ಇತಿಹಾಸದ ರಚನೆಗೆ ಮೂಲ ಆಕರಗಳನ್ನು ಸಂಗ್ರಹಿಸುವ ಕಾರ್ಯ ಕಲ್ಯಾಣ ಕರ್ನಾಟಕದಿಂದಲೇ ಶುರುವಾಗಿದೆ: ಡಾ. ಎಸ್. ಕೆ. ಅರುಣಿ

Update: 2025-03-21 14:24 IST
ಇತಿಹಾಸದ ರಚನೆಗೆ ಮೂಲ ಆಕರಗಳನ್ನು ಸಂಗ್ರಹಿಸುವ ಕಾರ್ಯ ಕಲ್ಯಾಣ ಕರ್ನಾಟಕದಿಂದಲೇ ಶುರುವಾಗಿದೆ: ಡಾ. ಎಸ್. ಕೆ. ಅರುಣಿ
  • whatsapp icon

ಕಲಬುರಗಿ: ಕನ್ನಡ ನಾಡಿನ ಇತಿಹಾಸದ ರಚನೆಗೆ ಮೂಲ ಆಕರಗಳನ್ನು ಸಂಗ್ರಹಿಸುವ ಕಾರ್ಯವು ಕ್ರಿ.ಶ.1790ರ ದಶಕದಲ್ಲಿ ಕಲ್ಯಾಣ- ಕರ್ನಾಟಕ ಪ್ರದೇಶದಲ್ಲಿ ಆರಂಭಗೊಂಡಿದ್ದು ಎಂದು ದಾಖಲೆಗಳು ಹೇಳುತ್ತವೆ ಎಂದು ಬೆಂಗಳೂರಿನ ಭಾರತೀಯ ಇತಿಹಾಸ ಅನುಸಂಧಾನ ಪರಿಷತ್ತಿನ ಪ್ರಾದೇಶಿಕ ನಿರ್ದೇಶಕರಾದ ಡಾ. ಎಸ್. ಕೆ. ಅರುಣಿಯವರು ಹೇಳಿದರು.

ಅವರು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕನ್ನಡ ವಿಭಾಗದಲ್ಲಿ ಕರ್ನಾಟಕ ರಾಜ್ಯ ಪತ್ರಾಗಾರ ಇಲಾಖೆಯ ವಿಭಾಗೀಯ ಕಛೇರಿಯ ಸಹಯೋಗದಲ್ಲಿ ಹಮ್ಮಿಕೊಂಡ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಭಾಗವಹಿಸಿ, 'ಹೈದರಾಬಾದ ನಿಜಾಮರ ಆಳ್ವಿಕೆಯಲ್ಲಿ ಇತಿಹಾಸ ಮತ್ತು ಪುರಾತತ್ವ ಅಧ್ಯಯನಗಳು ಮತ್ತು ಕನ್ನಡ ನಾಡಿನ ಚರಿತ್ರೆ ರಚನೆಯ ಬೆಳವಣಿಗೆ' ಎಂಬ ವಿಷಯದ ಮೇಲೆ ತಮ್ಮ ಸಂಶೋಧನಾ ಪ್ರಬಂಧವನ್ನು ಮಂಡಿಸಿ, ಮಾತನಾಡಿದರು.

ಕನ್ನಡ ನಾಡಿನ ಇತಿಹಾಸದ ರಚನೆಗೆ ಮೂಲ ಆಕರಗಳನ್ನು ಸಂಗ್ರಹಿಸುವ ಕಾರ್ಯವು ಇಲ್ಲಿಯೇ ಪ್ರಾರಂಭವಾಗಿದ್ದು, ಇದು ಕರ್ನಾಟಕದಲ್ಲಿಯೇ ಪ್ರಥಮ ಎಂದು ಹೇಳಲಾಗುತ್ತದೆ. ಮುಖ್ಯವಾಗಿ ಬ್ರಿಟಿಷ ಅಧಿಕಾರಿ ಕರ್ನಲ್ ಕೋಲೀನ್ ಮೆಕೆಂಜಿಯವರು ಕಲಬುರಗಿ ಒಳಗೊಂಡಂತೆ ಬೀದರ ಪ್ರದೇಶಗಳ ನಕ್ಷೆಗಳನ್ನು ರಚಿಸಿದ. ಈ ನಕ್ಷೆಗಳು ಇಂದು ಇಂಗ್ಲೆಂಡ್ ನ ಬ್ರಿಟಿಷ್ ಲೈಬ್ರರಿ ಸಂಗ್ರಹದಲ್ಲಿವೆ.

