ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ರೈತರ ಬದುಕಿಗೆ ಬೆಳಕಾಗಿದೆ: ಸಚಿವ ಪ್ರಿಯಾಂಕ್ ಖರ್ಗೆ
ಕಲಬುರಗಿ: ಉದ್ಯೋಗ ಖಾತ್ರಿ ಯೋಜನೆ ರಾಜ್ಯದ ರೈತರ ಬದುಕಿಗೆ ಬೆಳಕಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಈ ಬಗ್ಗೆ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಬರೆದುಕೊಂಡಿರುವ ಅವರು, ಗ್ರಾಮೀಣ ಭಾಗದ ಜನರು ವೈಯಕ್ತಿಕ ಕಾಮಗಾರಿಗಳನ್ನು ಕೈಗೊಳ್ಳಬೇಕು ಎಂದರೆ ಗ್ರಾಮಸಭೆಗಳಲ್ಲಿ ಕಾಮಗಾರಿಗೆ ಬೇಡಿಕೆ ಸಲ್ಲಿಸಬೇಕಿತ್ತು. ಇದನ್ನು ತಪ್ಪಿಸಲು ತಾವಿದ್ದಲ್ಲಿಯೇ ಆನ್ ಲೈನ್ ಮೂಲಕ ಕಾಮಗಾರಿ ಬೇಡಿಕೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಈ ವಿನೂತನ ವ್ಯವಸ್ಥೆಗೆ ರಾಜ್ಯಾದ್ಯಂತ ಉತ್ತಮ ಸ್ಪಂದನೆ ದೊರೆತಿದ್ದು, ಬೆಳಗಾವಿ ಜಿಲ್ಲೆಯೊಂದರಲ್ಲಿಯೇ 23,380 ಅರ್ಜಿ ಸಲ್ಲಿಕೆಯಾಗಿವೆ. ಇದು ಹೆಮ್ಮೆಯ ಸಂಗತಿಯಾಗಿದೆ ಎಂದು ಹೇಳಿದ್ದಾರೆ.
" ನರೇಗಾ ಯೋಜನೆಯಡಿ ರೈತರು ಕೃಷಿ ಹೊಂಡ, ಬದು ನಿರ್ಮಾಣ, ಭೂಮಿ ಸುಧಾರಣೆ ಮಾಡಿಕೊಳ್ಳಬಹುದು. ಜೊತೆಗೆ ದನದ ಕೊಟ್ಟಿಗೆ ಮತ್ತು ಶೆಡ್ ನಿರ್ಮಾಣವನ್ನು ಮಾಡಿಕೊಳ್ಳಬಹುದಾಗಿದೆ. ತೋಟಗಾರಿಕೆ ಇಲಾಖೆ ವತಿಯಿಂದ ಬಾಳೆಹಣ್ಣಿನ ತೋಟ, ಚಿಕ್ಕು, ಪೇರಲ, ಪಪ್ಪಾಯಿ, ದ್ರಾಕ್ಷಿ, ಮುಂತಾದ ಹಣ್ಣಿನ ತೋಟ ನಿರ್ಮಾಣ ಮಾಡಬಹುದು. ಅರಣ್ಯ ಇಲಾಖೆ ವತಿಯಿಂದ ಹೊಲದ ಬದುಗಳಲ್ಲಿ ಸಸಿ ನೆಡಲು ಅವಕಾಶವಿದೆ. ಇಂತಹ ಹತ್ತಾರು ಯೋಜನೆಗಳನ್ನು ರೈತರು ನರೇಗಾದ ಮೂಲಕ ಸದುಪಯೋಗ ಪಡೆದುಕೊಳ್ಳುತ್ತಿರುವ ನಿಜಕ್ಕೂ ಸಂತಸ ತಂದಿದೆ" ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಯೋಜನೆಗಳ ಅನುಷ್ಠಾನಕ್ಕೆ, ಸುಗಮ ಸೇವೆಗೆ ಹಾಗೂ ಪಾರದರ್ಶಕತೆಗಾಗಿ ತಂತ್ರಜ್ಞಾನದ ಬಳಕೆ ಸಹಕಾರಿಯಾಗಿದೆ. ಈ ಆನ್ ಲೈನ್ ವ್ಯವಸ್ಥೆಗೆ ಗ್ರಾಮೀಣ ಜನರಿಂದ ಉತ್ತಮ ಸ್ಪಂದನೆ ದೊರೆಯುತ್ತಿದ್ದು, ನಮ್ಮ ವಿಶಿಷ್ಠ ಪ್ರಯತ್ನಕ್ಕೆ ಯಶಸ್ಸು ದೊರಕಿದಂತಾಗಿದೆ. ಗ್ರಾಮೀಣ ಜನರು ತಂತ್ರಜ್ಞಾನದ ಬಳಕೆಯಲ್ಲಿ ನಮ್ಮ ನಿರೀಕ್ಷೆಗಿಂತ ಹೆಚ್ಚು ಆಸಕ್ತಿ ವಹಿಸುತ್ತಿರುವುದು ಉತ್ತಮ ಬೆಳವಣಿಗೆ ಎಂದು ಕೊಂಡಾಡಿದ್ದಾರೆ.