ಕಲಬುರಗಿ | 7ನೇ ವರ್ಷದ ಸಾಹಿತ್ಯ ಸಾರಥಿ ಪ್ರಶಸ್ತಿ ಪ್ರದಾನ

Update: 2025-01-05 13:33 GMT

ಕಲಬುರಗಿ : ಕಲ್ಯಾಣ ಕರ್ನಾಟಕ ಭಾಗದ ಸಾಧಕರನ್ನು ಗುರುತಿಸಿ, ಈ ಭಾಗದ ಅರ್ಹರಿಗೆ ಸಂದಬೇಕಾದ ಪ್ರಶಸ್ತಿ, ಗೌರವಗಳನ್ನು ನೀಡಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ರಾಜ್ಯಾಧ್ಯಕ್ಷ ಮನು ಬಳಿಗಾರ್ ಒತ್ತಾಯಿಸಿದರು.

ನಗರದ ಜಗತ್ ವೃತ್ತದ ಸಮೀಪದಲ್ಲಿರುವ ಪತ್ರಿಕಾಭವನದ ಸಾಂಸ್ಕೃತಿಕ ಭವನದಲ್ಲಿ ಕಲಬುರಗಿ ಸಾಂಸ್ಕೃತಿಕ ಪ್ರತಿಷ್ಠಾನ ವತಿಯಿಂದ ಆಯೋಜಿಸಿದ್ದ ಸಾಹಿತ್ಯ ಸಾರಥಿಯ ಪತ್ರಿಕೆಯ 7ನೇ ವರ್ಷದ 'ಸಾಹಿತ್ಯ ಸಾರಥಿ' ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಿ, ಅವರು ಮಾತನಾಡಿದರು.

ಈ ಭಾಗದ ಸಾಹಿತ್ಯ ಕೃಷಿ ಸೇರಿದಂತೆ ಇತರ ಯಾವುದೇ ಕಲೆ, ಸಾಹಿತ್ಯ ಚಟುವಟಿಕೆಗಳಲ್ಲಿ ಅಪ್ರತಿಮ ಸಾಧಕರ ಪಟ್ಟಿಗೇನು ಕಡಿಮೆ ಇಲ್ಲ, ಇಲ್ಲಿ ನೂರಾರು ಸಾಧಕರು ಅನೇಕ ಪ್ರಶಸ್ತಿಗಳಿಗೆ ಅರ್ಹರಿದ್ದಾರೆ, ಅವರಿಗೆ ಸರಕಾರ ಮತ್ತು ಸಂಘ ಸಂಸ್ಥೆಗಳು ಪರಿಗಣಿಸಿ, ಪ್ರಶಸ್ತಿ, ಗೌರವ ನೀಡುವುದರ ಮೂಲಕ ಅವರನ್ನು ಗುರುತಿಸಬೇಕು ಎಂದು ಹೇಳಿದರು.

ಕಲ್ಯಾಣ ಕರ್ನಾಟಕ ಭಾಗದಲ್ಲಿ ಜನಸಂಖ್ಯೆ ಹೆಚ್ಚಿದೆ, ಆಗ ಅರಸರು ಪ್ರಶಸ್ತಿಗಳು ನೀಡುತ್ತಿದ್ದರು. ಈಗ ಈ ವ್ಯಾಪ್ತಿಯಲ್ಲೂ ಜನಸಂಖ್ಯೆ ಹೆಚ್ಚಾಗಿದೆ, ನಮ್ಮ ಹಕ್ಕಿನಿಂದ ಪ್ರಶಸ್ತಿಗಳನ್ನು ಪಡೆದುಕೊಳ್ಳಬೇಕು, ಸರಕಾರ ಯಾವುದೇ ತಾರತಮ್ಯ ಮಾಡದೆ ಈ ಭಾಗದ ಪ್ರತಿಭೆಗಳಿಗೆ ಪ್ರಶಸ್ತಿಗಳನ್ನು ನೀಡಬೇಕು. ಪ್ರಶಸ್ತಿ ನೀಡುವುದರಿಂದ ಅವರಿಗೆ ಜವಾಬ್ದಾರಿ ಹೆಚ್ಚಾಗುತ್ತದೆ, ಅದರ ತಕ್ಕಂತೆ ಇನ್ನೂ ಹೆಚ್ಚಿನ ಸಂಖ್ಯೆಯ ಸಾಧಕರು ಹೊರಹೊಮ್ಮುತ್ತಾರೆ ಎಂದರು.

