ಕಲಬುರಗಿ | ನಗರಾಭಿವೃದ್ಧಿ ಸಚಿವರಿಂದ ಪ್ರಗತಿ ಪರಿಶೀಲನಾ ಸಭೆ

Update: 2025-01-03 16:22 GMT

ಕಲಬುರಗಿ : ಕಲಬುರಗಿ ಮಹಾನಗರದಲ್ಲಿ ಪ್ರಗತಿಯಲ್ಲಿರುವ 24 ಗಂಟೆ ನಿರಂತರ ಕುಡಿಯುವ ನೀರಿನ ಯೋಜನೆ ಕಾಮಗಾರಿ 2026ರ ಡಿಸೆಂಬರ್ ಅಂತ್ಯದವರೆಗೆ ಮುಗಿಸುವಂತೆ ಕಾಮಗಾರಿಯ ಟೆಂಡರ್ ಪಡೆದಿರುವ ಎಲ್ ಆಂಡ್‌ ಟಿ ಕಂಪನಿ ಅಧಿಕಾರಿಗಳಿಗೆ ರಾಜ್ಯದ ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವ ಬೈರತಿ ಸುರೇಶ್‌ ಸೂಚನೆ ನೀಡಿದರು.

ಶುಕ್ರವಾರ ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರ, ಕಲಬುರಗಿ ಮಹಾನಗರ ಪಾಲಿಕೆ, ನಗರ ಮತ್ತು ಗ್ರಾಮಾಂತರ ಯೋಜನಾ, ಕೆ.ಯು.ಡಬ್ಲ್ಯೂ.ಎಸ್.ಡಿ.ಬಿ ಹಾಗೂ ಕೆ.ಯು.ಐ.ಎಫ್.ಡಿ.ಸಿ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, ಒಪ್ಪಂದ ದಂತೆ ಇದೇ ವರ್ಷದ ಜೂನ್ ವರೆಗೆ ಕಾಮಗಾರಿ ಮುಗಿಸಬೇಕಿತ್ತು. ಕಂಪನಿ ನಿಧಾನಗತಿ ಕೆಲಸಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಸಚಿವರು, ಜನವರಿ ಅಂತ್ಯಕ್ಕೆ ಈಗಿರುವ 380ರ ಬದಲಾಗಿ 700 ಕಾರ್ಮಿಕರನ್ನು ನಿಯೋಜಿಸಿ ಕಾಮಗಾರಿಗೆ ವೇಗ ನೀಡಬೇಕೆಂದರು.

ಇನ್ನು ಕಾಮಗಾರಿ ಪೂರ್ಣಗೊಳ್ಳುವವರೆಗೆ ಬೇಸಿಗೆ ಕಾಲ ಸೇರಿದಂತೆ ನಗರದ 55 ವಾರ್ಡುಗಳಿಗೆ ಟ್ಯಾಂಕರ್ ಮೂಲಕ ನಿತ್ಯ ನೀರು ಪೂರೈಕೆ ಮಾಡಬೇಕು. ಇನ್ನು ಕಾಲಮಿತಿಯಲ್ಲಿ ಕೆಲಸ ಮಾಡದಿದ್ದಲ್ಲಿ ಕಂಪನಿಯನ್ನು ಕಪ್ಪು ಪಟ್ಟಿಗೆ ಸೇರಿಸಿ ರಾಜ್ಯದಲ್ಲಿ ಯಾವುದೇ ಟೆಂಡರ್ ಪಡೆಯದಂತೆ ಕ್ರಮ ವಹಿಸಲಾಗುವುದು ಎಂದು ಕಂಪನಿಯ ಕ್ಲಸ್ಟರ್ ಹೆಡ್ ಅಧಿಕಾರಿ ನಾಗೇಂದ್ರ ಮತ್ತು ಕುಮಾರಸೇನ್ ಅವರಿಗೆ ಎಚ್ಚರಿಕೆ ನೀಡಿದರು.

