ಚಿಂಚೋಳಿ | ಅಮಿತ್ ಶಾ ಹೇಳಿಕೆ ಖಂಡಿಸಿ ಜ.8ಕ್ಕೆ ಕಾಳಗಿ ಬಂದ್ ಗೆ ಕರೆ
ಕಲಬುರಗಿ : ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯಸಭೆಯಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಬಗ್ಗೆ ಹಗುರವಾಗಿ ಮಾತನಾಡಿರುವುದನ್ನು ಖಂಡಿಸಿ ಜ.8 ರಂದು ಕಾಳಗಿ ಬಂದ್ ಗೆ ಕರೆ ನೀಡಲಾಗಿದೆ ಎಂದು ಸಂವಿಧಾನ ರಕ್ಷಣಾ ಹೋರಾಟ ಸಮಿತಿ ಮುಖ್ಯಸ್ಥರಾದ ಶಂಕರ ಹೇರೂರ, ಕಲ್ಯಾಣರಾವ್ ಡೊಣ್ಣೂರ ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸಂವಿಧಾನ ರಕ್ಷಣಾ ಹೋರಾಟ ಸಮಿತಿ ಹಾಗೂ ವಿವಿಧ ಸಂಘಟನೆಗಳ ಮುಖಂಡರೊಂದಿಗೆ ಸಭೆ ನಡೆಸಿದ ಬಳಿಕ ರವಿವಾರ ಸುದ್ದಿಗಾರರೊಂದಿಗೆ ಮಾತನಾಡಿ ತಿಳಿಸಿದ್ದರು.
ಬಂದ್ ಗೆ ಕರೆ ಹಿನ್ನೆಲೆಯಲ್ಲಿ ಅಂದು ಅಂದು ಬೆಳಿಗ್ಗೆ 6 ಗಂಟೆಯಿಂದ ಸಂಜೆ 4 ರವರೆಗೆ ಕಾಳಗಿ ಬಂದ್ ಮಾಡಿ ಪಟ್ಟಣದ ಮುಖ್ಯ ರಸ್ತೆಯ ಬಸವೇಶ್ವರ ವೃತ್ತದಿಂದ ಅಂಬೇಡ್ಕರ್ ವೃತ್ತದವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ, ಮುಖ್ಯ ಬಜಾರ ರಸ್ತೆ, ಬಸ್ ನಿಲ್ದಾಣ ರಸ್ತೆ, ಸೇರಿದಂತೆ ಎಲ್ಲಾ ರಸ್ತೆಯಲ್ಲಿ ಬಂದ್ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದರು.
ಈ ಹೋರಾಟ ಶಾಂತಿಯುತವಾಗಿ ನಡೆಯಲಿದ್ದು, ತಾಲೂಕಿನ ಎಲ್ಲಾ ಸಂಘಟನೆಗಳ ಬೆಂಬಲ ನೀಡಬೇಕೆಂದು ಮನವಿ ಮಾಡಿ, ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶವನ್ನು ನೀಡದಿರಲು ಸ್ವಯಂ ಘೋಷಿಸಿತ ಬಂದ್ ಮಾಡಬೇಕು. ಶಾಲಾ, ಕಾಲೇಜು ಮತ್ತು ಬಸ್ ಸಂಚಾರ ಬಂದ್ ಮಾಡಬೇಕೆಂದು ಎಂದು ತಿಳಿಸಿದರು.