ಸರಕಾರ ಮಾಡುವ ಈ ಕೆಲಸ ಕಲಬುರಗಿ ಸಾಂಸ್ಕೃತಿಕ ಪ್ರತಿಷ್ಠಾನ ಮಾಡುತ್ತಿದೆ, ಇಂತಹ ಸಂಘ ಸಂಸ್ಥೆಗಳಿಗೆ ಸರಕಾರ ಸವಲತ್ತು ಕೊಡಬೇಕು ಎಂದ ಅವರು, ಬಿ.ಎಚ್.ನಿರಗುಡಿ ಅವರು ಎಲ್ಲ ಕ್ಷೇತ್ರದ ಸಾಧಕರಿಗೆ ಪರಿಗಣಿಸಿ ಪ್ರಶಸ್ತಿ ಕೊಡುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.

ಸಾನಿಧ್ಯ ವಹಿಸಿದ ಸರಡಗಿಯ ರೇವಣಸಿದ್ಧ ಶಿವಾಚಾರ್ಯ ಮಾತನಾಡಿ, ಇಡೀ ಸಮಾಜ, ರಾಜಕೀಯ ಮತ್ತು ನಾಡನ್ನು ಬದಲಿಸುವ ಶಕ್ತಿ ಸಾಹಿತಿಗಳಲ್ಲಿ ಇದೆ, ಬರೆಯುವ ಪೆನ್ನಿನಲ್ಲಿ ಬಹಳಷ್ಟು ಶಕ್ತಿ ಇರುತ್ತದೆ, ವ್ಯಕ್ತಿಯಾಗಿ ಬಾರದೆ ಶಕ್ತಿಯಾಗಿ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ನಿರಗುಡಿ ಅವರು ಅರ್ಥಪೂರ್ಣ ಕಾರ್ಯಕ್ರಮ ಮಾಡುವವರಾಗಿದ್ದಾರೆ, ಅವರನ್ನು ಸಾಹಿತ್ಯಾಸಕ್ತರು ಬೆಂಬಲಿಸಬೇಕು ಎಂದರು.

ಪುಸ್ತಕ ಪ್ರಾಧಿಕಾರದ ಸದಸ್ಯರೂ ಆಗಿರುವ ಕಲಬುರಗಿ ಸಾಂಸ್ಕೃತಿಕ ಪ್ರತಿಷ್ಠಾನ ಪ್ರತಿಷ್ಠಾನದ ಅಧ್ಯಕ್ಷ ಬಿ.ಎಚ್.ನಿರಗುಡಿ ಪ್ರಾಸ್ತಾವಿಕ ಮಾತನಾಡಿ, 7 ವರ್ಷದಿಂದ ಈ ಪ್ರಶಸ್ತಿ ನೀಡುತ್ತಿದ್ದೇವೆ, ಏಳು ಬೀಳಿನಿಂದ ಎಲ್ಲ ಅರ್ಹರಿಗೆ ಪ್ರಶಸ್ತಿ ಕೊಡಲಾಗುತ್ತಿದೆ, ಈ ಭಾಗದಲ್ಲಿ ಹಲವಾರು ಪ್ರತಿಭೆಗಳು ಇದ್ದಾರೆ, ಅವರನ್ನು ಹೊರತರಬೇಕು, ಕನ್ನಡ ಕಟ್ಟುವ ಕೆಲಸ ಮಾಡಲು ನೀವೆಲ್ಲರೂ ಸಹಕಾರ ಕೊಡಬೇಕು, ನಿಮ್ಮ ಸಹಕಾರ ಇದ್ದರೆ ಇನ್ನೂ ಹೆಚ್ಚಿನ ಕನ್ನಡದ ಕೆಲಸಗಳು ಮಾಡುವೆ ಎಂದರು.