ಎಲ್ ಆಂಡ್‌ ಟಿ ಕಂಪನಿಯ ಕ್ಲಸ್ಟರ್ ಹೆಡ್ ನಾಗೇಂದ್ರ ಮಾತನಾಡಿ, ಉದ್ದೇಶಿತ ಯೋಜನೆಯಲ್ಲಿ ನಗರದಲ್ಲಿ 12 ಓವರ್ ಹೆಡ್ ಟ್ಯಾಂಕ್ ನಿರ್ಮಿಸಲಾಗುತ್ತಿದ್ದು, ಇದರಲ್ಲಿ ಒಂದು ಪೂರ್ಣಗೊಳಿಸಿ ಅದರ ಮೂಲಕ ಒಟ್ಟಾರೆ 225 ಮನೆಗಳಿಗೆ ಗೃಹ ನಳ ಸಂಪರ್ಕದ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ. 6 ಟ್ಯಾಂಕ್ ಕಾಮಗಾರಿ ಪೂರ್ಣಗೊಂಡಿದ್ದು, ಉಳಿದವು ಪ್ರಗತಿಯಲ್ಲಿವೆ. ಒಟ್ಟಾರೆ 62,000 ಮನೆಗಳಿಗೆ ನಲ್ಲಿ ಮೂಲಕ ಶುದ್ದ ಕುಡಿಯುವ ಪೂರೈಕೆಯ ಗುರಿ ಹೊಂದಲಾಗಿದೆ ಎಂದು ಮಾಹಿತಿ ನೀಡಿದರು.

ಈ ವೇಳೆ ಸಚಿವ ಬೈರತಿ ಸುರೇಶ ಮಾತನಾಡಿ, ಸಿವಿಲ್ ಕಾಮಗಾರಿ ಮುಗಿಸಿದರೆ ಅದು ಸಂಪೂರ್ಣ ಆಗುವುದಿಲ್ಲ, ಜನರ ಮನೆಗೆ ನೀರು ತಲುಪಬೇಕು ಆಗಲೇ ಕಾಮಗಾರಿ ಪೂರ್ಣ ಎಂದು ಭಾವಿಸಲಾಗುತ್ತದೆ ಎಂದರು.

ಶಾಸಕ ಅಲ್ಲಮಪ್ರಭು ಪಾಟೀಲ್‌ ಮಾತನಾಡಿ, ಉದ್ದೇಶಿತ ಕುಡಿಯುವ ನೀರಿನ ಕಾಮಗಾರಿ ನಿಧಾನಗತಿಯಿಂದ ನಗರದಲ್ಲಿ ನೀರಿನ ಸಮಸ್ಯೆ ಹೆಚ್ಚಿದ್ದು, ಬೇಸಿಗೆಯಲ್ಲಿ ಹಾಹಾಕಾರಕ್ಕೆ ಕಾರಣವಾಗುತ್ತಿದೆ. ನಗರಕ್ಕೆ 34 ಎಂ.ಎಲ್.ಡಿ. ನೀರಿನ ಕೊರತೆ ಇದೆ. ಹೀಗಾಗಿ ನಗರದಲ್ಲಿನ 1,968 ಕೊಳವೆ ಬಾವಿ ಪೈಕಿ 400 ರಲ್ಲಿ ನೀರಿದ್ದು, ಫ್ಲಶ್, ಮೋಟಾರ್ ಅಳವಡಿಕೆಯಂತಹ ದುರಸ್ತಿ ಮಾಡಲು ಕಂಪನಿ ಮುಂದಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಇದಕ್ಕೆ ಧ್ವನಿಗೂಡಿಸಿದ ಎಂ.ಎಲ್.ಸಿ. ತಿಪ್ಪಣ್ಣಪ್ಪ ಕಮಕನೂರ ಎಲ್ ಆಂಡ್‌ ಟಿ ಕಂಪನಿಯಿಂದ ಈ ಕಾಮಗಾರಿ ಪೂರ್ಣವಾಗಲ್ಲ, ಕೂಡಲೆ ಟೆಂಡರ್ ರದ್ದುಪಡಿಸಿ ಬೇರೆ ಸಂಸ್ಥೆಗೆ ನೀಡುವಂತೆ ಒತ್ತಾಯಿಸಿದರು.

ಪಾಲಿಕೆಯಿಂದ ಇ-ಸ್ವತ್ತು ನೀಡುವಲ್ಲಿ ವಲಯ 3ರ ಆಯುಕ್ತ ಮುಜಾಮಿಲ್ ಅವರ ನಿಧಾನಗತಿ ಪ್ರಗತಿಗೆ ಅಸಮಾಧಾನ ವ್ಯಕ್ತಪಡಿಸಿದ ಸಚಿವ ಬೈರತಿ ಸುರೇಶ ಅವರು, ಕಾರಣ ಕೇಳುವ ನೋಟಿಸ್ ಜಾರಿಗೊಳಿಸುವಂತೆ ಪಾಲಿಕೆ ಆಯುಕ್ತರಿಗೆ ಸೂಚಿಸಿದರು. ಮೂರು ತಿಂಗಳೊಳಗೆ ಪ್ರಗತಿ ಸಾಧಿಸದಿದ್ದಲ್ಲಿ ಶಿಸ್ತು ಕ್ರಮ ಕೈಗೊಳ್ಳಾಗುವುದು ಎಂದು ವಲಯ ಆಯಕ್ತರಿಗೆ ಎಚ್ಚರಿಕೆ ನೀಡಿದರು.