ಹೈದರಾಬಾದ ಸಂಸ್ಥಾನದ ಆಶ್ರಯದಲ್ಲಿ ಇತಿಹಾಸದ ದಾಖಲೆಗಳು ಸಂಗ್ರಹಿಸುವ ಕಾರ್ಯ ನಿರಂತರವಾಗಿ ನಡೆದಿದೆ. ನಿಯೋನಾರ್ಡ ಮುನ್, ಮೇಡೋಸ್ ಟೇಲರ್ ಅಲ್ಲದೆ, ಆನಂತರ ಯಾಜ್ದಾನಿ ಅವರುಗಳು ಕಲ್ಯಾಣ ಕರ್ನಾಟಕದ ಇತಿಹಾಸದ ಅಧ್ಯನಕ್ಕೆ ಅಪಾರ ಕೊಡುಗೆಗಳನ್ನು ನೀಡಿದರು. ನಿಜಾಮ ಸರ್ಕಾರವು 1914ರಲ್ಲಿ ಪುರಾತತ್ತ್ವ ಇಲಾಖೆಯನ್ನು ಸ್ಥಾಪಿಸಿ ಬಸವಕಲ್ಯಾಣ, ಮುದ್ಗಲ್, ರಾಯಚೂರು, ಕಲಬುರಗಿ, ಯಾದಗಿರಿ, ಬೀದರ ಪ್ರದೇಶಗಳ ಇತಿಹಾಸದ ಕುರುಹುಗಳನ್ನು ಪ್ರಕಟಿಸುವುದರೊಂದಿಗೆ ನಾಡಿನ ಇತಿಹಾಸದ ರಚನೆಗೆ ಬಹುದೊಡ್ಡ ಕೊಡುಗೆಗಳನ್ನು ನೀಡಿದೆ‌ ಎಂದರು.

ಹೈದರಾಬಾದ ಸಂಸ್ಥಾನದ ಆಶ್ರಯದಲ್ಲಿ ಇತಿಹಾಸ ಮತ್ತು‌ ಪುರಾತತ್ವ ಸ್ಮಾರಕಗಳು, ಶಾಸನಗಳನ್ನು ಶೋಧಿಸುವ ಮತ್ತು ಅವುಗಳ ಸಂರಕ್ಷಿಸುವ ಕಾರ್ಯದಿಂದಾಗಿ ಇಂದಿಗೂ ಇತಿಹಾಸದ ಅವಶೇಷಗಳಾಗಿ ನಾವು ಅವುಗಳನ್ನು ಗುರುತಿಸಬಹುದಾಗಿದೆ ಎಂದರು.

ಈ ಅಧ್ಯಯನವನ್ನು ಹೊಸ ಪೀಳಿಗೆಯ ಸಂಶೋಧಕರು ಹಾಗೂ ಈ ಭಾಗದ ಇತಿಹಾಸಕಾರರು ಮುಂದುವರೆಸಬೇಕೆಂದು ಅವರು ಒತ್ತಾಯಿಸಿದರು. ಇದು ನಮ್ಮ ಇಂದಿನ ಈ ಭಾಗದ ಅಜ್ಞಾತ ಇತಿಹಾಸವನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಕೆಲಸವನ್ನು ಮಾಡುತ್ತದೆ ಎಂದು ತಮ್ಮ ಅಭಿಪ್ರಾಯವನ್ನು ಮಂಡಿಸಿದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News