ಸಮಾರಂಭದಲ್ಲಿ ವಿಧಾನ ಪರಿಷತ್ ಸದಸ್ಯ ಶಶೀಲ್ ನಮೋಶಿ, ಅವಿನಾಶ್ ಅಲ್ಲಮಪ್ರಭು ಪಾಟೀಲ್, ನೀಲಕಂಠ ರಾವ್ ಮೂಲಗೇ, ಸುರೇಶ್ ಸಜ್ಜನ್, ಬಾಬುರಾವ್ ಯಡ್ರಾಮಿ, ವಿಶ್ವಾರಾಧ್ಯ ಸತ್ಯಂಪೇಟೆ ಸೇರಿದಂತೆ ಮತ್ತಿತರರು ವೇದಿಕೆಯ ಮೇಲಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಲಬುರಗಿ ರಂಗಾಯಣ ನಿರ್ದೇಶಕಿ ಸುಜಾತಾ ಜಂಗಮಶೆಟ್ಟಿ ವಹಿಸಿದ್ದರು. ಡಾ. ಶರಣಬಸಪ್ಪ ವಡ್ಡನಕೇರಿ ನಿರೂಪಿಸಿದರು.

ಕಾರ್ಯಕ್ರಮದಲ್ಲಿ ಸಾಹಿತಿಗಳಾದ ಡಾ.ಸ್ವಾಮಿರಾವ ಕುಲಕರ್ಣಿ, ಶ್ರೀನಿವಾಸ ಸಿರನೂರಕರ್, ಡಾ.ಬಸವರಾಜ ಕೊನೇಕ, ಡಾ. ಗವಿಸಿದ್ದಪ್ಪ ಪಾಟೀಲ್, ಪ್ರಭಾಕರ್ ಜೋಷಿ, ಬಸವಪ್ರಭು ಶಾಂತರಸ, ಸುರೇಶ್ ಬಡಿಗೇರ, ಬಿಎಸ್ ಮಾಲಿಪಾಟೀಲ, ಡಾ.ಸದಾನಂದ ಪೆರ್ಲ ಸೇರಿದಂತೆ ಇತರ ಸಾಹಿತಿಗಳು, ಕಲಾವಿದರು ಹಾಜರಿದ್ದರು.

ಸಾಧಕರಿಗೆ ಸಾಹಿತ್ಯ ಸಾರಥಿ ಪ್ರಶಸ್ತಿ ಪ್ರದಾನ :

ಮಾಧ್ಯಮ ಕ್ಷೇತ್ರದಲ್ಲಿ ಪತ್ತಾರ್, ವಿಶ್ವರಾಧ್ಯ ಸತ್ಯಂಪೇಟೆ, ಜಯತೀರ್ಥ ಪಾಟೀಲ್, ಸಾಹಿತ್ಯ ಕ್ಷೇತ್ರ ವಿಭಾಗದಲ್ಲಿ ಡಾ.ಕಾವ್ಯಶ್ರೀ ಮಾಹಾಗಾಂಕರ್, ಡಾ.ಲಿಂಗಣ್ಣ ಗೋನಾಳ, ಡಾ. ಚಿ.ಸಿ .ನಿಂಗಣ್ಣ, ಸಮಾಜ ಸೇವೆಯ ವಿಭಾಗದಲ್ಲಿ ರವೀಂದ್ರ ಶಾಬಾದಿ, ಕಲ್ಯಾಣರಾವ ಶೀಲವಂತ, ವೈದ್ಯಕೀಯ ಕ್ಷೇತ್ರದ ವಿಭಾಗದಲ್ಲಿ ಸಿದ್ದು ಪಾಟೀಲ್, ಶಿಕ್ಷಣ ಕ್ಷೇತ್ರದ ವಿಭಾಗದಲ್ಲಿ ಚಕೋರ ಮೆಹತಾ, ಕಲಾ ಕ್ಷೇತ್ರದ ವಿಭಾಗದಲ್ಲಿ ಡಾ.ಅಶೋಕ ಶಟಗಾರ, ಸಂಗೀತ ಕ್ಷೇತ್ರದಲ್ಲಿ ಡಾ.ರೇಣುಕಾ ಹಾಗರಗುಂಡಗಿ ಅವರಿಗೆ 7ನೇ ವರ್ಷದ ಸಾಹಿತ್ಯ ಸಾರಥಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News