ತ್ಯಾಜ್ಯ ಸಂಗ್ರಹಣೆಗೆ ಜಮೀನು ಕೊಡಿ :

ಸಭೆಯಲ್ಲಿ ಕಲಬುರಗಿ ಪಾಲಿಕೆ ಮೇಯರ್ ಯಲ್ಲಪ್ಪ ನಾಯ್ಕೋಡಿ ಮಾತನಾಡಿ, ಕಲಬುರಗಿ ನಗರ ದಿನದಿಂದ ದಿನಕ್ಕೆ ಬೆಳೆಯುತ್ತಿದೆ. ಈಗಿರುವ ಉದನೂರ ಎಸ್.ಡಬ್ಲೂ.ಎಂ. ಘಟಕದಲ್ಲಿ ಕಸ ತುಂಬಿರುವ ಕಾರಣ ನಗರದ ನಾಲ್ಕು ದಿಕ್ಕಿನಲ್ಲಿ ಕಸ ಸಂಗ್ರಹಿಸಿ ವೈಜ್ಞಾನಿಕ ವಿಲೇವಾರಿ ಮಾಡಲು ತಲಾ 25 ಎಕರೆ ಜಮೀನು ಒದಗಿಸಬೇಕು ಎಂದು ಸಚಿವರಲ್ಲಿ ಮನವಿ ಮಾಡಿಕೊಂಡರು. ಇದಕ್ಕೆ ಸಚಿವರು ಪ್ರತಿಕ್ರಿಯೆಸಿ ನಗರದಿಂದ 15-20 ಕಿ.ಮೀ. ದೂರ ಅಂತರದಲ್ಲಿ ಸರ್ಕಾರಿ ಜಮೀನು ಕೊಡಿ ಎಂದು ಡಿ.ಸಿ. ಬಿ.ಫೌಜಿಯಾ ತರನ್ನುಮ್ ಅವರಿಗೆ ನಿರ್ದೇಶನ ನೀಡಿದರು.

ಕರವಸೂಲಿ ಮಾಡಿ, ಒತ್ತುವರಿ ತೆರವುಗೊಳಿಸಿ :

ನಗರದ ಅಭಿವೃದ್ಧಿಗೆ ಆರ್ಥಿಕ ಸಂಪನ್ಮೂಲ ಕ್ರೋಢಿಕರಣ ಮುಖ್ಯವಾಗಿದೆ. ಕರ ವಸೂಲಾತಿಗೆ ಒತ್ತು ನೀಡಬೇಕು. ಕರ ವಸೂಲು ಮಾಡದಿದ್ರೆ ಸಿಬ್ಬಂದಿ ವೇತನ ಹೇಗೆ ಪಾವತಿಸುತ್ತೀರಿ ಎಂದ ಸಚಿವ ಬಿ.ಎಸ್.ಸುರೇಶ ಅವರು, ಕರ ವಸೂಲು ಮಾಡಲು ಬಾಕಿ ಇರಿಸಿಕೊಂಡವರ ಮನೆ, ಅಂಗಡಿ, ವಾಣಿಜ್ಯ ಮುಂಗಟ್ಟುಗಳಿಗೆ ಪೌರಕಾರ್ಮಿಕರಿಂದಲೆ ಬೀಗ ಹಾಕಿಸಿ ಎಂದು ಪಾಲಿಕೆಯ ಮೇಯರ್ ಮತ್ತು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಉದ್ಯಾನವನದಲ್ಲಿ ಮನೆ ನಿರ್ಮಾಣ ಮಾಡುವಾಗ ನೀವೇನು ಮಾಡುತ್ತಿದ್ದೀರಿ ಎಂದು ಪಾಲಿಕೆ ಆಯುಕ್ತರು ಮತ್ತು ವಲಯ ಆಯುಕ್ತರನ್ನು ಸಚಿವರು ಪ್ರಶ್ನಿಸಿದರು. ಕೂಡಲೆ ಉದ್ಯಾನವನ ಸೇರಿದಂತೆ ನಗರದೆಲ್ಲಡೆ ಒತ್ತುವರಿ ತೆರವು ಕಾರ್ಯ ಬರುವ ಸೋಮವಾರದಿಂದಲೆ ಅಭಿಯಾನದ ಮೂಲಕ ಆರಂಭಿಸಬೇಕು ಎಂದು ಪಾಲಿಕೆ ಆಯುಕ್ತ ಅವಿನಾಶ ಶಿಂಧೆ ಅವರಿಗೆ ಸೂಚಿಸಿದರು.

ನಗರದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದನೆ ಪಡೆಯದೆ ಅನಧಿಕೃತವಾಗಿ ತಲೆ ಎತ್ತಿರುವ ಲೇಔಟ್ ಮಾಲಕರಿಗೆ ಕೂಡಲೆ ನೋಟಿಸ್ ಜಾರಿಗೊಳಿಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಪ್ರಾಧಿಕಾರದ ಆಯುಕ್ತ ಗಂಗಾಧರ ಮಾಳಗಿ ಅವರಿಗೆ ಸಚಿವ ಬಿ.ಎಸ್.ಸುರೇಶ್‌ ಸೂಚಿಸಿದರು.

ಕಲಬುರಗಿಗೆ ವಿಶೇಷ ಪ್ಯಾಕೇಜ್ ಕೊಡಿ :

ಶಾಸಕ ಅಲ್ಲಮಪ್ರಭು ಪಾಟೀಲ ಮಾತನಾಡಿ, ನಗರದಲ್ಲಿ ಯು.ಜಿ.ಡಿ. ಸಂಪರ್ಕ ಸಮಪರ್ಕವಾಗಿಲ್ಲ. ಹಳೇಯದೆಲ್ಲ ಹಾಳಾಗಿದೆ. 700 ಕಿ.ಮೀ. ಒಳಚರಂಡಿ ಸಂಪರ್ಕ ಕಲ್ಪಿಸಲು 300 ಕೋಟಿ ರೂ. ಅವಶ್ಯಕತೆ ಇದ್ದು, ಬರುವ ಆಯವ್ಯಯದಲ್ಲಿ ಇದಕ್ಕೆ ಅನುದಾನ ಮೀಸಲಿರಿಸಬೇಕು. ನಗರದಲ್ಲಿನ 1,200 ವಿದ್ಯುತ್ ಕಂಬಗಳು ಶಿಥಿಲಾವಸ್ಥೆಯಲ್ಲಿದ್ದು, ಇತ್ತೀಚೆಗೆ ವಿದ್ಯುತ್ ಅವಘಡದಿಂದ ಇಬ್ಬರು ಸಾವನಪ್ಪಿದರೆ ಓರ್ವ ಮಹಿಳೆ ಸ್ಥತಿ ಚಿಂತಾಜನಕವಾಗಿದೆ. ಕೂಡಲೆ ಇದನ್ನು ಗಂಭೀರವಾಗಿ ಪರಿಗಣಿಸಿ ವಿಶೇಷ ಪ್ಯಾಕೇಜ್ ಘೋಷಿಸಿ ವಿದ್ಯುತ್ ಕಂಬಗಳನ್ನು ಬದಲಾಯಿಸಬೇಕೆಂದು ಸಚಿವರಲ್ಲಿ ಮನವಿ ಮಾಡಿಕೊಂಡರು. ಇದಕ್ಕೆ ಉತ್ತರಿಸಿದ ಸಚಿವ ಬೈರತಿ ಸುರೇಶ ಸಿ.ಎಂ. ಜೊತೆಗೆ ಚರ್ಚಿಸಲಾಗುವುದು ಎಂದರು.

ಸಭೆಯಲ್ಲಿ ಶಾಸಕರಾದ ಎಂ.ವೈ.ಪಾಟೀಲ್‌, ವಿಧಾನ ಪರಿಷತ್ ಶಾಸಕರಾದ ಜಗದೇವ ಗುತ್ತೇದಾರ, ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಜಹರ್ ಆಲಂ ಖಾನ್, ಕೆ.ಯು.ಐ.ಡಿ.ಎಫ್.ಸಿ ವ್ಯವಸ್ಥಾಪಕ ನಿರ್ದೇಶಕ ಬಿ.ಶರತ್, ಜಿಲ್ಲಾಧಿಕಾರಿ ಬಿ.ಫೌಝಿಯಾ ತರನ್ನುಮ್ ಸೇರಿದಂತೆ ಇತರೆ ಅಧಿಕಾರಿಗಳು ಇದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News