ಕಲಬುರಗಿ | ಬಿಜೆಪಿಯವರು ಸುಳ್ಳು ಆರೋಪ ಮಾಡುತ್ತಿದ್ದಾರೆ : ಶರಣು ಡೋಣಗಾಂವ
ಕಲಬುರಗಿ : ಕಳೆದ ವಿಧಾನಸಭೆ ಚುನಾವಣೆ ಮತ್ತು ಲೋಕಸಭೆ ಚುನಾವಣೆಯಲ್ಲಿ ಹೀನಾಯವಾಗಿ ಸೋಲು ಅನುಭವಿಸಿದ ಬಿಜೆಪಿಯವರು, ಸಚಿವ ಪ್ರಿಯಾಂಕ್ ಖರ್ಗೆ ಅವರ ವಿರುದ್ಧ ಸುಳ್ಳು ಆರೋಪ ಮಾಡುವಲ್ಲಿ ತೊಡಗಿದ್ದಾರೆ ಎಂದು ಜಿಲ್ಲಾ ಪಂಚ ಗ್ಯಾರೆಂಟಿ ಸದಸ್ಯ ಶರಣು ಡೋಣಗಾಂವ ಆರೋಪಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿದ ಅವರು, ಚುನಾವಣೆ ಸಮಯದಲ್ಲಿ ಕಲಬುರಗಿ ಜಿಲ್ಲೆಗೆ ಬರುವ ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ ಅವರು ಬಿಟ್ಟಿ ಪ್ರಚಾರಕ್ಕೆ ಮುಂದಾಗಿ ಮಾಧ್ಯಮದವರ ಮುಂದೆ ಪ್ರಿಯಾಂಕ್ ಖರ್ಗೆ ಅವರ ಬಗ್ಗೆ ಸುಳ್ಳು ಆರೋಪ ಮಾಡುವುದೇ ಚಾಳಿಯಾಗಿಸಿಕೊಂಡಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಕಲಬುರಗಿ ಜಿಲ್ಲೆಯ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿರುವ ಪ್ರಿಯಾಂಕ್ ಖರ್ಗೆ ಅವರ ಬಗ್ಗೆ ಸತ್ಯಕ್ಕೆ ದೂರವಾದ ಆರೋಪ ಮಾಡುವ ರವಿಕುಮಾರ ಅವರ ಕೊಡುಗೆ ಜಿಲ್ಲೆಗೆ ಏನಿದೆ ಎಂದು ಹೇಳಲಿ. ಆರೋಪ ಮಾಡುವುದು ಬಿಡಿ ಸತ್ಯದ ಕುರಿತು ಮಾತನಾಡಿ ಎಂದು ಅವರು ಸವಾಲು ಹಾಕಿದ್ದಾರೆ.
ಸಚಿವ ಪ್ರಿಯಾಂಕ್ ಖರ್ಗೆ ಅವರ ನಿಷ್ಕಳಂಕ ವ್ಯಕ್ತಿತ್ವಕ್ಕೆ ಕಳಂಕ ಹಚ್ಚುವ ಸಂಚು ಮಾಡಿ ಸತ್ಯಕ್ಕೆ ದೂರವಾದ ಆರೋಪ ಮಾಡಿ ಹೆಸರು ಕೆಡಿಸುವ ದುಷ್ಟ ಕೆಲಸ ಬಿಜೆಪಿಯವರು ಮಾಡುತ್ತಿದ್ದಾರೆ. ಬಿಜೆಪಿಯವರು ಎಷ್ಟೇ ಆರೋಪ ಮಾಡಿದರೂ ಜನರಿಗೆ ಸತ್ಯ ಮತ್ತು ಸುಳ್ಳು ಏನೆಂಬುದು ಎಂದು ಅವರಿಗೆ ಗೊತ್ತಿದೆ ಎಂದು ಹೇಳಿದ್ದಾರೆ.