ಜಾತಿ ಜನಗಣತಿ ವರದಿ ಸಂಪುಟಕ್ಕೆ ಸಲ್ಲಿಕೆಯಾಗಿದೆ: ಸಚಿವ ಶರಣ ಪ್ರಕಾಶ್ ಪಾಟೀಲ್

Update: 2025-04-13 14:33 IST
ಜಾತಿ ಜನಗಣತಿ ವರದಿ ಸಂಪುಟಕ್ಕೆ ಸಲ್ಲಿಕೆಯಾಗಿದೆ: ಸಚಿವ ಶರಣ ಪ್ರಕಾಶ್ ಪಾಟೀಲ್
  • whatsapp icon

ಕಲಬುರಗಿ: ಜಾತಿ ಜನಗಣತಿ ವರದಿ ಈಗಾಗಲೇ ಸಚಿವ ಸಂಪುಟಕ್ಕೆ ಸಲ್ಲಿಕೆಯಾಗಿದೆ. ಅಧಿಕಾರಿಗಳು ಮಾತ್ರ ಅದರ ಸಾರಾಂಶ ಮಾತ್ರ ಓದಿದ್ದಾರೆ. ಇನ್ನೂ ಪೂರ್ಣ ವರದಿ ಯಾರು ಓದಿಲ್ಲ, ವರದಿ ಚರ್ಚೆ ಮಾಡಲು ಎಲ್ಲಾ ಸಚಿವರಿಗೆ ಓದಲು ಪ್ರತಿ ತಲುಪಿಸುವಂತೆ ಹೇಳಿದ್ದಾರೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ತಿಳಿಸಿದ್ದಾರೆ.

ರವಿವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜಾತಿ ಜನಗಣತಿ ವರದಿ ಇನ್ನೂ ನಾನು ಓದಿಲ್ಲ. ವರದಿಯಲ್ಲಿ ಏನಿದೆ ಎಂಬುದು ನನಗೆ ಗೊತ್ತಿಲ್ಲ. ವರದಿ ನನಗೆ ತಲುಪಿದ ಮೇಲೆ ಅದನ್ನು ಓದಿ ಪ್ರತಿಕ್ರಿಯೆ ನೀಡುತ್ತೇನೆ. ವರದಿ ನೋಡದೆ ಊಹಾಪೋಹಾ ಮಾತುಗಳಿಗೆ ಪ್ರತಿಕ್ರಿಯೆ ನೀಡುವುದು ಸರಿಯಲ್ಲ. ವರದಿ ಓದಿದ ಮೇಲೆ ಸತ್ಯಾಸತ್ಯತೆ ತಿಳಿಯಲಿದೆ ಎಂದರು.

ಇದೇ ತಿಂಗಳು ಏಪ್ರಿಲ್ 17 ರಂದು 4 ಗಂಟೆಗೆ ಸಚಿವ ಸಂಪುಟ ಸಭೆ ಕರೆದಿದ್ದಾರೆ. ಅವತ್ತು ಒಂದೇ ವಿಷಯದ ಬಗ್ಗೆ ಚರ್ಚೆ ಇದೆ. ನಮ್ಮ ಸರ್ಕಾರದಲ್ಲಿ ಯಾರಿಗೂ ಅನ್ಯಾಯ ಮಾಡಲ್ಲ. ವರದಿ ಬಗ್ಗೆ ಚರ್ಚೆ ಆದ ಮೇಲೆ ನಾನು ಪ್ರತಿಕ್ರಿಯಿಸುತ್ತೇನೆ ಎಂದು ಹೇಳಿದರು.

ಲಿಂಗಾಯತ ಮತ್ತು ಒಕ್ಕಲಿಗರು ಇದನ್ನು ಒಪ್ಪಬಾರ್ದು ಎನ್ನುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಈ ಬಗ್ಗೆ ಇನ್ನೂ ತೀರ್ಮಾನ ಆಗಿಲ್ಲ ಎಂದರು.

ಸಚಿವ ಶರಣಬಸಪ್ಪ ದರ್ಶನಾಪುರ ಮಾತನಾಡಿ, ಜಾತಿ ಜನಗಣತಿ ವರದಿ ಇನ್ನೂ ನಾನು ಓದಿಲ್ಲ. ಓದಿದ ಮೇಲೆ ವರದಿಯಲ್ಲಿ ಏನಿದೆ ಎಂಬುದರ ಬಗ್ಗೆ ಮಾತನಾಡುತ್ತೇನೆ. ಮಠಾಧೀಶರು ವರದಿ ಬಗ್ಗೆ ಹೇಳಿಕೆ ನೀಡುವುದರಿಂದ ಏನಾಗುವುದಿಲ್ಲ. ಮಠಾಧೀಶರಿಂದ ಸರಕಾರ ನಡೆಯುವುದಿಲ್ಲ. ಸಚಿವ ಸಂಪುಟ ಸಭೆಯಲ್ಲಿ ವರದಿಯನ್ನು ಅನುಮೋದನೆ, ತಿದ್ದುಪಡಿ ಅಥವಾ ಮರು ಗಣತಿಯ ಬಗ್ಗೆ ತೀರ್ಮಾನ ತೆಗೆದುಕೊಳ್ಳತ್ತದೆ ಎಂದರು.

ಬಿಜೆಪಿಯವರು ಅಧಿಕಾರದಲ್ಲಿದ್ದಾಗ ವರದಿ ತಿರಸ್ಕಾರ ಮಾಡಬಹುದಿತ್ತಲ್ಲ, ಅವರೇಕೆ ಮಾಡಿಲ್ಲ, ಬೆಲೆ ಏರಿಕೆ ಮಾಡಿ, ಈಗ ಅವರೇ ಪ್ರತಿಭಟನೆ ಮಾಡುತ್ತಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಶಾಸಕ ಎಂ.ವೈ ಪಾಟೀಲ್, ಅಲ್ಲಮಪ್ರಭು ಪಾಟೀಲ್, ಶರಣು ಮೋದಿ, ಮಾಜಿ ಶಾಸಕ ದತ್ತಾತ್ರೇಯ ಪಾಟೀಲ್ ಸೇರಿದಂತೆ ಹಲವರು ಇದ್ದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News