪರ್ಕಿಸಿದಾಗ ಅವರು ಕರೆಯನ್ನು ಸ್ವೀಕರಿಸುತ್ತಿಲ್ಲ ಎಂಬುದು ತಿಳಿದುಬಂದಿದೆ.
ಲೈಟಿಂಗ್ ಹಾಕುವಾಗ ಏನು ಹೇಳಿಲ್ಲ, ಹಾಕಿದ ಬಳಿಕ ನೋಡಿಕೊಂಡು ಹೋದ ಕುಲಪತಿಗಳು, ಕುಲಸಚಿವರು ಸಿಬ್ಬಂದಿಗೆ ಫೋನ್ ಮಾಡಿ ಡಾ.ಅಂಬೇಡ್ಕರ್ ಪುತ್ಥಳಿ ಎದುರು ಹಾಕಿರುವ ವಿದ್ಯುತ್ ದೀಪಗಳನ್ನು, ವಿದ್ಯುತ್ ಸಂಪರ್ಕವನ್ನು ಉದ್ದೇಶಪೂರ್ವಕವಾಗಿ ತೆಗೆಸಿದ್ದಾರೆ. ಈ ಹಿಂದೆ ಅಂಬೇಡ್ಕರ್ ಅವರ ಪ್ರತಿಮೆಗೆ ಹೂವಿನ ಹಾರ ಹಾಕಲು ಕೂಡ ವಿರೋಧ ವ್ಯಕ್ತಪಡಿಸಿ, ಅವರಿಗೆ ಅಪಮಾನ ಮಾಡಿದ್ದರು. ಸಂವಿಧಾನ ವಿರೋಧ ಚಟುವಟಿಕೆಗಳು ವಿವಿಯಲ್ಲಿ ಬಹಳಷ್ಟು ನಡೆಯುತ್ತಿವೆ.
-ನಂದಕುಮಾರ್, ಅಧ್ಯಕ್ಷ, ಅಂಬೇಡ್ಕರ್ ವಿದ್ಯಾರ್ಥಿ ಸಂಘ, ಸಿಯುಕೆ ಕಲಬುರಗಿ