ಕಲಬುರಗಿ | ಬಲಿದಾನಗೈದ ವೀರರನ್ನು ನಿತ್ಯ ನೆನೆಯೋಣ : ಲವಿತ್ರ ವಸ್ತ್ರದ್

ಕಲಬುರಗಿ : ನಗರದ ಸರ್ದಾರ್ ವಲ್ಲಭ ಭಾಯಿ ಪಟೇಲ್( ತಿಮ್ಮಪುರಿ) ವೃತ್ತದಲ್ಲಿ ದೇಶಕ್ಕಾಗಿ ತಮ್ಮ ಪ್ರಾಣ ಬಲಿದಾನಗೈದ ಕ್ರಾಂತಿಕಾರಿಗಳಾದ ಭಗತ್ ಸಿಂಗ್, ರಾಜ್ ಗುರು ಮತ್ತು ಸುಖದೇವ್ ಅವರಿಗೆ ಡಿವೈಎಫ್ಐ ಮತ್ತು ಎಸ್ಎಫ್ಐ ನ ಜಂಟಿ ಸಹಯೋಗದಲ್ಲಿ ಹುತಾತ್ಮರ ದಿನವನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಡಿ.ವೈ.ಎಫ್.ಐ. ನ ರಾಜ್ಯ ಅಧ್ಯಕ್ಷೆ ಲವಿತ್ರ ವಸ್ತ್ರದ್, 23ನೇ ವಯಸ್ಸಿಗೆ ನಗುನಗುತ್ತ ನೇಣುಗಂಬಕ್ಕೆ ಮುತ್ತಿಟ್ಟ ಕ್ರಾಂತಿಕಾರಿಗಳ ಸಿದ್ದಾಂತಗಳನ್ನು ನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕಿದೆ. ಅವರನ್ನು ನಿತ್ಯವೂ ನೆನೆಸಬೇಕಿದೆ. ಪ್ರಜಾಪ್ರಭುತ್ವ, ಸಮಾಜವಾದದ ಕನಸು ಕಂಡವರು ಅವರು. ಅನ್ಯಾಯದ ವಿರುದ್ಧ ದ್ವನಿ ಎತ್ತಿದವರು ಅವರು. ಅಂದು ಬ್ರಿಟಿಷ್ ರ ವಿರುದ್ಧ ಅವರು ನಡೆಸಿದ ಸಮರವನ್ನು ನಾವಿಂದು ಕೋಮುವಾದಿಗಳ ವಿರುದ್ಧ ನಡೆಸಬೇಕಿದೆ. ಜಾತಿ- ಲಿಂಗ ಭೇದಗಳನ್ನು ಮೆಟ್ಟಿ ಸೌಹಾರ್ದ-ಐಕ್ಯ ಭಾರತ ಕಟ್ಟಬೇಕಿದೆ ಎಂದು ಕರೆ ನೀಡಿದರು.
"ಅವರು(ಕ್ರಾಂತಿಕಾರಿ) ನನ್ನನ್ನು ಕೊಲ್ಲಬಹುದು. ಆದರೆ ನನ್ನ ಚಿಂತನೆಗಳನ್ನು ಕೊಲ್ಲಲಾರರು, ಅವರು ನನ್ನ ದೇಹವನ್ನೆ ಹೊಸಕಿ ಹಾಕಬಹುದು ಆದರೆ ನನ್ನ ಸ್ಪೂರ್ತಿಯನ್ನು ಹೊಸಕಿ ಹಾಕಲು ಸಾಧ್ಯವೇ ಇಲ್ಲವೆಂದು ಹೇಳಿದವರು ಎಂದು ನೆನೆದರು.
''ಭಗತ್ ಸಿಂಗ್ ತೂ ಜಿಂದಾ ಹೈ ಹರ್ ಏಕ್ ಲಹೂ ಕೆ ಖತರೆ ಮೆ" ಎಂಬ ಹಾಡಿನ ಮೂಲಕ ಭಾರತ ನಡತೆಯನ್ನು ದಾಸ್ಯದಿಂದ ಮುಕ್ತಿಗೊಳಿಸಲು ತಮ್ಮ ಜೀವವನ್ನೆ ಸಮರ್ಪಿಸಿದ ಮಹಾನ್ ಕ್ರಾಂತಿಕಾರಿಗಳಿಗೆ ನಮನಗಳನ್ನು ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಎಸ್.ಎಫ್.ಐ.ನ ಜಿಲ್ಲಾ ಅಧ್ಯಕ್ಷ ಸರ್ವೇಶ ಮಾವಿನಕರ್, ಕಾರ್ಯದರ್ಶಿ ಸುಜಾತಾ ವೈ, ಡಿ.ವೈ.ಎಫ್.ಐ.ನ ಮುಖಂಡರಾದ ದಿಲ್ ಶಾದ್, ಪ್ರೀಯಂಕಾ ಮಾವಿನಕರ್, ಸಿದ್ದಪ್ಪ ಮೂಲಗೆ, ನಾಗಮ್ಮ, ಹುಲಿಗೆಮ್ಮ, ಭರತ, ಅಂಕಿತಾ, ಸುಧಾರಾಣಿ ಮತ್ತಿತರರು ಉಪಸ್ಥಿತರಿದ್ದರು.