ಕಲಬುರಗಿ | ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಹೆಚ್ಚಿನ ಅನುದಾನ ನೀಡಲು ಮನವಿ

Update: 2025-01-03 16:07 GMT

ಕಲಬುರಗಿ : ಶುಕ್ರವಾರ ನಗರಕ್ಕೆ ಆಗಮಿಸಿದ ನಗರಾಭಿವೃದ್ಧಿ ಮತ್ತು ಪಟ್ಟಣ ಯೋಜನೆ ಸಚಿವರಾದ ಭೈರತಿ ಸುರೇಶ್‌ ಅವರನ್ನು ಕಲಬುರಗಿ ಮಹಾನಗರ ಪಾಲಿಕೆಯ ಮಹಾಪೌರರಾದ ಯಲ್ಲಪ್ಪ ಎಸ್.ನಾಯಕೋಡಿ, ಮಾಜಿ ಮಹಾಪೌರರಾದ ಸಯ್ಯದ್ ಅಹ್ಮದ್‌, ಸ್ಥಾಯಿ ಸಮಿತಿ ಅಧ್ಯಕ್ಷರಾದ ಪರವೀನ್ ಬೇಗಂ,  ಸಚಿನ ಶಿರವಾಳ, ಮಹಮ್ಮದ್ ಅಜೀಮೊದ್ದಿನ್, ಇರ್ಫಾನಾ ಪರವೀನ್, ಲತಾ ರವೀಂದ್ರಕುಮಾರ, ಪಾಲಿಕೆಯ‌ ಸದಸ್ಯರುಗಳು ಸಚಿವರನ್ನು ಸ್ವಾಗತಿಸಿ, ವಿವಿಧ ಬೇಡಿಕೆ ಈಡೇರಿಸುವಂತೆ ಮನವಿ ಸಲ್ಲಿಸಿದರು.

ಕಲಬುರಗಿ ನಗರದಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ಅನುದಾನದ ಬೇಡಿಕೆ ಇದ್ದು, ರಸ್ತೆಗಳು ಮತ್ತು ಒಳಚರಂಡಿ ಗಳಿಗೆ 70 ಕೋಟಿ ರೂ. ಅನುದಾನ, ಕಲಬುರಗಿ ನಗರದ ಹೊರವಲಯದಲ್ಲಿ ನಾಲ್ಕು ದಿಕ್ಕಿನಲ್ಲಿ ಘನತ್ಯಾಜ್ಯ ವಸ್ತು ನಿರ್ವಹಣೆ ಸಲುವಾಗಿ ಭೂಮಿ ಖರೀದಿಸುವುದಕ್ಕಾಗಿ 100 ಕೋಟಿ ರೂ., ಮಹಾನಗರ ಪಾಲಿಕೆಯ ಸಭಾಭವನ ಕಟ್ಟಡಕ್ಕಾಗಿ 20 ಕೋಟಿ ರೂ., ರಸ್ತೆ ಅಗಲೀಕರಣಕ್ಕಾಗಿ 20 ಕೋಟಿ ರೂ., ಸರಡಗಿ ನಾಲಾ ಡೈವರ್ಶನ ಕಾಮಗಾರಿಗಾಗಿ 10 ಕೋಟಿ ರೂ., ನೀರು ಸರಬರಾಜು ಯೋಜನೆಗಾಗಿ 190.4 ಕೋಟಿ ರೂ., ಒಳಚರಂಡಿ ವ್ಯವಸ್ಥೆಗಾಗಿ 350 ಕೋಟಿ ರೂ. ಅನುದಾನ, ಉದ್ಯಾನವನ ಅಭಿವೃದ್ಧಿಗಾಗಿ 100 ಕೋಟಿ ರೂ. ಅನುದಾನ ಒಟ್ಟು 1020.04 ಕೋಟಿ ರೂ.ಗಳ ಅನುದಾನವನ್ನು ಕಲಬುರಗಿ ಮಹಾನಗರ ಪಾಲಿಕೆಗೆ ಬಿಡುಗಡೆ ಮಾಡುವಂತೆ ಕೋರಿ ಪ್ರಸ್ತಾವನೆಯನ್ನು ಸಲ್ಲಿಸಲಾಯಿತು.

ಅಲ್ಲದೇ ಕಲಬುರಗಿ ಸ್ಥಳೀಯ ಪ್ರದೇಶದಲ್ಲಿ ಮಂಡಲ/ ಗ್ರಾಮ ಪಂಚಾಯತ್‌ ಯಿಂದ ಹಸ್ತಾಂತರಗೊಂಡ ಮತ್ತು ಅನುಮೋದನೆಗೊಂಡ ವಿನ್ಯಾಸಗಳಲ್ಲಿಯ ನಿವೇಶನಗಳ ಕರವಸೂಲಿ, ಕಟ್ಟಡ ಪರವಾನಿಗೆ ಹಾಗೂ ಇನ್ನಿತರ ಎಲ್ಲಾ ಪ್ರಕ್ರಿಯೆಗಳನ್ನು ಪ್ರಾರಂಭಿಸಲು ಸೂಕ್ತ ಮಾರ್ಗದರ್ಶನವನ್ನು ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಅನುಮತಿ ನೀಡುವಂತೆ ಕೋರಲಾಯಿತು.

ಕಲಬುರಗಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕಟ್ಟಡ ಪರವಾನಿಗೆ ನೀಡಲು ಪ್ರಸ್ತುತ ಇರುವ ವಲಯ ನಿಯಮಾವಳಿಗಳನ್ನು ಪರಿಷ್ಕರಿಸಿ ಕಲಬುರಗಿ ನಗರದ ಬೆಳವಣಿಗೆಗಾಗಿ ಕಟ್ಟಡದ ಎತ್ತರ 15 ಮೀಟರ್ ವರೆಗೆ ಹಾಗೂ ಎಫ್.ಎ.ಆರ್. 4 (ಗರಿಷ್ಠ) ವರೆಗೆ ಹೆಚ್ಚಿಸುವಂತೆ ಕೋರಿ ಮನವಿ ಪತ್ರ ಸಲ್ಲಿಸಲಾಯಿತು.

ಪಾಲಿಕೆಯ ಆಯುಕ್ತರಾದ ಅವಿನಾಶ ಸಂಜೀವನ್ ಶಿಂಧೆ, ಭಾ.ಆ.ಸೇ., ಉಪ ಆಯುಕ್ತರಾದ ಆರ್.ಪಿ. ಜಾಧವ ಉಪಸ್ಥಿತರಿದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News