ಕಲಬುರಗಿ | ಆರೋಗ್ಯ ಸಮಸ್ಯೆಗಳನ್ನು ಪರಿಹರಿಸಲು ಸ್ನೇಹಾ ಕ್ಲಿನಿಕ್ ಸದುಪಯೋಗಪಡಿಸಿಕೊಳ್ಳಿ : ಡಾ.ವೀರನಾಥ ಕನಕ
ಕಲಬುರಗಿ : ಶಹಾಬಾದ್ ನಗರದ ಶಿವಯೋಗೇಶ್ವರಸ್ವಾಮಿ ಪ್ರೌಢಶಾಲೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಲಬುರಗಿ ಹಾಗೂ ಸಮುದಾಯ ಆರೋಗ್ಯ ಕೇಂದ್ರ ಶಹಾಬಾದ್ ವತಿಯಿಂದ ರಾಷ್ಟ್ರೀಯ ಕಿಶೋರ ಸ್ವಾಸ್ಥ ಕಾರ್ಯಕ್ರಮದಡಿಯಲ್ಲಿ ʼಹದಿ ಹರೆಯದವರ ಆರೋಗ್ಯ ಮತ್ತು ಕ್ಷೇಮ ದಿನಾಚರಣೆ ಕಾರ್ಯಕ್ರಮʼವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ವೀರನಾಥ ಕನಕ, ಹದಿ ಹರೆಯದ ವಯಸ್ಸು ಚಂಚಲ ಮನಸ್ಸು ಕೂಡಿರುತ್ತದೆ ಈ ವಯಸ್ಸಿನಲ್ಲಿ ದೈಹಿಕ ಬದಲಾವಣೆ, ಮಾನಸಿಕ ಬದಲಾವಣೆ, ಶೈಕ್ಷಣಿಕ ಬದಲಾವಣೆ, ಸಾಮಾಜಿಕ ಬದಲಾವಣೆ ಬಗ್ಗೆ ಜಾಗೃತರಾಗಿರಬೇಕು ಹಾಗೂ ಪೌಷ್ಟಿಕಾಂಶ ಆಹಾರ ಸಮತೋಲನ ಆಹಾರ ಸೇವಿಸಬೇಕು ಎಂದರು.
ಕೆಲವು ವ್ಯಾಯಾಮಗಳು ಮೆಡಿಟೇಶನ್ ಕೆಟ್ಟ ಚಟಗಳಿಗೆ ಬಲಿಯಾಗದೆ ಉತ್ತಮ ಸಮಾಜ ನಿರ್ಮಿಸುವಲ್ಲಿ ಹದಿ ಹರೆದವರ ಪಾತ್ರ ಬಹಳ ಪ್ರಮುಖವಾದದ್ದು ಎಂದು ತಿಳಿಸಿದ ಅವರು, ಇಂದಿನ ಮಕ್ಕಳು ಮುಂದಿನ ಪ್ರಜೆಗಳು ಈ ರಾಷ್ಟ್ರದ ಸಂಪತ್ತು ಎಂದು ಹೇಳಿದರು.
ಚಿತ್ತಾಪುರ ಕ್ಷೇತ್ರ ಶಿಕ್ಷಣಾಧಿಕಾರಿ ಶಶಿಧರ್ ಬಿರಾದರ್ ಮಾತನಾಡಿ, ಸಮಯಕ್ಕೆ ಸರಿಯಾಗಿ ಊಟ ಮಾಡುವುದು. ಕಬ್ಬಿನಾಂಶವುಳ್ಳ ಆಹಾರಗಳನ್ನು ಹೇರಳವಾಗಿ ಸೇವಿಸಬೇಕು. ಬೆಳವಣಿಗೆ ಹಂತಗಳನ್ನು ತಿಳಿದುಕೊಳ್ಳಬೇಕು ಸ್ಥಳೀಯವಾಗಿ ಸಿಗುವಂತಹ ತರಕಾರಿಗಳು ಹಣ್ಣುಗಳು ಸೀಸನ್ ವೈಸ್ ತಿನ್ನಬೇಕು. ಆರೋಗ್ಯದ ಸಮಸ್ಯೆಗಳು ವೈದ್ಯರ ಹತ್ರ ಹಂಚಿಕೊಳ್ಳಬೇಕು ಎಂದು ಮಕ್ಕಳಿಗೆ ಮಾಹಿತಿಯನ್ನು ನೀಡಿದರು.
ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ದೇವಲಗಣಗಾಪುರ್ ದ ಸಮುದಾಯ ಆರೋಗ್ಯ ಕೇಂದ್ರದ ಆಪ್ತ ಸಮಾಲೋಚಕರು ಮಲ್ಲಿಕಾರ್ಜುನ ಸಿಂಗೆ ಅವರು ಮಾತನಾಡುತ್ತಾ, ಪ್ರಸ್ತುತ ದಿನಗಳಲ್ಲಿ ಹೆಣ್ಣು ಮಕ್ಕಳಲ್ಲಿ ಹೆಚ್ಚಾಗಿ ಕಾಡುತ್ತಿರುವ ಅನೀಮಿಯ ರಕ್ತಹೀನತೆ ತಡೆಗಟ್ಟಬೇಕಾದರೆ ಬೀದಿಯಲ್ಲಿ ಮಾರುವ ಪಾನಿಪುರಿ, ಗೋಬಿ ಮಂಚೂರಿ, ಫಾಸ್ಟ್ ಫುಡ್ ಗಳನ್ನು ಸೇವಿಸುವುದನ್ನು ಬಿಟ್ಟು ಸ್ಥಳೀಯವಾಗಿ ಸಿಗುವ ಶೇಂಗಾ, ಬೆಲ್ಲ, ಪಾಲಕ್ ಬೆಲ್ಲ ಮಿಸ್ರಿತ ಆಹಾರಗಳು ಹೇರಳವಾಗಿ ಸೇವಿಸುವುದರಿಂದ ರಕ್ತಹೀನತೆಯನ್ನು ತಡೆಗಟ್ಟಬಹುದು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮುಖ್ಯ ಗುರು ಮಹೇಂದ್ರ ಎಸ್ ದೊಡಮನಿ ಮಾತನಾಡಿದರು.
ಈ ಕಾರ್ಯಕ್ರಮದಲ್ಲಿ ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಪ್ರಕಾಶ ನಾಯ್ಕೋಡಿ, ಶಿಕ್ಷಕರಾದ ಶಿವಯೋಗಿ ಕಟ್ಟಿ , ಗಣೇಶ ಜಾಯಿ, ಸವಿತಾ.ಆರ್.ಕೆ , ಸುನೀತಾ ಬಿರಾದರ ಉಪಸ್ಥಿತರಿದ್ದರು. ಆಪ್ತ ಸಮಾಲೋಚಕ ಅಮರೇಶ ಕಾರ್ಯಕ್ರಮವನ್ನು ನಿರೂಪಿಸಿ, ಸ್ವಾಗತಿಸಿ, ವಂದಿಸಿದರು.