ಶಹಾಬಾದ್ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ಸಮ್ಮೇಳಣಾಧ್ಯಕ್ಷರ ಅದ್ದೂರಿ ಮೆರವಣಿಗೆ
ಕಲಬುರಗಿ : ಕನ್ನಡ ಸಾಹಿತ್ಯ ಪರಿಷತ್ತು ಶಹಾಬಾದ್ ವತಿಯಿಂದ ಆಯೋಜಿಸಲಾದ ಶಹಾಬಾದ್ ತಾಲ್ಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ಸಮ್ಮೇಳನಾಧ್ಯಕ್ಷರ ಮೆರವಣಿಗೆ ಅದ್ದೂರಿಯಾಗಿ ಜರುಗಿತು.
ಪ್ರಥಮವಾಗಿ ರಾಷ್ಟ್ರಧ್ವಜವನ್ನು ನಗರಸಭೆಯ ಅಧ್ಯಕ್ಷೆ ಚಂಪಾಬಾಯಿ ರಾಜು ಮೇಸ್ತ್ರಿ ಮತ್ತು ನಾಡಧ್ವಜದ ಧ್ವಜಾರೋಹಣ ಕಾರ್ಯಕ್ರಮವನ್ನ ಕಸಾಪ ಅಧ್ಯಕ್ಷ ಶರಣಬಸಪ್ಪ ಕೋಬಾಳ, ತಹಸೀಲ್ದಾರ ಜಗದೀಶ ಚೌರ್, ನಗರಸಭೆಯ ಪೌರಾಯುಕ್ತ ಡಾ. ಕೆ.ಗುರಲಿಂಗಪ್ಪ ಧ್ವಜಾರೋಹಣ ನೆರವೇರಿಸಿದರು.
ನಗರಸಭೆಯ ಉಪಾಧ್ಯಕ್ಷೆ ಫಾತಿಮಾಬೇಗಂ, ಡಿವಾಯ್ಎಸ್ಪಿ ಶಂಕರಗೌಡ ಪಾಟೀಲ ಸಮ್ಮೇಳನಾಧ್ಯಕ್ಷರ ಮೆರವಣಿಗೆಗೆ ಚಾಲನೆ ನೀಡಿದರು.
ಭವ್ಯವಾದ ಮೆರವಣಿಗೆಯಲ್ಲಿ ಜನಪದ ಕಲಾತಂಡಗಳು, ಡೊಳ್ಳು ಕುಣಿತ, ಶಾಲಾ ಮಕ್ಕಳಿಂದ ಕನ್ನಡದ ಬಾವುಟ ಹಾರಾಡುತ್ತಿದುದ್ದು, ಕನ್ನಡ ಪರ ಸಂಘಟನೆಗಳು ತಾಲೂಕಿನ ಶಿಕ್ಷಕರು, ಗುರುಮಾತೆಯರು, ವಿದ್ಯಾರ್ಥಿಗಳು ಸರ್ವಾಧ್ಯಕ್ಷರ ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು. ಕನ್ನಡ ಕನ್ನಡ ಸಾಗಿ ನಮ್ಮ ಸಂಗಡ, ನಾನು ಕನ್ನಡಿಗ ಕನ್ನಡವೇ ನನ್ನ ನುಡಿ, ಕನ್ನಡವೆನ್ನಿ ಜತೆಗೆ ಬನ್ನಿ, ಜೈ ಭಾರತ ಜನನಿಯ ತನುಜಾತೆ ಜಯಹೇ ಕರ್ನಾಟಕ ಮಾತೆ, ಉದಯವಾಗಲಿ ನಮ್ಮ ಕನ್ನಡ ನಾಡು, ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ ಎಂಬ ಘೋಷಣೆಗಳ ಸಾಮೂಹಿಕ ಧ್ವನಿಯ ಕರತಾಡನ ಮೊಳಗಿತು. ಜಾನಪದ ಮೇಳಗಳ ವಾದ್ಯಕ್ಕೆ ವಿದ್ಯಾರ್ಥಿಗಳು, ಮಹಿಳೆಯರು, ವೃದ್ಧರು, ರಾಜಕೀಯ ಪಕ್ಷದ ಮುಖಂಡರು ಪಕ್ಷಬೇಧ ಮರೆತು ಹೆಜ್ಜೆ ಹಾಕಿ ನಾಡು-ನುಡಿ ಬಗೆಗಿನ ಪ್ರೀತಿ ಪ್ರದರ್ಶಿಸಿದರು. ರಸ್ತೆಯ ತುಂಬೆಲ್ಲಾ ಕೆಂಪು.ಹಳದಿ ಬಣ್ಣದ ಪರಾರಿಗಳಿಂದ ಶೃಂಗಾರ ಮಾಡಲಾಗಿತ್ತು. ಅಲ್ಲದೇ ಮಹಿಳೆಯರ ಕುಂಭ ಮೆರವಣಿಗೆ, ಕೋಲಾಟ, ಡೊಳ್ಳು ಕುಣಿತ ಮೆರವಣಿಗೆಗೆ ಮೆರುಗು ನೀಡಿದವು.
ಸಮ್ಮೇಳನಾಧ್ಯಕ್ಷ ಸಾರೋಟ ಮೆರವಣಿಗೆಯಲ್ಲಿ ವಿಶೇಷ ಅಲಂಕಾರ ಮಾಡಿ ತೆರೆದ ವಾಹನದಲ್ಲಿ ವಾಧ್ಯ ವೈಭವದ ಮೂಲಕ ಮೆರವಣಿಗೆ ಮೂಲಕ ಸಂತೋಷಕುಮಾರ ಇಂಗಿನಶೆಟ್ಟಿ ವೇದಿಕೆಗೆ ಸಂಭ್ರಮದಿoದ ಬರಮಾಡಿಕೊಂಡರು.
ಸಾರೋಟದಲ್ಲಿ ಕುಳಿತ ಸಮ್ಮೇಳನಾಧ್ಯಕ್ಷರಾದ ಎಚ್.ಬಿ.ತೀರ್ಥೆ ಅವರು ಸಮ್ಮೇಳನದ ಪ್ರಧಾನ ವೇದಿಕೆವರೆಗೂ ರಸ್ತೆ ಬದಿ ನಿಂತ ಜನರ ಗೌರವ ಸ್ವೀಕರಿಸುತ್ತ ಸೆಲ್ಫಿ ಕ್ಲಿಕ್ಕಿಸಿಕೊಳ್ಳುವ ಜನರಿಗೆ ಸಹಕರಿಸಿ ಸರಳತೆ ಮೆರೆದರು.
ಈ ಸಂದರ್ಭದಲ್ಲಿ ನಗರಸಭೆಯ ಸದಸ್ಯರು, ಸುತ್ತಮುತ್ತಲಿನ ಗ್ರಾಮದ ರೈತರು, ಸರಕಾರಿ ನೌಕರರು, ಕನ್ನಡ ಅಭಿಮಾನಿಗಳು ಸೇರಿದಂತೆ ಅನೇಕರು ಭಾಗವಹಿಸಿದರು.