ದಲಿತಪರ ಸಂಘಟನೆ, ಕನ್ನಡಪರ ಸಂಘಟನೆ, ವ್ಯಾಪಾರಸ್ಥರ ಸಂಘಟನೆ, ಸೇರಿದಂತೆ ವಿವಿಧ ಸಂಘಟನೆಗಳು ಬಂದ್ ಬೆಂಬಲ ಸೂಚಿಸಿದ್ದು, ಕಾಳಗಿ ತಾಲೂಕು ಕಾಂಗ್ರೆಸ್ ವಕ್ತಾರ ರಾಘವೇಂದ್ರ ಗುತ್ತೇದಾರ ಮಾತನಾಡಿ, ‘‘ಅಂಬೇಡ್ಕರ್ ವಿರುದ್ಧ ಹೇಳಿಕೆ ನೀಡುವ ಮೂಲಕ ಅಮಿತ್ ಶಾ ಅವರು ತಮ್ಮ ವಿಕೃತ ಮತ್ತು ಹೀನ ಮನಃಸ್ಥಿತಿಯನ್ನು ಹೊರ ಹಾಕಿದ್ದಾರೆ. ಕೇಂದ್ರ ಸಚಿವರಾಗಿ ಅವರಾಡಿರುವ ಮಾತುಗಳು ದೇಶದ ಜನರಿಗೆ ಮಾಡಿರುವ ಅಪಮಾನ ಮತ್ತು ದ್ರೋಹವಾಗಿದೆ. ಹೀಗಾಗಿ ನೈತಿಕ ಹೊಣೆ ಹೊತ್ತು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು,’’ ಎಂದು ಆಗ್ರಹಿಸಿದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿ ಭೀಮವಾದ ಜಿಲ್ಲಾಧ್ಯಕ್ಷ ಕಾಶಿನಾಥ ಶೆಳಗ್ಗಿ ಮಾತನಾಡಿ, ಅಮಿತ್ ಶಾ ಒಳ್ಳೆಯ ಸಂಸ್ಕೃತಿಯಿಂದ ಬಂದಿಲ್ಲ. ಅಂಬೇಡ್ಕರ್ ಅವರ ಬಗ್ಗೆ ಹಗುರುವಾಗಿ ಮಾತಾಡಿರುವುದಕ್ಕೆ ಕ್ಷಮೆ ಕೇಳದಿರುವುದು ಖಂಡನೀಯ ಎಂದರು.
ಮುಖಂಡರಾದ ರೇವಣಸಿದ್ಧ ಕಟ್ಟಿಮನಿ, ಪ್ರಶಾಂತ ರಾಜಪೂರ, ಶಾಮರಾವ ಸಜ್ಜನ, ಪ್ರದೀಪ ಡೊಣ್ಣೂರ, ವೇದಪ್ರಕಾಶ ಮೊಟಗಿ, ಗೌರಿಶಂಕರ ಗುತ್ತೇದಾರ, ಗಣಪತಿ ಹಾಳಕಾಯಿ, ಶರಣು ಮಜ್ಜಿಗೆ, ರೇವಣಸಿದ್ದಪ್ಪ ಮುಕರಂಬಿ, ಮಲ್ಲಿಕಾರ್ಜುನ ಗಂವಾರ, ರೇವಣಸಿದ್ಧಪ್ಪ ಅರಣಕಲ್, ಗುಂಡಪ್ಪ ಮಾಳಗಿ, ನಾಗರಾಜ ಬೇವಿನಕರ್, ಕಾಶಿನಾಥ ಬಂಡಿ, ಮಾಣಿಕ ಜಾಧವ, ಆನಂದ ಹೊಸಮನಿ, ಪ್ರವೀಣ ನಾಮದಾರ, ಅವಿನಾಶ್ ಮೂಲಿಮನಿ, ಮಾರುತಿ ಮಳಗಿ, ಮೋಹನ ಚಿನ್ನ, ಪರಮೇಶ್ವರ ಕಟ್ಟಿಮನಿ, ಸುಂದರ ಸಾಗರ, ಮಾಣಿಕ ಸಿಂಧೆ, ಖತಲಪ್ಪ ಅಂಕನ, ಶಿವಕುಮಾರ್ ಚಿಂತಕೊಟಿ, ಚಿತ್ರಶೇಖರ ದಂಡೋತಿಕರ್, ಮನೋಜ ಕೊಟನೂರ, ಬಾಬು ನಾಟೀಕಾರ ಸೇರಿದಂತೆ ಅನೇಕರು ಇದ್ದರು.